ಅವಿಸ್ಮರಣೀಯ ಅಮೆರಿಕ – ಎಳೆ 71
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಅಮೆರಿಕದಲ್ಲಿ ನರಕಾಸುರ..!!
ಕಾರ್ಯಕ್ರಮವು ತಡವಾಗಿಯಾದರೂ, ನಿರೀಕ್ಷಿತ ಮಟ್ಟದಲ್ಲಿ ಚೆನ್ನಾಗಿ ಆರಂಭವಾಯಿತು. ಮೊದಲ ಒಂದು ತಾಸಿನ ಗಾನ ಲಹರಿಯಲ್ಲಿ ತೆಂಕುತಿಟ್ಟು ಹಾಡುಗಳನ್ನು ಗಾನಕೋಗಿಲೆ ಪಟ್ಲ ಸತೀಶ್ ಶೆಟ್ಟಿಯವರ ಸುಮಧುರ ಕಂಠದಲ್ಲಿ ಕೇಳಿದರೆ, ಬಡಗುತಿಟ್ಟಿನ ಹಾಡುಗಳನ್ನು ಪ್ರಸಿದ್ಧ ಭಾಗವತರಾದ ಕೆ.ಜೆ.ಗಣೇಶ್ ಪ್ರಸ್ತುತ ಪಡಿಸಿದರು. ಜೊತೆಗೆ ಅಮೆರಿಕ ನಿವಾಸಿಗಳಾದ ವಿದ್ವಾನ್ ರಾಮಪ್ರಸಾದ್ ರವರು; ಹೊಸ ರಾಗವಾದ ರೇವತಿ, ಅಲ್ಲದೆ, ಹಿಂದೋಳ, ಸಾರಂಗ, ಮೋಹನ ಇತ್ಯಾದಿ ರಾಗಗಳು ಶುದ್ಧ ರೂಪದಲ್ಲಿ ಯಕ್ಷಗಾನ ಹಾಡುಗಳಲ್ಲಿ ಹೇಗೆ ಬಳಸಲ್ಪಡುತ್ತವೆ ಎಂದು ಸಾದೋಹರಣ ಸಹಿತವಾಗಿ ಪ್ರಸ್ತುತ ಪಡಿಸಿದರು. ಮುಂದೆ, ಪ್ರಸಿದ್ಧ ಕಲಾವಿದರಾದ, ಎಮ್. ಎಲ್. ಸಾಮಗ, ಚಂದ್ರಶೇಖರ ಪೂಜಾರಿ, ಮಹೇಶ್ ಮಣಿಯಾಣಿ ಮುಂತಾದವರ ಕೂಡುವಿಕೆಯಿಂದ ನರಕಾಸುರ ವಧೆಯ ಪ್ರಸಂಗವು ಚೆನ್ನಾಗಿ ಮೂಡಿಬಂತು.
ಎರಡನೇ ದಿನದಲ್ಲಿ, ಮೊದಲ ಒಂದೂವರೆ ತಾಸು ನಾಟ್ಯ ವೈಭವದಲ್ಲಿ ; ಅಭಿಮನ್ಯು-ಕನಕಾಂಗಿ ಪ್ರಸಂಗ ಹಾಗೂ ಅಭಿಮನ್ಯು ತನ್ನ ತಾಯಿ ಸುಭದ್ರೆಯನ್ನು ಬೀಳ್ಕೊಡುವ ಪ್ರಸಂಗಗಳಲ್ಲಿ , ಪಾತ್ರಧಾರಿಗಳ ನಾಟ್ಯ ಕಣ್ಮನ ಸೆಳೆಯಿತು. ಮುಂದೆ, ಭೀಷ್ಮ ವಿಜಯ ಪ್ರಸಂಗವು ಬಡಗುತಿಟ್ಟು ರೂಪದಲ್ಲಿ , ಅಮೇರಿಕಾದ ಹವ್ಯಾಸಿ ಕಲಾವಿದರ ಕೂಡುವಿಕೆಯಿಂದ ನಡೆದು ಎಲ್ಲರ ಮೆಚ್ಚುಗೆ ಗಳಿಸಿತು.
ಕಾರ್ಯಕ್ರಮಗಳ ನಡುವೆ ಅರ್ಧ ತಾಸಿನ ವಿರಾಮದ ಸಮಯ, ಹಣ ಪಾವತಿಸಿ ಕಾಫಿ, ಚಾ, ತಿಂಡಿಗಳನ್ನು ಪಡೆದುಕೊಳ್ಳುವ ವ್ಯವಸ್ಥೆಯಿತ್ತು. ಕಲಾವಿದರ ಸಮಯ ಪಾಲನೆಯ ಕೊರತೆಯಿಂದ ಕಾರ್ಯಕ್ರಮವು ತಡರಾತ್ರಿ ಕೊನೆಗೊಂಡುದು ಆಯೋಜಕರಿಗೆ ಇರುಸು ಮುರುಸು ಉಂಟು ಮಾಡಿದುದಂತೂ ನಿಜ. ಅಡಿಟೋರಿಯಂ ಬಾಡಿಗೆ ಅದರ ಸವಲತ್ತುಗಳಿಗೆ ತಕ್ಕಂತೆ ಹೆಚ್ಚು ಕಡಿಮೆ ಇರುವುದು ರೂಢಿ. ಆದರೆ ನಿಗದಿತ ವೇಳೆಯಲ್ಲಿ ಅದನ್ನು ಬಿಟ್ಟು ಕೊಡದಿದ್ದರೆ, ಬಾಡಿಗೆ ಶುಲ್ಕವು ಗಂಟೆಗೆ ನೂರಾರು ಡಾಲರ್ ಗಳಷ್ಟು ಹೆಚ್ಚಾಗುತ್ತಾ ಹೋದಂತೆ ಸಂಯೋಜಕರ ಎದೆ ಬಡಿತವೂ ಹೆಚ್ಚುವುದು ಸಹಜ ತಾನೇ?! ಏನೇ ಇರಲಿ.. ಈ ಪ್ರದೇಶದ ಯಕ್ಷಗಾನ ಪ್ರಿಯರಿಗೆ ಎರಡು ದಿನಗಳ ಕಾಲ ರಸದೌತಣವೀಯಲು ಪ್ರಯತ್ನಿಸಿದ ಆಯೋಜಕರ ಶ್ರಮವು ನಿಜಕ್ಕೂ ಶ್ಲಾಘನೀಯ.
KKNC ಕ್ರೀಡಾ ದಿನ
ಮೇ 22, 2019ರ ಬೆಳಗಿನ ಹೊತ್ತು…ಕ್ರೀಡಾದಿನದ ವಿಶೇಷತೆಗಳನ್ನು ಕಣ್ತುಂಬಿಕೊಳ್ಳಲು ನಾವೆಲ್ಲರೂ ಸಜ್ಜಾಗಿ ಹೊರಟೆವು. ಹುಲ್ಲು ಹಾಸಿನ ವಿಶಾಲವಾದ ಸ್ವಚ್ಛ ಬಯಲು …ಸುತ್ತಲೂ ಬೆಳೆದ ದಟ್ಟ ಹಸಿರು ತುಂಬಿದ ಎತ್ತರೆತ್ತರ ಮರಗಳು. ಬಯಲಿನ ಸರಹದ್ದಿನಲ್ಲಿ ಅಲ್ಲಲ್ಲಿ ತಲೆ ಎತ್ತಿ ನಿಂತ ಸಂಘದ ಕಾರ್ಯಕರ್ತರಿಂದಲೇ ಹಾಕಲ್ಪಟ್ಟ ಹತ್ತಾರು ತಾತ್ಕಾಲಿಕ ವ್ಯಾಪಾರೀ ಮಳಿಗೆಗಳು. ಮಕ್ಕಳ ಕಲರವ, ಹಿರಿಕಿರಿಯ ಸದಸ್ಯರ ತುರಾತುರಿಯ ಉತ್ಸಾಹದ ಓಡಾಟ, ನಗೆ, ಮಾತು, ಸಂಭ್ರಮ… ಎಲ್ಲೋ ಬೇರೆಯೇ ಲೋಕಕ್ಕೆ ಬಂದಿಳಿದಂತಹ ಅನುಭವ! ಮಳಿಗೆಗಳನ್ನು ಸದಸ್ಯರೇ ನಡೆಸುತ್ತಿದ್ದು, ಒಂದು ಕಡೆಗೆ ಕಲ್ಲಂಗಡಿ ಹಣ್ಣುಗಳ ತುಂಡು, ನಿಂಬೆ ಶರಬತ್ತು, ಪಾನಕ ಇತ್ಯಾದಿಗಳ ಮಾರಾಟದಲ್ಲಿ ಮಕ್ಕಳೂ ತೊಡಗಿಸಿಕೊಂಡಿದ್ದರೆ, ಇನ್ನೊಂದೆಡೆ ಚೆನ್ನೆಮಣೆಯಂತಹ ಹಲವು ಹಳ್ಳಿಯ ಜಾನಪದ ಆಟಗಳನ್ನು ಆಡುತ್ತಿದ್ದರು. ಹಸಿರೇ ಉಸಿರು…ವೃಕ್ಷಗಳನ್ನು ಸಂರಕ್ಷಿಸಲು ಕರೆಕೊಡುತ್ತಾ ನಿಂತಿರುವ ಗುಂಪು ಮತ್ತೊಂದೆಡೆ. ಬಯಲಿನ ಇನ್ನೊಂದು ಪಕ್ಕದಲ್ಲಿ ಬಿಸಿ ಬಿಸಿ ಮಸಾಲೆ ದೋಸೆಯ ವ್ಯಾಪಾರ ಬಹಳ ಜೋರಾಗಿಯೇ ನಡೆದಿತ್ತು. ಹಣ ತೆತ್ತು, ಕೂಪನ್ ಪಡೆದು, ಸಾಲು ನಿಂತು ಎಲ್ಲರೂ ಮಸಾಲೆ ದೋಸೆ ಹೊಡೆದದ್ದೇ ಹೊಡೆದದ್ದು!
ಈ ಮಧ್ಯೆ, ಬೆಳಗ್ಗೆ ಹತ್ತೂವರೆಯ ಸಮಯ… ಹಿರಿಯರಿಗಾಗಿ ಮೂರು ಮೈಲು ನಡಿಗೆಯ ಸ್ಪರ್ಧೆ ಏರ್ಪಡಿಸಿದ್ದರು. ಅದರಲ್ಲಿ ಭಾಗವಹಿಸಲು ಪ್ರವೇಶ ಶುಲ್ಕ ತೆರಬೇಕಿತ್ತು. ಮಗಳ ಒತ್ತಾಯದ ಮೇರೆಗೆ ನಾನು ಉತ್ಸಾಹದಿಂದಲೇ ಸೇರಿದೆ. ಪುರುಷರು ಮತ್ತು ಮಹಿಳೆಯರು ಜೊತೆಗೇ ನಡೆಯಬೇಕಿತ್ತು. ಸ್ಪರ್ಧೆ ಪ್ರಾರಂಭವಾಗುವ ಸಮಯಕ್ಕೆ ಸರಿಯಾಗಿ ಸ್ಪರ್ಧಾ ಗುಂಪಿನಲ್ಲಿ ಯುವಕ ಯುವತಿಯರೂ ಸೇರಿಕೊಂಡುಬಿಟ್ಟರು! ಅವರೊಡನೆ ಸ್ಪರ್ಧೆ ಸಾಧ್ಯವಿಲ್ಲವೆಂದು ತಿಳಿದಿದ್ದರೂ; ಹೊಸದೊಂದು ಅನುಭವಕ್ಕಾಗಿ, ಆಗ ತಾನೇ ಪರಿಚಯವಾದ ಬೆಂಗಳೂರಿನ ಹಿರಿಯ ಮಹಿಳೆಯ ಜೊತೆಗೂಡಿ ನಮ್ಮ ನಡಿಗೆ ಪ್ರಾರಂಭವಾಯಿತು. ಭಾಗವಹಿಸುವ ಸ್ಪರ್ಧಾಳುಗಳಿಗೆ ಎಲ್ಲರಿಗೂ ಗುರುತಿನ ಬ್ಯಾಜ್ ನೀಡಿದರು. ಅದನ್ನು ಹೆಮ್ಮೆಯಿಂದ ಭುಜಕ್ಕೆ ಸಿಕ್ಕಿಸಿಕೊಂಡು ಹೊರಟೆವು..ಠೀವಿಯಿಂದ!
ಸ್ಫರ್ಧಾಳುಗಳು ಹೋಗಬೇಕಾದ ದಾರಿಯ ಸೂಚಕವನ್ನು ಅಲ್ಲಲ್ಲಿ ಹಾಕಲಾಗಿತ್ತು. ಹೆಚ್ಚಿನವರ ನಡಿಗೆಯು ಓಟದ ರೂಪ ತಾಳಿತ್ತು! ಇದು ಎಲ್ಲರನ್ನು ಪ್ರೋತ್ಸಾಹಿಸುವ ಸಲುವಾಗಿ ಆಯೋಜಿಸಿದ ಸ್ಫರ್ಧೆಯಾದ್ದರಿಂದ ನಿಯಮ ಮೀರಿದವರ ಬಗ್ಗೆ ಹೇಳಲು, ಕೇಳಲು ಮಾತ್ರ ಯಾರೂ ಇರಲಿಲ್ಲವೆನ್ನಿ! ನಾವಿಬ್ಬರು ಹಿರಿಯ ಮಹಿಳೆಯರು ಕಟ್ಟುನಿಟ್ಟಾಗಿ ನಿಯಮವನ್ನು ಪಾಲಿಸುತ್ತಾ (ಓಡಲು ಹೇಗೂ ಸಾಧ್ಯವಿಲ್ಲವೆನ್ನಿ!), ಲೋಕಾಭಿರಾಮ ಮಾತನಾಡುತ್ತಾ ನಡಿಗೆಯಲ್ಲೇ ಸಾಗಿದೆವು. ಅಲ್ಲಲ್ಲಿ ನಿಂತು ದಾರಿಯಲ್ಲಿದ್ದ ಹೂದೋಟಗಳಲ್ಲಿರುವ ಚಂದದ ಹೂಗಳನ್ನು ನೋಡಿ ಆಸ್ವಾದಿಸುತ್ತಾ ನಡೆಯುತ್ತಿದ್ದಾಗ, ಆಗಾಗ ಸ್ವಯಂಸೇವಕರು ನೀರಿನ ಬಾಟಲಿ ಹಿಡಿದು ಬಂದು ವಿಚಾರಿಸುತ್ತಿದ್ದರು. ನಡೆಯುವ ದಾರಿಯ ಗುರುತಿಗಾಗಿ ಹಾಕಿದ ಬಾಣದ ಗುರುತಿನ ನೇರಕ್ಕೆ ಹೋಗುತ್ತಿದ್ದರೂ ಒಂದು ಕಡೆ ರಸ್ತೆ ದಾಟುವಷ್ಟರಲ್ಲಿ ದಾರಿ ತಪ್ಪಿದಂತಾಯಿತು! ಹಿಂದೆ, ಮುಂದೆ ನಡೆಯುತ್ತಿದ್ದ ನಮ್ಮ ಸಹ ಸ್ಪರ್ಧಿಗಳೂ ನಾಪತ್ತೆ! ಮುಂದೇನು ಮಾಡುವುದೆಂದು ತಿಳಿಯದೆ ಬಂದ ದಾರಿಯಲ್ಲೇ ಹಿಂತಿರುಗಲು ಯೋಚಿಸುತ್ತಿರುವಾಗಲೇ ನಮಗಿಂತ ಕಿರಿವಯಸ್ಸಿನ ಯುವತಿಯೊಬ್ಬಳು ಏದುಸಿರು ಬಿಡುತ್ತಾ ನಮ್ಮ ಹಿಂದುಗಡೆ ಬರುತ್ತಿರುವುದು ಕಾಣಿಸಿತು. ಅಬ್ಬಾ…ಬದುಕಿದೆವು…ನಾವು ಸರಿ ದಾರಿಯಲ್ಲಿಯೇ ಹೋಗುತ್ತಿರುವುದರ ಬಗ್ಗೆ ಖಾತ್ರಿಯೆಂದು ತಿಳಿದರೆ ಅದೂ ತಪ್ಪಾಗಿತ್ತು! ಅವಳೂ ನಮ್ಮಂತೆ ದಾರಿ ತಪ್ಪಿ ಬಂದುದಾಗಿತ್ತು. ಅಷ್ಟರಲ್ಲಿ ದೇವರಂತೆ ಪ್ರತ್ಯಕ್ಷರಾದರು… ನಮ್ಮ ಸ್ವಯಂಸೇವಕರು! ದೂರದಿಂದಲೇ ನಮ್ಮನ್ನು ಗಮನಿಸುತ್ತಿದ್ದವರು, ನಮ್ಮ ಹಿಂದೆಯೇ ಓಡೋಡುತ್ತಾ ಬಂದು ನಮ್ಮನ್ನು ಸರಿಯಾದ ದಾರಿಯಲ್ಲಿ ಕರೆದೊಯ್ದರು. ನಾವು ರಸ್ತೆ ದಾಟುವಾಗಲೇ ತಪ್ಪಾಗಿದ್ದುದರ ಬಗ್ಗೆ ಆಗಲೇ ಅರಿವಾದುದು! ಅಂತೂ ಕೊನೆಯಿಂದ ಮೊದಲನೆಯವರಾಗಿ ನಡಿಗೆ ಸ್ಪರ್ಧೆಯಲ್ಲಿ ವಿಜೇತರಾದ ನಮಗೂ ಹಾಗೂ ಭಾಗವಹಿಸಿದವರೆಲ್ಲರಿಗೂ ವಾರ ಬಿಟ್ಟು ಚಂದದ ಪದಕಗಳನ್ನು ನೀಡಲಾಯಿತು. ಅದನ್ನು ಸವಿನೆನಪಿಗಾಗಿ ಇನ್ನೂ ಜೋಪಾನವಾಗಿ ಕಾಯ್ದಿರಿಸಿಕೊಂಡಿರುವೆ.
(ಮುಂದುವರಿಯುವುದು…..)
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: https://www.surahonne.com/?p=39011
-ಶಂಕರಿ ಶರ್ಮ, ಪುತ್ತೂರು
ಎಂದಿನಂತೆ ಪ್ರವಾಸಕಥನ ಓದಿಸಿಕೊಂಡು ಹೋಯಿತು ವಿಶೇಷವೇನೆಂದರೆ ವಿದೇಶಿ ನೆಲದಲ್ಲೂ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಬಹುಮಾನ ತೆಗೆದುಕೊಂಡು ಅದನ್ನು ಜತನವಾಗಿ ಕಾಪಾಡಿಕೊಂಡು ಬರುತ್ತಿರುವ ವಿಷಯ ತಿಳಿದು ಸಂತಸವಾಗಿ ದ್ದು..ಅಭಿನಂದನೆಗಳು ಮೇಡಂ
ತಮ್ಮ ಪ್ರೋತ್ಸಾಹಕ ನುಡಿಗಳಿಗೆ ಧನ್ಯವಾದಗಳು… ನಾಗರತ್ನ ಮೇಡಂ
ಚೆನ್ನಾಗಿದೆ
ಧನ್ಯವಾದಗಳು