ಕಲಶಪ್ರಾಯವಾದ ಕಳಸ ಚಾರಣ

Share Button



ಜನವರಿ 26, 2024  ರಂದು ಭಾರತೀಯರೆಲ್ಲರೂ   75 ನೇ ಗಣರಾಜ್ಯೋತ್ಸವವನ್ನು ಆಚರಿಸಿದೆವು.  ದೆಹಲಿಯ ‘ಕರ್ತವ್ಯಪಥ’ದಲ್ಲಿ ಪ್ರದರ್ಶಿಸಲ್ಪಟ್ಟ  ವಿವಿಧ ಪಥಸಂಚಲನಗಳು, ಏರ್ ಶೋ, ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಎದ್ದು ಕಾಣಿಸುತಿತ್ತು . ಗೌರವ ಸ್ವೀಕರಿಸಿದವರು ಭಾರತದ ಎರಡನೇ ಮಹಿಳಾ ರಾಷ್ಟ್ರಪತಿಯಾದ  ಗೌರವಾನ್ವಿತ ಶ್ರೀಮತಿ ದ್ರೌಪದಿ ಮುರ್ಮು. ಒಟ್ಟಿನಲ್ಲಿ ಎಲ್ಲೆಲ್ಲೂ ನಾರೀಶಕ್ತಿ ಮೇಳೈಸಿತ್ತು. ಕಾಕತಾಳೀಯ ಎಂಬಂತೆ ಮೈಸೂರಿನ ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ಮೈಸೂರು, ಗಂಗೋತ್ರಿ ಘಟಕದವರು 26-28 ಜನವರಿ 2024 ರಂದು ಆಯೋಜಿಸಿದ್ದ ಎರಡು ದಿನಗಳ ‘ಕಳಸ ಚಾರಣದ’ ರೂವಾರಿಗಳು ಶ್ರೀಮತಿ ಸರೋಜಾ ಶೇಖರ್ ಮತ್ತು  ಈ ಬಳಗಕ್ಕೆ ಇತ್ತೀಚೆಗೆ ಸೇರ್ಪಡೆಯಾದ ಎಳೆಯ ಯುವತಿ ಮೇಘನಾ ಸೃಜನ್. ಇನ್ನು ಈ ಚಾರಣದಲ್ಲಿ ಭಾಗವಹಿಸಿದರಲ್ಲಿ ಮಹಿಳೆಯರೇ ಹೆಚ್ಚು ಸಂಖ್ಯೆಯಲ್ಲಿದ್ದರು. ಈ ಪ್ರವಾಸ-ಚಾರಣದ ಎರಡು ದಿನಗಳಲ್ಲಿ ನಮ್ಮ ಊಟೋಪಚಾರದ ನಿರ್ವಹಣೆಯಲ್ಲಿಯೂ ಸ್ಥಳೀಯ ಮಹಿಳೆಯರ ಕೊಡುಗೆ ಕಾಣಿಸಿತು. ಹೀಗೆ,  ‘ನಾರೀ ಶಕ್ತಿ’ಗೆ ಮೊದಲ ಜೈಕಾರ ಹಾಕಿ, ನಮ್ಮ  ‘ಕಳಸ ಚಾರಣ’ದ ಅನುಭವಗಳನ್ನು ಬರೆಯುತ್ತಿದ್ದೇನೆ.

26 ಜನವರಿ 2024  ರ ರಾತ್ರಿ 0930 ಗಂಟೆಯ ಸಮಯಕ್ಕೆ ಮೈಸೂರಿನ ಯೈಎಚ್.ಎ.ಐ ಗಂಗೋತ್ರಿ ಘಟಕದ ಸಮೀಪ ನಾವು ಪ್ರಯಾಣಿಸಲಿರುವ ಬಸ್ಸು ಆಗಮಿಸಿತು.  ಬೆನ್ನಿಗೊಂದು ಬ್ಯಾಗ್, ಚಳಿಗೆ ತಕ್ಕ ಉಡುಪುಗಳನ್ನು ಧರಿಸಿದ್ದ ಚಾರಣಿಗರು ಒಬ್ಬೊಬ್ಬರಾಗಿ ಬರಲಾರಂಭಿಸಿದರು. ಆಯೋಜಕರಾದ ಅತ್ತೆ-ಸೊಸೆ ಜೋಡಿ ಒಯ್ಯಬೇಕಾದ ಪರಿಕರಗಳನ್ನು ಗಮನಿಸುತ್ತಾ, ಹೆಸರು ಕೊಟ್ಟವರ  ಹಾಜರಾತಿ ತೆಗೆದು, ಎಲ್ಲವೂ ಸರಿ ಇದೆ ಎಂದಾದ ಮೇಲೆ ಬಸ್ಸಿನ ಸಾರಥಿ ಶ್ರೀ ಮಧು ಅವರಿಗೆ ಹಸಿರು ಸಿಗ್ನಲ್ ಕೊಟ್ಟರು. ಬಸ್ಸು ಚಿಕ್ಕಮಗಳೂರಿನತ್ತ ಹೊರಟಿತು.  27 ರ ಮುಂಜಾನೆ 0345  ಗಂಟೆಗೆ ‘ಕಳಸ’  ತಲಪಿದೆವು.  ಸಂಕ್ರಾಂತಿ ಕಳೆದ ಮೇಲೆ ಮೈಸೂರಿನಲ್ಲಿ ಬೇಸಗೆಯ ಆರಂಭದ ಸೂಚನೆ ಸಿಗುತ್ತಿದೆ. ಆದರೆ ಕಳಸದಲ್ಲಿ ಬಸ್ಸಿನಿಂದ ಇಳಿದಾಗ, ಹಿಮಮಣಿಸಿಂಚಿತ ಮರಗಿಡಗಳಿಂದ ತೊಟ್ಟಿಕ್ಕುವ ಸಾಂದ್ರಗೊಂಡ ಇಬ್ಬನಿ ಹನಿಗಳು, ನಮ್ಮ ಮೈಗೂ ಬಿದ್ದು ‘’ಇಲ್ಲಿ  ಚಳಿಗಾಲ ಇನ್ನೂ ಚಾಲ್ತಿಯಲ್ಲಿದೆ’’  ಎಂದು ಜ್ಞಾಪಿಸಿತು. ಕಳಸ ದೇವಾಲಯದ  ಪ್ರಧಾನ ಅರ್ಚಕರಾದ  ಶ್ರೀ ಗಣೇಶ ಐತಾಳ ಅವರ ಮನೆಯ ಮಹಡಿಯಲ್ಲಿ  ನಮಗೆ ಉಳಕೊಳ್ಳಲು ವ್ಯವಸ್ಥೆಯಾಗಿತ್ತು. ಇವರು ನಮ್ಮ ಚಾರಣದ ಆಯೋಜಕಿಯರಲ್ಲೊಬ್ಬರಾದ ಮೇಘನಾ ಅವರ ಮಾವ. ಆ ವೇಳೆಯಲ್ಲಿ ನಾವು ತಲಪಿದರೂ,  ಮನೆಯವರು ನಮ್ಮನ್ನು ಆದರಿಸಿ, ಮಲಗಲು ಚಾಪೆ, ಕಂಬಳಿ, ದಿಂಬು  ಕೊಟ್ಟು ಉಪಚರಿಸಿದರು. ತಂಪಾದ ಹವೆಯ ಜೊತೆಗೆ  ಪ್ರಯಾಣದ ಸುಸ್ತು ಕೂಡ ಸೇರಿದ್ದರಿಂದ ಹಾಗೂ ಬೆಳಗ್ಗೆ ಬೇಗನೆ ಏಳಬೇಕಿದ್ದುದರಿಂದ  ಎಲ್ಲರೂ ಸಮಯ ವ್ಯರ್ಥ ಮಾಡದೆ ಹೊದ್ದು ಮಲಗಿದೆವು.

ಮಹಿಳೆಯರೆಲ್ಲಾ ಒಂದು ವಿಭಾಗದಲ್ಲಿ ವಸತಿ ಮಾಡಿದರೆ ಪುರುಷರಿಗಾಗಿ  ಇನ್ನೊಂದು ವಿಭಾಗವಿತ್ತು . ಬೆಳಗಾಗುತ್ತಿದ್ದಂತೆ ಒಬ್ಬೊಬ್ಬರೇ ಕಾಫಿನಾಡಿನ ಮುಂಜಾನೆಯ ಬಿಸಿಕಾಫಿ ಕುಡಿದು ಸ್ನಾನಕ್ಕೆ ಹೊರಟೆವು. ಅ ಮನೆಯಲ್ಲಿ ಗುಜರಾತ್ ಮಾದರಿಯ  ನೀರೊಲೆ ಪದ್ಧತಿಯಲ್ಲಿ ಸ್ನಾನಕ್ಕೆ ಬಿಸಿನೀರು ಕಾಯಿಸಿಟ್ಟಿದ್ದರು. ಮನೆಯವರು ಆಗಲೇ ಸಿದ್ಧರಾಗಿ, ಪೂಜಾಕೈಂಕರ್ಯದಲ್ಲಿ ತೊಡಗಿದ್ದರು. ಮನೆ ಮುಂದೆ ಕಟ್ಟಲಾದ ಪೂಜಾಮಂಟಪದ ಯಜ್ಞಕುಂಡದಿಂದ  ಹೊರ ಸೂಸುತ್ತಿದ್ದ  ಹೋಮದ ಹೊಗೆ ಹಾಗೂ ಹವಿಸ್ಸಿನ  ಘಮ ಆ ಸ್ಥಳಕ್ಕೆ ದೈವಿಕ ಕಳೆ ಕೊಟ್ಟಿತ್ತು. ಒಂದು ಪಾರ್ಶದಲ್ಲಿರುವ ಬಾವಿ, ಪಕ್ಕದಲ್ಲಿ ಒಂದು ಬುಟ್ಟಿಯಲ್ಲಿ ಮಲಗಿದ್ದ  ನಾಯಿಮರಿ, ಅಕ್ಕಪಕ್ಕದಲ್ಲಿ ಹೂ ಗಿಡಗಳು…..ಹೀಗೆ  ಕೃತಕತೆಯ ಸ್ಪರ್ಶವಿಲ್ಲದ ಮಲೆನಾಡಿನ ಹಸಿರು ಸಿರಿಯ ಗ್ರಾಮೀಣ ಪರಿಸರದಲ್ಲಿರುವ ಚೆಂದದ ಮನೆಯಲ್ಲಿ ಉಳಕೊಳ್ಳುವ ಅವಕಾಶ ನಮ್ಮದಾಯಿತು.   


27 ಜನವರಿ 2024  ರ ಬೆಳಗ್ಗಿನ ಉಪಾಹಾರಕ್ಕೆ ನಮಗೆ ಸ್ಥಳೀಯ ಸ್ಪೆಷಲ್ ತಿಂಡಿಯಾದ ‘ಕೊಟ್ಟೆ ಕಡುಬು’ ಎಂಬ ಬಾಳೆಲೆಯಲ್ಲಿ ಬೇಯಿಸಿದ ಇಡ್ಲಿ, ಚಟ್ನಿ, ಸಾಂಬಾರ್ ಹಾಗೂ ಕೇಸರಿಭಾತ್ ಇದ್ದುವು. ಶುಚಿ-ರುಚಿಯಾಗಿದ್ದ ತಿಂಡಿಯನ್ನು ಸೇವಿಸಿ ಎಲ್ಲರೂ ಆ ದಿನದ ಯೋಜನೆಯಂತೆ, ‘ಕ್ಯಾತನಮಕ್ಕಿ ಬೆಟ್ಟ’ಕ್ಕೆ ಹೋಗಲು ಅಣಿಯಾದೆವು. ನೀರಿನ ಬಾಟಲ್ , ಸ್ನ್ಯಾಕ್ಸ್ ಹಾಗೂ ಹಣ್ಣುಗಳಿದ್ದ ಪುಟ್ಟ ಬ್ಯಾಗ್ ಆನ್ನು ಬೆನ್ನಿಗೇರಿಸಿ ಬಸ್ಸನ್ನೇರಿದೆವು. ಹಿತವಾದ ಚಳಿಯೊಂದಿಗೆ ಬಿಸಿಲು ಆವರಿಸುತ್ತಿದ್ದಾಗ, ಹಚ್ಚ ಹಸಿರಿನ ಕಾಡುದಾರಿಯ ಪ್ರಯಾಣ ಬಲು ಸೊಗಸೆನಿಸಿತು. ಅಂದಾಜು 20 ಕಿ.ಮೀ ದೂರದಲ್ಲಿದ್ದ ‘ಕ್ಯಾತನಮಕ್ಕಿ ಗೇಟ್’ನಲ್ಲಿ ಇಳಿದು, ಎದುರುಗಡೆ ಕಾಣಿಸುತ್ತಿದ್ದ ಬೆಟ್ಟದೆಡೆಗೆ ನಡೆದೆವು. ಬೆಟ್ಟದ ತಪ್ಪಲಿನ ವರೆಗೆ  ಜೀಪಿನಲ್ಲಿಯೂ ಹೋಗಲು ಅವಕಾಶವಿದೆ. ಏಕಮುಖವಾಗಿ ಸುಮಾರು 3.5  ಕಿಮೀ  ದೂರದ ಸುಲಭವಾಗಿದ್ದ ಕಚ್ಚಾದಾರಿಯಲ್ಲಿ, ಅಕ್ಕಪಕ್ಕದ ಕಾಫಿ,ಅಡಿಕೆ,ಕಾಳುಮೆಣಸಿನ ಕೃಷಿಯನ್ನು  ಗಮನಿಸುತ್ತಾ ಒಂದು ಗಂಟೆ  ನಡೆದು ಬೆಟ್ಟದ ತುದಿ ತಲಪಿದೆವು. ಬೀಸಿ ಬರುವ ತಂಗಾಳಿಗೆ ಮೈಯೊಡ್ಡಿದಾಗ ಆಯಾಸ ಮಾಯವಾಯಿತು. ಅಲ್ಲಿಂದ ಕಾಣಿಸುತ್ತಿದ್ದ ಸುತ್ತುಮುತ್ತಲಿನ ಪ್ರಕೃತಿ ಮನೋಹರವಾಗಿತ್ತು. ಅಲ್ಲಿದ್ದ ಮರದ  ಮಂಟಪದ ಮೇಲೆ ಫೊಟೊ/ವೀಡಿಯೋ  ಕ್ಲಿಕ್ಕಿಸಿ, ಇದ್ದ ತಿಂಡಿ ತಿನಿಸುಗಳನ್ನು ಹಂಚಿ ತಿಂದು ಕೆಳಗಿಳಿಯಲಾರಂಭಿಸಿದೆವು. ಆಗ ಮಧ್ಯಾಹ್ನ 0130 ಗಂಟೆ ಆಗಿತ್ತು. ಅ ಗೇಟ್ ಬಳಿ ಒಂದು ಹೋರಿ ಕರು ಸತ್ತು ಬಿದ್ದಿದುನ್ನು ಕಂಡು ವಿಷಾದವಾಯಿತು. ಅದಕ್ಕೆ ಏನಾದರೂ ಕಾಯಿಲೆಯಿತ್ತೋ, ಅಪಘಾತವಾಗಿತ್ತೋ ಅರ್ಥವಾಗಲಿಲ್ಲ.

ಕ್ಯಾತನಮಕ್ಕಿಯಿಂದ  ಹೊರಟ ನಾವು ಅಂದಾಜು 10 ಕಿಮೀ ಊರದಲ್ಲಿರುವ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದತ್ತ ಪ್ರಯಾಣಿಸಿದೆವು. ಆಗ  ಮಂದಿರದ ಬಾಗಿಲು ಹಾಕಲಾಗಿತ್ತು ಹಾಗೂ ಮಧ್ಯಾಹ್ನದ ಊಟಕ್ಕೆ ಬನ್ನಿ ಎಂದು ಕರೆಯುತ್ತಿದ್ದರು. ಸರದಿ ಸಾಲಿನಲ್ಲಿ ಹೋಗಿ ಅನ್ನ-ಹುಳಿ-ಸಾರು-ಪಾಯಸ-ಮಜ್ಜಿಗೆಗಳಿದ್ದ ಭೋಜನ ಪ್ರಸಾದವನ್ನು ಸ್ವೀಕರಿಸಿ ಬಂದೆವು. ದರ್ಶನಕ್ಕೆ ಸರದಿ ಸಾಲು ಇದ್ದರೂ, ನಮ್ಮ ಅತಿಥೇಯ ಕಳಸದ ಅರ್ಚಕರ ಪುತ್ರರು ಈ ದೇವಾಲಯದ  ಅರ್ಚಕ ವರ್ಗದಲ್ಲಿದ್ದುದರಿಂದ ನಮಗೆ ಆದ್ಯತೆಯ ಮೇಲೆ ದರ್ಶನ, ಪೂಜೆ, ಸೇವೆ ಮಾಡಿಕೊಳ್ಳಲು ಅನುಕೂಲವಾಯಿತು. ಸುಮಾರು 25 ವರ್ಷಗಳ ಹಿಂದೆ ಹೊರನಾಡಿಗೆ ಬಂದಿದ್ದೆವು. ಆಗಿದ್ದ  ಹೊರನಾಡು  ದೇವಾಲಯದ ಪರಿಸರ ಮತ್ತು ಈಗಿರುವ ಬೆಳವಣಿಗೆಯನ್ನು ಹೊಲಿಸಿದಾಗ  ಅಜಗಜಾಂತರ ವ್ಯತ್ಯಾಸವಿದೆ ಅನಿಸಿತು. ಆಗ ದೇವಾಲಯದಲ್ಲಿ ಹೆಚ್ಚೆಂದರೆ ಇನ್ನೂರು ಜನರಿದ್ದಿರಬಹುದು. ಊಟ, ವಸತಿಗೂ ದೇವಾಲಯದ ಪ್ರಾಂಗಣದಲ್ಲಿಯೇ ವ್ಯವಸ್ಥೆಯಿತ್ತು. ಈಗ ಮೈಲುದ್ದ ದೂರದಿಂದಲೇ ಲಾಡ್ಜ್ ಗಳು ಕಾಣಿಸುತ್ತಿವೆ.   ಬಹುಮಹಡಿಯುಳ್ಳ ಸುಸಜ್ಜಿತ ಭೋಜನಶಾಲೆಯಿದೆ. ಹೆಚ್ಚುತ್ತಿರುವ ಭಕ್ತರು ಹಾಗೂ ಪ್ರವಾಸಿಗರ ಅಗತ್ಯಕ್ಕೆ ತಕ್ಕಂತೆ ಬೆಳವಣಿಗೆ ಅನಿವಾರ್ಯ ಅಲ್ಲವೇ? ಕಾಲಾಯ ತಸ್ಮೈ ನಮ:!

ಹೊರನಾಡಿನಿಂದ ಹೊರಟು ಬಸ್ಸನ್ನೇರಿ ಮತ್ತೆ ಅರ್ಧ ಗಂಟೆ ಪ್ರಯಾಣಿಸಿ, ಸೂರಿಮನೆ ಫಾಲ್ಸ್ ಎಂಬಲ್ಲಿಗೆ ತಲಪಿದೆವು. ಇಲ್ಲಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ನಲ್ಲಿ ಟಿಕೆಟ್ ಖರೀದಿಸಿ,   ಜೀಪ್ ನಲ್ಲಿ  ಸುಮಾರು 3  ಕಿಮೀ ಹೋಗಬೇಕಾಗುತ್ತದೆ. ನಮ್ಮ ತಂಡದ ಸದಸ್ಯರ ಸಂಖ್ಯೆಗೆ ಅಲ್ಲಿದ್ದ ಜೀಪುಗಳ ಸಂಖ್ಯೆ ಸಾಲದ ಕಾರಣ ಕೆಲವರು ನಡೆದರು,  ಇನ್ನು ಕೆಲವರು ಅರ್ಧ ದಾರಿ ಜೀಪು, ಅರ್ಧ ದಾರಿ ಕಾಲ್ನಡಿಗೆ ಎಂಬಂತೆ ಹೊಂದಾಣಿಕೆ ಮಾಡಿಕೊಂಡು ಜಲಪಾತವನ್ನು  ತಲಪಿದೆವು. ದಟ್ಟಕಾಡಿನ ನಡುವೆ ಇದ್ದ ಜಲಪಾತ ಸೊಗಸಾಗಿತ್ತು. ನಮ್ಮ ತಂಡದ ಬಹುತೇಕ ಮಂದಿ ನೀರಿಗಿಳಿದು ತೊಯ್ದುಕೊಂಡು, ಹಾಡಿ, ಕಿರುಚಿ, ರೀಲ್ಸ್ ಮಾಡಿ ಸಂಭ್ರಮಿಸಿದರು. ಸಂಜೆಯಾಗುತ್ತಿದ್ದಂತೆ ನಮ್ಮನ್ನು ಎಚ್ಚರಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಬಂದರು.

ಸೂರಿಮನೆ ಫಾಲ್ಸ್

ಜೀಪಿನಲ್ಲಿ 2-3  ಬಾರಿ ಸಣ್ಣ ತಂಡಗಳಾಗಿ ಬಂದು ಬಸ್ಸನ್ನು ತಲಪಿದೆವು. ಅಲ್ಲಿಂದ ಕಳಸದಲ್ಲಿರುವ ನಮ್ಮ ಅತಿಥೇಯರ ಮನೆಗೆ ತಲಪಿದೆವು.  ಸಂಜೆಯ ಕಾಫಿ, ರುಚಿಯಾದ ಗೋಳಿಬಜೆ, ಚಟ್ನಿ ಸವಿದೆವು. ಅತಿಥೇಯರ ಮೊಮ್ಮಕ್ಕಳಾದ ಆದರ್ಶ ಮತ್ತು ಅಥರ್ವ ಅವರು  “ಪೀಪೀ…ಪೀಪೀ” ಎಂದು ಹಾಡುತ್ತಾ,  ಒಂದು ಪುಟ್ಟ ಸ್ಟೂಲ್ ಗೆ ತಮಟೆಯಂತೆ ಕೋಲಿನಲ್ಲಿ ಹೊಡೆದು ಶಬ್ದ ಮಾಡುತ್ತಾ ಮನೆಯಿಡೀ ಓಡಾಡುತ್ತಾ ನಿರಂತರವಾಗಿ  ದೇವರ ಉತ್ಸವ ಮಾಡುವಂತೆ ‘ಗ್ರಾಮೀಣ ಮಕ್ಕಳಾಟ’ ಆಡುತ್ತಿದ್ದುದು ಚೆನ್ನಾಗಿತ್ತು.

‘ದಕ್ಷಿಣಕಾಶಿ’ ಎಂದು ಪ್ರಸಿದ್ಧಿಯಾಗಿರುವ ಕಲಶೇಶ್ವರ ಸ್ವಾಮಿ ದೇವಾಲಯವು ನಮ್ಮ ಅತಿಥೇಯರ ಮನೆಯಿಂದ ಅಂದಾಜು  2 ಕಿ ಮೀ ದೂರದಲ್ಲಿದೆ. ಶ್ರೀ ಗಣೇಶ ಐತಾಳರು ಅಲ್ಲಿ ಪ್ರಧಾನ ಅರ್ಚಕರು. ನಾವು ಸಂಜೆಯ  ಪುನ: ಬಸ್ಸನ್ನೇರಿ ಕಲಶೇಶ್ವರ ದೇವಾಲಯಕ್ಕೆ ಭೇಟಿ ಕೊಟ್ಟೆವು. ಆಗ ರಾತ್ರಿಯ ಪೂಜೆ, ಮಂಗಳಾರತಿ ನಡೆಯುತ್ತಿತ್ತು. ಆಮೇಲೆ ಅರ್ಚಕರೊಬ್ಬರು ಮಂಗಳವಾದ್ಯ ಸಮೇತ ಉತ್ಸವ ಮೂರ್ತಿಯನ್ನು ತಲೆಯಲ್ಲಿ ಹೊತ್ತು ದೇವಾಲಯಕ್ಕೆ ಪ್ರದಕ್ಷಿಣೆ ಬಂದರು. ಹೆಚ್ಚಿನ ಜನಜಂಗುಳಿಯಿಲ್ಲದ ಪ್ರಶಾಂತ ವಾತಾವಾರಣ, ತಂಪಾದ ಪರಿಸರ ಎಲ್ಲವೂ ಮನಸ್ಸಿಗೆ ಮುದ ಕೊಟ್ಟಿತು. ಸ್ಥಳ ಪುರಾಣದ ಪ್ರಕಾರ, ಪಾರ್ವತಿ ಮತ್ತು ಪರಮೇಶ್ವರರ ವಿವಾಹ ನಡೆಯುವ ಸಂದರ್ಭದಲ್ಲಿ ಭೂಮಿಯಲ್ಲಿ ಕೆಲವು  ಬದಲಾವಣೆಗಳಾಗತೊಡಗಿದವು. ಆಗ ಶಿವನು ಅಗಸ್ತ್ಯ ಋಷಿಯ ಬಳಿ ಸೃಷ್ಟಿ ಸಮತೋಲನಕ್ಕಾಗಿ   ದಕ್ಷಿಣಕ್ಕೆ ಹೋಗಬೇಕೆಂದು ಕೇಳಿಕೊಂಡನು. ಅಗಸ್ತ್ಯರು  ದಕ್ಷಿಣಭಾರತದ ಈ ಜಾಗದಲ್ಲಿ ಬಂದು ನೆಲೆಸಿದರು ಹಾಗೂ ಇಲ್ಲಿ  ಕಲಶೇಶ್ವರ ಶಿವಲಿಂಗವನ್ನು ಸ್ಥಾಪಿಸಿ ಪೂಜಿಸಿದರು.  

ಕಲಶೇಶ್ವರನ ದರ್ಶನವಾದ ನಂತರ ಮರಳಿ ಅತಿಥೇಯರ ಮನೆಗೆ ಬಂದೆವು.ರಾತ್ರಿಯೂಟಕ್ಕೆ ಬಿಸಿಯಾದ ಅನ್ನ, ಪಲ್ಯ,ತಿಳಿಸಾರು, ಚಟ್ಣಿ, ಮೊಸರು ಉಪ್ಪಿನಕಾಯಿ ಇದ್ದುವು. ಉಂಡು ಮಲಗಿದ ನಮಗೆಲ್ಲಾ ಸುಖನಿದ್ದೆ. 

ಮರುದಿನ 28 ಜನವರಿ 2024  ರಂದು, ಬೇಗನೇ ಎದ್ದು ಸ್ನಾನಾದಿಗಳನ್ನು ಮುಗಿಸಿ ಹೊರಡಲು ಸಿದ್ಧರಾದೆವು. ಆ ದಿನವೂ ಮನೆಯಂಗಳದಲ್ಲಿ ನವಗ್ರಹ ಪೂಜೆ ನಡೆಯುತ್ತಿತ್ತು.  ಕೆಲವರು ಅಲ್ಲಿಯೇ ಸುತ್ತುಮುತ್ತಲು ಸಣ್ಣ ವಾಕಿಂಗ್ ಮಾಡಿದರು. ಅತಿಥೇಯರ ಮನೆಯಿಂದ  ಅಂದಾಜು 3 ಕಿಮೀ ದೂರದಲ್ಲಿರುವ ‘ಅಂಬುತೀರ್ಥ’ ಎಂದಲ್ಲಿರುವ ನದಿಯ ದಂಡೆಗೆ ಹೊರಟೆವು. ಅರ್ಧ ಗಂಟೆ ನಡೆದು ಅಂಬುತೀರ್ಥ ತಲಪಿದೆವು. ಜನದಟ್ಟಣೆಯಿಲ್ಲದ ಪರಿಸರ, ನೀರಿನ ಹರಿವಿಗೆ ಹೊಡೆತಕ್ಕೆ  ಶಿಲ್ಪಿಯೇ ಕೆತ್ತಿದಂತೆ ವಿನ್ಯಾಸಗೊಂಡ ಶಿಲೆಗಳು, ನೀರಿನ ಹನಿಗಳಿಂದ  ಸೃಷ್ಟಿಯಾದ  ಮಂಜಿನ ಪರದೆಯ ಹಿನ್ನೆಲೆ……ಹೀಗೆ  ಇಲ್ಲಿ ಭೂರಮೆ ‘ಬಿಂಕದ ಸಿಂಗಾರಿ’ಯಾಗಿದ್ದಳು. ಹಾಗಾಗಿ  ಫೋಟೊ ವೀಡಿಯೋ ಪ್ರಿಯರಿಗೆ  ಬಿಡುವಿಲ್ಲದ ಕೆಲಸವಾಗಿತ್ತು. ಅಂಬುತೀರ್ಥದ ಆಸುಪಾಸಿನಲ್ಲಿ ಸ್ವಲ್ಪ ದೂರದಲ್ಲಿ ತೂಗುಸೇತುವೆಯೊಂದನ್ನು  ನಿರ್ಮಿಸಲಾಗಿದೆ. ಅಲ್ಲಿಗೂ ಭೇಟಿ ಕೊಟ್ಟೆವು. ಆಮೇಲೆ ನಡೆಯುತ್ತಾ ಐತಾಳ ಅವರ ಮನೆಗೆ ಬಂದಾಗ  ಉಪಹಾರ ಸಿದ್ಧವಿತ್ತು.

ಬೆಳಗಿನ ಉಪಾಹಾರಕ್ಕೆ  ಬಡಿಸಿದ   ಅಕ್ಕಿಯ ಒತ್ತುಶ್ಯಾವಿಗೆ, ಕಾಯಿಹಾಲು, ಚಟ್ನಿಹಾಗೂ ಅವಲಕ್ಕಿ ಹಾಗೂ  ಕಾಫಿ  ಬಹಳ ರುಚಿಯಾಗಿದ್ದುವು. ಇಲ್ಲಿ  ಚಹಾದ ಬಳಕೆ ಕಾಣಿಸಲಿಲ್ಲ. ಚಿಕ್ಕಮಗಳೂರು ಕಾಫಿನಾಡಲ್ಲವೇ? ಚಹಾಪ್ರಿಯರೂ ಕಾಫಿಯನ್ನೇ ಕುಡಿದರು. ನಾವು ಅತಿಥೇಯರ ಮನೆಯವರೊಂದಿಗೆ ಹಾಗೂ ಊಟದ ವ್ಯವಸ್ಥೆ ಮಾಡಿದವರೊಂದಿಗೆ ಆತ್ಮೀಯವಾಗಿ ಹರಟಿದೆವು. ಶ್ರೀ ಗಣೇಶ ಐತಾಳ ಅವರೊಂದಿಗಿನ ಮಾತುಕತೆಯಲ್ಲಿ, ಅವರಿಗೆ ಫೆಬ್ರವರಿಯಲ್ಲಿ ಅಯೋಧ್ಯೆಯ  ರಾಮಲಲ್ಲಾನಿಗೆ ಎರಡು ದಿನ ಪೂಜೆಮಾಡುವ ಅವಕಾಶ ಲಭಿಸಿದೆ ಎಂದು ಗೊತ್ತಾಯಿತು.  ಪುಣ್ಯವಂತರಿವರು ಎಂದು ಅವರೊಂದಿಗೆ  ನಾವೂ  ಸಂಭ್ರಮಿಸಿದೆವು. ಮಕ್ಕಳ ‘ಪೀಪೀ..ವಾಲಗ’ ಇಂದೂ ನಡೆಯುತ್ತಿತ್ತು. ನಾನು ಅವರೊಂದಿಗೆ ಫೊಟೊ ಕ್ಲಿಕ್ಕಿಸಿಕೊಂಡೆ. ಅತಿಥೇಯರಿಗೆ ಧನ್ಯವಾದ ಅರ್ಪಿಸಿ,  ನಮ್ಮ ಬ್ಯಾಗ್ ಗಳನ್ನು  ಪ್ಯಾಕ್ ಮಾಡಿ ಬಸ್ಸಿನಲ್ಲಿ ಇರಿಸಿದೆವು. ಪಕ್ಕದಲ್ಲಿಯೇ ಇದ್ದ ಮಲೆನಾಡಿನ ಮಳಿಗೆಯೊಂದರಿಂದ ಉಪ್ಪ್ಪಿನಕಾಯಿ, ಮಸಾಲೆವಸ್ತುಗಳು, ಜೇನು , ಕಾಫಿಪುಡಿ ಇತ್ಯಾದಿ ಕೊಂಡೆವು.

ಆದಿನದ ನಮ್ಮ ಯೋಜನೆ ಪ್ರಕಾರ, ಕಳಸದಿಂದ  30  ಕಿಮೀ ದೂರದಲ್ಲಿರುವ ‘ಮೈದಾಡಿ’ ಎಂಬಲ್ಲಿರುವ ರಮಣೀಯ ಬೆಟ್ಟಪ್ರದೇಶಕ್ಕೆ ಹೋಗಿ, ಅಲ್ಲಿಂದ ಮೈಸೂರಿಗೆ ಹಿಂತಿರುಗುವುದಾಗಿತ್ತು. ಕಳಸದಿಂದ ಹೊರಟ ನಮ್ಮ ತಂಡ,  ಹತ್ತಿರದಲ್ಲಿದ್ದ ‘ಹಳುವಳ್ಳಿ’ ಎಂಬಲ್ಲಿ ನಿಂತಿತು. ಅಲ್ಲಿದ್ದ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ಕೊಟ್ಟೆವು. ಅಲ್ಲಿ  ಆಗ ಪೂಜೆ ನಡೆಯುತ್ತಿತ್ತು. ಆಮೇಲೆ ಎಲ್ಲರೂ ದೇವಾಲಯದ ಆವರಣದಲ್ಲಿ ಸೇರಿ,   ಪರಸ್ಪರ ಪರಿಚಯ ಮಾಡಿಕೊಂಡೆವು. ಹದಿಹರೆಯದ ಮಕ್ಕಳು, ಗೃಹಿಣಿಯರು ಉದ್ಯೋಗಸ್ಥರು, ನಿವೃತ್ತರು, ಹೀಗೆ ವಿವಿಧ ವಯೋಮಾನದ ವಿಭಿನ್ನ ಕ್ಷೇತ್ರಗಳಲ್ಲಿರುವವರು ಭಾಗವಹಿಸಿದ್ದ ಚಾರಣ ಇದಾಗಿತ್ತು.  

ಪ್ರಯಾಣ ಮುಂದುವರಿದು, ‘ಮೈದಾಡಿ’ ಸಮೀಪದ ಡಾಂಬರು ರಸ್ತೆಯ ಬಳಿ ನಿಂತಿತು. ನಾವು ಹೋಗಬೇಕಾಗಿದ್ದ ವ್ಯೂ ಪಾಯಿಂಟ್ ಇಲ್ಲಿಯೇ ಸಮೀಪ ಎಂಬ ಮಾಹಿತಿ ಸ್ಥಳೀಯರಿಂದ ದೊರೆಯಿತು. ಆಗ ಮಟಮಟ ಮಧ್ಯಾಹ್ನವಾಗಿದ್ದರೂ ‘ಸ್ವಲ್ಪ ದೂರ ತಾನೇ’ ಎಂದು ನಡೆದು ಚೆಂದದ ವ್ಯೂ ಪಾಯಿಂಟ್ ತಲಪಿದೆವು. ಅಷ್ಟರಲ್ಲಿ ‘ನಾವು ಬರಬೇಕಾಗಿದ್ದ ಜಾಗ ಇದಲ್ಲಾ, ಆದರೆ ಇದೂ ಚೆನ್ನಾಗಿದೆ’’  ಎಂಬ ಮಾತು ತೇಲಿ ಬಂತು. ಅಲ್ಲಿ ಸ್ವಲ್ಪ ಸಮಯ ಕಳೆದು  ಬಸ್ಸಿನ ಬಳಿ ಹಿಂತಿರುಗಿದಾಗ,  ಶ್ರೀ ಗಣೇಶ್ ಐತಾಳ್ ಅವರು ತಮ್ಮ ಕಾರಿನಲ್ಲಿ ಬಂದಿದ್ದರು. ನಮಗಾಗಿ ಮಧ್ಯಾಹ್ನದ ಊಟ ತಂದಿದ್ದ ಅಟೋರಿಕ್ಷಾ ಕೂಡ ನಮಗಾಗಿ ಅಲ್ಲಿ ಕಾಯುತ್ತಿತ್ತು. ಒಟ್ಟಿನಲ್ಲಿ, ಅಲ್ಲಿಯೇ ಸ್ವಲ್ಪ ದೂರದ ‘ಕಣಿವೆ’ ಎಂಬ ಸ್ಥಳಕ್ಕೆ ನಾವು ಹೋಗಬೇಕಿತ್ತು. ಅಲ್ಲಿಗೆ ನಾವು ತಲಪದ ಕಾರಣ ಅವರು ಖುದ್ದಾಗಿ ಜವಾಬ್ದಾರಿ ವಹಿಸಿಕೊಂಡರು.  ಆಮೇಲೆ ನಮ್ಮ ಬಸ್ಸು ಐತಾಳರ ಕಾರನ್ನು ಹಿಂಬಾಲಿಸಿತು. ‘ಕಣಿವೆ’ ಎಂಬ ಸೊಗಸಾದ ಹೋಮ್ ಸ್ಟೇ ಆವರಣದಲ್ಲಿ ನಮಗೆ ಪುಳಿಯೋಗರೆ, ಪಲಾವ್, ಮೊಸರುಬಜ್ಜಿ, ಮೊಸರನ್ನ,   ಕೊಬ್ಬರಿ ಮಿಠಾಯಿ, ಉಪ್ಪಿನ್ಕಾಯಿ ಇದ್ದ ಬೊಂಬಾಟ್ ಭೋಜನ ಬಡಿಸಿದರು. ‘ಮೈದಾಡಿ’ ವ್ಯೂ ಪಾಯಿಂಟ್ ಅಲ್ಲಿಯೇ 500 ಮೀ ದೂರದಲ್ಲಿದೆ ಅಂದರು. ಕೆಲವರು ಅಲ್ಲಿಗೂ ಹೋಗಿ ಬಂದರು. ಅದು ನಾವು ಮೊದಲು  ದಾರಿತಪ್ಪಿ ಭೇಟಿಕೊಟ್ಟಿದ್ದ ವ್ಯೂ ಪಾಯಿಂಟ್ ಅನ್ನು ಇನ್ನೊಂದು ಕೋನದಿಂದ ನೋಡುವ ಸ್ಥಳವಾಗಿತ್ತು. ಒಟ್ಟಿನಲ್ಲಿ, ನಮಗೆ ದಾರಿತಪ್ಪಿದ ಕಾರಣ ‘ಬೋನಸ್ ವ್ಯೂ ಪಾಯಿಂಟ್’ ಸಿಕ್ಕಂತಾಯಿತು.   ಇದೇ ಅವಕಾಶ ಎಂದು ಹಲವರು, ಆಯೋಜಕಿ ಮೇಘನಾ ಎಳೆಯವಳಾದ ಕಾರಣ ಆಕೆಯನ್ನು ಕಾಲೆಳೆದು ಕಿಚಾಯಿಸಲು ಆರಂಭಿಸಿದರು.

ಊಟದ ನಂತರ,  ಗಣೇಶ ಐತಾಳ ಅವರ ಕಾಳಜಿಗೆ ಮತ್ತೊಮ್ಮೆ ಧನ್ಯವಾದ ಅರ್ಪಿಸಿ ಮೈಸೂರಿನತ್ತ ಹೊರಟೆವು. ಆಗ 0330 ಗಂಟೆ ಆಗಿತ್ತು. ಕೆಲವರಿಗೆ ಬೆಂಗಳೂರು ತಲಪಿ, ಮರುದಿನ ಕೆಲಸಕ್ಕೆ ಹಾಜರಾಗಬೇಕಿತ್ತು. ಹಾಗಾಗಿ ಬೇಗ ಹೊರಡಬೇಕು ಎಂದು ನಿರ್ಧರಿಸಿ ಹೊರಟೆವಾದರೂ, ದಾರಿಯಲ್ಲಿ ‘ ಶಿವಶಕ್ತಿ ಕಾಫಿ-ಟೀ ಸೆಂಟರ್ ಕೆಳಗೂರು’ ಎಂಬಲ್ಲಿ ಚಹಾ ಸೇವನೆಗೆ ಬಸ್ಸನ್ನು ನಿಲ್ಲಿಸಿದಾಗ ತಂಡದಲ್ಲಿದ್ದ ಉತ್ಸಾಹಿ ಮಂದಿ ಹಾಗೂ ಎಳೆಯರು, ಅಲ್ಲಿ ಎದುರಿಗೆ ಕಾಣಿಸುತ್ತಿದ್ದ ಚಹಾ ತೋಟದಲ್ಲಿ ರೀಲ್ಸ್ ಮಾಡುವುದರಲ್ಲಿ ಮಗ್ನರಾದರು.  ಚಹಾತೋಟದ ಎದುರೇ ಕುಳಿತು, ಚಹಾ ಕುಡಿಯುವುದು ಸೊಗಸಾದ ಅನುಭೂತಿ.  ಅಲ್ಲೂ ಮಲೆನಾಡಿನ ಉತ್ಪನ್ನಗಳಿದ್ದುವು. ನಾವು ಕೆಲವರು ಹಪ್ಪಳ, ಕೋಕಂ ಜ್ಯೂಸ್ , ಚಹಾ ಪುಡಿ, ಕಾಫಿ ಪುಡಿ ಇತ್ಯಾದಿ ಖರೀದಿಸಿದೆವು. ಸ್ಥಳೀಯ ಚಹಾಪುಡಿಯಲ್ಲಿ ಎರಡು ವಿಧಗಳಿವೆ. ಎಳೆಯ ಚಿಗುರನ್ನು ಕೈಯಲ್ಲಿ ಕಿತ್ತು ಒಣಗಿಸಿ ಮಾಡಿದ ಚಹಾಪುಡಿಯ ಗುಣಮಟ್ಟ ಮತ್ತು ಬೆಲೆ ಎರಡೂ ಹೆಚ್ಚು.  ಮೆಶಿನ್ ನಲ್ಲಿ ಕತ್ತರಿಸಿದ ಚಹಾಎಲೆಗಳಲ್ಲಿ ಎಳೆಯದು, ಬಲಿತಿರುವುದು ಎರಡೂ ಮಿಶ್ರ ಆಗಿರುವುದರಿಂದ ಬೆಲೆ ತುಸು ಕಡಿಮೆ ಹಾಗೂ ಚಹಾ ಮಾಡುವಾಗ ಸ್ವಲ್ಪ ಹೆಚ್ಚು ಪುಡಿ ಬಳಸಬೇಕಾಗುತ್ತದೆ ಎಂದರು.

ಅಂತೂ ‘ಅರ್ಜೆಂಟ್ ‘ ಅಂದಿದ್ದ  ಎಲ್ಲರನ್ನೂ ‘ಬನ್ರಪ್ಪಾ..ಬನ್ನಿ’ ಎಂದು ಬಸ್ಸಿಗೆ ಹತ್ತಿಸಲು ಸರೋಜಾ ಅವರು ಹಲವಾರು ಸಲ ಕರೆಯಬೇಕಾಯಿತು! ಚಹಾ ಕುಡಿದ ನಂತರ ಬಸ್ಸಿನಲ್ಲಿ ಶಕ್ತಿಯ ಸಂಚಲನ ಕಾಣಿಸಿತು. ಅಂತಾಕ್ಷರಿ, ಹಾಡಿನ ಲಯಕ್ಕೆ ನೃತ್ಯ ಆರಂಭವಾಯಿತು. ಪ್ರಯಾಣ ಮುಂದುವರಿದು, ಹಾಸನದಲ್ಲಿ ಕೆಲವರು ಇಳಿದರು. ನಾವು ಮೈಸೂರು ತಲಪಿದಾಗ ರಾತ್ರಿ 11 ಗಂಟೆ ಆಗಿತ್ತು. ಎಲ್ಲರೂ ಮಧ್ಯರಾತ್ರಿ ಒಳಗೆ ಅವರವರ ಮನೆ ಸೇರಿದ್ದರು.

ಹೀಗೆ, ಸರಳ ಸುಂದರವಾದ ಚಾರಣ ಹಾಗೂ ಪ್ರವಾಸವನ್ನು ಬಹಳ ಅಚ್ಚುಕಟ್ಟಾಗಿ ಆಯೋಜನೆ ಮಾಡಿದ, ಕಾಳಜಿಯಿಂದ ಪ್ರತಿಯೊಬ್ಬರ ಬೇಕು-ಬೇಡಗಳನ್ನು ಗಮನಿಸಿ ಸಹಕರಿಸುತ್ತಿದ್ದ ಅತ್ತೆ-ಸೊಸೆ ಜೋಡಿ ಶ್ರೀಮತಿ  ಸರೋಜಾ ಶೇಖರ್ ಹಾಗೂ ಮೇಘನಾ ಸೃಜನ್  ಅವರಿಗೆ ಅನಂತ ಧನ್ಯವಾದಗಳು. ತಮ್ಮ ಮನೆಯಲ್ಲಿ ಆದರದ ಆತಿಥ್ಯ ಕೊಟ್ಟ ಶ್ರೀ ಗಣೇಶ್ ಐತಾಳ್ ಹಾಗೂ ಕುಟುಂಬದವರಿಗೆ ಹೃತ್ಫೂರ್ವಕ ಧನ್ಯವಾದಗಳು. ನಮ್ಮನ್ನು ಸುರಕ್ಷಿತವಾಗಿ ಕರೆದೊಯ್ದು ಸಾರಥಿ ಶ್ರೀ ಮಧು ಅವರಿಗೆ ಧನ್ಯವಾದಗಳು. ಒಂದೇ ಕುಟುಂಬದ ಪ್ರವಾಸದಂತೆ  ಪ್ರಯಾಣಿಸಿ ಪರಸ್ಪರ ಸಹಕಾರ ಕೊಟ್ಟ  ಎಲ್ಲಾ ಸಹಚಾರಣಿಗರಿಗೆ ನಮನಗಳು. ಇದಕ್ಕೆಲ್ಲಾ ಅವಕಾಶ ಕೊಡುವ ಯೈಎಚ್.ಎ.ಐ ಸಂಸ್ಥೆಗೆ ಋಣಿ.

ಹೇಮಮಾಲಾ.ಬಿ ಮೈಸೂರು

6 Responses

  1. ವಾವ್..ಪ್ರವಾಸಕಥನ..ಕಣ್ಣಿಗೆ ಕಟ್ಟಿದಂತೆ ವಿವರಿಸಿದ್ದೀರಾ ಗೆಳತಿ ಹೇಮಾ..ನಾವೂ ನಿಮ್ಮೊಡನೆ ಇದ್ದಂತೆ ಭಾಸವಾಯಿತು ಧನ್ಯವಾದಗಳು ..

  2. ನಯನ ಬಜಕೂಡ್ಲು says:

    Beautiful

  3. ಆಶಾ ನೂಜಿ says:

    ಚೆನ್ನಾಗಿದೆ ಪ್ರವಾಸಕಥನಾ

  4. Padmini Hegde says:

    ಹಿಮಮಣಿ ಸಿಂಚಿತ ಮಹಿಳಾಮಣಿ ಸಂಚಿತ ಸುಂದರ ಪ್ರವಾಸ ಕಥನ!

  5. Savithri bhat says:

    ತುಂಬಾ ಸುಂದರ ಪ್ರವಾಸ ಕಥನ. ವಿವರಣೆ ಓದುವಾಗ ನಾನೂ ಜೊತೆಗಿದ್ದ ಅನುಭವ ಆಯಿತು..

  6. ಶಂಕರಿ ಶರ್ಮ says:

    ಕಳಸದ ದಕ್ಷಿಣೇಶ್ವರ ಕಲಶೇಶ್ವರ ದೇಗುಲದ ಪೌರಾಣಿಕ ಹಿನ್ನೆಲೆ, ಅತಿಥೇಯರ ಆದರೋಪಚಾರ, ಸುಂದರ, ಸ್ನಿಗ್ಧ ನಿಸರ್ಗದ ನಡುವೆ ಚಾರಣ…ಎಲ್ಲವೂ ನಮ್ಮನ್ನೂ ನಿಮ್ಮ ಜೊತೆಗೊಯ್ದಿತು. ನಿರೂಪಣೆ ಎಂದಿನಂತೆ ಸುಂದರ… ಧನ್ಯವಾದಗಳು ಮಾಲಾ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: