ಲಹರಿ

ಆ ಕಾಲವನ್ನು ಹುಡುಕಿಕೊಡಿ ಪ್ಲೀಸ್ ..

Share Button

ಆವಾಗ ನಾನು colgate ಟೂತ್ ಪೌಡರ್ ಗೆ ಇದ್ದಿಲ ಪುಡಿ ಮಿಕ್ಸ್ ಮಾಡ್ಕೊಂಡು ಹಲ್ಲುಜುತ್ತಾ ಇದ್ದೆ. ನನ್ನ ಹಲ್ಲುಗಳು ಲಕಲಕಾ ಅಂತ ಹೊಳಿತ್ತಿದ್ವು. ಬಾಯಿ ತುಂಬಾ ಸ್ವೀಟ್ಸ್ ತಿಂತಾ ಇದ್ದೆ, ಶುಂಠಿ ಪೆಪ್ಪರ್ ಮಿಂಟ್ ತಿಂತಾ ಇದ್ದೆ. ಆದ್ರೂ ಹಲ್ಲು ನೋವು ಅನ್ನೋದೇ ಇರ್ತಿರ್ಲಿಲ್ಲ. Lifebuoy ಸೋಪ್ ಹಾಕ್ಕೊಂಡು ಸ್ನಾನ ಮಾಡ್ತಾ ಇದ್ದೆ. ದಿನವಿಡೀ ಫ್ರೆಶ್ ಆಗಿರ್ತಿದ್ದೆ. ಕಜ್ಜಿ ಆಗಲೀ ಮೈ ತುರಿಕೆಯಾಗಲಿ ಆಗ್ತಿರ್ಲಿಲ್ಲ. ಮಳೆಗಾಲದಲ್ಲಿ ಪ್ಲಾಸ್ಟಿಕ್ ನ ಹೊದಿಕೆ(ಕೊಪ್ಪೆ) ಹೊದ್ಕೊಂಡು ಶಾಲೆಗೆ ಹೋಗ್ತಾ ಇದ್ದೆ. ನಾನು ನನ್ನ ಫ್ರೆಂಡ್ಸು ಪೇಪರ್ನಲ್ಲಿ ದೋಣಿ ಮಾಡಿ ಹರಿಯುವ ನೀರಿನಲ್ಲಿ ತೇಲಿಬಿಡ್ತಿದ್ವಿ. ಮನಸ್ಸಿಗೆ ಏನೋ ಖುಷಿ ಅನ್ಸೋದು.

ಮಧ್ಯಾಹ್ನ ಊಟಕ್ಕೆ ಬಂದಾಗ ಅಮ್ಮ ಅನ್ನದ ಜೊತೆಗೆ ಹಲಸಿನ ಕಾಯಿ ಸಾಂಬಾರ್ ಮಾಡಿ ಬಡ್ಸೋರು. ಹೊಟ್ಟೆ ತುಂಬುವ ತನಕ ತಿಂತಿದ್ವಿ.ಸಾಯಂಕಾಲ ಶಾಲೆಬಿಟ್ಟಮೇಲೆ ಮಳೆನಿಂತಿದ್ರೆ ಗೆಳೆಯರೆಲ್ಲಾ ಸೇರಿ ಮರಕೋತಿನೋ ಲಗೋರಿನೋ ಆಡ್ತಿದ್ವಿ. ತುಂಬಾ ಮಜ ಸಿಗೋದು.

ರಾತ್ರಿ ಆಗ್ತಿದ್ದಂಗೆ ಡೈಲಿ ದೇವರ ಮುಂದೆ ಕೂತು ದೀಪ ಹಚ್ಚಿ ಭಜನೆ ಮಾಡ್ತಾ ಇದ್ದ್ವಿ. ತುಳಸಿ ಗಿಡ ಸುತ್ತು ಬರ್ತಿದ್ವಿ. ಮನಸ್ಸು ಹಗುರವಾಗೋದು.ಸರಿಯಾಗಿ 7-35ಕ್ಕೆ ರೇಡಿಯೋ ದಲ್ಲಿ ಭದ್ರಾವತಿ ಆಕಾಶವಾಣಿಯ ನ್ಯೂಸ್ ಕೇಳ್ತಾಯಿದ್ವಿ. ಅದು ಮುಗಿದ ಮೇಲೆ ಚಿತ್ರಗೀತೆ ಕೇಳ್ತಾಯಿದ್ವಿ. ಪ್ರತಿ ಬುಧುವಾರ ರಾತ್ರಿ ಮಂಗಳೂರು ಆಕಾಶವಾಣಿಯ ಯಕ್ಷಗಾನ ಕೇಳ್ತಾಯಿದ್ವಿ.ತುಂಬಾ ಖುಷಿ ಅನ್ಸೋದು.

ಮಳೆಗಾಲದಲ್ಲಿ ರಾತ್ರಿ ಊಟಕ್ಕೆ ಅಮ್ಮ ಹಲಸಿನಕಾಯಿ ಹಪ್ಪಳ ಸುಟ್ಟು ಕೊಡ್ತಾ ಇದ್ರು. ಕಾಳುಮೆಣಸಿನ ಕಾಯಿ ಸಾಂಬಾರ್ ಮಾಡಿ ಬಡಿಸ್ತಿದ್ರು. ಶೀತ ಆಗಲಿ ಜ್ವರ ಆಗಲಿ ಪತ್ತೇನೇ ಇರ್ತಿರ್ಲಿಲ್ಲ.ರಾತ್ರಿ ದಪ್ಪ ಕಂಬಳಿ ಹೊದ್ದು ಮಲಗ್ತಿದ್ವಿ.ಚಳಿನೇ ಆಗ್ತಿರ್ಲಿಲ್ಲ.

ಪ್ರತೀ ರಜೆಯಲ್ಲೂ ನಾವೂ ಅತ್ತೆಮಕ್ಕಳು ಎಲ್ಲಾ ಒಟ್ಟು ಸೇರ್ತಾಯಿದ್ವಿ. ಬಗೆಬಗೆಯ ಆಟ ಆಡ್ತಾಯಿದ್ವಿ, ಒಂದು ವರ್ಷದ ನಮ್ಮ ನಮ್ಮ ಅನುಭವ ವನ್ನು ಹಂಚಿಕೊಳ್ತಾಯಿದ್ವಿ.ಎರಡು ತಿಂಗಳು ಹೇಗೆ ಕಳೆಯಿತು ಅಂತಾನೆ ಗೊತ್ತಾಗ್ತಿರ್ಲಿಲ್ಲ.

ಈಗ ಕಾಲ ಬದಲಾಗಿದೆ. ಎಲ್ಲವೂ ಆಧುನಿಕತೆಯ ಸ್ಪರ್ಶ ಪಡ್ಕೊಂಡಿದೆ. ನಾನಾ ತರದ ಸೋಪ್ ಗಳು, ಟೂತ್ ಪೇಸ್ಟ್ ಗಳು ಮಾರುಕಟ್ಟೆಗೆ ಬಂದಿವೆ.ಯಾವ್ದುನ್ನ ಬಳಸಬೇಕು ಯಾವ್ದುನ್ನ ಬಳಸಬಾರದು ಅಂತಾನೇ ಗೊತ್ತಾಗ್ತಿಲ್ಲ.ನೂರಾರು ರೇಡಿಯೋಸ್ಟೇಷನ್ ಗಳು, ನೂರಾರು ಟಿ ವಿ ಚಾನೆಲ್ ಗಳು ಬಂದಿವೆ.ಇಲಿ ಹೋದ್ರೆ ಹುಲಿ ಹೋಯ್ತು ಅನ್ನೋ ತರ ತೋರಿಸ್ತಾರೆ.ಯಾವುದನ್ನ ನೋಡ್ಬೇಕು ಯಾವುದನ್ನ ನೋಡಬಾರ್ದು ಅಂತಾನೇ ಗೊತ್ತಾಗ್ತಿಲ್ಲ. ಮಕ್ಕಳು ಮೊಬೈಲ್, ಲ್ಯಾಪ್ ಟಾಪ್, ವೀಡಿಯೋ ಗೇಮ್ ಆಡೋದ್ರಲ್ಲಿ ಬ್ಯುಸಿ ಆಗ್ಬಿಟ್ಟಿದ್ದಾರೆ. ಮರಕೋತಿ, ಲಗೋರಿ ಆಡುವ, ಮಳೆನೀರಲ್ಲಿದೋಣಿ ಬಿಡುವ ಮಕ್ಕಳು ಎಲ್ಲೂ ಕಾಣಿಸ್ತಿಲ್ಲ. ಅತ್ತೆ ಮಕ್ಕಳಿಗೆ ಫೋನ್ ಮಾಡಿದ್ರೆ ಬ್ಯುಸಿ ಇದ್ದೀವಿ, ವಾಟ್ಸಾಪ್ ಮೆಸೇಜ್ ಮಾಡು ಅಂತಾರೆ.

ಇವನ್ನೆಲ್ಲಾ ನೋಡಿನೋಡಿ ಸಾಕಾಗಿಬಿಟ್ಟಿದೆ. ಆ ಕಾಲವೇ ಚಂದ ಅನ್ನಿಸ್ತಿದೆ. ಅದಕ್ಕೆ ಮೊನ್ನೆ ಮೊನ್ನೆ ನನ್ನ ನೆನಪಿನ ಬುತ್ತಿಯನ್ನ ಬಿಚ್ಚಿ ನೋಡಿದೆ. ಅಲ್ಲಿ ಆ ಹಳೆಯ ನೆನಪುಗಳು ಮಾತ್ರ ಇದ್ದವೇ ಹೊರತು ಕಳೆದುಹೋದ ಆ ಕಾಲ ಮಾತ್ರ ಅದರಲ್ಲಿ ಇರ್ಲಿಲ್ಲ. ಆವಾಗ್ಲೇ ಗೊತ್ತಾಗಿದ್ದು ನನಗೆ ಆ ಕಾಲ ಎಲ್ಲೋ ಕಳೆದುಹೋಗಿದೆ ಅಂತ. ಹುಡುಕಾಟ ಶುರು ಮಾಡ್ದೆ. ಆದ್ರೆ ಎಲ್ಲಿಯೂ ಸಿಗ್ಲಿಲ್ಲ. ನಾಲ್ಕಾರು ಜನರಲ್ಲಿ ವಿಚಾರಿಸಿದೆ. ಅವರೂ ಹುಡ್ಕಿದ್ರಂತೆ ಆದ್ರೆ ಅವರಿಗೂ ಸಿಗ್ಲಿಲ್ಲವಂತೆ. ನಿಮಗೇನಾದ್ರೂ ಸಿಕ್ರೆ ನಿಮಗೆ ಬೇಕಾದ್ರೆ ಸ್ವಲ್ಪ ಇಟ್ಕೊಂಡು ಉಳಿದುದನ್ನ ನನಗೆ ಹಿಂದಿರುಗಿಸಿಕೊಡ್ತೀರಾ, ಪ್ಲೀಸ್.

-ಪ್ರಸಾದ್ ಕೆ ಎನ್ , ಶಿವಮೊಗ್ಗ

5 Comments on “ಆ ಕಾಲವನ್ನು ಹುಡುಕಿಕೊಡಿ ಪ್ಲೀಸ್ ..

  1. ಕಳೆದು ಹೋದ ಕಾಲ ಮತ್ತೆ ಸಿಗದು..ಆದರೆ ನಮ್ಮನ್ನು ನಾವು..
    ಸರಿಯಾಗಿಟ್ಟುಕೊಳ್ಳುತ್ತಾ ..ಬದುಕ ಕಟ್ಟಿಕೊಳ್ಳಬೇಕು….ಅಲ್ಲವೇ..ಶುಭವಾಗಲಿ ಮಗು

  2. ಸೊಗಸಾದ ಬರಹ. ಕಳೆದುಕೊಂಡದ್ದನ್ನು ನೆನಪಿಸುವಂತಿದೆ.

  3. ಕಳೆದು ಹೋದ ಕಾಲ ಬರುವುದಿಲ್ಲವಾದರೂ, ಅದಕ್ಕಾಗಿ ಕೊರಗುತ್ತಾ, ಹಲಬುತ್ತಾ ಕೂರುವ ಬದಲು ಈಗಿರುವ ಕಾಲವನ್ನೇ ಸದುಪಯೋಗಪಡಿಸಿಕೊಳ್ಳುವುದೇ ಜಾಣತನ.
    ಲೇಖನದಲ್ಲು ಹಿಂದಿನ, ಇಂದಿನ ಕಾಲಗಳ ತುಲನೆ ಸೊಗಸಾಗಿ ಮೂಡಿ ಬಂದಿದೆ.

  4. ಕಳೆದುಹೋದ ಸೊಗಸಾದ ಕಾಲವನ್ನು ಹಿಂಪಡೆಯಲು ಸಾಧ್ಯವಾಗಿದ್ದರೆ??..ರೆ?? ಸವಿ ನೆನಪಿನೊಂದಿಗೆ ವಾಸ್ತವದಲ್ಲಿ ಜೀವಿಸುವುದೇ ಜಾಣತನ ಅಲ್ವೇ? ಲೇಖನ ಚೆನ್ನಾಗಿದೆ.

  5. ಚೆನ್ನಾಗಿ ದೆ,,,,,ಹೊಸತನದ ಅಬ್ಬರದಲಿ ಸಹಜತೆ ಮರೆಯಾಗುತ್ತಿರುವುದು ಖೇದಕರ

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *