ನ್ಯಾನೋ ಕತೆಗಳು : ಹಸಿವು, ಅಪರಿಚಿತ
1.ಹಸಿವು
“ಇಲ್ಲ ಇನ್ನು ಈ ರೀತಿ ಸಾಗುವುದಿಲ್ಲ . ಎಳೆ ಬಾಣಂತಿ ಹೆಂಡತಿ ಮೊದಲ ಮಗುವಿನ ಹಸಿದ ಮುಖ ನೋಡಲಾಗುತ್ತಿಲ್ಲ. ಎಲ್ಲಿ ಹೋದರೂ ಹತ್ತು ರೂಪಾಯಿ ಸಾಲ ಹುಟ್ಟುತ್ತಿಲ್ಲ. ಏನು ಮಾಡಲಿ.” ತಲೆಕೆಟ್ಟು ಹೋಗಿತ್ತು ಸುರೇಶನಿಗೆ. ” ಅಮ್ಮ ಹಸಿವೂ” ಮಗಳ ಆಕ್ರಂದನ ಇನ್ನೂ ಕೇಳಲಾಗಲಿಲ್ಲ. ರೂಮಿನ ಒಳಗೆ ನಡೆದು ಬರೆದಿಟ್ಟ ಪೇಪರಿನ ಕಟ್ಟು ಹೊತ್ತು ಹೊರ ನಡೆದ. ವಾಪಸ್ ಬಂದವನ ಕೈಲಿ ತಕ್ಷಣದ ಪರಿಹಾರಕ್ಕೆ ಹೋಟೆಲ್ ತಿಂಡಿಗಳು ತಿಂಗಳಿಗಾಗುವಷ್ಟು ದಿನಸಿ ಚೀಲ ಇತ್ತು. ಪ್ರಶ್ನಾರ್ಥಕವಾಗಿ ನೋಡಿದ ಹೆಂಡತಿಯ ದೃಷ್ಟಿ ಎದುರಿಸಲಾಗದೆ ಹೊರ ಬಂದು ಮಗಳಿಗೆ ತಿಂಡಿ ತಿನ್ನಿಸುತ್ತ ಕುಳಿತ.
ಸ್ವಲ್ಪ ದಿನಗಳ ಬಳಿಕ ಗೆಳೆಯ ಸತೀಶನ “ಹಸಿವು” ಕಾದಂಬರಿಗೆ ಅಕಾಡಮಿ ಪ್ರಶಸ್ತಿ ಬಂದ ವಿಷಯ ತಿಳಿದವನ ತುಟಿಯಲ್ಲಿ ವಿಷಾದದ ನಗೆ ತೇಲಿತು . ಅಂದು ಅವನ ಹೊಟ್ಟೆಯ ಹಸಿವು ತಣಿಸಿದ ಕಾಗದದ ಕಟ್ಟು ಗೆಳೆಯನ ಕೀರ್ತಿಯ ಹಸಿವನ್ನು ಇಂದು ತಣಿಸಿತ್ತು..
2. ಅಪರಿಚಿತ
ಅಂದು ಬೆಳಗ್ಗಿನಿಂದಲೇ ಒಂಥರಾ ಉದಾಸ ಭಾವ. ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದರು ಪತಿ. ಮಗನಂತೂ ದೂರದ ಮಾಂಟ್ರಿಯಲ್ ನಲ್ಲಿ . ಅಲಾರಾಂ ಬದಲು ಕೇಳಿದ್ದು ಅಪರಿಚಿತನ ಆ ದನಿ.”ಇಂದಾದರೂ ಬರುವೆಯಾ” “ಇಲ್ಲ ಆಗಲ್ಲಪ್ಪ ನನಗೆ ತುಂಬಾ ಕೆಲಸವಿದೆ” “ಸರಿ” ಸುಮ್ಮನಾಯಿತು. ಮಧ್ಯಾಹ್ನ ಊಟಕ್ಕೆಂದು ಡೈನಿಂಗ್ ಟೇಬಲ್ ನಲ್ಲಿ ಕುಳಿತಾಗ “ಈಗಲಾದರೂ ಬಾ ನನ್ನೊಂದಿಗೆ” “ಉಹೂಂ ಈ ಬಾರಿ ಬಂದಾಗ ಮಗನ ಮದುವೆ ಮಾಡಬೇಕು” “ಹೂಂ” ಎಂದು ಸುಮ್ಮನಾಯಿತು ದನಿ. ಸಂಜೆ ದೇವರ ದೀಪ ಹಚ್ಚುವಾಗ “ಹೊರಡು ಹೊರಡು ಹೊತ್ತಾಯಿತು”. ದೀಪದಲ್ಲಿ ದಿಟ್ಟಿ ನೆಟ್ಟು ಬೇಡವೆಂದು ತಲೆಯಲುಗಿಸಿದಳು. ರಾತ್ರಿ ಒಂದು ಹೊತ್ತಿನಲ್ಲಿ ಮಗ್ಗುಲು ಬದಲಾಯಿಸುವಾಗ “ಇನ್ನು ಕಾಯುಲಾಗುವುದಿಲ್ಲ ನಡಿ ನಡಿ” . ಇವಳಿಗೆ ಉತ್ತರಿಸಲು ಸಮಯವೇ ಸಿಗಲಿಲ್ಲ. ಅಪರಿಚಿತನ ಜೊತೆ ನಡೆದೇ ಬಿಟ್ಟಳು .
–ಸುಜಾತಾ ರವೀಶ್ . ಮೈಸೂರು
ಪ್ರಕಟಣೆಗಾಗಿ ಸಂಪಾದಕರಿಗೆ ಧನ್ಯವಾದಗಳು.
ಅರ್ಥಪೂರ್ಣ ವಾದ ..ಚಿಕ್ಕ ಚೊಕ್ಕ ಕಥೆಗಳು… ಅಭಿನಂದನೆಗಳು..ಸೋದರಿ.. ಸುಜಾತ..
ಪುಟ್ಟ ಕಥೆಗಳು ಆದರೆ ಅಗಾಧ ಅರ್ಥವನ್ನು ಒಳಗೊಂಡಿವೆ
ಚಿಕ್ಕದರಲ್ಲಿ ದೊಡ್ಡ ಅರ್ಥವನ್ನು ಕೊಡುವ ನ್ಯಾನೋ ಕಥೆಗಳು ಚೆನ್ನಾಗಿವೆ.
ಚೆನ್ನಾಗಿವೆ ನ್ಯಾನೋ ಕತೆಗಳು.
ಕಥೆಗಳು ಚೆನ್ನಾಗಿವೆ
ಅರ್ಥ ಪೂರ್ಣ ಕಥೆಗಳು