‘ಸಂಜೆಯ ಹೆಜ್ಜೆಗಳು’ – ಭಾಗ1
ಮೈಸೂರಿನ ನಿವಾಸಿಯಾದ ಶ್ರೀಮತಿ ಸಿ.ಎನ್. ಮುಕ್ತಾ ಅವರು ಕನ್ನಡ ಸಾಹಿತ್ಯಲೋಕದಲ್ಲಿ ಪ್ರಸಿದ್ಧ ಕಾದಂಬರಿಗಾರ್ತಿ ಹಾಗೂ ಸಾಹಿತಿಯಾಗಿ ಚಿರಪರಿಚಿತರು. ಕಥಾವಸ್ತುವಿನ ಆಯ್ಕೆ ಮತ್ತು ವಿಶಿಷ್ಟವಾದ ಕಥನ ಶೈಲಿಯ ಮೂಲಕ ಓದುಗರಿಗೆ ಆಪ್ತವೆನಿಸುವ ಪಾತ್ರಗಳನ್ನು ಸೃಷ್ಟಿಸಿ ಕಾದಂಬರಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ, 80 ಕ್ಕೂ ಹೆಚ್ಚು ಕಾದಂಬರಿಗಳನ್ನು ಓದುಗರ ಕೈಗಿತ್ತ ಹಿರಿಮೆ ಸಿ.ಎನ್.ಮುಕ್ತಾ ಅವರದು. ಇವರ ಅನೇಕ ಕಾದಂಬರಿಗಳು ಕನ್ನಡದ ಕಿರುತೆರೆ, ಚಲನಚಿತ್ರಗಳ ರೂಪದಲ್ಲಿ ಜನರನ್ನು ತಲುಪಿವೆ.
ಸಿ.ಎನ್. ಮುಕ್ತಾ ಅವರು ಶಿಕ್ಷಣ ಇಲಾಖೆಯಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿಯಾಗಿ ನಿವೃತ್ತರಾಗಿದ್ದಾರೆ. ಸಮಾನ ಮನಸ್ಕ ಲೇಖಕಿಯರೊಡನೆ ‘ಸ್ನೇಹ ಬಳಗ’ ಎಂಬ ಸಾಹಿತ್ಯ ಕೂಟವನ್ನು ಮಾಡಿಕೊಂಡು ಕರ್ನಾಟಕದ ವಿವಿಧ ಭಾಗಗಳ ಲೇಖಕಿಯರ ಲೇಖನಗಳನ್ನು ಸಂಪಾದಿಸಿ ಕಥಾ ಸಂಕಲನ, ಕವನ ಸಂಕಲನ, ಅನುವಾದಿತ ಕಥಾ ಸಂಕಲನ, ಹಾಸ್ಯ ಕಥಾಸಂಕಲನಗಳನ್ನು ಪ್ರಕಟಿಸಿ ಓದುಗರಿಗೆ ಪರಿಚಯಿಸುವ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಇವರ ಸಾಹಿತ್ಯ ಸೇವೆಗೆ ಸಂದಿರುವ ಪ್ರಶಸ್ತಿ, ಸನ್ಮಾನಗಳು ಅನೇಕ. 1995ರಲ್ಲಿ ಆರ್ಯಭಟ ಪ್ರಶಸ್ತಿ, 2000ರಲ್ಲಿ ಗೊರೂರು ಪ್ರತಿಷ್ಠಾನಂದ ಅತ್ತಿಮಬ್ಬೆ ಪ್ರಶಸ್ತಿ, 2003ರಲ್ಲಿ ತ್ರಿವೇಣಿ ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರರಂಗದ ರಾಜ್ಯ ಪ್ರಶಸ್ತಿ, 2016ರಲ್ಲಿ ಕನ್ನಡ ಲೇಖಕಿಯರ ಸಂಘದಿಂದ ಬನಶಂಕರಿ ಮುಂತಾದವು. ಸಿ.ಎನ್.ಮುಕ್ತಾ ಅವರ ಕಿರುಕಾದಂಬರಿ ಈ ವಾರದಿಂದ ‘ಸುರಹೊನ್ನೆ’ಯಲ್ಲಿ ಪ್ರಕಟವಾಗಲಿದೆ …..
========================================================================
ಸಂಜೆಯ ಹೆಜ್ಜೆಗಳು
‘ದೇವಿ ಕಾಫಿ ಕೊಡ್ತೀಯಾ?” ಮೊಬೈಲ್ ನೋಡುತ್ತಾ ಕೂಗಿದಳು ರಮ್ಯ.
“ಅಡಿಗೆ ಮನೆಯಲ್ಲಿ ಯಾರೂ ಇಲ್ಲ. ನೀನೇ ಎದ್ದು ಕಾಫಿ ಮಾಡು” ಬ್ರಷ್ ಮಾಡುತ್ತಾ ಆದಿತ್ಯ ಹೇಳಿದ.
ಅಷ್ಟರಲ್ಲಿ ಅವಳ ಮೊಬೈಲ್ ರಿಂಗಾಯಿತು. ದೇವಿ ಫೋನ್ ಮಾಡಿದ್ದಳು.
“ದೇವಿ ಯಾಕೆ ಕೆಲಸಕ್ಕೆ ಬಂದಿಲ್ಲ?”
“ನಾನು ನಿನ್ನೇನೇ ಹೇಳಿದ್ರಲ್ಲಾ ಅಕ್ಕ. ಒಂದನೇ ತಾರೀಕಿನಿಂದ ಕೆಲಸಕ್ಕೆ ಬರಲ್ಲಾಂತ. ಸಂಬಳ ಗೂಗಲ್ ಪೇ ಮಾಡಿಬಿಡಿ.”
ರಮ್ಯಾಳಿಗೆ ಹಿಂದಿನ ದಿನದ ಘಟನೆ ನೆನಪಾಯಿತು. ಅತ್ತೆ-ಮಾವ ಬೇರೆ ಮನೆಗೆ ಹೋದ ಮೇಲೆ ರಮ್ಯ ದೇವಿಗೆ 2000ರೂ. ಸಂಬಳ ಜಾಸ್ತಿ ಮಾಡಿ ಹೇಳಿದ್ದಳು. “ನೀನು ಬರುವಾಗ ಹಾಲು, ಮೊಸರು ತೊಗೊಂಡು ಬಂದು ಬಿಡು. ಹಾಲು ಕಾಯಿಸಿ, ಡಿಕಾಕ್ಷನ್ ಹಾಕಿ ಕಾಫಿ ಮಾಡಿಬಿಡು.”
ದೇವಿ ಒಪ್ಪಿದ್ದಳು. ಅದೇ ರೀತಿ ಮಾಡುತ್ತಲೂ ಇದ್ದಳು. ಆದರೆ ಹಿಂದಿನ ದಿನ ಸಿಂಕ್‌ನಲ್ಲಿದ್ದ ಪಾತ್ರೆಗಳನ್ನು ನೋಡಿ ಕೆರಳಿದ್ದಳು.
‘ಇದೇನಕ್ಕಾ ಇದು? ಇಷ್ಟೊಂದು ಪಾತ್ರೆಗಳನ್ನು ಹಾಕಿದ್ದೀರಲ್ಲಾ? 20 ಲೋಟ, 8 ಊಟದ ತಟ್ಟೆ, 8 ತಿಂಡಿ ತಟ್ಟೆ, ಜೊತೆಗೆ ಅಡಿಗೆ, ತಿಂಡಿ ಮಾಡಿದ ಪಾತ್ರೆಗಳು, ಹಾಲಿನ ಪಾತ್ರೆ, ಮೊಸರಿನ ಪಾತ್ರೆ, ನಿಮ್ಮ ಊಟದ ಡಬ್ಬಿಗಳು 15 ಚಮಚಗಳು. ನನ್ನನ್ನು ಮನುಷ್ಯಳೂಂತ ತಿಳಿದಿದ್ದೀರೋ? ಪ್ರಾಣೀಂತ ತಿಳಿದಿದ್ದೀರೋ?”
“ತಿಂಗಳಿಗೆ 5,000ರೂ. ಕೊಡ್ತಿಲ್ವಾ? ಪಾತ್ರೆ ತೊಳೆಯುವುದು ನಿನ್ನ ಕೆಲಸ.”
“5,000ರೂ. ಕೊಡ್ತಿರಬಹುದು. ನೀವು ಮುಟ್ಟಿದ ಚಮಚ, ಲೋಟ, ಸೌಟು ತೊಳೆಯಕ್ಕೆ ಹಾಕಿದ್ರೆ ನನಗಾಗಲ್ಲ. ದೊಡ್ಡಮ್ಮನವರಿದ್ದಾಗ ಅವರೇ ಎಷ್ಟೊಂದು ಪಾತ್ರೆ ತೊಳೆದುಕೊಳ್ಳುತ್ತಿದ್ದರು, ತರಕಾರಿ ಅವರೇ ಹೆಚ್ಚಿಕೊಳ್ತಿದ್ರು, ಕಾಯಿಯೂ ಆವರೇ ತುರಿದುಕೊಳ್ತಿದ್ರು. ನೀವು ಎಲ್ಲಾ ಕೆಲಸ ನನಗೇ ಹೇಳೀರ. ನಾನು ಬೇರೆ ಮನೆಗೆ ಹೋಗೋದು ತಡವಾಗತ್ತೆ.”
“ನೀನು ಆ ಮನೆ ಬಿಡು. ನಾನೇ ಅವರು ಕೊಡುವ ದುಡ್ಡು ಕೊಡ್ತೀನಿ.”
“ಗಂಡ-ಹೆಂಡತಿ ಇಬ್ಬರೂ ಡಾಕ್ಟ್ರು ನನಗೆ ಬಹಳ ಸಹಾಯ ಮಾಡಿದ್ದಾರೆ. ನಿಮ್ಮನೆ ಬಿಟ್ಟರೂ ಅವರ ಮನೆ ಬಿಡಲ್ಲ.”
‘ಬಿಡು, ನೀನೊಬ್ಬಳೇ ಅಲ್ಲ ಕೆಲಸದವಳು, ದುಡ್ಡು ಬಿಸಾಕಿದ್ರೆ ಯಾರಾದರೂ ಸಿಗ್ತಾರೆ”
ದೇವಿ ಮರು ಮಾತಾಡದೆ ಕೆಲಸ ಮಾಡಿದಾಗ ರಮ್ಯ ‘ನಾನು ಗೆದ್ದೆ’ ಎಂದು ಬೀಗಿದ್ದಳು.ಆದರೆ ದೇವಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಹೇಳಿದ್ದಳು. “ನಾನು ನಾಳೆಯಿಂದ ಕೆಲಸಕ್ಕೆ ಬರಲ್ಲ. ಬೇರೆ ಯಾರನ್ನಾದರೂ ನೋಡಿಕೊಳ್ಳಿ.”
ಅವಳ ಹೇಳಿಕೆಯನ್ನು ರಮ್ಯ ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. ಫೋನ್‌ನಲ್ಲಿ ಅವಳು ಪುನಃ ಅದನ್ನೇ ಹೇಳಿದಾಗ ಅವಳಿಗೆ ಆಕಾಶ ತಲೆಯ ಮೇಲೆ ಬಿದ್ದಂತಾಯಿತು.
ಅವಳು ಆನ್‌ಲೈನ್‌ನಲ್ಲಿ ತಿಂಡಿಗೆ ಆರ್ಡರ್ ಮಾಡಿ ಪಾತ್ರೆ ತೊಳೆದು, ಕಸಗುಡಿಸಿದಳು.ಮನೆ ಒರೆಸಿ ಸುಸ್ತಾಗಿ ಕುಳಿತಿದ್ದಾಗ ತಿಂಡಿ ಬಂತು. ಅವಳು ಬೇಗ ಸ್ನಾನ ಮಾಡಿ ದೇವರ ಮನೆಗೆ ಹೋಗಿ ದೀಪ ಹಚ್ಚಿ, ಎಲ್ಲರಿಗೂ ತಿಂಡಿ ಕೊಟ್ಟಳು. ಅಷ್ಟರಲ್ಲಿ ಅವರಮ್ಮ ಪಂಕಜ ಫೋನ್ ಮಾಡಿದರು.
“ಏನಮ್ಮಾ?”
”ದೇವಿ ನಿಮ್ಮ ಮನೆ ಕೆಲಸ ಬಿಟ್ಟುಬಿಟ್ಟಳಂತೆ ಹೌದಾ?”
”ನಿನಗೆ ಯಾರು ಹೇಳಿದ್ರು?”
”ನಮ್ಮನೆ ಗಂಗಾ ಹೇಳಿದಳು.”
”ಹೌದು. ಇವತ್ತಿಂದ ಬರಲ್ಲ. ನೀನು ಗಂಗಾನ್ನ ಕೇಳಮ್ಮ.”
“ಕೇಳಾಯಿತು. ಅವಳು ‘ಆಗಲ್ಲ’ ಅಂದಳು.”
“ಅವಳು ರಾತ್ರಿ ಬಂದು ಪಾತ್ರೆ ತೊಳೆಯಲಿ. ಬೆಳಿಗ್ಗೆ 8.30 ಗೆ ಬಂದು ಕಸಗುಡಿಸಿ, ಸಾರಿಸಲಿ, ಬಟ್ಟೆಗಳನ್ನು ನಾನೇ ವಾಷಿಂಗ್ ಮಿಷನ್‌ಗೆ ಹಾಕಿಕೊಡ್ತೀನಿ.”
”ನಾನೂ ಹಾಗೇ ಹೇಳೇ ಕಣೆ. ಅವಳು ಮುಖಕ್ಕೆ ಹೊಡೆದ ಹಾಗೆ ಮಾತಾಡಿಬಿಟ್ಟಳು.
“ಏನಂದಳು?”
”ನನಗೂ ಗಂಡ-ಮಕ್ಕಳಿದ್ದಾರೆ. ಅವರಿಗೆ ಅಡಿಗೆ ಮಾಡಿ ಹಾಕೋದು ಬೇಡವಾ? ನಮಗೂ ಆಸೆ ಆಕಾಂಕ್ಷೆ ಇರತ್ತೆ. ಬೆಳಿಗ್ಗೆ ನಾಲ್ಕು ಜನ ಎಲ್ಲೆಲ್ಲೋ ತಿನ್ನುತ್ತೀವಿ. ರಾತ್ರಿ ಒಟ್ಟಿಗೆ ಕೂತು ಊಟ ಮಾಡೋದು ಬೇಡವಾ? ನಿಮ್ಮ ಮಗಳು ಸಿಕ್ಕಾಪಟ್ಟೆ ಕೆಲಸ ಮಾಡಿಸ್ತಾರಂತೆ. ನನಗಾಗಲ್ಲ ಬಿಡಿ” ಅಂದಳು.
“ಈಗೇನಮ್ಮ ಮಾಡೋದು?”
“ನೀನು, ನಿನ್ನ ಗಂಡ ತುಂಬಾ ದುಡುಕಿಬಿಟ್ರಿ, ನಿಮ್ಮತ್ತೆ-ಮಾವ ಮನೆಬಿಟ್ಟು ಹೋಗದಂತೆ ತಡೆಯಬೇಕಾಗಿತ್ತು. ಇಬ್ಬರೂ ನಿಮಗಾಗಿ ಮೂಕೆತ್ತಿನ ಹಾಗೆ ದುಡಿದರು…..”
‘ನಾವು ಅವರನ್ನ ಚೆನ್ನಾಗಿ ನೋಡಿಕೊಳ್ಳಿರಲಿಲ್ಲವೇನಮ್ಮಾ?”
“ನೀವು ಅವರನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳಿಂತ ಸಾನ್ವಿ ಹೇಳಿದ್ದಾಳೆ. ಅವರಿದ್ದಾಗ ನಿನಗೆ ಅನುಕೂಲವಿತ್ತು. ಇದು ಸ್ವಯಂಕೃತ ಅಪರಾಧ ಅನುಭವಿಸು.”
“ಅಮ್ಮ ನಿಮ್ಮನೆ ಸುನಂದಾ ಬಂದಿದ್ರೆ ಕಳಿಸು.”
“ಅವಳು ಹಾಗೆಲ್ಲಾ ಬರಲ್ಲ ಬಿಡು. ಮಧ್ಯಾಹ್ನ ಊಟಕ್ಕೆ ಇಲ್ಲಿಗೆ ಬನ್ನಿ, ನಾಳೆಯಿಂದ ಕೊಂಚ ಬೇಗ ಎದ್ದು ಕೆಲಸ ಮಾಡಿಕೋ.”
“ನನಗೆ ಅಡಿಗೆಯವರು ಬೇಕು. ಕೆಲಸದವರಂತೂ ಬೇಕೇಬೇಕು.”
ತಿಂಡಿ ತಿಂದ ಮಕ್ಕಳು ಸ್ಟಡಿರೂಂಗೆ ಹೋಗಿದ್ದರು. ಆದಿತ್ಯ ಹೊರಗೆ ಹೋಗಿದ್ದ. ರಮ್ಯ ರೂಂ ಸೇರಿ ಮಂಚದ ಮೇಲೆ ಉರುಳಿದಳು. ಮನಸ್ಸು 15 ದಿನಗಳ ಹಿಂದೆ ನಡೆದ ಘಟನೆಯನ್ನು ಮೆಲಕು ಹಾಕಿತು.
ಆ ದಿನ ಬುಧವಾರ. ಅತ್ತೆ ಇಡ್ಲಿ, ಸಾಂಬಾರು, ಚಟ್ನಿ ಮಾಡಿ ಎಲ್ಲವನ್ನೂ ಡೈನಿಂಗ್ ಟೇಬಲ್ ಮೇಲಿಟ್ಟು ರೂಂನಲ್ಲಿ ಮಲಗಿದ್ದರು. ಮಾವ ಕಾಣಿಸಿರಲಿಲ್ಲ.
ಸಾನ್ವಿ, ಸುದೀಪ್ ಸ್ನಾನ ಮಾಡಿ, ಯೂನಿಫಾರಂ ಧರಿಸಿ ಡೈನಿಂಗ್ ಟೇಬಲ್ ಹತ್ತಿರ ಕುಳಿತಿದ್ದರು. ಆದಿತ್ಯಾನೂ ಅಲ್ಲೇ ಇದ್ದ.
“ಅತ್ತೆ ಎಲ್ಲರೂ ಬಂದಿದ್ದೀವಿ. ತಿಂಡಿ ಬಡಿಸಿ.”
“ಯಾಕೋ ಜ್ವರ ಬಂದಂತಿದೆ. ರಮ್ಯ ನೀವೇ ಬಡಿಸಿಕೊಳ್ಳಿ. ವಾಂಗಿಭಾತ್, ಮೊಸರನ್ನ ಕಲಿಸಿದ್ದೀನಿ. ಡಬ್ಬಿಗೆ ಹಾಕಿಕೊಂಡು ಬಿಡು.”
“ನನಗೆ ಲೇಟಾಗಿದೆ ಅತ್ತೆ.”
ಅವರು ಉತ್ತರಿಸಲಿಲ್ಲ.
“ಅಮ್ಮ ಅಪ್ಪ ಎಲ್ಲಿ?”
”ಅವರು ಸುಬ್ಬರಾಯರ ಜೊತೆ ಮೈಸೂರಿಗೆ ಹೋಗಿದ್ದಾರೆ. ಸಾಯಂಕಾಲ ನೀವೇ ಮಕ್ಕಳನ್ನು ಕಂಡು ಬರಬೇಕು.
“ಅಪ್ಪಂಗೆ ಹೇಳಿ ಹೋಗಕ್ಕಾಗಲ್ವಾ? ನನಗೆ ಬೇಗ ಬರಕ್ಕಾಗಲ್ಲ. ರಮ್ಯಂಗೂ ಕಂಪನಿ ದೂರ. ನೀನು ಈಗ ಹೇಳಿದ್ರೆ ನಾವೇನು ಮಾಡಬೇಕು?”
“ಬೆಳಿಗ್ಗೇನೆ ನೀವು ಹುಷಾರಿಲ್ಲಾಂತ ಹೇಳಿದ್ದಿದ್ರೆ ನಾವು ಊಟ ಹೊರಗೇ ಮಾಡ್ತಿದ್ವಿ, ನನಗಿರೋದು ಎರಡು ಕೈ. ಯಾವ ಯಾವ ಕೆಲಸ ಮಾಡಲಿ?” ರಮ್ಯ, ಗಂಡ ಮಕ್ಕಳಿಗೆ ತಿಂಡಿಕೊಟ್ಟು ತಾನೂ ತಿನ್ನುತ್ತಾ ಹೇಳಿದಳು.
ಅವಳ ಗೊಣಗಾಟ ಕೇಳಿ ಅತ್ತೆಯೇ ಅವರ ನಾಲ್ಕು ಜನರ ಊಟದ ಡಬ್ಬಿ ರೆಡಿ ಮಾಡಿದ್ದರು.
ರಮ್ಯ, ಆದಿತ್ಯರ ಗೊಣಗಾಟ ಮುಂದುವರೆದಾಗ ಸಾನ್ವಿ ಸಿಡುಕಿದ್ದಳು. “ದಿನಾ ತಾತ ನಮ್ಮನ್ನು ಸ್ಕೂಲಿಗೆ ಬಿಡ್ತಾರೆ. ಸ್ಕೂಲಿನಿಂದ ಕಂಡು ಬತ್ತಾರೆ. ಒಂದು ದಿನ ನಿಮ್ಮಿಬ್ಬರಿಗೂ ಆ ಕೆಲಸ ಮಾಡಕ್ಕಾಗಲ್ವಾ? ನೀವ್ಯಾರೂ ಬರಬೇಡಿ, ನಾನೇ ಸುಧೀನ್ನ ಜೋಪಾನವಾಗಿ ಕರ್ಕೊಂಡು ಬರ್ತೀನಿ. ಅಮ್ಮ ನೀನೂ ಅಷ್ಟೆ, ಯಾವಾಗಲೂ ಫೋನ್‌ನಲ್ಲಿ ಮುಳುಗಿದ್ದೀಯ. ಒಂದು ದಿನ ಮನೆ ಕೆಲಸ ಮಾಡಕ್ಕಾಗಲ್ವಾ?’
”ಹೌದಮ್ಮ, ಅಜ್ಜಿ ತಿಂಡಿ ಮಾಡಿದ್ದಾರೆ. ಬಡಿಸಕ್ಕೆ ನಿನಗೆ ಬೇಜಾರು. ಅಜ್ಜಿ ದಿನಾ ಡಬ್ಬಿ ರೆಡಿ ಮಾಡ್ತಾರೆ. ನಿನಗೆ ಒಂದು ದಿನ ರೆಡಿ ಮಾಡಕ್ಕಾಗಲ್ವಾ? ‘ ಸುಧೀ ಕೇಳಿದ್ದ.
ರಮ್ಯಾಳ ಕೋಪ ನೆತ್ತಿಗೇರಿತ್ತು .”ಹೌದು, ನಾನು ಸೋಮಾರಿ. ನಿಮ್ಮಜ್ಜಿ-ತಾತ ಒಳ್ಳೆಯವರು. ಮಕ್ಕಳಿಗೆ ಹೇಳಿಕೊಟ್ಟು ನನ್ನ ನಿಮ್ಮ ನಡುವೆ ಜಗಳ ತರ್‍ತಿರುವ ಅವರೇ ಗ್ರೇಟ್ ನಿಮಗೆ.”
ಗೊಣಗುತ್ತಲೇ ಎಲ್ಲಾ ಚದುರಿದ್ದರು. ಅವಳಾಗಲಿ, ಆದಿತ್ಯನಾಗಲಿ ಅವಳತ್ತೆ ದಾಕ್ಷಾಯಿಣಿಗೆ ಮಾತ್ರೆ ತಂದುಕೊಟ್ಟಿರಲಿಲ್ಲ. ದಾಕ್ಷಾಯಿಣಿ ದೇವಿಯನ್ನು ಕಳಿಸಿ ಮಕ್ಕಳನ್ನು ಕರೆತರಲು ಹೇಳಿದ್ದರು. ಹತ್ತಿರದಲ್ಲೇ ಲಕ್ಷ್ಮಿ ಕೇಟರರ್ಸ್ ಗೆ ಫೋನ್ ಮಾಡಿ ಚಪಾತಿ, ಪಲ್ಯ, ಮೊಸರನ್ನ ತರಿಸಿದ್ದರು.
ಆದಿತ್ಯ ಅಪ್ಪನನ್ನು “ನೀನ್ಯಾಕೆ ಮೈಸೂರಿಗೆ ಹೋಗಿದ್ದೆ?’ ಎಂದು ಕೇಳಿರಲಿಲ್ಲ.
ವಾರದ ನಂತರ ಆನಂದರಾಯರು ಒಂದು ರಾತ್ರಿ ಹೇಳಿದ್ದರು “ಆದಿತ್ಯ, ರಮ್ಯ ನಾವು ನಿಮ್ಮ ಹತ್ತಿರ ಕೊಂಚ ಮಾತಾಡಬೇಕು.”
“ಏನು ವಿಷಯಾಪ್ಪ?” ಆದಿತ್ಯ ಕೇಳಿದ್ದ. ರಮ್ಯ ಕೂಡ ಬಂದು ಪಕ್ಕ ಕುಳಿತಿದ್ದಳು.
‘ನೋಡಪ್ಪ ನನಗೆ ಈಗ 78 ವರ್ಷ, ನಿಮ್ಮಮ್ಮಂಗೆ 75 ವರ್ಷ, ಇದುವರೆಗೂ ಜವಾಬ್ದಾರಿ ನಿರ್ವಹಿಸಿ ಸಾಕಾಗಿದೆ. ಇನ್ನು ಮುಂದೆ ಹೀಗಿರಕ್ಕಾಗಲ್ಲ. ಆದ್ದರಿಂದ ನಾವು ಈ ಭಾನುವಾರ ಬೇರೆ ಮನೆಗೆ ಹೋಗ್ತಿದ್ದೇವೆ.”
“ಬೇರೆ ಮನೇಗಾ?”
“ಹೌದು, ನನ್ನ ಫ್ರೆಂಡ್‌ನ ಅವನ ಮಗ, ಸೊಸೆ ಮೈಸೂರಿಗೆ ಕಕ್ಕೊಂಡು ಹೋದರು. ಆ ಮನೆ ಖಾಲಿ ಇದೆ. ಅವರ ಮನೆ ಸಾಮಾನುಗಳೇ ಇವೆ. ಬಾಡಿಗೆ ಕಡಿಮೆ. ಅಡ್ವಾನ್ಸ್ ಇಲ್ಲ.”
ಇಲ್ಲಿ ನಿಮಗೇನು ತೊಂದರೆ?”
“ನಿನ್ನ ಪ್ರಶ್ನೆಗೆ ಉತ್ತರ ಹೇಳೋದು ಕಷ್ಟ. ಸಾಕು ಜವಾಬ್ದಾರಿ. ನಮ್ಮ ಪಾಡಿಗೆ ನಾವಿರೋಣ ಅನ್ನಿಸಿದೆ”.
ರಮ್ಯಾ “ನಿಮ್ಮಿಷ್ಟ ಮಾವ. ನೀವು ಈಗಾಗಲೇ ನಿರ್ಧಾರ ಮಾಡಿ, ಮನೆ ನೋಡಿಯಾಗಿದೆ. ನೀವು ಬೇರೆ ಹೋಗುವುದಕ್ಕೆ ನಮ್ಮ ಅಭ್ಯಂತರವೇನಿಲ್ಲ. ನಿಮ್ಮ ಸಂತೋಷ” ಎಂದಿದ್ದಳು.
(ಮುಂದುವರಿಯುವುದು)
–ಸಿ.ಎನ್. ಮುಕ್ತಾ, ಮೈಸೂರು.
ಸಂಸಾರದಲ್ಲಿ ಇಂದಿನ ಬಹಳ ಮುಖ್ಯವಾದ ಸಮಸ್ಯೆಯನ್ನು ನಮ್ಮ ಮುಂದೆ ಇಡುತ್ತಿದೆ ಕಾದಂಬರಿಯ ಮೊದಲ ಭಾಗ. ಆರಂಭವೆ ಸೊಗಸಾಗಿದೆ.
ಪ್ರಸ್ತುತ ವಿಷಯದ ಮೇಲೆ ಬೆಳಕು ಚೆಲ್ಲುವಂತಿರುವ..ಸಂಜೆಯ ಹೆಜ್ಜೆ ಗಳು…ಕಾದಂಬರಿ… ಕುತೂಹಲ… ಹುಟ್ಟಿಸುವ ಹೆಜ್ಜೆ ಇಟ್ಟಿದೆ..ಮುಂದುನ ಕಂತು ಕಾಯುವಂತೆ ಮಾಡಿದೆ
ಕುತೂಹಲಕಾರಿ ಆರಂಭ. ಕಣ್ಣಿಗೆ ಕಟ್ಟುವಷ್ಟು ನೈಜ ಚಿತ್ರಣ.
ವಾಸ್ತವವನ್ನು ಬಿಂಬಿಸುವ ಕಥಾಹಂದರವುಳ್ಳ ಕಾದಂಬರಿ ಆರಂಭವಾಗಿರುವುದು ಖುಷಿ ತಂದಿದೆ. ಮುಂದಿನ ಕಂತುಗಳನ್ನು ಓದಲು ಉತ್ಸುಕರಾಗಿದ್ದೇವೆ.
ನಮ್ಮ ಸುರಹೊನ್ನೆಗೆ ತಾರಾ ಮೌಲ್ಯವಿರುವ ಬರಹಗಾರ್ತಿ ದೊರೆತು ಇದರ ಹಿರಿಮೆಗೆ ಗರಿ ಸಿಕ್ಕಂತಾಗಿದೆ. ಮುಂದಿನ ಕಂತುಗಳಿಗಾಗಿ ಕಾಯುವಂತಾಗಿದೆ.
ಸಿ. ಎನ್. ಮುಕ್ತಾ ಅವರ ಸಾಮಾಜಿಕ ಕಾದಂಬರಿಗಳನ್ನು ಬಹಳ ಮೊದಲಿನಿಂದಲೇ ಇಷ್ಟಪಟ್ಟು ಓದುತ್ತಿದ್ದೆ. ನಮ್ಮ ಸುರಹೊನ್ನೆಯಲ್ಲಿ ಅವರ ಕಥೆ ಪ್ರಕಟವಾಗುವುದು ನಮ್ಮ ಭಾಗ್ಯವೇ ಸರಿ. ಸಮಕಾಲೀನ ಕುಟುಂಬದ ಕಥೆಯ ಪ್ರಾರಂಭವು ಕುತೂಹಲದಾಯಕವಾಗಿದೆ… ಧನ್ಯವಾದಗಳು ಮೇಡಂ.
ಈಗಿನ ಕಾಲದ ವಾಸ್ತವ ಚಿತ್ರಣ ಕಥೆಯ
ಆರಂಭ ಕುತೂಹಲ ಮೂಡಿಸಿದೆ
ಅಭಿಮಾನಿ ಓದುಗರಿಗೆಲ್ಲಾ ಧನ್ಯವಾದಗಳು
ಸಹೃದಯ ಸಾಹಿತ್ಯಾಸಕ್ತರಿಗೆ ನಮನಗಳು. ಅಭಿಮಾನದಿಂದ ನನ್ನ ಕಿರುಕಾದಂಬರಿಯನ್ನು ಪ್ರಕಟಿಸುತ್ತಿರುವ ‘ಸುರಹೊನ್ನೆ’ ಪತ್ರಿಕೆಯವರಿಗೆ ಧನ್ಯವಾದಗಳು. ಓದಿ, ಮೆಚ್ಚಿ,ಪ್ರತಿಕ್ರಿಯಿದ ಶ್ರೀಮತಿ ನಯನಾ ಬಜಕೂಡ್ಲು, ಶ್ರೀಮತಿ ಬಿ.ಆರ್.ನಾಗರತ್ನ ,ಶ್ರೀಮತಿ ಸುಜಾತಾ, ಶ್ರೀಮತಿ ಹೇಮಮಾಲಾ , ಶ್ರೀ ಶರಣಬಸವೇಶ ಕೆ.ಎಂ, ಶ್ರೀಮತಿ ಶಂಕರಿ ಶರ್ಮ ಹಾಗೂ ಶ್ರೀಮತಿ ಗಾಯತ್ರಿ ಸಜ್ಜನ್ ಅವರಿಗೆ ಧನ್ಯವಾದಗಳು.
ಸಿ.ಎನ್.ಮುಕ್ತಾ
ಪ್ರಸಕ್ತ ಮನೆಮನೆಯ ಸಮಸ್ಯೆಯ ನೈಜ ಚಿತ್ರಣದೊಂದಿಗೆ ಮುಕ್ತಾ ಮೇಡಂ ಅವರ ಕಾದಂಬರಿ ಎಂದಿನಂತೆ ಕುತೂಹಲ ಮೂಡಿಸಿದೆ.