ಗೋಪುರಗಳ ನಾಡಿನಲ್ಲಿ…ಹೆಜ್ಜೆ 4
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ದಿನ 3 :ಅಕ್ಟೋಬರ್ 03,2023 ಕನ್ಯಾಕುಮಾರಿ
ಪೂರ್ವದಲ್ಲಿ ಬಂಗಾಳಕೊಲ್ಲಿ, ದಕ್ಷಿಣದಲ್ಲಿ ಹಿಂದೂ ಮಹಾಸಾಗರ ಹಾಗೂ ಪಶ್ಚಿಮದಲ್ಲಿ ಅರಬೀ ಸಮುದ್ರವಿರುವ ಕನ್ಯಾಕುಮಾರಿಯಲ್ಲಿ ಸೂರ್ಯೋದಯವನ್ನು ವೀಕ್ಷಿಸುವುದು ಪ್ರಸಿದ್ಧ ಪ್ರವಾಸಿ ಆಕರ್ಷಣೆ. ಟ್ರಾವೆಲ್ಸ್೪ಯುನವರು ಬೆಳಗ್ಗೆ ಸೂರ್ಯೊದಯವನ್ನು ನೋಡಲು ಆಸಕ್ತಿ ಇರುವವರು ಬೆಳಗ್ಗೆ 0600 ಗಂಟೆಗೆ ಹೋಟೆಲ್ ನ ರಿಸೆಪ್ಷನ್ ಬಳಿ ಇರಬೇಕೆಂದೂ, ವಾತಾವರಣ ಚೆನ್ನಾಗಿದ್ದರೆ ಸೂರ್ಯನನ್ನು ಕಾಣಬಹಬುದು ಎಂದಿದ್ದರು. ಹಿಂದಿನ ದಿನ ರಾತ್ರಿ ನಾವು ಬರುವಾಗಲೂ ದಾರಿಯುದ್ದಕ್ಕೂ ಮಳೆ ಸುರಿಯುತ್ತಿತ್ತು. ಅದೇ ಮುಂದುವರಿಯಿತು. ಪಕ್ಕದಲ್ಲಿಯೇ ಇದ್ದ ಸಮುದ್ರ ತೀರಕ್ಕೆ ನಡೆದುಕೊಂಡು ಹೋದೆವು. ವರುಣ ಕೃಪೆದೋರದ ಕಾರಣ ಸೂರ್ಯ ಮೋಡದ ಮರೆಯಲ್ಲಿದ್ದ. ಹೋಟೇಲ್ ಗೆ ಹಿಂತಿರುಗುವಾದ ಸಣ್ಣ ಪೇಟೆಯಾದ ಕನ್ಯಾಕುಮಾರಿ ಅನಾವರಣಗೊಂಡಿತು. ಪ್ರಸಿದ್ಧ ಪ್ರವಾಸಿ ಸ್ಥಳವಾದರೂ, ನಿರ್ವಹಣೆ, ಸ್ವಚ್ಚತೆ ಕಡಿಮೆ ಅನಿಸಿತು. ಸಮುದ್ರದ ಅಕ್ಕಪಕ್ಕ ಪ್ಲಾಸ್ಟಿಕ್ ತ್ಯಾಜ್ಯಗಳೂ ಇದ್ದುವು. ಬಾಲಕೃಷ್ಣ ಅವರು ಟೀ ಸ್ಟಾಲ್ ಒಂದರಲ್ಲಿ ಬಿಸಿಬಿಸಿ ಚಹಾ ಕೊಡಿಸಿದರು. ‘ಬಂದ ದಾರಿಗೆ ಸುಂಕವಿಲ್ಲ’ವಾದರೂ, ಬಂದವರಿಗೆ ಚಹಾ ಸಿಕ್ಕಿತು. ಹೋಟೆಲ್ ಎ.ಆರ್. ರೆಸಿಡೆನ್ಸಿಯಲ್ಲಿ ಬೆಳಗಿನ ಉಪಾಹಾರಕ್ಕೆ ಇಡ್ಲಿ,ಪೊಂಗಲ್, ಪೂರಿ ಇತ್ಯಾದಿ ಇದ್ದುವು. ತಿಂಡಿಯ ನಂತರ ಸನಿಹದಲ್ಲಿಯೇ ಇದ್ದ ಸ್ವಾಮಿ ವಿವೇಕಾನಂದ ಸ್ಮಾರಕ ಬಂಡೆಗೆ ಭೇಟಿ ಕೊಡುವುದಿತ್ತು.
ವಿವೇಕಾನಂದ ಮೆಮೋರಿಯಲ್ ರಾಕ್
ಸ್ವಾಮಿ ವಿವೇಕಾನಂದರು, 1892 ರ ಡಿಸೆಂಬರ್ 24 ರಂದು ಸಮುದ್ರವನ್ನು ಈಜಿ, 500 ಮೀ ದೂರದಲ್ಲಿರುವ ಈ ಬೃಹತ್ ಬಂಡೆಯಲ್ಲಿ ಮೂರು ದಿನ ಧ್ಯಾನ ಮಾಡಿ ದಿವ್ಯ ಅನುಭೂತಿಯನ್ನು ಪಡೆದ ನೆನಪಿಗಾಗಿ, 1970 ರಲ್ಲಿ ಇಲ್ಲಿ ಸ್ಮಾರಕವನ್ನು ರಚಿಸಲಾಯಿತು. ಪ್ರಸ್ತುತ ವಿವೇಕಾನಂದರ ಆಳೆತ್ತರೆದ ಕಂಚಿನ ಪ್ರತಿಮೆಯಿದೆ,ಧ್ಯಾನಮಂದಿರವಿದೆ. ಪಕ್ಕದಲ್ಲಿ ಪಾರ್ವತಿಯ ಗುಡಿಯಿದೆ. ಪಾರ್ವತಿಯು ಇಲ್ಲಿ ಒಂಟಿಕಾಲಿನಲ್ಲಿ ನಿಂತು ಶಿವನನ್ನು ಮದುವೆಯಾಗಬೇಕೆಂದು ಇಲ್ಲಿ ತಪಸ್ಸು ಮಾಡಿದಳೆಂಬ ನಂಬಿಕೆಯಿದೆ. ಸಮುದ್ರ ಶಾಂತವಾಗಿದ್ದರೆ, ಬೆಳಗ್ಗೆ 0800 ಗಂಟೆಯಿಂದ ಸಂಜೆ 0400 ಗಂಟೆ ವರೆಗೆ ವಿವೇಕಾನಂದ ಸ್ಮಾರಕಕ್ಕೆ ಹೋಗಲು ಅನುಮತಿ ಇರುತ್ತದೆ. ರೂ.20/- ಪ್ರವೇಶ ಶುಲ್ಕ ಮತ್ತು ರೂ.50/- ಫೆರ್ರಿಯ ಶುಲ್ಕ. ಟ್ರಾವೆಲ್ಸ್4ಯು ನವರು ನಮ್ಮನ್ನು ‘ಪೂಂಪ್ ಹಾರ್ ಶಿಪ್ಪಿಂಗ್ ಕಾರ್ಪೋರೇಶನ್ ನವರ ಆವರಣದಲ್ಲಿ ಸರದಿ ಸಾಲಿನಲ್ಲಿ ನಿಲ್ಲಿಸಿದರು. ಸುಮಾರು ಒಂದು ಗಂಟೆಯ ಕಾಯುವಿಕೆಯ ನಂತರ ನಮಗೆ ಫೆರ್ರಿಯಲ್ಲಿ ಹೋಗಲು ಅವಕಾಶವಾಯಿತು. ವಿವೇಕಾನಂದ ಮೆಮೋರಿಯಲ್ ರಾಕ್ ತಲಪಿದೆವಾದರೂ, ಮಳೆ, ಗಾಳಿ ಹೆಚ್ಚುತ್ತಲೇ ಇದ್ದ ಕಾರಣ ಅಲ್ಲಿ ಸ್ವಚ್ಚಂದವಾಗಿ ನೋಡಲು ಸಾಧ್ಯವಾಗಲಿಲ್ಲ. ಕೈಯಲ್ಲಿದ್ದ ಕೊಡೆಯನ್ನು ಗಾಳಿಯು ಪ್ಯಾರಾ ಚೂಟ್ ನಂತೆ ಹಾರಿಸಲು ಪ್ರಯತ್ನಿಸುತ್ತಿತ್ತು. ಫೆರ್ರಿ ಓಡಾಡುತ್ತಿದ್ದುದು ನಮ್ಮ ಪುಣ್ಯ. ‘ಉಪಾಸನೆ’ ಚಲನಚಿತ್ರದ ‘ಭಾರತ ಭೂಶಿರ ಮಂದಿರ ಸುಂದರಿ’ ಹಾಡು ಚಿತ್ರೀಕರಣವಾದ ಸ್ಥಳದಲ್ಲಿ ನಾವು ಒದ್ದೆಮುದ್ದೆಯಾಗಿ ಸ್ವಲ್ಪ ಸಮಯ ನಿಂತೆವು. ಇನ್ನು ನಿಂತರೆ ಪ್ರಯೋಜನವಾಗದು ಎಂದುಕೊಂಡು ಪಾರ್ವತಿಯ ಗುಡಿಯನ್ನೂ, ಶಿಲೆಯಲ್ಲಿ ಮೂಡಿಸಲಾದ ಅವಳ ‘ಒಂಟಿ ಕಾಲಿನ ಅಚ್ಚನ್ನೂ’ , ವಿವೇಕಾನಂದರ ಪ್ರತಿಮೆಯನ್ನೂ ನೋಡಿದೆವು. ಪಕ್ಕದಲ್ಲಿರುವ ಇನ್ನೊಂದು ಬಂಡೆಯ ಮೇಲೆ ತಮಿಳಿನ ಖ್ಯಾತ ಕವಿ ತಿರುವಳ್ಳುವರ್ ಅವರ 41 ಮೀ ಎತ್ತರದ ಪ್ರತಿಮೆಯಿದೆ. ಅದನ್ನು ದೂರದಿಂದ ನೋಡಿದೆವು. ಆಗಲೇ ಸಾಕಷ್ಟು ಜನರು ಸರದಿಯಲ್ಲಿ ಕಾಯುತ್ತಿದ್ದರೂ ಟ್ರಾವೆಲ್೪ಯುನವರು ಹೇಗೋ ವ್ಯವಸ್ಥೆ ಮಾಡಿ, ನಮಗೆ ಫೆರ್ರಿಯಲ್ಲಿ ಆಸನಗಳನ್ನು ಕಾಯ್ದಿರಿಸಿ, ಸುರಕ್ಷಿತವಾಗಿ ಕನ್ಯಾಕುಮಾರಿಯ ತೀರಕ್ಕೆ ತಲಪಿಸಿದರು.
ಮೂಗುತಿಸುಂದರಿ ಕನ್ಯಾಕುಮಾರಿ
ಸಮುದ್ರದ ದಡದಲ್ಲಿ ಕನ್ಯಾಕುಮಾರಿಯ ಚೆಂದದ ಮಂದಿರವಿದೆ. ಇದು ತಮಿಳುನಾಡಿನಲ್ಲಿದ್ದರೂ ಕೇರಳದ ಶೈಲಿಯ ಆಚರಣೆಯನ್ನು ಅನುಸರಿಸುತ್ತಾರೆ. ಸ್ಥಳಪುರಾಣದ ಪ್ರಕಾರ, ಕನ್ನಿಕೆಯ ರೂಪವೆತ್ತಿದ ಪಾರ್ವತಿಯು ಶಿವನನ್ನು ಮದುವೆಯಾಗಬೇಕೆಂದು ತಪಸ್ಸನ್ನಾಚರಿಸುತ್ತಾಳೆ. ಅವಳ ತಪಸ್ಸಿಗೆ ಮೆಚ್ಚಿದ ಶಿವನು ಕೈಲಾಸದಿಂದ ಬಂದು, ಕನ್ಯಾಕುಮಾರಿಯಿಂದ 12 ಕಿಮೀ ದೂರದಲ್ಲಿರುವ ‘ಶುಚೀಂದ್ರಂ’ನಲ್ಲಿ ತಂಗಿರುತ್ತಾನೆ. ಬೆಳಗಾಗುವ ಮೊದಲು ತಲಪಬೇಕೆಂದು ಕನ್ಯಾಕುಮಾರಿ ಷರತ್ತನ್ನು ವಿಧಿಸಿರುತ್ತಾಳೆ. ಆದರೆ, ಶುಚೀಂದ್ರಂಗೆ ಕೋಳಿಯ ರೂಪದಲ್ಲಿ ಬಂದ ನಾರದನು , ವಿಶ್ರಾಂತಿ ಪಡೆಯುತ್ತಿದ್ದ ಶಿವನಿಗೆ ಕೇಳುವಂತೆ ಕೊಕ್ಕೋ ಎಂದು ಕೂಗುತ್ತಾನೆ. ಓಹೋ, ಬೆಳಗಾಯಿತು, ಇನ್ನು ತಡವಾಯಿತು, ಮದುವೆ ಅಸಾದ್ಯ ಎಂದು ಶಿವನು ಕೈಲಾಸಕ್ಕೆ ಮರಳುತ್ತಾನೆ, ಹೀಗೆ ಕನ್ನಿಕೆಯು ಅವಿವಾಹಿತೆಯಾಗಿ ಉಳಿಯುತ್ತಾಳೆ. ನಾರದನ ಈ ಕೆಲಸಕ್ಕೆ ಕಾರಣ ಅಲ್ಲಿದ್ದ ಬಾಣಾಸುರ ಎಂಬ ರಾಕ್ಷಸನನ್ನು ವಧಿಸಲು ಕನ್ನಿಕೆಯಿಂದ ಮಾತ್ರ ಸಾಧ್ಯವಿತ್ತು. ಹೀಗೆ ಕನ್ಯಾಕುಮಾರಿಯಲ್ಲಿರುವ ದೇವಿ ಅವಿವಾಹಿತೆಯಾಗಿ ಉಳಿದಳು. ಕನ್ಯಾಕುಮಾರಿಯ ವಿಗ್ರಹ ಬಹಳ ಸೊಗಸಾಗಿದೆ. ಪ್ರತಿಮೆಯಲ್ಲಿಯುವ ಮೂಗುತಿ ಬಹಳ ದೂರದಿಂದಲೇ ಥಳಥಳನೆ ಹೊಳೆಯುತ್ತದೆ. ಹಿಂದೆ ಇಲ್ಲಿದ್ದ ಮೂಗುತಿ ಇನ್ನಷ್ಟು ಪ್ರಖರವಾಗಿ ಬೆಳಕನ್ನು ಪ್ರತಿಫಲಿಸಿ, ಹಡಗುಗಳಲ್ಲಿದ್ದ ನಾವಿಕರಿಗೆ ದೀಪಸ್ಥಂಭವಿರಬೇಕೆಂಬ ಗೊಂದಲ ಮೂಡಿಸುತ್ತಿತ್ತಂತೆ. ಹಾಗಾಗಿ, ಅದನ್ನು ಬ್ರಿಟಿಷರು ಒಯ್ದರು. ಈಗ ನಾವು ಕಾಣುವ ಮೂಗುತಿಯನ್ನು ತಿರುವಾಂಕೂರು ರಾಜರು ದೇವಿಗೆ ಅರ್ಪಿಸಿದರಂತೆ. ಹೀಗೆ, ನಾವು ಮೂಗುತಿಸುಂದರಿ ಕನ್ಯಾಕುಮಾರಿಗೆ ನಮಿಸಿ, ಹೋಟೆಲ್ ಗೆ ಮರಳಿದೆವು.
ಈ ಬರಹದ ಹಿಂದಿನ ಕಂತು ಇಲ್ಲಿದೆ: https://www.surahonne.com/?p=39180
ಮುಂದುವರಿಯುವುದು
ಹೇಮಮಾಲಾ.ಬಿ, ಮೈಸೂರು
Beautiful. ಹೇಮಕ್ಕ, ನೀವು ಪ್ರವಾಸ ಕಥನ ಬರೆಯುವ ರೀತಿ, ಪ್ರತಿಯೊಂದು ವಿಚಾರವನ್ನು ವಿವರಿಸುವ ರೀತಿ ಬಹಳ ಚಂದ.
ನಾರದ ಹೆಚ್ಚಿನ ಕಥೆಗಳಲ್ಲಿ ಅವನ ಕುಟಿಲ ಬುದ್ಧಿಗೆಯೇ ಪ್ರಸಿದ್ಧ.
ನಾನು ಸಹ ಕ್ಷೇತ್ರಕ್ಕೆ ಪ್ರವಾಸ ಹೋಗಿಬಂದಿದ್ದೆ.ಹೀಗಾಗಿ ಈ ಪ್ರವಾಸ ಕಥನ ಓದಿ ದಾಗ ಮತ್ತೊಂದು ಸಾರಿ ಅಲ್ಲಿ ಸುತ್ತುಹಾಕುತ್ತಾ..ಮೆಲಕು ಹಾಕುವಂತಾಗಿದೆ..ವಿವರಣೆ..ಆಪ್ತ ವಾಗಿದೆ..ಗೆಳತಿ ಹೇಮಾ..
ಹಲವಾರು ವರ್ಷಗಳ ಹಿಂದೆ ಕನ್ಯಾಕುಮಾರಿಗೆ ಹೋಗಿದ್ದ ಸಿಹಿನೆನಪು ಮರುಕಳಿಸಿತು. ನಮಗೆ ಮೋಡ ಕವಿದ ಸೂರ್ಯಾಸ್ತ ಮತ್ತು ಸುಂದರ ಸೂರ್ಯೋದಯ ನೋಡುವ ಭಾಗ್ಯ ಲಭಿಸಿತ್ತು. ಎಂದಿನಂತೆ ಸುಂದರ ನಿರೂಪಣೆ ಖುಷಿ ಕೊಟ್ಟಿತು..
ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು .
ಮೂಗುತಿ ಸುಂದರಿ ದೇವಿ “ಕನ್ಯಾಕುಮಾರಿ”ಯ ವರ್ಣನೆಯೊಂದಿಗೆ ಮೂಡಿಬಂದ ಚಂದದ ಪ್ರವಾಸೀ ಕಥನದ ಕಂತು.
ಸುಂದರ ನಿರೂಪಣೆ!