ಮುನ್ನಿಯ ಬಳೆಗಳು

Share Button


ಅಂದು ಸಂಕಾಂತಿ ಹಬ್ಬ. ಮುನ್ನಿಗೆ ಖುಷಿಯೋ ಖುಷಿ. ಅವಳ ಸಂಭಮಕ್ಕೆ ಕಾರಣ ಒಂದೆರಡಲ್ಲ. ಮೊದಲೇ ಅವಳಿಗೆ ಸಂಕಾಂತಿ ಹಬ್ಬ ಅಂದರೆ ಸಂತೋಷ ಜಾಸ್ತಿ. ಹೊಸ ಡ್ರೆಸ್ ಧರಿಸಿ ಅಮ್ಮನ ಹತ ಉದ್ದಕ್ಕೆ ಜಡೆ ಹೆಣಿಸಿಕೊಂಡು ಹೂ ಮುಡಿದು ಒಡವೆ ಧರಿಸಿ ತನ್ನ ಬೀದಿಯಲ್ಲಿರುವ ಮನೆಗಳಿಗೆಲ್ಲ ಎಳ್ಳು ಬೆಲ್ಲ ಹಂಚಿ ಬರುವುದು ಅಂದೆ ಕಡಿಮೆ ಸಂತಸವೆ…? ಅದಕ್ಕೆ ಮುನ್ನಿಗೆ ಅಷ್ಟೊಂದು ಖುಷಿ, ಸಂಭಮ ಜೊತೆಗೆ ಸಂಜೆ ಯಾವಾಗ ಆಗತ್ತೋ… ಅನ್ನುವ ಕಾತುರ.

ಮುನ್ನಿ ತುಂಬಾ ಬುದ್ಧಿವಂತೆ, ಚೆನ್ನಾಗಿ ಓದ್ತಾಳೆ, ಹಾಡ್ತಾಳೆ, ಸುಂದರವಾದ ಚಿತ್ರ ಬರೀತಾಳೆ, ಆಟ ಆಡ್ತಾಳೆ, ಇತ್ತೀಚೆಗೆ ಡ್ಯಾನ್ಸ್ ಕ್ಲಾಸಿಗೂ ಸೇರಿಕೊಂಡಿದ್ದಾಳೆ. ಆದರೆ ಮುನ್ನಿಯ ಅಮ್ಮನದು ಒಂದೇ ಒಂದು ತಕರಾರು. ಅದೇನಪ್ಪ ಅಂದರೆ ಮುನ್ನಿಗೆ ತುಂಬಾ ಆತುರ. ಎಲ್ಲಾ ಕೆಲಸಕ್ಕೂ ಅರ್ಜೆಂಟು ಅಂದೆ ಅರ್ಜೆಂಟು.

ಮುನ್ನಿಯ ಅಪ್ಪ ಎಷ್ಟೋ ಸಾರಿ ”ನೀನು ಅರ್ಜೆಂಟ್ ಮಾಡಿಕೊಳ್ಳದೇ ಬರೆದರೆ ಒಂದು ತಪ್ಪೂ ಆಗೋಲ್ಲ. ನಂಬರ್ ಕೂಡ ಇನ್ನೂ ಚೆನ್ನಾಗಿ ಬರುತ್ತೆ” ಅಂತ ಹೇಳ್ತಾ ಇದ್ರು, ಆಗ ಮುನ್ನಿ ”ಸರಿ ಪಪ್ಪ” ಅಂತ ತಲೆ ಆಡಿಸ್ತಾ ಇದ್ಲು ಆದರೆ ಸ್ವಭಾವ ಬದಲಾಗಲಿಲ್ಲ.

ಮುನ್ನಿಗೆ ಈ ಸಾರಿಯ ಸಂಕಾಂತಿ ಹಬ್ಬದಲ್ಲಿ ಸಂಭ್ರಮ, ಸಡಗರ ಕೊಂಚ ಜಾಸ್ತಿಯೇ ಆಗಿತ್ತು. ಏಕೆಂದರೆ ಇತ್ತೀಚೆಗೆ ಅವಳ ಚಿಕ್ಕಪ್ಪ ಹೈದರಾಬಾದಿನಿಂದ ಬಳೆ ತಂದು ಕೊಟ್ಟಿದ್ದಾರೆ, ಹಸಿರು ಹರಳುಗಳ ಮಧ್ಯೆ ಮುತ್ತು ಜೋಡಿಸಿರುವ ಆ ಬಳೆಗಳಂತೂ ತುಂಬಾ ಮುದ್ದಾಗಿ ಕಾಣುತ್ತಿವೆ. ಅದೂ ಅಲ್ಲದೇ ಅವಳ ಅಜ್ಜಿ ಹಸಿರು ಬಣ್ಣದ ರೇಷ್ಮೆ ಲಂಗ ಹೊಲಿಸಿಕೊಟ್ಟಿದ್ದಾರೆ. ಚಿಕ್ಕಮ್ಮ ಎಳ್ಳು, ಬಾಳೆಹಣ್ಣು, ಕಬ್ಬು… ಎಲ್ಲಾ ತೆಗೆದುಕೊಂಡು ಹೋಗುವುದಕ್ಕೆ ಅಂತ ಹೊಸ ಬ್ಯಾಗ್ ಕೂಡ ಕೊಡಿಸಿದ್ದಾರೆ. ಇಷ್ಟೆಲ್ಲಾ ತಯಾರಿ ನಡೆದಿದೆ. ಅಂದ ಮೇಲೆ ಮುನ್ನಿಯ ಸಂಭಮವೂ ಜೋರಾಗಿರಬೇಕಾದದ್ದು ಸಹಜ ತಾನೆ?

ಮಧ್ಯಾಹ್ನದ ಊಟಕ್ಕೆ ಮುನ್ನಿಯ ಅಮ್ಮ ಸಿಹಿಪೊಂಗಲ್ ಜೊತೆಗೆ ಜಾಮೂನು ಮಾಡಿದ್ದರು. ಮುನ್ನಿಗೆ ಜಾಮೂನು ಅಂದ್ರೆ ತುಂಬಾ ಇಷ್ಟ. ”ಅಮ್ಮ… ಅಮ್ಮ… ನಾನೀಗ ಎರಡೇ ಜಾಮೂನು ತಿಂತೀನಿ. ಸಂಜೆ ಎಳ್ಳು ಬೆಲ್ಲ ಬೀರಿ, ಬಂದ ಮೇಲೆ ಜಾಸ್ತಿ ಜಾಮೂನು ತಿಂತೀನಿ ” ಅಂದ್ಲು ಮುನ್ನಿ.
”ಆಯ್ತು ಪುಟ್ಟಿ” ಅಂದ್ರು ಅಮ್ಮ.
”ಹೊಟ್ಟೆ ತುಂಬಾ ಊಟ ಮಾಡು ಕಂದ, ಯಾಕೆ ಅಂದ್ರೆ ಎಲ್ಲರ ಮನೆ ಸುತ್ತಿ ಸುತ್ತಿ ನಿಂಗೆ ಕಾಲು ನೋವು ಬರುತ್ತೆ, ಸುಸ್ತಾಗುತ್ತೆ” ಅಂದ್ರು ಅಜ್ಜಿ. ಅಂತೂ ಗಡಿಬಿಡಿಯಿಂದಲೇ ಊಟ ಮುಗಿಸಿದ ಮುನ್ನಿ ನಾಲ್ಕು ಗಂಟೆ ಆಗೋದನ್ನೇ ಕಾಯ್ತಾ ಇದ್ದಳು.

”ಅಮ್ಮ, ನನ್ನ ಡ್ರೆಸ್, ನನ್ನ ಬಳೆ, ಎಲ್ಲವನ್ನೂ ಒಂದೇ ಕಡೆ ಇಡು. ಬೇಗ ನಂಗೆ ಜಡೆ ಹಾಕಿಬಿಡು, ಕುಚ್ಚು ಹಾಕ್ತೀಯ ತಾನೆ?” ಹೀಗೆ ಒಂದೇ ಸಮನೇ ಏನಾದರೂ ಮಾತಾಡ್ತಾನೇ ಇದ್ದ ಮುನ್ನಿಯನ್ನ ನೋಡಿ ಮನೆಯವರಿಗೆಲ್ಲಾ ನಗುವೋ… ನಗು. ಅಂತೂ ಇಂತೂ … ಅವರಮ್ಮ ಕೊಂಚ ಬಿಡುವು ಮಾಡಿಕೊಂಡು ಬಂದು ಮಗಳಿಗೆ ಜಡೆ ಹೆಣೆದು ಅಲಂಕಾರ ಮಾಡಿದರು.

”ನೋಡು ಮುನ್ನಿ, ನಿನ್ನ ಲಂಗ, ಬ್ಲೌಸು, ಬಳೆಗಳು… ಎಲ್ಲವನ್ನೂ ನಿನ್ನ ರೂಮಿನಲ್ಲಿಟ್ಟಿದ್ದೀನಿ. ನೀನು ತೆಗೆದುಕೊಂಡು ಹೋಗಬೇಕಾಗಿರುವ ಎಳ್ಳಿನ ಪ್ಯಾಕೆಟ್, ಸಕ್ಕರೆ ಅಚ್ಚು ತುಂಬಿರುವ ಡಬ್ಬಿ, ಬಾಳೆಹಣ್ಣು, ಕಬ್ಬು, ಎಲ್ಲವನ್ನೂ ನಿನ್ನ ಚಿಕ್ಕಮ್ಮ ಹೊಸ ಬ್ಯಾಗಿನಲ್ಲಿ ಹಾಕಿ ಡೈನಿಂಗ್ ಟೇಬಲ್ ಮೇಲಿಟ್ಟಿದ್ದಾರೆ ಜೋಪಾನವಾಗಿ ತಗೊಂಡು ಹೋಗು ” ಅಂತ ಹೇಳಿ ಅಡಿಗೆ ಮನೆಗೆ ಹೋದರು.

ಇತ್ತ ಮುನ್ನಿ, ಮುಖ ತೊಳೆದುಕೊಂಡು ಟವೆಲ್‌ನಿಂದ ಸರಸರನೆ ವರೆಸಿಕೊಂಡು, ಕೀಮ್ ಹಚ್ಚಿಕೊಂಡು ಹಣೆಗೆ ಹಸಿರು ಬಣ್ಣದ ಬಿಂದಿ ಅಂಟಿಸಿಕೊಂಡಳು. ಡೆಸ್ಸಿಂಗ್ ಟೇಬಲ್ ಮೇಲಿದ್ದ ಚಿನ್ನದ ಬಣ್ಣದ ಬಳೆ ಡಬ್ಬಿಯನ್ನು ನೋಡುತ್ತಿದ್ದಂತೆಯೇ ಖುಷಿಯಿಂದ ಕುಣಿದಾಡತೊಡಗಿದಳು.ಆತುರದಿಂದ ಡಬ್ಬಿ ಮುಚ್ಚಳ ತೆಗೆದು ಬಳೆಗಳನ್ನು ಕೈಗೆ ಹಾಕಿಕೊಂಡಳು. ಆ ಹಸಿರು ಕಲ್ಲಿನ ಬಳೆಗಳು ಮುನ್ನಿಯ ಕೈಗಳಿಗೆ ತುಂಬಾ ಸುಂದರವಾಗಿ ಕಾಣುತ್ತಿದ್ದವು.

”ಬಳೆ ಬಳೆ… ನನ್ನ ಬಳೆ
ಬಳೆ ಬಳೆ… ಚಂದದ ಬಳೆ”

ಅಂತ ಹಾಡುತ್ತಾ ಕುಣಿಯುತ್ತಾ ರೂಮಿನಿಂದ ಆಚೆಗೆ ಬಂದಳು.
ಹೊರಗೆ ಯಾರೂ ಕಾಣಿಸಲಿಲ್ಲ.
ಸೀದಾ ಊಟದ ಮನೆಗೆ ಓಡಿ ಡೈನಿಂಗ್ ಟೇಬಲ್ ಮೇಲಿದ್ದ ಹೊಸ ಬ್ಯಾಗನ್ನು ತೆಗೆದುಕೊಂಡು ಪಕ್ಕದ ಮನೆಗೆ ಎಳ್ಳು ಕೊಡಲು ಓಡಿದಳು. ಪಕ್ಕದ ಮನೆ ಅಂದರೆ ಅವಳ ಪೀತಿಯ ಗೆಳತಿ ಮಾಧುರಿಯ ಮನೆ. ಇವಳು ‘ಮಧು… ಮಧು…’ ಅಂತ ಕರೆಯುತ್ತಾ ಬಾಗಿಲು ಬಡಿದಳು. ಇವಳ ಗಲಾಟೆ ಕೇಳಿ ಎರಡೇ ನಿಮಿಷಕ್ಕೆ ಬಾಗಿಲು ತೆರೆದರು ಮಾಧುರಿಯ ಅಮ್ಮ.

‘ಆಂಟಿ… ಆಂಟಿ… ನಿಮಗೆ ಎಳ್ಳು ಕೊಡೋಕೆ ಬಂದಿದ್ದೀನಿ’.
‘ಹೌದಾ? ಬಾ ಒಳಗೆ…’
‘ಆಂಟಿ… ನನ್ನ ಹೊಸ ಬಳೆ ನೋಡಿ, ಚೆನ್ನಾಗಿದೆ ಅಲ್ವಾ? ಚಿಕ್ಕಪ್ಪ ಹೈದರಾಬಾದಿನಿಂದ ತಂದದ್ದು. ಮಾಧುರಿಯನ್ನೂ ಕರೀರಿ, ಅವಳಿಗೂ ತೋರಿಸ್ತೀನಿ’.
‘ಆಯ್ತು ಕರೀತೀನಿ, ನೀನು ಕೂತ್ಕೋ…’
‘ಬೇಗ ಕರೀರಿ ಆಂಟಿ ಪ್ಲೀಸ್… ನಾನು ಇನ್ನೂ ತುಂಬಾ ಮನೆಗಳಿಗೆ ಹೋಗಬೇಕು
‘ಹೀಗೇ ಹೋಗ್ತೀಯ ಮುನ್ನಿ?’
‘ಹೂಂ ಆಂಟಿ… ಯಾಕೆ?’
‘ಈ ಕೊಳೆ ಬಟ್ಟೆ ಹಾಕ್ಕೊಂಡು ಎಳ್ಳು ಬೀರೋಕೆ ಹೋಗ್ತೀಯ?’

ಮುನ್ನಿ ತನ್ನ ಬಟ್ಟೆ ನೋಡಿಕೊಂಡಳು… ಗಾಬರಿಯಾಯಿತು.

‘ಅಯ್ಯಯ್ಯೋ… ನಾನು ಬಟ್ಟೆ ಬದಲಾಯಿಸೋಕೇ ಮರೆತುಬಿಟ್ಟೆ ಆಂಟಿ?’
ಮಾಧುರಿಯ ಅಮ್ಮ ನಕ್ಕುಬಿಟ್ಟರು.
‘ಹೊಸ ಬಳೆ ಹಾಕಿಕೊಳ್ಳೋ ಸಂಭಮದಲ್ಲಿ ಬಟ್ಟೆ ಬದಲಾಯಿಸೋದನ್ನೇ ಮರೆತುಬಿಟ್ಯಾ? ಪಾಪ ನಿಮ್ಮಜ್ಜಿ ಎಷ್ಟು ಚೆನ್ನಾಗಿರೋ ರೇಷ್ಮೆ ಲಂಗ ಹೊಲಿಸಿದ್ದಾರಲ್ಲೇ ಮುನ್ನಿ?’

ಇದೀಗ ಅಮ್ಮನ ಪಕ್ಕ ಬಂದು ನಿಂತಿದ್ದ ಮಾಧುರಿ ಗೆಳತಿಯ ಮುಖ ನೋಡಿ ಗಟ್ಟಿಯಾಗಿ ನಕ್ಕುಬಿಟ್ಟಳು. ಮುನ್ನಿಗೆ ತುಂಬಾ ಅವಮಾನವಾಯ್ತು. ಅವಳು ಪೆಚ್ಚು ಮುಖಹಾಕಿಕೊಂಡು ಮನೆಗೆ ಓಡಿಬಂದಳು.

‘ಮುನ್ನಿ ಬಟ್ಟೆ ಹಾಕಿಕೊಳ್ಳದೇ ಎಲ್ಲಿಗೆ ಹೋಗಿದ್ದಾಳೆ…’ ಎಂದು ಆಶ್ಚರ್ಯ ಪಡುತ್ತಿರುವಾಗ ಮುನ್ನಿ ಓಡಿ ಬಂದಳು.
‘ಎಲ್ಲಿಗೆ ಹೋಗಿದ್ದೆ ಮುನ್ನಿ?’
‘ಮಾಧುರಿ ಮನೆಗೆ ಅಮ್ಮ..’
‘ಬಟ್ಟೆ ಬದಲಾಯಿಸೇ ಇಲ್ವಲ್ಲೇ… ? ಹೊಸಲಂಗ ಇಲ್ಲೇ ಇದೆ…’
‘ಅಯ್ಯೋ ಅಷ್ಟೂ ಗೊತ್ತಾಗಲಿಲ್ವ? ಹೊಸಬಳೆ ಹಾಕಿಕೊಳ್ಳೋ ಆತುರದಲ್ಲಿ ಬಟ್ಟೆ ಬದಲಾಯಿಸೋದನ್ನ ಮರೆತು ಬಿಟ್ಟಿದ್ದಾಳೆ. ನಮ್ಮ ಮಗಳು’ ಮುನ್ನಿಯ ಅಪ್ಪ ಹೇಳುತ್ತಾ ಗಟ್ಟಿಯಾಗಿ ನಕ್ಕರು.

”ಆತುರಗಾರನಿಗೆ ಬುದ್ಧಿಮಟ್ಟ ಅಂತಾರೆ, ತುಂಬಾ ಗಡಿಬಿಡಿ ಮಾಡ್ಕೋ ಬೇಡ ಮುನ್ನಿ ಅಂತ ಸದಾ ಹೇಳ್ತಾನೇ ಇರ್‍ತೀನಿ ನಾನು. ಆದೆ ನೀನು ಕೇಳೋದೇ ಇಲ್ಲ” ಅಜ್ಜಿ ಮೆಲ್ಲನೆ ಹೇಳಿದರು.
ಮುನ್ನಿಗೆ ಅಳು ಬಂದುಬಿಡ್ತು.

”ಮುನ್ನಿ ಇನ್ನು ಮುಂದೆ ಆತುರ, ಗಡಿಬಿಡಿ ಮಾಡಿಕೊಳ್ಳೋದೇ ಇಲ್ಲ. ಈಗ ಬುದ್ಧಿ ಕಲಿತಿದ್ದಾಳೆ. ಅಲ್ವಾ ಪುಟ್ಟಿ…?” ಅನ್ನುತ್ತಾ ಚಿಕ್ಕಪ್ಪ ಮುನ್ನಿಯನ್ನು ಅಪ್ಪಿಕೊಂಡರು.
”ಸರಿ ಬಿಡು ಈಗ ಬಾ ಬಂಗಾರಿ, ಹೊಸಬಟ್ಟೆ ಹಾಕ್ತೀನಿ” ಅಂದರು ಮುನ್ನಿಯ ಅಮ್ಮ.
ಹೊಸ ಬಟ್ಟೆಯನ್ನು ಧರಿಸಿದ ಮುನ್ನಿ
”ನೋಡಿ… ನೋಡಿ…
ನನ್ನ ಹೊಸ ಲಂಗ
ನೋಡಿ ನೋಡಿ
ನನ್ನ ಹೊಸ ಬಳೆ”

ಅಂತ ರಾಗವಾಗಿ ಹಾಡಿದಳು. ಎಲ್ಲರೂ ಸಂತೋಷದಿಂದ ನಕ್ಕರು.

-ಸವಿತಾ ಪ್ರಭಾಕರ್ ,ಮೈಸೂರು

5 Responses

  1. ನಯನ ಬಜಕೂಡ್ಲು says:

    ಚೆನ್ನಾಗಿದೆ

  2. ಪುಟ್ಟ ಕಥೆ ಚೆನ್ನಾಗಿದೆ..ಆತುರವಾದರೆ..ಆಗುವಎಡವಟ್ಟು.. ಹಿರಿಯರು ಹೇಳುವ ಮಾತಿಗೆ ಗಮನಕೊಡಿ..ಮಕ್ಕಳಿಗೆ ಸಂದೇಶ ಅಭಿನಂದನೆಗಳು ಗೆಳತಿ.. ಸವಿತಾ

  3. ಶಂಕರಿ ಶರ್ಮ says:

    ಮುನ್ನಿಯ ಆತುರದ ಎಡವಟ್ಟು ಮರೆಗುಳಿ ಪ್ರೊಫೆಸರನ್ನು ನೆನಪಿಸಿತು. ಕಥೆ ಚೆನ್ನಾಗಿದೆ.

  4. Hema says:

    ಸಂಕ್ರಾಂತಿ ಸಂದರ್ಭಕ್ಕೆ ಸೊಗಸಾದ ಮಕ್ಕಳ ಕತೆ..ಚೆನ್ನಾಗಿದೆ.

  5. Padmini Hegde says:

    ಮಕ್ಕಳ ಕತೆ..ಚೆನ್ನಾಗಿದೆ

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: