ನವಿಲ ನರ್ತನಕೆ ಕೊಳಲ ಗಾನದಿಂಪು ಜೊತೆಯಾಗಿ

Share Button

(ಕುವೆಂಪು ಅವರ ಪ್ರಾರಂಭಿಕ ಕವನಗಳನ್ನು ಕುರಿತು)

ಕನ್ನಡ ಸಾಂಸ್ಕೃತಿಕ ಲೋಕದ ದೊಡ್ಡಪ್ಪ ಕೆ ವಿ ಪುಟ್ಟಪ್ಪ. ಕನ್ನಡದ ಕನ್ನಡಿಯಾಗಿ ಅದರ ಪ್ರತಿಬಿಂಬ ತಿದ್ದಿದವರು, ಸರಿಪಡಿಸಿ ಬೆಳೆಸಿದವರು, ಪಂಪ ರನ್ನ ಕುಮಾರವ್ಯಾಸರಂತೆ ನಿತ್ಯ ನೆನಪಿಟ್ಟುಕೊಳ್ಳುವ ಕೆಲಸ ಮಾಡಿದವರು.  ಇಂಥ ಕುವೆಂಪು ಅವರು ಸಾಹಿತ್ಯದ ಎಲ್ಲ ಪ್ರಕಾರಗಳಲೂ ಕೃತಿ ರಚಿಸಿ, ಎಲ್ಲದರಲೂ ಸರಿದೊರೆಯಾಗಿ ಸೈ ಎನಿಸಿಕೊಂಡವರು. ಆದರೆ ಮೂಲತಃ ಇವರದು ಕವಿಹೃದಯ, ಕಾವ್ಯಪ್ರೇಮ. ಸೂರ‍್ಯೋದಯ-ಚಂದ್ರೋದಯವನೇ ದೇವರ ದಯೆ ಎಂದವರು. ‘ಶಿವ ಕಾವ್ಯದ ಕಣ್ಣೋ’ ಎಂದು ಸುರುವುದರ ಮೂಲಕ ತಮ್ಮ ರಚನೆಯ ಕೇಂದ್ರವನೂ ಕವಿತೆ ಮುಟ್ಟಬೇಕಾದ ಆದರ್ಶವನೂ ಒಟ್ಟೊಟ್ಟಿಗೆ ಸಾರಿದವರು. ಅವರು ಏನೇ ಬರೆದರೂ ಕವಿತ್ವದ ಪ್ರತಿಭಾ ವಿಲಾಸ ಮತ್ತು ಮಹೋನ್ನತ ತತ್ತ್ವವಿನ್ಯಾಸ ಮಿಳಿತಗೊಂಡೇ ಇರುತ್ತದೆ.

ಕುವೆಂಪು ಅವರು ಮೊದಲಿಗೆ ಸಾಹಿತ್ಯ ಕೃಷಿ ನಡೆಸಿದ್ದೂ ಕಾವ್ಯಪ್ರಕಾರದಲೇ. ಅವರು ಬರೆದದ್ದರಲಿ ಮತ್ತು ಪ್ರಕಟವಾಗಿದ್ದರಲಿ ಅರ್ಧಕಿಂತಲೂ ಹೆಚ್ಚು ಕವನ ಸಂಕಲನಗಳೇ! ಅದರಲೂ ನಿಸರ್ಗ ಮತ್ತು ಅಧ್ಯಾತ್ಮ ಅವರ ಕಾವ್ಯಸೃಷ್ಟಿಯ ನಯನೇಂದ್ರಿಯಗಳು. ನಿಸರ್ಗದಲಿ ಸಕಲ ಜೀವರಾಶಿಯ ಆನಂದವನೂ ಅಧ್ಯಾತ್ಮದಲಿ ಮಾನವತಾವಾದದ ಸಮಷ್ಟಿಯನೂ ಕಂಡು ಕಾಣಿಸಿದವರು. ಜೊತೆಗೆ ಏನೇ ಬರೆಯಲಿ ಅದಕೊಂದು ತಾತ್ತ್ವಿಕ ಚೌಕಟ್ಟು ಹಾಕುವುದು ಕುವೆಂಪು ಬರೆಹದ ವೈಶಿಷ್ಟ್ಯ. ತತ್ತ್ವಾನ್ವೇಷಕ ರಸಋಷಿ ಕುವೆಂಪು ಅವರ ಸೈದ್ಧಾಂತಿಕತೆಯನು ವಿಮರ್ಶಕರು ಮೆಚ್ಚಲಿ, ಬಿಡಲಿ!? ಆದರೆ ನಿರ್ದಿಷ್ಟ ತತ್ತ್ವಮೀಮಾಂಸೆಯನು ಮಾತ್ರ ಅವರ ಪ್ರತಿ ರಚನೆಯಲೂ ಕಾಣುತ್ತೇವೆ. ಅವರದು ಹೊರಗಿನಿಂದ ಹೇರಲ್ಪಟ್ಟ ದರ್ಶನವಲ್ಲ; ಮೊದಲಿನಿಂದಲೂ ರೂಪುಗೊಂಡ ಮತ್ತು ಒಳಗಿನಿಂದ ಪಕ್ವಗೊಂಡ ವಿಕಸಿತ ಜೀವದ್ರವ್ಯ; ಕಾಣ್ಕೆಯನು ಕಲಾತ್ಮಕ ಅನುಭವವಾಗಿಸಿದ ದಷ್ಟಪುಷ್ಟ ಜೀವರಾಶಿಯ ಸುಖದುಃಖ ಸಮಾಹಿತ. ಅವರು ತಮ್ಮ ಜೀವಮಾನದುದ್ದಕೂ ಪ್ರತಿಪಾದಿಸಿದ ಪಂಚಮಂತ್ರಗಳಿರಲಿ, ಅದನ್ನೊಳಗೊಂಡ ವಿಶ್ವಮಾನವ ತತ್ತ್ವವಿರಲಿ ಎಲ್ಲವೂ ಕಲೆಯೊಳಗೆ ಅರಳಿದ ರಸಾನುಭೂತಿ ಮತ್ತು ದೈವೋನ್ನತಿ. ತಮ್ಮೆಲ್ಲ ಅಧ್ಯಯನ-ಅಧ್ಯಾಪನ ಮತ್ತು ಸೃಷ್ಟಿಶೀಲ ಕನ್ನಡದ ಕೆಲಸಗಳಿಂದ ಜಗತ್ತನು ವ್ಯಾಖ್ಯಾನಿಸಿದ ಕಲಾಚಾತುರ‍್ಯ. ಈ ಎಲ್ಲವೂ ಅವರು ಮೊದ ಮೊದಲು ರಚಿಸಿ ಪ್ರಕಟಿಸಿದ ಕವನಸಂಗ್ರಹಗಳ ಪದ್ಯಗಳಲೇ ಹರಳುಗಟ್ಟುತಾ ಒಂದು ನಿರ್ದಿಷ್ಟ ಹೆಣಿಗೆಯಾಗಿ ರೂಪುಗೊಳ್ಳುತಾ ತುಡಿಯುತಿರುವುದನು ಕೊಳಲು (1930) ಮತ್ತು ನವಿಲು (1934) ಸಂಕಲನಗಳಲಿ ಕಾಣಬಹುದು.

 ‘ನೂರು ದೋಷಗಳಿದ್ದರೂ ಜೀವವಿದ್ದರೆ ಕಾವ್ಯ ಕಾವ್ಯವೇ; ಒಂದು ತಪ್ಪಿಲ್ಲದಿದ್ದರೂ ಜೀವವಿಲ್ಲದ ಕಾವ್ಯ ಕಾವ್ಯವೇ ಅಲ್ಲ’ ಎಂದು ಉದ್ಗರಿಸಿದವರು ಆಚಾರ‍್ಯ ಬಿಎಂಶ್ರೀಯವರು ಕೊಳಲಿಗೆ ಮುನ್ನುಡಿಸುತಾ! ಜೀವಾನಂದ, ಬ್ರಹ್ಮಾನಂದ ಮತ್ತು ಕಾವ್ಯಾನಂದಗಳನ್ನು ತಮ್ಮ ಶಕ್ತ್ಯನುಸಾರ ಹಕ್ಕಿಯಂತೆ ಹಾಡಿದವರು ಪುಟ್ಟಪ್ಪನವರು ಎಂದು ಮೆಚ್ಚುಗೆ ತೋರುತಾರೆ ಮುಂದುವರಿದು.  ಇವರ ಈ ಎರಡು ಸಂಕಲನಗಳಿಂದ ಒಟ್ಟು ಒಂದುನೂರ ಹನ್ನೆರಡು ಪದ್ಯಗಳಿದ್ದು, ಬಹುಪಾಲು ನಿಸರ್ಗದ ಮೂಲಕ ಜೀವಪರ ಬದುಕನು ಕಟ್ಟುವ, ಕಾಯುವ ವಿಧಾನದವು; ಪ್ರತಿಭಾ ವಿನ್ಯಾಸದವು.

 ಇವುಗಳ ಹೆಸರೇ ಮೋಹಕ. ನವಿಲಿನ ನಾಟ್ಯವಾಗಲೀ ಕೊಳಲಿನ ನಾದವಾಗಲೀ ಎರಡೂ ನಮ್ಮ ಪರಂಪರೆಯನು ಧ್ವನಿಪೂರ್ಣವಾಗಿ ನೆನಪಿಸಿ ಕೊಡುವಂಥವು. ಮೊದಲನೆಯದು ದೃಶ್ಯ ಸಾಕ್ಷಾತ್ಕಾರವನೂ ಎರಡನೆಯದು ಶ್ರವ್ಯದ ಬಹುವಿಧ ಸಾಧ್ಯತೆಗಳನೂ ಪ್ರತಿನಿಧಿಸುವಂಥವು. ಈ ಸಂಕಲನಗಳನು ತಂದ ಸಂದರ್ಭ, ಕನ್ನಡ ನವೋದಯ ಉತ್ಕಟವಾಗಿದ್ದ ಕಾಲ. ಕಾಲಧರ್ಮ ಮತ್ತು ಮನೋಧರ್ಮಗಳು ಕುವೆಂಪು ಅವರ ಕಾವ್ಯಧರ್ಮವನು ರೂಪಿಸಿದ ಅಮೃತ ಘಳಿಗೆ. ಕನ್ನಡ ಕಾವ್ಯ ಪರಂಪರೆಯನು ಅರೆದು ಕುಡಿದು, ತೇಗುತ್ತಲೇ ಪ್ರಾಚೀನವನೂ ನವೀನವನೂ ತಮ್ಮದೇ ವಿಶಿಷ್ಟ ಭಾಷಾಲದಯಲಿ ಕಸಿ ಮಾಡಿ, ನಿರ್ದಿಷ್ಟ ಜೀವಪರ ಮತ್ತು ಪ್ರಗತಿಪರ ಆಶಯವನು ಬೆರೆಸಿ ಭಾವಿಸಿದ ಈ ದಿಗ್ಗಜ ತನ್ಮಯವಾಗಿ ಹಾಡುತಾರೆ, ಅವರ ಹಾಡಿಗೆ ಕೊಳಲಿನ ಇಂಪ ಸೇರುತಾ ನವಿಲು ಜಾಗರವಾಡುತಾ ಜತೆಗೂಡುತ್ತದೆ. ‘ಮಲೆಗಳಲುಲಿಯುವ ಓ ಕೋಗಿಲೆಯೇ ಬಲು ಚೆಲ್ವಿದೆ ನಿನ್ನೀ ಗಾನ; ಇಂಗ್ಲಿಷಿಗೆ ತರ್ಜುಮೆ ಮಾಡಿದರೆ ದೊರೆವುದು ನೊಬೆಲ್ ಬಹುಮಾನ!’ ಎಂದು ಕವಿ ಉದ್ಗರಿಸುವಾಗ ನಮಗೇನೋ ಹೊಸತನ ಕಾಣಿಸುತ್ತದೆ. ಕೋಗಿಲೆಯ ಹಾಡನು ಇಂಗ್ಲಿಷಿಗಲ್ಲ, ಬೇರಾವ ಭಾಷೆಗೂ ತರ್ಜುಮೆ ಮಾಡಲಾಗದು. ಅದು ಕವಿಗೆ ಗೊತ್ತಿದೆ. ಅದಕ್ಕೆಂದೇ ಕೋಗಿಲೆಯ ಹಾಡು ಅದಕ್ಕೇ ಸಾಟಿ! ‘ಇಷ್ಟಕೂ ಇಂಗ್ಲಿಷಿಗೆ ತರ್ಜುಮೆ ಮಾಡುವವರು ಯಾರು?’ ಎಂದು ಮರು ಪ್ರಶ್ನಿಸುತ್ತಾರೆ ತಮ್ಮೊಂದು ಲೇಖನದಲ್ಲಿ ಡಾ. ಹಾ ಮಾ ನಾಯಕರು! ಅವರ ಪ್ರಶ್ನೆಯಲೇ ಉತ್ತರ ಅಡಗಿರುವುದನ್ನು ಯಾರು ಬೇಕಾದರೂ ಅರಿಯಬಹುದು. ನಮ್ಮ ಪಾಲಿಗೆ ಕುವೆಂಪು ಅವರ ಹಾಡಿದೆಯಲ್ಲ, ಅದೇ ಕೋಗಿಲೆಯ ಹಾಡು! ಪದಗಳನ್ನು ಭಾಷಾಂತರಿಸಬಹುದು; ಆದರೆ ಅದರ ತಾಜಾ ಮತ್ತು ಸಹಜ ಭಾವದೋಕುಳಿಯನ್ನು ಪುನರ್ ಸೃಷ್ಟಿಸಲಾದೀತೇ?  ಕವಿ ರವೀಂದ್ರರ ಗೀತಾಂಜಲಿಯು ಇಂಗ್ಲಿಷಿಗೆ ಭಾಷಾಂತರವಾದಂತೆ ಕುವೆಂಪು ಅವರ ಸೃಜನ ಸಾಹಿತ್ಯವು ಸಕಾಲದಲ್ಲಿ ಇಂಗ್ಲಿಷಿಗೆ ಬಂದಿದ್ದರೆ ಎಂದೋ ಪುಟ್ಟಪ್ಪನವರಿಗೆ ನೊಬೆಲ್ ಬಂದಿರುತ್ತಿತ್ತು. ನೊಬೆಲ್ ಬರುವುದೇ ದೊಡ್ಡಸ್ತಿಕೆಯಲ್ಲ; ಕನ್ನಡಿಗರ ಪಾಲಿಗೆ ಮತ್ತು ಜಗತ್ತಿನಲ್ಲಿ ಕನ್ನಡದ ಮಹತ್ವವನ್ನರಿತವರಿಗೆ ಕುವೆಂಪು ಅವರು ಹೃದಯ ಸಿಂಹಾಸನದಲ್ಲಿ ಸದಾ ವಿರಾಜಮಾನರೆಂಬುದು ಸರ್ವವೇದ್ಯ. 

 

ಪ್ರಶಸ್ತಿಗಳಿಂದ ಯಾರೂ ಶ್ರೇಷ್ಠರಾಗುವುದಿಲ್ಲ; ಆದರೆ ಮಹತ್ವದವರಿಗೆ ಬಂದರೆ ಪ್ರಶಸ್ತಿಗೆ ನಿಜಾರ್ಥ. ಕನ್ನಡದ ರವೀಂದ್ರರಾಗಿ ಕುವೆಂಪು ಅವರು ಇದ್ದಾರೆಂಬುದು ಇಂದ್ರ ಚಂದ್ರರಿಗೂ ತಿಳಿದಿರುವ ಸಂಗತಿ. ಈ ಸಂದರ್ಭದಲ್ಲೇ ಮನನ ಮಾಡಿಕೊಳ್ಳಬೇಕಾದ ವಿಚಾರವೆಂದರೆ ಕುವೆಂಪು ಅವರು ಅನೂಚಾನವಾಗಿ ಬಂದಿದ್ದ ಕೋಗಿಲೆ ಹಾಡಿಗೆ ಪರ‍್ಯಾಯವಾಗಿ ಕಾಜಾಣವನ್ನು ಬಿಂಬಿಸುತ್ತಾರೆ. ಇದು ಅವರು ಪ್ರಧಾನ ಸಂಸ್ಕೃತಿಗೆ ಕೊಟ್ಟ ತಿರುಗೇಟು ಮಾತ್ರವಲ್ಲ, ಕಾಜಾಣವೂ ಧನ್ಯಮಾನ್ಯ ಎಂಬುದನ್ನು ಪ್ರತಿಪಾದಿಸುವುದೇ ಅವರ ಆಶಯ. ಶ್ರೀ ಸಾಮಾನ್ಯರನ್ನು ಹೇಗೆ ಗೌರವಿಸುತ್ತಾ ತಮ್ಮ ಸಾಹಿತ್ಯದಲ್ಲಿ ಪ್ರಧಾನ ಸ್ಥಾನ ನೀಡಿದರೋ ಹಾಗೆಯೇ ಕಾಜಾಣದ ವಿಷಯದಲ್ಲೂ! ‘ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲʼ ಎಂಬ ಅವರ ಧ್ಯೇಯೋಕ್ತಿಯೇ ತನ್ನೊಡಲಲ್ಲಿ ಮೇಲು-ಕೀಳು ಮೀರಿದ ಪೂರ್ಣದೃಷ್ಟಿಯನ್ನು ಪ್ರಬಲವಾಗಿ ಮುಂದಿಡುತ್ತಾ ಸಮರ್ಥ ಪ್ರತಿ ಸಂಸ್ಕೃತಿಯನ್ನು ನಿರ್ಮಿಸಿ ಕೊಡುತ್ತದೆ.  ಕುವೆಂಪು ಅವರ ಬಲು ಪ್ರಖ್ಯಾತವಾದ ನಿಸರ್ಗ ಗೀತೆಗಳು ಈ ಎರಡು ಸಂಕಲನಗಳಲ್ಲಿ ಸೇರಿವೆ ಎಂಬುದೇ ಅಚ್ಚರಿ. ನವಿಲು, ಕಬ್ಬಿಗರು, ಕುಲ, ಜೋಗ, ಕಾಜಾಣ, ದೋಣಿಹಾಡು, ತೇನೆಹಕ್ಕಿ, ಬಹುಮಾನ, ನವೀನ, ಗೊಲ್ಲನ ಬಿನ್ನಹ, ನನ್ನ ಮೆ, ಸುಗ್ಗಿ ಹಾಡು, ತವರೂರು, ಪ್ರಾರ್ಥನೆ, ನನ್ನ ಬಯಕೆ, ನಿನ್ನವನು ನಾನಲ್ಲವೆ? ಸತ್ಯ ಮತ್ತು ಸೌಂದರ್ಯ, ಮಳೆಬಿಲ್ಲು, ಕೋಗಿಲೆ, ಸುಗ್ಗಿ ಬರುತಿದೆ ಇತ್ಯಾದಿ.  ಕುವೆಂಪು ಅವರು ಕೇವಲ ಪ್ರಕೃತಿಯನು ಬಣ್ಣಿಸುವುದಿಲ್ಲ. ಅದರಲ್ಲಿ ಮಾನವ ಪ್ರಕೃತಿಯನ್ನು ಹುದುಗಿಸಿ, ರಸಪಾಕವನದ್ದಿ ಸಹೃದಯರನು ಬೇರೊಂದು ಲೋಕಕೇ ಒಯ್ಯುತಾರೆ. ಪ್ರಕೃತಿಯಾರಾಧನೆಯಲೇ ಅವರು ಪರಮನನು ಅರಸುತಾರೆ, ನಮ್ಮ ಭಾವಲೋಕಕೆ ಕನ್ನಡಿ ಹಿಡಿದು ಅರಸನಾಗುತಾರೆ. ಅವರ ಈ ಸಂಕಲನದ ಕವಿತೆಗಳೆಲ್ಲವೂ ಹೆಚ್ಚೂ ಕಡಮೆ ಜಗತ್ತಿನ ಅಸೀಮ-ಅನಂತ-ಅಪಾರ ದೃಶ್ಯಚಿತ್ರವನು ನಮ್ಮೊಳಗೆ ಚಿತ್ತಾರವಾಗಿಸುವ ಯಶಸ್ವೀ ಪ್ರಯತ್ನ. ಅವರು ಪ್ರಾರ್ಥಿಸುವುದರಲೂ ವಿಶೇಷತೆ ಮೆರೆಯುತಾರೆ. ‘ನಿನ್ನ ಬಾಂದಳದಂತೆ ನನ್ನ ಮನವಿರಲಿ’ ಎಂದ ಕವಿಯದು ಒಳಿತನು ಸದಾ ಸ್ವೀಕರಿಸುವ ಮತ್ತು ಶ್ರುತಪಡಿಸುವ ಸಾವಧಾನ ವ್ಯವಸಾಯ.  ಮಲೆನಾಡು ಕಂಡವರಿಗೆ, ಹಸಿರನು ಅನುಭವಿಸಿದವರಿಗೆ, ನಿಸರ್ಗದ ವಿದ್ಯಮಾನಗಳನು ಅಂತರಂಗದ ಕಣ್ಣಿಂದ ಕಾಣ್ಕೆಯಾಗಿಸಿಕೊಂಡವರಿಗೆ ಇವರ ಕವನಗಳ ಆಶಯ ಅಂತರ್ಗತ. ಬಯಲು ಸೀಮೆಯವರಿಗಂತೂ ಸಖೇದಾಶ್ಚರ್ಯ. ಈ ಸಂಕಲನಗಳಲ್ಲೇ ಅವರ ನೇಗಿಲಯೋಗಿ ಎಂಬ ರೈತಗೀತೆ ಮತ್ತು ಭಾರತ ಜನನಿ ಎಂಬ ನಾಡಗೀತೆ ಸೇರಿವೆ. ಇವೆರಡೂ ನಮ್ಮ ಕನ್ನಡನಾಡಿನ ಗಂಗಾ ಯಮುನ! ಸರ್ಕಾರವು ತನ್ನ ಎಲ್ಲ ಅಧಿಕೃತ ಸರಕಾರೀ ಕಾರ‍್ಯಕ್ರಮಗಳಲಿ ಮತ್ತು ಶಿಕ್ಷಣಸಂಸ್ಥೆಗಳಲಿ ಶುಭಾರಂಭ ಗೀತೆಯನ್ನಾಗಿಸಿ ಗೌರವವನ್ನು ಅರ್ಪಿಸಿದೆ. ಅಸಾಮಾನ್ಯ ಮತ್ತು ಅಸಾಧಾರಣ ಕವಿ ಕುವೆಂಪು ಅವರ ಈ ಗೀತೆಗಳಿಂದ ಅವರ ಸಾಂಸ್ಕೃತಿಕ ನಾಯಕತ್ವ ಮತ್ತು ವ್ಯಕ್ತಿತ್ವ ಮನದಟ್ಟಾಗುವುದು. ಈ ರಸಋಷಿಯು ತಮ್ಮ ಬದುಕಿನುದ್ದಕೂ ಪ್ರತಿಪಾದಿಸಿದ, ತಮ್ಮೆಲ್ಲ ಕೃತಿಗಳಲೂ ಕಲಾತ್ಮಕವಾಗಿಸಿ ಒತ್ತಾಯಿಸಿದ ಪಂಚಮಂತ್ರಗಳಾದ ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ, ಮನುಜಮತ ಮತ್ತು ವಿಶ್ವಪಥಗಳೆಂಬ ಥಿಯರಿಯು ಈ ಸಂಕಲನಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತವೆ. ಅಂದರೆ ಇಲ್ಲಿನ ಬಹುಪಾಲು ಕವಿತೆಗಳು ಈ ಥಿಯರಿಯನ್ನು ಸಾಕ್ಷೀಕರಿಸುತ್ತವೆ. ಆದರೆ ಥಿಯರಿಗಾಗಿ ಕುವೆಂಪು ಬದುಕಿದವರಲ್ಲ, ಅವರ ವಿಶ್ವಮಾನವ ತತ್ತ್ವವು ಈ ಎರಡು ಸಂಕಲನಗಳಲಿ ಅಂಕುರಾರ್ಪಣೆಗೊಂಡಿದೆ. ಅವರ ಜೀವನ ಮತ್ತು ಕಾವ್ಯದರ್ಶನಗಳು ಹಂತಹಂತವಾಗಿ ರೂಪುಗೊಂಡು ಗಟ್ಟಿಯಾದದ್ದೆಂದು ಇವುಗಳ ಅವಲೋಕನದಿಂದ ಯಾರಾದರೂ ತಿಳಿಯಬಹುದು.

  ಹಾಗೆಯೇ ಕೇವಲ ಸಿದ್ಧಾಂತಕಾಗಿ ಕುವೆಂಪು ಕವಿತೆಗಳನು ಬರೆದವರಲ್ಲ, ‘ಓ ಅಲ್ಪವೇ, ಅನಂತದಿಂ ಗುಣಿಸಿಕೊ, ನೀನ್ ಅನಂತವಾಗುವೆ’ ಎಂದರು. ಬಹುಪಾಲು ಜನರು ಗಮನಿಸದ ಸರಳ ಸಾಧಾರಣ ಸಂಗತಿಗಳಲಿ, ವಸ್ತು-ಪ್ರಾಣಿ-ಮರ-ಗಿಡ-ಬಳ್ಳಿ- ನೇಚರಿನಲಿ ಇರುವ ಮಹತ್ತನ್ನು ಮನಗಾಣಿಸಿದರು. ಇದೇ ಕುವೆಂಪು ಅವರ ಬರೆಹದ ವೈಶಿಷ್ಟ್ಯ. ನಿಮ್ಮದು ವಾಚ್ಯವಾಯಿತಲ್ಲ ಎಂದರೆ, ‘ವಾಚ್ಯವೆ ಸಾಕೋ, ಸೂಚ್ಯಕೆ ಬೆಂಕಿಯ ಹಾಕೋ’ ಎಂದು ರೇಗಿದರು. ಅವರ ರೇಗುವಿಕೆಯಲ್ಲೊಂದು ಕನ್ಸರ್ನ್ ಇದೆ. ಇದನ್ನು ಮನಗಂಡರೇನೇ ಕುವೆಂಪು ಅರ್ಥವಾಗುವುದು. ಅಲ್ಲದಿರೆ ಅವರ ಸಾಂಸ್ಕೃತಿಕ ಮಹತ್ವವನು ಅರಿಯಲಾಗುವುದಿಲ್ಲ. ಹಾಗಾಗಿ, ಕುವೆಂಪು ಅವರ ಪ್ರಾರಂಭಿಕ ಕವನ ಸಂಕಲನಗಳೆಂದು ನಿಡುಸುಯ್ಯುವಂತಿಲ್ಲ. ಅವರ ಕೊಳಲಾಗಲಿ, ನವಿಲಾಗಲಿ ಈ ಸಂಕಲನಗಳ ಪದ್ಯಗಳು ಅವರ ಮುಂದಿನ ಸಾಹಿತ್ಯ ಪ್ರಯಾಣವನು ಯಶಸ್ವಿಯಾಗಿ ನಡೆಸಲಿರುವ ಮುನ್ಸೂಚಿಯಂತೆ, ದಿಕ್ಸೂಚಿಯಂತೆ ಇವೆ. ಈಗ ನೂರು ವರುಷಗಳ ತರುವಾಯ ಗಮನಿಸಿದರೆ ಅವರು ಆಯ್ದುಕೊಂಡ ಹಾದಿ ಎಂಥ ಸವಾಲಿನದು ಮತ್ತು ಆ ಸವಾಲನ್ನು ಹೇಗೆ ತಮ್ಮದೇ ಆದ ಸೃಷ್ಟಿಶೀಲ ಕಾಣ್ಕೆಗಳ ಮೂಲಕ ಎದುರಿಸಿ, ಕನ್ನಡಿಗರಿಗೊಂದು ಮಾದರಿಯಾದರು ಎಂಬುದು ತಿಳಿಯುತ್ತದೆ.

ಡಾ. ಹೆಚ್‌ ಎನ್‌ ಮಂಜುರಾಜ್, ಮೈಸೂರು

9 Responses

  1. ಕುವೆಂಪು ಅವರ ಪ್ರಾರಂಭಿಕ ಕವನಗಳನ್ನು… ಕುರಿತು ಬರೆದಿರುವ ಅವಲೋಕನ ಬಹಳ ಸೊಗಸಾಗಿ ಮೂಡಿಬಂದಿದೆ ಮಂಜು ಸಾರ್.. ಧನ್ಯವಾದಗಳು

    • MANJURAJ H N says:

      ಧನ್ಯವಾದಗಳು ನಾಗರತ್ನ ಮೇಡಂ. ಕೆಲಸದೊತ್ತಡದ ಕಾರಣವಾಗಿ ನನ್ನ ಪ್ರಕಟಿತ ಬರೆಹವನ್ನೇ ಗಮನಿಸಿರಲಿಲ್ಲ. ಇಂದು ನೋಡಿದೆ. ನಿಮ್ಮ ಎಂದಿನ ಸಹೃದಯೀ ಶ್ಲಾಘನೆ ಮೊದಲೇ ದಾಖಲಾಗಿದೆ.

      ನಿಮ್ಮ ಮೆಚ್ಚುಗೆ ಮತ್ತು ಪ್ರೋತ್ಸಾಹಕೆ ನಾ ಆಭಾರಿ.

      ಧನ್ಯವಾದಗಳು ಮೇಡಂ.

  2. Padmini Hegde says:

    ಕುವೆಂಪು ಅವರ ಕಾವ್ಯ ಮೀಮಾಂಸೆಯ ಪರಿಚಯ ಚೆನ್ನಾಗಿದೆ

    • MANJURAJ H N says:

      ಹೌದಾ ಮೇಡಂ, ಧನ್ಯವಾದಗಳು. ತುಂಬ ದಿವಸಗಳಿಂದ ನನಗೆ ಈ ಸಂಗತಿಗಳು ಕಾಡಿದ್ದವು. ಸುರಹೊನ್ನೆಗಾಗಿಯೇ ಬರೆದು ಕಳಿಸಿದೆ. ಸಾಹಿತ್ಯ ದಾಸೋಹದ ಕಾರ್ಯಕ್ರಮಕೆ ಬಂದಾಗ ಬರೆದು ಕಳಿಸೋಣ ಎಂದು ನಿರ್ಧರಿಸಿದೆ. ಅದಕೆ ತಕ್ಕಂತೆ ಸುರಹೊನ್ನೆಯ ಹೇಮಾ ಮೇಡಂ ಅವರು ಪ್ರೀತಿಯಿಟ್ಟು ಪ್ರಕಟಿಸಿದ್ದಾರೆ. ಅವರಿಗೆ ಕೃತಜ್ಞತೆಗಳು. ಅಭಿಪ್ರಾಯಿಸಿದ ನಿಮಗೆ ನನ್ನ ವಂದನೆಗಳು.

  3. ನಯನ ಬಜಕೂಡ್ಲು says:

    Nice

  4. ಶಂಕರಿ ಶರ್ಮ says:

    ಹಿರಿಕವಿ ಕುವೆಂಪು ಅವರ ಪ್ರಾರಂಭಿಕ ಕವನಗಳ ಕುರಿತ ವಿಮರ್ಶಾತ್ಮಕ ಲೇಖನ ಚೆನ್ನಾಗಿದೆ.

  5. Padma Anand says:

    ಕುವೆಂಪು ಅವರ ಕವನ ಸಂಕಲನಗಳ ಒಳಹೂರಣವನ್ನು ಮನಮುಟ್ಡುವಂತೆ ಸರಳೀಕರಿಸಿ ನೀಡಿರುವ ಲೇಖನ ಸೊಗಸಾಗಿ ಮೂಡಿ ಬಂದಿದೆ. ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: