ಕನಕ ಜಾನಕಿ-ತಾಳಮದ್ದಲೆ
ಭಾರತೀಯ ಆಸ್ತಿಕ ಸಮಾಜ ಜನಸಾಮಾನ್ಯರನ್ನು ಜಾಗೃತವಾಗಿರಿಸಲು ಶ್ರಾವ್ಯ ಮಾಧ್ಯಮವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತದೆ. ಅದು ಹಾಡಿಕೆ ಮತ್ತು ಕಥನ ಎರಡನ್ನೂ ಒಳಗೊಳ್ಳುವುದರ ಮೂಲಕ ಕೇಳುಗರಿಗೆ ವಿಷಯದಲ್ಲಿ ಮನಸ್ಸನ್ನು ಇಡಲು ಮತ್ತು ಕೇಳಿದುದನ್ನು ವಿಶ್ಲೇಷಣೆ ಮಾಡಲು ಪ್ರೇರಣೆಯನ್ನು ಕೊಡುತ್ತದೆ. ಸಾಮಾನ್ಯವಾಗಿ ಈ ಶ್ರಾವ್ಯ ಮಾಧ್ಯಮ ಹರಿಕಥೆಯಾಗಿರುವುದೇ ಹೆಚ್ಚು. ಕರ್ನಾಟಕದ ಕರಾವಳಿಯ ಪ್ರದೇಶಗಳಲ್ಲಿ ಇದು ಯಕ್ಷಗಾನ ತಾಳಮದ್ದಲೆಯಾಗಿ ಜನಪ್ರಿಯ. ಹರಿಕಥೆಯ ಕೀರ್ತನಕಾರನಿಗೆ ಕಥಾ ಹಂದರದೊಳಗೆ ಕಥೆಯ ಪಾತ್ರಗಳನ್ನು, ಸಂದರ್ಭಗಳನ್ನು ಚಿತ್ರಿಸುವಲ್ಲಿ ಸ್ವಾತಂತ್ರ್ಯ ಇರುವಂತೆ ತಾಳಮದ್ದಲೆಯಲ್ಲಿ ಭಾಗಿಯಾಗುವ ಪಾತ್ರಧಾರಿಗೂ ಇರುತ್ತದೆ. ದಿನನಿತ್ಯದ ಸಮಸ್ಯೆಗಳನ್ನು ಬದಿಗಿರಿಸಿ ಭಕ್ತಿಭಾವವನ್ನು ಮನಸ್ಸಿನಲ್ಲಿ ತುಂಬಿಕೊಳ್ಳಬೇಕು, ನಿಧಾನವಾಗಿ ಅಧ್ಯಾತ್ಮದ ಕಡೆಗೆ ಮನಸ್ಸನ್ನು ತಿರುಗಿಸಬೇಕು, ಸಮಧಾನದಿಂದ ಬದುಕನ್ನು ನಿರ್ವಹಿಸಬೇಕು ಎನ್ನುವುದು ಹರಿಕಥೆ, ತಾಳಮದ್ದಲೆಗಳ ಉದ್ದೇಶ. ಒಂದರ್ಥದಲ್ಲಿ ಮನಸ್ಸಿನ ಶುದ್ಧೀಕರಣ ಇವುಗಳ ಉದ್ದೇಶ.
ಯಕ್ಷಗಾನ ತಾಳಮದ್ದಲೆಯು ಯಕ್ಷಗಾನ ಕಲಾ ಪ್ರಕಾರವು ಅಳವಡಿಸಿಕೊಂಡಿರುವ ಪ್ರಸಂಗವೊಂದರ ಪದ್ಯಗಳನ್ನೇ ಬಳಸಿಕೊಳ್ಳುತ್ತದೆ. ಯಾವುದಾದರೊಂದು ಪೌರಾಣಿಕ ಕಥೆಯನ್ನು ವಸ್ತುವನ್ನಾಗಿ ಹೊಂದಿರುತ್ತದೆ. ಅದರಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಪಾತ್ರಗಳು ಇರುತ್ತವೆ. ಆ ಪಾತ್ರಗಳು ಕಥಾಭಾಗದಲ್ಲಿ ಪ್ರವೇಶ ಆದಾಗ ಅದನ್ನು ನಿರ್ವಹಿಸುವವರು ತಮ್ಮ ಪಾತ್ರದ ಪರಿಚಯವನ್ನು ಮೊದಲು ಮಾಡಿಕೊಳ್ಳುತ್ತಾರೆ. ಆನಂತರ ಕಥೆಯ ಸಂದರ್ಭ ಅಥವಾ ಕಥೆ ಒಳಗೊಳ್ಳುವ ಸಮಸ್ಯೆಯನ್ನೂ ಪರಿಚಯಿಸುತ್ತಾರೆ. ಅದರಲ್ಲಿ ಸಿಲುಕಿಕೊಂಡಿರುವ ತಮ್ಮ ಬಿಕ್ಕಟ್ಟನ್ನು ಒಂದು ರೀತಿಯ ಸಮರ್ಥನೆಯಾಗಿ ಅಥವಾ ತಮ್ಮ ನಡೆವಳಿಕೆಗೆ ಕೊಡುವ ಸಮಜಾಯಿಷಿಯಾಗಿ ಮುಂದಿಡುತ್ತಾರೆ. ಇದು ನ್ಯಾಯಾಲಯದಲ್ಲಿಯ ಪರ ಮತ್ತು ವಿರೋಧದ ವಾದಮಂಡನೆಯ ರೀತಿಯಲ್ಲಿ ಇರುತ್ತದೆ. ಇಂತಹ ತಾಳಮದ್ದಳೆಯಲ್ಲಿ ಪಾತ್ರಧಾರಿಗಳು ಪಾತ್ರವನ್ನು ನಿರ್ವಹಿಸುವ ರೀತಿಯಲ್ಲಿ ಒಮ್ಮೊಮ್ಮೆ ಕಥೆಯ ಆವರಣವನ್ನೇ ಹೊಸದಾಗಿಸಿಬಿಡುವ ಪ್ರಯೋಗಕ್ಕೆ ಅಥವಾ ಸೃಜನಶೀಲತೆಗೆ ಅವಕಾಶವಿರುತ್ತದೆ.
ನವರಾತ್ರಿ ದೇವಿಯ ಆರಾದನೆಗೆ ಮೀಸಲಾದ ಹಬ್ಬ. ದೇವಿ ಬಹುಮಟ್ಟಿಗೆ ರಾಕ್ಷಸರ ಸಂಹಾರಕ್ಕಾಗಿಯೇ ಆವಿರ್ಭವಿಸಿದವಳು. ರಾಕ್ಷಸರು ಚಿನ್ನವನ್ನೂ ಒಳಗೊಂಡಂತೆ ಎಲ್ಲಾ ವೈಭವೋಪೇತ ಭೌತಿಕ ಸಂಪತ್ತಿಗೂ ಒಂದು ಹೆಸರು. ದೇವಿ ಅವರನ್ನು ನಿಗ್ರಹಿಸುವುದರ ಮೂಲಕ ಭೌತಿಕ ಆಕರ್ಷಣೆಗಳಿಗೆ ಕೊನೆ ಹಾಡುತ್ತಾಳೆ. ಇಂಥ ಪರಿಕಲ್ಪನೆಗೆ ಪೂರಕವಾದದ್ದು ಸೀತೆಯ ಪಾತ್ರಚಿತ್ರಣ.
“ಕನಕ ಜಾನಕಿ” – ಏಕವ್ಯಕ್ತಿ ಯಕ್ಷಗಾನ ತಾಳಮದ್ದಳೆ ಒಂದು ರೀತಿಯ ಏಕಾಂಕ, ಏಕಪಾತ್ರಾಭಿನಯವಾಗಿ ಯಕ್ಷಗಾನ ತಾಳಮದ್ದಲೆಯ ಕ್ಷೇತ್ರದಲ್ಲಿಯ ಒಂದು ಪ್ರಯೋಗ. ಹಾಗೆಯೇ ಪಾತ್ರದ ಎಲ್ಲಾ ಮಗ್ಗುಲುಗಳನ್ನು ನಿತ್ಯವರ್ತಮಾನವಾಗಿಸುವ ರೀತಿಯಿಂದಾಗಿಯೂ ಒಂದು ಪ್ರಯೋಗ. ಇದಕ್ಕಿಂತ ಮುಖ್ಯವಾಗಿ ಅದು ಸೀತೆಯ ಪಾತ್ರವನ್ನು “ಕನಕ ಜಾನಕಿ”ಯಾಗಿ ನಿರ್ವಹಿಸಿದುದನ್ನೂ, ಸೀತೆಯ ಅಗ್ನಿಪ್ರವೇಶ, ರಾಮನ ಸೀತಾ ಪರಿತ್ಯಾಗ ಹಾಗೂ ಸೀತೆಯ ಚಿನ್ನದ ಪುತ್ಥಳಿಯನ್ನಿಟ್ಟುಕೊಂಡು ಮಾಡುವ ಯಾಗ, ಸೀತೆ ಭೂಮಿಯಲ್ಲಿ ಸೇರಿಹೋಗುವ – ಒಂದರ್ಥದಲ್ಲಿ ಆಕ್ಷೇಪಾರ್ಹವಾದ – ಈ ಎಲ್ಲ ನಡೆಗಳನ್ನು ಶ್ರೀಸೂಕ್ತದ ಹಿನ್ನೆಲೆಯಲ್ಲಿ ಪರಿಶೀಲಿಸಲು, ಅರ್ಥೈಸಲು ಸಾಧ್ಯ ಎನ್ನುವುದರಿಂದಾಗಿ ಅದು ತಾಳಮದ್ದಳೆಯ ಸಾಧ್ಯತೆಯ ವಿಸ್ತರಣೆಯಾಗಿ ಕುತೂಹಲಕಾರಿಯಾದ ಪ್ರಯೋಗ. ಇದನ್ನು ಹೇಳುವ ಉದ್ದೇಶ ಈ ಲೇಖನದ್ದು.
“ಕನಕ ಜಾನಕಿ” ತಾಳಮದ್ದಳೆಯ ಕಥೆಯ ವಸ್ತು ಸೀತೆ ಕನಕದ ಸಂಸರ್ಗಕ್ಕೆ ಬರುವ ಮತ್ತು ಅದರಿಂದ ದೂರಾಗುತ್ತಾ ಹೋಗುವ ಸಂಗತಿಗಳು. ಮಿಥಿಲೆಯ ಜನಕ ಮಹಾರಾಜ ಯಾಗಕ್ಕಾಗಿ ಭೂಮಿ ಉಳಲು ಬಂದಾಗ ಭೂಮಿಯಲ್ಲಿ ದೊರಕಿದ ಶಿಶು ಸೀತೆ. ಜನಕ ಅದನ್ನು ತನ್ನ ಮಗಳನ್ನಾಗಿ ಸ್ವೀಕರಿಸಿದುದರಿಂದ ಜನಕನ ಮಗಳಾಗಿ ಜಾನಕಿ. ಮಣ್ಣಿನಲ್ಲಿ ಇದ್ದವಳನ್ನು ಜನಕ ಅರಮನೆಗೆ ಕರೆದುಕೊಂಡು ಹೋಗಿ ರಾಜಕುಮಾರಿಯಂತೆ ಬೆಳೆಸಿದ. ಮಣ್ಣಿನಲ್ಲಿ ಹುಟ್ಟಿದವಳಾಗಿ ಭೂಜಾತೆಯಾಗಿದ್ದು ಮಣ್ಣಿನ ಸಂಗದಲ್ಲಿ ಸಹಜವಾಗಿ ಇದ್ದವಳು ಅರಮನೆಗೆ ಹೋಗಿ ಕನಕ ಸಂಗಿಯಾದಳು, ಕನಕಾವಾಸಿತೆಯಾದಳು. ಇದರೊಂದಿಗೆ ಅವಳಿಗೆ ಕನಕಸಂಬಂಧಿಯಾದ ಪಾತ್ರ ಮತ್ತು ನಡಿಗೆ ಹುಟ್ಟಿಕೊಂಡಿತು. ಅಪರೂಪದ ಮಗುವಾಗಿ ದೊರಕಿದ ಅವಳಿಗೆ ಅನುರೂಪ ವರನನ್ನು ಕಂಡುಕೊಳ್ಳಲು ಜನಕ ಸ್ವಯಂವರವನ್ನು ಏರ್ಪಡಿಸಿದ. ತನ್ನಲ್ಲಿ ವಂಶಪರಂಪರಾಗತವಾಗಿ ಇದ್ದ ಶಿವಧನುವಿಗೆ ಯಾರು ಹೆದೆಯೇರಿಸುತ್ತಾರೆಯೋ ಅವನಿಗೆ ಸೀತೆಯೊಂದಿಗೆ ಮದುವೆ ಎಂದು ಘೋಷಿಸಿದ. ಈ ಪಂಥವನ್ನು ಗೆದ್ದವನು ಋಷಿಮುನಿಗಳಲ್ಲಿ ಒಬ್ಬನಂತೆ ತೋರುತ್ತಿದ್ದ ರಾಮ.
ವಿಶ್ವಾಮಿತ್ರರ ಯಾಗ ಸಂರಕ್ಷಣೆಗಾಗಿ ಕಾಡಿನಲ್ಲಿದ್ದ ವಿಶ್ವಾಮಿತ್ರರ ಆಶ್ರಮಕ್ಕೆ ರಾಮ ಲಕ್ಷ್ಮಣನೊಡನೆ ವನವಾಸಿಯಂತೆ ಬಂದಿದ್ದ. ಬಂದ ಕಾರ್ಯ ಮುಗಿದ ನಂತರ ವಿಶ್ವಾಮಿತ್ರರು ಸೂಚಿಸಿದಂತೆ ಜನಕನ ಬಳಿ ಇದ್ದ ಶಿವಧನುವನ್ನೂ ಮತ್ತು ಸೀತಾ ಸ್ವಯಂವರವನ್ನೂ ನೋಡಲು ವಿಶ್ವಾಮಿತ್ರ ಮತ್ತಿತರ ಋಷಿಮುನಿಗಳೊಂದಿಗೆ ಜನಕನ ಅರಮನೆಗೆ ವನವಾಸಿಯಂತೆಯೇ ಬಂದಿದ್ದ. ವಿಶ್ವಾಮಿತ್ರನ ಆದೇಶದಂತೆ ಶಿವಧನುವಿಗೆ ಹೆದೆಯೇರಿಸಿದ. ಸ್ವಯಂವರದ ಶರತ್ತಿನಂತೆ ಸೀತೆ ರಾಮನಿಗೆ ವಧುಮಾಲೆ ಹಾಕಿದಳು. ವನವಾಸಿಯಂತಿದ್ದ ರಾಮನನ್ನು ವರಿಸಿ ಕನಕ ಸಂಗದಿಂದ ವನದ(ಮಣ್ಣಿನ)ಸಂಗಕ್ಕೆ ಬಂದಳು. ಆನಂತರ ಅವಳು ಇಕ್ಷ್ವಾಕು ವಂಶದ ಕುಲವಧುವಾಗಿ ಅಯೋಧ್ಯೆಯ ಅರಮನೆಯಲ್ಲಿ ಪ್ರತಿಷ್ಠಾಪಿತಳಾದಳು, ಮತ್ತೆ ಕನಕ ಸಂಗಿಯಾದಳು. ಇನ್ನೇನು ಯುವರಾಣಿಯಾಗಿ ಅಭಿಷಿಕ್ತಳಾದಳು ಎನ್ನುವ ಸಮಯಕ್ಕೆ ರಾಮನಿಗೆ ವನವಾಸ ನಿಗದಿಯಾಗುತ್ತದೆ. ಎಲ್ಲಾ ಕನಕ-ವೈಭವಕ್ಕೆ ತೆರೆಬೀಳುತ್ತದೆ. ಈ ಹಂತದ ವರೆಗಿನ ಅವಳ ಜೀವನದಲ್ಲಿ ಕನಕದ ಸಂಗ ಬಂದದ್ದಕ್ಕಾಗಲೀ, ಬಿಟ್ಟು ಹೋದದ್ದಕ್ಕಾಗಲೀ ಅದರಲ್ಲಿ ನೇರವಾಗಿ ಅವಳ ಪಾತ್ರವಿಲ್ಲ.
ರಾಮ 14 ವರ್ಷ ವನವಾಸ ಮಾಡಬೇಕು ಎಂಬ ವರವನ್ನು ಕೈಕೇಯಿ ದಶರಥನಿಂದ ಪಡೆದುದರಿಂದ ರಾಮನೊಬ್ಬನೇ ಹೊರಟು ನಿಂತ. ಆಗ ಸೀತೆಯೇ ಕನಕಸಂಗವನ್ನು ನಿರಾಕರಿಸಿ, ಬದಿಗಿರಿಸಿ ಸ್ವ ಇಚ್ಛೆಯಿಂದ ವನದ ಮಣ್ಣಿನ ಸಂಗವನ್ನು ಆಯ್ಕೆ ಮಾಡಿಕೊಂಡಳು, ರಾಮ ಬೇಡವೆಂದರೂ ಕೇಳದೆ ಅವನೊಡನೆ ಹೊರಟುನಿಂತಳು. ದಶರಥ ತನ್ನ ಸೊಸೆ ನಾಡಾಡಿಯಂತೆ ಇರಬಾರದು ಎಂದು ರಥದ ತುಂಬಾ ಅವಳಿಗಾಗಿ ರಾಣಿಯೋಗ್ಯವಾದ ವಸ್ತ್ರಾಭರಣಗಳನ್ನು ತುಂಬಿಸಿ ಕಳಿಸಿದರೂ ಸೀತೆ ಅದರ ಕಡೆಗೆ ತಿರುಗಿಯೂ ನೋಡಲಿಲ್ಲ. ರಾಮನೇ ತನ್ನ ಸಕಲ ವಸ್ತ್ರಾಭರಣ ಎಂದು ಮನವಾರೆ ನಂಬಿ ಅವನೊಡನೆ ಕಾಡಿನಲ್ಲಿ ಬದುಕಿದ್ದಳು. ತಾಯಿಯ ಅಪೇಕ್ಷೆ, ತಂದೆ ಕೊಟ್ಟ ವರ ಇವುಗಳ ಪರವಾಗಿಯಾಗಲೀ ವಿರುದ್ಧವಾಗಿಯಾಗಲೀ ಒಂದೂ ಮಾತನಾಡದೆ ಆ ಕ್ಷಣವೇ ಎನ್ನುವಂತೆ ರಾಮ ಸಕಲ ಐಸಿರಿಗೆ ಬೆನ್ನು ತಿರುಗಿಸಿ ಕಾಡಿಗೆ ಹೊರಟು ನಿಂತಾಗ ತಾನೂ ಹಾಗೆಯೇ ಎಂದು ನಿರ್ಧರಿಸಿದುದರಲ್ಲಿ, ಅದಕ್ಕೆ ಕಟಿಬದ್ಧ ಆದುದರಲ್ಲಿ ಸೀತೆಯದೇ ನೇರವಾದ ಪಾತ್ರ.
ಹದಿನಾಲ್ಕು ವರ್ಷದ ವನವಾಸ ಇನ್ನೇನು ಮುಗಿಯುತ್ತದೆ ಎನ್ನುವವರೆಗೂ ಯಾವುದೇ ಪ್ರತ್ಯೇಕವಾದ ಆಸೆಯನ್ನು ತೋರದ ಸೀತೆ, ಮಹಾ ಪತಿವ್ರತೆ ಅನಸೂಯೆಯಿಂದ ಆಶೀರ್ವಾದಪೂರ್ವಕವಾಗಿ ಪಡೆದ ದಿವ್ಯಾಭರಣಗಳಿಂದ ಆಭೂಷಿತಳಾಗಿದ್ದ ಸೀತೆ ರಾಮ, ಲಕ್ಷ್ಮಣರಿಬ್ಬರೂ ಎಷ್ಟು ರೀತಿಯಲ್ಲಿ ಹೇಳಿದರೂ ಕೇಳದೆ ಕನಕದಂತೆ ಮಿಂಚಿ ಮಿಂಚಿ ಹೊಳೆಯುವ, ಮಿನುಗುವ ಚರ್ಮದ ಜಿಂಕೆ ಬೇಕೇ ಬೇಕು ಎಂದು ಹಟ ಹಿಡಿದು ಸ್ವ ಇಚ್ಛೆಯಿಂದ ಕನಕಸಂಗಿಯಾದಳು, ಕನಕ ಲಂಕೆಯ ಸರ್ವ ಕನಕಾಧಿಪತಿ ರಾವಣನ ಬಂಧಿಯಾದಳು. ಇದು ಒಂದರ್ಥದಲ್ಲಿ ಅವಳ ಇಚ್ಛೆಯೇ. ಈ ಬಂಧದಿಂದ ಪಾರಾಗುವುದನ್ನೂ ಅವಳೇ ಇಚ್ಛಿಸಬೇಕು. ರಾವಣ ತನ್ನ ಸಕಲ ಕನಕ ಸಿದ್ಧಿ ಸಾಧನೆ ಸಾಮರ್ಥ್ಯಗಳನ್ನೆಲ್ಲಾ ಪ್ರದರ್ಶನ ಮಾಡುತ್ತಾ ರಾಮನ ಸರ್ವ ನಿರಾಭರಣತೆಯನ್ನು ಎತ್ತಿ ತೋರುತ್ತಾ ಹೋದಂತೆಲ್ಲ ಸೀತೆ ಕನಕಸಂಗದಿಂದ ಸಂಪೂರ್ಣವಾಗಿ ತನ್ನನ್ನು ಹೊರತುಪಡಿಸುವ ನಿಸ್ಸಂಗಿಯಾಗುತ್ತಾ ಹೋದಳು, ಸರ್ವ ನಿರಾಮಯನಾದ ರಾಮನಲ್ಲಿ ಸೇರಿಹೋದಳು. ರಾವಣನನ್ನು ಅವನ ಮೂಲಬಲ ಸಹಿತವಾಗಿ ಕೊಂದು ರಾಮ ಕನಕಲಂಕೆಯಿಂದ ಮತ್ತು ಸರ್ವಕನಕಾಧಿಪತ್ಯದಿಂದ ಸೀತೆಯನ್ನು ಬಾಹ್ಯವಾಗಿ ಬಂಧಮುಕ್ತನಾಗಿಸಿದ. ಸೀತೆ ಆಂತರಿಕವಾಗಿಯೂ ಹೀಗೆ ಬಂಧಮುಕ್ತ ಎನ್ನುವುದನ್ನು ಸಾಬೀತು ಪಡಿಸುವುದು ಅಥವಾ ಪಡಿಸದೇ ಇರುವುದು ಅವಳ ಇಷ್ಟಕ್ಕೆ ಬಿಟ್ಟದ್ದು
.
ಬಗೆ ಬಗೆಯ ಸ್ತರದ ಕನಕ ಅಧಿಪತಿಗಳ, ಕನಕಲಂಕೆಯ ಭಾವೀ ಕನಕಾಧಿಪತಿಗಳ ಮತ್ತು ಅವರ ಸಹಚರ ಕನಕ ಅಧಿಪತಿಗಳ ಮುಂದೆ ತಾನು ಆಂತರಿಕವಾಗಿಯೂ ಕನಕಸಂಗಿಯಲ್ಲ ಎಂದು ಸೀತೆ ತೋರಿಸಿದುದೇ ಅವಳ ಅಗ್ನಿದಿವ್ಯ. ಆನಂತರ ಲಕ್ಷ್ಮಣ, ವಿಭೀಷಣ, ಸುಗ್ರೀವ ಮುಂತಾದವರ ಸಹಿತವಾಗಿ ಅಯೋಧ್ಯೆಗೆ ಹಿಂತಿರುಗಿ ಸಿಂಹಾಸನವೇರಿದ ರಾಮನೊಡನೆ ಸೀತೆ ಅಯೋಧ್ಯೆಯ ಮಹಾರಾಣಿಯಾಗಿ ಅಭಿಷಿಕ್ತಳಾದಳು. ಕೆಲ ಕಾಲದ ನಂತರ ಗರ್ಭಿಣಿಯಾದಾಗ ವನದಲ್ಲಿ ಋಷಿ ಮುನಿಗಳೊಂದಿಗೆ ಅವರ ಆಶ್ರಮದಲ್ಲಿ ಕೆಲವು ದಿನಗಳು ಇರಬೇಕೆಂದು ಆಸೆಪಟ್ಟದ್ದು, ರಾಮನೊಂದಿಗಿನ ಕನಕಸಂಗವನ್ನೂ ನಿರಾಕರಿಸಿ ಮಣ್ಣಿನ ವಾಸವನ್ನು ಆಯ್ಕೆ ಮಾಡಿಕೊಂಡದ್ದು ಅವಳ ನಿಸ್ಸಂಗಿತ್ವ ಭಾವದ ರೂಪವೇ. ಅವಳನ್ನು ಕಾಡಿನಲ್ಲಿ ಬಿಟ್ಟು ಬಾ ಎಂದು ಲಕ್ಷ್ಮಣನಿಗೆ ಆದೇಶಿಸಿ ಅವಳ ಕನಕಸಂಗವನ್ನು ಸಂಪೂರ್ಣವಾಗಿ ತಪ್ಪಿಸಿದುದು ರಾಮನೇ. ಮುಂದೆ ಅವಳ ಮಕ್ಕಳು-ಲವ ಕುಶರು- ವಾಲ್ಮೀಕಿ ಆಶ್ರಮದಲ್ಲಿ ಜನಿಸಿದರು, ರಾಜಯೋಗ್ಯ ಮತ್ತು ಸಹೃದಯಿ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಪಡೆದರು. ರಾಮನನ್ನು ಅವನ ಸೋದರರು ಮತ್ತು ಸಕಲ ಸೇನಾ ಸಹಿತವಾಗಿ ಸೋಲಿಸಿ ಕನಕಸಂಗಕ್ಕೆ ನಿಯಮಬಂಧಿಯಾಗಿದ್ದ ರಾಮನನ್ನು ಮುಕ್ತನಾಗಿಸಿದರು. ಈಗ ಸೀತೆಯ ಕನಕ ಸಂಬಂಧಿ ನಿಸ್ಸಂಗಿತ್ವ ಪರಿಪೂರ್ಣ ಆದಂತಾಯಿತು.
ಸೀತೆಯ ಈ ರೀತಿಯ ಪಾತ್ರಚಿತ್ರಣವನ್ನು ಶ್ರೀಸೂಕ್ತದ ಲಕ್ಷ್ಮಿಯ ವರ್ಣನೆಯ ಮಾಧ್ಯಮದಲ್ಲಿ ‘ಕನಕ ಜಾನಕಿ’ಯನ್ನಾಗಿ ದರ್ಶಿಸಬಹುದು. ಋಗ್ವೇದದ 5ನೇ ಮಂಡಲಕ್ಕೆ ಖಿಲ (ಅನುಬಂಧದಂತೆ) ಋಕ್ ನಂತೆ ಸೇರ್ಪಡೆಯಾಗಿರುವ ಸೂಕ್ತವೇ ಶ್ರೀಸೂಕ್ತ. ಶ್ರೀಯನ್ನು ವೈಭವ ಮತ್ತು ಶ್ರೇಯಸ್ಸುಗಳಿಗೆ ಮೂರ್ತರೂಪ ಎಂದು ಪ್ರಾಚೀನ ವೇದಮಂತ್ರಗಳು ವರ್ಣಿಸಿರುವುದು ಕಂಡುಬರುತ್ತದೆ. ಶ್ರೀಯನ್ನು ವಿಷ್ಣುವಿನ ಹೃದಯನಿವಾಸಿನಿಯಾದ ಲಕ್ಷ್ಮಿಯೊಂದಿಗೆ ಸಮೀಕರಿಸಿದ ಮತ್ತು ಶ್ರೀಗೆ ಅಗ್ನಿಯೊಂದಿಗೆ ಆತ್ಮೀಯ ಸಂಬಂಧವನ್ನು ಕಲ್ಪಿಸಿದ ಮೊದಲ ಸೂಕ್ತ ಶ್ರೀ ಸೂಕ್ತ. ಶ್ರೀ ಸೂಕ್ತವು ಶ್ರೀಯನ್ನು ಸೂರ್ಯ, ಚಂದ್ರ ಮತ್ತು ಅಗ್ನಿಯರಂತೆ ಪ್ರಕಾಶಿಸುವವಳು; ಚಿನ್ನದಂತೆ ಹೊಳಪುಳ್ಳವಳು, ವೈಭವೋಪೇತಳು, ಆಕರ್ಷಕಳು; ಕೀರ್ತಿದಾಯಕಳು, ಪರಮ ಉದಾರಿ; ಚಿನ್ನ, ದನಕರುಗಳು, ಕುದುರೆಗಳು ಮತ್ತು ಆಹಾರ-ಇವುಗಳನ್ನು ಧಾರಾಳವಾಗಿ ಕೊಡುವಳು ಎಂದು ಸ್ತುತಿಸುತ್ತದೆ. ಬೇಡಿಕೆ, ಹಸಿವೆ, ಬಾಯಾರಿಕೆ, ಬಡತನಗಳೊಂದಿಗೆ ಇರುವ ಅವಳ ಸೋದರಿ ಅಲಕ್ಷ್ಮಿಯನ್ನು ದೂರವಿರಿಸಬೇಕೆಂದು ಪ್ರಾರ್ಥಿಸುತ್ತದೆ. ಶುದ್ಧತೆಗೆ, ಸೌಂದರ್ಯಕ್ಕೆ, ದೈವೀ ಪ್ರೇಮಕ್ಕೆ, ದೈವೀ ಭಕ್ತಿಗೆ, ಆಧ್ಯಾತ್ಮಿಕ ಶಕ್ತಿಗೆ, ಬೆಳವಣಿಗೆ, ಸಮೃದ್ಧಿಗಳಿಗೆ, ಒಟ್ಟಾರೆಯಾಗಿ ಇಡೀ ಸೃಷ್ಟಿಗೆ ಪ್ರತೀಕ ಎಂದು ಪರಿಕಲ್ಪಿಸುತ್ತದೆ.
ಶ್ರೀಸೂಕ್ತದ ಲಕ್ಷ್ಮಿ ಹಿರಣ್ಯವರ್ಣೇ, ಹಿರಣ್ಮಯೀ, ಹಿರಣ್ಯಪ್ರಾಕಾರಮಾರ್ದ್ರೇ, ಹೇಮಮಾಲಿನೀ, ಸುವರ್ಣ ಮಾಲೆಗಳನ್ನು ಧರಿಸಿದವಳು:
हिरण्यवर्णां हरिणीं सुवर्णरजतस्रजाम् ।चन्द्रां हिरण्मयीं लक्ष्मींजातवेदो म आवह ॥१॥कां सोस्मितां हिरण्यप्राकारामार्द्रां ज्वलन्तीं तृप्तां तर्पयन्तीम् ।पद्मे स्थितां पद्मवर्णां तामिहोपह्वये श्रियम्॥४॥ आर्द्रां यः करिणीं यष्टिं सुवर्णां हेममालिनीम् ।सूर्यां हिरण्मयीं लक्ष्मीं जातवेदो म आवह ॥१४॥यस्यां हिरण्यंप्रभूतं गावो दास्योऽश्वान् विन्देयं पूरुषानहम् ॥१५॥
ಸೀತೆ ಈ ರೀತಿಯ ವರ್ಣನೆಗೆ ಒಂದು ಮೂರ್ತ ರೂಪ. ಸೀತೆ ಭೂಜಾತೆಯಾಗಿ ಭೂಮಿಯಲ್ಲಿಯ ಚಿನ್ನದ ಸೋದರಿ. ಲಕ್ಷ್ಮಿಯನ್ನು ಅನಪಗಾಮಿನಿಯನ್ನಾಗಿ ನನ್ನಲ್ಲಿ, ನನ್ನ ಮನೆಯಲ್ಲಿ ಸ್ಥಿತಗೊಳಿಸು ಎನ್ನುವ ಪ್ರಾರ್ಥನೆ ಶ್ರೀ ಸೂಕ್ತದ್ದು: तां म आवह जातवेदो लक्ष्मीमनपगामिनीम्| यस्यां हिरण्यं विन्देयं गामश्वं पुरुषानहम् ॥१५॥ ಅನಪಗಾಮಿನಿಯಾಗಿರಿಸು (=ಹೊರಟುಹೋಗದಂತೆ ಸ್ಥಿರವಾಗಿರಿಸು) ಎನ್ನುವುದರ ಸೂಚ್ಯರ್ಥ ಲಕ್ಷ್ಮಿಯು ಗಾಮಿನಿಯೇ(=ಹೋಗುವವಳು), ಅವಳ ಒಂದು ಸ್ವಭಾವ ಚಲನೆಯೇ ಎಂದು. ಲಕ್ಷ್ಮಿ ಬರುತ್ತಾಳೆ, ಹೋಗುತ್ತಾಳೆ. ಸೀತೆಯ ಬದುಕಿನಲ್ಲಿ ಹಾಗೆಯೇ; ಕನಕ ಬರುತ್ತದೆ, ಹೋಗುತ್ತದೆ.
ಲಕ್ಷ್ಮಿಯು ತಾಯಿಯಾಗಿ ನನ್ನ ಮನೆಯಲ್ಲಿ ನೆಲೆಸಲಿ ಎನ್ನುವುದೂ ಶ್ರೀಸೂಕ್ತದ ಪ್ರಾರ್ಥನೆಯೇ:
आपः सृजन्तु स्निग्धानि चिक्लीत वस मे गृहे। नि च देवीं मातरं श्रियं वासय मे कुले॥१२॥कर्दमेन प्रजाभूता मयि सम्भव कर्दम| श्रियं वासय मे कुले मातरं पद्ममालिनीम्॥११॥ ಮಾತೃತ್ವ ಹಸಿವು ನೀರಡಿಕೆಗಳಂತೆ ಪ್ರಾವೃತ್ತಿಕ (instinctive), ಜೀವಪೋಷಕ. ಕನಕದ ಅಪೇಕ್ಷೆ ಪ್ರಾವೃತ್ತಿಕವಾದರೂ ಅದು ಅಲಕ್ಷ್ಮಿಯೇ, ಜ್ಞಾನದಿಂದ ದೂರ:
क्षुत्पिपासामलां ज्येष्ठामलक्ष्मीं नाशयाम्यहम्। अभूतिमसमृद्धिं च सर्वां निर्णुद मे गृहात्॥८॥ ಸೀತೆ ತೋರಿಕೆಯ ಚಿನ್ನಕ್ಕೆ ಮಾರುಹೋದದ್ದು ಅಲಕ್ಷ್ಮಿ. ಅದರಿಂದ ಪಾರಾದುದಕ್ಕೆ ಗುರುತು ಅಗ್ನಿದಿವ್ಯಕ್ಕೆ ಒಳಗಾದದ್ದು. ಅದು ರಾಮ ಸೀತೆಯ ಶೀಲವನ್ನು ಶಂಕಿಸಿದ ಪ್ರಸಂಗವಲ್ಲ. ಅವಳು ಸ್ವತಃ ತಾನೇ ನಿಜ ಸ್ವರೂಪವನ್ನು ಜಾಹೀರು ಪಡಿಸಿದ ಪ್ರಸಂಗ, ದೃಢೀಕರಿಸಿದ ಪ್ರಸಂಗ.
ಕನಕಕ್ಕೆ ಪ್ರದರ್ಶನದ ಸ್ವರೂಪ. ಅದು ಹೊಳೆದು ತೋರುತ್ತದೆ, ಮಿನುಗಿ ತೋರುತ್ತದೆ, ಆಕರ್ಷಕವಾಗಿ ಎದ್ದು ತೋರುತ್ತದೆ. ಪ್ರದರ್ಶನಕ್ಕೆ ಕೊನೆ ಪ್ರದರ್ಶನರಹಿತತೆ, ಅಮೂರ್ತತೆ. ಭೂಮಿ ಹಿರಣ್ಯಗರ್ಭೆ. ಕನಕದ ಪ್ರದರ್ಶನಕ್ಕೆ ಕೊನೆ ಭೂಮಿಯಲ್ಲಿ ವಿಲೀನಗೊಳ್ಳುವುದೇ. ಭೂಜಾತೆಯಾಗಿ ಸೀತೆ ಹಲವು ಮುಖದಲ್ಲಿ ಹೊಳೆದು, ಎದ್ದುಕಂಡು, ಮಿನುಗಿ ಮೂರ್ತ-ಕನಕ. ಚಿನ್ನ ಯಾವ ದ್ರವದಲ್ಲಿಯೂ ಕರಗುವುದಿಲ್ಲ. ಅದರೊಂದಿಗೆ ಬೆರೆತ ಯಾವ ಘನವಸ್ತುವೂ ಅದರ ಗುಣವನ್ನು ಕೆಡಿಸುವುದಿಲ್ಲ. ಅದು ಯಾವುದರೊಂದಿಗೆ ಇದ್ದರೂ ಪ್ರತ್ಯೇಕಿಸಬಹುದಾದ ಪದಾರ್ಥವಾಗಿಯೇ ಇರುತ್ತದೆ. ಚೆನ್ನಾಗಿ ಹೊಂದಿಕೊಳ್ಳುವುದು ಎರಡು ಚಿನ್ನದ ಗಟ್ಟಿಗಳೇ. ರಾಮನಿಗೆ ಸೀತೆ, ಸೀತೆಗೆ ರಾಮನೇ ಗತಿ! ರಾಮ ಅಗ್ನಿಸಂಭವ. ಸೀತೆ ರಾಮನೊಂದಿಗೆ ಇರಬಹುದಾದದ್ದು ಚಿನ್ನದ ಗಟ್ಟಿಯಾಗಿಯೇ, ಸುವರ್ಣ ಪುತ್ಥಳಿಯಾಗಿಯೇ. ಇದು ಸೀತೆಯ ಕನಕ-ನಿಸ್ಸಂಗಿತ್ವ ಪರಿಪೂರ್ಣಗೊಂಡದ್ದಕ್ಕೆ ಗುರುತು. ಇದು ಅವಳು ಈಗ ಅಯೋಧ್ಯೆಯ ಪಟ್ಟದರಸಿ, ರಾಮನ ಹೆಂಡತಿ, ಲವಕುಶರ ತಾಯಿ, ಆಶ್ರಮ ನಿವಾಸಿ, ಅಯೋಧ್ಯೆಯ ಪ್ರಜೆ ಯಾವುದೂ ಅಲ್ಲ ಎಂದಾದ ನಿಸ್ಸಂಗಿತ್ವ. ಅವಳಿಗೆ ಈಗ ಯಾವ ಮೂರ್ತರೂಪವೂ ಇಲ್ಲ. ಭೂಜಾತೆಯಾಗಿ ರೂಪು ತಳೆದ ಸೀತೆ ಈಗ ಕೇವಲ ಹಿರಣ್ಮಯಿ, ಹಿರಣ್ಯಪ್ರಭಾ ಆದ ಅಚಲ ಶ್ರೀ. ಇದರ ಸೂಚಕ ಭೂಮಿಯಲ್ಲಿ ಸೀತೆ ಸೇರಿಹೋದದ್ದು.
ಲಕ್ಷ್ಮಿಯನ್ನು ವರ್ಣಿಸುವ ಒಂದು ಪದ ವರ್ತನಾಭಿಃ: गम्भीरा वर्तनाभिः स्तनभर नमिता शुभ्र वस्त्रोत्तरीया ॥२५॥) ಇದರ ಒಂದು ಅರ್ಥ ಒಳಮುಖವಾಗಿರುವ ನಾಭಿ=ಹೊಕ್ಕಳು, ಅದು ತಾಯಿಯೊಡನೆ ಮತ್ತು ಭೂಮಿಯೊಡನೆ ಶಿಶುವಿಗೆ ಸಂಪರ್ಕ ಕಲ್ಪಿಸುವ ಹೊಕ್ಕಳುಬಳ್ಳಿಯ ಮೂಲಸ್ಥಾನ. ಲವಕುಶರು ತಾವು ಕಟ್ಟಿಹಾಕಿದ ಅಶ್ವಮೇಧದ ಕುದುರೆಯನ್ನು ಬಿಡಿಸಿಕೊಂಡು ಹೋಗಲು ಅಂತಿಮವಾಗಿ ಬಂದ ರಾಮನನ್ನೂ ಸೋಲಿಸಿದ್ದಾರೆ. ರಾಮನದರೊಂದಿಗೆ ಎಲ್ಲಾ ಪ್ರಮುಖರ ಕಿರೀಟ ಸಹಿತವಾಗಿ ಎಲ್ಲಾ ಆಭರಣಗಳನ್ನೂ ತಂದು ಸೀತೆಯ ಮುಂದಿರಿಸಿದ್ದಾರೆ, ತಮ್ಮ ಜಯಘೋಷ ಮಾಡಿಕೊಂಡಿದ್ದಾರೆ. ಮೊದಲಿಗೆ ಸೀತೆ ಗಾಬರಿಗೊಂಡರೂ ಆನಂತರ ರಾಮನ ಏಕಾವಳಿಯನ್ನು ಕೈಯಲ್ಲಿ ಹಿಡಿದು ಅಲ್ಲಿಯವರೆಗಿನ ತನ್ನ ಬದುಕನ್ನು ತನ್ನನ್ನು ರೂಪಿಸುತ್ತಾ ಹೋದ ಕನಕದ ಸಂಗ ಮತ್ತು ನಿಸ್ಸಂಗದ ಹಿನ್ನೆಲೆಯಲ್ಲಿ ಪುನರಾವಲೋಕನ ಮಾಡಿದ್ದಾಳೆ. ಕನಕಸಂಗ ನಿಸ್ಸಂಗ ಆದುದನ್ನೆಲ್ಲಾ ಭಾವಿಸಿದ್ದಾಳೆ.
ವಾಲ್ಮೀಕಿ ಮುನಿಯ ಆದೇಶದಂತೆ ರಾಮ ಮಕ್ಕಳನ್ನೂ, ಹೆಂಡತಿಯನ್ನೂ ಅಯೋಧ್ಯೆಗೆ ಕರೆದೊಯ್ಯಲು ಸಿದ್ಧನಾಗುತ್ತಾನೆ. ಸೀತೆ ಅಯೋಧ್ಯೆಯ ಸಮಸ್ತರ ಮುಂದೆ ದಿವ್ಯಕ್ಕೆ ಒಳಗಾಗಬೇಕು ಎನ್ನುವ ಕೋರಿಕೆಯನ್ನು ಮುಂದಿಡುತ್ತಾನೆ. ಈಗ ಕನಕ ಸಂಗವನ್ನು ಶಾಶ್ವತವಾಗಿ ಬಿಡಬೇಕೆಂದು ನಿರ್ಧರಿಸಿ ಅದನ್ನು ಜಾರಿಗೆ ತಂದದ್ದು ಸೀತೆಯೇ. ರಾಮ ಕೇಳಿಕೊಂಡಂತೆ ರಾಮನ ಹೊರತಾಗಿ ಇನ್ನಾರನ್ನೂ ಯಾವ ರೀತಿಯಲ್ಲೂ ಜೀವನ ಸಂಗಾತಿಯನ್ನಾಗಿ ಭಾವಿಸಿಲ್ಲ ಎಂದು ಸಕಲ ಪ್ರಜಾ ಸಮಸ್ತರ ಮುಂದೆ ಶಪಥ ಮಾಡಿದ್ದಾಳೆ. ಅದಕ್ಕೆ ಸಾಕ್ಷಿಯಾಗಿ ತನ್ನ ತಾಯಿ ವಸುಂಧರೆ ಭೂಮಿಯೊಳಗಿಂದ ಮೇಲೆದ್ದು ಬಂದು ತನ್ನನ್ನು ಕರೆದೊಯ್ಯಲಿ ಎಂದು ಪ್ರಾರ್ಥಿಸಿದ್ದಾಳೆ. ಅದರಂತೆ ಬಂದ ಭೂದೇವಿಯೊಡನೆ ಭೂಮಿಯೊಳಗೆ ಇಳಿದುಹೋಗಿದ್ದಾಳೆ.
ಹೀಗೆ ಕನಕದ ಆಕರ್ಷಣೆ-ವಿಕರ್ಷಣೆ, ಕನಕ ಸಂಗ-ನಿಸ್ಸಂಗದ ಸಂಗತಿಗಳು ಘಟಿಸಿ ಅವಳನ್ನು ಸ್ವರ್ಣಪುತ್ಥಳಿಯಾಗಿಸಿ, ಕೊನೆಗೆ ಅವಳನ್ನು ಅವಳ ಮೂಲಕ್ಕೇ ಹಿಂತಿರುಗಿಸಿದ ತಾಳಮದ್ದಳೆ “ಕನಕ ಜಾನಕಿ”. ವಾಲ್ಮೀಕಿ ರಾಮಾಯಣದಲ್ಲಿಯ ಸಂದರ್ಭ ಸನ್ನಿವೇಶಗಳ ಆವರಣದಲ್ಲಿ, ಯಕ್ಷಗಾನದ ಪದ್ಯಗಳ ಹಿಮ್ಮೇಳದಲ್ಲಿ ತೆರೆದುಕೊಂಡ ಸೀತೆಯ ಪಾತ್ರಚಿತ್ರಣ ಸೀತೆ ಏಕಾವಳಿಯನ್ನು ಹಿಡಿದು ತನ್ನನ್ನು ಕುರಿತು ಧ್ಯಾನಸ್ಥಳಾಗಿದ್ದಳು ಎಂದು ಆರಂಭಗೊಳ್ಳುವುದು ಅದರ ತುದಿ ವಿಷ್ಣುವಿನಲ್ಲಿ ಲಕ್ಷ್ಮಿಯಾಗಿ ಸೇರಿಹೋಗುತ್ತಾಳೆ ಎಂದೇ ಅರ್ಥಮಾಡಿಕೊಳ್ಳುವುದಕ್ಕೆ ಒಂದು ಸಂಕೇತ ಆಗುತ್ತದೆ; ಹಾಗೂ ಶ್ರೀಸೂಕ್ತದೊಂದಿಗೆ ಸೀತೆಯ ಕಥೆಯನ್ನು ಜೋಡಿಸುವ ಕೊಂಡಿ ಇದೆ ಎಂದು ಭಾವಿಸಲು ಅವಕಾಶ ಕಲ್ಪಿಸಿಕೊಡುತ್ತದೆ. ಏಕಾವಳಿ ಎಂದರೆ ಒಂದೆಳೆಯ ಮುತ್ತಿನ ಹಾರ ಎಂದರ್ಥ. ಒಂದು, ಮುತ್ತು, ಮುತ್ತಿನ ಬಿಳಿಯ ಬಣ್ಣ – ಇವೆಲ್ಲಾ ಆಧ್ಯಾತ್ಮಿಕ ಭಾಷೆಯಲ್ಲಿ ಮುಕ್ತಿಯ ಸಂಕೇತಗಳು.
-ಕೆ.ಎಲ್. ಪದ್ಮಿನಿ ಹೆಗಡೆ, ಮೈಸೂರು
ಸೊಗಸಾಗಿದೆ.
ಸೊಗಸಾದ ಲೇಖನ… ಮೇಡಂ.. ಧನ್ಯವಾದಗಳು..
ಭೂಜಾತೆಯಾದ ಸೀತೆಯು ಕನಕ ಜಾನಕಿಯಾದ ಬಗೆಯ ಸವಿಸ್ತಾರ ಲೇಖನವು ಮಾಹಿತಿಪೂರ್ಣವಾಗಿದೆ.
ಆಧ್ಯಾತ್ಮಕ ವಿಚಾರಗಳನ್ನೊಳಗೊಂಡ ವಿದ್ವತ್ ಪೂರ್ಣ ಲೇಖನ ಸೊಗಸಾಗಿದೆ..