ನಾವು ನಮ್ಮೊಳಗೆ
ಮೊನ್ನೆ ತಾನೆ 75 ನೇ ಗಣರಾಜ್ಯೋತ್ಸವವನ್ನು ವಿಜೃಂಬಣೆಯಿಂದ ಆಚರಿಸಿದ್ದೇವೆ. ಅದಕ್ಕೆ ಮೂರು ದಿನಗಳ ಮುಂಚೆ ಮೈ ರೋಮಾಂಚನಗೊಳ್ಳುವ ಐತಿಹಾಸಿಕ ಘಟನೆಯಾದ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯಾದ ಕಾಲಮಾನದಲ್ಲಿ ನಾವು ಜೀವಿಸಿದ್ದೇವೆ ಎಂಬುದೇ ಇಂದು ಮೈಮನಗಳು ಪುಳಕಗೊಳ್ಳುವ ವಿಚಾರ.
ನಾಲ್ಕು ವರುಷಗಳ ಹಿಂದೆ ಕರೋನಾ ಹೆಮ್ಮಾರಿಯಿಂದ ಈ ಭೂಲೋಕವೇ ತತ್ತರಿಸುವಂತಹ ದಿನಗಳಲ್ಲಿ ನನ್ನ ಮನಸ್ಸು – ಅಯ್ಯೋ ಈ ಅವಘಡ ನಮ್ಮ ಜೀವಿತದ ಕಾಲಮಾನದಲ್ಲಿ ನಡೆಯಿತಲ್ಲಾ, ಎಂತಹ ಭೀತಿ, ಎಂತಹ ಆತಂಕ, ಎಷ್ಟೊಂದು ಸಾವು ನೋವುಗಳು. ಮೊನ್ನೆ ಅಲ್ಲಂತೆ, ನಿನ್ನೆ ಇಲ್ಲಂತೆ, ಇಂದು ನಮ್ಮಲ್ಲೇ ಅಂತೆ ಅವಘಡಗಳು ಸಂಭವಿಸುತ್ತಿರುವುದು ಎಂಬ ಭೀಕರ ಪರಿಸ್ಥಿತಿಯನ್ನು ಎದುರಿಸುವಂತೆ ಆಯಿತಲ್ಲಾ, ಬದುಕುಳಿದರೆ ನಾಳೆ, ಮುಂಬರುವ ವರ್ಷಗಳಲ್ಲಿ ನಮ್ಮ ಮಕ್ಕಳು, ಮೊಮ್ಮಕ್ಕಳು ʼನಮ್ಮ ಅಜ್ಜಿ ತಾತ, ಮತ್ತಜ್ಜಿ, ಮುತ್ತಾತ ಇಂತಹ ಕಾಲಮಾನದಲ್ಲಿ ಇದ್ದರಂತೆʼ ಎಂದು ಜ್ಞಾಪಸಿಕೊಳ್ಳಬಹುದಲ್ಲವೇ – ಎಂದು ಯೋಚಿಸುತ್ತಲಿತ್ತು.
ಆದರೀಗ, ಅದೇ ಮನಸ್ಸು, – ಎಂತಾ ಪುಣ್ಯ, ಎಂಥಾ ಭಾಗ್ಯ . . ., 500 ವರ್ಷಗಳ ನಂತರ ನಮ್ಮ ರಾಮ ಹುಟ್ಟಿದ ಊರಾದ ಅಯೋಧ್ಯೆಯಲ್ಲೇ ಭವ್ಯ ಮಂದಿರವನ್ನು ಕಟ್ಟಿ, ಅಲ್ಲಿ, ನಮ್ಮೂರ ಶಿಲೆಯಿಂದ, ನಮ್ಮೂರ ಶಿಲ್ಪಿ, ನಮ್ಮ ಹೆಮ್ಮೆ, “ಅರುಣ್ ಯೋಗಿರಾಜ್” ನಿರ್ಮಿಸಿದ, ದೈವ ಕಳೆಯಿಂದ ಶೋಭಿಸುತ್ತಿರುವ ಮುದ್ದು ಮುಖದ ಬಾಲರಾಮನ ಪ್ರಾಣಪ್ರತಿಷ್ಠೆಯ ಕಾಲಮಾನದಲ್ಲಿ ನಾವಿದ್ದೆವು ಎಂದು ಸಂತಸದಿಂದಲೂ ನಮ್ಮ ಕಾಲಮಾನವನ್ನು ಗುರುತಿಸುವಂತೆ ಆಯಿತಲ್ಲಾ ಎಂದು ಹೃದಯ ಹೆಮ್ಮೆಯಿಂದ ಬೀಗುತ್ತಿದೆ.
ಎಂಥಹ ಭಕ್ತಿಯ ಪರಕಾಷ್ಠೆ. ಒಬ್ಬ ನಾಯಕನಿಗೆ ಒಂದೊಳ್ಳೆಯ ಕೆಲಸವನ್ನು ಮಾಡಲೇಬೇಕೆಂಬ ಆತ್ಮಬಲ, ಮನೋಬಲವೊಂದಿದ್ದರೆ, ಅದಕ್ಕೆ ದೈವಬಲವೂ ಸಹಾಯವನ್ನು ಚಾಚುವಂತಾಗಿ, ಎಂತೆಂತಹ ಮಹತ್ವದ ಕಾರ್ಯಗಳನ್ನು ಮಾಡಲು ಸಾಧ್ಯ ಎಂದು ಮೂಗಿನ ಮೇಲೆ ಬೆರಳಿಡುವಂತೆ ಆಗುತ್ತದೆ. ಮೊನ್ನೆಯ ಪ್ರಾಣಪ್ರತಿಷ್ಠೆಗೆ ಸಾಗರೋಪಾದಿಯಲ್ಲಿ ಜನರು ಹೋಗುತ್ತಿರುವುದನ್ನು ನೋಡುತ್ತಿದ್ದರೆ, ದೇಶಕ್ಕೆ ಸ್ವತಂತ್ರವನ್ನು ತಂದುಕೊಡುವ ನಿಟ್ಟಿನಲ್ಲಿ ದಂಡಿಯಾತ್ರೆಗೂ ಗಾಂಧೀಜಿಯವರನ್ನು ಅನುಸರಿಸಿ ಹೀಗೆಯೇ ಜನರು ಪ್ರವಾಹದಂತೆ ಮುನ್ನುಗ್ಗಿ ಹೋಗುತ್ತಿದ್ದುದುದರ ನೆನಪಾಯಿತು. ಎಲ್ಲ ಕಾಲಕ್ಕೂ ಸಾಮಾನ್ಯ ಜನರು ಒಳ್ಳೆಯ ಕಾರ್ಯಗಳಿಗೆ ಅಭೂತಪೂರ್ವ ಬೆಂಬಲವನ್ನು ನೀಡುತ್ತಲೇ ಬಂದಿದ್ದಾರೆ.
ಆಯಾ ಕಾಲಮಾನಗಳಲ್ಲಿ ನಡೆದ ಘಟನೆಗಳಿಗನುಸಾರವಾಗಿ ಮನಸ್ಸು ಮುದುಡಿಸಿ, ಮನಸ್ಸು ಅರಳಿಸಿಕೊಂಡು ಸುಮ್ಮನೆ ಕುಳಿತುಬಿಟ್ಟರಾಯಿತೇ? ನಾವು ಮನುಷ್ಯರಾಗಿ ಹುಟ್ಟಿದುದಕ್ಕೆ ಸಮಾಜಕ್ಕೆ, ಜನ್ಮಭೂಮಿಗೆ ಮಾಡಬೇಕಾದ ಪ್ರಾಥಮಿಕ ಕರ್ತವ್ಯಗಳನ್ನು ನಿರ್ವಹಿಸಿ, ನಮ್ಮ ಸುತ್ತ ಮುತ್ತಿನ ಕೆಲವರನ್ನಾದರೂ, ಕುಟುಂಬದ ಸದಸ್ಯರುಗಳನ್ನಾದರೂ ಈ ನಿಟ್ಟಿನಲ್ಲಿ ನಡೆಯುವಂತೆ ಪ್ರೇರೇಪಿಸಬೇಕಲ್ಲವೇ? ಎಚ್ಚರಿಸಬೇಕಲ್ಲವೇ?
ಎಷ್ಟೊಂದು ವಿಭಾಗಗಳಲ್ಲಿ ಮಹತ್ತರವಾದ ಸಾಧನೆಗಳನ್ನು ಗೈದು ನಮ್ಮ ದೇಶ ಪ್ರಪಂಚದ ಭೂಪಟದಲ್ಲಿ ಮೇಲೆ ಮೇಲಿನ ಸ್ಥಾನಕ್ಕೆ ಏರುತ್ತಿದ್ದರೂ, ಕೆಳಸ್ಥರಗಳಲ್ಲಿ ನಮ್ಮ ಸುತ್ತಮುತ್ತ ನಡೆಯುತ್ತಿರುವ ವಿದ್ಯಾಮಾನಗಳನ್ನು ಅವಲೋಕಿಸಿದಾಗ ಮನಸ್ಸೇನೂ ಹರ್ಷಗೊಳ್ಳುವುದಿಲ್ಲ.
ಪ್ರಜಾಪ್ರಭುತ್ವ ಎಂತಹ ಒಳ್ಳೆಯ ವ್ಯವಸ್ಥೆ. ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವದ ದೇಶವಾದ ನಮ್ಮ ಭಾರತದಲ್ಲಿ ಈಗ ನಿಜಕ್ಕೂ ಪ್ರಜಾಪ್ರಭುತ್ವ ನಿಜ ಅರ್ಥದಲ್ಲಿ ಅನುಷ್ಟಾನಗೊಳ್ಳುತ್ತಿದೆಯೇ ಎಂದು ಅನುಮಾನ ಉಂಟಾಗುತ್ತದೆ.
ಒಂದು ಸಣ್ಣ ಸಾಧನೆಯನ್ನು ಮಾಡಬೇಕೆಂದರೂ, ಎಷ್ಟು ಪೂರ್ವ ತಯ್ಯಾರಿ, ಕಠಿಣ ಪರಿಶ್ರಮ, ತೀಕ್ಷ್ಣ ಬುದ್ಧಿಮತ್ತೆ, ಕರ್ತವ್ಯ ಪ್ರಜ್ಞೆ, ಬದ್ಧತೆಗಳ ಅಗತ್ಯತೆಗಳು ಇರುತ್ತವೆ. ಅಂತಹುದರಲ್ಲಿ ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವುದು, ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂದು ಸುಳ್ಳು ಸುದ್ಧಿಗಳನ್ನು ಹರಡುವುದು, ಆಡಿದ ಮಾತಿಗೆ, ಕೊಟ್ಟ ವಾಗ್ದಾನಕ್ಕೆ ಬೆಲೆಯನ್ನೇ ನೀಡದಿರುವುದು, ಪಕ್ಷಾಂತರ, ದ್ವೇಷದ ರಾಜಕಾರಣ, ಚುನಾವಣೆಗಳ ಸಮಯದಲ್ಲಿ ಕ್ಷಣಿಕ ಆಮಿಷಗಳನ್ನು ಒಡ್ಡಿ ಮತಗಳಿಸುವುದು, ಅತೀ ಹೀನವಾದ ರೆಸಾರ್ಟ್ ಸಂಸ್ಕೃತಿಯನ್ನು ಅಳವಡಿಸಿಕೊಂಡು ಗನ್ ಪಾಯಿಂಟಿನಿಂದ ಎನ್ನುತ್ತಾರಲ್ಲಾ ಹಾಗೆ, ಅವರುಗಳನ್ನು ಹೆದರಿಕೆ, ಬೆದರಿಕೆ, ಆಮಿಷಗಳು ಮುಂತಾದ ಅಸ್ತ್ರಗಳಿಂದ ಹದ್ದುಬಸ್ತಿನಲ್ಲಿಟ್ಟು ಸರ್ಕಾರದ ಚುಕ್ಕಾಣಿ ಹಿಡಿಯುವುದು, ನೈತಿಕತೆ ಎಂದರೇನೆಂದೇ ಅರಿಯದಿರುವುದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ದ್ರೋಹ, ಅವಮಾನ ಅನ್ನಿಸುತ್ತಿದೆ.
ಹಿಂದೆಲ್ಲಾ ನಿಸ್ವಾರ್ಥ ದೇಶಭಕ್ತರು ಮಾತ್ರ ರಾಜಕಾರಣ ಮಾಡುತ್ತಿದ್ದರು. ನಡೆಯುವ ಕಾಲೇ ಎಡವುವುದು, ನಡೆಯದೇ ನಿಂತೆ ಬಿಟ್ಟರೆ ಎಡವುವುದೂ ಇಲ್ಲ, ಮುಂದೆ ಹೋಗುವುದೂ ಇಲ್ಲ, ಎಂಬಂತೆ ರಾಜಕಾರಣ ಮಾಡುವ ಸಂದರ್ಭದಲ್ಲಿ ಕೆಲವೊಂದು ತಪ್ಪೂ ಆಗಿರಬಹುದುದು, ಆದರೆ ಅವರ ದೇಶಭಕ್ತಿ, ನಿಸ್ವಾರ್ಥತೆಯಲ್ಲಿ ಸಂದೇಹದ ಕುರುಹೂ ಇರುತ್ತಿಲಿಲ್ಲ. ಈಗ ಹಾಗಲ್ಲ, ಎಲ್ಲೂ ಸಲ್ಲದವರು ರಾಜಕಾರಣಕ್ಕಿಳಿಯಬಹುದು ಎಂಬಂತಹ ಖೇದಕರ ವಾತಾವರಣ ನಿರ್ಮಾಣವಾಗಿ ಬಿಟ್ಟಿದೆ.
ರಾಜರ ಯುಗದಲ್ಲಾಗಿದ್ದರೆ, ʼಯಥಾ ರಾಜಾ, ತಥಾ ಪ್ರಜಾʼ ಎಂಬಂತಹ ಮಾತು ಸರಿಹೊಂದುತಿತ್ತು. ಆದರೆ ಪ್ರಜಾಪ್ರಭುತ್ವದ ಮಹತ್ವವೇ – ಯಥಾ ಪ್ರಜಾ, ತಥಾ ರಾಜಾ – ಎನ್ನುವುದು. ನಾವು ಯಾರನ್ನು ಆರಿಸಿ ಕಳುಹಿಸುತ್ತೇವೆಯೋ ಅವರೇ ನಮ್ಮನ್ನಾಳುವುದು.
ಹಾಗಾದರೆ ಈಗ ನಮ್ಮ ಜವಾಬ್ದಾರಿ ಮಹತ್ವದ್ದಾಯಿತಲ್ಲವೇ? ನಾವು ಕಂಡಿದ್ದನ್ನು, ಕೇಳಿದ್ದನ್ನು ನಮ್ಮ ವಿವೇಚನೆಯಿಂದ ವಿಶ್ಲೇಷಿಸಿ ನಮ್ಮ ನಮ್ಮ ಪ್ರಾಥಮಿಕ ಕತರ್ವ್ಯಗಳನ್ನು ನಿರ್ವಹಿಸಿದಾಗ ಮಾತ್ರ ನಿಜ ಅರ್ಥದಲ್ಲಿ ಪ್ರಜಾಪ್ರಭುತ್ವ ಅನುಷ್ಠಾನವಾಗುವುದು. ಇಲ್ಲಿ ಮತ್ತೆ ಮತ್ತೆ ನಾನು ಪ್ರಾಥಮಿಕ ಕರ್ತವ್ಯಗಳ ಉಲ್ಲೇಖ ಮಾಡುತ್ತಿರುವುದೇಕೆಂದರೆ, ವೈಯುಕ್ತಿಕ ಪ್ರಗತಿಗೆ ಬೇಕಾದ ವ್ಯವಸ್ಥೆಗಳೆಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿಕೊಳ್ಳುವ ನಾವು, ನಾಗರೀಕ ಪ್ರಜ್ಞೆಯನ್ನು ತೋರಬೇಕಾದ ಸಂದರ್ಭಗಳಲ್ಲಿ ತಟಸ್ಥವಾಗಿಬಿಡಬಾರದು.
ಅದರಲ್ಲೂ ಈ ವರ್ಷ ಚುನಾವಣೆಗಳು ಬರುತ್ತಿವೆ. ಪ್ರಜಾಪ್ರಭುತ್ವ ಸರಿ ಅರ್ಥದಲ್ಲಿ ಉಳಿಯಬೇಕಾದರೆ, ಪ್ರತಿಯೊಬ್ಬ ನಾಗರೀಕನೂ ಸೂಕ್ತ ಅಭ್ಯರ್ಥಿಯನ್ನು ಯಾವ ಆಮಿಷಕ್ಕೂ ಒಳಗಾಗದೆ ವಿವೇಚನೆಯಿಂದ ಮತ ಚಲಾಯಿಸಿ ಆಯ್ಕೆ ಮಾಡಬೇಕು. ಎಷ್ಟೊಂದು ಜನ ವಿದ್ಯಾವಂತರೇ ಅದಕ್ಕೂ ನಮಗೂ ಸಂಬಂಧವಿಲ್ಲವೇನೋ ಎನ್ನುವಂತೆ ಚುನಾವಣೆಗಳ ಸಂದರ್ಭದಲ್ಲಿ ವಿಹಾರ ಹೋಗುವುದೋ, ಕೌಟುಂಬಿಕ ಸಮಾರಂಭಗಳಲ್ಲಿ ಮುಳುಗಿಹೋಗುವುದೋ, ಅಥವಾ ನಮ್ಮ ಒಂದು ಓಟಿನಿಂದ ಯಾವ ರಾಜ್ಯವೂ ಮುಳುಗಿಹೋಗುವುದಿಲ್ಲ ಎಂಬ ಉಡಾಫೆಯನ್ನೋ, ನಿರಾಸಕ್ತಿಯನ್ನೋ ತೋರಿಸುತ್ತಾರೆ. ಕೊನೆಯ ಪಕ್ಷ ನಾವುಗಳು ಹಾಗಾಗದೆ, ನಮ್ಮ ಕುಟುಂಬದವರೂ, ನಮ್ಮ ಸುತ್ತಮುತ್ತಲಿನ ಸ್ನೇಹಿತರೂ, ಪರಿಚಿತರೂ ಹಾಗೆ ನಡೆದುಕೊಳ್ಳದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತಾ, ಒಂದು ಸದೃಢ ಸರಕಾರ ಬರುವಂತೆಯೂ, ಪ್ರಜಾಪ್ರಭುತ್ವದ ಅತ್ಯಂತ ಮಹತ್ವದ ಗುಣವಾದ, ಆರಿಸಿ ಬಂದ ಸರಕಾರ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರಿದಂತೆ ನಡೆದುಕೊಳ್ಳುವುದನ್ನೋ, ಸಾರ್ವಭೌಮರಂತೆ ನಡೆದುಕೊಳ್ಳುವುದನ್ನೋ ತಡೆಯುವ ನಿಟ್ಟಿನಲ್ಲಿ, ತಪ್ಪು ಮಾಡದಂತೆ, ಮನ ಬಂದಂತೆ ನಡೆಯದಂತೆ ಎಚ್ಚರಿಸುವ ಸಶಕ್ತ ವಿರೋಧ ಪಕ್ಷವಿರುವಂತೆಯೂ ನೋಡಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸೋಣ.
ಬಾಲರಾಮ ಬಂದಾಯಿತು, ಇನ್ನು ರಾಮರಾಜ್ಯ ಸ್ಥಾಪನೆಯಲ್ಲಿ ನಮ್ಮ ಅಳಿಲು ಸೇವೆಯನ್ನು ಸಲ್ಲಿಸೋಣ, ಹೌದಂತೀರಾ?
-ಪದ್ಮಾ ಆನಂದ್, ಮೈಸೂರು
ನಾವು ನಮ್ಮೊಳಗೆ ಚಿಂತನೆ ಗೆ ಹಚ್ಚುವಂತಹ ಲೇಖನ ಉತ್ತಮ ನಿರೂಪಣೆ ಯೊಂದಿಗೆ…ಅನಾವರಣ.. ಧನ್ಯವಾದಗಳು ಪದ್ಮಾಮೇಡಂ
ಸ್ಪಂದನೆಗಾಗಿ ಧನ್ಯವಾದಗಳು.
ಸೊಗಸಾಗಿದೆ
ಧನ್ಯವಾದಗಳು..
ಸ್ವಚಿಂತನೆಗೆ ಎಡೆಮಾಡಿ ಕೊಡುವ ಲೇಖನ ಸಕಾಲಿಕವೂ ಹೌದು…ಧನ್ಯವಾದಗಳು ಪದ್ಮಾ ಮೇಡಂ.
ಪ್ರತಿಕಿಯೆಗಾಗಿ ವಂದನೆಗಳು.