ದ್ವಿಚಕ್ರವಾಹನ ಯೋಗ.
ಬೀಚಿಯವರ ಮಾನಸಪುತ್ರ ‘ತಿಂಮ’ ತನಗೆ ಪುತ್ರೋತ್ಸವವಾದಾಗ ಜ್ಯೋತಿಷಿಗಳ ಬಳಿ ಹೋಗಿ ತನ್ನ ಮಗನ ಭವಿಷ್ಯ ಕೇಳಿದನಂತೆ. ಅವರು ”ನೋಡು ತಿಂಮ, ನಿನ್ನ ಮಗನಿಗೆ ಗಜಾರೋಹಣ ಯೋಗವಿದೆ” ಎಂದರಂತೆ. ತಿಂಮನಿಗೆ ಅದು ನಿಜವೆನ್ನಿಸಿದ್ದು ನಾಲ್ಕು ವರ್ಷಗಳ ನಂತರ. ಮಗನನ್ನು ಕರೆದುಕೊಂಡು ದೇವಸ್ಥಾನಕ್ಕೊಮ್ಮೆ ಹೋದ. ದರ್ಶನ ಮಾಡಿ ಹೊರಗೆ ಬಂದು ನೋಡಿದರೆ ಅವನ ನಾಲ್ಕು ವರ್ಷದ ಪುತ್ರ ಪ್ರವೇಶದ್ವಾರದ ಬಳಿ ಎರಡೂ ಕಡೆ ಇದ್ದ ಕಲ್ಲಿನ ಆನೆಯೊಂದರ ಮೇಲೆ ಕುಳಿತಿದ್ದನಂತೆ. ಹೀಗೆ ಕೆಲವರಿಗೆ ಯಾವುದೋ ರೀತಿಯಲ್ಲಿ ಭವಿಷ್ಯ ನಿಜವಾಗುವುದುಂಟು. ನಾನು ಹೇಳಲಿಕ್ಕೆ ಹೊರಟದ್ದು ನನ್ನ ದ್ವಿಚಕ್ರ ವಾಹನ ಯೋಗದ ಬಗ್ಗೆ.
ಸುಮಾರು ಐದುದಶಕಗಳ ಹಿಂದೆ ಬೈಸಿಕಲ್ ಎಂದರೆ ಬಡವರ ಮತ್ತು ಮಧ್ಯಮವರ್ಗದವರ ಸವಾರಿಯ ವಾಹನವೆಂದೇ ಪರಿಗಣಿ ಸಲಾಗುತ್ತಿದ್ದ ಕಾಲ. ಅಂದು ಬೈಸಿಕಲ್ ಹೊಂದಿರತಕ್ಕ ಕುಟುಂಬಗಳೇ ವಿರಳವಾಗಿದ್ದವು. ಸಾಮಾನ್ಯವಾಗಿ ನಡೆದು ಹೊಗುತ್ತಿದ್ದುದೇ ಹೆಚ್ಚು. ಅನುಕೂಲವಂತರು ಟಾಂಗಾಗಳಲ್ಲಿ ಅಥವಾ ತಮ್ಮ ಸ್ವಂತ ಎತ್ತಿನಬಂಡಿಗಳಲ್ಲಿ ಹೋಗುತ್ತಿದ್ದರು. ದಿನವೂ ಬಹಳ ದೂರ ಹೋಗಿಬರಬೇಕಾದಂಥ ಕೆಲಸವಿದ್ದವರು ಹೇಗೋ ಕಷ್ಟಪಟ್ಟು ಒಂದು ಬೈಸಿಕಲ್ ಕೊಂಡು ಬಳಸುತ್ತಿದ್ದರು. ಮನೆಮನೆಗೆ ಕಾಗದ ಪತ್ರ ಹೊತ್ತು ಬರುತ್ತಿದ್ದ ಅಂಚೆಪೇದೆಗಳು, ಪೊಲೀಸಿನವರು, ಬಳಸುತ್ತಿದ್ದುದು ಬೈಸಿಕಲ್ಲನ್ನೇ. ಅಷ್ಟೇ ಏಕೆ ಮದುವೆಗೆ ಮಾತುಕತೆ ನಡೆದಾಗ ವರೋಪಚಾರಕ್ಕೆ ಉಂಗುರ, ವಾಚು, ಚಿನ್ನದ ಚೈನು ಮತ್ತು ರ್‍ಯಾಲಿ ಬೈಸಿಕಲ್ ಕೇಳುತ್ತಿದ್ದರು ಹಾಗೂ ಕೊಡುತ್ತಿದ್ದರು. ತಂತ್ರಜ್ಞಾನದ ಪ್ರಗತಿಯಾದಂತೆ ಹೊಸರೀತಿಯ ಪೆಟ್ರೋಲ್ ಇಂಜಿನ್ನಿನ ದ್ವಿಚಕ್ರ ವಾಹನಗಳು ಮಾರುಕಟ್ಟೆಗೆ ಲಗ್ಗೆಯಿಟ್ಟವು. ಕ್ರಮೇಣ ಬೈಸಿಕಲ್ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಆದರೆ ಈಗಲೂ ಅದರ ಬಳಕೆ ಸಂಪೂರ್ಣ ಮರೆಯಾಗಿಲ್ಲ. ನಮ್ಮ ರಾಜ್ಯದಲ್ಲಿ ಸರ್ಕಾರಿ ಹೈಸ್ಕೂಲು ವಿದ್ಯಾರ್ಥಿಗಳಿಗೆ ಸರ್ಕಾರವೇ ಬೈಸಿಕಲ್‌ಗಳನ್ನು ಕೊಟ್ಟಿದೆ. ಜೊತೆಗೆ ಬೆಳಗಿನ ವ್ಯಾಯಾಮ ಮಾಡುವ ಹಲವರು ಬೈಸಿಕಲ್ ಓಡಿಸುವುದುಂಟು. ಬೊಜ್ಜು ಕರಗಿಸಲು ಇದು ಸಹಕಾರಿ. ಸೈಕಲ್ ಒಮ್ಮೆ ಕೊಂಡುಬಿಟ್ಟರೆ ಸಾಕು ಹೆಚ್ಚು ಖರ್ಚಿಲ್ಲದ ವಾಹನ. ಚಕ್ರಗಳಿಗೆ ಗಾಳಿತುಂಬಿಸುವ ಪಂಪೊಂದಿದ್ದರೆ ಸಾಕು. ಚಲಿಸಲು ಕಾಲ್ಗಳಿಂದಲೇ ತುಳಿಯುವ ಪೆಡಲ್. ಕಾಲಿಗೂ ವ್ಯಾಯಾಮ.
ಇಂತಹದ್ದೊಂದು ಬೈಸಿಕಲ್ ನಮ್ಮ ಮನೆಯಲ್ಲೂ ಇತ್ತು. ನಮ್ಮ ತಂದೆ ಶಾಲಾ ಮಾಸ್ತರರಾದ್ದರಿಂದ ದಿನವೂ ದೂರದಲ್ಲಿದ್ದ ಶಾಲೆಗೆ ಹೋಗಿಬರಲು ಬೈಸಿಕಲ್ ಅವರ ಉಪಯೋಗಕ್ಕೆ ಬರುತ್ತಿತ್ತು. ಆದರೆ ಅದು ಗಂಡಸರು ತುಳಿಯುವ ಬೈಸಿಕಲ್. ನಮಗೆ ಅದನ್ನು ಮುಟ್ಟಲು ನಮ್ಮ ತಾಯಿ ಬಿಡುತ್ತಿರಲಿಲ್ಲ. ಹೀಗಾಗಿ ಹಿರಿಯ ಮಗಳಾದ ನನಗೆ ಕಲಿಯಲು ಆಸಕ್ತಿಯಿದ್ದರೂ ಅವಕಾಶವಿರಲಿಲ್ಲ. ನಾನು ಐದನೆಯ ತರಗತಿಯಲ್ಲಿದ್ದಾಗ ಒಮ್ಮೆ ನನ್ನಮ್ಮನ ಮುಂದೆ ಸೈಕಲ್ ಕಲಿಯಬೇಕೆಂಬ ನನ್ನಾಸೆಯನ್ನು ಮುಂದಿಟ್ಟೆ. ”ಈಗಲೇ ಹುಡುಗರ ಜೊತೆಯಲ್ಲಿ ಗೋಲಿ, ಬುಗುರಿ, ಲಗೋರಿ, ಚಿನ್ನಿದಾಂಡು, ಆಡುತ್ತಿರುತ್ತೀ, ಇದೊಂದು ಸಾಲದಾಗಿದೆ. ಒಂದು ಹಿಂಡು ಸ್ನೇಹಿತರನ್ನು ಗುಂಪು ಮಾಡಿಕೊಂಡು ತಿರುಗುತ್ತೀ. ಸೈಕಲ್ ಸಿಕ್ಕರೆ ಊರೆಲ್ಲ ತಿರುಗುತ್ತೀ ಅಂತ ಕಾಣುತ್ತೆ. ಅದನ್ನು ಎತ್ತಾಕಿಕೊಂಡು ಬಿದ್ದು, ಅಥವಾ ಯಾರಿಗಾದರೂ ಗುದ್ಧಿ ಮೂತಿ ಮುಖ ಕಿತ್ತುಕೊಂಡು ಬಂದೀಯೆ. ಅದೆಲ್ಲ ಏನು ಬೇಡ. ಪಾಠದ ಕಡೆ ಗಮನವಿರಲಿ ಸಾಕು, ಹೆಣ್ಣು ಹುಡುಗಿ ಬೇರೆ, ಏನಾದರೂ ಐಬುಮಾಡಿಕೊಂಡು ಕುಂತೀಯಾ” ಎಂದು ಒಂದೇ ಸಮಕ್ಕೆ ಬೈದು ಉತ್ಸಾಹಕ್ಕೆ ತಣ್ಣೀರೆರೆಚಿಬಿಟ್ಟರು.
ಆದರೆ ನನಗೆ ಹೇಗಾದರೂ ನನ್ನಾಸೆಯನ್ನು ಈಡೇರಿಸಿಕೊಳ್ಳಬೇಕೆಂಬ ಬಯಕೆ ಹೋಗಲಿಲ್ಲ. ಏಳನೆಯ ತರಗತಿಯಲ್ಲಿ ಓದುತ್ತಿದ್ದ ನನ್ನೊಬ್ಬ ಗೆಳತಿ ಚಂದ್ರಾಳ ಬಳಿ ಹೆಣ್ಣುಮಕ್ಕಳ ಬೈಸಿಕಲ್ ಇತ್ತು ಅದರಮೇಲೆ ಅವಳು ಸಲೀಸಾಗಿ ಶಾಲೆಗೆ ಬರುತ್ತಿದ್ದಳು. ಸ್ವಭಾವದಲ್ಲಿ ಅವಳು ಸ್ನೇಹಮಯಿ. ಕೇಳಿದರೆ ನನಗೆ ಕಲಿಸಿಕೊಡಬಹುದು ಮತ್ತು ಸ್ವಲ್ಪ ಹೊತ್ತು ನನಗೂ ಓಡಿಸಲು ಬೈಸಿಕಲ್ ಕೊಡಬಹುದೆಂಬ ದೂರದ ಆಸೆಯಿಂದ ಅವಳಲ್ಲಿ ಹೇಳಿಕೊಂಡು ಗೋಗರೆದೆ. ಅವಳೂ ತುಂಬ ಒತ್ತಾಯ ಮಾಡಿದಮೇಲೆ ”ಮೊದಲು ನೀನು ಸೈಕಲನ್ನು ತಳ್ಳಿಕೊಂಡು ಓಡಾಡುವುದನ್ನು ಅಭ್ಯಾಸ ಮಾಡಿ ಅದರ ಸ್ಟ್ಯಾಂಡ್ ಹಾಕಿ ನಿಲ್ಲಿಸುವುದನ್ನು ಕಲಿ. ನಿಮ್ಮಪ್ಪಂದೇ ಬೈಸಿಕಲ್ ಇದ್ಯಲ್ಲಾ” ಎಂದಳು.
”ಅಯ್ಯೋ ಚಂದ್ರಾ ನನ್ನಮ್ಮ ಹೇಗೆಂದು ನಿನಗೆ ಗೊತ್ತೇ ಇದೆ. ಅದೆಲ್ಲಾ ನಮ್ಮ ಮನೆಯಲ್ಲಿ ಸಾಧ್ಯವೇ ಇಲ್ಲ” ಎಂದು ಅಲವತ್ತುಕೊಂಡೆ.
”ಆಯ್ತು ನಾನು ಸೈಕಲ್ ಕೊಡಬೇಕು, ಕಲಿಸಿಕೊಡಬೇಕೆಂದರೆ ನನಗೆ ಗುರುದಕ್ಷಿಣೆ ಕೊಡಬೇಕಮ್ಮಾ. ಪುಕ್ಕಟೆ ಬರೋದಿಲ್ಲ” ಎಂದಳು.
”ನಮ್ಮ ಮನೆಯಲ್ಲಿ ನನಗೆ ಕಾಸಂತೂ ಕೊಡುವುದಿಲ್ಲ. ಇನ್ನು ಗುರುದಕ್ಷಿಣೆ ಹೇಗೆ?” ಅವಳನ್ನೇ ಕೇಳಿದೆ.
”ನಮ್ಮಮ್ಮ ಆಗಾಗ ಕುರುಕುತಿಂಡಿ ಚಕ್ಕುಲಿ, ಕೋಡುಬಳೆ, ರವೆಉಂಡೆ ಮಾಡುತ್ತಾರೆ. ಅವುಗಳನ್ನು ತಂದುಕೊಡುತ್ತೇನೆಂದೆ”
”ಸರಿ ಹಾಗಿದ್ದರೆ ನಾಳೆಯಿಂದ ಲೀಜರ್ ಪೀರಿಯಡ್ ಇದ್ದಾಗ ಆಟದ ಮೈದಾನದಲ್ಲಿ ಕಲಿಸಿಕೊಡುವೆ” ಎಂದು ಒಪ್ಪಿಕೊಂಡಳು. ದೊಡ್ಡ ಸಮಸ್ಯೆ ಬಗೆಹರಿಯಿತು. ಮಾರನೆಯ ದಿನ ನಮ್ಮ ತರಬೇತಿ ಪ್ರಾರಂಭ ಮಾಡುವ ಮೊದಲು ಚಂದ್ರ ಹೊಸ ಕಂಡೀಷನ್ ಹಾಕಿದಳು. ವಿದ್ಯೆ ಕಲಿಯುವ ಮೊದಲು ಗಣಪತಿ ಪೂಜೆ ಮಾಡಿ ಚರುಪು ಹಂಚಬೇಕೆಂದು. ನಮ್ಮಮ್ಮ ಯಾರಾದರೂ ಮನೆಗೆ ಅತಿಥಿಗಳು ಬಂದಾಗ ಮಾತ್ರ ಕುರುಕುತಿಂಡಿಗಳನ್ನು ಮಾಡುತ್ತಿದ್ದರು. ಉಳಿದಂತೆ ಸಾಯಂಕಾಲ ನಾವು ಶಾಲೆಯಿಂದ ಬಂದರೆ ನಮಗೆ ಒಗ್ಗರಣೆ ಹಾಕಿದ ಕಡಲೆಪುರಿ, ಹುರಿದ ಕಡಲೆಕಾಯಿ, ರಾಗಿಯಹುರಿಟ್ಟು ಮುಂತಾದವನ್ನು ಸ್ವಲ್ಪ ಕೊಡುತ್ತಿದ್ದರು. ನನ್ನ ತಮ್ಮಂದಿರೊಡನೆ ಹಂಚಿಕೊಂಡು ತಿನ್ನುತ್ತಿದ್ದೆ. ಇದು ರೂಢಿ.
ಮಾರನೆಯ ದಿನ ಅಮ್ಮನಿಗೆ ಸಾಯಂಕಾಲ ಮಸ್ಕಾ ಹೊಡೆದು ಒಗ್ಗರಣೆ ಪುರಿಯನ್ನು ಅವರು ಡಬ್ಬದಲ್ಲಿ ತುಂಬಿಡುವಾಗ ನಾಳೆ ನಮ್ಮ ಶಾಲೆಯಲ್ಲಿ ಡ್ರಾಮಾ, ಡ್ಯಾನ್ಸ್, ಪ್ರಾಕ್ಟೀಸಿದೆ. ಗೆಳತಿಯರೆಲ್ಲ ಸೇರಿದ್ದೇವೆ. ಬರುವುದಕ್ಕೆ ಲೇಟಾಗುತ್ತೆ. ಆದ್ದರಿಂದ ಸ್ವಲ್ಪ ಒಗ್ಗರಣೆ ಪುರಿಯನ್ನು ಕಟ್ಟಿಕೊಡಿ. ಎಲ್ಲರೂ ಹಂಚಿಕೊಳ್ಳುತ್ತೇವೆ ಎಂದು ಬೇಡಿದೆ.
”ಆಹಾ ಯಾವುದಕ್ಕೂ ಸೇರಬೇಡ ಅಂದರೂ ಕೇಳಲ್ಲ. ಓದಿಗಿಂತ ನಿನಗೆ ಕುಣಿಯೋದು, ನೆಗೆಯೋದು, ಆಡೋದೇ ಹೆಚ್ಚು” ಎಂದು ಸಹಸ್ರನಾಮಾರ್ಚನೆ ಮಾಡಿ ಒಂದು ಪೊಟ್ಟಣ ತಯಾರಿಸಿ ಕೊಟ್ಟರು. ಅದನ್ನು ಜೋಪಾನವಾಗಿ ತೆಗೆದುಕೊಂಡು ಹೋದೆ. ಸಂಜೆ ತರಗತಿ ಮುಗಿಯುತ್ತಿದ್ದಂತೆ ಗೆಳತಿಯರೆಲ್ಲ ಮಣ್ಣು ಕಲೆಸಿ ಗಣಪತಿ ಮಾಡಿ ಅದಕ್ಕೆ ಸಿಕ್ಕಿದ ಹೂಗಳಿಂದ ಪೂಜೆಮಾಡಿ ಚರುಪನ್ನು ಹಂಚಿದೆವು. ಅದನ್ನು ನೋಡಿದ ಚಂದ್ರಾ ”ಇದೇನೇ ಇದು ಪ್ರಸಾದದ ಪುರಿಗೆ ಬೆಲ್ಲದ ಚೂರು, ತೆಂಗಿನಕಾಯಿ ಚೂರು ಹಾಕಿದ್ದು ಮಾತ್ರ ಬರುತ್ತೆ. ಒಗ್ಗರಣೆ ಹಾಕಿದ ಪುರಿ ಬರಲ್ಲ” ಎಂದು ಅಬ್ಜೆಕ್ಷನ್ ತೆಗೆದಳು.
”ನನಗೆ ಸಿಕ್ಕಿದ್ದು ಇಷ್ಟು ಮಾತ್ರ ಕಣೇ, ಪ್ಲೀಸ್ ಅಡ್ಜಸ್ಟ್ ಮಾಡಿಕೊಳ್ಳೇ” ಎಂದು ಬೇಡಿಕೊಂಡೆ.
ಅಂತೂ ಮೊದಲ ಪಾಠ ಪ್ರಾರಂಭವಾಯಿತು. ಬೈಸಿಕಲ್ಲನ್ನು ತಳ್ಳಿಕೊಂಡು ಅತ್ತಿಂದಿತ್ತ ಓಡಾಡಿಸಿ ಅದರ ಸ್ಟ್ಯಾಂಡು ಹಾಕಿ ನಿಲ್ಲಿಸುವುದು. ಹಲವು ಬಾರಿ ಮಾಡಿದ ನಂತರ ಅವತ್ತಿನ ಪಾಠ ಮುಗಿದಿತ್ತು. ಮಾರನೆಯ ದಿನ ಶನಿವಾರ ಅರ್ಧದಿನದ ತರಗತಿ. ನಂತರ ಸ್ವಲ್ಪ ಹೆಚ್ಚುಕಾಲ ಪ್ರಾಕ್ಟೀಸು. ನಂತರ ಅವಳು ಹಿಂದಿನ ಕ್ಯಾರಿಯರ್ ಹಿಡಿದು ನನ್ನನ್ನು ಪೆಡಲ್ ಮೇಲೆ ಕಾಲಿಟ್ಟು ಬ್ಯಾಲೆನ್ಸ್ ಮಾಡುತ್ತ ಮುಂದಕ್ಕೆ ಹೋಗಲು ಕಲಿಸುತ್ತಿದ್ದಳು. ಆದರೆ ಸೀಟಿನ ಮೇಲೆ ಕೂಡದೆ ಕತ್ತರಿಕಾಲು ಹಾಕಿ ತುಳಿಯುತ್ತಿದ್ದೆ. ಹ್ಯಾಂಡೆಲ್ಲನ್ನು ಬಹಳ ಬಿಗಿಯಾಗಿ ಹಿಡಿಯುತ್ತಿದ್ದುದರಿಂದ ನನ್ನ ಅಂಗೈಯಲ್ಲಿ ಬೊಬ್ಬೆಗಳುಂಟಾಗಿದ್ದವು. ಮನೆಯಲ್ಲಿ ಊಟ ಮಾಡುವಾಗ ಸಾರಿನ ಖಾರ ತಗುಲಿದರೆ ನೋಯುತ್ತಿತ್ತು. ಆದರೆ ಹೇಳುವಂತಿಲ್ಲ. ಮೌನವಾಗಿ ಅನುಭವಿಸುತ್ತಿದ್ದೆ. ಜೊತೆಗೆ ಅಮ್ಮ ನನಗೆ ಹೇಳುತ್ತಿದ್ದ ಮನೆ ಗುಡಿಸಿ ಒರೆಸುವುದನ್ನು ಮಾಡುವಾಗಲೂ ತೊಂದರೆಯಾಗುತ್ತಿತ್ತು. ಪಾತ್ರೆಗಳನ್ನು ತಿಕ್ಕುವಾಗ ಬೂದಿಗೆ ಬೆರೆಸಿದ ಸೀಗೆಪುಡಿ ಬಹಳ ತೊಂದರೆ ಕೊಡುತ್ತಿತ್ತು. ಏನೇ ಆದರೂ ಛಲಬಿಡದಂತೆ ಕಲಿಯುವುದನ್ನು ಮುಂದುವರಿಸಿದೆ.
ಕೆಲವು ದಿನಗಳ ಸತತ ಪ್ರಯತ್ನದಿಂದ ಈಗ ನಾನೇ ಸ್ವಲ್ಪ ದೂರ ಕತ್ರಿಕಾಲಿನಲ್ಲಿ ತುಳಿಯುತ್ತಾ ಮುಂದೆ ಹೋಗುತ್ತಿದ್ದೆ. ಸ್ವಲ್ಪ ನಿಲ್ಲಿಸುವುದು, ಮತ್ತೆ ಮುಂದುವರಿಯುತ್ತಿದ್ದೆ. ಎಷ್ಟೋ ಸಂತೋಷವಾಗುತ್ತಿತ್ತು. ಚಂದ್ರಾ ಕೊನೆಗೆ ನನಗೆ ಸೀಟಿನಮೇಲೆ ಕುಳಿತು ನಡೆಸಲೂ ಹೇಳಿದಳು. ಯಾವುದಕ್ಕೂ ರಕ್ಷಣೆಗೆ ಅವಳು ಬೈಸಿಕಲ್ಲಿನ ಹಿಂದುಗಡೆ ಓಡುತ್ತಾ ಬರುತ್ತಿದ್ದಳು. ನನಗೂ ಸ್ವಲ್ಪ ಧೈರ್ಯ ಬಂದಿತು. ಇನ್ನೊಂದೇ ಹಂತ ನಾನೇ ಸ್ವತಂತ್ರವಾಗಿ ತುಳಿಯುತ್ತಾ ಹೋಗುವುದು. ಕಲ್ಪನೆಯಲ್ಲೇ ಮನಸ್ಸಿಗೆ ಸುಖವೆನ್ನಿಸುತ್ತಿತ್ತು. ಒಂದುದಿನ ಚಂದ್ರಾ ನನ್ನನ್ನು ತುಳಿಯಲು ಬಿಟ್ಟು ಹಿಂದೆ ಹಿಡಿದುಕೊಂಡಿದ್ದ ಕೈ ತೆಗೆದುಬಿಟ್ಟದ್ದಳು. ನನಗೆ ಇದ್ಯಾವುದೂ ತಿಳಿಯದು ತುಳಿಯುತ್ತಾ ಮುಂದೆಮುಂದೆ ಸಾಗುತ್ತಿದ್ದೆ. ಎದುರಿಗೆ ಇರುವ ಮರದ ಬಳಿಬಂದಾಗ ಬ್ರೇಕ್ ಹಾಕುವುದು ಮರೆತುಬಿಟ್ಟೆ. ಕಾಲು ಕೊಡಲು ಪ್ರಯತ್ನಿಸುತ್ತಿದ್ದಂತೆ ಆಯತಪ್ಪಿ ಮರಕ್ಕೆ ಗುದ್ದಿದೆ. ಬೈಸಿಕಲ್ ಎತ್ತಿಹಾಕಿಕೊಂಡು ಕೆಳಕ್ಕೆ ಬಿದ್ದೆ. ನನ್ನೆರಡು ಮಂಡಿಗಳು, ಎರಡೂ ಮೊಣಕೈಗಳಿಗೆ ಗಾಯಗಳಾದವು. ಮರದ ಬೊಡ್ಡೆಗೆ ಸಿಲುಕಿ ಲಂಗ ಒಂದು ಕಡೆ ಹರಿದಿತ್ತು. ಅದು ನಮ್ಮ ಶಾಲೆಯ ಸಮವಸ್ತ್ರ. ಇದನ್ನೆಲ್ಲ ನೋಡುತ್ತಿದ್ದ ಅದೇ ಶಾಲೆಯಲ್ಲೇ ಓದುತ್ತಿದ್ದ ನನ್ನ ತಮ್ಮ ಮನೆಯತ್ತ ಓಡಿ ಅಮ್ಮನಿಗೆ ಎಲ್ಲವನ್ನೂ ವರದಿಮಾಡಿದ್ದ. ನಾನು ಮನೆಗೆ ಪ್ರವೇಶಿಸುತ್ತಿದ್ದಂತೆ ಹಿಟ್ಟಿನ ದೊಣ್ಣೆಯಿಂದ ಅಮ್ಮ ಅಟ್ಟಾಡಿಸಿಕೊಂಡು ಹೊಡೆದರು. ”ಇನ್ನೊಮ್ಮೆ ಏನಾದರು ಬೈಸಿಕಲ್ ಹತ್ತಿದೆಯಾದರೆ ಎರಡೂ ಕೈಗಳಿಗೆ ಅವು ಯಾವಕೆಲಸಕ್ಕೂ ಬಾರದಹಾಗೆ ಬರೆ ಹಾಕಿಬಿಡುತ್ತೇನೆ” ಎಂದು ಧಮಕಿ ಹಾಕಿದರು.
ಅವರು ಹೇಳಿದ ಕೊನೆಯ ಮಾತು ಯಾವ ಕೆಲಸಕ್ಕೂ ಬಾರದ ಹಾಗೆ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಲೇ ಇತ್ತು. ಅಂದಿಗೆ ನನ್ನ ಬೈಸಿಕಲ್ ಕಲಿಯುವ ಪ್ರಯತ್ನಕ್ಕೆ ತಿಲಾಂಜಲಿಯಿತ್ತೆ. ಮರು ಪ್ರಯತ್ನ ಮಾಡಲೇ ಇಲ್ಲ. ಹೀಗಾಗಿ ದ್ವಿಚಕ್ರವಾಹನ ಯೋಗ ನನ್ನ ಜಾತಕದಲ್ಲಿ ಬರೆದೇ ಇಲ್ಲ.
–ಬಿ.ಆರ್. ನಾಗರತ್ನ. ಮೈಸೂರು.
ಹೆಣ್ಣು ಮಕ್ಕಳು ಬೈಸಿಕಲ್ ಓಡಿಸಿದರೆ ನನಗೆ ಈಗಲೂ ಖುಷಿ. ಅದು ಆ ಮನೆಯ ಪ್ರಗತಿಗೆ ನಾಂದಿ ಎನ್ನುವ ಭಾವನೆ ನನಗೆ.
ನಿಮ್ಮ ಲೇಖನ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಹಾಗೂ ಅದರ ನಾಟಕವನ್ನು ನೆನಪಿಸಿತು.
At least ಈಗ ಮಾಡಿ…ಹ ಹ ಹ….ಅನುಭವ ಚೆನ್ನಾಗಿದೆ.
ಗೆಳತಿ ಸುಚೇತ ಧನ್ಯವಾದಗಳು
ಸುಧಾ ಮೇಡಂ ಧನ್ಯವಾದಗಳು
ನನ್ನ ಲೇಖನ ಪ್ರಕಟಿಸಿದ ಹೇಮಮಾಲಾ ಅವರಿಗೆ ಧನ್ಯವಾದಗಳು..
ಮಸ್ತ್ ಬರಹ. ನಾನು 5-6 ನೇ ಕ್ಲಾಸಲ್ಲಿ ಇದ್ದಾಗ ನನ್ನ ಸೋದರ ಮಾವನ ಸೈಕಲನ್ನು ಬಿಡಲು ಕಲಿತಿದ್ದೆ. ನಮ್ಮಲ್ಲೂ ಸಾಕಷ್ಟು ವಿರೋಧ ಇತ್ತು. ಆದರೂ ಛಲ ಬಿಡದೆ ಕಲಿತೆ. ನಮ್ಮದು ಹಳ್ಳಿ. ಹಾಗಾಗಿ ಅಲ್ಲಿ ಹೆಣ್ಣು ಮಕ್ಕಳು ಸೈಕಲ್ ಬಿಡುವುದು ಕಂಡರೆ ಜನ ಕಣ್ಣು, ಬಾಯಿ ಬಿಟ್ಟು ನೋಡುತಿದ್ದರು. ನಮ್ಮ ಊರಲ್ಲಿ ಸೈಕಲ್ ಮೆಟ್ಟಿದ ಮೊದಲ ಹೆಣ್ಣು ಮಗಳು ನಾನೇ. ಬಹಳ ಮಂದಿ ಮಾವನ ಹತ್ತಿರ ಕಂಪ್ಲೇಂಟ್ ಮಾಡಿದ್ರೂ ಲೆಕ್ಕಿಸದೆ ಕಲಿತೆ. ಈಗ ಮಕ್ಕಳ ಜೊತೆಗೆ ಸೈಕಲ್ ಬಿಡುತ್ತೇನೆ
ಹ್ಹಾ…ಹ್ಹಾ..ಹ್ಹಾ.. ಸೈಕಲ್ ಕಲಿತ ಕಥೆ ಚೆನ್ನಾಗಿದೆ. ನಾನು ಸೀರೆಯುಟ್ಟುಕೊಂಡು ಸ್ಕೂಟರ್ ಕಲಿತು ಕಾಲಿಗೆ ಸೈಲೆನ್ಸರ್ ತಾಗಿಸಿಕೊಂಡ ಘಟನೆ ನೆನಪಾಯ್ತು!
ಸೈಕಲ್ ಕಲಿಕೆಯ ಕಥೆ ಸ್ವಾರಸ್ಯವಾಗಿದೆ
ಧನ್ಯವಾದಗಳು ನಯನಮೇಡಂ..
ಧನ್ಯವಾದಗಳು ಶಂಕರಿ ಮೇಡಂ ಹಾಗೂ ಪದ್ಮಿನಿ ಮೇಡಂ
ನಿಮ್ಮ ಸಾಹಸಗಳಿಗೆ ಲೆಕ್ಕವೇ ಇಲ್ಲ…ಆದರೂ, ಸೈಕಲ್ ನಿಂದ ಬಿದ್ದು ಏಟು ಮಾಡಿಕೊಂಡಿದ್ದ ಬಾಲಕಿಗೆ ಮನೆಯಲ್ಲಿ ‘ಹೀಗೂ ಉಪಚಾರ’ ಮಾಡೋದಾ, ಪಾಪ ಅನಿಸಿತುತು!
ನೋಡಿ ಗೆಳತಿ ಹೇಮಾ ನನ್ನ ಕಾಲದ ಅವಸ್ಥೆ ಯನ್ನು…ಪ್ರತಿ ಕ್ರಿಯಿಸಿದಕ್ಕೆ ಧನ್ಯವಾದಗಳು..
ಸೈಕಲ್ ಕಲಿಯದಿದ್ದರೇನು, ಸಾಹಿತ್ಯದ ತೇರನ್ನು ಸಮರ್ಥವಾಗಿ ಎಳೆಯುತ್ತಿರುವ ನಿಮಗೆ ಅಭಿನಂದನೆಗಳು. ಚಂದದ ಅನುಭವ ಲೇಖನ.
ಆತ್ಮೀಯ ಪ್ರತಿಕ್ರಿಯೆ ಸಹೃದತೆಯ ಹಾರೈಕೆ ಗೆ ನನ್ನ ಧನ್ಯವಾದಗಳು