ದಂತಕತೆಗಳು – ಕೋನಾರ್ಕ

Share Button

ದಂತಕತೆಗಳೆಂದರೆ ಮನುಷ್ಯರ ಬಾಯಿಂದ ಬಾಯಿಗೆ ಹರಡುತ್ತಾ ಪ್ರಸಾರವಾಗುವ ಸ್ಥಳಪುರಾಣವೋ, ದೇವಾಲಯದ ಇತಿಹಾಸವೋ, ಯಾವುದಾದರೂ ವಿಶಿಷ್ಟ ಹಿನ್ನೆಲೆಯುಳ್ಳ ಜನಪದರ ಕಥೆಗಳು. ಇವಕ್ಕೆ ಮೂಲವೆಲ್ಲಿ ಎಂದು ಹೇಳುವುದು ಕಷ್ಟ. ಆದರೆ ಇವುಗಳು ಐತಿಹಾಸಿಕ, ಪೌರಾಣಿಕ, ಅದ್ಭುತ ಘಟನೆಗಳು, ಅತೀಂದ್ರಿಯ ಪವಾಡಗಳು, ಕಲ್ಪನೆಗಳನ್ನು ಒಳಗೊಂಡಂತೆ ಕೇಳುಗರಲ್ಲಿ ಅಚ್ಚರಿ ಮೂಡಿಸುವಂತಿರುತ್ತದೆ. ಇಂತಹ ಅನೇಕ ಕಥೆಗಳನ್ನು ನಾವೆಲ್ಲರೂ ಅನೇಕ ಸಂದರ್ಭಗಳಲ್ಲಿ ಕೇಳಿರುತ್ತೇವೆ. ಇದು ಸತ್ಯವೇ ಎಂಬಂತೆ ನಮಗೆ ಅದನ್ನು ಹೇಳುವವರೂ ಇದ್ದಾರೆ. ಇವುಗಳು ಕಾಲದಿಂದ ಕಾಲಕ್ಕೆ ರೂಪಾಂತರಗೊಳ್ಳಲೂ ಬಹುದು.

ಇಂತಹದ್ದೊಂದು ಕಥೆ ನಾನೊಮ್ಮೆ ಕೇಳಿದೆ. ನಾವೊಮ್ಮೆ ಪ್ರವಾಸ ಹೋಗಿದ್ದಾಗ ಸ್ಥಳೀಯನಾದ ನಮ್ಮ ಕಾರಿನ ಚಾಲಕ ಹೇಳಿದ್ದು.
ಒರಿಸ್ಸಾದ ಕೊನಾರ್ಕ ಸೂರ್‍ಯ ದೇವಾಲಯದ ನಿರ್ಮಾಣಕ್ಕೆ ಸಂಬಂಧಿಸಿದ್ದು.13 ನೆಯ ಶತಮಾನದಲ್ಲಿ ಒಡಿಸ್ಸಾದ ಸಮುದ್ರದಂಚಿನಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿತ್ತು. ಅದ್ಭುತ ಕೆತ್ತನೆಯ ಶಿಲ್ಪಗಳ ಆಗರ. ಇಲ್ಲಿನ ಶಿಲ್ಪಿಗಳ ಚಾತುರ್ಯ ಅದ್ಭುತವಾಗಿದೆ. ಆದರೆ ಈ ದೇವಾಲಯದಲ್ಲಿ ಪೂಜಾಪಾಠಗಳಿಲ್ಲ. ಅದಕ್ಕೆ ಕಾರಣವೇ ಈ ದಂತಕಥೆ.

ಅಂದಿನ ಕಾಲದ ಪ್ರಸಿದ್ಧ ಶಿಲ್ಪಿಯಾಗಿದ್ದ ಬಿಸುಮಹಾರಾಣಾನ ನೇತೃತ್ವದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಅವನು ತನ್ನ ಸಹಶಿಲ್ಪಿಗಳು 12000 ಜನರೊಂದಿಗೆ ಸತತವಾಗಿ 12 ವರ್ಷಗಳ ಅವಧಿಯಲ್ಲಿ ಕೊನಾರ್ಕದ ದೇವಾಲಯವನ್ನು ನಿರ್ಮಿಸಿದನಂತೆ. ಅಂದಿನ ಮಹಾರಾಜನಿಗೆ ಆದಷ್ಡು ಬೇಗ ಕೆಲಸವನ್ನು ಪೂರ್ಣಮಾಡಿಸಬೇಕೆಂಬ ಆತುರ. ಅದಕ್ಕಾಗಿ ಶಿಲ್ಪಿಗಣಕ್ಕೆ ಶೀಘ್ರವಾಗಿ ಕೆಲಸ ಪೂರೈಸುವಂತೆ ಆಜ್ಞಾಪಿಸಿದರಂತೆ. ಅಲ್ಲಿ ಕೆಲಸ ಮಾಡುತ್ತಿದ್ದ ಅಷ್ಟೂ ಜನ ಶಿಲ್ಪಿಗಳ ಸಕಲ ಅನುಕೂಲಗಳು ದೇವಾಲಯದ ಸಮೀಪದಲ್ಲಿ, ಮತ್ತವರ ಪರಿವಾರದವರಿಗೆ ಅವರಿರುವ ಸ್ಥಳಗಳಲ್ಲೇ ಬೇಕುಬೇಡಗಳ ವ್ಯವಸ್ಥೆಗಳನ್ನೂ ರಾಜಾಶ್ರಯದಿಂದಲೇ ಮಾಡಲಾಗಿತ್ತು. ಬಿಸುಮಹಾರಾಣಾ ದೂರದಿಂದ ಬಂದವನು ಮತ್ತೆ ತನ್ನ ಪರಿವಾರವನ್ನು ಕಾಣಲು ಮಧ್ಯದಲ್ಲಿ ಹೋಗಿರಲೇ ಇಲ್ಲ. ಅವನು ಊರಿನಿಂದ ಹೊರಡುವಾಗ ಆತನ ಹೆಂಡತಿ ಗರ್ಭಿಣಿಯಾಗಿದ್ದಳು. ನಂತರದಲ್ಲಿ ಗಂಡುಮಗನನ್ನು ಹಡೆದಳು. ಮಗುವನ್ನು ನೋಡಲು ಶಿಲ್ಪಿ ಬರಲಾಗಲಿಲ್ಲ. ಮಗು ಬೆಳೆದು ಮಾತನಾಡಲು ಕಲಿಯುವುದರೊಂದಿಗೆ ತನ್ನ ತಂದೆಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದ. ಆಗ ತಾಯಿ ಆತನ ತಂದೆಯೊಬ್ಬ ಸುಪ್ರಸಿದ್ಧ ಶಿಲ್ಪಿ ಮಹಾತ್ಕಾರ್ಯವೊಂದನ್ನು ಮಾಡಲು ರಾಜಧಾನಿಗೆ ಹೋಗಿದ್ದಾನೆ ಎಂದು ಹೇಳುತ್ತಿದ್ದಳು.

ಬಾಲಕ ಧರ್ಮಪಾದನಿಗೆ ತಾನು ಶಿಲ್ಪಕಲೆ ಅಭ್ಯಾಸ ಮಾಡಿ ತಂದೆಯಂತೆಯೇ ಪ್ರಸಿದ್ಧನಾಗಬೇಕೆಂದು ಆಸಕ್ತಿ ಮೂಡಿತು. ಬಾಲ್ಯದಿಂದಲೇ ಒಬ್ಬ ಗುರುವಿನ ಬಳಿಯಲ್ಲಿ ತನ್ನ ಅಭ್ಯಾಸ ಪ್ರಾರಂಭಿಸಿದ್ದ. ಅನುವಂಶಿಕವಾಗಿ ಕೆಲವು ಗುಣಗಳು ತಂದೆಯಿಂದ ಮಕ್ಕಳಿಗೆ ಬರುವಂತೆ ದರ್ಮಪಾದನಿಗೂ ಶಿಲ್ಪಕಲೆಯ ಹೊಳಹುಗಳು ದೈವದತ್ತವಾಗಿಯೇ ಬಂದಿದ್ದವು. ಅದನ್ನು ಸರಿಯಾದ ಮಾರ್ಗದರ್ಶನ ನೀಡಿ ಗುರುಗಳು ತಿದ್ದಿದರು. ಅಂತೂ ಧರ್ಮಪಾದನು ಕಿರಿಯ ವಯಸ್ಸಿನಲ್ಲಿಯೇ ಜನರು ಆಶ್ಚರ್ಯ ಪಡುವಂತೆ ನುರಿತ ಶಿಲ್ಪಿಯಾಗಿ ಪರಿಣತಿ ಹೊಂದಿದ. ಅವನಿಗೆ ತನ್ನ ತಂದೆಯನ್ನು ಹುಡುಕಿ ಭೇಟಿಯಾಗಿ ತಾನು ಕಲಿತ ನೈಪುಣ್ಯತೆಯನ್ನು ಪ್ರದರ್ಶಿಸಲು ಆತುರ. ತಾಯಿಯ ಅಪ್ಪಣೆ ಪಡೆದು ಪಟ್ಟಣಕ್ಕೆ ಹೋಗಿ ತನ್ನ ತಂದೆಯನ್ನು ಹುಡುಕಲು ಹೊರಟನು. ಆದರೆ ಅವನನ್ನು ಎಂದೂ ನೋಡಿಯೇ ಇಲ್ಲವಾದ್ದರಿಂದ ಹೇಗೆ ಗುರುತಿಸುವುದು ಎಂಬುದೇ ಸಮಸ್ಯೆಯಾಗಿತ್ತು. ಆತನ ತಾಯಿ ಅದಕ್ಕೊಂದು ಉಪಾಯ ಸೂಚಿಸಿದಳು. ಅವರ ಮನೆಯ ಹಿತ್ತಲಿನಲ್ಲಿ ಬೆಳೆಸಿದ್ದ ಅಮೂಲ್ಯವಾದ ಒಂದು ಸೊಪ್ಪಿನಿಂದ ಮಾಡಿದ ಪಲ್ಯವು ಬಿಸುಮಹಾರಾಣಾನಿಗೆ ಅತ್ಯಂತ ಪ್ರಿಯವಾದುದು. ಅದನ್ನು ಧರ್ಮಪಾದನ ತಾಯಿ ತಯಾರಿಸಿದಂತೆ ಊರಿನಲ್ಲಿ ಇನ್ಯಾರೂ ಮಾಡಲು ಶಕ್ಯವಿರಲಿಲ್ಲ. ಆ ಖಾದ್ಯವು ಬಹಳ ದಿನಗಳಿಟ್ಟರೂ ಕೆಡದಂತದ್ದು. ಅದನ್ನು ತಯಾರಿಸಿ ಬುತ್ತಿಕಟ್ಟಿ ಮಗನಿಗೆ ಕೊಟ್ಟಳು. ದೇವಾಲಯದ ನಿರ್ಮಾಣದಲ್ಲಿರುವ ಶಿಲ್ಪಿಗಳ ಸಮೂಹದವರಿಗೆ ಅದನ್ನು ತಿನ್ನಲು ಕೊಟ್ಟಾಗ ಬಿಸುಮಹಾರಾಣನು ಅದನ್ನು ತಿನ್ನುತ್ತಲೇ ಯಾರು ಮಾಡಿರಬಹುದೆಂಬ ಅನುಮಾನದಿಂದ ಬಾಲಕನನ್ನು ಕರೆದು ಆತ ಯಾರೆಂದು ಕೇಳುತ್ತಾನೆ. ಆಗ ಗುರುತನ್ನು ಹೇಳಿಕೊಂಡರೆ ನಿನ್ನ ಮನದಾಸೆ ಪೂರ್ತಿಯಾಗುತ್ತದೆ ಎಂದು ಹರಸಿ ಮಗನನ್ನು ಪಟ್ಟಣಕ್ಕೆ ಕಳುಹಿಸುತ್ತಾಳೆ.

ಬಾಲಕ ಧರ್ಮಪಾದ ತಂದೆಯನ್ನು ಅರಸುತ್ತಾ ಕಟ್ಟಡದ ಕೆಲಸ ನಡೆಯುತ್ತಿದ್ದ ಸ್ಥಳಕ್ಕೆ ತಲುಪುತ್ತಾನೆ. ಅಲ್ಲಿದ್ದವರಿಗೆ ಊಟದ ಸಮಯದಲ್ಲಿ ತನ್ನ ತಾಯಿಯು ಕೊಟ್ಟಿದ್ದ ತರಕಾರಿ ಖಾದ್ಯವನ್ನು ತಿನ್ನಲು ಕೊಟ್ಟಾಗ ಒಬ್ಬಾತ ಅದನ್ನು ತಕ್ಷಣ ಅದನ್ನು ಗುರುತಿಸಿದನು. ಅವನು ಧರ್ಮಪಾದನನ್ನು ಯಾರೆಂದು ವಿಚಾರಿಸಿ ಎಲ್ಲಿಂದ ಬಂದಿದ್ದೆಂದು ಕೇಳಿದಾಗ ಸತ್ಯವನ್ನು ತಿಳಿದು ತನ್ನ ಮಗನನ್ನು ಸಂತೋಷದಿಂದ ಅಪ್ಪಿಕೊಳ್ಳುತ್ತಾನೆ. ಸಂಜೆಯ ಕಾಲದಲ್ಲಿ ಅಪ್ಪಮಕ್ಕಳಿಬ್ಬರೂ ಊರಿನ ವಿಷಯ, ದರ್ಮಪಾದನ ತಾಯಿಯ ವಿಷಯ ಎಲ್ಲವನ್ನೂ ಮನದುಂಬಿ ಮಾತನಾಡಿಕೊಳ್ಳುತ್ತಾರೆ. ಕೆಲವು ದಿವಸ ಅವನು ಅಲ್ಲಿಯೇ ಇರಲು ಒಪ್ಪಿಕೊಳ್ಳುತ್ತಾರೆ.

ಒಂದು ರಾತ್ರಿ ಎಲ್ಲರೂ ಏನೋ ಆತಂಕದಲ್ಲಿರುವಂತೆ ತಲ್ಲಣಿಸುತ್ತಿರುತ್ತಾರೆ. ಧರ್ಮಪಾದನ ತಂದೆ ಕೂಡ ಬಹಳ ಒತ್ತಡದಲ್ಲಿರುತ್ತಾನೆ. ಕಾರಣವೇನೆಂದು ಕೇಳಿದಾಗ ಏನು ಹೇಳುವುದು ಧರ್ಮಪಾದ, ಮಂದಿರ ಮತ್ತು ಗೋಪುರದ ನಿರ್ಮಾಣವು ಪೂರ್ತಿಯಾಗಿದೆ. ಗೋಪುರದ ಅತ್ಯುನ್ನತ ಸ್ಥಾನದಲ್ಲಿ ಕಲಶ ಕೂರಿಸಲು ಏನುಮಾಡಿದರೂ ಸಾಧ್ಯವಾಗುತ್ತಿಲ್ಲ. ಅದನ್ನು ಹೇಗೆ ಮಾಡುವುದೆಂದು ನಾಲ್ಕಾರು ರೀತಿಯಲ್ಲಿ ಪರಿಶೀಲಿಸಿ ಕೌಶಲ್ಯದಿಂದ ಪ್ರಯತ್ನಿಸಿದರೂ ಸರಿಹೊಂದುತ್ತಿಲ್ಲ. ನಾಳೆ ಮುಂಜಾನೆಯೊಳಗೆ ಅದನ್ನು ಪೂರ್ಣಗೊಳಿಸದೆ ಇದ್ದರೆ ಪರಿಶೀಲನೆಗೆ ಬರುವ ಮಹಾರಾಜರ ಕೋಪವನ್ನು ಎದುರಿಸಬೇಕಾಗುತ್ತದೆ. ಅವರು ತುಂಬ ಸಿಟ್ಟಿನವರು. ಕಲಶ ಸ್ಥಾಪನಾಕಾರ್ಯ ನಿಗದಿಯಾದ ದಿನದಂದು ಪೂರ್ಣವಾಗದಿದ್ದರೆ ಸಬಂಧಪಟ್ಟವರೆಲ್ಲರನ್ನೂ ಮರಣದಂಡನೆಗೆ ಗುರಿಪಡಿಸಲಾಗುವುದೆಂದು ರಾಜಾಜ್ಞೆ ಮಾಡಲಾಗಿದೆ. ಅದರಿಂದ ಎಲ್ಲರು ಭಯಭೀತರಾಗಿದ್ದಾರೆ ಎಂದನು. ಬಾಲಕ ಧರ್ಮಪಾದ ಅಪ್ಪಾಜಿ, ನಾನೂ ಸ್ವಲ್ಪ ಶಿಲ್ಪಕಲೆಯ ಗುಟ್ಟುಗಳನ್ನು ಗುರುಮುಖೇಣ ಕಲಿತಿದ್ದೇನೆ. ನೀವೆಲ್ಲರೂ ಸಮ್ಮತಿಸಿದರೆ ನಾನೊಮ್ಮೆ ಪ್ರಯತ್ನಿಸಬಹುದೇ? ಎಂದು ಕೇಳುತ್ತಾನೆ. ಕೊನೆಯ ಪ್ರಯತ್ನವೂ ಆಗಿಹೋಗಲೆಂದು ಎಲ್ಲರೂ ಒಪ್ಪುತ್ತಾರೆ. ಗೋಪುರದ ನಕ್ಷೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ಧರ್ಮಪಾದನು ಅತ್ಯಂತ ಭಾರವಾದ ಕಳಶದ ಶಿಲೆಯನ್ನು ಮರಳಿನ ಇಳಿಜಾರಿನಮೇಲೆ ಹಗ್ಗಗಳ ಸಹಾಯದಿಂದ ಎಳೆಯುತ್ತಾ ಉಪಾಯವಾಗಿ ಗೋಪುರದ ಮೇಲಕ್ಕೆ ತೆಗೆಸಿಕೊಂಡು ಹೋಗಿ ಚಾಕಚಕ್ಯತೆಯಿಂದ ನಿರ್ದಿಷ್ಟ ಸ್ಥಾನದಲ್ಲಿ ಕೂರಿಸಿದ. ಅದು ಸರಿಯಾಗಿ ಕೈಗೂಡಿದಾಗ ಶಿಲ್ಪಿಗಳೆಲ್ಲರೂ ಧರ್ಮಪಾದನ ನೈಪುಣ್ಯಕ್ಕೆ ಬೆರಗಾದರು. ಅವನನ್ನು ಅಪ್ಪನಿಗೆ ತಕ್ಕ ಮಗನೆಂದು ಕೊಂಡಾಡಿದರು ಮರುಕ್ಷಣದಲ್ಲಿಯೇ ಮತ್ತೊಂದು ಆತಂಕಕ್ಕೊಳಗಾದರು. ರಾಜರು ಬಂದು ಇದು ಹೇಗೆ ಸಾಧ್ಯವಾಯಿತೆಂದು ಕೇಳಿದಾಗ ಧರ್ಮಪಾದನಿಂದ ಎಂದು ಗೊತ್ತಾಗುತ್ತದೆ. ಸತ್ಯವನ್ನು ತಿಳಿದ ಮಹಾರಾಜರು ಇಷ್ಟುಜನ ಕುಶಲ ಶಿಲ್ಪಿಗಳು ಮಾಡಲಾಗದ ಕೆಲಸವನ್ನು ಯಕಶ್ಚಿತ್ ಬಾಲಕನೊಬ್ಬ ಮಾಡಿದನೆಂದರೆ ಅವರ ಕೋಪ ಮೇರೆವರಿದು ನಮ್ಮನ್ನೆಲ್ಲ ಶಿಕ್ಷೆಗೆ ಗುರಿಪಡಿಸುತ್ತಾರೆ ಎಂದು ಭಯಭೀತರಾದರು.

ಒರಿಸ್ಸಾದ ಕೊನಾರ್ಕ ಸೂರ್‍ಯ ದೇವಾಲಯ

ನಡೆದುದೆಲ್ಲವನ್ನೂ ಅರಿತ ಬಾಲಕ ಧರ್ಮಪಾದನು ತಾನು ಮಾಡಿದ ಕೆಲಸದಿಂದ ಬೇರೊಂದು ಸಮಸ್ಯೆ ಉದ್ಭವಿಸಿ ಅಷ್ಟೊಂದು ಜನ ಶಿಲ್ಪಿಗಳಿಗೆ ಶಿಕ್ಷೆಯಾಗಬಾರದು ಎಂದುಕೊಂಡನು. ತನ್ನ ತಂದೆಗೂ ಅವರೊಟ್ಟಿಗೆ ಅಪಕೀರ್ತಿ ಬರಬಾರದೆಂದು ನಿರ್ಧರಿಸಿದನು. ತಾನು ಕಾಣಿಸಿಕೊಳ್ಳದಿದ್ದರೆ ರಾಜರು ಅಲ್ಲಿದ್ದವರೇ ಕಾರ್ಯ ಪೂರ್ತಿಮಾಡಿರುವರೆಂದು ತಿಳಿಯುತ್ತಾರೆ. ಇದರಿಂದ ಉಂಟಾಗುವ ತೊಂದರೆ ತಪ್ಪುತ್ತದೆ ಎಂದು ತೀರ್ಮಾನಿಸಿ ತನ್ನ ಮುಂದಿನ ನಡೆಯನ್ನು ನಿರ್ಧರಿಸುತ್ತಾನೆ. ಮಧ್ಯರಾತ್ರಿ ಎಲ್ಲರೂ ಸುಖನಿದ್ರೆಯಲ್ಲಿರುವಾಗ ತಾನೆದ್ದು ದೇವಾಲಯದ ಗೋಪುರದ ಕಳಸದ ವರೆಗೂ ಒಬ್ಬನೇ ಹತ್ತಿಹೋಗುತ್ತಾನೆ. ಕೈಮುಗಿದು ಎದುರಿಗೆ ಕಾಣುತ್ತಿದ್ದ ಭೋರ್ಗರೆಯುವ ಸಮುದ್ರಕ್ಕೆ ಅಲ್ಲಿಂದಲೇ ಹಾರಿಬಿಡುತ್ತಾನೆ. ಅಲೆಗಳಿಗೆ ಶರಣಾಗಿ ಕಣ್ಮರೆಯಾಗಿ ಹೋಗುತ್ತಾನೆ.
ಮಾರನೆಯ ದಿನ ರಾಜನು ಮಂದಿರ ನಿರ್ಮಾಣ ಕಾರ್ಯ ಪೂರ್ತಿಯಾಯಿತೆಂದು ಸಂತಸಪಟ್ಟರೂ ಪ್ರವೇಶವಾಗುವುದರೊಳಗೇ ಇಂಥಹ ದುರಂತವೊದಗಿತೆಂದು ಅಲ್ಲಿ ಪೂಜೆಗಳನ್ನು ನಿಷೇಧಿಸುತ್ತಾನೆ. ಕಾಕತಾಳೀಯವೆಂಬಂತೆ ಈಗಲೂ ಅಲ್ಲಿ ಪೂಜಾಪಾಠಗಳು ನಡೆಯುತ್ತಿಲ್ಲ. ಇದನ್ನು ಹೇಳಿದ ಕಾರುಚಾಲಕ ಅಂತಹ ವಿದ್ಯಾವಂತನೇನೂ ಅಲ್ಲ. ಆದರೆ ಕಥೆಯನ್ನು ಅವನು ಹೇಳಿದ ರೀತಿ ನನಗೆ ಬಹಳ ಮೆಚ್ಚುಗೆಯಾಯಿತು. ಅದನ್ನೇ ಇಲ್ಲಿ ನಿಮ್ಮ ಮುಂದಿಟ್ಟಿದ್ದೇನೆ.


-ಬಿ.ಆರ್.ನಾಗರತ್ನ. ಮೈಸೂರು.

12 Responses

  1. ಆಶಾನೂಜಿ says:

    ಚಂದದ ದಂತ ಕಥೆ

  2. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿದೆ

  3. ಧನ್ಯವಾದಗಳು ಮೇಡಂ

  4. I was reminded of my visit to Konark n this story makes one emotional

  5. ಸುಂದರ ಆದರೆ ದುರಂತ ದಂತಕಥೆ.ನಿಮ್ಮ ನಿರೂಪಣೆ ತುಂಬಾ ಸೊಗಸಾಗಿದೆ

  6. ಧನ್ಯವಾದಗಳು ಸೋದರಿ

  7. ಶಂಕರಿ ಶರ್ಮ says:

    ಅದ್ಭುತ ಕೋನಾರ್ಕ್ ಮಂದಿರ ನಿರ್ಮಾಣದ ಹಿಂದಿರುವ ದಂತಕಥೆ ಬಹಳ ಚೆನ್ನಾಗಿದೆ …ನಾಗರತ್ನ ಮೇಡಂ.
    ಅಂತ್ಯದಲ್ಲಿ ದುರಂತವಾದ ಬಗೆ ಮಾತ್ರ ಮನಸ್ಸನ್ನು ಹಿಂಡಿತು.

  8. ಹಾ ..ಶಂಕರಿ ಮೇಡಂ… ಅದುಹಾಗೆ ಇರುವುದಂತೆ…ಇದರ ಬಗ್ಗೆ ಇನ್ನೂ ಒಂದು ಕಥೆ ಇದೆ..ಅದೂದುರಂತವೇ…..ಓದಿ ಅಭಿಪ್ರಾಯ ಹೇಳಿದಕ್ಕೆ…ಧನ್ಯವಾದಗಳು ಮೇಡಂ

  9. Hema Mala says:

    ನಾವು ಕೋನಾರ್ಕಕ್ಕೆ ಹೋಗಿದ್ದಾಗ, ಅಲ್ಲಿಯ ಗೈಡ್ ಇದೇ ಕತೆಯನ್ನು ತಿಳಿಸಿದ್ದರು. ಅದರಲ್ಲಿ ಧರ್ಮಪಾದನ ತಾಯಿ ತಯಾರಿಸಿದ ಸೊಪ್ಪಿನ ಪಲ್ಯದ ವಿಷಯ ಇರಲಿಲ್ಲ. ಕತೆಯ ಮಿಕ್ಕ ಭಾಗ ಇದೇ ರೀತಿ ಇತ್ತು. ಚೆಂದದ ನಿರೂಪಣೆ.

  10. ಧನ್ಯವಾದಗಳು ಗೆಳತಿ.. ನೀವು ಕೊಡುವ ವಿಷಯ ಬರೆಯಲೇಬೇಕೆಂಬ ಪ್ರಚೋದನೆ ನೀಡುತ್ತದೆ…ಹೀಗಾಗಿ ಮನದಲ್ಲಿ ಹುದುಗಿದ ವಿಷಯ ಗಳು ..ಹೊರಗೆ ಬರುತ್ತಿವೆ…ಅದಕ್ಕಾಗಿ ನಿಮಗೆ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: