ಮಿಝೋರಾಮ್‌ನ ರೀಕ್ ಪ್ರದೇಶದಲ್ಲೊಂದು ಚಾರಣ
ಬೆಳಗಾಗೆದ್ದ ಭಾಸ್ಕರನು ತನ್ನ ರಥಕ್ಕೆ ಏಳು ಕುದುರೆಗಳನ್ನು ಹೂಡಿ ತನ್ನ ದಿನಚರಿಯನ್ನು ಆರಂಭಿಸಿದನು. ಈಶಾನ್ಯ ರಾಜ್ಯಗಳ ನಿಸರ್ಗದ ಸೊಬಗಿಗೆ ಮನಸೋತವನು, ತನ್ನ ಮೊದಲ ಹೆಜ್ಜೆಯನ್ನು ಅಲ್ಲಿ ಇರಿಸಿ, ಸುತ್ತಲೂ ನೋಡಿದ. ಇನ್ನೂ ಬೆಳಗಿನ ಜಾವದ ಸಿಹಿ ನಿದ್ರೆಯಲ್ಲಿದ್ದ ಜನರನ್ನು ಎಚ್ಚರಿಸಿದ. ತನ್ನ ಹೊಂಬಣ್ಣದ ಕಿರಣಗಳಿಂದ ಹಸಿರುಟ್ಟ ಗಿರಿ ಶಿಖರಗಳನ್ನೂ, ದಟ್ಟವಾದ ಕಾನನಗಳಿಂದ ಧಾರೆಯಾಗಿ ಇಳಿದು ಬರುತ್ತಿದ್ದ ಝರಿತೊರೆಗಳನ್ನೂ, ಶಾಂತವಾಗಿ ಮಲಗಿದ್ದ ಭೂತಾಯಿಯನ್ನೂ ಸಿಂಗರಿಸಿದ.
ಈ ಪರಿಯ ಸೃಷ್ಟಿಯ ಸೊಬಗನ್ನು ಕಾಣಲು ನಾನು ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಲು ಕಾತರದಿಂದ ಕಾಯುತ್ತಿದ್ದೆ. ಕೊನೆಗೊಮ್ಮೆ ಆ ಸದವಕಾಶ ಒದಗಿ ಬಂದಿತ್ತು. ಮಿಝೋರಾಂನ ರಾಜಧಾನಿಯಾದ ಐಸ್ವಾಲ್ ನಿಂದ 29 ಕಿ.ಮೀ. ದೂರದಲ್ಲಿರುವ ರೀಕ್ ಕಣಿವೆಗೆ ಭೇಟಿಯಿತ್ತೆವು. ಹಾದಿಯಲ್ಲಿ ರೀಕ್ ಕಣಿವೆಯಲ್ಲಿ ರಭಸವಾಗಿ ಹರಿಯುತ್ತಿದ್ದ ತ್ಲಾಂಗ್ ನದಿಯನ್ನು ಕಂಡೆವು, ನದಿಯನ್ನು ದಾಟಲು ಕಟ್ಟಿದ್ದ ಕಮಾನು ಸೇತುವೆ ಅಂದವಾಗಿತ್ತು.
ಮುಂದೆ ಸಾಗಿದರೆ ಅಲ್ಲೊಂದು ‘ಮೀಜೋ ಹೆರಿಟೇಜ್ ವಿಲೇಜ್’ನ ಮಾದರಿಯನ್ನು ನಿರ್ಮಿಸಿದ್ದರು. ಪ್ರವಾಸಿಗರಿಗೆ ಮೀಜೋ ಬುಡಕಟ್ಟು ಜನಾಂಗದವರ ಪರಂಪರೆ, ಸಂಪ್ರದಾಯ ಹಾಗೂ ಜೀವನಶೈಲಿಯನ್ನು ಪರಿಚಯಿಸುವ ಪ್ರಯತ್ನವಿದಾಗಿತ್ತು. ಮೂರ್‍ನಾಲ್ಕು ಅಡಿ ಎತ್ತರದಲ್ಲಿ, ಬಿದಿರು ಹಾಗೂ ಒಣ ಹುಲ್ಲಿನಿಂದ ನಿರ್ಮಿಸಲಾಗಿದ್ದ ಈ ಕುಟೀರಗಳಲ್ಲಿ ಅವರ ಅಡುಗೆ ಮನೆ, ಸಂಗೀತ ನೃತ್ಯಕ್ಕೆ ಮೀಸಲಾಗಿದ್ದ ಸ್ಥಳ ಹಾಗೂ ಅವರ ನಾಯಕನ ಕಛೇರಿಗಳ ಮಾದರಿಗಳಿದ್ದವು. ಅಲ್ಲಿಗೆ ಬಂದಿದ್ದ ವಿದ್ಯಾರ್ಥಿಗಳ ತಂಡವೊಂದು ಅಲ್ಲಿದ್ದ ಸಂಗೀತ ವಾದ್ಯಗಳನ್ನೂ ನುಡಿಸುತ್ತಾ ಮೈಮರೆತಿತ್ತು. ನಾವೂ ಅವರೊಂದಿಗೆ ಸೇರಿ ಹಾಡಿದೆವು, ಕುಣಿದೆವು. ಮುಂದಿದ್ದ ಮರಕ್ಕೆ ಕಟ್ಟಿದ್ದ ಉಯ್ಯಾಲೆ ಆಡುತ್ತಿರುವಾಗ, ಹಿಂದೆ ಇಲ್ಲಿ ವಾಸವಾಗಿದ್ದ ಬುಡಕಟ್ಟು ಜನರ ಬದುಕು ಕಣ್ಣ ಮುಂದೆ ತೇಲಿ ಬಂತು. ಅಲ್ಲಿ ಹೊಸದಾಗಿ ನಿರ್ಮಿಸಿದ್ದ ಬಯಲು ಸಭಾಂಗಣದಲ್ಲಿ ಪ್ರತಿವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ‘ಆಂಥೋರಿಯಮ್ ಹಬ್ಬವನ್ನು’ ಸಂಭ್ರಮ ಸಡಗರಗಳಿಂದ ಆಚರಿಸುವ ಪದ್ದತಿ ಬೆಳೆದು ಬಂದಿದೆ. ಆಂಥೋರಿಯಮ್ ಪುಷ್ಪವು ಮೀಝೋರಾಂನ ರಾಷ್ಟ್ರೀಯ ಸ್ಮಾರಕವೆಂದು ಗುರುತಿಸಲ್ಪಟ್ಟಿದೆ. ಈ ಹಬ್ಬದಲ್ಲಿ ಮೀಝೋಗಳು ತಮ್ಮ ಪಾರಂಪರಿಕ ಸಂಗೀತ, ನೃತ್ಯ, ಕ್ರೀಡೆಗಳನ್ನು ಪ್ರದರ್ಶಿಸುವ ಜೊತೆಜೊತೆಗೇ, ಅಲ್ಲಿನ ಪಾರಂಪರಿಕ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ, ವಿಶಿಷ್ಟ ಖಾದ್ಯಗಳ ರಸದೌತಣದೊಂದಿಗೆ ಪ್ರವಾಸಿಗರನ್ನು ಸ್ವಾಗತಿಸುವರು.
ರೀಕ್ ಪರ್ವತ ಶ್ರೇಣಿಗಳನ್ನು ವೀಕ್ಷಿಸಲು ಆಸಕ್ತಿಯಿದ್ದವರು ಬನ್ನಿ ಎಂದು ನಮ್ಮ ಗೈಡ್ ಕರೆದಾಗ, ಅಲ್ಲಿ ಕಂಡ ಕಡಿದಾದ ಚಾರಣದ ದಾರಿಯನ್ನು ಕಂಡ ಬಹಳಷ್ಟು ಮಂದಿ ಹಿಂದೆ ಸರಿದರು. ನಾವು ನಾಲ್ಕು ಮಂದಿ ಮಾತ್ರ ಉತ್ಸಾಹದಿಂದ ಮುನ್ನೆಡೆದೆವು. ನಾವು ಅಲ್ಲಿ ಬಿದ್ದಿದ್ದ ಮರದ ಕೋಲುಗಳನ್ನು ಹಿಡಿದು, ಪಕ್ಷಿಗಳ ಕಲರವ ಕೇಳುತ್ತಾ, ಹಸಿರು ಮರಗಿಡಗಳನ್ನು ನೋಡುತ್ತಾ, ಫೋಟೋಗಳನ್ನು ಕ್ಲಿಕ್ಕಿಸುತ್ತಾ ಸಾಗಿದೆವು. ಸುಮಾರು 1,465 ಮೀಟರ್ ಎತ್ತರವಿದ್ದ ಪರ್ವತ ಶ್ರೇಣಿಗಳು ನಮ್ಮನ್ನು ಕೈಬೀಸಿ ಕರೆಯುತ್ತಿದ್ದವು. ಬೈಕ್ ಸವಾರರ ತಂಡವೊಂದು ನಮ್ಮನ್ನು ಹಿಂದೆ ಹಾಕಿ ಸಾಗಿತ್ತು. ಮರದ ರೆಂಬೆ ಕೊಂಬೆಗಳ ಮಧ್ಯೆ ಅವಿಸಿಟ್ಟುಕೊಂಡಿದ್ದ ಹಕ್ಕಿಯೊಂದು ನಮಗೆ ಸ್ವಾಗತಗೀತೆ ಹಾಡಿತ್ತು. ನಾವೂ ಅದರ ಜೊತೆಗೆ ಕೂಗು ಹಾಕಿದಾಗ, ಆ ಹಕ್ಕಿಯೂ ಮಾರುತ್ತರ ನೀಡಿತ್ತು. ಮರಗಿಡಗಳ ತಂಪಾದ ನೆರಳಿನಡಿ ಹೆಜ್ಜೆ ಹಾಕುತ್ತಾ ಸಾಗಿದವರಿಗೆ ಈ ಚಾರಣ ಶ್ರಮವೆನಿಸಲೇ ಇಲ್ಲ. ಮುಂದೆ ಚಾಚಿಕೊಂಡಿದ್ದ ದೊಡ್ಡ ಬಂಡೆಯೊಂದು, ‘ಬನ್ನಿ ಇಲ್ಲಿ ತುಸು ಹೊತ್ತು ನಿಂತು ದಣಿವಾರಿಸಿಕೊಳ್ಳಿ’, ಎಂದು ಆತ್ಮೀಯತೆಯಿಂದ ಕರೆದಿತ್ತು. ನಾವು ಎರಡರಿಂದ ಮೂರು ಕಿ.ಮೀ ಸಾಗಿರಬಹುದು. ಆಗ ನಡೆದಿತ್ತೊಂದು ಚಮತ್ಕಾರ. ನಮ್ಮ ಮುಂದೆ ಧುತ್ತೆಂದು ನಿಂತಿತ್ತು ಆಳವಾದ ಕಣಿವೆ, ಮುಗಿಲನ್ನು ಮುಟ್ಟುವ ಗಿರಿ ಶಿಖರಗಳು, ದಟ್ಟವಾದ ಅರಣ್ಯಗಳು, ಅಬ್ಬಾ ಅದೇನು ಸೊಬಗು, ಅದೆಂತಹಾ ವನಸಿರಿ, ನೋಡಲು ಎರಡು ಕಣ್ಣೂ ಸಾಲದೆನಿಸಿತ್ತು. ನೂರಾರು ವರ್ಷ ಮಣ್ಣಿನ ಸಾರವನ್ನು ಹೀರುತ್ತಾ, ಬಿಸಿಲು, ಗಾಳಿ ಮಳೆಗೆ ಮೈಯೊಡ್ಡಿ ನಿಂತ ಬೃಹತ್ ವೃಕ್ಷಗಳು ಭೂಗರ್ಭದೊಳಗೆ ತಮ್ಮ ಬೇರನ್ನು ಇಳಿಸುತ್ತಾ ಆಗಸದೆತ್ತರಕ್ಕೆ ತಮ್ಮ ರೆಂಬೆ ಕೊಬೆಗಳನ್ನು ಚಾಚಿದ್ದವು. ಅದೆಷ್ಟು ಬಗೆಯ ಪ್ರಾಣಿ ಪಕ್ಷಿಗಳಿಗೆ ಆಸರೆ ನೀಡಿದ್ದವೋ ಈ ಮರಗಳು.
ಈ ದಟ್ಟವಾದ ಕಾನನ ವೈವಿಧ್ಯಮಯ ಜೀವ ಜಂತುಗಳ ತವರೂರಾಗಿತ್ತು. ಗಗನದೆತ್ತರಕ್ಕೆ ಎದ್ದು ನಿಂತ ಪರ್ವತಗಳ ಸಾಲು ಸಾಲು, ಪರ್ವತರಾಜನಿಗೇ ಸವಾಲು ಹಾಕಿದಂತೆ ಕಾಣುವ ಮರಗಿಡಗಳು, ಮರಗಿಡಗಳಿಗಿಂತ ಎತ್ತರದಲ್ಲಿ ರಾಜಗಾಂಭೀರ್ಯದಿಂದ ಹಾರಾಡುತ್ತಿದ್ದ ಫಾಲ್ಕನ್‌ಗಳು (ಒಂದು ಜಾತಿಯ ಹದ್ದು). ತನ್ನೊಡಲಿನಲ್ಲಿ ಹಾಯಾಗಿ ಮಲಗಿರುವ ನಿಸರ್ಗಕ್ಕೆ ದೃಷ್ಟಿಯಾಗದಿರಲೆಂದು, ಭೂತಾಯಿ ಮಂಜಿನ ತೆರೆಯನ್ನು ಹೊದಿಸಿದ್ದಳು. ಹೊಂಬಣ್ಣದ ರವಿಕಿರಣಗಳು ಮೆಲ್ಲ ಮೆಲ್ಲನೆ ಈ ಮಂಜಿನ ಮುಸುಕನ್ನು ಸರಿಸಿ ನಮಗೆ ಸೊಬಗಿನ ಸಿರಿಯನ್ನು ತೋರುತ್ತಿದ್ದಳು. ವಸಂತ ರಾಜನನ್ನು ಸ್ವಾಗತಿಸಲು, ಮರಗಿಡಗಳು ಹೊಸ ಉಡುಪನ್ನು ಧರಿಸಿದ್ದರೆ, ಪಕ್ಷಿಗಳು ಇಂಪಾಗಿ ಉಲಿಯುತ್ತಿದ್ದವು. ಅಲ್ಲೊಂದು ಬಂಡೆಗಳ ಮೇಲಿಂದ ಧುಮ್ಮಿಕ್ಕುವ ಜಲಪಾತದ ಸದ್ದು ಕೇಳಿತ್ತು, ಆದರೆ ಕಾಣಬೇಕಲ್ಲ ಆ ಗೊಂಡಾರಣ್ಯದ ಮಧ್ಯೆ ಇರುವ ನೀರಿನ ಝರಿ. ಹರನ ಮುಡಿಯಿಂದ ಧರೆಗಿಳಿಯುತ್ತಿದ್ದ ಗಂಗೆ ಯಾರ ಕನ್ಣಿಗೆ ಬೀಳಲು ಸಾಧ್ಯ. ಅಲ್ಲೊಂದು ಅಪರೂಪದ ಚಿಟ್ಟೆ ಪುಷ್ಪಗಳ ಮಕರಂದವನ್ನು ಹೀರುತ್ತಾ, ತನ್ನ ರೆಕ್ಕೆಗಳನ್ನು ಬೀಸುತ್ತಾ ಹಾರಾಡುತ್ತಿತ್ತು. ಅದೆಷ್ಟು ಬಣ್ಣಗಳ ಚಿತ್ತಾರ ರೆಕ್ಕೆಗಳ ಮೇಲೆ. ನಿಂತಲ್ಲಿ ನಿಲ್ಲದ ಚಿಟ್ಟೆ ಪುಷ್ಪಗಳನ್ನು ಅರಸುತ್ತಾ ಹಾರಿ ಹೋಯಿತು. ಬಳಿಯಲ್ಲಿದ್ದ ಮರದ ಮೇಲಿನಿಂದ ಕಿಂಗ್ ಪಿಷರ್ ಹಕ್ಕಿಯೊಂದು ಮೇಲೆ ಹಾರಿತು. ಹಿಂದೆಯೇ ಬಂತು ಅದರ ಸಂಗಾತಿ ತನ್ನ ನೀಲ ವರ್ಣದ ರೆಕ್ಕೆಗಳನ್ನು ಪ್ರದರ್ಶಿಸುತ್ತಾ. ಆಗ ಬಂದ ನೋಡಿ. ತನ್ನ ವಿಶಾಲವಾದ ರೆಕ್ಕೆಗಳನ್ನೂ ಬಡಿಯುತ್ತಾ, ಈ ಅರಣ್ಯದ ರಾಜನಂತೆ ಹೆಮ್ಮೆಯಿಂದ ಬೀಗುತ್ತಾ ನಿಂದ ಪಕ್ಷಿರಾಜ. ಇಲ್ಲಿರುವ ವಿಶಿಷ್ಟವಾದ ಫಾಲ್ಕನ್‌ಗಳು. ನಮ್ಮನ್ನು ಕಂಡ ಪಕ್ಷಿರಾಜ ಮೆಲ್ಲ ಮೆಲ್ಲನೆ ಕೆಳಗಿಳಿದು ಬಂದು ನಮ್ಮ ಮುಂದಿದ್ದ ಬಂಡೆಯ ನೆತ್ತಿಯ ಮೇಲೆ ಕುಳಿತು ನಮ್ಮನ್ನು ಕುತತುಹಲದಿಮದ ನೋಡಿತು – ಯಾರಿವರು, ನಮ್ಮ ಅಂದ ಚೆಂದವನ್ನು ನೋಡಲು ಬಂದವರೋ? ಎಂಬಂತೆ.
ಅಲ್ಲೊಂದು ವೀಕ್ಷಣಾ ಗೋಪುರವನ್ನು ಕಂಡ ನನ್ನ ಸಹಪ್ರಯಾಣಿಕರೊಬ್ಬರು ಹೇಳಿದ ಮಾತುಗಳು ನನ್ನ ಕಿವಿಯಲ್ಲಿ ಗುಯ್ ಗುಡುತ್ತಿದ್ದವು. ‘ಎಲ್ಲೆಲ್ಲಿಯೂ ಪ್ರಕೃತಿಯ ಸೊಬಗು ಕಾಣುತ್ತಿರುವಾಗ ಈ ವೀಕ್ಷಣಾ ಗೋಪುರ ಬೇಕೇ?’ ಮನದ ತುಂಬೆಲ್ಲಾ ನಿಸರ್ಗದ ಸುಂದರ ದೃಶ್ಯಗಳು ಮೆರವಣಿಗೆ ಹೊರಟಿದ್ದವು. ಮುಗಿಲೆತ್ತರಕ್ಕೆ ಎದ್ದು ನಿಂತ ಗಿರಿ ಶಿಖರಗಳು, ಹಚ್ಚ ಹಸಿರುಟ್ಟ ಕಾನನ, ತಂಗಾಳಿಗೆ ತೊಯ್ದಾಡುತ್ತಿದ್ದ ಹೊಂಬಣ್ಣದ ಹುಲ್ಲು, ಉಕ್ಕಿ ಹರಿಯುತ್ತಿದ್ದ ಹಳ್ಳ ಕೊಳ್ಳಗಳು, ಪಕ್ಷಿಗಳ ಕಲರವ, ಇನ್ನೂ ಮಾನವನ ಕಪಿಮುಷ್ಟಿಗೆ ಸಿಲುಕದ ರೀಕ್ ಪರ್ವತಶ್ರೇಣಿಗಳು. ರೀಕ್ ಪರ್ವತ ಶ್ರೇಣಿಯನ್ನು ಏನೆಂದು ಕರೆಯಲಿ? ಇಂದ್ರನ ಅಮರಾವತಿಯೆಂದೇ, ಪರಶಿವನ ಕೈಲಾಸವೆಂದೇ ಅಥವಾ ವಿಷ್ಣುವಿನ ವೈಕುಂಠವೆಂದೇ? ಪ್ರಕೃತಿಯ ಸೊಬಗನ್ನು ಪದಗಳಿಂದ ಯಾರಿಂದ ವರ್ಣಿಸಲು ಸಾಧ್ಯ? ಎದೆ ತುಂಬಾ ನಿಸರ್ಗ ಸೌಂದರ್ಯವನ್ನು ಹೊತ್ತು ಮುಂದೆ ಸಾಗಿದವಳಿಗೆ ಮಾನವನ ಕ್ರೌರ್ಯ ಕಂಡು ಆಘಾತವಾಗಿತ್ತು. ನಾವು ಹಿಂತಿರುಗುವ ಹಾದಿಯಲ್ಲಿ ಕಾಡಿಗೆ ಬೆಂಕಿ ಹಾಕಲಾಗಿತ್ತು. ಅದೆಷ್ಡು ಮರಗಿಡಗಳು ಸುಟ್ಟು ಕರಕಲಾದವೋ, ಎಷ್ಟು ಪ್ರಾಣಿಪಕ್ಷಿಗಳು ವಿಲವಿಲ ಒದ್ದಾಡುತ್ತಾ ಪ್ರಾಣ ಬಿಟ್ಟವೋ? ಆ ನೆಲವನ್ನೆಲ್ಲಾ ಸವರಿ, ಬಾಳೆ, ಅಡಿಕೆ, ಬಿದಿರು ನೆಡುತ್ತಿದ್ದ ಜನರನ್ನು ಕಂಡೆವು. ಪ್ರಕೃತಿಯ ಮಾರಣ ಹೋಮ ನಡೆಸಿ, ಮಾನವ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಿದ್ದ ದೃಶ್ಯ ಬೀಕರವಾಗಿತ್ತು. ಪ್ರಗತಿಯೊಂದಿಗೇ ಪ್ರಕೃತಿಯ ಸಂರಕ್ಷಣೆಯನ್ನೂ ಮಾಡುವ ಕಾಲ ಎಂದು ಬಂದೀತು?
– ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ.
ಚಂದವಿದೆ
ಉತ್ಸಾಹದಾಯಕ ಚಾರಣ ಮತ್ತೆ ಅದರ ವರ್ಣನೆ
ಸೊಗಸಾದ ಚಾರಣದ…ವರ್ಣನೆ..ಓದಿಸಿಕೊಂಡು ಹೋಯಿತು… ಧನ್ಯವಾದಗಳು ಮೇಡಂ
ಸಹೃದಯ ಓದುಗರಿಗೆ ವಂದನೆಗಳು
Very nice
ಸುಂದರ ಪ್ರಕೃತಿಯ ಸೊಗಸಾದ ವಿವರಣೆ.
Thanks Nayana