ವಾನಪ್ರಸ್ಥಾಶ್ರಮ ಅಂದು ಇಂದು
ಊರು ಹೋಗು ಅನ್ನುತ್ತೆ, ಕಾಡು ಬಾ ಎನ್ನುತ್ತೆ ಎನ್ನುವ ಕನ್ನಡದ ನಾಣ್ಣುಡಿಯನ್ನು ಕೇಳದವರಾರು? ಊರು ಹೋಗು ಎನ್ನಬಹುದು, ಆದರೆ ಕಾಡೆಲ್ಲಿದೆ ಬಾ ಎನ್ನಲು. ಕಾಡಿದ್ದರೂ, ಅದರೊಳಗೆ ಪ್ರವೇಶಿಸಲು ಬೇಕು ಪರ್ಮಿಟ್ಟು, ಏಕೆಂದರೆ ಅಳಿದುಳಿದ ಕಾಡೆಲ್ಲಾ ಈಗ ಸಂರಕ್ಷಿತ ಆಭಯಾರಣ್ಯ, ಹುಲಿ ಸಂರಕ್ಷಿತ ಪ್ರದೇಶ, ಸಿಂಹ ಸಂರಕ್ಷಿತ ಅಭಯಾರಣ್ಯ ಇತ್ಯಾದಿ.
ಹಿಂದೆ ಬದುಕಿನ ಜಂಜಾಟಕ್ಕೆ ವಿರಾಮ ಹೇಳಿ ಕಾಡಿಗೆ ಹೋಗಿ ಶಾಂತಜೀವನ ನಡೆಸಲು ಇದ್ದದ್ದು ಬದುಕಿನ ಮೂರನೆಯ ಹಂತವಾದ ವಾನಪ್ರಸ್ಥ. ಕೂದಲು ಬೆಳ್ಳಗಾಗಿ, ಚರ್ಮವು ಸುಕ್ಕುಗಟ್ಟಿ, ಮೊಮ್ಮಕ್ಕಳಿಗೆ ಅಜ್ಜಿ ಅಜ್ಜನಾದ ಮೇಲೆ, ಸಾಂಸಾರಿಕ ಜವಾಬ್ದಾರಿಗಳಿಂದ ಮುಕ್ತಿ ಪಡೆಯಲು ಕಾಡಿನತ್ತ ಮುಖ ಮಾಡುತ್ತಿದ್ದರು. ವಾನಪ್ರಸ್ಥ ಸನ್ಯಾಸಾಶ್ರಮಕ್ಕೆ ತೆರಳಲು ರಹದಾರಿ.
ಇಂದು ಸಾಂಸಾರಿಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ಪೂರೈಸಿ ಉದ್ಯೋಗದಿಂದ ನಿವೃತ್ತಿ ಹೊಂದಿ, ಕುಟುಂಬವೆಂಬ ರಂಗಮಂಚದಿಂದ ನೇಪಥ್ಯಕ್ಕೆ ಸರಿಯುವುದು ವಾನಪ್ರಸ್ಥ. ಆದರೆ ಹೋಗುವುದೆಲ್ಲಿಗೆ ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಗೃಹಸ್ಥಾಶ್ರಮದಲ್ಲಿ ಹತ್ತು ಹಲವು ಜವಾಬ್ದಾರಿಗಳನ್ನು ಹೊತ್ತು ಒಂದರೆಘಳಿಗೆಯೂ ಪುರುಸೊತ್ತಿಲ್ಲದೆ ದುಡಿಯುವರು. ಮನೆ ಕಟ್ಟಿದೆ, ಮಕ್ಕಳಿಗೆ ವಿದ್ಯೆ ಕಲಿಸಿದೆ, ಮದುವೆ ಮಾಡಿದೆ, ಮೊಮ್ಮಕ್ಕಳನ್ನು ಆಡಿಸಿದೆ, ಉದ್ಯೋಗದಿಂದ ನಿವೃತ್ತಿ ಹೊಂದಿದೆ. ಮುಂದೇನು? ರಭಸವಾಗಿ ಚಲಿಸುತ್ತಿದ್ದ ವಾಹನ ಇದ್ದಕ್ಕಿದ್ದಂತೆ ನಿಂತ ಹಾಗೆ, ಜಲಪಾತದಿಂದ ಧುಮ್ಮಿಕ್ಕುವ ನೀರು ಇದ್ದಕ್ಕಿದ್ದಂತೆ ನಿಂತ ಹಾಗೆ, ದಿನದ ಇಪ್ಪತ್ನಾಲ್ಕು ಘಂಟೆಯೂ ದುಡಿಮೆಯಲ್ಲಿ ಮುಳುಗುತ್ತಿದ್ದವನಿಗೆ, ಈಗ ಸಮಯ ಕಾಲು ಮುರಿದುಕೊಂಡು ಅವನ ಮುಂದೆ ಬಿದ್ದಿದೆ. ಈಗೇನು ಮಾಡಲಿ ಎನ್ನುವ ಹಪಾಹಪಿ. ದಿನದ ಇಪ್ಪತ್ನಾಲ್ಕು ಘಂಟೆಯೂ ಬಿಡುವು, ಮಾಡಲು ಕೆಲಸವಿಲ್ಲ, ಮಾತಾಡಲು ಸಹೋದ್ಯೋಗಿಗಳಿಲ್ಲ, ಗೌರವಿಸಲು ಬಂಧುಬಾಂಧವರಿಲ್ಲ. ಹೀಗೆ ಇಲ್ಲ, ಇಲ್ಲಗಳ ಪಟ್ಟಿ ಉದ್ದವಾಗಿ ಬೆಳೆಯುತ್ತಾ ಹೋಗುವುದು. ತಾನು ಯಾರಿಗೂ ಬೇಡದವನು ಎಂಬ ದುಗುಡ ಒಂದೆಡೆಯಾದರೆ, ಇನ್ನೊಂದೆಡೆ ಒಂಟಿತನದ ಭಾವ ಕಾಡುವುದು. ಬದುಕು ನಿಂತ ನೀರಾಗಿಬಿಡುವುದು.
ಬನ್ನಿ, ಬನ್ನಿ ನೋಡೋಣ ಇಂದು ವಾನಪ್ರಸ್ಥಕ್ಕೆ ತೆರಳುತ್ತಿರುವ ಪಯಣಿಗರನ್ನು. ಇವರು ಬೆಳಗಾಗೆದ್ದು ಹೊರಡುವರು ವಾಕಿಂಗ್, ಜೊತೆಯವರೂ ನಿವೃತ್ತರೇ. ಅವರ ಮಾತುಗಳು ಹೀಗೆ ಸಾಗುವುವು ನಮ್ಮ ಕಾಲ ಚೆನ್ನಾಗಿತ್ತು, ಇಂದು ಯಾವುದೂ ಸರಿಯಿಲ್ಲ. ಈ ಭಾವದ ಸುತ್ತಲೇ ಗಿರಕಿ ಹೊಡೆಯುವುದು ಅವರ ಸಂಭಾಷಣೆ. ಹಲವರು, ನಾನು ಹೀಗೆ ಮಾಡಿದ್ದೆ, ಹಾಗೆ ಮಾಡಿದ್ದೆ ಎಂದು ಜಂಬ ಕೊಚ್ಚಿಕೊಳ್ಳವ ಪರಿ ಕಂಡು ಕನಿಕರ ಮೂಡುವುದು. ಕಿರಿಯರಿಗೆ ಒಣ ಉಪದೇಶ ಮಾಡುವ ಚಟ ಬೇರೆ. ಇನ್ನು ಕೆಲವರು ಪಾರ್ಕ್‌ಗಳಲ್ಲಿ ಒಟ್ಟಾಗಿ ನಿಂತು ಬಗೆಬಗೆಯಲ್ಲಿ ಕೇಕೆ ಹಾಕುತ್ತಾ ನಗುವರು, ಅವರು ನಗುವ ಪರಿ ಕಂಡು ನನಗಂತೂ ನಗು ಬಂತು, ಅವರಿಗೆ ಸಹಜ ನಗು ಬಂತೋ ಇಲ್ಲವೋ ಗೊತ್ತಿಲ್ಲ. ಇನ್ನು ಮಂಡಿ ನೋವು, ಬೆನ್ನು ನೋವು, ತಲೆಶೂಲೆ ಕಾಡಿದಾಗ ಯೋಗ ತರಗತಿಗಳಿಗೆ ಹಾಜರಾಗುವರು. ಯೋಗ ಶಿಕ್ಷಕರು ಯೋಗಾಭ್ಯಾಸವನ್ನು ನಿತ್ಯ ಮಾಡಿದರೆ ಮಾತ್ರ ನೋವು ಕಡಿಮೆಯಾಗುವುದು, ನಿಮ್ಮ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾಡಿ ಎಂದಾಗ ತಲೆ ಆಡಿಸುವರು. ಮತ್ತೆಲ್ಲಿಗೆ ಹೋದಾರು? ಕಷ್ಟ ಸುಖ ಹೇಳಿಕೊಳ್ಳಲು ಸಮಾನ ವಯಸ್ಕರು, ಸಮಾನ ಮನಸ್ಕರು ಸಿಕ್ಕ ಮೇಲೆ. ಯೋಗಾಭ್ಯಾಸ ಮಾಡುವವರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರೇ ಆಗಿರುತ್ತಾರೆ. ಇವರ ಮತ್ತೊಂದು ಪ್ರಮುಖ ಹವ್ಯಾಸ – ಪ್ರವಾಸ. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ಯುವ ಜನತೆ ಪಶ್ಚಿಮದತ್ತ ಮುಖ ಮಾಡಿದೆ. ಇವರ ಮಕ್ಕಳೆಲ್ಲಾ ಅಮೆರಿಕ, ಯೂರೊಪ್, ಯು.ಕೆ ಮುಂತಾದ ಕಡೆ ಉದ್ಯೋಗ ಮಾಡುತ್ತಿರುವರು. ಮಕ್ಕಳ ಜೊತೆ ಪ್ರವಾಸ ಮಾಡಿ ಬಂದವರಿಗೆ ಮನೆಯಲ್ಲಿ ಕೂರಲು ಬೇಸರ. ತಾಯ್ನಾಡಿನಲ್ಲಿರುವ ಪ್ರವಾಸೀ ತಾಣಗಳಿಗೆ ಹೊರಡುವ ಉತ್ಸಾಹ. ಮನಸ್ಸು ಹೇಳುತ್ತೆ – ಬಾ, ಗೌರೀಶಂಕರ ಶಿಖರ ಏರೋಣ ಎಂದು. ಆದರೆ ದೇಹದಲ್ಲಿ ತ್ರಾಣ ಇರಬೇಕಲ್ಲ.
ನಾನು ಇತ್ತೀಚೆಗೆ ಪ್ರವಾಸ ಮಾಡಿದ್ದ ಈಶಾನ್ಯ ರಾಜ್ಯಗಳ ನೆನಪು ಹಚ್ಚ ಹಸಿರಾಗಿತ್ತು. ನಾಗಾಲ್ಯಾಂಡ್, ಮಣಿಪುರ, ಮಿಝೋರಾಂ ಹಾಗೂ ತ್ರಿಪುರ ರಾಜ್ಯಗಳಿಗೆ ಪ್ರವಾಸಿ ಸಂಸ್ಥೆಯ ಜೊತೆಗೆ ಹೊರಟಿದ್ದೆ. ನಮ್ಮ ಪ್ರವಾಸಿ ಸಂಸ್ಥೆಯವರ ನಿಯಮದ ಪ್ರಕಾರ ಪ್ರವಾಸದ ಸಮಯದಲ್ಲಿ ಹಿರಿಯ ನಾಗರಿಕರಿಗೆ ವಾಹನದಲ್ಲಿ ಮುಂದಿನ ಸೀಟುಗಳನ್ನು ಕಾದಿರಿಸಲಾಗುವುದು. ಅದನ್ನು ಕೇಳಿ ನಾನು ಖುಷಿಯಾಗಿದ್ದೆ. ಆದರೆ ವಾಹನ ಹತ್ತುವಾಗ ಕಂಡದ್ದು ಮುಕ್ಕಾಲು ಭಾಗ ಬಿಳಿ ಕೂದಲಿನ ಹಿರಿಯ ನಾಗರಿಕರೇ. ನನ್ನ ಉತ್ಸಾಹದ ಬೆಲೂನ್ ಠಸ್ಸೆಂದು ಒಡೆದಿತ್ತು. ವಾಹನ ಏರಿ ಕುಳಿತವರು, ತಮ್ಮ ತಮ್ಮ ಆಭರಣಗಳನ್ನು ಧರಿಸುತ್ತಿದ್ದರು. ಕುತ್ತಿಗೆ ನೋವಿದ್ದವರು ಕಂಠಾಭರಣ, ಸೊಂಟ ನೋವಿನವರು – ಸೊಂಟಾಭರಣ, ಮಂಡಿ ನೋವಿದ್ದವರು ಜಾನುಆಭರಣ, ಕಣ್ಣಿನ ದೋಷ ಇದ್ದವರು – ಸುಲೋಚನ ಇತ್ಯಾದಿ. ಹೆಚ್ಚಿನವರು ತಮ್ಮ ಆರೋಗ್ಯದ ಬಗ್ಗೆ, ತಮಗೆ ಆದ ಆಪರೇಷನ್‌ಗಳ ಬಗ್ಗೆ ಕೊರೆಯುತ್ತಿದ್ದರು. ತಮ್ಮ ಜೀವನದ ಅರ್ಧಭಾಗ ಟಿ.ವಿ.ಸೀರಿಯಲ್ ನೋಡುತ್ತಾ ಕಾಲ ಕಳೆದ ಒಂದಿಬ್ಬರು ಹೆಣ್ಣುಮಕ್ಕಳು, ಮೊಬೈಲಿನಲ್ಲಿ ಮರೆಯದೆ ಸೀರಿಯಲ್ ನೋಡುತ್ತಿದ್ದರು. ವ್ಯಾಪಾರಸ್ಥರು, ಆಗಾಗ್ಗೆ ತಮ್ಮ ಅಂಗಡಿಗಳಿಗೆ ಫೋನ್ ಮಾಡಿ ವ್ಯಾಪಾರ ವಹಿವಾಟಿನ ಬಗ್ಗೆ ವಿಚಾರಿಸುತ್ತಿದ್ದರು. ಬ್ಯಾಂಕಿನ ಉದ್ಯೋಗಿಗಳು ಎಲ್.ಎಫ್.ಸಿ. ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದರು. ಎಲ್ಲರನ್ನೂ ಒಟ್ಟುಗೂಡಿಸಿತ್ತು ಈ ಪ್ರವಾಸ.
ದೈನಂದಿನ ಬದುಕಿನ ಏಕತಾನತೆಯಿಂದ ಹೊರಬರಲು ಚೈತನ್ಯ ನೀಡುವ ಟಾನಿಕ್ ಪ್ರವಾಸ. ಸುತ್ತಲಿನ ರಮಣೀಯವಾದ ನಿಸರ್ಗ ಕಣ್ಣುಗಳಿಗೆ ಹಬ್ಬ, ಸಹಪ್ರಯಾಣಿಕರೊಂದಿಗೆ ಹರಟೆ ಕಿವಿಗಳಿಗೆ ಹಬ್ಬ, ವಿಭಿನ್ನ ರುಚಿಯ ತಿಂಡಿ ತಿನಿಸು ನಾಲಿಗೆಗೆ ಹಬ್ಬ, ಅದರಲ್ಲೂ ಹೆಣ್ಣು ಮಕ್ಕಳಿಗೆ ವಿಶೇಷವಾದ ಸಂಭ್ರಮ. ಅಡಿಗೆ ಮನೆಯ ಜವಾಬ್ದಾರಿಯಿಂದ ಕೆಲ ಸಮಯವಾದರೂ ವಿಶ್ರಾಂತಿ. ಮನೆ ಮಂದಿಗೆಲ್ಲಾ ಊಟ ಬಡಿಸುತ್ತಿದವಳನ್ನು ಇಂದು ಕೂರಿಸಿ ಊಟ ಬಡಿಸುವ ಸುಸಂದರ್ಭ ಪ್ರವಾಸದ ಸಮಯದಲ್ಲಿ. ಬದುಕಿನ ನಾಲ್ಕು ಹಂತಗಳು ಕಣ್ಣ ಮುಂದೆ ತೇಲಿ ಬಂದವು ಅಧ್ಯಯನಕ್ಕೆ ಮೀಸಲಾದ ಬ್ರಹ್ಮಚರ್ಯಾಶ್ರಮ, ಕುಟುಂಬವನ್ನು ಸಾಕಿ ಸಲಹುವುದರ ಜೊತೆ ಜೊತೆಗೇ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸುವ ಗೃಹಸ್ಥಾಶ್ರಮ, ಸಾಂಸಾರಿಕ ಮೋಹಗಳಿಂದ ವಿಮುಖರಾಗಿ ಸನ್ಯಾಸಾಶ್ರಮದೆಡೆ ತೆರಳುವ ಅತ್ಯಂತ ದುಸ್ತರವಾದ ಘಟ್ಟ ವಾನಪ್ರಸ್ಥಾಶ್ರಮ, ಮುಕ್ತಿಗೆ ರಹದಾರಿಯಾದ ಸನ್ಯಾಸಾಶ್ರಮ.
ಆಧುನಿಕ ಜಗತ್ತಿನಲ್ಲಿ ವಾನಪ್ರಸ್ಥಾಶ್ರಮಕ್ಕೆ ಹೆಜ್ಜೆಯಿಡುತ್ತಿರುವ ಈ ನಿವೃತ್ತರ ದಂಡು, ತಮ್ಮದೇ ರೀತಿಯಲ್ಲಿ ಬಾಳು ಸಾಗಿಸುತ್ತಿದ್ದವರನ್ನು ನೋಡಿ ಅಚ್ಚರಿಯಾಗಿತ್ತು. ಮಹಾತ್ಮರೊಬ್ಬರು ಹೇಳಿದ್ದ ಮಾತು ನೆನಪಾಗಿತ್ತು – ದೀಪ ನಮಗೆ ಮಾದರಿಯಾಗಬೇಕು. ಎಣ್ಣೆ ಕಡಿಮೆಯಾದರೂ ಆರುವ ತನಕ ಬೆಳಕು ನೀಡುತ್ತಿರಬೇಕು.
-ಡಾ. ಗಾಯತ್ರಿದೇವಿ ಸಜ್ಜನ್
ವಾಸ್ತವನ್ನು ಸೊಗಸಾಗಿ, ತಿಳಿಹಾಸ್ಯದ ಲೇಪನದೊಂದಿಗೆ ಬರೆದಿದ್ದೀರಿ..ಸೂಪರ್
ವೆರಿ ನೈಸ್. ಇಂದಿನ ನಿವೃತ್ತ ಬದುಕಿನ ಚಿತ್ರಣ
ಎಂದಿನಂತೆ ನಿಮ್ಮ ಬರಹ ನನ್ನ ಮನಸ್ಸನ್ನು ತಟ್ಟಿತು ಮೇಡಂ.. ಆ ಕೊನೆಯ ಸಾಲು ಎಣ್ಣೆ ಕಡಿಮೆಯಾದರೂ ಆರುವ ತನಕ ಬೆಳಕು ಕೊಡುತ್ತಿರಬೇಕು…ಎಷ್ಟು ಅರ್ಥಪೂರ್ಣವಾಗದೆ…ಸೂಪರ್..
ತಮ್ಮ ಪ್ರತೀಕ್ರಿಯೆಗಳಿಗೆ ತುಂಬು ಹೃದಯದ ಧನ್ಯವಾದಗಳು
ಲೇಖನವನ್ನು ಪ್ರಕಟಿಸಿದ್ದಕ್ಕೆ ಹೇಮಮಾಲ ಮೇಡಂ ಗೆ ವಂದನೆಗಳು
ಈಗಿನ ವಾನಪ್ರಸ್ಥಾಶ್ರಮದ ಹೊಸ ರೂಪವಾದ ಪ್ರವಾಸ ಖಂಡಿತಾ ಚೇತೋಹಾರಿಯಾದ ಪರಿವರ್ತನೆ. ಎಂದಿನಂತೆ ಲೇಖನ ನಿರಾಯಾಸವಾಗಿ ಓದಿಸಿಕೊಂಡು ‘ಅಹುದಹುದು’ ಎನ್ನುವಂತಾಯಿತು.
ವನವೇ ಇಲ್ಲದಿದ್ದಲ್ಲಿ ವಾನಪ್ರಸ್ಥಾನವೆಲ್ಲಿ…ಅಲ್ಲವೇ? ಇಂದಿನ ವಾಸ್ತವಿಕ ನೆಲೆಯಲ್ಲಿ ಹಿರಿಯರಿಗೆ ಶಾರೀರಿಕ ಸಮಸ್ಯೆಗಳಿದ್ದರೂ ಮನಸ್ಸನ್ನು ಹಿಗ್ಗಿಸುವ ಪ್ರವಾಸವು ಅತ್ಯಂತ ಉಪಯುಕ್ತ ಟಾನಿಕ್. ತಿಳಿಹಾಸ್ಯ ಮಿಶ್ರಿತ ಲೇಖನ ಚೆನ್ನಾಗಿದೆ ಮೇಡಂ.
ನಿಮ್ಮೆಲ್ಲರ ಪ್ರೀತಿಯ ಪ್ರತಿಕ್ರಿಯೆಗಳಿಗೆ ವಂದನೆಗಳು