ಬೆಳಕು-ಬಳ್ಳಿ

ಕಾಡುಮಾವಿನ ಮರದ ಸ್ವಗತ

Share Button

(ಜನವರಿಯಿಂದ ಮೇ ತನಕ)

ಕಾದಿದ್ದೆ ಈ ದಿನಕೆ ವರ್ಷಗಟ್ಟಲೆ
ನಿರೀಕ್ಷೆ ಫಲ ಕೊಟ್ಟಿದೆ ಈ ವರ್ಷದಲ್ಲಿ
ರೆಂಬೆ ಕೊಂಬೆಗಳ ಎಡೆಯಲ್ಲೂ
ಘಮಗುಡುವ ಹೂಗಳ ಗೊಂಚಲು
ತುಂಬಿತು ನನ್ನೊಡಲು

“ಮಾಮರ ಹೂಬಿಟ್ಟಿದೆ” ಅನ್ನುವ ಉದ್ಗಾರ
ಬೀಳದಿರಲಿ ಇಬ್ಬನಿ ಅನ್ನುವ ಮಮಕಾರ
ಕಾಡದಿರೆ ಬಿಸಿಲು ಮೂಡದಿರೆ ಮೇಘ
ಹೂಗಳುದುರದೆ ಮೂಡೀತು ಮಿಡಿ ಬೇಗ
ಹುಸಿಯಾಗದಿರಲಿ ಕಾಯುವಿಕೆ

ಕಾಡಿದರೂ ಮೋಡ ನಾ ಗೆದ್ದೆ
ನಿರೀಕ್ಷೆ ಫಲ ನೀಡಿದೆ…….
ಮಿಡಿ ಮಾವಿನಕಾಯಿಗಳ ಕೊಯಿದರಲ್ಲಾ
ಉಪ್ಪಿನಕಾಯಿ ಭರಣಿಗಳು
ಅಟ್ಟದ ಮೇಲೇರಿದವಲ್ಲಾ

ಬರಿದಾಗಲಿಲ್ಲ ಇನ್ನೂ ನನ್ನೊಡಲು
ಇದೀಗ ನನ್ನ ಹಣ್ಣುಗಳದೇ ಘಮಲು
ಹಣ್ಣು ಹೆಕ್ಕಲು ಬರುವ ಸಂಗಾತಿಗಳು
ಚಿತ್ರಾನ್ನ ಸಾಸಿವೆ ಸಾಂಬಾರು
ಶರಬತ್ತು ಸೀಕರಣೆಗೂ ಹಣ್ಣೇ ಬೇಕೆಂಬರು

ಮರವಾಗಿ ಬೆಳೆದ ನನಗೆ ಸಾರ್ಥಕ್ಯ ಭಾವ
ನೆರಳಿನ ಜೊತೆ ಬೆಳೆ ನೀಡಿದ ತೃಪ್ತ ಭಾವ
ಬರಲಿರುವ ವರುಷಗಳಲೂ
ತುಂಬಲಿ ನನ್ನ ಒಡಲು
ಹಸನಾಗಲಿ ನನ್ನ ನಿಮ್ಮೆಲ್ಲರ ಬಾಳು

-ಡಾ. ಕೃಷ್ಣಪ್ರಭ ಎಂ, ಮಂಗಳೂರು

15 Comments on “ಕಾಡುಮಾವಿನ ಮರದ ಸ್ವಗತ

  1. ವಾವ್.. ಕಾಡುಮಾವಿನ ಸ್ವಗತ ಕವನದ ಕೊನೆಯ ಸಾಲು..ತುಂಬಲಿ ನನ್ನ ಒಡಲು..ಹಸನಾಗಲಿ ನನ್ನ ನಿಮ್ಮೆಲ್ಲರ ಬಾಳು..ಮನಕ್ಕೆ ಬಹಳ ತಟ್ಟಿತು..ನಿಸ್ವಾರ್ಥ ದ..ಹಂಬಲ ಧನ್ಯವಾದಗಳು ಮೇಡಂ

  2. ಸುಂದರ ಕವನ. ಸೀಜನ್ ಗೆ ತಕ್ಕುದಾಗಿದೆ.

  3. ಮಾವಿನ ಮರದ ಸ್ವಗತದ ಸದಾಶಯ ಸುಂದರವಾಗಿ ಕವಿತೆಯಲ್ಲಿ ಬಿಂಬಿಸಲ್ಪಟ್ಟಿದೆ.

  4. ಕಾಡುಮಾವಿನ ಮರದ ಸ್ವಗತ… ವಿಶಿಷ್ಟ ಶೈಲಿಯ ಕವನ ಸೂಪರ್.

    1. ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಮೇಡಂ

  5. ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಪದ್ಮಾ ಮೇಡಂ

  6. ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *