ಅವಿಸ್ಮರಣೀಯ ಅಮೆರಿಕ – ಎಳೆ 62
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಬೇಸ್ತು….!!
ಇಳಿಹಗಲು ಎರಡೂವರೆ ಗಂಟೆಯ ಸಮಯ.. ಪುಟ್ಟ ಮಕ್ಕಳಿಗೆ ಆಟವಾಡಲು ಇರುವ ದೊಡ್ಡ ತೊಟ್ಟಿಯಂತಹ ಆಟದ ಬಯಲಲ್ಲಿ ಹಾಕಿದ ಮರಳಿನಲ್ಲಿ ಹತ್ತಾರು ಮಕ್ಕಳು ಆಟವಾಡುತ್ತಿದ್ದರೆ, ಅವರೊಂದಿಗಿರುವ ಹಿರಿಯರು ಮಾತು, ನಗುವಿನಲ್ಲಿ ಮುಳುಗಿದ್ದರು. ನಮ್ಮ ಪುಟಾಣಿಗಳೂ ಅಲ್ಲಿ ಆಡಲು ಹಾತೊರೆದು ಆ ಕಡೆಗೆ ನಡೆದಾಗ, ನನಗೆ ಅಲ್ಲಿರುವ ಕಲ್ಲು ಬೆಂಚಿನ ಮೇಲೆ ಕುಳಿತು ಸುತ್ತಲೂ ನೋಡುವುದೇ ಆನಂದವೆನಿಸಿತು. ಬಿಸಿಲ ಝಳ ಸಾಕಷ್ಟು ಇದ್ದರೂ ತಂಪು ಗಾಳಿಗೇನೂ ಕೊರತೆಯಿರಲಿಲ್ಲ. ಅಳಿಯ ಮತ್ತು ನಮ್ಮವರು ಕಾರಿನ ಬಳಿಗೆ ನಡೆದರು. ಒಂದು ತಾಸು ಕಳೆದು ಪುಟ್ಟ ಮಕ್ಕಳೊಂದಿಗೆ ನಾನು ಮತ್ತು ಮಗಳು ಅಲ್ಲಿಂದ ಹೊರಟು, ಪಾರ್ಕಿನಿಂದ ಹೊರಹೋಗಲು ದ್ವಾರದ ಬಳಿ ಬಂದಾಗ ನಾವು ಯಾವ ಕಡೆಗೆ ಹೋಗಬೇಕೆಂಬುದೇ ತಿಳಿಯಲಿಲ್ಲ. ಅಳಿಯನಿಗೆ ಫೋನಾಯಿಸಿದಾಗ ಅವನು ತಿಳಿಸಿದ ಜಾಗಕ್ಕೆ ಎಷ್ಟು ದೂರವಿದೆಯೆಂದು ಊಹಿಸಲಾಗಲಿಲ್ಲ. ಅದಾಗಲೇ ನಡೆದು ಸಾಕಷ್ಟು ದಣಿದಿದ್ದರಿಂದ ಇನ್ನೂ ಹೆಚ್ಚು ನಡೆಯುವ ಉತ್ಸಾಹವೂ ಉಳಿದಿರಲಿಲ್ಲವೆನ್ನಿ. ಆಗಲೇ ನಮ್ಮ ಗಮನ ಅಲ್ಲೇ ಹತ್ತಿರದಲ್ಲಿರುವ ಸೈಕಲ್ ರಿಕ್ಷಾದ ಮೇಲೆ ಬಿತ್ತು. ಇತರ ಯಾವುದೇ ವಾಹನ ಸೌಕರ್ಯವಿಲ್ಲದಿದ್ದುದರಿಂದ ಅದುವೇ ನಮ್ಮ ಕೊನೆಯ ಆಯ್ಕೆಯಾಗಲೇ ಬೇಕಿತ್ತು. ಜೊತೆಗೆ, ಇಲ್ಲಿಯೂ ಸೈಕಲ್ ರಿಕ್ಷಾ ಇರುವುದು ಕಂಡು ನನಗೆ ನಿಜಕ್ಕೂ ಆಶ್ಚರ್ಯವಾಯಿತು! ಅದರ ಬಳಿಗೆ ಹೋಗಿ ಚಾಲಕನ ಜೊತೆ ಮಾತನಾಡಿ ಶುಲ್ಕ ನಿಗದಿಪಡಿಸಿ ಅದರಲ್ಲಿ ಕುಳಿತಾಗ ಸ್ವಲ್ಪ ನೆಮ್ಮದಿ ಎನಿಸಿತು. ನೀಗ್ರೋ ಚಾಲಕನು, ಕಡಿಮೆ ಎಂದರೆ ಐದು ಡಾಲರ್ ಮತ್ತು ಮುಂದೆ ಪ್ರತಿ ನಿಮಿಷಕ್ಕೆ ಒಂದು ಡಾಲರ್ ನಂತೆ ತೆರಬೇಕೆಂದಾಗ, ಸ್ವಲ್ಪ ಜಾಸ್ತಿ ಎನಿಸಿದರೂ ನಮಗೆ ಬೇರೆ ದಾರಿ ಇರಲಿಲ್ಲವಲ್ಲಾ? ಇನ್ನು ನಾವು ತಲಪಬೇಕಾದ ಜಾಗವನ್ನು ಅವನಿಗೆ ತಿಳಿಸಬೇಕಲ್ಲಾ?…ಇಲ್ಲೇ ಹುಟ್ಟಿತು ಸಮಸ್ಯೆ. ಅವನು ಸೈಕಲ್ ನಿಲ್ಲಿಸಿ ಎಲ್ಲಿಗೆ ಕರೆದೊಯ್ಯಲಿ? ಎಂದಾಗ ಮಗಳು ಹೇಳಿದ ವಿಳಾಸ ಅವನಿಗೆ ತಿಳಿಯಲಿಲ್ಲ. ಆದರೂ ಒಂದು ಸ್ವಲ್ಪ ದೂರ ಕೊಂಡೊಯ್ದಾಗ ನಮಗೆ ಕಳವಳ.. ತಪ್ಪು ದಾರಿಯಲ್ಲಿ ಕೊಂಡೊಯ್ಯುವನೆಂಬ ಭಯ.. ಅಪನಂಬಿಕೆ. ಅಲ್ಲಿಯೇ ಸ್ವಲ್ಪ ಚರ್ಚೆಯೂ ನಡೆಯಿತು… ಜೊತೆಗೆ ನಿಮಿಷಗಳು ಜಾರುತ್ತಾ ಡಾಲರ್ ಎಣಿಸುತ್ತಿತ್ತು!
ಚಾಲಕ ನಮ್ಮನ್ನು ಮೊದಲಿನ ಜಾಗಕ್ಕೇ ಕರೆದೊಯ್ಯುವೆನೆಂದಾಗ ಆದದ್ದಾಗಲಿ ಎಂದು ನಮ್ಮ ರಥ ಎಲ್ಲಿದೆಯೋ ಅಲ್ಲೇ ಇಳಿದು ದುಡ್ಡು ಕೊಡಲು ಹೋದಾಗ ಹೌಹಾರಿದೆವು! ಊಹಿಸಲೂ ಆಗದಷ್ಟು ಡಾಲರ್ ನಮ್ಮ ಕೈಬಿಟ್ಟಿತ್ತು! ಏನು ಮಾಡಲು ಸಾಧ್ಯ..? ಹೊಟ್ಟೆಯುರಿದರೂ ಕೇಳಿದಷ್ಟು ಕೊಟ್ಟು, “ಬಡವ … ಪಾಪ ಬದುಕಿಕೊಳ್ಳಲಿ!” ಎನ್ನುವ ಉದಾರ ಹೃದಯಿಯ ವೇದಾಂತ ಹರಿಬಿಟ್ಟು ಅಲ್ಲೇ ಮುಂದಕ್ಕೆ ಹೋಗುತ್ತಿದ್ದಂತೆ ನಮಗೆ ಇನ್ನೊಂದು ಆಘಾತ ಎದುರಾಯಿತು… ಅಲ್ಲೇ ತಿರುವಲ್ಲಿ ನಮ್ಮ ಕಾರು ಗೋಚ ರಿಸಿತು… ಸೆಂಟ್ರಲ್ ಪಾರ್ಕ್ ದ್ವಾರದಿಂದ ಕೇವಲ ಐದು ನಿಮಿಷಗಳ ನಡಿಗೆ ದೂರದಲ್ಲಿ! “ಅಯ್ಯೋ ನಮ್ಮ ತಲೆಗಿಷ್ಟು!” ಎಂದು ನಮ್ಮನ್ನೇ ನಿಂದಿಸಿಕೊಳ್ಳುತ್ತಾ, ವಿನಾಕಾರಣ ಹಲವು ಡಾಲರ್ ಕೈಬಿಟ್ಟ ಬಗ್ಗೆ ಪಶ್ಚಾತ್ತಾಪ ಪಡುತ್ತಾ, ಪೆಚ್ಚು ಮುಖದಲ್ಲಿ ನಗುವನ್ನು ತರಿಸಿಕೊಂಡು ಏನೂ ಆಗೇ ಇಲ್ಲ ಎನ್ನುವಂತೆ ಕಾರು ಏರಿ ಕುಳಿತೆವು. .. ಅಳಿಯನ ಮುಂದೆ ಪೆದ್ದರಾಗುವುದನ್ನು ತಪ್ಪಿಸಿಕೊಂಡೆವು!
ಕರಾಳ ದಿನವನ್ನು ನೆನಪಿಸುತ್ತಾ…
ಮಧ್ಯಾಹ್ನ 3:30ಕ್ಕೆ ಸುಂದರ ಸೆಂಟ್ರಲ್ ಪಾರ್ಕಿನಿಂದ ನಮ್ಮ ವಾಹನವು ನ್ಯೂಯಾರ್ಕಿನ World Trade Center ನತ್ತ ಸಾಗಿತು. World Trade Center ಎಂದ ಕೂಡಲೇ ಎಲ್ಲರಿಗೂ ನೆನಪಾಗುತ್ತದೆ…ಕರಾಳ 9/11. ಹೌದು…ನ್ಯೂಯಾರ್ಕಿನ ಪೆಂಟಗನ್ ನ World Trade Center , ಇಡೀ ಅಮೆರಿಕದಲ್ಲೇ ಅತ್ಯಂತ ಸುಂದರ, ಜಗತ್ಪ್ರಸಿದ್ಧ ಅವಳಿ ಕಟ್ಟಡಗಳು ಭಯೋದ್ಪಾಕರ ಧಾಳಿಗೆ ಸಿಲುಕಿ ಇನ್ನಿಲ್ಲದಂತೆ ನಾಶವಾಗುತ್ತದೆ…ಸೆಪ್ಟೆಂಬರ್ 11, 2001ರಲ್ಲಿ. ಇದರಲ್ಲಿ 2,996 ಮಂದಿ ಮರಣ ಹೊಂದಿದ್ದರು. ಈ ಕಟ್ಟಡಗಳಲ್ಲಿ ಹಲವಾರು ಜಗತ್ಪ್ರಸಿದ್ಧ ಸಾಫ್ಟ್ ವೇರ್ ಕಂಪೆನಿಗಳೂ ಇದ್ದವು… ಅವುಗಳಲ್ಲಿ ನಮ್ಮ ದೇಶದ ಹಲವಾರು ಮೇಧಾವಿ ತಂತ್ರಜ್ಞರು ನೌಕರಿಯಲ್ಲಿದ್ದರು. ಅದರಲ್ಲೂ ನಮ್ಮ ಪುತ್ತೂರಿನ ಯುವಕನೊಬ್ಬ ಜೀವ ತೆತ್ತುದು ತುಂಬಾ ಖೇದಕರ. ಅವನೇ ಹೇಮಂತ್ ಕುಮಾರ್! ಈ ಯುವಕನ ತಂದೆಯವರು ದರ್ಜಿ ವೃತ್ತಿಯವರಾಗಿದ್ದು; ಅವರು ಪುರುಷರ ಉಡುಗೆಗಳ, ಬಹು ಬಾಳಿಕೆಯ ಅಂದದ ಹೊಲಿಗೆಗೆ ಹೆಸರುವಾಸಿಯಾಗಿದ್ದಾರೆ, ಅಲ್ಲದೆ ನಮ್ಮ ಕುಟುಂಬ ಸ್ನೇಹಿತರೂ ಹೌದು. ಅವರ ಒಬ್ಬನೇ ಮೇಧಾವಿ ಮಗನ ಅಗಲುವಿಕೆಯು ಅವರನ್ನು ಮಾನಸಿಕವಾಗಿ ಬಹಳ ಕುಗ್ಗಿಸಿದೆ. ಮಕ್ಕಳ ಮರಣಾನಂತರ ಪೋಷಕರನ್ನು ಅತ್ಯಂತ ಗೌರವ ಪೂರಕವಾಗಿ ನ್ಯೂಯಾರ್ಕ್ ಗೆ ಕರೆಸಿಕೊಂಡು, ತಲಾ ಒಂದು ಕೋಟಿ ರೂಪಾಯಿಗಳಷ್ಟು ಹಣವನ್ನು ಹಸ್ತಾಂತರ ಮಾಡಿದ ಅಮೆರಿಕದ ನಡೆ ನಿಜಕ್ಕೂ ಮೆಚ್ಚತಕ್ಕದ್ದು! ಆದರೆ ಎಷ್ಟು ಸಂಪತ್ತಿದ್ದರೂ ಮನದ ಸಂಕಟ ಮಾಸಲಾರದು ಅಲ್ಲವೇ? ಆನಂದ ಅವರು ಸಿಕ್ಕಿದ ಹಣವನ್ನು ತಾನು ಇರಿಸಿಕೊಳ್ಳದೆ ಸಾರ್ವಜನಿಕ ಸೇವೆಗಳಿಗಾಗಿ ಬಳಸಿ, ತಮ್ಮ ದರ್ಜಿ ಕೆಲಸವನ್ನು ಇಳಿವಯಸ್ಸಿನಲ್ಲೂ ಬಿಡದೆ ಮಾಡುವುದನ್ನು ನೋಡಿದರೆ ಅಭಿಮಾನವೆನಿಸುತ್ತದೆ…ಮನ ನೊಂದು ಮರುಗುತ್ತದೆ. ಇಂತಹ ಅದೆಷ್ಟೋ ಕುಟುಂಬಗಳ ಭವಿಷ್ಯ ಕರಾಳವಾದುದು ಈಗ ಇತಿಹಾಸ. ನಾವು ಅಲ್ಲಿಗೆ ತಲಪಿದಾಗ ಅದಾಗಲೇ ಜನ ಕಿಕ್ಕಿರಿದು ನೆರೆದಿದ್ದರು. ಅಕ್ಕಪಕ್ಕವಿರುವ ಅವಳಿ ಕಟ್ಟಡಗಳ
ಜಾಗಗಳು ಖಾಲಿಯಾಗಿದ್ದವು. ಎರಡೂ ಕಡೆಗಳಲ್ಲಿ ಕಟ್ಟಡಗಳ ಬಹು ಆಳವಾದ ಅಡಿಪಾಯಗಳ ಹಂತಗಳಲ್ಲಿ ಮೇಲಿನಿಂದ ತೆಳ್ಳನೆಯ ಪದರದಲ್ಲಿ ನೀರು ಕೆಳಗಡೆ ಹರಿದು ಸುಂದರ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನ ಪಡುತ್ತಿದ್ದರೂ, ನನಗೆ ಕಣ್ಣೀರ ಧಾರೆಯೇ ಹರಿಯುತ್ತಿರುವಂತೆ ಭಾಸವಾಗತೊಡಗಿತು… ಕಣ್ಣು ಮಂಜಾಯಿತು. ಅವುಗಳ ಸುತ್ತಲೂ ಸುಂದರವಾದ ಹಸಿರುಸಿರಿ ತುಂಬಿದ ವನ, ಬಣ್ಣದ ಹೂಗಳಿಂದ ಕೂಡಿದ ಹೂದೋಟವು ವಾತಾವರಣವನ್ನು ಪವಿತ್ರವಾಗಿಸಿತ್ತು. ಪ್ರವಾಸಿಗರು ಮೌನದ ಮೊರೆಹೊಕ್ಕಿದ್ದರು… ಕಾರಂಜಿಯ ಸದ್ದು ಮಾತ್ರ ಸ್ಪಷ್ಟವಾಗಿ ಕೇಳುತ್ತಿತ್ತು. ಅಲ್ಲಿದ್ದ ಪ್ರತಿಯೊಬ್ಬರ ಮನವೂ ಮೂಕವಾಗಿ ರೋದಿಸುತ್ತಿದ್ದುದರ ಅರಿವಾಗುತ್ತಿತ್ತು! ಆಳವಾದ ಕಾರಂಜಿ ಕೊಳದಂತೆ ಭಾಸವಾಗುವ ಇದರ ಸುತ್ತಲೂ ಸುಮಾರು ನಾಲ್ಕೂವರೆ ಅಡಿಗಳಷ್ಟು ಎತ್ತರಕ್ಕೆ ಕಟ್ಟೆಯನ್ನು ಕಟ್ಟಲಾಗಿದೆ. ಅದರ ಮೇಲೆ ಪೂರ್ತಿ ಲೋಹದ ಪಟ್ಟಿಯನ್ನು ಹಾಕಲಾಗಿದೆ. ಅದರ ಮೇಲೆ ಆಯಾ ಕಟ್ಟಡದಲ್ಲಿದ್ದು ತಾವು ಕರ್ತವ್ಯ ನಿರತರಾಗಿದ್ದಾಗಲೇ ಜೀವ ತೆತ್ತವರ ಹೆಸರುಗಳನ್ನು ಕೆತ್ತಲಾಗಿದೆ. ಅದರ ಮೇಲೆ ಕೈಯಾಡಿಸಿದಾಗ ಖಂಡಿತಾ ಭಾವುಕರಾಗದವರು ಇಲ್ಲವೇ ಇಲ್ಲ. ಅಲ್ಲಲ್ಲಿ ಆ ಹೆಸರುಗಳ ಮೇಲೆ ಹೂಗಳನ್ನು ಇರಿಸಿ ಪ್ರಾರ್ಥಿಸುವವರನ್ನೂ ಕಾಣಬಹುದು. ನಾವು ನಮ್ಮೂರಿನ ಹೇಮಂತ್ ಕುಮಾರ್ ನ ಹೆಸರನ್ನು ಹುಡುಕುತ್ತಾ ಅಲೆದಾಡಿದೆವು. ಇಲ್ಲಿಯ ಸಾವಿರಾರು ಹೆಸರುಗಳ ನಡುವೆ ಅವನ ಹೆಸರನ್ನು ಹುಡುಕುವುದು ಸುಲಭವಾಗಿರಲಿಲ್ಲ. ಒಬ್ಬೊಬ್ಬರು ಒಂದೊಂದು ಕಡೆ ಹುಡುಕುತ್ತಾ ಸುತ್ತಲೂ ನಡೆದಾಗ ನನ್ನ ದೃಷ್ಟಿಗೆ ಅವನ ಹೆಸರು ಗೋಚರಿಸಿತು…ಅಲ್ಲೇ ತೋಟದಲ್ಲಿ ಇದ್ದ ಹೂವನ್ನು( ಯಾರಿಗೂ ಕಾಣದಂತೆ?) ಕಿತ್ತು ಆ ಹೆಸರಿನ ಮೇಲಿಟ್ಟು ನಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸಿದೆವು. ಅವನ ಹೆಸರಿನ ಪಕ್ಕದಲ್ಲೇ ನಮ್ಮೂರ ಸಮೀಪದ ಕಡಬದವರ ಹೆಸರು ಗೋಚರಿಸಿತು… ಮನಸ್ಸು ಇನ್ನೂ ಮಂಕಾಯಿತು.
ಅಲ್ಲೇ ಪಕ್ಕದಲ್ಲಿ, ನಾಶವಾದ ಕಟ್ಟಡದ ಗಾಜಿನ ದೊಡ್ಡದಾದ ಭಾಗವೊಂದನ್ನು ಸಾರ್ವಜನಿಕರ ವೀಕ್ಷಣೆಗಾಗಿ ಇರಿಸಿದ್ದರು. ಭಾರವಾದ ಮನದಿಂದ ಅಲ್ಲಿಂದ ಹೊರಬಂದಾಗ, ಅನತಿ ದೂರದಲ್ಲಿ ಆಗಸದೆತ್ತರಕ್ಕೆ ನಿಂತಿರುವ ಬಹು ಸುಂದರ ಗಾಜಿನ ಕಟ್ಟಡವು ಫಳಫಳನೆ ಹೊಳೆಯುತ್ತಾ ನಿಂತಿತ್ತು…ಇದು ಅವಳಿ ಕಟ್ಟಡಗಳಿಗೆ ಪರ್ಯಾಯವಾಗಿ ಕಟ್ಟಿರುವಂತಹ ವಾಣಿಜ್ಯ ಸಂಕೀರ್ಣವೆಂದು ತಿಳಿಯಿತು.
ಮುಂದಕ್ಕೆ, ನ್ಯೂಯಾರ್ಕ್ ಮಹಾನಗರದಿಂದ ಬೀಳ್ಕೊಂಡು, ಬಹು ಚಂದದ ನೇರ ರಸ್ತೆಯಲ್ಲಿ ಬುಲ್ಲೆಟ್ ವೇಗದಲ್ಲಿ ಚಲಿಸತೊಡಗಿತು… ನಮ್ಮ ವಾಹನ. ಸಂಜೆ 4:30ರ ಸಮಯ… ವಾಹನವು ನೇರ ರಸ್ತೆಯನ್ನು ಬಿಟ್ಟು ದಟ್ಟ ಹಸಿರು ವನದ ನಡುವಿನ ರಸ್ತೆಯಲ್ಲಿ ಚಲಿಸಿ, ಅಲ್ಲಿರುವ ಗೇಟಿನಲ್ಲಿ , ಗುರುತಿನ ಚೀಟಿಯ ತಪಾಸಣೆ ಇತ್ಯಾದಿಗಳನ್ನು ಎದುರಿಸಿ, ಬಹು ವಿಶಾಲವಾದ ಕಟ್ಟಡಗಳ ಸಮುಚ್ಚಯದೊಳಗೆ ಬಂದು ನಿಂತಾಗ ಬಹಳ ಆಶ್ಚರ್ಯ… ಇದೇನಿರಬಹುದೆಂದು!?
Princeton University
ಹೌದು… ಜಗತ್ಪ್ರಸಿದ್ಧ ವಿಜ್ಞಾನಿ ಐನ್ ಸ್ಟೈನ್ ಅವರು ತಮ್ಮ ವಿದ್ಯಾಭಾಸ ಮಾಡಿದ್ದ ಪ್ರಖ್ಯಾತ Princeton Universityಯ ಆವರಣದೊಳಗೆ ನಾವು ಬಂದಿದ್ದೆವು! ಇದನ್ನು ತಿಳಿದಾಗ ಮೈ ಪುಳಕಗೊಂಡು ಇನ್ನಿಲ್ಲದ ಹೆಮ್ಮೆಯೆನಿಸಿತು! ಇದು ನ್ಯೂಯಾರ್ಕ್ ನಿಂದ ಸುಮಾರು 52ಮೈಲಿ ದೂರದಲ್ಲಿದೆ. ಮೊತ್ತ ಮೊದಲು 1746ರ ಸುಮಾರಿಗೆ, ಪದವೀಧರರಿಗೆ ಉನ್ನತ ಶಿಕ್ಷಣ ನೀಡುವ ಉದ್ದೇಶದಿಂದ ಖಾಸಗಿಯಾಗಿ ನ್ಯೂ ಜೆರ್ಸಿ ಎಂಬಲ್ಲಿ ಆರಂಭವಾದ ವಿದ್ಯಾಸಂಸ್ಥೆ ಇದಾಗಿದ್ದು, ತದನಂತರ 1747ರಲ್ಲಿ ಈಗಿರುವ ಸುಮಾರು 600 ಎಕರೆಯಷ್ಟು ವಿಸ್ತಾರವಾದ, ನ್ಯೂಯಾರ್ಕ್ ಪಟ್ಟಣದ ಸರಹದ್ದಿನಲ್ಲಿರುವ ಪ್ರದೇಶಕ್ಕೆ ಸ್ಥಳಾಂತರಗೊಂಡಿತು. 1896ರಲ್ಲಿ ಇದು ವಿಶ್ವವಿದ್ಯಾನಿಲಯವಾಗಿ ಮಾರ್ಪಾಡುಗೊಂಡು, ಸಹಸ್ರಾರು ಪ್ರತಿಭಾವಂತರನ್ನು ಜಗತ್ತಿಗೆ ಅರ್ಪಿಸಿದೆ. ಈಗ ಇಲ್ಲಿ ಜಗದೆಲ್ಲೆಡೆಯಿಂದ ಬಂದ ಸುಮಾರು 8,500 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿರುವರು. ವಾಹನವು ಆವರಣದೊಳಗೆ ಪ್ರವೇಶಿಸುತ್ತಿದ್ದಂತೆಯೇ, ಅಲ್ಲಿಯ ಹಳ್ಳಿಯ ಪ್ರಶಾಂತ ವಾತಾವರಣವು ಮನಸೆಳೆಯಿತು. ಆಹಾ…ದಟ್ಟ ಹಸಿರಿನ ಹುಲ್ಲುಹಾಸು, ಎಲ್ಲೆಲ್ಲು ನೋಡಿದರೂ ಮಧ್ಯಮ ಗಾತ್ರದ ಮರಗಳು. ಆ ರಸ್ತೆಯ ಬಲ ಪಕ್ಕದಲ್ಲಿ ಅತ್ಯಂತ ವಿಶಾಲವಾದ ಆಟದ ಬಯಲು ಮನತುಂಬಿತು. ಅಳಿಯ ಎಡೆಬಿಡದೆ ವೀಕ್ಷಕ ವಿವರಣೆ ನೀಡುತ್ತಲೇ ಇದ್ದ. ಅತ್ಯಂತ ಅಹ್ಲಾದಕರ ವಾತಾವರಣವು ನಿದ್ದೆಯ ಮಂಪರಿನಲ್ಲಿದ್ದ ನಮ್ಮನ್ನು ಬಡಿದೆಬ್ಬಿಸಿ ಕಾರಿನಿಂದ ಹೊರಗಿಳಿಯುವಂತೆ ಮಾಡಿತು. ಆದರೆ ಮಕ್ಕಳು ಮತ್ತು ಅವರಮ್ಮ ಹೊರ ಬರಲು ಒಪ್ಪದೆ ಕಾರಿನೊಳಗೇ ನಿದ್ದೆ ಹೋದರು. ಅಳಿಯನ ಜೊತೆ ನಾವಿಬ್ಬರು ಅತ್ಯುತ್ಸಾಹದಿಂದ ಮುಂದೆ ನಡೆದೆವು.
ಬಹು ಪುರಾತನ ಕಾಲದ ಗಟ್ಟಿಮುಟ್ಟಾದ ಕಲ್ಲಿನ ಕಟ್ಟಡಗಳ ಸಮುಚ್ಚಯವು ನಮ್ಮನ್ನು ಸ್ವಾಗತಿಸಿತು. ವಿಜ್ಞಾನಿ ಐನ್ ಸ್ಟೈನ್ ಅವರು ಓಡಾಡಿದಂತಹ ಪವಿತ್ರ ವಿದ್ಯಾಲಯದ ಆವರಣದಲ್ಲಿ ನಾನಿರುವೆನೆಂಬ ಧನ್ಯತಾಭಾವ ಮನದಲ್ಲಿ! ಅತಿ ವಿರಳವಾಗಿ ಅಲ್ಲಲ್ಲಿ ಓಡಾಡುವ ವಿದ್ಯಾರ್ಥಿಗಳು(?) ಕಂಡುಬಂದರು. ಮನಸೋಇಚ್ಛೆ ಎಲ್ಲಿ ಬೇಕೆಂದರಲ್ಲಿ ಓಡಾಡಿ, ಚಿತ್ರಗಳನ್ನು ಕ್ಲಿಕ್ಕಿಸಿ ಹೊರಬಂದಾಗ ಸಂಜೆ ಗಂಟೆ 6. ಹಿಂತಿರುಗುವ ರಸ್ತೆಯ ಪಕ್ಕಗಳಲ್ಲಿರುವ ಮನೆಗಳು ಕೂಡಾ ಹಳೆಯ ಸುಂದರ ವಾಸ್ತುಶಿಲ್ಪಗಳನ್ನೊಳಗೊಂಡಿದ್ದು, ನಾವು ಯಾವುದೋ ಸಾಂಸ್ಕೃತಿಕ ಗ್ರಾಮದೊಳಗೆ ಬಂದಂತಹ ಭಾವನೆಯನ್ನು ಮೂಡಿಸಿತು. ಹಾಗೆಯೇ ನಮ್ಮ ಪ್ರಯಾಣ ಮುಂದುವರಿಯಿತು… ಮಾರ್ಗ ಮಧ್ಯದಲ್ಲಿ ಸಿಗುವ ಇನ್ನೊಂದು ಚಾರಿತ್ರಿಕ ನಗರದತ್ತ… ಅದುವೇ ಫಿಲಡೆಲ್ಫಿಯಾ (Philadelphia)
(ಮುಂದುವರಿಯುವುದು…..)
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=38653
-ಶಂಕರಿ ಶರ್ಮ, ಪುತ್ತೂರು.
WTC ಅಳು ತರಿಸುವ ಜಾಗ. ನಿಮ್ಮ ವರ್ಣನೆಯೇ ಅಳು ಬರೆಸಿತು.
ತಮ್ಮ ಪ್ರೀತಿಯ ಸ್ಪಂದನೆಗೆ ಧನ್ಯವಾದಗಳು ಸುಚೇತಾ ಮೇಡಂ.
Nice
ನಯನಾ ಮೇಡಂ ಅವರಿಗೆ. ಧನ್ಯವಾದಗಳು
ಅಳು ನಗುವನ್ನು ತರಿಸಿದ…ಪ್ರವಾಸ ಕಥನ ಚೆನ್ನಾಗಿ ಮೂಡಿಬಂದಿದೆ..ಶಂಕರಿ ಮೇಡಂ…
ತಮ್ಮ ಪ್ರೀತಿಯ ಸ್ಪಂದನೆಗೆ ಧನ್ಯವಾದಗಳು ನಾಗರತ್ನ ಮೇಡಂ
ಪ್ರವಾಸ ಕಥನ ಎಂದಿನಂತೆ ಚೆನ್ನಾಗಿ ಮೂಡಿ ಬಂದಿದೆ
ಇಷ್ಟೊಂದು ವಿವರವಾಗಿ ನ್ಯೂಯೋರ್ಕ್.
ನ್ಯೂಜೆರ್ಸಿ ಸ್ಥಳ ಮಹಾತ್ಮೆ ಮನಸ್ಸಿಗೆ
ನಾಟುವಂತೆ ಬರೆದ ನಿಮ್ಮ ಲೇಖನಕ್ಕೆ.
ಮನದುಂಬಿ ಪ್ರಣಾಮಗಳು.
ರಂಗನಾಥ. ನಾಡಗೀರ. ಹುಬ್ಬಳ್ಳಿ
ಪ್ರವಾಸಿ ಕಥನ ಎಲ್ಲ ನವರಸಗಳೊಂದಿಗೆ ಸರಾಗವಾಗಿ ಓದಿಸಿಕೊಳ್ಳುತ್ತಾ ಸಾಗಿದೆ..