ಮತ್ತೆ ಪಂಜರದೊಳಗೆ……

Share Button

ಅಂದು ನಸುಕು ಹೆಚ್ಚು ಮಸಕಾಗೇ ಇತ್ತು.  ಮೂಡಣದಲ್ಲಿ ಸೂರ್ಯ ಕಣ್ಣು ಬಿಡಲಾಗದೆ ಪ್ರಯಾಸ ಪಡುತ್ತಿದ್ದ.  ಕೋಳಿಕೂಗುವ ಹೊತ್ತಿಗೆ ಎದ್ದ  ಅಕ್ಕ (ಅಮ್ಮ) ಕೊಟ್ಟಿಗೆಯಲ್ಲಿದ್ದ ಗಬ್ಬದ ಎಮ್ಮೆಯನ್ನು ಆಚೆಗೆ ಕಟ್ಟಿ,  ಕೊಕ್ಕೊ ಅಂತಿದ್ದ ಕೋಳಿಯನ್ನು ಬಿಡಲು ಪಂಜರ ಎತ್ತಿದಳು. ತನ್ನ ಆರೇಳೂ ಮರಿಗಳು ಹೊರಬಂದುದನ್ನು ತಿರುತಿರುಗಿ ನೋಡಿ ಖಚಿತಪಡಿಸಿಕೊಂಡು ಹಿತ್ತಲಿನತ್ತ ಸಾಗಿತು ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ.  ತೊಪ್ಪೆ, ಗಂಜಲವನ್ನು ತಿಪ್ಪೆಗೆ ಹಾಕಿ ಕೊಟ್ಟಿಗೆ ಗುಡಿಸಿ ಮೂಲೆಯಲ್ಲಿ ಎತ್ತಿಟ್ಟಿದ್ದ ಹಿಡಿ ಸಗಣಿ ತಂದು ಮುಂಬಾಗಿಲ ಗುಡಿಸಿ, ಸಾರಿಸಿ,  ಚಂದದ ರಂಗೋಲಿ ಬಿಟ್ಟು, ಮಾಗಿ ಚಳಿಗೆ ಮೊಗ್ಗಾಗೇ ಇದ್ದ ಕೆಂಪು ದಾಸವಾಳ ಕಿತ್ತಿಟ್ಟು, ಮಹಡಿ ಮನೆ ಹಿಂದುಗಡೆ ಬಾವಿಯಿಂದ ನೀರು ಸೇದಿ ತಂದಿಟ್ಟು, ಅಕ್ಕ ನೀರೊಲೆಗೆ ಉರಿ ಹಾಕೋ ಹೊತ್ತಿಗೆ.. ಮುಂದುಗಡೆ ಮಹಡಿ ಮನೆಯ ರೂಮಿಂದ ಇಡೀ ಬೀದಿಗೆ ಕೇಳ್ಸೋ ಹಾಗೆ ಆಕಾಶವಾಣಿ ಸುಪ್ರಭಾತ ಹಾಡಿತ್ತು.

ಅವ್ವನ (ಅಜ್ಜಿ) ಮಗ್ಗುಲಲ್ಲಿ ಚಳಿಗೆ ರಗ್ಗೊಳಗೆ ಅವಳ ಬಿಸಿಗೆ ಆತು ಮಲಗಿದ್ದ ನನ್ನನ್ನು ಒಳಬಂದ ಅಕ್ಕ ಹೊತ್ತಾಯ್ತು.. ಏಳು, ಇನ್ನೂ ಮಲಗಿದೀಯಾ.. ಅಂತ ಅನ್ನುತ್ತಿದ್ದಂತೆ ಒಲ್ಲದ ಮನಸ್ಸಿನಿಂದ ಕಣ್ಣುಜ್ಜಿ, ಮೇಲೆದ್ದು ಮೈಮುರಿದು ಹಿತ್ತಲಿನತ್ತ ನಡೆದೆ. ಮುಂದಗಡೆ ತೆಂಗಿನ ಮರದ ಬುಡದ ಹತ್ರ ನಿಂತ್ಕೊಂಡು ಡಬ್ಬೀಲಿದ್ದ ನಂಜನಗೂಡು ಹಲ್ ಪುಡಿ ಬೆರಳಲ್ಲಿ ತಕ್ಕೊಂಡು ಅರ್ಧ ನೆಕ್ಕೊಂಡು ಹಲ್ಲುಜ್ಜಿದ ಶಾಸ್ತ್ರ ಮಾಡ್ತಾ.. ಇದ್ದೆ.  

ಆಗ ..ಅಷ್ಟೊತ್ತಿಗೇ ಎದ್ದು ಗದ್ದೆ ಕೊಯ್ಲಿಗೆ ಆಳು ಗೊತ್ತು ಮಾಡಿಕೊಂಡು ಬರೋಕೆ ಅಂತ ಪಂಚಾಯ್ತಿ ಆಫೀಸ್ ಹತ್ರ ಹೋಗಿದ್ದ ಅಣ್ಣ (ಅಪ್ಪ) ಮನೆಗೆ ಬಂದರು. ಬಂದಿದ್ದು ಅವರೊಬ್ಬರೆ ಅಲ್ಲ. ಜೊತೆಗೆ ಒಂದು ಸಣ್ಣ  ಹುಡುಗ. ಮಾಸಿದ ತಲೆ, ಹರಿದ ಬಟ್ಟೆ ತೊಟ್ಟ, ಬಾಡಿದ ಮುಖದ ಹುಡುಗ. ಇವನಾರೆಂದು ತಿಳಿವ  ಕುತೂಹಲದಿಂದ ಅರ್ಧಂಬರ್ಧ ಹಲ್ಲುಜ್ಜಿ, ಕೈಬಾಯ್ ತೊಳೆದು ಲಂಗಕ್ಕೆ ಒರಸಿಕೊಂಡು ಓಡ್ದೆ. ಅಣ್ಣನೊಡನೆ ಓಣೀಲಿ ನಡೆದು ಹಿಂದುಗಡೆ ಕೊಟ್ಟಿಗೆ ಕಡೆ ನಡೆದ ಅವನು ಮುಂಬಾಗಿಲಲ್ಲೇಕೆ ಬರಲಿಲ್ಲ ಅಂತ ಯೋಚ್ನೆ ಮಾಡಿಕೊಂಡು ಹಿಂಬಾಗಿಲತ್ತ ನಡೆದೆ.

ಆ ವೇಳೆಗೆ ಅಣ್ಣನ ದನಿ ಕೇಳಿ ಕೊಟ್ಗೆ ಕಡೆ ಬಂದ ಅವ್ವ  ಇದ್ಯಾರ ಹೈದ?… ಯಾಕ್ ಕರ್ಕೊಂಡು ಬಂದಿದೀರಿ ಅಂತ ಅಳಿಯನ್ನ ಕೇಳ್ತು.  ಪಂಚಾಯ್ತಿ  ಆಫೀಸ್ ಹತ್ರ ಒಬ್ಬನೇ ನಿಂತು ಕೊಂಡಿತ್ತು. ಯಾವೂರು? ಯಾರ ಮಗಾ ಅಂತ ಯಾರ್ ಕೇಳಿದ್ದರೂ ಹೇಳ್ತಾ ಇರಲಿಲ್ಲ.  ಬಾಳ ಹೊತ್ತು ನೋಡಿದೆ. ಕಳ್ಳು ಚುರ್ ಅಂತು ಅದ್ಕೆ ಕೇಳ್ದೆ ನಮ್ಮನೆಗೆ  ಬಂದೀಯಾ ಅಂತ ಹೂ ಅಂತು. ಅದಕ್ಕೆ ಕರ್ಕೊಂಡು ಬಂದೆ ಅಂದ್ರು. ಅವ್ವ ಒಳ್ಳೇದ್ ಮಾಡಿದಿರಿ ಬಿಡಿ ಅಂತು.

ಹೆಚ್ಚೂ ಕಡಿಮೆ  ನನ್ನಷ್ಟೇ ಇದ್ದ  ಅವ ಐದನೇ ಕ್ಲಾಸ್ ಇರಬಹುದು. ತಪ್ಪಿಸಿಕೊಂಡ್ ಬಿಟ್ಟಿರಬೇಕು. ಪಾಪ ಅನ್ನಿಸಿತು. ನಮ್ಮ ಜೊತ್ಗೆ ಆಡಾಕೆ  ಸರಿಯಾಯ್ತು ಅಂತ ಹೊಸ ಹೈದನ್ ನೋಡಿ ನನಗೆ ಖುಷಿಯಾಯ್ತು.

ಅಣ್ಣ  ಆ ಕಡೆ ಹೋದ ಕೂಡಲೆ ನಾನು ನಿನ್ನ  ಹೆಸರೇನು? ಯಾವೂರು? ಎಷ್ಟನೇ ಕ್ಲಾಸ್? ಅಂತ ಎಷ್ಟ್ ಕೇಳಿದ್ರೂ ಜಪ್ಪಯ್ಯ  ಅನ್ನಲಿಲ್ಲ ಅವನು. ಕೊಟ್ಟಿಗೆ ಬಿಟ್ಟು ಬರಲೂ ಇಲ್ಲ.  ತಲೆ ತಗ್ಗಿಸಿ ಎಮ್ಮೆ ಕಟ್ಟೋ ಗೊಂತ್ ಮೇಲೇ ಕುಂತ್ ಕೊಂಡುಬಿಟ್ಟ.

ಕಾಲುವೆಯಿಂದ ಬಂದ ಅಕ್ಕ ಈ ಅಪರಿಚಿತನನ್ನು ನೋಡುತ್ತಿದ್ದಂತೆ ಅಲ್ಲಿಗೆ ಬಂದ ಅಣ್ಣ  ಬೇಗ ಅಡ್ಗೆ ಮಾಡು. ಇವನ್ಯಾರೋ ಗೊತ್ತಿಲ್ಲ. ಕರ್ಕೊಂಡು ಬಂದೆ. ಹಸಿದಿದ್ದಾನೆ ಅನ್ಸುತ್ತೆ ಅಂದರು. ನಾಷ್ಟಾ ಗೀಷ್ಟಾ ಅಂತಾ ಆಗಿರಲಿಲ್ಲ.  ಬೆಳಗ್ಗೇನೆ ಊಟ.

ಊಟಕ್ಕೆ ಕೊಟ್ಟಿಗೆಯಲ್ಲೇ ಕುಳಿತ ಅವನ ಬಗ್ಗೆ ತಿಳಿಯೋ ತವಕ ನಂಗೆ. ಆದ್ರೆ ಬಗ್ಸಿದ್ದ ತಲೆ ಎತ್ತದೆ ಅಕ್ಕ  ಬಡಿಸಿದ ಉಪ್ಪೆಸರು, ಮುದ್ದೆ, ಅನ್ನ  ತೃಪ್ತಿಯಾಗಿ ಉಂಡು ಎಲೆಯನ್ನು ತಿಪ್ಪೆಗೆ ಬಿಸಾಕಿ ಕೈತೊಳೆದು ಮತ್ತೆ ಕೊಟ್ಗೆಯಲ್ಲೇ ಕುಂತ.
ಹನ್ನೊಂದು ಗಂಟೆ ಹೊತ್ತಿಗೆ ಅವ್ವ ಹೊರಗೆ ಕಟ್ಟಿದ್ದ ಎಮ್ಮೆ ಅಟ್ ಕೊಂಡು ಮೇಯ್ಸೋಕೆ ಅಂತ ಹೊಲಕ್ಕೆ ಹೊರಟಾಗ ಇವ ಚಕ್ಕನೆ ಎದ್ದು, ಅಮ್ಮಾರೆ ನಾನೂ ಬತ್ತೀನಿ ಅಂದ.

ಅವನ ಹೆಸರು, ಊರು ಒಂದೂ ಹೇಳಲೇ ಇಲ್ಲವಲ್ಲ ಇವ್ನು ಅಂತ ಯೋಚ್ನೆ ಮಾಡ್ತಿದ್ದಾಗ ಅವ್ವ ನಡೀಲಾ.. ಮತ್ತೆ ಹೋಗಾನ ಅಂತ ಹೊರಟು ಬಿಟ್ಳು  ಹೊಲದ ಕಡೆ.  ಇನ್ನೂ ಸಂಜೆವರೆಗೆ ಕಾಯ್ ಬೇಕಲ್ಲ ಇವನ ಬಗ್ಗೆ ತಿಳ್ಕೊಳ್ಳೋಕೆ ಅಂತ ಚಡಪಡಿಸಿದೆ.

ಸಂಜೆ ಅವ್ವ ಎಮ್ಮೆ ಮೇಯಿಸ್ಕೊಂಡು ಬಂದ ತಕ್ಷಣ ಅವ್ವ ಇವನ ಹೆಸರೇನು? ಯಾವೂರು?  ಸ್ಕೂಲ್ ಯಾವ್ದು?  ನಮ್ ಸ್ಕೂಲ್ಗೆ ಸೇರ್ಕೊತಾನಾ ಅಂತ ಒಂದೇ ಸಮನೆ ಕೇಳತೊಡಗಿದೆ.  ಅವ್ವ ಅವನ ಹೆಸರು ‘ಚೆಲುವಾ’ ಅಂತ. ಇಸ್ಕೂಲ್ಗೆ ಅವ ಸೇರಿಲ್ಲವಂತೆ. ಅವನಿಗೆ ಅವ್ವ ಇಲ್ಲವಂತೆ ಪಾಪ. ಅಷ್ಟೇಯಾ ಅವನು ಹೇಳಿದ್ದು ಅಂದ್ಳು.

ಕರೆಯೋಕೆ ಹೆಸರು ಗೊತ್ತಾಯ್ತಲ್ಲ ಸಾಕು ಬಿಡು ಅಂತ ನಾನು ಅವನನ್ನು ಮಾತಾಡಿಸಲು ಪ್ರಯತ್ನಿಸಿದೆ. ಏಯ್ ಚೆಲುವ   ಕಣ್ಣಾಮುಚ್ಚೆ ಆಡೋಣ ಬಾ ಅಂದೆ. ನಾಚಿಕೊಂಡು ತಲೆಯಲ್ಲಾಡಿಸಿದ. ಆಟ ಗೀಟ ಅಂದ್ರೆ ದೂರ ಸರೀತಿದ್ದ. ಆದರೆ ಅವ್ವನಿಗೆ ಜೊತೆಯಾದ ಚೆಲುವ.  ದಿನಾ ಹೊಲಕ್ಕೆ ಹೋಗಿ ಬರುತ್ತಿದ್ದ. ನನಗೂ ಹೊಲಕ್ಕೆ ಹೋಗ್ ಬೇಕು ಅವ್ವನ ಜೊತೆ ಅನ್ನಿಸ್ತಿತ್ತು. ಆದರೆ ಶಾಲೆಗೆ ತಪ್ಪಿಸಿಕೊಳ್ಳುವಂತಿರಲಿಲ್ಲ. ಅಕ್ಕ  ಬೈಯೋಳು. ಅದಕ್ಕೆ ರಜಾ ದಿನವನ್ನೇ ಕಾಯಬೇಕಾಗಿತ್ತು.  ಭಾನುವಾರ ಬಂತು ನಾನು ಅವ್ವ ಮತ್ತು ಚೆಲುವನ ಜೊತೆ ಹೊಲಕ್ಕೆ ಹೊರಟೆ. ತೋಪಿನ ನೆರಳಲ್ಲಿ ಅವನು ಎಮ್ಮೆಯನ್ನು ಮೇಯೋಕೆ  ಕಟ್ಟಿಹಾಕಿ ಅವ್ವನ  ಜೊತೆ ಹೊಲದೊಳಗಿನ ತಡಗುಣಿ ಕಾಯಿಯ ಹಂಬು  ಕುಯ್ಯಲು ತೊಡಗಿದ. ಇಷ್ಟು ಸಣ್ಣ  ಹುಡುಗ  ಅವ್ವನಿಗಿಂತ ಚುರುಕಾಗಿ ಹಂಬು ಹೇಗೆ ಕುಯ್ಯುತ್ತಾನೆ ಅಂತ ನಾನು ಅಚ್ಚರಿಯಿಂದ ನೋಡುತ್ತಿದ್ದೆ. ಆಗ ತಡಗುಣಿ ಹಂಬಿನ ಮಧ್ಯದಲ್ಲಿ ಒಂದು ಪುಟ್ಟ  ಮೊಲದ ಮರಿ ಸಿಕ್ಕಿಕೊಂಡು ಒದ್ದಾಡುತ್ತಿತ್ತು. ಪಿಳಿ ಪಿಳಿ ಕಣ್ ಬಿಡ್ತಾ ಇದ್ದ ಅದು ತುಂಬಾ ಸುಸ್ತಾಗಿತ್ತು. ನಾನು ಚಲುವಾ.. ಮನೆಗೆ ತಗೊಂಡು ಹೋಗೋಣ. ನಿಧಾನವಾಗಿ ಹಂಬಿನಿಂದ ಬಿಡಿಸು ಅಂದೆ. ಅವ್ವ ಬ್ಯಾಡ ನಿಮ್ಮಕ್ಕ ಬೈಯ್ತಾಳೆ. ಸುಮ್ಮನಿರು ಅಂದ್ಳು. ನಾನು ಅವ್ವ ಅದಕ್ಕೆ ಸುಸ್ತಾಗಿದೆ. ಸುಧಾರಿಸ್ಕೊಂಡ ಮೇಲೆ ಬಿಟ್ ಬಿಡೋಣ ಈಗ ಮನೆಗೆ ಕರ್ಕೊಂಡು ಹೋಗೋಣ ಅಂತ ಗೋಗರೆದೆ. ಮನಕರಗಿತು ಅವ್ವನಿಗೆ. ಚಲುವ ಹಂಬಿನೊಳಗೆ ಸಿಕ್ಕಿಕೊಂಡ  ಮೊಲದ ಮರಿಯನ್ನು ಉಪಾಯವಾಗಿ ಹೊರ ತೆಗೆದ. ಓಡಲಾಗದ ಅದು ಕುಸಿದು ಕುಳಿತಿತು. ಮಂಕರಿಯಲ್ಲಿಟ್ಟುಕೊಂಡು ಮನೆಯತ್ತ ನಡೆದೆವು.  ಕೊಟ್ಟಿಗೆಗೆ ತಂದು ಪಂಜರದೊಳಗೆ ಮೊಲದ ಮರಿಯನ್ನು ಮೆಲ್ಲಗೆ ಇಟ್ಟು ತಿನ್ನಲು ತಡಗುಣಿ ಚೊಟ್ಟನ್ನಿಟ್ಟ ಚಲುವ. ಪಂಜರದ ಮುಂದೆಯೇ ಕುಳಿತು ಅದರ ಕಣ್ಣನ್ನೇ ನೋಡುತ್ತಿದ್ದ ನನಗೆ ಅಕ್ಕ ಮೊದಲು ಅದನ್ನು ಬಿಟ್ ಬಾ ಅಂತ ಗದರಿದಾಗ ನಾನು ಸಪ್ಪೆಮುಖದಿಂದ ಅವ್ವನ ಕಡೆ  ನೋಡ್ದೆ. ಅವ್ವ ಹೋಗಲಿ ಬಿಡು ಹೈಕಳು ಖುಷಿಗೆ ತಂದಿವೆ ಅಂತ ನಮ್ಮನ್ನು ವಹಿಸಿಕೊಂಡಳು.  ಮರುದಿನ ಚಲುವ ಹೊಲಕ್ಕೆ ಹೊರಟ. ನಾನು ಒಲ್ಲದ ಮನಸ್ಸಿನಿಂದ  ಶಾಲೆಗೆ ಹೊರಟೆ. ಮನಸೆಲ್ಲಾ ಕವಚಿಹಾಕಿದ್ದ ಮೊಲದ ಕಡೇನೆ. ಸ್ಕೂಲ್ ಬಿಡೋ ಬೆಲ್ ಹೊಡಿದಿದ್ದೆ ತಡ ಓಡಿಕೊಂಡು ಬಂದು ಪುಸ್ತಕ ಎಸೆದು ಕೊಟ್ಟಿಗೆ ಕಡೆ ನಡೆದೆ. ಪಂಜರವೂ ಇಲ್ಲ. ಮೊಲವೂ ಇಲ್ಲ. ದುಃಖ ಒತ್ತರಿಸಿ ಬಂತು. ಅಷ್ಟರಲ್ಲಿ ಕಾಲುವೆಯಿಂದ ನೀರು ತಗೊಂಡು ಬಂದ ಅಕ್ಕನನ್ನು ಮೊಲದ ಮರಿಯೆಲ್ಲಿ ಅಂದೆ. ಕಸ ಗುಡಿಸೋಕೆ ಪಂಜರ ಆ ಕಡೆ ಇಟ್ಟೆ. ಬಾಗಿಲು ತೆಗೆದಿತ್ತು.  ಚಂಗನೆ ಮೊಲ ಓಡಿ ಹೋಯ್ತು ನಾನೇನ್ ಮಾಡ್ಲಿ ಅಂದಳು. ಇದ್ದ ಒಂದೇ ದಿನ ಮತ್ತೆ ಮತ್ತೆ  ನೋಡಬೇಕೆನಿಸುತ್ತಿದ್ದ ಮುದ್ದು ಮೊಲ ಓಡಿ ಹೋಗಿತ್ತು ಬಯಲಿನತ್ತ. ಸಂಜೆ ಬಂದ ಚಲುವ ವಿಷಯ ತಿಳಿದು ನನ್ನ  ಬಳಿ ಬಂದು ಆ ಮರಿ ಮತ್ತೆ ಹಂಬಿನೊಳಗೆ ಸಿಕ್ಕಿಕೊಳ್ತದೆ ನಾನು ಬಿಡಿಸ್ಕೊಂಡು ತಂದು ಕೊಡ್ತೀನಿ ಅಂತ ನನ್ನನ್ನು ಸಮಾಧಾನ ಮಾಡಿದ.

ಚಲುವ ಬಂದು ಒಂದು ವಾರವಾಗಿತ್ತು.  ಅವನು ನಮ್ಮನೆಯಲ್ಲೇ ಮೊದಲಿಂದ ಇದ್ದನೇನೋ ಎನ್ನುವಷ್ಟು ಹೊಂದಿಕೊಂಡಿದ್ದ.  ಅವ್ವನೊಡನೆ ಅವನ ದಿನಚರಿ ಸಾಗಿತ್ತು. ಗಿಡ ನೆಡೋದು, ಗೊಬ್ಬರ  ಹಾಕೋದು ಹೊಲದ ಬಗ್ಗೆ ಪುಸ್ತಕದಲ್ಲಿಲ್ಲದ ಅನೇಕ ವಿಚಾರಗಳು ಅವನಿಗೆ ತಿಳಿದಿದ್ದವು. ಹೆಚ್ಚು ಮಾತಾಡದಿದ್ದರೂ ಎಲ್ಲರಿಗೂ ಮೆಚ್ಚುಗೆಯಾಗಿದ್ದ ಅವನು ಗೆಲುವಾಗಿದ್ದ. ಸಂಜೆ ಹೊತ್ತು ಅವ್ವ ಹೇಳೋ ಕಥೆಗಳನ್ನು  ಒಟ್ಟಿಗೆ ಕೂತು ಕೇಳ್ತಾ ಇದ್ದೆವು.

ಆ ದಿನ ಸೋಮವಾರ ಸಂಜೆ ಸಂತೆಯಿಂದ ಅಕ್ಕ ತರುವ ಕಡ್ಲೆ ಪುರಿಗಾಗಿ ಕಾಯ್ತಾ ಜಗುಲಿಯಲ್ಲಿ ಕುಳಿತಿದ್ದೆ. ಯಾರೋ ಅಪರಿಚಿತ ವ್ಯಕ್ತಿ ಮನೆ ಬಳಿ ಬಂದು ಅಣ್ಣೋರು ಇಲ್ವಾ.. ಅಂದ್ರು. ನಾನು ರೂಮಿನಲ್ಲಿದ್ದ ಅಣ್ಣನನ್ನು ಕರೆದು ಯಾರೋ ಬಂದವ್ರೆ ಅಂದೆ. ಹೊರ ಬಂದ ಅಣ್ಣ ಯಾರಪ್ಪ ನೀನು ಅಂತ ಕೇಳಿದ್ರು. ನಾನು… ಚಲುವನ ಅಪ್ಪ ಸಿದ್ಧಾ..ಅಂತ ನಿಮ್ಮೂರ ಪಕ್ಕದೋನು.  ಚಲುವನನ್ನು  ನಮ್ಮೂರ ಯಜಮಾನರ ಮನೇಲಿ ವರ್ಷದ ಆಳಾಗಿಟ್ಟಿದ್ದೆ ಅಣ್ಣೋರೆ. ನಂಗೆ ನಾಕು ಮಕ್ಕಳು ಹೆಂಡ್ತಿ ಸತ್ ಹೋದ್ಳು. ಮದುವೆ ಆಗೋಕೆ ಇನ್ನೊಂದು ಸಂಬಂಧ ಹುಡುಕ್ತಾ ಇವ್ನಿ. ಇವನು ಬೇರೆ ತಪ್ಪಿಸಿಕೊಂಡು ಬಂದ್ ಬಿಟ್ಟವ್ನೆ. ಯಜಮಾನರ  ಕೋಪ ನೆತ್ತಿಗೇರಿದೆ. ಜೋರು ಮಾಡ್ತಾವ್ರೆ ಚಲುವನನ್ನು ತಂದು ಬಿಡು ಅಂತ.  ಏನೋ ದೊಡ್ಡವರು ನಾಕ್ ಮಾತ್ ಅಂತಾರೆ, ನಾಕು ಏಟ್ ಹೊಡಿತಾರೆ ಅದಕ್ಕೆ ಇವನು ಬಿಟ್ ಬಂದ್ ಬುಡೋದ. ನಾನ್ ಬೇರೆ ಮದುವೆಗೆ ಅಂತ ದುಡ್ಡು ಈಸ್ಕೊಂಡು ಬಿಟ್ಟಿವ್ನಿ. ಈಗ ಕರ್ಕೊಂಡು ಹೋಗಿ ಬುಡ್ಬೇಕು. ಇಲ್ಲಾಂದ್ರೆ ಯಜಮಾನ್ರು ನನ್ನನ್ನು ಸಿಗಿದ್ ಹಾಕಿ ಬಿಡ್ತಾರೆ ಅಂದ.  ಸದ್ಯ ಇವತ್ತು ಸಂತೆಗೆ ಬಂದಾಗ  ಗೊತ್ತಾಯ್ತು ಚಲುವ ನಿಮ್ಮನೆಯಲ್ಲವ್ನೆ ಅಂತ. ಅದ್ಕೆ ಬಂದೆ ಅಣ್ಣೋರೆ ಅಂದ.

ಸಂಜೆ ಅವ್ವನ ಜೊತೆ ಹೊಲದಿಂದ  ಬಂದ ಚಲುವ ಎಮ್ಮೆ ಕಟ್ಟಿಹಾಕಿ ಮುಂಬಾಗಿಲಿಗೆ ಬಂದ. ಅಪ್ಪನ ಮುಖ  ಕಂಡೊಡನೆ ಗೋಡೆಗೊರಗಿ ನಿಂತ. ಅರಳಬೇಕಾದ ಮುಖ ಬಾಡಿತು. ಕಣ್ಣ ಕೊನೆಯಲ್ಲಿ ಹನಿಯಾಡುತ್ತಿದ್ದವು. ಅಣ್ಣೆನೆಡೆಗೊಮ್ಮೆ, ಅವ್ವನ ಕಡೆಗೊಮ್ಮೆ ತಿರುಗಿ ತಡೆಯಿರೆಂದು ಹೇಳುವ ನೋಟ ಬೀರಿದ. ನನಗೆ ಅಣ್ಣಾ.. ಕಳುಹಿಸಬೇಡ ಪಾಪ ಅವನು ಎಂದು ಚೀರಿ ಹೇಳಬೇಕೆನಿಸಿತು.  ಚಲುವ ತನ್ನದಲ್ಲದ, ಅವ್ವನಿಲ್ಲದ ಮನೆಯಲ್ಲಿ  ಹೇಗಿದ್ದಾನು ಎನಿಸಿತು. ಇರಲಾಗದೆ  ಓಡಿಬಂದ ಅವನ ಬಗ್ಗೆ ಅಯ್ಯೋ ಎನಿಸಿತು. 

ಮಗನನ್ನು ಪುಸಲಾಯಿಸಿ,  ಅಣ್ಣನಿಗೆ ಕೈಮುಗಿದು ಉಪಕಾರ ಮಾಡಿದಿರಿ ಅಂತ ಹೇಳಿ ಚಲುವನ ಕೈ ಹಿಡಿದು ದರ ದರ ಅಂತ ಎಳಕೊಂಡು ಹೊರಟೇ ಬಿಟ್ಟ ಸಿದ್ಧ  ದುಡ್ಡು ಕೊಟ್ಟ ತನ್ನ ಯಜಮಾನನಿಗೊಪ್ಪಿಸಲು.  ಮಗನ ಅಳಲನ್ನು ಅರಿಯದೆ ತನ್ನ ಸ್ವಾರ್ಥಕ್ಕಾಗಿ ಅವನ ಬಾಲ್ಯವನ್ನು ಕಸಿದ ಅಪ್ಪ.

ಭಾರವಾದ ಹೆಜ್ಜೆಯಿಟ್ಟು ಅಪ್ಪನ ಹಿಂದೆ ಕಾಲೆಳೆದುಕೊಂಡು ಹೋಗುತ್ತಿದ್ದ ಚಲುವ …ನನಗೆ ಮುದ್ದಾದ ಮೊಲದ ಮರಿಯಂತೆ ಕಂಡ. ಓಡುವ ಶಕ್ತಿಯಿದ್ದರೂ ಬಯಲಿಗೆ ಜಿಗಿಯಲಾಗದೆ ಮತ್ತೆ ಸೇರಿದ ಪಂಜರ. 

ಮಂಜುಳಾ ಮಿರ್ಲೆ 

8 Responses

  1. ಅಪ್ಪನ ಸ್ವಾರ್ಥಕ್ಕೋಸ್ಕರ..ಮಗನ ಬಾಲ್ಯ ಕಸಿಯುವುದಷ್ಟೇ ಅಲ್ಲದೆ ಜೀತ ಪದ್ದತಿ ಗೆ ಅಟ್ಟುವ…ಮನೋಭಾವನೆಯುಳ್ಳ ಕತೆ.. ಸೊಗಸಾಗಿ ಮೂಡಿಬಂದಿದೆ.. ಸಂಕೇತವಾಗಿ ಬಳಸಿರು ವ ಮೊಲದ ಅನಾವರಣ ಔಚಿತ್ಯ ಪೂರ್ಣ ವಾಗಿದೆ…ಅಭಿನಂದನೆಗಳು ಮೇಡಂ.

  2. Padmini Hegde says:

    ಭಾವಪೂರ್ಣವಾದ ಕಥನ!

  3. ನಯನ ಬಜಕೂಡ್ಲು says:

    ಹೃದಯಸ್ಪರ್ಶಿ ಕಥೆ

  4. SHARADA H S says:

    ಮುಗ್ಧ ಬಾಲಕಿಯ ದೃಷ್ಟಿಕೋನದಿಂದ ಸೊಗಸಾಗಿ ನಿರೂಪಿಸಿದ ಕಥೆ. ಹಳ್ಳಿಯ ಚಿತ್ರಣ ಸಹಜವಾಗಿ ಮೂಡಿಬಂದಿದೆ

  5. ಸ್ವಾಮಿ says:

    ಸೊಗಸಾಗಿ ಮೂಡಿಬಂದಿದೆ.ನೈಜ ಹಳ್ಳಿಯ ಮಾತಿನ ಶೈಲಿ,ಕತೆ ಕಟ್ಟುವ ಓಗ ಮುಂಚೂಣಿಯಲ್ಲಿದೆ.ಮುಂದೆ ಏನಾಗಬಹುದು
    ಎಂಬ ಕುತೂಹಲ..

  6. ಶಂಕರಿ ಶರ್ಮ says:

    ಜೀತ ಪದ್ಧತಿಯ ದಾರುಣ ಚಿತ್ರಣವನ್ನು ನೀಡಿದ ಕಥೆಯು ಮನಮಿಡಿಯುವಂತಿದೆ.

  7. Padma Anand says:

    ಮನಮುಟ್ಟುವ ಹೃದಯಸ್ಪರ್ಶಿ ಕಥೆ.

  8. MANJURAJ H N says:

    ಸೊಗಸಾಗಿ ಮೂಡಿ ಬಂದಿದೆ ಮೇಡಂ. ಗ್ರಾಮೀಣ ಪರಿಸರದ ಉಸಿರನ್ನೇ ತೇಯ್ದು ಬರೆದ ಡಾ. ಬೆಸಗರಹಳ್ಳಿ ರಾಮಣ್ಣನವರ ಕತೆಗಳು ಆಯಾಚಿತವಾಗಿ ನೆನಪಾದವು.

    ಹಿತಮಿತವಾದ ಶೈಲಿ. ಎಲ್ಲಿಯೂ ಸಂಯಮ ಮೀರದ ಕಥನಗಾರಿಕೆ. ತುಂಬ ಇಷ್ಟವಾಯಿತು. ಭಾವನೆಗಳು ಚಿಂತನೆಗೆ ಹಚ್ಚುವಂತಿವೆ. ಅಭಿನಂದನೆಗಳು ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: