ಭಾರತೀಯ ಚಿಂತನೆಗೆ ಪುರಂದರದಾಸರ ಕೊಡುಗೆ
ಪುರಂದರದಾಸರ ಕಾಲದ ಸಾಮಾಜಿಕ ವ್ಯವಸ್ಥೆ: ಭಾರತೀಯ ಸಮಾಜವು ವೇದಗಳ ಕಾಲದ ವೇಳೆಗೇ ಸಮಾಜದ ಅಗತ್ಯಗಳನ್ನು ಪೂರೈಸುವ ನಿರ್ದಿಷ್ಟ ವರ್ಗಗಳಾಗಿ ವರ್ಗೀಕರಣಗೊಂಡಿತ್ತು. ಈ ವರ್ಗೀಕರಣವು ಅಗತ್ಯಗಳ ಪೂರೈಕೆಯು ನಿಶ್ಚಿತವಾಗಿ, ನಿರ್ದಿಷ್ಟವಾಗಿ ಮತ್ತು ಕರಾರುವಾಕ್ಕಾಗಿ ಉಂಟಾಗಲು ಪೂರಕವಾಗಿದ್ದಿರಬೇಕು. ಆ ಲಾಭವೇ ಆ ರೀತಿಯ ವರ್ಗೀಕರಣವನ್ನು ಸ್ಥಾಯಿಗೊಳಿಸುವಂತೆ ಮಾಡಿರಬೇಕು. ಇದರಿಂದ, ಒಟ್ಟಿನಲ್ಲಿ, ವರ್ಗೀಕರಣವೇ ಮುಂದೆ ಭಾರತದ ಸಾಂಪ್ರದಾಯಿಕ ಸಮಾಜದ ಪ್ರಧಾನ ಲಕ್ಷಣ ಆಯಿತು. ಸಮಾಜದ ಅಗತ್ಯವನ್ನು ಪೂರೈಸುವುದರ ಮೂಲಕ ವ್ಯಕ್ತಿಗಳು ಸಮಾಜದಲ್ಲಿ ಪಡೆಯುವ ಸ್ಥಾನದ ಮೂಲಕ ಅಥವಾ ಅವರವರ ವೃತ್ತಿಯ ಮೂಲಕ ವ್ಯಕ್ತಿಗಳನ್ನು ಗುರುತಿಸುವುದು ಎಲ್ಲಾ ಕಾಲಕ್ಕೂ ಸಹಜ. ಯಾವ ಅಗತ್ಯದ ಪೂರೈಕೆ ತುರ್ತಾದದ್ದು, ಅತ್ಯಗತ್ಯವಾದದ್ದು ಅಥವಾ ಕೌಶಲ್ಯವನ್ನು ವಿಶೇಷವಾಗಿ ಅಪೇಕ್ಷಿಸುವಂತಹುದು ಆಗಿರುತ್ತದೆಯೋ ಆ ವೃತ್ತಿಗೆ ಮತ್ತು ಆ ವೃತ್ತಿಯನ್ನು ಅನುಸರಿಸುವವರಿಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯುವುದೂ ಸಹ ಎಲ್ಲಾ ಕಾಲಕ್ಕೂ ಸಹಜ. ಹೀಗೆ ಸಿಗುವ ಪ್ರಾಶಸ್ತ್ಯವನ್ನು ಆಧರಿಸಿದ ವರ್ಗೀಕರಣ, ಶ್ರೇಣೀಕರಣಗಳು ಆನುವಂಶಿಕಗಳಾಗಿ ವ್ಯಕ್ತಿಯ ಘನತೆಗೆ ಕುಂದನ್ನು ತರಬಾರದು ಎನ್ನುವುದು ಒಂದು ಆದರ್ಶವಾಗಿ ಸಮಾಜದಲ್ಲಿ ಮಾನ್ಯ ಆಗಿದ್ದದ್ದು ಒಂದು ಐತಿಹಾಸಿಕ ಸಂಗತಿ.
ಭಾರತದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯದ ಇತಿಹಾಸಕ್ಕೆ ಒಂದು ವಿಶೇಷ ಸ್ಥಾನ ಇದೆ., ಕನ್ನಡ ಮಾತಾಡುವ ಸ್ಥಳೀಯರು, ಕನ್ನಡವಲ್ಲದೆ ಬೇರೆ ಬೇರೆ ಭಾಷೆಗಳನ್ನು ಮಾತಾಡುತ್ತಿದ್ದ ವಿವಿಧ ಧರ್ಮ, ಪಂಗಡದವರು, ಕುಡಿಯರು ಸೋಲಿಗರಂಥ ಆದಿವಾಸಿಗಳು, ಕೊಡವರು, ಹಾಲಕ್ಕಿ ಒಕ್ಕಲುಗಳಂಥವರು, ಆಫ್ರಿಕಾದಿಂದ ಬಂದ ಸಿದ್ಧಿಗಳೇ ಮೊದಲಾದ ಜನವರ್ಗಗಳಿಂದ “ವಿಜಯನಗರ ಸಾಮ್ರಾಜ್ಯವು ಹರಿದಾಸ ಪಂಥ ತಲೆ ಎತ್ತುವ ವೇಳೆಗೆ ಮಾನವಕುಲವೈವಿಧ್ಯವನ್ನು ಬಿತ್ತರಿಸುವ ಚಿತ್ರಶಾಲೆಯಂತೆ ತೋರುತ್ತಿತ್ತು”. ಇವರೆಲ್ಲರ ಶ್ರೇಣೀಕರಣವು ನಿಗದಿಗೊಂಡಿತ್ತು. ಅದು ಅನುಲ್ಲಂಘನೀಯ ಎಂದಾಗಿತ್ತು.
ಪ್ರತಿಯೊಂದು ವರ್ಗವೂ ಅನೂಚಾನವಾಗಿದ್ದ ತನ್ನದೇ ಆದ ಆಚರಣೆ, ನಂಬಿಕೆ, ಅಭ್ಯಾಸ, ರೂಢಿ, ಉಡುಗೆ ತೊಡಿಗೆ, ವಿಧಿ ನಿಷೇಧಗಳನ್ನು ಹೊಂದಿತ್ತು. ಇದರಿಂದಾಗಿ ಪ್ರತಿಯೊಂದು ವರ್ಗವೂ ವಿಶಿಷ್ಟವಾದದ್ದು ಆಗಿತ್ತು. ಆ ವಿಶಿಷ್ಟತೆಯಿಂದಾಗಿ ಆಯಾಯಾ ವರ್ಗದ ಜನರಿಗೆ ಅವರದೇ ಆದ ಅನನ್ಯತೆ ದೊರೆಯುತ್ತಿತ್ತು. ಆದರೂ ಕೆಲ ಕೆಲವು ವರ್ಗಗಳು ಸಾಮಾಜಿಕ ಸ್ಥಾನಮಾನದಲ್ಲಿ ಮೇಲಕ್ಕೆ ಏರಲು ಸತತವಾಗಿ ಪ್ರಯತ್ನ ಪಡುತ್ತಿದ್ದುದರಿಂದ ನಿಗದಿತ ವರ್ಗೀಕರಣ ತನ್ನ ಸಾಂಗತ್ಯವನ್ನು ಕಳೆದುಕೊಂಡಿತ್ತು. ಯಾವ ಯಾವ ಜನವರ್ಗದ ಶಕ್ತಿಗಳು ಪ್ರಗತಿಶೀಲ ಮತ್ತು ಚಲನಶೀಲ ಆಗಿರುತ್ತಿದ್ದವೋ ಅವುಗಳ ಪ್ರಭಾವಕ್ಕೆ ಒಳಗಾಗಿ ಸಾಮಾಜಿಕ ವ್ಯವಸ್ಥೆ ಬದಲಾಗುತ್ತಿತ್ತು ಮತ್ತು ಅಸ್ತವ್ಯಸ್ತ ಆದಂತೆ ತೋರುತ್ತಿತ್ತು. ಆಚರಣೆಯಲ್ಲಿ ವರ್ಣಾಶ್ರಮ ಧರ್ಮವನ್ನು ಉಲ್ಲಂಘಿಸುವುದು ಸರ್ವೇ ಸಾಮಾನ್ಯ ಆಗಿತ್ತು.
ಹೊಸ ತಿರುವಿನ ಅವಶ್ಯಕತೆ: ಒಪ್ಪಿಕೊಂಡಿದ್ದ ವರ್ಗೀಕರಣ ವ್ಯವಸ್ಥೆಯನ್ನು ನಿರ್ಲಕ್ಷಿಸುವುದರಿಂದ ಜನಸಮುದಾಯದ ವರ್ಗದ ಅನನ್ಯತೆಗೂ ಭಂಗ ಬರುತ್ತಿತ್ತು, ವ್ಯಕ್ತಿಯ ಅನನ್ಯತೆಗೂ ಭಂಗ ಬರುತ್ತಿತ್ತು. ಇದನ್ನು ತಡೆಯುವುದಕ್ಕೆ ಇದ್ದ ಎರಡು ಉಪಾಯಗಳು 1. ವರ್ಗೀಕರಣ ವ್ಯವಸ್ಥೆಯನ್ನು ಬಲವಾಗಿ ಪ್ರತಿಪಾದಿಸುವುದು, 2. ವ್ಯಕ್ತಿಯ ಅಂತಸ್ಸತ್ವವನ್ನು ಉನ್ನತೀಕರಿಸುವುದು. ವಿಜಯನಗರ ಸಾಮ್ರಾಟರ ಅಪೇಕ್ಷೆಯ ಮೇರೆಗೆ ಸಾಮ್ರಾಜ್ಯದಲ್ಲಿ ನೆಲೆನಿಂತ ಹರಿದಾಸರಲ್ಲಿ ಪ್ರಮುಖರಾದ ಪುರಂದರದಾಸರು ಎರಡನೆಯ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಜನಜೀವನಕ್ಕೆ ಹೊಸ ತಿರುವನ್ನು ಸಮರ್ಥವಾಗಿ ಕೊಡುವುದರಲ್ಲಿ ಯಶಸ್ವಿಯಾದದ್ದು ಐತಿಹಾಸಿಕ ಸಂಗತಿ.
ಎಲ್ಲ ಸಾಮ್ರಾಜ್ಯಗಳಂತೆ ವಿಜಯನಗರ ಸಾಮ್ರಾಜ್ಯದಲ್ಲಿಯೂ ಅರಸೊತ್ತಿಗೆಗಳ ಏರಾಟ, ಅಧಿಕಾರಿಗಳ ಒಳಸಂಚು, ಕದನ ಕುತೂಹಲ, ಧಾಳಿ ದಂಗೆಗಳ ಬೆದರಿಕೆ, ಆಡಳಿತದ ಒಡಕು ಮತ್ತು ಬಿರುಕುಗಳು ಇದ್ದರೂ ಈ ಸಾಮ್ರಾಜ್ಯದಿಂದಾಗಿ ಭಾರತದ ದಕ್ಷಿಣದ ಇಡೀ ಭೂಭಾಗ ಸಾಂಸ್ಕೃತಿಕ ಎಂದು ಗುರುತಿಸಬಹುದಾದ ಒಂದು ನೆಲೆಯಲ್ಲಿ ಒಂದುಗೂಡಿತ್ತು. ಈ ಸಾಮ್ರಾಜ್ಯದ ಪಾಳೆಯಗಾರರು, ನಾಯಕರು, ಮಂಡಳೇಶ್ವರರು, ದುರ್ಗಾಧಿಪತಿಗಳು, ಸಂಸ್ಥಾನಿಕರೇ ಮೊದಲಾದವರು ಸಂಸ್ಕೃತಿಯ ಪ್ರಚಾರಕ್ಕೆ ಉದಾರ ಹಸ್ತ ಚಾಚಿದ್ದರು. ಅದರಿಂದ ಪುರಂದರದಾಸರೇ ಮೊದಲಾದ ಹರಿದಾಸರಿಗೆ ಮಾರ್ಗೀ ಸಂಸ್ಕೃತಿಯನ್ನು ದೇಸೀ ಸಂಸ್ಕೃತಿಯನ್ನಾಗಿ ರೂಪಾಂತರಿಸಲು ಸಾಧ್ಯವಾಯಿತು ಮತ್ತು ಅದನ್ನು ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಿಸಲು ಸಹ ಸಾಧ್ಯವಾಯಿತಿ ಎನ್ನುವುದು ಸಹ ಐತಿಹಾಸಿಕ ಸಂಗತಿ.
1485ರಿಂದ 1565ರ ವರೆಗೆ ಜೀವಿಸಿದ್ದ ಪುರಂದರದಾಸರ ಬಗ್ಗೆ ವಿಜಯನಗರ ಸಾಮ್ರಾಟರು ಸ್ನೇಹ ಗೌರವಾದರಗಳನ್ನು ಹೊಂದಿದ್ದರು ಆದರೂ ಅವರು ರಾಜಾಶ್ರಯವನ್ನು ತಿರಸ್ಕರಿಸಿ ಊಂಛವೃತ್ತಿಯನ್ನು ಹಿಡಿದು ಬದುಕಿದರು. ಜನಸಾಮಾನ್ಯರೊಂದಿಗೆ ಆತ್ಮೀಯವಾಗಿ ಬೆರೆತರು. ಅವರ ನಡಾವಳಿಗಳನ್ನು ಸೂಕ್ಷ್ಮವಾಗಿ ಗಮನಿಸಿದರು. ಸಮಾಜದ ಭದ್ರತೆಗೆ ವ್ಯಕ್ತಿ-ಜೀವನದಲ್ಲಿ ಸದಾಚಾರ ನಿಷ್ಠೆ ಮುಖ್ಯವಾದದ್ದು, ತಾತ್ತ್ವಿಕ ವಾದ-ವಿವಾದಗಳಿಗಿಂತ ತತ್ತ್ವಗಳ ಸಮನ್ವಯವೇ ಹಿತಕರವಾದದ್ದು ಎ೦ಬುದನ್ನು ಮನಗ೦ಡಿದ್ದ ಪುರಂದರದಾಸರು ತಾತ್ತ್ವಿಕ, ಮಾನವಿಕ ಮತ್ತು ದೈವಭಕ್ತಿಗಳ ನೆಲೆಯಲ್ಲಿ ಜನಸಾಮಾನ್ಯರ ಬದುಕಿಗೆ ಅರ್ಥವನ್ನೂ, ಪ್ರಬುದ್ಧತೆಯನ್ನೂ ತಂದುಕೊಡಲು ಊರೂರು, ಕೇರಿ ಕೇರಿ ತಿರುಗಾಡಿದುದೂ ಐತಿಹಾಸಿ ಸಂಗತಿಯೇ.
ಪುರಂದರ ದಾಸರ ಸಮಸ್ಯೆ: ಎಲ್ಲ ಸಮಾಜಗಳಂತೆ ಭಾರತೀಯ ಸಮಾಜವೂ ಸಹ ಧರ್ಮದ ನೆಲೆಗಟ್ಟಿನಲ್ಲಿಯೇ ನಿಂತಿದೆ. ಭಾರತೀಯ ಧರ್ಮವು ಆಚಾರ ಪ್ರಧಾನವಾದದ್ದು. ಆಚಾರಗಳು ರೂಢಿಗತವಾದದ್ದು. ರೂಢಿಗಳು ಯಾಕೆ ಬಂದಿವೆ, ಅವು ಅನುಲ್ಲಂಘನೀಯವೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸಲಾರದಷ್ಟು ಅವು ಪ್ರಾಚೀನ. ರೂಢಿಗಳನ್ನು ಉಲ್ಲಂಘಿಸುವ, ಮಾರ್ಪಡಿಸುವ ಧ್ಯರ್ಯ ಆಕಸ್ಮಿಕ. ಅಂಥ ಧೈರ್ಯದ ಪ್ರದರ್ಶನದಿಂದ ಉಂಟಾಗಬಹುದಾದ ಅನೂಹ್ಯ ಅಪಘಾತ, ಆಘಾತಗಳ ಬಗೆಗಿನ ಭಯವೇ ಸಹಜವಾದದ್ದು. ಈ ಭಯವನ್ನು ನಿವಾರಿಸುವುದು ರೂಢಿಗತ ಬದುಕಿಗೆ ಕಾಯಕಲ್ಪ ಮಾಡಲು ಬಯಸಿದ್ದ ಪುರಂದರದಾಸರ ಮುಂದೆ ಇದ್ದ ಒಂದು ಗಂಭೀರ ಸಮಸ್ಯೆ ಆಗಿತ್ತು.
ತತ್ತ್ವರಹಿತವಾದ ಧರ್ಮವು “ಧರ್ಮೋ ರಕ್ಷತಿ ರಕ್ಷಿತಃ” ಎಂಬ ಉಕ್ತಿಯನ್ನು ಸತ್ಯಗೊಳಿಸಲಾರದು ಎಂಬುದು ಭಾರತೀಯ ತಾತ್ವಿಕ ಚಿಂತನೆಯ ಬಹು ಮುಖ್ಯ ಸಾರ. ಆಚಾರ ಪ್ರಧಾನವಾದ ಧರ್ಮಕ್ಕೆ ಅನುಗುಣವಾದ ತತ್ತ್ವವೋ ತತ್ತ್ವಕ್ಕೆ ಅನುಗುಣವಾದ ಧರ್ಮವೋ ಎಂಬುದು ಸುಲಭವಾಗಿ ನಿರ್ಧರಿಸಲಾಗದ ಜಿಜ್ಞಾಸೆ. ಇದರಿಂದಾಗಿ ಪುರಂದರದಾಸರ ಮುಂದೆ ಇದ್ದ ಒಂದು ಪಂಥಾಹ್ವಾನ ತಾತ್ವಿಕತೆ ಮತ್ತು ಧಾರ್ಮಿಕತೆಗಳು ಹಾಲು ಸಕ್ಕರೆಗಳಂತೆ ಬೆರೆತು ಅಧರಕ್ಕೆ ಮತ್ತು ಉದರಕ್ಕೆ ಮಧುರ ಆಗುವಂತೆ ನೋಡಿಕೊಳ್ಳುವುದು. ಹೇಗೆ ಎಂಬುದು ಆಗಿತ್ತು.
“ಉದಾರ ಚರಿತಾನಾಂತು ವಸುಧೈವ ಕುಟುಂಬಕಂ” ಎಂಬ ಸಾಮಾಜಿಕ-ನೈತಿಕ ಆದರ್ಶ ನಮ್ಮದು. ಪರಬ್ರಹ್ಮನೊಂದಿಗೆ ಸಾಮೀಪ್ಯ, ಸಾಲೋಕ್ಯ, ಸಾರೂಪ್ಯ, ಸಾಯುಜ್ಯಗಳ ಅಖಂಡತೆ, ಅಭೇದತೆ, ಐಕ್ಯತೆಯನ್ನು ಸಾರಿದ ತಾತ್ತ್ವಿಕತೆ ನಮ್ಮದು. “ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ” ಎಂದು ದೈವಗಳ ಅಭಿನ್ನತೆ ಏಕತೆಯನ್ನು ಪ್ರತಿಪಾದಿಸಿದ ಧಾರ್ಮಿಕ ನಿಲುವೂ ನಮ್ಮದು. ಆದರೆ ಈ ಸಾಮಾಜಿಕ ನೈತಿಕ ತಾತ್ತ್ವಿಕ ಧಾರ್ಮಿಕ ಆದರ್ಶಕ್ಕೆ ಸಂಪೂರ್ಣ ವಿರುದ್ಧವಾಗಿ ಪುರಂದರದಾಸರ ಕಾಲದ ಸಮಾಜದಲ್ಲಿ ಬಹುದೈವಗಳ ಉಪಾಸನೆ, ದೇವರ ಬಹುತ್ವದಲ್ಲಿಯ ನಂಬಿಕೆಗಳು ಯಾವ ರೀತಿಯಲ್ಲಿಯೂ ಉದಾತ್ತತೆಯನ್ನು ಕಾಣಲಾಗದ ದೈವಿಕತೆಯ ಪರಿಕಲ್ಪನೆಯ ಹಿನ್ನೆಲೆಯನ್ನು ಹೊಂದಿದ್ದವು; ಪ್ರಾಣಿಬಲಿ, ಮದ್ಯ-ನೈವೇದ್ಯ ಇತ್ಯಾದಿ ಅಮಾನವೀಯ ಆಚರಣೆಗಳು ಇದ್ದವು; ಊರಿಗೊಂದು, ಗುಂಪಿಗೊಂದು, ಕುಲಕ್ಕೊಂದು ಎಂದೆನ್ನಬಹುದಾದ ಧಾರ್ಮಿಕ ಸಂಸ್ಥೆಗಳ ಸ್ಥಾಪನೆಯಾಗಿದ್ದವು; ಇವುಗಳಲ್ಲಿ ಬಗೆ ಬಗೆಯ, ಸ್ತರ ಸ್ತರದ ಐಷಾರಾಮಿ ಬದುಕೇ ಮೊದಲಾದ ಅಸಂಗತ ರೀತಿನೀತಿಗಳು ಇದ್ದವು. ಈ ವೈರುಧ್ಯತೆಗಳನ್ನು ನಿವಾರಿಸಿ ನಿಜ-ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯುವ ಸವಾಲೂ ಪುರಂದರದಾಸರ ಮುಂದೆ ಇತ್ತು.
ಎಲ್ಲ ಸಮಾಜಗಳಂತೆ ಭಾರತೀಯ ಸಮಾಜವೂ ಒಂದು ಕುಟುಂಬದಂತಹ ಸಮಾಜ. ಇಲ್ಲಿ ಅತ್ಯಂತ ಪ್ರೌಢರಾದವರೂ, ಅರೆಬರೆ ಅರಿತವರೂ, ಪ್ರಖಾಂಡ ಪಂಡಿತರೂ, ವಿವೇಕಿಗಳೂ, ಮೂರ್ಖರೂ, ಹಟವಾದಿಗಳೂ, ತಲೆಹಿಡುಕರೂ ಎಲ್ಲರೂ ಸದಸ್ಯರೇ. ಇವರೆಲ್ಲರ ನಡುವೆ ಸಾಮರಸ್ಯತೆ, ಹೊಂದಾಣಿಕೆ, ಸಹೃದಯತೆ, ಆತ್ಮೀಯತೆಯ ಸಂಬಂಧ ಇವುಗಳನ್ನು ಸ್ಥಾಪಿಸುವುದು ಸುಲಭ-ಸಾಧ್ಯವಾದದ್ದೇನೂ ಆಗಿರಲಿಲ್ಲ. ಪುರಂದರದಾಸರ ಕಾಲದ ವೇಳೆಗಾಗಲೇ ಬಸವಾದಿ ಶಿವಶರಣರು ಅಂತರಂಗ ಶುದ್ಧಿಗೆ, ದೇಹವೇ ದೇವಾಲಯ ಎಂಬ ಭಾವಕ್ಕೆ, ಶರಣಸತಿ ಲಿಂಗಪತಿ ಎಂಬ ದೇವರೊಂದಿಗಿನ ಆತ್ಮೀಯ ಅನುಬಂಧಕ್ಕೆ, ದಾಸೋಹ ಹಾಗೂ ಕಾಯಕಗಳೆಂಬ ಸಾಮಾಜಿಕ ಸೇವೆಗೆ ಪ್ರಥಮ ಪ್ರಾಶಸ್ತ್ಯ ನೀಡಿ ಇವುಗಳ ಅಡಿಯಲ್ಲಿ ಜನಾಂದೋಲನ ನಡೆಸಿ ಯಶಸ್ವಿಯಾಗಿದ್ದರು. ಆದರೆ ಇವರಿಂದ ಮೇಲು-ಸ್ತರದಲ್ಲಿ ಪ್ರಭಾವಿತರಾದ ಜನರು ತಮ್ಮ ವರ್ಗದ ಹಕ್ಕು ಬಾಧ್ಯತೆ ಕರ್ತವ್ಯಗಳನ್ನು ಕಟ್ಟುನಿಟ್ಟಾಗಿ ಭಾವಿಸುತ್ತಿರಲಿಲ್ಲ.
ಸಾಮಾಜಿಕ ರಚನೆಯಲ್ಲಿ ಜನಸಮುದಾಯ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯರೇ ಮೊದಲಾದವರ ಅನುಯಾಯಿಗಳಾಗಿ ಪರಸ್ಪರರ ಮಧ್ಯೆ ಅಂತರವನ್ನು ಕಾಯ್ದುಕೊಳ್ಳುತ್ತಿದ್ದರು. ಇವರೆಲ್ಲರಲ್ಲೂ ಧಾರ್ಮಿಕ, ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ವೈದಿಕರು ಇದ್ದರು. ಜೊತೆಗೆ ಬಗೆ ಬಗೆಯ ವೃತ್ತಿಜೀವಿಗಳು, ಅಧಿಕಾರಿಗಳು, ನೌಕರರು, ಜಮೀನುದಾರರು, ವರ್ತಕರು, ವಿವಿಧ ಕಸಬುಗಳನ್ನು ನಡೆಸುತ್ತಿದ್ದ ಲೌಕಿಕರೂ ಇದ್ದರು. ಇವರಲ್ಲಿ ಹಲವಾರು ಉಪ ಪಂಗಡಗಳೂ ಇದ್ದವು. ಆಹಾರ, ಉಡುಪು ಮುಂತಾದ ಬಗೆ ಬಗೆಯ ಇರಸರಿಕೆಗಳೂ ಇದ್ದವು. ಇವರೆಲ್ಲರೂ ತಂತಮ್ಮ ಮಧ್ಯೆ ದೂರಾಂತರವನ್ನು ಕಾಯ್ದುಕೊಳ್ಳುತ್ತಿದ್ದರು.
ಈ ರೀತಿ ಸಾಮಾಜಿಕ ಜೀವನದಲ್ಲಿ ಕಾಣಿಸಿಕೊಂಡ ಇಬ್ಬಂದಿತನವನ್ನು ಬಯಲು ಮಾಡಿ ನಿಜವಾದ ಮಾನವಿಕ ಜೀವನದ ರೀತಿಯನ್ನು ಮನಗಾಣಿಸಿಕೊಡಬೇಕಾದ ಅಗತ್ಯ ಇತ್ತು. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ಪುರಂದರದಾಸರು ತಮ್ಮ ಹೆಗಲ ಮೇಲೆ ತಾವೇ ಹೊತ್ತರು.
ಪುರಂದರ ದಾಸರ ಮಾರ್ಗ: ವಿವಿಧ ಧಾರ್ಮಿಕತೆಗಳು ದೈವದ ಆರಾಧನೆ, ಬದುಕಿನ ತಾತ್ತ್ವಿಕ ನೆಲೆಗಟ್ಟು, ಧಾರ್ಮಿಕ-ನೈತಿಕ ಜೀವನರೀತಿಗಳ ಬಗೆಗೆ ಗೊಂದಲ ಉಂಟುಮಾಡುವುದನ್ನು ಪುರಂದರದಾಸರು ಗುರುತಿಸಿದರು. ಧಾರ್ಮಿಕ ರೀತಿನೀತಿಗಳ ಶಕ್ತಿಯುತ ಪ್ರದರ್ಶನ, ಸ್ಪರ್ಧಾತ್ಮಕ ಪ್ರತಿಪಾದನೆ ಮತ್ತು ಅವುಗಳ ಅನುಯಾಯಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದೇ ಮೊದಲಾದವುಗಳು ಧರ್ಮದ ವಿಷಯದಲ್ಲಿ ಅನುಮಾನ ಸಂದೇಹಗಳನ್ನು ಹುಟ್ಟಿಸುತ್ತಿದ್ದುದನ್ನು ಸಹ ಗುರುತಿಸಿದರು. ಇಂಥ ಪರಿಸರದಲ್ಲಿ ಜನಸಾಮಾನ್ಯರಿಗೆ ಧಾರ್ಮಿಕತೆ, ಆಧ್ಯಾತ್ಮಿಕತೆಯನ್ನು ರೂಢಿಸಿಕೊಳ್ಳಲು ಪುರಾಣ ಮತ್ತು ಹರಿಕಥೆಗಳ ಶ್ರವಣ, ಹಬ್ಬಹರಿದಿನಗಳು ಮತ್ತು ವ್ರತಾಚರಣೆಗಳ ಹೊರತಾಗಿ ಬೇರೆ ಮಾಧ್ಯಮ ಇಲ್ಲ ಎಂಬುದನ್ನು ಪುರಂದರದಾಸರು ಮನವರಿಕೆ ಮಾಡಿಕೊಂಡರು. ಪಾಪ ಪುಣ್ಯಗಳಿಗೆ ಪೂರಕವಾಗಿ ರೂಢಿಗತವಾಗಿದ್ದ ವಿಧಿ ನಿಷೇಧಗಳ ಹೊರತಾಗಿ ನಿಜ-ಧರ್ಮದ ಪರಿಕಲ್ಪನೆಯನ್ನು ಜನಸಾಮಾನ್ಯರಲ್ಲಿ ಮೂಡಿಸಲು ಬೇರೆ ಮಾರ್ಗ ಇಲ್ಲ ಎಂಬುದನ್ನು ಕಂಡುಕೊಂಡರು. ಇವೆಲ್ಲವನ್ನೂ ಭಾವಿಸಿ ಸಮಾಜಕ್ಕೆ ಹೊಸ ಚಿಕಿತ್ಸಕ ತಿರುವನ್ನು ಕೊಡಲು ಮತ್ತು ಮೌಲ್ಯಾಧಾರಿತ ಸಮಾಜವನ್ನು ಕಟ್ಟಲು ಪರಿಶ್ರಮಿಸಿದರು.
ದೈವನಾಮಸ್ಮರಣೆಯ ಮಹತ್ವವನ್ನು ಮನಗಾಣಿಸಿಕೊಡುವುದರ ಮೂಲಕ ಜನರ ಮನಸ್ಸನ್ನು ಅಲೌಕಿಕ ಚಿಂತನೆಯ ನೆಲೆಯಲ್ಲಿ ನಿಲ್ಲಿಸುವುದು ಮೌಲ್ಯಾಧಾರಿತ ಸಮಾಜ-ನಿರ್ಮಾಣದ ಘನ ಅಸ್ತಿಭಾರ ಎಂದು ತಿಳಿದ ಪುರಂದರ ದಾಸರು “ಹರಿಸ್ಮರಣೆ ಮಾಡೋ ನಿರಂತರ| ಪರಗತಿಗೆ ಇದು ನಿರ್ಧಾರ| ದುರಿತ ಗಜಕ್ಕೆ ಕಂಠೀರವನೆನಿಸಿದ| ಶರಣಾಗತ ರಕ್ಷಕ ಪಾವನ ನೀ” ಎಂದು ಹಲವಾರು ಪೌರಾಣಿಕ ಐತಿಹಾಸಿಕ ಸಾಮಾಜಿಕ ಘಟನೆಗಳ ಮೂಲಕ ಮನುಷ್ಯನ ದೈಹಿಕ ಮಾನಸಿಕ ಆರೋಗ್ಯಕ್ಕೆ ದೈವದ ನಾಮಸ್ಮರಣೆ ಅತ್ಯಗತ್ಯ ಎಂಬುದನ್ನು ಪ್ರತಿಪಾದಿಸಿದರು. “ಪಾತಕಿಯಾಗಿರಲಿ, ಸರ್ವ ಪ್ರಾಣಿ ಘಾತಕಿಯಾಗಿರಲಿ, ದುಷ್ಕರ್ಮಿಯಾಗಿರಲಿ, ಕಡುಮೂರ್ಖನಾಗಿರಲಿ, ಜಡನಾಗಿರಲಿ ಗೋವಿಂದನ ಸ್ಮರಣೆಯನ್ನು ನೆರೆ ನಂಬಿ ಮಾಡಿದರೆ ಸಕಲ ತೀರ್ಥಕ್ಷೇತ್ರಗಳಲ್ಲಿ ಮಾಡಿದ ಪುಣ್ಯಕಾರ್ಯಗಳ ಫಲ ದೊರೆಯುತ್ತದೆ” ಎಂದು ಸಾರಿದರು.
“ವಿಧಿ ನಿನ್ನ ಸ್ಮರಣೆ; ನಿಷೇಧ ವಿಸ್ಮೃತಿ ಎಂಬ ವಿಧಿಯೊಂದೆ ನಿನ್ನವರಿಗೆ ಹರಿಯೆ”; “ಈ ಶರೀರವು ನಿತ್ಯವಲ್ಲ ಎಂದು ತಿಳಿದು ಕಾಮದಯ್ಯನ ಕಥೆಯ ಬರೆದು ಭಾಗವತ ಶ್ರವಣ ಮಾಡಿದರೆ ಪಾಪಗಳು ಸುಟ್ಟುಹೋಗುತ್ತವೆ”; “ಜ್ಞಾನವನರಿಯದ ಮೂಢಾತ್ಮನಿಗಾಗಲೀ, ವೇದಶಾಸ್ತ್ರಗಳನ್ನೋದಿದ ಪಂಡಿತಾತ್ಮನಿಗಾಗಲೀ, ನಾಲ್ಕು ಸಾಧನಗಳನ್ನು ಸಿದ್ಧಿಸಿಕೊಳ್ಳದವನಿಗಾಗಲೀ ಹರಿಯ ನಾಮಸ್ಮರಣೆಯೇ ದಿವ್ಯೌಷಧ” ಎಂದು ಹರಿನಾಮಸ್ಮರಣೆಯ ಮಹತ್ವವನ್ನು ಕೊಂಡಾಡಿದರು.
“ಕೂಡುವಾಗ, ನಿಲ್ಲುವಾಗ, ನಡೆದಾಡುವಾಗ, ವಿನೋದಕೂಟದಲ್ಲಿದ್ದಾಗ, ಕನಸು ಕಾಣುವಾಗ, ಕೋಪಗೊಂಡಿದ್ದಾಗ” ಹೀಗೆ ಎಲ್ಲ ಸಂದರ್ಭಗಳಲ್ಲಿ ಸಂತತ ಹರಿಯ ಸಾಸಿರ ನಾಮವನ್ನು ಹೃದಯದೊಳಗೆ ಇರಿಸಿಕೊಂಡಿದ್ದರೆ ನಾರಾಯಣನ ನಾಮಸ್ಮರಣೆಯ ಸಾರಾಮೃತವನ್ನು ಸವಿದ ಅನುಭವ ಉಂಟಾಗುತ್ತದೆ” ಎಂಬುದನ್ನು ಸ್ವಾನುಭವದಿಂದ ಮನಗಾಣಿಸಿಕೊಟ್ಟರು.
“ಮಿಂದದ್ದೇ ಗಂಗಾದಿ ಪುಣ್ಯತೀರ್ಥಂಗಳು, ಸಾಧುಜನರು ಬಂದದ್ದೇ ಪುಣ್ಯಕಾಲ, ನಿಂದದ್ದೇ ಗಯೆ ವಾರಣಾಸಿ ಕುರುಕ್ಷೇತ್ರ, ಕಂಡದ್ದೆಲ್ಲ ನಿನ್ನ ಮೂರ್ತಿಗಳು, ಶಯನವೇ ದಂಡ ಪ್ರಣಾಮ, ತಂಡದ ಕ್ರಿಯೆಗಳೇ ನಿನ್ನಯ ಪೂಜೆ, ನಡೆದಾಡಿದ್ದೆಲ್ಲ ಪ್ರದಕ್ಷಿಣೆ, ನುಡಿದದ್ದೆಲ್ಲ ಗಾಯತ್ರಿ – ವಿಷಯಸುಖವನ್ನು ಇಂದ್ರಿಯಾಗ್ನಿಯಲಿ ಹೋಮ ಮಾಡಿದವರಿಗೆ” ಎಂದು ದೈನಂದಿನ ಧಾರ್ಮಿಕತೆಯನ್ನು ಸರಳವಾಗಿ ನಿರೂಪಿಸಿದರು.
“ಪವಿತ್ರೋದಕದಿ ಪಾದ ತೊಳೆಯುವೆ ಎಂದರೆ ಪಾವನಳಾದ ಗಂಗೆ ನಿನ್ನ ಪಾದೋದ್ಭವೆ; ನವ ಕುಸುಮವ ಅರ್ಪಿಸುವೆ ಎಂದರೆ ಸೃಷ್ಟಿಕರ್ತೃ ಬ್ರಹ್ಮನೇ ಕಮಲನಾಭ ಸಂಭವ; ದೀಪವನ್ನು ಬೆಳಗುವೆ ಎಂದರೆ ನಿನ್ನ ಕಣ್ಣುಗಳೇ ಸಪ್ತ ದ್ವೀಪಗಳನ್ನು ಬೆಳಗುತ್ತಿವೆ; ಆಪೋಷನವನ್ನಾದರೂ ಕೊಡುವೆ ಎಂದರೆ ಏಳು ಸಮುದ್ರಗಳೇ ನಿನಗೆ ಆಪೋಷನವಾಗಿಬಿಟ್ಟಿವೆ; ಕಾಣಿಕೆ ಕೊಟ್ಟು ಕೈ ಮುಗಿಯುವೆ ಎಂದರೆ ಸಿರಿದೇವಿಯೇ ನಿನಗೆ ರಾಣಿವಾಸ”; ಹೀಗಿರುವಾಗ ನಾಮಸ್ಮರಣೆ, ಧ್ಯಾನದ ಹೊರತಾಗಿ ಬೇರೆ ಆಡಂಬರದ ವೈಭವಯುತ ಪೂಜೆಯ ಅಗತ್ಯ ಇಲ್ಲ ಎಂದು ರೂಢಿಗತ ಪೂಜೆಗೆ ಹೊಸ ಆಯಾಮವನ್ನು ಕೊಟ್ಟರು.
“ವಿಷವಿಕ್ಕಿದವನಿಗೆ ಷಡ್ರಸವನುಣಿಸಲು ಬೇಕು, ದ್ವೇಷ ಮಾಡಿದವನ ಪೋಷಿಸಲು ಬೇಕು, ಪುಸಿಯಾಡಿ ಕೆಡಿಸುವವನ ಹಾಡಿ ಹರಸಲು ಬೇಕು, ಮೋಸ ಮಾಡುವವನ ಹೆಸರ ಮಗನಿಗಿಡಬೇಕು; ಹಿಂದೆ ನಿಂದಿಸುವವರನ್ನು ವಂದಿಸುತ್ತಲಿರಬೇಕು, ಬಂಧನದೊಳಿಟ್ಟವರ ಬೆರೆಯಬೇಕು, ಕೊಲ್ವ ವೈರಿಯ ಮನೆಗೆ ನಡೆದು ತಾ ಹೋಗಬೇಕು, ಕುಂದೆಣಿಸುವವರ ಗೆಳೆತನ ಮಾಡಬೇಕು, ಕೊಂಡೊಯ್ದು ಬಡಿಯುವವರ ಕೊಂಡಾಡುತಿರಬೇಕು, ಕ೦ಡು ಸಹಿಸದವರ ಸನ್ಮಾನಿಸಬೇಕು, ಪುಂಡರೀಕಾಕ್ಷ ಶ್ರೀಪುರಂದರವಿಠ್ಠಲನ ಕೊಂಡಾಡಿ ತಾ ಧನ್ಯನಾಗಬೇಕು” ಎಂದು ಧಾರ್ಮಿಕತೆಗೆ ಹೊಸ ಅರ್ಥ-ವ್ಯಾಖ್ಯೆಯನ್ನು ಕೊಟ್ಟರು. ಪುರಂದರ ದಾಸರ ಈ ರೀತಿಯ ಧಾರ್ಮಿಕ ನಿಲುವು ವಿಶೇಷವಾದದ್ದು.
ಬುದ್ಧ, ಏಸುಕ್ರಿಸ್ತ ಇಬ್ಬರೂ ವ್ಯಕ್ತಿಯ ನೈತಿಕ ನಿಲುವು ಇದೇ ರೀತಿ ಇರಬೇಕು ಎಂದು ಪ್ರತಿಪಾದಿಸಿದ್ದಾರೆ. ಆದರೆ ಅವರು ಇದಕ್ಕೆ ದೈವಭಕ್ತಿಯ ನಂಟನ್ನು ಕಲ್ಪಿಸಿಲ್ಲ. ಬಸವಾದಿ ಶರಣರು ಕಳಬೇಡ ಕೊಲಬೇಡ ಇತ್ಯಾದಿ ಸಪ್ತಶೀಲಗಳನ್ನು ಪ್ರಸ್ತಾಪಿಸಿ ವ್ಯಕ್ತಿಯ ನೈತಿಕತೆಗೂ ದೈವಭಕ್ತಿಗೂ ನಂಟನ್ನು ಕಲ್ಪಿಸಿದ್ದಾರೆ. ಆದರೆ ಈ ಸಪ್ತಶೀಲಗಳು ನಿರುಪಾಧಿಕವಾದ ಧಾರ್ಮಿಕ ನೈತಿಕ ಸಹಿಷ್ಣುತೆಯನ್ನು ಪ್ರಸ್ತಾಪಿಸುವುದಿಲ್ಲ. ವಿಜಯನಗರ ಸಾಮ್ರಾಟರ ಮುಖ್ಯ ಆಶಯವು ಸರ್ವಸಮಾನತೆ, ಸರ್ವಧರ್ಮ ಸಹಿಷ್ಣುತೆ, ಸಮಗ್ರತೆ, ಸಾಮರಸ್ಯತೆಗಳನ್ನು ಎತ್ತಿಹಿಡಿಯುವುದು ಆಗಿತ್ತು. ಇದಕ್ಕೆ ಭಾರತೀಯ ತಾತ್ತ್ವಿಕ ನೈತಿಕ ಧಾರ್ಮಿಕ ಆಧ್ಯಾತ್ಮಿಕ ನೆಲೆಗಟ್ಟು ಇರಬೇಕು ಎಂದು ಅವರು ಬಯಸಿದ್ದರು. ವಿಜಯನಗರ ಸಾಮ್ರಾಟರ ಈ ಆಶಯಕ್ಕೆ ಹರಿದಾಸರು, ಅದರಲ್ಲೂ ಪುರಂದರದಾಸರು ವಿಶೇಷವಾಗಿ ಸ್ಪಂದಿಸಿ ಜನಜಾಗೃತಿಗಾಗಿ ದುಡಿದರು.
ಭಗವದ್ಗೀತೆಯದೂ ಸಹ ಇದೇ ನಿಲುವೇ. ಅದು ಸ್ಥಿತಪ್ರಜ್ಞನಾದವನು ಆನೆಯನ್ನೂ ನಾಯಿಯನ್ನೂ, ಪಂಡಿತನನ್ನೂ ಶ್ವಪಚನನ್ನೂ, ಚಿನ್ನವನ್ನೂ ಮಣ್ಣನ್ನೂ ಸಮಾನವಾಗಿ ನೋಡುತ್ತಾನೆ ಎಂದು ಹೇಳುವುದಕ್ಕೆ ತಮ್ಮ ಕಾಲಕ್ಕೆ ಅನ್ವಯವಾಗುವ ಅರ್ಥವಿಸ್ತಾರವನ್ನು ಪುರಂದರದಾಸರು ಕಲ್ಪಿಸಿದರು. ವ್ಯಕ್ತಿ ಮತ್ತು ಸಮಾಜ ಪರಸ್ಪರ ಪೂರಕ; ವ್ಯಕ್ತಿಯ ಭಾವನೆ ವಿಚಾರ ಕ್ರಿಯೆಗಳು ಸತ್ಯದ ಆಧಾರವನ್ನು ಹೊಂದಿದ್ದರೆ, ವ್ಯವಸ್ಥೆಯ ಪ್ರತಿಪಾದಕ ಆಗಿದ್ದರೆ ಸಹಜವಾಗಿ ಸಮಾಜವು ಅಧ್ಯಾತ್ಮ- ಪರವಾದದ್ದು ಮತ್ತು ಮಾನವೀಯತೆಯುಳ್ಳದ್ದು ಆಗಿರುತ್ತದೆ ಎಂದು ಭಗವದ್ಗೀತೆಯಂತೆ ಪುರಂದರದಾಸರು ಯೋಚಿಸಿದ್ದರು.
ನಮ್ಮ ಸಮಾಜದ ಮುಖ್ಯ ದೋಷ ಶ್ರೇಷ್ಠ ಕನಿಷ್ಟ ಎಂಬ ಭೇದಭಾವ ಪ್ರತಿಪಾದನೆ ಎಂಬುದನ್ನು ಪುರಂದರದಾಸರು ಗುರುತಿಸಿದ್ದರು. ಊರಿನಾಚೆ ಇರುವವರನ್ನು ಹೊಲೆಯರು ಎಂದು ಅವರ ಕಾಲದಲ್ಲಿ ರೂಢಿಗತವಾಗಿ ಗುರುತಿಸುತ್ತಿದ್ದುದನ್ನು ಅವರು ಪ್ರಶ್ನಿಸಿದರು . “ಶೀಲವಂತನಲ್ಲದವನು ಹರಿಕಥೆ ಕೇಳದವನು ಅರಸನಿಗೆ ಕೇಡು ಬಗೆಯುವವನು, ಕೊಂಡ ಸಾಲವನ್ನು ತೀರಿಸದೆ ಇರುವವನು, ಉಂಡ ಮನೆಗೆ ಎರಡು ಬಗೆಯುವವನು, ಹಣವಿದ್ದರೂ ದಾನ ಮಾಡದಿರುವವನು, ವಿಷ ಹಾಕಿ ಕೊಲ್ಲುವವನು, ಬದ್ಧತೆ ಇಲ್ಲದವನು, ತನಗೆ ತಾನೇ ತಾನು ಶುದ್ಧ ಎಂದು ಸಾರಿಕೊಳ್ಳುವವನು, ಮೋಸದಲ್ಲಿ ಇನ್ನೊಬ್ಬರ ಬದುಕನ್ನು ಕೆಡಿಸುವವನು, ಸುಳ್ಳು ಹೇಳುವವನು, ತಿಳಿದೂ ತಿಳಿದೂ ಸದಾಚಾರಗಳನ್ನು ಪಾಲಿಸದೇ ಇರುವವನು, ಪರಸತಿಗೆ ಅಳುಕದೇ ಇರುವವನು ಗುರು ಹಿರಿಯರಿಗೆ ನಮಸ್ಕರಿಸದೇ ಇರುವವನು, ದೇವರನ್ನು ಸ್ಮರಿಸದೇ ಇರುವವನು ಹೊಲೆಯ” ಎಂದು ಜನಸಾಮಾನ್ಯರಿಗೆ ಅರ್ಥವಾಗಬಹುದಾದ ಮತ್ತು ವಿಸ್ತಾರವಾದ ಹೊಸ ಅರ್ಥವನ್ನು ಪರಿಚಯಿಸಿದರು; ತಮ್ಮನ್ನು ತಾವೇ ವಿಶ್ಲೇಷಣೆಗೆ ಒಡ್ಡಿಕೊಳ್ಳುವಂತೆ ಮಾಡಿದರು; ಪೊಳ್ಳು ಶ್ರೇಷ್ಠತೆಯ ಅಹಂಕಾರಕ್ಕೆ ಮದ್ದೆರೆದರು.
ನಮ್ಮ ಸಮಾಜದ ಇನ್ನೊಂದು ಮುಖ್ಯ ದೋಷವಾದ ಬೂಟಕತನವನ್ನು ಪುರಂದರದಾಸರು ಬಯಲಿಗೆಳೆದರು. “ಎಲ್ಲವನ್ನೂ ಬಲ್ಲೆ ಎನ್ನುವಿರಿ ಅವಗುಣಗಳು ಮಾತ್ರ ಇದ್ದ ಹಾಗೇ ಇವೆ; ಕಾಮವನ್ನೂ ಬಿಟ್ಟಿಲ್ಲ, ಅಹಂಕಾರ ಒಂದಿಷ್ಟೂ ಕಡಿಮೆ ಆಗಿಲ್ಲ, ತಾಮಸ ಬುದ್ಧಿ ಹಾಗೇ ಇದೆ; ಮಲವನ್ನು ತೊಳೆದುಕೊಳ್ಳಬಲ್ಲಿರೇ ವಿನಾ ಮನವನ್ನು ತೊಳೆದುಕೊಳ್ಳಲಾರಿರಿ; ಅಂಧನ ಕೈಯಲ್ಲಿ ಕನ್ನಡಿ ಇದ್ದಂತೆ ನೀವು ನಿಮ್ಮ ಸ್ವ ಸ್ವರೂಪದ ಇತಿಮಿತಿಗಳ ದರ್ಶನವನ್ನು ಪಡೆಯಲಾರಿರಿ; ಅಜ್ಞಾನ, ಅಹಂಕಾರ, ಕಾಮ ಕ್ರೋಧ, ಲೋಭ ಮೋಹ, ಮದ ಮಾತ್ಸರ್ಯ, ಅಸಮಾಧಾನ ಅತೃಪ್ತಿ ಅಸಹನೆಗಳಿಂದ ದುಃಖಿತರಾಗಿದ್ದೀರಿ; ಅಧಿಕಾರ, ಹಣ, ಹೆಣ್ಣು, ಮಣ್ಣಿನ ಬೆನ್ನುಹತ್ತಿ ಬೀಗುತ್ತಿದ್ದೀರಿ; ಸಮಯಕ್ಕೆ ತಕ್ಕಂತೆ ನಾಲಗೆಯನ್ನು ಹೊರಳಿಸಿ ದೊಡ್ಡಸ್ಥಿಕೆಯನ್ನು ಮೆರೆಸುತ್ತಿದ್ದೀರಿ” ಎಂದು ದೊಡ್ಡಸ್ಥಿಕೆಯ ಪ್ರದರ್ಶನ ಮಾಡುತ್ತಿದ್ದವರನ್ನು ಕಟುವಾಗಿ ಟೀಕಿಸಿದರು.
ಎಲ್ಲರನ್ನೂ ಒರೆಗೆ ಹಚ್ಚಿದ ಪುರಂದರದಾಸರು ವಿವಿಧ ಆಸೆಗಳು ಮತ್ತು ಅವುಗಳ ಪೂರೈಕೆಯಿಂದ ಉಂಟಾದ ಮದಗಳನ್ನು ಪೋಷಿಸಿದರೆ, ನೀಚ ಬುದ್ಧಿಯನ್ನು ಬಿಡದಿದ್ದರೆ, ಮದಗಜ ಮೈ ಮರೆತು ಖೆಡ್ಡದೊಳಗೆ ಬೀಳುವಂತೆ ನೀವೂ ಬೀಳುತ್ತೀರಿ; ಸಾಧು ಸಜ್ಜನರ ಸಂಗ ಮಾಡಿ, ಪರಗತಿಯ ವಿಚಾರ ಮಾಡಿ ಎಂದು ಬೋಧಿಸಿದರು. “ಬಿಡು ಬಿಡು ಮನ ಸಂಶಯವ| ಶಕುನೆಂಬ್ಹಕ್ಕಿ ಹೇಳುತದಪ್ಪ| …..ಒಂದು ಹಕ್ಕಿ ಹಣ್ತಿಂತೈತೆ| ಮತ್ತೊಂದು ಹಕ್ಕಿ ನೋಡುತದಪ್ಪ| ನಿನ್ನೆದೆ ಹಕ್ಕಿ ಬಲಿತೈತಣ್ಣ| ಇದ ತಿಳಿಯೋದು ಒಂದೇ ಕುಲದ ಹಕ್ಕಲ್ಲಣ್ಣ| ಒಂದೇ ಕುಲವೆಂದು ತಿಳಿಯಲಿ ಬೇಡ| ತಿಳಿದರ ನಿಮಗೆ ಕೇಡು” ಎಂದು ಎಚ್ಚರಿಸಿದರು, ಸರ್ವಸಮಾನತೆಯನ್ನು ಸಾರಿದರು. “ಹಳೆ ವಸ್ತ್ರವ ಬಿಸಾಡಣ್ಣ| ಹೊಸ ವಸ್ತ್ರವ ದೇವರು ನಿಮಗೆ ಕೊಟ್ಯಾನು” ಎಂದು ಆಧ್ಯಾತ್ಮಿಕ ಪಾಠವನ್ನು ಸರಳವಾಗಿ ತಿಳಿಹೇಳಿದರು.
ಸಮಾಜದಲ್ಲಿ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ವ್ಯವಸ್ಥೆ ಮತ್ತು ಧಾರ್ಮಿಕ, ಆಧ್ಯಾತ್ಮಿಕ ನೆಲೆಗಳಲ್ಲಿ ಬೇರು ಬಿಟ್ಟಿದ್ದ ಕಳೆಗಳನ್ನು ಕಿತ್ತೊಗೆಯಲು ಜೀವನ ಪರ್ಯಂತ ಪರಿಶ್ರಮಿಸಿದ ಪುರಂದರದಾಸರು ಅವಿಚಾರಿಯಾದ, ಜೀರ್ಣವಾದ, ಸವಕಲಾದ ಜೀವನರೀತಿಯನ್ನು ನಿರಾಕರಿಸಿದರು, ಉತ್ತಮ ಮಾರ್ಗದ ದಾರಿಯನ್ನು ಹೆದ್ದಾರಿಯನ್ನಾಗಿಸಿದರು.
–ಪದ್ಮಿನಿ ಹೆಗಡೆ
ಉತ್ತಮ ಮಾಹಿತಿ
ಅತ್ಯುತ್ತಮ ಮಾಹಿತಿಯನ್ನು ಒಳಗೊಂಡ ಲೇಖನಕೊಟ್ಟಿರುವ ನಿಮಗೆ ನನ್ನ ನಮನಗಳು ಪದ್ಮಿನಿ ಮೇಡಂ
ವಿಜಯನಗರ ಸಾಮ್ರಾಟರ ಆಹ್ವಾನವನ್ನು ತಿರಸ್ಕರಿಸಿ,, ಊಂಛ ವೃತ್ತಿಯಿಂದ ಜೀವನ ನಡೆಸುತ್ತಾ ಜನರನ್ನು ತಮ್ಮ ವಿಶೇಷವಾದ ಪದಗಳಿಂದಲೇ ಎಚ್ಚರಿಸಿದ ಪುರಂದರದಾಸರ ಜೀವನಗಾಥೆಯನ್ನು ಬಹಳ ಸುಂದರವಾಗಿ ಚಿತ್ರಿಸಿರುವಿರಿ ಮೇಡಂ
ಮಾಹಿತಿ ಪೂರ್ಣ ಲೇಖನ
ಸೊಗಸಾದ ವಿವರಣೆ.
ಉತ್ತಮ ಸಂದೇಶವನ್ನು ನೀಡಿ ಸಮಾಜದ ಡೊಂಕು ತಿದ್ದಲು ಸಾಹಸ ಮಾಡಿದ ದಾಸರಿಗೆ ನಮೋ ನಮ: . ಇದನ್ನು ನಮಗುಣಬಡಿಸಿದ ನಿಮಗೆ ಅನಂತ ವ೦ದನೆಗಳು .