ಯಶಸ್ವೀ ಜೀವನ

Share Button

ನಮ್ಮ ಮನೆಗೆ ಆಕಸ್ಮಿಕವಾಗಿ ಬಂದಿದ್ದ ನಾಟಕ ಕಲಾವಿದೆಯೊಬ್ಬರು ಶೋಷಣೆಯನ್ನು ಕುರಿತು ಮಾತನಾಡುತ್ತಿದ್ದರು. ಮನೆಯ ಮುಂದಿನ ಬೀದಿ ಗುಡಿಸುವವರು, ಗಟಾರ ಸ್ವಚ್ಛ ಮಾಡುವವರೇ ಮೊದಲಾದವರು ಕೆಳವರ್ಗದವರು; ಅವರಿಗೆ ವಿದ್ಯಾಭ್ಯಾಸ ಇಲ್ಲದ್ದರಿಂದ ಅವರು ಈ ಕೆಲಸ ಮಾಡುತ್ತಾರೆ; ಅವರು ವಿದ್ಯಾವಂತರಾಗುವುದನ್ನು ತಡೆದಿರುವುದೇ ಇಂತಹ ಕೆಲಸಗಳನ್ನು ಅವರಿಂದ ಮಾಡಿಸುವುದಕ್ಕಾಗಿ; ಮೇಲ್ವರ್ಗದವರು ಕೆಳವರ್ಗದವರು ವಿದ್ಯಾವಂತರಾಗದಂತೆ ಬ್ರೈನ್ ವಾಷ್ ಮಾಡಿದ್ದಾರೆ ಎಂದೆಲ್ಲಾ ಅವರ ಮಾತಿನ ಲಹರಿ ಹರಿದಿತ್ತು. ವಿದ್ಯಾವಂತರಾಗುವುದಕ್ಕೂ ಶೋಷಣೆಯಿಂದ ಪಾರಾಗುವುದಕ್ಕೂ, ಸುಖೀ ಮತ್ತು ಯಶಸ್ವೀ ಜೀವನ ನಡೆಸುವುದಕ್ಕೂ ಸಂಬಂಧವಿದೆಯೇ? 

ಪ್ರಶ್ನೆ ಹುಟ್ಟುತ್ತಿದ್ದಂತೆಯೇ ಒಂದು ಸಂಗತಿಯ ನೆನಪಾಯಿತು. ವಧು, ವರ ಇಬ್ಬರೂ ಡಬ್ಬಲ್ ಗ್ರಾಜುಯೇಟ್-ಗಳು. ಮದುವೆಯಾದ ದಿನದ ರಾತ್ರಿಯೇ ಅವರಿಬ್ಬರ ನಡುವೆ ಚಕಮಕಿ ನಡೆಯಿತು. ಹುಡುಗಿಯ ಕೈಬಳೆಗಳು ಪುಡಿ ಪುಡಿಯಾದವು. ಬೆಳಿಗ್ಗೆ ಹುಡುಗಿ ತಾನು ಗಂಡನ ಮನೆಗೆ ಹೋಗುವುದಿಲ್ಲ ಎಂದು ಅಮ್ಮ ಅಪ್ಪನಿಗೆ ಹೇಳಿದಳು. ಅವರು ಮಗಳು, ಅಳಿಯ ಇಬ್ಬರನ್ನೂ ಜೊತೆಯಾಗಿ ಕೂಡಿಸಿಕೊಂಡು ಹೊಂದಿಕೊಂಡು ಹೋಗಲು ಬಗೆ ಬಗೆಯಾಗಿ ತಿಳಿಹೇಳಿದರು. ಮಗಳನ್ನು ಅಳಿಯನೊಂದಿಗೆ ಕಳುಹಿಸಿಕೊಟ್ಟರು. ತಿಂಗಳುಗಳು ಕಳೆದರೂ ಹುಡುಗಿಗೆ ಒಂದು ದಿನವೂ ಮಾನಸಿಕ ಹಿಂಸೆ ತಪ್ಪಲಿಲ್ಲ. ಮಗುವಿನ ತಾಯಿಯಾಗುವ ಸೂಚನೆಯಿಂದಾಗಿ ಹುಡುಗಿ ಗಂಡನ ಹಿಂಸೆಯನ್ನು ನಿರ್ಲಕ್ಷಿಸಿದಳು. ಉದ್ಯೋಗ ಇದ್ದುದರಿಂದ ತನಗಾಗಿಯಾಗಲೀ, ಮಕ್ಕಳಿಗಾಗಿಯಾಗಲೀ ಹಣಕಾಸಿಗಾಗಿ ಅವಳು ಭಿಕ್ಷುಕಿಯಂತೆ ಕೈ ಒಡ್ಡಬೇಕಾಗಲಿಲ್ಲ. ಕೆಲ ವರ್ಷಗಳ ನಂತರ ಒಂದೇ ಮನೆಯಲ್ಲಿ ಪರಸ್ಪರ ಅಪರಿಚಿತರಂತೆ ಇರಲಾರಂಭಿಸಿದರು.   

ಇಂತಹುದೇ ಇನ್ನೊಂದು ಪ್ರಸಂಗ. ಹುಡುಗ ಹುಡುಗಿಯರಿಬ್ಬರೂ ಬೇರೆ ಬೇರೆ ಪ್ರತಿಷ್ಠಿತ ಕಂಪೆನಿಯಲ್ಲಿ ಇಂಜನಿಯರ್ ಗಳು. ಅವರ ತಂದೆ ತಾಯಿಯರಿಬ್ಬರೂ ಸುಪರಿಚಿತರು. ಹುಡುಗ ಹುಡುಗಿಯರು ಪರಸ್ಪರ ನೋಡಿದರು, ಮಾತನಾಡಿದರು, ಮದುವೆಯಾಯಿತು. ಹುಡುಗಿ ಚುರುಕು ಬುದ್ಧಿಯವಳು. ಮೇಲು ಮೇಲಿನ ಸ್ಥಾನವನ್ನು ಬೇಗ ಬೇಗನೆ ಪಡೆಯುತ್ತಾ ಹೋದಳು. ವಿದೇಶಕ್ಕೂ ಆಗಾಗ ಅಲ್ಪಾವಧಿಗೆ ಹೋಗಿಬಂದಳು. ಮಿತವ್ಯಯಿ ಆಗಿದ್ದುದರಿಂದ ಹಣ ಉಳಿಸಿಟ್ಟುಕೊಂಡಳು. ತನ್ನ ವೃದ್ಧ ತಾಯಿ ತಂದೆಯರನ್ನು ಜೊತೆಯಲ್ಲಿಟ್ಟುಕೊಳ್ಳಲು ಸ್ವಂತ ಮನೆ ಕಟ್ಟಿದಳು. ಈ ಹಂತ ತಲುಪುವವರೆಗೂ ಒಳ ಒಳಗೇ ಕುದಿಯುತ್ತಿದ್ದ ಹುಡುಗನ ವೃತ್ತಿ ಮಾತ್ಸರ್ಯ ಸ್ಫೋಟಗೊಂಡಿತು. 

ಸಂಬಂಧ ದೊಡ್ಡದಾಗಿ ಬಿರುಕು ಬಿಟ್ಟಿತು. ಹುಡುಗಿ ಹೊಂದಿಕೊಳ್ಳಲು ಪ್ರಯತ್ನಿಸಿದಳು. ಬಗೆ ಬಗೆಯ ಅವಮರ್ಯಾದೆಯನ್ನು ತಡೆಯಲಾರದೆ ಕೊನೆಗೆ ವಿಚ್ಛೇದನ ಪಡೆದುಕೊಂಡಳು. ಒಬ್ಬಳೇ ಇರುವವರು ಎದುರಿಸಬೇಕಾದ ಕುಹಕಗಳನ್ನು ತಡೆಯಲು ಇನ್ನೊಂದು ಮದುವೆಯಾದಳು. ಒಂದು ಮಗುವೂ ಆಯಿತು. ಖುಷಿ ಖುಷಿಯಾಗಿ ಮದುವೆಯ ಮತ್ತೆ ಮಗುವಿನ ಹಲವಾರು ಫೋಟೋಗಳನ್ನು ಎಲ್ಲರೊಂದಿಗೆ ವಿನಿಮಯ ಮಾಡಿಕೊಂಡು ಬದುಕು ಹಸನಾಯಿತು ಎಂದು ಸಂತೋಷ ಪಟ್ಟಳು. ಮಗು ಗಂಡು ಆಗಿದ್ದರೂ ಅವಳ ಹಣದ ಮೇಲೆ ಕಣ್ಣಿಟ್ಟು ಆದ ಮದುವೆ ಅದಾದುದರಿಂದಾಗಿ ಎರಡನೆಯ ಮದುವೆಯೂ ಸುಖ ಕೊಡಲಿಲ್ಲ.    

ಶೋಷಣೆ ಎಂದಾಗ ಪ್ರಬಲರಾದವರು ದುರ್ಬಲರಾದವರ ಮೇಲೆ ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ ಸವಾರಿ ಮಾಡುತ್ತಾರೆ ಎಂದೆನ್ನಿಸುತ್ತದೆ. ಆದರೆ ಅದೇ ವಾಸ್ತವತೆ ಅಲ್ಲ. ನಾವು ಸಿರಿಗೆರೆಯಲ್ಲಿದ್ದಾಗ ಒಮ್ಮೆ ಚಿತ್ರದುರ್ಗಕ್ಕೆ ಹೊರಟಿದ್ದೆವು. ಬೆನ್ನೂರು ಕ್ರಾಸಿನ ವರೆಗೆ ಮೆಟಡೋರುಗಳು ಓಡಾಡುತ್ತಿದ್ದವು. ಅಲ್ಲಿಂದ ಮುಂದಕ್ಕೆ ಬಸ್ಸುಗಳ ಸೌಕರ್ಯ ಇತ್ತು. ಆ ದಿನ ಮೆಟಡೋರನ್ನು ನಿರ್ವಹಿಸುತ್ತಿದ್ದವಳು ಮಧ್ಯವಯಸ್ಸಿನವಳು. ಹತ್ತುವವರೆಲ್ಲರೂ ಹತ್ತಿದರು, ಎಲ್ಲರಿಂದಲೂ ಹಣ ಪಡೆದಳು, ಇನ್ನೇನು ಮೆಟಡೋರ್ ಹೊರಟಿತು ಎನ್ನುವ ವೇಳೆಗೆ ಡ್ರೈವರ್ ಸೀಟಿನಲ್ಲಿ ಇದ್ದವನು ಕೆಳಗಿಳಿದು ಬಂದು ನಿರ್ವಾಹಕಳನ್ನು ಎಳೆದು ನೆಲಕ್ಕೆ ದೂಡಿ ಬಾಯಿಗೆ ಬಂದಂತೆ ಬೈಯುತ್ತಾ ಹೊಡೆಯಲಾರಂಭಿಸಿದ. 

ಅವಳು ಅಳಲೂ ಇಲ್ಲ, ಕೂಗಾಡಲೂ ಇಲ್ಲ. ಸುಮ್ಮನೆ ಹೊಡೆಸಿಕೊಂಡಳು. ಮೆಟಡೋರಿನಲ್ಲಿದ್ದವರೇ ಅವನನ್ನು ತಡೆದು ಮೆಟಡೋರ್ ಹೊರಡುವಂತೆ ಮಾಡಿದರು. ಅವಳು ಏನೂ ನಡೆಯಲೇ ಇಲ್ಲವೇನೋ ಎಂಬಂತೆ ಮೆಟಡೋರ್ ಹತ್ತಿದಳು. ನಾವು ಅವಳನ್ನು ನೋಡಿದುದು ಇದೇ ಮೊದಲು ಆಗಿತ್ತು. ಸಿನೆಮಾದಂತೆ ಘಟಿಸಿದ ಈ ದೃಶ್ಯಾವಳಿಗಳ ಅರ್ಥವೇನು ಎಂದುಕೊಳ್ಳುತ್ತಿದ್ದಾಗ ನನ್ನ ಪಕ್ಕದಲ್ಲಿದ್ದ ಮಹಿಳೆ “ಅವರಿಬ್ಬರೂ ಗಂಡಹೆಂಡತಿಯರು, ಇವನು ಬಂದ ಆದಾಯವನ್ನೆಲ್ಲಾ ಕುಡಿತಕ್ಕೆ ಹಾಕಿ ಮೆಟಡೋರ್ ಕೊಳ್ಳಲು ತೆಗೆದುಕೊಂಡಿದ್ದ ಸಾಲದ ಕಂತುಗಳನ್ನು ಬ್ಯಾಂಕಿಗೆ ಕಟ್ಟಲೇ ಇಲ್ಲ, 

ತಾನು ಸಾಲ ಮರು ಪಾವತಿ ಮಾಡುತ್ತೇನೆ ಎಂದು ಇವಳು ಭರವಸೆ ಕೊಟ್ಟದ್ದರಿಂದ ಬ್ಯಾಂಕಿನವರು ಮೆಟಡೋರನ್ನು ಜಪ್ತಿಮಾಡದೇ ಬಿಟ್ಟುಹೋದರು, ಈಗ ಬರುವ ಹಣವೆಲ್ಲಾ ಇವಳ ಕೈಗೇ ಹೋಗುವುದರಿಂದ ಅವನು ಹೀಗೆ ಹಾದಿ ಬೀದಿಯಲ್ಲೆಲ್ಲಾ ರಂಪಾಟ ಮಾಡುತ್ತಲೇ ಇರುತ್ತಾನೆ, ಮನೆಯ ಹಿರಿಯರು, ಬಂಧುಬಳಗದವರು, ಸುತ್ತುಮುತ್ತಲಿನವರು ಇವಳ ಪರವಾಗಿರುವುದರಿಂದ ಅವನು ಅವಳನ್ನು ಹೊಡೆಯುವುದರ ಹೊರತಾಗಿ ಇನ್ನೇನು ಮಾಡಲಾರದವನಾಗಿದ್ದಾನೆ’ ಎಂದು ಹೇಳಿದರು.

ಇಲ್ಲಿ ಶೋಷಣೆ ಹೆಣ್ಣಿನ ಮೇಲೆ ನಡೆಯಿತೆಂದು ತೋರುತ್ತದೆ; ಅದನ್ನು ಅವಳು ನಿರ್ಲಕ್ಷಿಸಬಹುದೇ ವಿನಹ ಗಂಡಿನ ಮನಃ ಪರಿವರ್ತನೆ ಮಾಡಲು ಆಗುವುದಿಲ್ಲ; ಅವಳು ಉಪಾಯದಿಂದ ಸ್ವರಕ್ಷಣೆ ಮಾಡಿಕೊಳ್ಳಬಹುದು ಅಷ್ಟೇ ಎಂದೆನ್ನಿಸುತ್ತದೆ. ಆ ನಿರ್ವಾಹಕಿಯ ನಡೆಯನ್ನು ಕಂಡಾಗ ಗಾಂಧೀಜಿಯ ಸತ್ಯಾಗ್ರಹದ ನೆನಪಾಯಿತು. ಸರಿಯಾದ ದಾರಿಯಲ್ಲಿ ತಾನು ಇದ್ದೇನೆ ಎನ್ನುವ ಭರವಸೆಯೇ ಅವಳಿಗೆ ಊರುಗೋಲಾಗಿತ್ತು. ಮಹಿಳಾ ಸಮಾನತೆ, ಸ್ವಾತಂತ್ರ್ಯ ಎಂದೆಲ್ಲಾ ಮಾತಾಡುತ್ತಾ ಮಹಿಳಾ ದಿನಾಚರಣೆಗಳನ್ನು ಆಯೋಜಿಸಿ ತಾವೇನೋ ಸ್ತ್ರೀಸಮೂಹಕ್ಕಾಗಿ ಘನ ಕಾರ್ಯ ಮಾಡುತ್ತಿದ್ದೇವೆ ಎಂದು ತಮ್ಮ ಹೆಗ್ಗಳಿಕೆಯನ್ನು ಮೆರೆಸುವವರ ಟೊಳ್ಳನ್ನು ಎತ್ತಿ ತೋರಿದ್ದಳು ಅವಳು. 

ಒಮ್ಮೆ ಮಹಿಳಾ ಸಂಘಟಕರು ಮಾರ್ಚ್ 8 ರಂದು ಮಹಿಳಾ ದಿನಾಚರಣೆಯ ಅಂಗವಾಗಿ ಮಾತಾಡಲು ಕರೆದಿದ್ದರು. ಒಂದು ದೊಡ್ಡ ಕೊಠಡಿಯಲ್ಲಿ ಹದಿಹರೆಯದವರು ಸುಮಾರು 150 ಹುಡುಗಿಯರು ನೆರೆದಿದ್ದರು. ಮಹಿಳೆಯರನ್ನು ಗಂಡನ ಜೊತೆಗೆ ತಂದೆ ತಾಯಿಯರು, ಅತ್ತೆ ಮಾವಂದಿರು ಸಹ ಸಾಕಷ್ಟು ಕೀಳಾಗಿ ನಡೆಸಿಕೊಳ್ಳುತ್ತಾರೆ, ತಮ್ಮನ್ನು ಸಮಾನವಾಗಿ ಪ್ರೀತಿ ಗೌರವದಿಂದ ನಡೆಸಿಕೊಳ್ಳಿ ಎಂದು ಕೇಳುವ ಹಕ್ಕು ಮಹಿಳೆಯರಿಗಿದೆ, ತಮಗೆ ಆಗುವ ಅನ್ಯಾಯವನ್ನು ತಡೆಯಲು ಅವರು ಸಂಘಟಿತರಾಗಬೇಕು, ಅವರಿಗೆ ಬದುಕುವುದಕ್ಕೇ ದುಸ್ತರ ಆದಾಗ ಅವರಿಗಾಗಿ ಸಾಂತ್ವನ ಕೇಂದ್ರಗಳಿವೆ, ಅವುಗಳ ಸಹಾಯವನ್ನು ಪಡೆಯಬೇಕು ಎಂದೆಲ್ಲಾ ಕಾರ್ಯಕ್ರಮದ ಆಯೋಜಕರು ಹೇಳಿದರು. ಹುಡುಗಿಯರೆಲ್ಲಾ ಜೋರಾಗಿ ಚಪ್ಪಾಳೆ ತಟ್ಟಿದರು. 

ನಾನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕೆಲವು ಸ್ತ್ರೀಯರ ಧೈರ್ಯ, ಮಾನಸಿಕ ದೃಢತೆಯನ್ನು ಕುರಿತು ಮಾತಾಡಿದೆ. ಕಾಲೇಜಿಗೆ ಹಿಂತಿರುಗಿ ಹೋಗಬೇಕಾಗಿದ್ದುದರಿಂದ ಅವರೊಡನೆ ಸ್ವಲ್ಪ ಹೊತ್ತು ಇದ್ದು ಹೊರಟು ಬಂದೆ. ಹೊರಡುವಾಗ ಗಮನಕ್ಕೆ ಬಂದ ಅಂಶ ಅಲ್ಲಿ ನೆರೆದಿದ್ದವರಲ್ಲಿ ಯಾರೂ ಕೊಠಡಿಯಿಂದ ಆಚೆಗೆ ಹೋಗುವಂತಿರಲಿಲ್ಲ! ಕಾರ್ಯಕ್ರಮದ ಆಯೋಜಕರು ಒಂದು ರೀತಿಯಲ್ಲಿ ಅವರನ್ನೆಲ್ಲ ಅಲ್ಲಿ ಕೂಡಿಹಾಕಿಕೊಂಡಿದ್ದರು! ಯಾರ ಸ್ವಾತಂತ್ರ್ಯವನ್ನು ಕುರಿತು ಭಾವಿಸುತ್ತಿದ್ದೇವೆಯೋ ಅವರೇ ಅದನ್ನು ಭಾವಿಸುವಂತೆ ಮಾಡಲು ಆಗದಿದ್ದ ಪರಿಸರದಲ್ಲಿ ಮಹಿಳಾ ಸಮಾನತೆ ಅರ್ಥಪೂರ್ಣವಾದೀತೇ?

ಹೀಗೆ ಯೋಚಿಸುತ್ತಾ ಕಾಲೇಜಿಗೆ ಬಂದಾಗ ನನ್ನ ಸಹೋದ್ಯೋಗಿ ಸ್ನೇಹಿತೆ ತನ್ನ ಸ್ನೇಹಿತೆಯ ತೊಂದರೆಯನ್ನು ಕುರಿತು ತನ್ನ ಆತಂಕವನ್ನು ತೋಡಿಕೊಂಡರು. ಆಕೆಯ ಗೆಳತಿಯ ಗಂಡ ಮೊದ ಮೊದಲಿಗೆ ಹೆಂಡತಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ; ಎರಡು ಮಕ್ಕಳಾದ ಮೇಲೆ ಅವನ ನಡೆ ಬದಲಾಗುತ್ತಾ ಬಂತು. ಕೆಲಸಕ್ಕೆ ಹೋಗುವುದನ್ನು ಬಿಟ್ಟ. ತೆಂಗಿನಕಾಯಿಯ ಸಿಪ್ಪೆ ತೆಗೆಯುವ ಕತ್ತಿಯನ್ನು ಸದಾ ಅವಳ ಮುಂದೆ ಆಡಿಸುತ್ತ ಕೊಂದುಬಿಡುತ್ತೇನೆ ಎಂದು ಹೆದರಿಸುತ್ತಾನೆ; ಹೆಂಡತಿ ಮನೆಯಿಂದ ಯಾವುದಕ್ಕೂ ಹೊರಗೆ ಹೋಗದಂತೆ ಕಾಯುತ್ತಾನೆ. 

ಹೇಗೋ ಉಪಾಯದಿಂದ ಹೊರಗೆ ಬಂದು ಪೋಲೀಸ್ ಕಂಪ್ಲೆಂಟ್ ಕೊಟ್ಟರೂ ಅವರು ಅವನನ್ನು ಒಂದೆರಡು ದಿನ ಪೋಲೀಸ್ ಸ್ಟೇಷನ್ನಿನಲ್ಲಿ ಇಟ್ಟುಕೊಂಡು ಬಿಟ್ಟುಬಿಡುತ್ತಾರೆ; ಅವಳಿಗೇ ಹೊಂದಿಕೊಂಡು ಹೋಗು ಎಂದು ಉಪದೇಶಿಸುತ್ತಾರೆ; ಸಾಂತ್ವನ ಕೇಂದ್ರದವರು ಅವಳಿಗೆ ಒಂದೆರಡು ದಿನ ಆಶ್ರಯ ಕೊಟ್ಟು ಆನಂತರ ನಿನ್ನ ದಾರಿಯನ್ನು ನೀನೇ ನೋಡಿಕೊಳ್ಳಬೇಕು ಎಂದು ಕಳಿಸಿಕೊಟ್ಟಿದ್ದಾರೆ; ಸಿರಿಗೆರೆ ಧಾರ್ಮಿಕ ಕ್ಷೇತ್ರ, ಇಲ್ಲಿ ಗಂಡನ ಮನಸ್ಸು ಬದಲಾಗಬಹುದು ಎಂದು ಬಂದು ಮನೆ ಮಾಡಿದ್ದಾಳೆ; ತಾತ್ಕಾಲಿಕವಾಗಿ ತವರು ಮನೆಯವರೇ ಹಣಕಾಸಿನ ಸಹಾಯ ಮಾಡುತ್ತಿದ್ದಾರೆ ಎಂದೆಲ್ಲಾ ನನ್ನ ಸಹೋದ್ಯೋಗಿ ಗೆಳತಿ ಒದ್ದಾಡಿಕೊಂಡಾಗ ನನ್ನ ಮನಸ್ಸೂ ಭಾರವಾಯಿತು.

ಶೋಷಣೆಯ ವಿರುದ್ಧ ದೊಡ್ಡದಾಗಿ ಬಾಯಿ ತೆಗೆಯಬಹುದು, ಶೋಷಿತರಿಗಾಗಿ ಅಯ್ಯೋ ಪಾಪ ಎಂದು ಮರುಗಬಹುದು, ಅವರಿಗೆ ಹಣ ಸಹಾಯವನ್ನೂ ಮಾಡಬಹುದು, ಒಂದೆರಡು ದಿನ ಆಶ್ರಯವನ್ನೂ ಕೊಡಬಹುದು, ಅವರ ಬದುಕಿನ ಸುಧಾರಣೆಗಾಗಿ ನಮ್ಮ ಬಳಿ ಯಾವ ಯೋಜನೆ ಇದೆ? ಇದ್ದರೂ ಅದನ್ನು ಕಾರ್ಯಗತ ಮಾಡುವ ಕಾರ್ಯಕುಶಲತೆ, ಮುಂಧೋರಣೆ, ಧೈರ್ಯ, ಹಣಕಾಸಿನ ಸೌಲಭ್ಯ ಎಷ್ಟು ಜನರಿಗಿದೆ? ಅವರವರ ಬದುಕನ್ನು ಅವರವರೇ ನೋಡಿಕೊಳ್ಳಬೇಕು ಅಲ್ಲವೇ ಎಂದೆನ್ನಿಸಿತು. ಈ ದೃಷ್ಟಿಯಿಂದ ಯಾವುದೇ ಪರಿಸ್ಥಿತಿಯನ್ನು ವಿವೇಚನೆಯಿಂದ ಎದುರಿಸಲು ಮತ್ತು ಸ್ವಾವಲಂಬಿಯಾಗಿ ಬದುಕಲು ಸಾಧ್ಯವಾಗುವಂತೆ ವಿದ್ಯಾವಂತರಾಗುವುದೇ ಪರಿಹಾರ ಎಂದೆನ್ನಿಸಿ ನಮ್ಮ ಮನೆಗೆ ಬಂದಿದ್ದ ಕಲಾವಿದೆಯ ಅಭಿಪ್ರಾಯಕ್ಕೆ ತಲೆದೂಗಿದೆ.

ಪದ್ಮಿನಿ ಹೆಗಡೆ

5 Responses

  1. ಇತ್ತೀಚಿನ ….ಪ್ರಸಂಗಗಳನ್ನು…ಕಣ್ಣಾರೆ ಕಂಡು..ಕೆಲವನ್ನು ಕೇಳಿದನ್ನು…ಲೇಖನ ರೂಪದಲ್ಲಿ ಬರೆದಿರುವ ರೀತಿ ಚೆನ್ನಾಗಿ ದೆ ಹಾಗೇ ವಿದ್ಯೆ ಯ ಮಹತ್ವದ ಅನಾವರಣ ಸೊಗಸಾಗಿ ಮೂಡಿಬಂದಿದೆ ಧನ್ಯವಾದಗಳು ಪದ್ಮಿನಿ ಮೇಡಂ..

  2. Padma Anand says:

    ಹಲವಾರು ನೈಜ ಉದಾಹರಣೆಗಳೊಂದಿಗೆ, ಶೋಷಣೆ, ಮಹಿಳಾ ದಿನಾಚರಣೆಗಳ ಕುರಿತಾಗಿ ಮನಸ್ಸನ್ನು ಚಿಂತನೆಗೆ ಹಚ್ಚುವ ಆಸಕ್ತಿದಾಯಕ ಲೇಖನ ತುಂಬಾ ಚೆನ್ನಾಗಿದೆ.

  3. ನಯನ ಬಜಕೂಡ್ಲು says:

    ಸೊಗಸಾದ ಲೇಖನ, ಇಂದಿನ ವಾಸ್ತವವನ್ನು ಬಿಂಬಿಸುವ ಉದಾಹರಣೆಗಳು.

  4. ಶಂಕರಿ ಶರ್ಮ says:

    ಕೇಳಿದ, ನೋಡಿದ ಘಟನೆಗಳ ಉದಾಹರಣೆಗಳೊಂದಿಗೆ ಸಹಜವಾಗಿ, ಸರಳವಾಗಿ ಮೂಡಿಬಂದ ಲೇಖನವು ಬಹಳ ಅರ್ಥಪೂರ್ಣವಾಗಿದೆ.

  5. ಹೌದು
    ಹೆಣ್ಣನ್ನು ಮನುಷ್ಯಳಂತೆ ಕಾಣುವ ಸಮಯ ಎಂದು ಬಂದೀತು
    ಚೆಂದದ ಲೇಖನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: