ಥೀಮ್-ಬರಹ

ನನ್ನ ರೇಡಿಯೋ ನಂಟು.

Share Button


ಸಾರ್ವಜನಿಕ ಪ್ರಸಾರ ಮಾಧ್ಯಮ ಎಂದರೆ ವೃತ್ತ ಪತ್ರಿಕೆಯನ್ನು ಹೊರತು ಪಡಿಸಿ ಬಾಲ್ಯದಲ್ಲಿ ಮೊದಲು ಪರಿಚಯವಾದದ್ದು ರೇಡಿಯೋ. ಅದರಲ್ಲಿ ಪ್ರಸಾರವಾಗುವ ಕನ್ನಡ ಚಿತ್ರಗೀತೆಗಳು, ನಾಟಕಗಳು ಮತ್ತು ಕ್ರಿಕೆಟ್ ಕಾಮೆಂಟರಿ. ಆಗಿನ ನನ್ನ ವಯಸ್ಸಿನವರಿಗೆ ಇದೊಂದು ಗೀಳಿನ ತರಹ ಅಂಟಿಕೊಂಡಿತ್ತು. ನಮ್ಮ ಮನೆಯಲ್ಲಿ ರೇಡಿಯೋ ಇಲ್ಲದ್ದರಿಂದ ಸಣ್ಣವರಾಗಿದ್ದ ನಾವು ಎದುರುಮನೆಯಲ್ಲಿ ರೇಡಿಯೋ ಕೇಳುತ್ತಿದ್ದೆವು. ಅವರಿಂದ ಅಭ್ಯಂತರವೇನೂ ಇರಲಿಲ್ಲ ಏಕೆಂದರೆ ಅವರ ಮಕ್ಕಳೂ ನಮ್ಮ ಸ್ನೇಹಿತರಾಗಿದ್ದರು. ಪ್ರತಿ ಗುರುವಾರ ರೇಡಿಯೋದಲ್ಲಿ ಒಂದು ನಾಟಕ ಪ್ರಸಾರವಾಗುತ್ತಿತ್ತು. ಅಷ್ಟು ಹೊತ್ತಿಗೆ ನನ್ನ ಕೆಲಸಗಳು, ಹೋಂವರ್ಕ್ ಎಲ್ಲವನ್ನೂ ಪೂರೈಸಿ ಅದನ್ನು ಕೇಳಲು ಸಿದ್ಧವಾಗುತ್ತಿದ್ದೆ. ನಮ್ಮ ಮನೆಯಲ್ಲೂ ಇದಕ್ಕೆ ಅಡ್ಡಿಪಡಿಸುತ್ತಿರಲಿಲ್ಲ. ಸ್ವಲ್ಪ ದೊಡ್ಡವರಾಗಿ ಬೆಳೆದನಂತರ ಇತರರ ಮನೆಗೆ ಹೋಗಲು ಸಂಕೋಚವಾಗುತ್ತಿತ್ತು. ಈ ಅಭ್ಯಾಸ ಕಡಿಮೆಯಾದರೂ ಸಮಯ ಸಿಕ್ಕಿದಾಗ ಗುಂಪಿನ ಜೊತೆ ಹೋಗಿ ಕೇಳುತ್ತಿದ್ದುದು ಉಂಟು. ನಾನು ಹೈಸ್ಕೂಲು ಓದುತ್ತಿರುವಾಗ ಕ್ರಿಕೆಟ್ ಕಾಮೆಂಟರಿ ಕೇಳುವುದು ಒಂದು ಹುಚ್ಚಾಗಿತ್ತು. ಆಗ ಕಾಮೆಂಟರಿಯನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಹೇಳುತ್ತಿದ್ದರು. ಸಾಮಾನ್ಯವಾಗಿ ಹೋಟೆಲುಗಳ ಮುಂಭಾಗದಲ್ಲಿ ಅಂತಹ ಸಮಯದಲ್ಲಿ ಮಾತ್ರ ಒಂದು ಸೌಂಡ್‌ಬಾಕ್ಸ್ ನೇತುಹಾಕಿ ಕಾಮೆಂಟರಿ ಕೇಳಿಸುವಂತೆ ಅನುಕೂಲ ಮಾಡುತ್ತಿದ್ದರು. ಆಗೆಲ್ಲ ಐದು ದಿನಗಳ ಟೆಸ್ಟ್ ಮ್ಯಾಚ್ ಆಡಲು ವಿದೇಶೀ ತಂಡಗಳು ಬರುತ್ತಿದ್ದವು. ಕಾಮೆಂಟರಿ ಕೇಳಲು ಜನಸಂದಣಿ ಹೋಟೆಲಿನ ಮುಂಭಾಗದಲ್ಲಿ ನೆರೆಯುತ್ತಿತ್ತು. ಅವರೆಲ್ಲ ಎಷ್ಟೊಂದು ತಲ್ಲೀನತೆಯಿಂದ ಅದನ್ನು ಆಲಿಸುತ್ತಿದ್ದರೆಂದರೆ ಬ್ಯಾಟ್ಸ್‌ಮನ್ ನಾಲ್ಕು ಅಥವಾ ಆರು ರನ್ ಗಳಿಸಿದರೆ ಶ್ರೋತೃಗಳೇ ಚಪ್ಪಾಳೆ ಹಾಕಿ ಸಂಭ್ರಮಿಸುತ್ತಿದ್ದರು. ಹೆಣ್ಣುಮಕ್ಕಳಿಗೆ ಅಂಥಹ ಅವಕಾಶ ಸಿಗುತ್ತಿರಲಿಲ್ಲ. ಮನೆಗಳಲ್ಲಿ ರೇಡಿಯೋ ಹೊಂದಿದ್ದವರು ವಿರಳವಾಗಿದ್ದರು. ಹಾಗಾಗಿ ಯಾರಾದರೂ ಸ್ನೇಹಿತೆಯರು ತಾವಾಗಿಯೇ ಆಹ್ವಾನಕೊಟ್ಟಾಗ ನಾನೂ ಹೋಗಿ ಕೇಳಿದ್ದುಂಟು. ಮಾರನೆಯ ದಿನ ತರಗತಿಯ ಬಿಡುವಿನ ವೇಳೆಯಲ್ಲಿ ಆಟಗಾರರ ಗುಣಗಾನಗಳು, ಆಟದ ವೈಖರಿಯ ಬಗ್ಗೆ ವಿಶ್ಲೇಷಣೆಗಳು ಪರಸ್ಪರರೊಡನೆ ನಡೆಯುತ್ತಿದ್ದವು.

ನಾನು ಕಾಲೇಜಿಗೆ ಸೇರಿದ ನಂತರ ದೂರದಲ್ಲಿದ್ದ ತರಗತಿಗಳಿಗೆ ನಡೆದು ಹೋಗಿ ಬರುವುದು, ಹೋಂವರ್ಕ್, ಓದುವುದು ಮತ್ತು ಅಮ್ಮನು ಹೇಳುವ ಸಣ್ಣಪುಟ್ಟ ಮನೆಗೆಲಸ ಮಾಡುವುದರಲ್ಲಿ ಸಮಯ ಮುಗಿದು ಹೋಗುತ್ತಿತ್ತು. ಆ ಅವಧಿಯಲ್ಲಿ ರಜಾದಿನಗಳಲ್ಲಿ ಮಾತ್ರ ರೇಡಿಯೋ ಕೇಳಲು ಸಾಧ್ಯವಾಗುತ್ತಿತ್ತು.


ಡಿಗ್ರಿ ಮುಗಿಸಿ ವಿವಾಹವಾದ ನಂತರ ದೂರದ ಊರು ಗುಲ್ಬರ್ಗಾದಲ್ಲಿ ಪತಿಯೊಡನೆ ವಾಸ. ನಾನು ಅವರಿಂದ ಪಡೆದುಕೊಂಡ ಮೊದಲನೆಯ ಕೊಡುಗೆಯೆಂದರೆ ನನ್ನ ನೆಚ್ಚಿನ ‘ಟ್ರಾನ್ಸಿಸ್ಟರ್ ರೇಡಿಯೋ’ ಮರ್ಫೀ ಕಂಪೆನಿಯ ‘ಮುನಾ’ ಎಂಬುದು. ಪತಿ ಕಚೇರಿಗೆ ಹೋದರೆ ಬರುತ್ತಿದ್ದುದು ಸಂಜೆಗೆ. ಅಲ್ಲಿಯವರೆಗೆ ನಾನು ಮನೆಯ ಒಡತಿ. ಸದಾಕಾಲ ನನ್ನ ಸಂಗಾತಿ ನನ್ನ ರೇಡಿಯೋ. ಮುಂಜಾನೆ ಕಾರ್ಯಕ್ರಮ ವಿವರಣೆಯನ್ನು ಕೇಳುತ್ತಿರುವಾಗಲೇ ಆ ದಿನ ಯಾವುದನ್ನು ಕೇಳಬೇಕೆಂದು ಗುರುತು ಮಾಡಿಕೊಳ್ಳುತ್ತಿದ್ದೆ. ದೇವರನಾಮ, ಸಿನೆಮಾಹಾಡುಗಳು, ಹರಿಕಥೆ, ಭಾವಗೀತೆ, ನಾಟಕ ಎಲ್ಲವೂ ನನಗೆ ಪ್ರಿಯವಾಗಿದ್ದವು. ನಿರಾತಂಕವಾಗಿ ಆಲಿಸುತ್ತಿದ್ದೆ. ಇದಲ್ಲದೆ ತಿಂಗಳಿಗೊಮ್ಮೆ ಯಾವುದಾದರೊಂದು ಚಲನಚಿತ್ರದ ಧ್ವನಿಮುದ್ರಣವೂ ಪ್ರಸಾರವಾಗುತ್ತಿತ್ತು. ಕ್ರಿಕೆಟ್ ಕಾಮೆಂಟರಿಯಂತೂ ಅಂಟಿದ ನಂಟಾಗಿತ್ತು. ವಿವಿಧ ಬಾರತಿಯಲ್ಲಿ ಪ್ರಸಾರವಾಗುತ್ತಿದ್ದ ಹಿಂದಿ ಚಿತ್ರಗೀತೆಗಳು, ರೇಡಿಯೋ ಸಿಲೋನಿನ ಬಿನಾಕಾ ಗೀತ್‌ಮಾಲಾ ಎಲ್ಲವೂ ನನಗೆ ಪ್ರಿಯವಾಗಿದ್ದವು. ನನ್ನ ಮರ್ಫಿಮುನ್ನಾ ಆತ್ಮ ಸಂಗಾತಿಯಂತಾಗಿತ್ತು.
ಹಲವಾರು ವರ್ಷಗಳು ಉತ್ತರ ಕರ್ನಾಟಕದ ಊರುಗಳಲ್ಲಿ ಇದ್ದನಂತರ ನಮ್ಮವರಿಗೆ ಮೈಸೂರಿಗೆ ವರ್ಗಾವಣೆಯಾಗಿ ಇಲ್ಲಿಗೆ ಬಂದೆವು. ಇಲ್ಲಿ ನಮ್ಮದು ಒಟ್ಟು ಕುಟಂಬ. ಅತ್ತೆ, ಮಾವ, ಮೈದುನ, ನಾದಿನಿ ಮತ್ತು ನಾವು ಮೂವರು. ಮನೆಯಲ್ಲಿ ಟೇಬಲ್ ಸೆಟ್ ರೇಡಿಯೊ ಇದ್ದರೂ ನನಗೆ ಸಮಯ ಸಿಗುತ್ತಿದ್ದುದು ಕಡಿಮೆ. ಮನೆಯ ಜವಾಬ್ದಾರಿಗಳು, ಮಗನ ವಿದ್ಯಾಭ್ಯಾಸದತ್ತ ಗಮನ ನೀಡುವುದು ಬಹಳ ಕಾಲ ತೆಗೆದುಕೊಳ್ಳುತ್ತಿತ್ತು. ಜೊತೆಗೆ ಡಿಗ್ರಿಯ ನಂತರ ಸ್ನಾತಕೋತ್ತರ ಪದವಿಗಾಗಿ ಓದಲು ನನಗೆ ಹಂಬಲವುಂಟಾಗಿ ದೂರಶಿಕ್ಷಣ ವ್ಯವಸ್ಥೆಯ ಮೂಲಕ ನೋಂದಣಿ ಮಾಡಿಸಿಕೊಂಡೆ. ಅಧ್ಯಯನಕ್ಕಾಗಿ ಸಮಯ ಮೀಸಲಿಡಬೇಕಾಗಿತ್ತು. ಆದರೂ ಬೇಸರವಾದಾಗ ನನ್ನ ಟ್ರಾನ್ಸಿಸ್ಟರ್ ಜೊತೆಗಿತ್ತು. ಎಲ್ಲ ಜವಾಬ್ದಾರಿಗಳನ್ನು ಮುಗಿಸಿ ಒಂದು ಹಂತ ಮುಟ್ಟಿದ ಮೇಲೆ ನನಗೆ ಬರವಣಿಗೆ ಒಂದು ಹವ್ಯಾಸವಾಯಿತು.

2000 ನೆಯ ಇಸವಿಯಿಂದ ಇದನ್ನು ಆಸಕ್ತಿಯಿಂದ ಮುಂದುವರಿಸಿದೆನು. ಕೆಲವು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾದಾಗ ನಾನೂ ಒಬ್ಬ ಲೇಖಕಳಾಗಿ ಪರಿಚಿತಳಾದೆನು. ಮೈಸೂರಿನ ಹಲವು ಸಾಹಿತ್ಯಿಕ ಸಾಂಸ್ಕೃತಿಕ ಸಂಘಗಳಲ್ಲಿ ಸದಸ್ಯಳಾಗಿ ಕ್ರಿಯಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡೆನು. ನನ್ನ ಕೆಲವು ಆರಂಭದ ಕೃತಿಗಳೂ ಪುಸ್ತಕ ರೂಪದಲ್ಲಿ ಪ್ರಕಟವಾದವು. ಅಲ್ಲದೆ ಸಂಘಗಳ ಮೂಲಕ ಸದಸ್ಯಳಾಗಿ ಮೈಸೂರು ಆಕಾಶವಾಣಿಯ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶವೂ ದೊರಕಿತು. ಹೀಗಾಗಿ ನಾನೂ ಆಕಾಶವಾಣಿಯವರಿಗೆ ಒಬ್ಬ ಲೇಖಕಿಯಾಗಿ ಪರಿಚಯವಾಗಲು ನೆರವಾಯಿತು. ಮತ್ತೆ ಬೆಳಗಿನ ಕೆಲಸಗಳ ಜೊತೆಗೆ ನನ್ನ ದಿನಚರಿಯೋ ಎಂಬಂತೆ ರೇಡಿಯೋ ನಂಟು ಬೆಸೆದುಕೊಂಡಿತು. ಅಡುಗೆ ಮನೆಯಲ್ಲಿ ಕೆಲಸಕಾರ್ಯಗಳ ಜೊತೆಜೊತೆಗೇ ಟ್ರಾನ್ಸಿಸ್ಟರ್ ಕೇಳುತ್ತಲೇ ಇರುತ್ತೇನೆ. ಮುಂದುವರೆದಂತೆ ಮೈಸೂರು ಆಕಾಶವಾಣಿಯ ಮಹಿಳಾವಿಭಾಗದಿಂದ ನನ್ನ ಕಥೆ, ಪ್ರಬಂಧ, ಲಘುಬರಹಗಳಿಗಾಗಿ ಕರೆಗಳು ಬರಲು ಪ್ರಾರಂಭವಾಗಿ ಅದು ಇಂದಿಗೂ ಮುಂದುವರೆದಿವೆ. ನಾನೂ ಇದುವರೆಗೆ ಹತ್ತಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಧ್ವನಿಯ ಮೂಲಕವೂ ಹೆಚ್ಚು ಜನ ಶ್ರೋತೃಗಳಿಗೆ ಪರಿಚಿತಳಾದೆ. ನನಗೆ ಇದರಿಂದ ಹೆಚ್ಚು ಉಪಯೊಗ ಮತ್ತು ಮಾರ್ಗದರ್ಶನ ಆಕಾಶವಾಣಿಯಿಂದ ದೊರೆಯಿತು. ಕಾರ್ಯಕ್ರಮ ನಿರೂಪಕ ಅಧಿಕಾರಿಗಳು ನನಗೆ ಲೇಖನ, ನಾಟಕ, ಕಥೆಗಳನ್ನು ಪರಿಣಾಮಕಾರಿಯಾಗಿ ಹೇಗೆ ಓದಬೇಕು, ಧ್ವನಿಯ ಏರಿಳಿತ ಹೇಗಿರಬೇಕು, ಎಲ್ಲಿ ಹೆಚ್ಚು ಒತ್ತು ಕೊಡಬೇಕು, ಸಮಯದ ಅವಧಿಯೊಳಗೆ ಲೇಖನಗಳನ್ನು ಹೇಗೆ ಬರೆಯಬೇಕು ಎಲ್ಲವನ್ನೂ ಹೇಳಿಕೊಟ್ಟರು. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ಅವರ ಮಾರ್ಗದರ್ಶನದಂತೆ ನನ್ನ ಶೈಲಿಯನ್ನು ಸುಧಾರಿಸಿಕೊಂಡು ಈಗ ಕೇಳುಗರಿಂದ ಉತ್ತಮ ಪ್ರತಿಕ್ರಿಯೆಗಳು ಲಭ್ಯವಾಗಿವೆ.

‘ಆಕಾಶವಾಣಿ’ ಎಂಬ ಹೆಸರನ್ನು ನೀಡಿದ್ದೂ ಮೈಸೂರಿನ ಮೊಟ್ಟಮೊದಲ ಪ್ರಸಾರ ಕೇಂದ್ರದವರಂತೆ. ಹಾಗಾಗಿ ಈ ಕೇಂದ್ರದ ಕಾರ್ಯಕ್ರಮಗಳ ಮೂಲಕವೇ ಪರಿಚಿತಳಾದೆನೆಂದು ನನಗೆ ಬಲು ಹೆಮ್ಮೆ. ಈಗ ತಾಂತ್ರಿಕ ಅನ್ವೇಷಣೆಯ ಫಲವಾಗಿ ಅಂಗೈಯಲ್ಲಿಯೇ ವಿಶ್ವದೊಡನೆ ಸಂಪರ್ಕ ಮಾಡಿಕೊಳ್ಳಬಲ್ಲ ‘ಸ್ಮಾರ್ಟ್‌ಫೋನ್’ ಗಳು ಬಂದಿವೆ. ಇವು ಎಷ್ಟರ ಮಟ್ಟಿಗೆ ತಮ್ಮ ಕಬಂಧ ಬಾಹುಗಳನ್ನು ಚಾಚಿಕೊಂಡಿವೆ ಎಂದರೆ ‘ಇಂಟರ್‌ನೆಟ್’ ಮಾಯಾಜಾಲದ ಮೂಲಕ ಏನೇನನ್ನೋ ಮಾಡಲು ಸಮರ್ಥವಾಗಿವೆ.

ಆದರೆ ಇದರಲ್ಲೂ ಆಕಾಶವಾಣಿ ಕೇಂದ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾದ ಆಪ್‌ಗಳಿವೆ. ನನ್ನ ಮೊಬೈಲಿನಲ್ಲೂ ಇದನ್ನು ಹಾಕಿಕೊಂಡಿದ್ದೇನೆ. ಆ ಮೂಲಕ ಕಾರ್ಯಕ್ರಮಗಳನ್ನು ಆಲಿಸುತ್ತೇನೆ. ಏನೇ ಆಗಿದ್ದರೂ ಇಂದಿಗೂ ನನಗೆ ಹೆಚ್ಚು ಪ್ರಿಯವಾಗಿರುವುದು ನನ್ನ ಅಡುಗೆ ಮನೆಯಲ್ಲಿ ಇರಿಸಿಕೊಂಡಿರುವ ‘ಟ್ರಾನ್ಸಿಸ್ಟರ್’ ರೇಡಿಯೋ. ನನ್ನ ಮತ್ತು ರೇಡಿಯೋ ಬಾಂಧವ್ಯ ಅಂಟಿದ ನಂಟಿನಂತೆ ಯಾವುದೇ ಚ್ಯುತಿಯಿಲ್ಲದೆ ಮುಂದುವರೆದಿದೆ.

-ಬಿ.ಆರ್,ನಾಗರತ್ನ. ಮೈಸೂರು.

7 Comments on “ನನ್ನ ರೇಡಿಯೋ ನಂಟು.

  1. ನಿಮ್ಮ ರೇಡಿಯೋ ಪ್ರೀತಿಯ ಜೊತೆ ಜೊತೆಗೆ, ನಿಮ್ಮ ಬದುಕಿನ ಕೆಲವು ಪುಟಗಳನ್ನೂ ಅರಿಯುವಂತಾಯಿತು. ನನಗೂ ರೇಡಿಯೋ ಕಾರ್ಯಕ್ರಮಗಳು ಬಹಳ ಇಷ್ಟ. ಸೊಗಸಾಗಿದೆ ಬರಹ.

  2. ಚೆಂದದ ಬರಹ. ನೀವು ಆಕಾಶವಾಣಿಯಲ್ಲಿ ಮಕ್ಕಳಿಗಾಗಿ ಪ್ರಸ್ತುತ ಪಡಿಸಿದ ಕಥೆಯನ್ನು ಕೇಳಿದ್ದು ನೆನಪಾಯಿತು.

  3. ರೇಡಿಯೋ ನಂಟಿನ ಅಂಟು ನಿಮ್ಮಂತೆ ನಮಗೂ ಹಿಡಿದುಬಿಟ್ಟಿದೆ. ನಮ್ಮ ಅಡುಗೆ ಕೋಣೆಯಲ್ಲಿರುವ ಹಳೆಯ ರೇಡಿಯೋದ ಕಿವಿ ಹಿಂಡಿದ ಬಳಿಕವೇ ನಮ್ಮ ಸುಪ್ರಭಾತ ಆರಂಭ! ಮೊಬೈಲ್ ಆಪ್ ನಿಂದ ರೇಡಿಯೋ ಹಾಕಿದರೂ ನಮ್ಮವರಿಗೆ ಇಷ್ಟವಾಗುವುದಿಲ್ಲ… ಚಂದದ ಲೇಖನ..ನಾಗರತ್ನ ಭಗಿನಿ.

  4. ಧನ್ಯವಾದಗಳು ಗೆಳತಿ ಹೇಮಾ…ನೀವು ಕೊಡುವ ವಿಷಯಗಳಿಂದ..ನಮ್ಮ ಮನದಂಗಳದಲ್ಲಿ ಹುದುಗಿ ಕುಳಿತ. ನೆನಪುಗಳು ಹೊರಬರುತ್ತವೆ…ಅವಕಾಶಕ್ಕಾಗಿ ಮತ್ತೊಂದು ಧನ್ಯವಾದಗಳು

  5. ನಿಮಮ ರೇಡಿಯೋದೊಂದಿಗಿನ ನಂಟಿನ್ನು ಬಲು ಸೊಗಸಾಗಿ ನಿರೂಪಿಸಿದ್ದೀರಿ.. ಚಂದದ ಲೇಖನ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *