ಬೆಳಕು-ಬಳ್ಳಿ

ಮರಣವೇ ಮಹಾ ನವಮಿ

Share Button

ತೀವ್ರ ನಿಗಾ ಘಟಕ ಎಂಬ ಬರಹದ ಕೋಣೆ ಪ್ರವೇಶಿಸಿ ಇಂದಿಗೆ ಮೂರು ದಿನ

ಮೈ ಕೊರೆಯುವಷ್ಟು ತಂಪು ಮೂಗಿಗೆ ಕೈಗೆ ಅಳವಡಿಸಿದ ವಿಚಿತ್ರ ಪರಿಕರಗಳು
ಆಸ್ಪತ್ರೆಯವರು ತೊಡಿಸಿದ ಹಸಿರು ಬಣ್ಣದ ಗೌನುಗಳು
ಆಗಾಗ ಬಂದು ಅವರನ್ನು ನನ್ನ ಸ್ಥಾನದಲ್ಲಿ ಕಲ್ಪಿಸಿಕೊಂಡು ಭಯಪಡುವ ಬಂಧುಗಳು

ಎಪ್ಪತ್ತೆಂಟು ವರ್ಷ ಸರಾಗವಾಗಿ ಹೊರ ಹೋಗುತ್ತಿದ್ದ ಮೂತ್ರ ಇಂದು ಮುಷ್ಕರ ಹೂಡಿದೆ
ಗಾಳಿಯ ಒಳಗೆ ತೆಗೆದುಕೊಂಡು ಹೊರಹಾಕುತ್ತಿದ್ದ ಪುಪ್ಪಸವಿಂದು ಕಫ ಕಟ್ಟಿಕೊಂಡಿದೆ

ತಂಡ ತಂಡವಾಗಿ ಬರುವ ವೈದ್ಯರು ಮಂಚಕ್ಕೆ ಕಟ್ಟಿದ ರಟ್ಟಿನಲ್ಲಿ ಏನೋ ಬರೆಯವರು
ದೊಡ್ಡ ದೊಡ್ಡ ಚೀಲದಲ್ಲಿ ತಂದ ಔಷಧಗಳ ದಾದಿಯರು ರಟ್ಟೆಗೆ ಚುಚ್ಚುವುರು

ಹನಿಹನಿಯಾಗಿ ಇಳಿಯುವ ಗುಕ್ಲೋಸ್ ಕೈಯಲ್ಲಿ ನೋವು ತಂದಿದೆ
ಖಾಲಿಯಾದ ಕೂಡಲೇ ಕರೆಯಲು ಧ್ವನಿ ಸಾಲದಾಗಿದೆ

ಹತ್ತು ಹನ್ನೆರಡು ಇಡ್ಲಿಗಳಿಗೆ ಜಾಗ ನೀಡುತ್ತಿದ್ದ ಹೊಟ್ಟೆಯಿಂದು ಒಂದಕ್ಕೆ ಮಾತ್ರ ಅವಕಾಶ ನೀಡಿದೆ
ಒಂದು ಲೋಟ ಗಂಜಿ ಕುಡಿದಿದ್ದು ಕಂಡು ಎನ್ನವಳ ಮುಖ ಖುಷಿಯಿಂದ ತುಂಬಿದೆ

ಹಗಲೋ ಸಂಜೆಯೋ ರಾತ್ರಿಯೋ ತಿಳಿಯದಾಗಿದೆ
ಬದಲಾಗುವ ಶುಶ್ರೂಷಿಕಿಯರ ಮುಖ ಒಂದೇ ತೆರನಾಗಿದೆ

ನಿವೃತ್ತಿ ನಂತರ ಬಂದ ಹಣದಲ್ಲಿ ಮನೆ ಕಟ್ಟಿಸಿದ್ದೆ
ಮಡದಿ ಸೊಸೆ ಮೊಮ್ಮಕ್ಕಳ ಕೂಡ ಅಲ್ಲೇ ಬಿಡದಿ ಹೂಡಿದ್ದೆ

ವಾರಕ್ಕೊಮ್ಮೆ ಬರುವ ಮಗನ ಕಷ್ಟ ಕಂಡು ಮರುಗಿದ್ದೆ
ಅಕ್ಕಪಕ್ಕದವರ ಕೂಡ ರಾಜಕೀಯ ಮಾತನಾಡುತ್ತಾ ಕಾಲ ಕಳೆಯುತ್ತಿದ್ದೆ

ಹೊಂದಿಸಿಕೊಂಡ ಈ ದಿನಚರಿಯ ಕಂಡು ಮೇಲಿನವನಿಗೆ ಹಿಡಿಸದಾಯಿತೋ
ವಯೋಸಹಜವಾಗಿ ಕುಂದಿದ ಶಕ್ತಿ ಕಾಯಿಲೆಗಳ ಕರೆಯಿತೋ

ಸಾರು ಒಗ್ಗರಣೆಗಳ ಘಮಲಿನ ಮಧ್ಯದಲ್ಲಿದ್ದ ನಾನು
ವಾರ ಕಳೆಯುವುದರೊಳಗೆ ಆಸ್ಪತ್ರೆಯ ಘಾಟು ವಾಸನೆಗೆ ಒಗ್ಗಿಹೋಗಿದ್ದೆ

ಎನ್ನವಳ ಕೂಡ ಏನೋ ಗಂಭೀರವಾಗಿ ಚರ್ಚಿಸುವ ವೈದ್ಯರು
ಮನೆಗೆಲಸ ಮುಗಿಸಿ ಬುತ್ತಿ ಹೊತ್ತು ತಂದ ಮಗಳಂತ ಸೊಸೆಯು
ಏರುತ್ತಿರುವ ಬಿಲ್ ಕಂಡು ಪೆಚ್ಚಾದ ಮಗರಾಯ

ಚೌಕಾಸಿ ಮಾಡಿ ಉಳಿಸಿದ ಹಣವೆಲ್ಲಾ ನೀರಿನಂತೆ ಖರ್ಚಾಗುತ್ತಿತ್ತು
ಉಳಿಯುವ ಭರವಸೆ ಕ್ರಮೇಣ ಕ್ಷೀಣಿಸುತ್ತಿತ್ತು

ನಿದ್ರೆ ತೊರೆದ ಎನ್ನವಳ ಕಣ್ಣಲ್ಲಿ ಆಸೆ ಬತ್ತಿಹೋಗಿತ್ತು
ಮೌನವಾಗಿ ಎನ್ನ ಮನ ಬಿಡದೆ ರೋಧಿಸುತ್ತಿತ್ತು

ವೆಚ್ಚ ಇವರ ಕೈಯಲ್ಲಿ ಭರಿಸಲಾಗದೆಂದು
ಮನೆಗೆ ಎನ್ನ ಕರೆದುಕೊಂಡು ಹೋಗಲು ಹೇಳಿದರು
ಇದ್ದಷ್ಟು ದಿನ ನೋಡಿಕೊಳ್ಳಲು ತಿಳಿಸಿದರು

ಸೂರನ್ನೇ ದಿಟ್ಟಿಸುತ ಎನ್ನ ಸಾವನ್ನೇ ಕಾಯುತ್ತಿರುವೆ
ಕಳುಹಿಸಿಕೊಡಲು ಸಿದ್ದವಾಗಿರುವ ಎನ್ನವರ ಕಂಡು ಅಚ್ಚರಿ ಪಡುತಿರುವೆ

ಬದುಕಿಸಲು ಹೋರಾಡುತ್ತಿದ್ದ ಅವರು ಈಗ ವಿದಾಯ ಹೇಳಲು ಕಾತುರರಾಗಿಹರು
ಬಾರದ ಮರಣಕ್ಕೆ ಹಿಡಿ ಶಾಪ ಹಾಕಿಹರು……

ಬೇಡ ಎಂದವರಿಗೆ ಬಿಡದೆ ಬೇಕು ಎಂದು ಹಂಬಲಿಸುವವರಿಗೆ ಬಾರದೆ
ಈ ಮೃತ್ಯು ಕಣ್ಣಾಮುಚ್ಚಾಲೆ ಆಡುತಿಹುದು……

ಜೀವಿಸುವ ಚೂರೂ ಬಯಕೆ ಈಗ ನನ್ನಲ್ಲಿ ಕರಗಿಹುದು
ಮರಣವೇ ಮಹಾ ನವಮಿ ಎನ್ನುವ ಮಾತು ಕಿವಿಯಲ್ಲಿ ಗುಂಯ್ ಗೂಡುತಿಹುದು……

-ಕೆ.ಎಂ ಶರಣಬಸವೇಶ

4 Comments on “ಮರಣವೇ ಮಹಾ ನವಮಿ

Leave a Reply to Bhoomika Gs Cancel reply

 Click this button or press Ctrl+G to toggle between Kannada and English

Your email address will not be published. Required fields are marked *