ಪ್ರವಾಸ

ಗೋಪುರಗಳ ನಾಡಿನಲ್ಲಿ…ಹೆಜ್ಜೆ 14

Share Button


(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ತಂಜಾವೂರು –ಶ್ರೀರಂಗಂ

ತಮಿಳುನಾಡಿನ ‘ಭತ್ತದ ಕಣಜ’ ಅಥವಾ ‘ಅನ್ನದ ಬಟ್ಟಲು’ ಎಂದು ಕರೆಲ್ಪಡುವ ತಂಜಾವೂರಿನಲ್ಲಿ ನಮಗೆ ಸಿಕ್ಕಿದ ಬೆಳಗಿನ ಉಪಾಹಾರ ರುಚಿಯಾಗಿತ್ತು. ಒತ್ತು ಶ್ಯಾವಿಗೆಯನ್ನು ಹೋಲುವ ‘ಈಡಿಯಪ್ಪಂ’, ರವಾದೋಸೆ, ಸೆಟ್ ದೋಸೆ, ‘ಪೊಡಿ ಇಡ್ಲಿ’ ಹೀಗೆ ವೈವಿಧ್ಯಮಯ ತಿಂಡಿಗಳಿದ್ದುವು. ತಮಿಳುನಾಡಿನ ಹೋಟೆಲ್ ಗಳಲ್ಲಿ, ನನ್ನ ಅನುಭವಕ್ಕೆ ಬಂದಂತೆ, ಮುಖ್ಯ ಆಹಾರಕ್ಕಿಂತ ಪಕ್ಕವಾದ್ಯ ವ್ಯಂಜನಗಳ ವೈವಿಧ್ಯತೆ ಹಾಗೂ ಪ್ರಮಾಣವೂ ಜಾಸ್ತಿ. ತಟ್ಟೆಯಲ್ಲಿ ಕೊಡುವ ದೋಸೆ/ಇಡ್ಲಿಗೆ ನೆಂಚಿಕೊಳ್ಳಲು ‘ಕೇಸರಿ-ಬಿಳುಪು-ಹಸಿರು’ ಬಣ್ಣದ ಮೂರು ಬಣ್ಣದ ಚಟ್ನಿಗಳು ಇದ್ದೇ ಇರುತ್ತವೆ. ಜೊತೆಗೆ ಊಟದ ಟೇಬಲ್ ನ ಮೇಲೆ ಇರಿಸಲಾದ ಕೆಂಪು, ಹಳದಿ, ಹಸಿರು ಬಣ್ಣದ ಚಟ್ನಿಪುಡಿಗಳನ್ನು ಬೇಕಿದ್ದರೆ ನಾವೇ ಬಡಿಸಿಕೊಳ್ಳಬಹುದು.

ನಮ್ಮ ಮಧ್ಯಾಹ್ನದ ಊಟ ತಂಜಾವೂರಿನ ‘ಶ್ರೀ ಆರ್ಯ ಭವನ್’ ಎಂಬಲ್ಲಿ ಬಹಳ ಸೊಗಸಾಗಿತ್ತು. ನಾವು ಹೋದ ಸಮಯದಲ್ಲಿ ಅಲ್ಲಿ ಜನಸಂದಣಿ ಇಲ್ಲದ ಕಾರಣ ಅನುಕೂಲವಾಯಿತು. ಉದ್ಯಾನವಿದ್ದ ಆವರಣದಲ್ಲಿ ವಿಶಾಲವಾದ ಹೋಟೆಲ್, ಶುಚಿಯಾಗಿದ್ದ ಚೆಂದದ ಊಟದ ಹಾಲ್ , ದೊಡ್ಡದಾದ ತಟ್ಟೆ/ಬಾಳೆ ಎಲೆ ಮೇಲೆ ತಂದು ಬಡಿಸಿದ ಹಲವಾರು ಪಲ್ಯಗಳು, ಅನ್ನ ಸಾರು, ಹಪ್ಪಳ, ಗೊಜ್ಜು, ಪಳದ್ಯ, ಸಾಂಬಾರು, ಪಾಯಸ ತರಾವರಿ ಚಟ್ನಿಗಳು , ಚಪಾತಿ, ಸಿಹಿ, ಮೊಸರು, ಮಜ್ಜಿಗೆ ಇತ್ಯಾದಿ. ಎಲ್ಲರೂ ಮಾಯಾಬಜಾರ್ ನ ಘಟೋತ್ಕಚನಂತೆ ಭರ್ಜರಿ ಊಟ ಮಾಡಿದೆವು.

ಬಹುತೇಕ ಎಲ್ಲಾ ದಿನಗಳಲ್ಲೂ ಬೆಳಗಿನ ತಿಂಡಿಗೆ ವಿವಿದಧ ದೋಸೆ/ಇಡ್ಲಿ/ಪೊಂಗಲ್ ಆಯ್ಕೆಗಳಿದ್ದುವು, ಪ್ರಯಾಣದ ದಾರಿಯಲ್ಲಿ ಸಮಯ ಹಾಗೂ ಲಭ್ಯತೆಗೆ ತಕ್ಕಂತೆ ಕಾಫಿ/ಚಹಾ/ಎಳನೀರು ಕೊಡಿಸಿದ್ದರು. ಮಧ್ಯಾಹ್ನಕ್ಕೆ ಅಚ್ಚುಕಟ್ಟಾದ ತಮಿಳುನಾಡಿನ ಶೈಲಿಯ ಥಾಲಿ ಊಟ, ರಾತ್ರಿಗೆ ಪುನ: ತಿಂಡಿ. ಹೀಗೆ ಈ ಯಾತ್ರೆಯುದ್ದಕ್ಕೂ ಟ್ರಾವೆಲ್4ಯುನವರು ನಮ್ಮ ಉದರಪೂಜೆ ಸಾಂಗವಾಗಿ ನೆರವೇರುವಂತೆ ಮಾಡಿದ್ದರು.

ಊಟದ ನಂತರ ತಂಜಾವೂರಿನಿಂದ 60 ಕಿಮೀ ದೂರದಲ್ಲಿರುವ ಶ್ರೀರಂಗಂ ಕಡೆಗೆ ಪ್ರಯಾಣಿಸಿದೆವು. ವೈಕುಂಠ ಏಕಾದಶಿಯಂದು, ಕಾವೇರಿ ತೀರದಲ್ಲಿರುವ ಶ್ರೀರಂಗಪಟ್ಟಣದಲ್ಲಿರುವ ‘ಆದಿರಂಗ’ , ಶಿವನಸಮುದ್ರ ( 85 ಕಿಮೀ ದೂರ) ದಲ್ಲಿರುವ ‘ಮಧ್ಯರಂಗ’ ಹಾಗೂ ಶ್ರೀರಂಗಂನಲ್ಲಿರುವ ( 340 ಕಿಮೀ ದೂರ) ‘ಅಂತ್ಯರಂಗ‘ನ ದರ್ಶನ ಮಾಡಿದವರಿಗೆ ವೈಕುಂಠಪ್ರಾಪ್ತಿಯಾಗುತ್ತದೆ ಎಂದು ಆಸ್ತಿಕ ವೈಷ್ಣವರು ನಂಬುತ್ತಾರೆ. ಕೊಡಗಿನ ಭಾಗಮಂಡಲದಲ್ಲಿ ಹುಟ್ಟಿ ಹರಿಯುವ ಕಾವೇರಿ ನದಿಯ ಪಾತ್ರದಲ್ಲಿ ಇರುವ ಪ್ರಸಿದ್ಧ ರಂಗನಾಥ ಕ್ಷೇತ್ರಗಳಿವು.

PC: Internet

‘ಶ್ರೀರಂಗಂ’ ದೇವಾಲಯವು ಕಾವೇರಿ ನದಿ ಮತ್ತು ಕೊಲ್ಲಿಡಂ ನದಿಯಿಂದ ಸುತ್ತುವರಿದ ದ್ವೀಪದಲ್ಲಿ ಒಟ್ಟು 155 ಎಕರೆ ಪ್ರದೇಶದಲ್ಲಿ ವಿಸ್ತರಿಸಲ್ಪಟ್ಟಿದೆ . ಈ ದೇವಾಲಯ ಸಂಕೀರ್ಣದಲ್ಲಿ 81 ದೇವಾಲಯಗಳು, 21 ಗೋಪುರಗಳು, 39 ಮಂಟಪಗಳು ಇವೆ ಹಾಗೂ ಇದು ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ ಸಮುಚ್ಚಯವಾಗಿದೆ. ‘ವೈಕುಂಠ’ವನ್ನು ಹೋಲುವ ರೀತಿ ಏಳು ಪ್ರಾಕಾರಗಳನ್ನು ಹೊಂದಿದ್ದು, ಏಳು ಗೋಪುರಗಳನ್ನು ದಾಟಿ ಗರ್ಭಗುಡಿಗೆ ಹೋಗುವಂತೆ ರಚಿಸಿದ್ದಾರೆ. ವಿವಿಧ ಕಾಲಘಟ್ಟಗಳಲ್ಲಿ ನಿರ್ಮಾಣವಾದ ಪ್ರಾಕಾರಗಳು ಹಾಗೂ ಗೋಡೆಗಳು ಒಂದಕ್ಕೊಂದು ಸಂಪರ್ಕ ಹೊಂದಿದ್ದು, ಅಲ್ಲಲ್ಲಿ ಜನವಸತಿ, ಅಂಗಡಿಗಳನ್ನೂ ಹೊಂದಿದ್ದು ಇಡೀ ದೇವಾಲಯ ಸಮುಚ್ಚಯವು ದೊಡ್ಡ ಪಟ್ಟಣದಂತೆ ಕಾಣುತ್ತದೆ . ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಿಸಲಾದ ಪುರಾತನ ರಂಗನಾಥಸ್ವಾಮಿ ದೇವಾಲಯವು 11 ನೇ ಶತಮಾನದಲ್ಲಿ ನಡೆದ ‘ಭಕ್ತಿಚಳುವಳಿ’ಯ ಕೇಂದ್ರವೂ ಆಗಿತ್ತು. ಶ್ರೀ ರಾಮಾನುಜಾಚಾರ್ಯರ ಧಾರ್ಮಿಕ ವೃತ್ತಿಜೀವನದಲ್ಲಿ ಶ್ರೀರಂಗಂ ಪ್ರಮುಖ ಸ್ಥಳವಾಗಿತ್ತು. ಕಾಲಾನಂತರದಲ್ಲಿ ಹಲವಾರು ದಾಳಿಗೆ ಒಳಗಾದ ದೇವಾಲಯವು ಹಲವರು ಬಾರಿ ಪುನರ್ನಿಮಾಣಗೊಂಡಿತು.

PC: Internet

ಐತಿಹಾಸಿಕವಾಗಿ 2500 ವರ್ಷಗಳಷ್ಟು ಹಿಂದಿನ ಶಾಸನಗಳನ್ನು ಹೊಡಿರುವ, ಧಾರ್ಮಿಕವಾಗಿ 30000 ವರ್ಷಗಳ ಹಿಂದಿನ ವಿಚಾರಗಳಿಗೆ ಇಂಬು ಕೊಡುವ, ರಾಮಾಯಣ, ಮಹಾಭಾರತದಲ್ಲಿಯೂ ಉಲ್ಲೇಖಿಸಲ್ಪಟ್ಟ, ಶ್ರೀರಂಗಂ ದೇವಾಲಯದ ಬಗ್ಗೆ ಬಹಳಷ್ಟು ದಂತಕಥೆಗಳು ಹಾಗೂ ಇನ್ನಿತರ ಮಾಹಿತಿಗಳು ಅಂತರ್ಜಾಲದಲ್ಲಿ ಲಭ್ಯ. ಒಂದೆರಡು ಗಂಟೆಯ ಪ್ರವಾಸಿಗರಾಗಿ ಹೋದ ನಮಗೆ ಕಾಣಿಸಿದುದು ಅದ್ಭುತವಾದ ದೇವಾಲಯದ ಪ್ರಾಕಾರಗಳು, ಗೋಪುರಗಳು, ಶಿಲ್ಪವೈಭವ ಹಾಗೂ ಗರ್ಭಗುಡಿಯಲ್ಲಿರುವ 13 ಅಡಿ ಉದ್ದದ ‘ಶ್ರೀರಂಗನಾಥ ಸ್ವಾಮಿ’ಯ ವಿಗ್ರಹ’. ಅದೇ ಆವರಣದಲ್ಲಿ ರಂಗನಾಯಕಿ ಅಮ್ಮನವರ ಗುಡಿ ಇದೆ. ಅಲ್ಲಿಗೂ ಭೇಟಿ ಕೊಟ್ಟೆವು.

ಈ ಪ್ರವಾಸಕಥನದ ಹಿಂದಿನ ಬರಹ ಇಲ್ಲಿದೆ: http://surahonne.com/?p=39768

(ಮುಂದುವರಿಯುವುದು)
ಹೇಮಮಾಲಾ.ಬಿ, ಮೈಸೂರು

6 Comments on “ಗೋಪುರಗಳ ನಾಡಿನಲ್ಲಿ…ಹೆಜ್ಜೆ 14

  1. ಎಂದಿನಂತೆ ಪ್ರವಾಸಕಥನ ಓದಿಸಿಕೊಂಡು ಹೋಯಿತು.. ಗೆಳತಿ ನೀವು ಪ್ರವಾಸದ ಅನುಭವವನ್ನು…ಉಣಬಡಿಸುವ ರೀತಿ ನನಗೆ ಬಹಳ ಆಪ್ತವಾಗಿ ರುತ್ತದೆ..ಗೆಳತಿ

  2. Beautiful. ಈ ಪ್ರವಾಸ ಕಥನ ಸಾಕಷ್ಟು ಮಾಹಿತಿಗಳಿಂದ ಕೂಡಿದ್ದು ಮಾತ್ರವಲ್ಲ, ಒಂದು ಸುಂದರ ಕಲ್ಪನೆಯ ಜೊತೆಗೆ ಆಪ್ತ ಭಾವವನ್ನೂ ನೀಡುತ್ತದೆ.

  3. ತಮಿಳುನಾಡಿದ ರುಚಿ ರುಚಿಯಾದ ಭೋಜನ ವೈವಿಧ್ಯಗಳೊಂದಿಗೆ, ಶ್ರೀರಂಗಂ ದೇವಾಲಯದ ಸುಂದರ ವರ್ಣನೆಯೂ ಸೇರಿ ಪ್ರವಾಸ ಕಥನದ ನಿರೂಪಣೆ ಆಪ್ಯಾಯಮಾನವಾಗಿದೆ.

  4. ಪ್ರವಾಸ ಕಥನವನ್ನು ಓದುವ, ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

  5. ತಮಿಳುನಾಡಿನ ಊಟ, ತಿಂಡಿಗಳ ಸೊಗಸು, ಶ್ರೀರಂಗಂ ದೇಗುಲದ ವೈಭವ ಇತ್ಯಾದಿಗಳು ಮೂಡಿಬಂದ ಪ್ರವಾಸ ಲೇಖನವು ಆಪ್ತವೆನಿಸಿತು.

Leave a Reply to Hema Mala Cancel reply

 Click this button or press Ctrl+G to toggle between Kannada and English

Your email address will not be published. Required fields are marked *