ಮುತ್ತೂರು…ಪುತ್ತೂರು (ಥೀಮ್: ದಂತಕಥಾ ಲೋಕ)
“ಹತ್ತೂರು ಕೊಟ್ಟರೂ ಪುತ್ತೂರು ಬಿಡೆ” ಎಂಬ ಸುಂದರ ನಾಣ್ನುಡಿ ಪ್ರಚಲಿತವಾಗಿರುವ ಪುತ್ತೂರು ನಮ್ಮೂರು. ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲೂಕಿನ ಮುಖ್ಯ ಪಟ್ಟಣವೂ ಆಗಿರುವ ಈ ಊರು; ಸುಂದರ ನಿಸರ್ಗ ಸಿರಿ, ಸಹಜ ಶಾಂತಪ್ರಿಯ ಜನರಿಗೆ ಹೆಸರಾಗಿದೆ. ಸುಮಾರು 800 ವರ್ಷಗಳ ಹಿಂದೆ ನಿರ್ಮಾಣಗೊಂಡಿರಬಹುದು ಎಂದು ಅಂದಾಜಿಸಲಾದ ಇಲ್ಲಿಯ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಕರ್ನಾಟಕದ ಬಲು ಪ್ರಸಿದ್ಧ ದೇಗುಲಗಳಲ್ಲಿ ಒಂದಾಗಿದೆ. ಇದು ನಗರದ ಮಧ್ಯಭಾಗದಲ್ಲಿದ್ದು; ಇದರ ಹಿಂಭಾಗದಲ್ಲಿ ವಿಶಾಲವಾದ ದೇವಸ್ಥಾನದ ಕೆರೆಯಿದೆ. ಈ ಕೆರೆಯಲ್ಲಿ ಹಿಂದೆ ಮುತ್ತು ಬೆಳೆಯುತ್ತಿತ್ತು ಎಂಬ ಐತಿಹ್ಯವಿದೆ. ಆದ್ದರಿಂದ ಆ ಕಾಲದಲ್ಲಿ ಈ ಊರನ್ನು ಮುತ್ತೂರು ಎಂದು ಕರೆಯುತ್ತಿದ್ದರಂತೆ. ವರ್ಷಗಳು ಕಳೆದಂತೆ, ಮುತ್ತೂರು ಹೋಗಿ ಪುತ್ತೂರು ಆಯಿತು ಎನ್ನುವರು. ಮುತ್ತೂರಿನ ಹೆಸರಿನ ಹಿಂದೆ; ಎಲ್ಲರ ಬಾಯಿಯಲ್ಲಿ ನಲಿದಾಡುತ್ತಿರುವ ಇನ್ನೊಂದು ದಂತಕಥೆಯನ್ನು ಕೇಳೋಣ ಬನ್ನಿ…
ರಾಜ ಬಂಗರಾಜರು ಈ ಭಾಗವನ್ನು ಆಳುತ್ತಿದ್ದ ಕಾಲ. ದೇಗುಲದ ಪಶ್ಚಿಮ ಭಾಗದಲ್ಲಿರುವ ಕೆರೆಯ ನಿರ್ಮಾಣದ ಹಂತದಲ್ಲಿ; ಎಷ್ಟು ಆಳವಾಗಿ ತೋಡಿದರೂ ನೀರು ಬರಲಿಲ್ಲ. ಆಗ ರಾಜನು ದೈವಜ್ಞರ ಅಣತಿಯಂತೆ ಪರಿಹಾರಕ್ಕಾಗಿ ಕೆರೆಯ ಮಧ್ಯಭಾಗದಲ್ಲಿ ವರುಣ ದೇವರ ಕಲ್ಲಿನ ವಿಗ್ರಹವನ್ನು ಸ್ಥಾಪಿಸಿ ಪೂಜಿಸಿದನು. ಆ ಬಳಿಕ, ನೂರಾರು ಋತ್ವಿಜರಿಗೆ ಕೆರೆಯ ತಳ ಭಾಗದಲ್ಲಿ ಅನ್ನ ಸಂತರ್ಪಣೆಯನ್ನು ಮಾಡಿಸಿದನು. ಭೋಜನದ ಕೊನೆಯ ಹಂತದಲ್ಲಿ ವಿಚಿತ್ರ ಘಟನೆಯೊಂದು ಘಟಿಸಿತು. ಅಲ್ಲಿಯ ವರೆಗೆ ಒಂದು ಹನಿ ನೀರೂ ಇಲ್ಲದ ಕೆರೆಯಲ್ಲಿ ನೀರು ಉಕ್ಕಿ ಹರಿಯಿತು! ಋತ್ವಿಜರು ತಮ್ಮ ಊಟವನ್ನು ಅರ್ಧದಲ್ಲೇ ಬಿಟ್ಟು, ಅಲ್ಲಿಂದ ಎದ್ದು ಓಡಿ ಹೊರಬಂದರು. ಅವರು ಉಂಡ ಎಲೆಗಳಲ್ಲಿ ಉಳಿದಿದ್ದ ಅನ್ನದ ಅಗುಳುಗಳು ಕೆರೆಯ ನೀರಿನಲ್ಲಿ ಮುಳುಗಿ ಮುತ್ತುಗಳಾದವು ಹಾಗೂ ಉಂಡ ಎಲೆಗಳು ಅದರ ಚಿಪ್ಪುಗಳಾದವು ಎಂದು ಪ್ರತೀತಿ! ಹೀಗೆ, ಮುತ್ತುಗಳಿರುವ ಕೆರೆಯ ಊರು ಮುತ್ತೂರಾಯಿತು….ಮುಂದೆ ಅದೇ ಪುತ್ತೂರು ಎಂದು ಕರೆಯಲ್ಪಟ್ಟಿತು.
ಶ್ರೀ ಮಹಾಲಿಂಗೇಶ್ವರ ದೇಗುಲದ ಸ್ಥಳ ಪುರಾಣ
ಪ್ರಾಚೀನ ಕಾಲದಲ್ಲಿ ಶಿವನ ಪರಮ ಭಕ್ತರಾದ ಬ್ರಾಹ್ಮಣರೊಬ್ಬರು ಕಾಶೀಕ್ಷೇತ್ರದಿಂದ ಶಿವಲಿಂಗವೊಂದನ್ನು ಸಂಪುಟದಲ್ಲಿಟ್ಟು ಪೂಜಿಸುತ್ತಾ, ದಕ್ಷಿಣಪಥದಲ್ಲಿ ಸಂಚರಿಸುತ್ತಾ ಪುತ್ತೂರಿಗೆ ಬಂದರು. ಅಲ್ಲಿ ಒಂದು ಸ್ಥಳದಲ್ಲಿ ಕುಳಿತು ಶಿವಲಿಂಗವನ್ನು ಸಂಪುಟದಿಂದ ತೆಗೆದು ಮರದ ನೆರಳಿನಲ್ಲಿ ಭೂಮಿಯ ಮೇಲಿರಿಸಿ ಪೂಜಿಸಿದರು. ಪೂಜೆ ಮುಗಿದ ಬಳಿಕ ಶಿವಲಿಂಗವನ್ನು ಎತ್ತಿ ಪುನ: ಸಂಪುಟದಲ್ಲಿರಿಸಲು ಪ್ರಯತ್ನಿಸಿದಾಗ ಆ ಶಿವಲಿಂಗವು ಭೂಮಿಯೊಳಗೆ ಹೂತುಹೋಗಿ ಬಿಟ್ಟಿತ್ತು. ಎಷ್ಟು ಪ್ರಯತ್ನಿಸಿದರೂ ಅದನ್ನು ಮೇಲೆ ತೆಗೆಯಲು ಅವರಿಗೆ ಸಾಧ್ಯವಾಗಲಿಲ್ಲ.
ಕೊನೆಗೆ ಅವರು, ಊರಿನ ಅರಸರಾದ ಬಂಗರಾಜನ ಬಳಿ ತನ್ನ ಅಳಲನ್ನು ತೋಡಿಕೊಂಡರು. ಅರಸನ ಅಪ್ಪಣೆಯಂತೆ ಭಟರು ಶಿವಲಿಂಗವನ್ನು ಮಣ್ಣಿನಿಂದ ಕೀಳಲು ಪ್ರಯತ್ನಿಸಿ ಸೋತುಹೋದರು. ಇದರಿಂದ ಆಶ್ಚರ್ಯಗೊಂಡ ಅರಸನು, ತನ್ನ ಪಟ್ಟದಾನೆಯೊಂದಿಗೆ ಅಲ್ಲಿಗೆ ಬಂದನು. ಶಿವಲಿಂಗವನ್ನು ಪಟ್ಟದಾನೆಯಿಂದ ಕೀಳಿಸಲು ಪ್ರಯತ್ನಿಸಿದನು. ಆಗಲೇ ಶಿವಲಿಂಗವು ಎತ್ತರಕ್ಕೆ ಬೆಳೆದು ಮಹಾಲಿಂಗದ ರೂಪ ತಾಳಿತು. ಆದರೂ ಬಿಡದೆ, ಮಣ್ಣಿನಿಂದ ಅದನ್ನು ಮೇಲೆತ್ತಲು ಪ್ರಯತ್ನಿಸುತ್ತಿದ್ದ ಅರಸನ ಪಟ್ಟದಾನೆಯ ಮೇಲೆ ಶಿವನು ಮುನಿಸಿಕೊಂಡ ಕಾರಣದಿಂದ, ಅದರ ಶರೀರದ ಅಂಗಾಂಗಗಳೆಲ್ಲಾ ಛಿದ್ರಗೊಂಡು ದಿಕ್ಕಾಪಾಲಾಗಿ ಚದುರಿ ಹೋದವು!
ಹೀಗೆ, ಆನೆಯ ಶರೀರದ ಅಂಗಗಳು ಚದುರಿ ಬಿದ್ದ ಸ್ಥಳಗಳು ಆಯಾಯ ಹೆಸರಿನಿಂದ ಗುರುತಿಸಲ್ಪಟ್ಟಿವೆ. ಆನೆಯ ತಲೆ ಬಿದ್ದ ಸ್ಥಳವನ್ನು ತಾಲೆಪ್ಪಾಡಿ, ಆನೆಯ ದಂತ(ಕೊಂಬು) ಬಿದ್ದ ಜಾಗವು ಕೊಂಬೆಟ್ಟು, ಕಾಲು ಬಿದ್ದ ಸ್ಥಳವು ಕಾರ್ಜಾಲು, ಕರಿ ಬಿದ್ದ ಸ್ಥಳವು ಕರಿಯಾಲು, ಬಾಲ ಬಿದ್ದ ಸ್ಥಳ ಬೀದಿಮಜಲು, ಬೆನ್ನು ಬಿದ್ದ ಸ್ಥಳ ಬೆರಿಪದವು, ಕೈ ಬಿದ್ದ ಜಾಗವು ಕೈಪಳ, ಉಳಿದ ಶರೀರ(ಕಾಯ) ಬಿದ್ದ ಸ್ಥಳವು ಕಾಯರ್ಮಜಲು ಎಂಬುದಾಗಿ ಕರೆಯಲ್ಪಟ್ಟವು. ಈ ಸ್ಥಳಗಳೆಲ್ಲವೂ ಪುತ್ತೂರಿನ ಆಸುಪಾಸುಗಳಲ್ಲೇ ಇವೆ. ಶಿವನು ಆನೆಯ ಮೇಲೆ ಸಿಟ್ಟುಗೊಂಡ ಕಾರಣ; ಇಲ್ಲಿಯ ಕೆರೆಯ ನೀರನ್ನು ಆನೆಗಳು ಕುಡಿಯುವಂತಿಲ್ಲ. ಗಜಲಾಂಛನವನ್ನೂ ಇಲ್ಲಿ ಯಾರೂ ಬಳಸುವಂತಿಲ್ಲ.
ಕ್ರಿ.ಶ. ಪ್ರಾರಂಭದ ಶತಮಾನದಲ್ಲಿ, ಪುತ್ತೂರಿನಿಂದ ಸುಮಾರು ಮೂರು. ಕಿ. ಮೀ. ದೂರದಲ್ಲಿರುವ ಕಬಕ ಸಮೀಪ ಕೆಲವು ಕುಟುಂಬಗಳು ನೆಲೆಸಿದ್ದವು. ಇದರಿಂದಾಗಿ, ಅದು ಜನರ ಒಂದು ಚಿಕ್ಕ ಪಾಳ್ಯವಾಗಿತ್ತು. ಪುತ್ತೂರಿನ ಪ್ರದೇಶವು ಧಾರಾಳ ಜಲಸಂಪತ್ತು ಹಾಗೂ ಫಲವತ್ತಾದ ಮಣ್ಣಿನಿಂದ ಕೂಡಿತ್ತು. ಆದ್ದರಿಂದ ಆ ಪಾಳ್ಯದಲ್ಲಿದ್ದ ಜನರು ಪುತ್ತೂರಿಗೆ ಬಂದು ನೆಲೆಸಿದರು. ನಂತರದ ದಿನಗಳಲ್ಲಿ, ಇಲ್ಲಿನ ವಿಪುಲ ನೈಸರ್ಗಿಕ ಸಂಪತ್ತಿನಿಂದ ಆಕರ್ಷಿತರಾಗಿ ಹೆಚ್ಚಿನ ಜನರು ಇಲ್ಲಿಗೆ ಬಂದು ತಮ್ಮ ನೆಲೆಯನ್ನು ಕಂಡುಕೊಂಡರು…ಪುತ್ತೂರು ನಗರವಾಗಿ ಬೆಳೆಯಿತು. ಮೊದಲು ಪಾಳ್ಯವಿದ್ದ ಪ್ರದೇಶವು ಈಗ ಪೋಳ್ಯ ಎಂಬುದಾಗಿ ಕರೆಯಲ್ಪಡುತ್ತಿದೆ.
(ಕೇಳಿದ್ದು)
-ಶಂಕರಿ ಶರ್ಮ, ಪುತ್ತೂರು.
ಚಂದದ ಲೇಖನ
ಧನ್ಯವಾದಗಳು
ಮುತ್ತೂರಿನಿಂದ ಪುತ್ತೂರು ಆದ ದಂತಕಥೆ ಚೆನ್ನಾಗಿ ಬಂದಿದೆ
ಗಾಯತ್ರಿ ಮೇಡಂ ಅವರಿಗೆ ಧನ್ಯವಾದಗಳು
ಈ ದಂತ ಕಥೆ ಗೊತ್ತಿರಲಿಲ್ಲ.ಚೆನ್ನಾಗಿದೆ ಶಂಕರಿ ಅಕ್ಕ
ಧನ್ಯವಾದಗಳು ವನಿತಕ್ಕ
ಆನೆಯೊಂದಿಗೆ ಹೊಂದಿಕೊಂಡ ದಂತಕಥೆ ಸ್ವಾರಸ್ಯವಾಗಿದೆ
ಧನ್ಯವಾದಗಳು ಪದ್ಮಿನಿ ಮೇಡಂ ಅವರಿಗೆ
ಸೊಗಸಾಗಿದೆ ಪುತ್ತೂರಿನ ಸ್ಥಳ ಪುರಾಣ.
ಸೊಗಸಾದ ದಂತಕತೆ. ಪುತ್ತೂರಿನ ಸುತ್ತುಮುತ್ತಲಿನ ಊರುಗಳಿಗೆ ಆಗಾಗ ಭೇಟಿ ಕೊಡುತ್ತಾ ಇರುತ್ತೇವೆ.ಆದರೆ ಈ ಕತೆಗಳು ಗೊತ್ತಿರಲಿಲ್ಲ. ತಿಳಿಸಿದ್ದಕ್ಕೆ ಧನ್ಯವಾದಗಳು.
ದಂತಕಥೆ ಚೆನ್ನಾಗಿ ಮೂಡಿಬಂದಿದೆ..ಶಂಕರಿ ಮೇಡಂ..