ಅಕ್ಕರೆಯ ನುಡಿಯ ಸಕ್ಕರೆಯ ನಾಡ ನನ್ನ ಮಂಡ್ಯ….ನೀನು ಕಂಡ್ಯಾ….?
ಕರುನಾಡ ತನುಮನದಲ್ಲಿ ಉದಿಸಿದ ಅಕ್ಕರೆಯ ಸವಿ ಸಕ್ಕರೆಯ ಮಂಡ್ಯ. ಅಚ್ಚ ಕನ್ನಡಿಗರಿಂದ ಆವೃತವಾದ ನನ್ನ ನೆಚ್ಚಿನ ಮಂಡ್ಯ , ಸುಂದರವಾದ ಹಳ್ಳಿಗಳಿಂದ ಕೂಡಿದ್ದು , ತನ್ನದೇ ಆದ ಭಾಷಾ ಸೊಗಡಿಗೂ ಹೆಸರುವಾಸಿಯಾಗಿದೆ. ನಿತ್ಯದ ಊಟವಾದ ಮುದ್ದೆ, ಬಸ್ಸಾರಂತೂ ನಾಡಿನಾಚೆಗೂ ಪ್ರಸಿದ್ಧಿ ಪಡೆದು, ಸಿನಿಮಾ ಕ್ಷೇತ್ರದ ಹಾಡಿನಲ್ಲಿಯೂ ಇಳಿದು ರಸದೌತಣ ನೀಡಿದೆ. ಶ್ರೀರಂಗಪಟ್ಟಣದ ಐತಿಹಾಸಿಕ ಕೋಟೆ, ಕುಂತಿಬೆಟ್ಟ , ಕರೀಘಟ್ಟಗಳಂತಹ ಕೊತ್ತಲಗಳಿಂದ ತುಂಬಿದ ನಮ್ಮ ಮಂಡ್ಯವಂತೂ ಐತಿಹಾಸಿಕದಲ್ಲೂ ಪ್ರಸಿದ್ಧಿ.
ಜೀವನದಿ ಕಾವೇರಿಯಂತೂ ಜಗತ್ಪ್ರಸಿದ್ಧ. ಕನ್ನಂಬಾಡಿ ಕಟ್ಟೆ ಹಾಗೂ ಬೃಂದಾವನಗಳಿಂದ ಕೂಡಿದ ಮಂಡ್ಯದ ಸೊಬಗ ನೋಡಲು ದೇಶವಿದೇಶಾದಾಚೆಯಿಂದಲೂ ಜನ ಧಾವಿಸಿ ಬರುತ್ತಾರೆ. ಕಾವೇರಿಯಿಂದ ಉಂಟಾದ ಜಲಪಾತವಂತೂ ರಮಣೀಯತೆ. ಬಣ್ಣಿಸಲು ಮಾತೇ ಇಲ್ಲ. ಗಗನಚುಕ್ಕಿ , ಭರಚುಕ್ಕಿಗಳಂತೂ ಆಕಾಶದಲ್ಲಿನ ಸೂರ್ಯ, ಚಂದ್ರರ ರೀತಿ ವಿರಾಜಿಸುತ್ತವೆ.
ಮಂಡ್ಯದ ಉದ್ದಗಲಕ್ಕೂ ಕೈಚಾಚಿ ನಿಂತ ಹೊಲಗದ್ದೆಯಲ್ಲಿನ ಪೈರುಗಳು ಸದಾ ಕಣ್ಣಿಗೆ ತಂಪನೆರೆದು ಮುದನೀಡುತ್ತವೆ. ವರ್ಷದ ಎಲ್ಲಾ ಕಾಲದಲ್ಲೂ ಒಂದಿಲ್ಲೊಂದು ಕೃಷಿಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಮಂಡ್ಯದ ಜನತೆ ಹೆಚ್ಚು ರೈತರಿಂದ ಕೂಡಿದ್ದಾರೆ. ನಮ್ಮ ದೇಶ ಹಳ್ಳಿಗಳಿಂದ ಕೂಡಿದ ದೇಶ ಎಂದು ಹೇಗೆ ಅನಿಸಿಕೊಂಡಿದೆಯೋ ಹಾಗೆ ನಮ್ಮ ಮಂಡ್ಯವೂ ಸಹಾ ಸುಮಾರು ಒಂದೂವರೆ ಸಾವಿರಕ್ಕೂ ಮಿಗಿಲಾಗಿ ಹಳ್ಳಿಗಳಿಂದ ಕೂಡಿದ್ದು ಮಾದರಿಜಿಲ್ಲೆಯಾಗಿದೆ.
ನೆಲದ ಬೆಳೆಯನ್ನೇ ನಂಬಿಕೊಂಡು ಬದುಕುವುದರ ಜೊತೆಗೆ ಸಕ್ಕರೆ ಕಾರ್ಖಾನೆಯಂತಹ ಹಲವಾರು ಕಾರ್ಖಾನೆಗಳೂ ಸಹಾ ಇಲ್ಲುಂಟು. ಆದರೆ ಹೆಚ್ಚು ಕೃಷಿಯನ್ನು ಅವಲಂಬಿಸಿದ ಜನತೆ ಜನರ ಜೀವದುಸಿರಿಗೆ ಕಾರಣವಾಗಿದ್ದಾರೆ. ಜಗತ್ತು ಏನಿಲ್ಲವಾದರೂ ಬದುಕುತ್ತದೆ. ಆದರೆ ತಿನ್ನುವ ಅನ್ನವಿಲ್ಲದಿದ್ದರೆ ಮಾತ್ರ ಖಂಡಿತಾ ಬದುಕುವುದಿಲ್ಲ. ಇಂತಹ ಜೀವರಾಶಿಗಳ ಜೀವನಕ್ಕೆ ಕಾರಣವಾದ ಕೃಷಿಕರು ಇಲ್ಲಿ ಕಾವೇರಿಯನ್ನು ನಂಬಿ ಬದುಕುತ್ತಿದ್ದಾರೆ. ಆಗಾಗ್ಗೆ ಕಾವು ಏರಿಸಿಕೊಂಡು ಕಾವೇರುವ ಕಾವೇರಿನದಿಯು ರಾಜ್ಯ ರಾಜ್ಯಗಳ ನಡುವೆ ಅಡಕೆಕತ್ತರಿಯೊಳಗೆ ಸಿಲುಕಿದಂತೆ ಒದ್ದಾಡಿಬಿಡುವುದನ್ನು ರೈತರು ತಾಳಿಕೊಳ್ಳುತ್ತಿರುವುದು ವಿಷಾದನೀಯವೆನಿಸುತ್ತದೆ. ಆದರೂ ನೆರೆರಾಜ್ಯಕ್ಕೂ ಜೀವಜಲವನ್ನು ಕರುಣಿಸುತ್ತಿರುವ ನಮ್ಮ ಮಂಡ್ಯದ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ.
ಮಂಡ್ಯವು ಹಲವು ವಿಶೇಷತೆಗಳಿಂದ ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡಿದೆ. ಕೃಷಿಯಿಂದ ಹಿಡಿದು ಮನೋರಂಜನೆವರೆಗೂ ಹೆಸರಾದ ನಮ್ಮ ಮಂಡ್ಯ ಹಳ್ಳಿಯಿಂದ ದಿಲ್ಲಿವರೆಗೂ ಹೆಸರುಮಾಡಿದೆ. ಉತ್ತಮ ರಾಜಕೀಯ ಬೆಳವಣಿಗೆಯನ್ನು ತಂದುಕೊಟ್ಟ ಧುರೀಣರಿದ್ದಾರೆ. ಶೈಕ್ಷಣಿಕವಾಗಿ ತನ್ನದೇ ಆದ ಛಾಪನ್ನು ಒತ್ತುತ್ತಾ ಮುನ್ನಡೆದಿದೆ. ಸಿನಿಮಾಕ್ಷೇತ್ರದಲ್ಲಂತೂ ವಿಶೇಷ ಸ್ಥಾನ ಮಾನ ದೊರಕಿಸಿಕೊಂಡಿದೆ. ಹಾಗೆಯೇ ಜಗತ್ಪ್ರಸಿದ್ಧ ದೇವಾಲಯಗಳಿಂದ ಕೂಡಿದ್ದು ಪೌರಾಣಿಕವಾಗಿ,ಐತಿಹಾಸಿಕವಾಗಿ, ಸಾಮಾಜಿಕವಾಗಿ ಮುನ್ನಡೆಸಾಧಿಸಿದೆ. ಹಾಗೆಯೇ ಮಂಡ್ಯದ ವಿಶೇಷತೆಯೆಂದರೆ ಜಾನಪದ ಕಲೆಯನ್ನು ಆರಾಧಿಸಿಕೊಂಡು ,ಉಳಿಸಿಕೊಂಡು, ಬೆಳೆಸಿಕೊಂಡು ಪ್ರಪಂಚದಾದ್ಯಂತ ಪಸರಿಸುತ್ತಿರುವುದು ಇನ್ನೊಂದು ಹೆಮ್ಮೆಯ ವಿಷಯ. ಪೂಜಾಕುಣಿತದಂತ ಜಾನಪದ ಕಲೆಗಳು ಇಲ್ಲಿ ಗಂಡು ಹೆಣ್ಣೆನ್ನದೆ ಕರಗತವಾಗಿದೆ. ಪುರಾಣ ಪ್ರಸಿದ್ಧ ಕ್ಷೇತ್ರಗಳಂತೂ ಸಾಕಷ್ಟಿವೆ. ಏಷ್ಯಾ ಖಂಡಕ್ಕೇ ಮೊದಲ ಬಾರಿಗೆ ವಿದ್ಯುತ್ ಸೃಷ್ಟಿಸಿದ ಏಕೈಕ ಜಿಲ್ಲೆ ನಮ್ಮ ಮಂಡ್ಯ. ಅಭಿವೃದ್ಧಿ ಪಥದತ್ತ ದಾಪುಗಾಲಿಟ್ಟು ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಮಂಡ್ಯ ಕೂಡಾ ಒಂದೆಂದು ಹೇಳಲು ಸಂತೋಷವಾಗುತ್ತದೆ.
ನನ್ನ ಹೆಮ್ಮೆ ನನ್ನ ಮಂಡ್ಯ ; ಇದ ನೀ ಕಂಡ್ಯಾ.
-ಸಿ.ಎನ್.ಭಾಗ್ಯಲಕ್ಷ್ಮಿನಾರಾಯಣ
ಸೊಗಸಾದ ಬರಹ
ಲೇಖನ ಚೆನ್ನಾಗಿ ದೆ..ಸೋದರಿ.
ಲೇಖನ ಚೆನ್ನಾಗಿದೆ. ಹೆಮ್ಮೆಯ ಮಂಡ್ಯವನ್ನು ಕಾಣಲು ಕಾತರರಾಗಿದ್ದೇವೆ ಮೇಡಂ!