ದೇವರನಾಡಲ್ಲಿ ಒಂದು ದಿನ – ಭಾಗ 6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) 
ಜಗದ ಚಕ್ಷು ನಿದಿರೆಗೆ ಜಾರಿದ

ಸೂರ್ಯನ ತಾಪದಿಂದ ಬಳಲಿ ಬೆಂಡಾದ ಹೆಂಗಳೆಯರ ಮೊಗವೆಲ್ಲಾ ತಲೆತಗ್ಗಿಸಿದ ಸೂರ್ಯಕಾಂತಿಯ ಹೂವಂತಾಗಿದ್ದವು.   ನಾವು ಅಂದು ಉಳಿದುಕೊಳ್ಳುವ ಜಾಗಕ್ಕೆ ಕಾತರಿಸಿದೆವು. ಅಂತೂ ಇಂತೂ ಹೋಂ ಸ್ಟೇ ಬಂತು. ಮಾನತ್ ವಾಡಿಯದಲ್ಲಿ ಹೋಂ ಸ್ಟೇ ಮಾಡಲಾಗಿತ್ತು.  ಐದೈದು ಜನಕ್ಕೆ ಒಂದು ಕೋಣೆಯ ಏರ್ಪಾಡಾಗಿತ್ತು. ಮೊದಲು ಹೋಗಿ ಮಾಡಿದ ಕೆಲಸ ಮುಖಕ್ಕೆ ಸಾಕಷ್ಟು ತಣ್ಣೀರು ಎರಚಿಕೊಂಡದ್ದು . ಅಂದು ಸಂಜೆ  ಸೂರ್ಯಾಸ್ತದ ಸೊಬಗನ್ನು ಸವಿಯಲು ಹೋಗುವ ಪ್ಲಾನ್ ಇತ್ತು.  ಬೇಗ ತಯಾರಾಗಿ ಎಂದು ಸೂಚನೆ ಬಂತು.  ಬೇಗ ಬೇಗ ಪ್ರೆಶ್ ಆಗಿ ಮತ್ತೆ ಕಾರುಹತ್ತಿದೆವು.

ಮೂರು ಕಾರಲ್ಲಿ ಯಾರದೋ ಕಾರು ದಾರಿತಪ್ಪಿ ಹಿಂದೆ ಬರಲಿಲ್ಲ ಅಂತ ಹತ್ತು ನಿಮಿಷ ಅರ್ಧ ದಾರಿಯಲ್ಲಿ ನಿಲ್ಲಿಸಿ ಬಿಟ್ಟರು.  ಕಾರಲ್ಲಿ ಕೂತು ಏನು ಮಾಡೋದು ಅಂತ ಕೆಳಗಿಳಿದರೆ ಅದೊಂದು ಚಿಕ್ಕ ರಸ್ತೆ. ಬಹಳ ಎಚ್ಚರಿಕೆಯಿಂದ ಗಾಡಿಯನ್ನು ಓಡಿಸಬೇಕಿತ್ತು. ಏಕೆಂದರೆ ಅದೆಲ್ಲಾ ಎಸ್ಟೇಟ್ ಏರಿಯಾಗಳು.

ರಸ್ತೆಯಿಂದ ಕಣ್ಣು ಕಿತ್ತು ಹಾಗೇ ಎಡಕ್ಕಿಟ್ಟರೆ ಸೊಗಸಾದ ಟೀ ಎಸ್ಟೇಟ್ ಕಂಡಿತು. ಹಾಗೆ ಚಿಗರೆ ಮರಿಯಂತೆ ನೆಗೆದು ಆ ಎಸ್ಟೇಟ್ ನ ಟೀ ಗಿಡಗಳನ್ನು ಮುಟ್ಟಿ ಬಂದೆ. ಮೊದಲ ಬಾರಿ ಅಷ್ಟು ಸನಿಹ ನಾ ಟೀ ಗಿಡಗಳನ್ನು ನೋಡಿದ್ದು. ನಮ್ಮ ಕಡೆ ಇದ್ದರೂ ಹೋಗುವ ಅವಕಾಶ ಸಿಕ್ಕಿರಲಿಲ್ಲ. ಪ್ರತೀ ಗಿಡಗಳನ್ನು ಮುಟ್ಟಿ ಆಸ್ವಾದಿಸಿದೆ. ದಿನವೂ ದೇಹಕ್ಕೆ, ಮನಸ್ಸಿಗೆ ಮುದ ಕೊಡುವ ಟೀ, ಕಾಫಿ ಎಂದರೆ ಕೊಂಚ ಪ್ರೀತಿ ಜಾಸ್ತಿ ಮಾರ್ರೆ. ಚಂದದ ಟೀ ಸಿಕ್ಕಿರಲಿಲ್ಲ ಕುಡಿಯಲು. ಹಾಗಾಗಿ ಹಸಿರ ರಾಶಿಯನ್ನೇ ಕುಡಿದು ಹೊರಟೆ. ನನ್ನಿಂದಾಗಿ ತಡವಾಯಿತು ಎಂದು ಗೊಣಗಾಟ ಉಳಿದವರದು.  ನಾನೇನು ಮಾಡಲಿ ಕಾರು ನಿಂತದ್ದು ಇವರ ತಪ್ಪಲ್ಲ,,,,ನಾನಿಲ್ಲಿ ನಿಂತದ್ದು ತಪ್ಪು ಎಂದರೆ ಆದೀತಾ….😃


ಅಂತೂ ಇಂತೂ ಸೂರ್ಯಾಸ್ತವನ್ನು ಕಣ್ಣಿಗೆ ತುಂಬಿಕೊಳ್ಳುವ ಜಾಗವನ್ನು ತಲುಪಿದೆವು. ಒಂದಿಷ್ಟು ಬಯಲು ಪ್ರದೇಶದಲ್ಲಿ,ಎತ್ತರದ ಜಾಗದಲ್ಲಿ ಸೂರ್ಯಾಸ್ತದ ಸೊಬಗನ್ನು ಸವಿಯಲು ಹೋಗಬೇಕಿತ್ತು. ಅಲ್ಲಿಗೂ ಟಿಕೇಟ್ ಕಣ್ರಿ. ಗುಡ್ಡವನ್ನು ಒಂದು ಸ್ಪರ್ಧೆಯಂತೆ ಸ್ನೇಹಿತರು ಹತ್ತುತ್ತಿದ್ದರೆ ಗುಡ್ಡದ ಮೇಲಿನ ಗಾಳಿ ನಮ್ಮನ್ನು ಒತ್ತಿ ಹಿಂದೆ ತಳ್ಳುತ್ತಿತ್ತು. ತುಂಬಾ ಎತ್ತರದ ಪ್ರದೇಶದಲ್ಲಿ ನಾವು ನಿಂತಿದ್ದೆವು. ನಸುಗತ್ತಲು ಮೆಲ್ಲಮೆಲ್ಲನೆ ಆವರಿಸುತ್ತಿತ್ತು. ಸುತ್ತಲಿನ ಹಸಿರು ಪ್ರದೇಶವೆಲ್ಲಾ ಕಪ್ಪು ಬಟ್ಟೆ ಹೊದ್ದಂತೆ ಕಾಣಲಾರಂಬಿಸಿತು. ನಸುಗತ್ತಲಲ್ಲಿ ಚೆಂಗುಲಾಬಿಯಂತೆ ಸೂರ್ಯ ಚಂದ ಕಾಣಿಸುತ್ತಿದ್ದ. ಕಣ್ಣಿಗೆ ಬಹಳ ತಂಪುನೀಡುತ್ತಿದ್ದ. ನೋಡನೋಡುತ್ತಿದ್ದಂತೆ ಪಡುವಣದೂರಿಗೆ ಹೊರಡುವ ತವಕದಲ್ಲಿ ಮರೆಯಾಗೇ ಬಿಟ್ಟ. ಮತ್ತಷ್ಟು ನೋಡಬೇಕೆನ್ನುವಂತಹ ವೈಭವವದು.

ಸೊಗಸಾದ ಪೋಟೋಗಳು ಮೊಬೈಲ್ ಗ್ಯಾಲರಿ ಸೇರಿದರೆ ಮತ್ತಷ್ಟು ಮೆದುಳಿನ ಗ್ಯಾಲರಿಯಲ್ಲಿ ಸೇರಿಕೊಂಡು ಈ ದಿನದ ವಾಯ್ ನಾಡು ಪ್ರವಾಸವನ್ನು ಪರಿಪೂರ್ಣ ಗೊಳಿಸಿದವು. ರವಿಸರಿದು ರಜನಿ ಬಂದಾಯಿತು.  ರಜನೀಚರ ಸಣ್ಣಗೆ ಬಾನಲಿ ಮೂಡಲು ಪ್ರಾರಂಭಿಸಿದ. ಶೀತಲ ಕಿರಣಗಳು ಬಿಗಿದಪ್ಪಿ ಮೈನಡುಕ ಹೆಚ್ಚಾಗಲು ಬೆಚ್ಚನೆಯ ಗೂಡು ಸೇರಿಕೊಂಡೆವು. ನಾಲಗೆ ಹೊಸ ರುಚಿ ಬಯಸುವುದು ಸಹಜ.  ಬಿಸಿ ಬಿಸಿ ಮಿರ್ಚಿ ಬಜ್ಜಿ, ಕಾಫಿ ಚಳಿಯ ಹಸಿವನ್ನು ಸ್ವಲ್ಪ ಉಪಶಮನ ಮಾಡಿದವು.

ಒಂದಷ್ಟು ಆಟಗಳೊಂದಿಗೆ ರಾತ್ರಿಯ ಸೊಬಗು ರಂಗೇರಿತ್ತು.  ಕ್ವಿಜ್ ಕಾರ್ಯಕ್ರಮವನ್ನು ವಂದನಾ ಅಕ್ಕ ನಡೆಸಿಕೊಟ್ಟರು.  ಆಟಗಳ ನಂತರ  ಹೊಟ್ಟೆ ತಾಳ ಹಾಕುತ್ತಿತ್ತು. ಕೇರಳದ ಖಾದ್ಯಗಳನ್ನು  ನಾವೆಲ್ಲಾ ಒಂದೇ ಕಡೆ ಕುಳಿತು ಸವಿಯುತ್ತಿದ್ದರೆ ಒಂದೇ ಮನೆಯವರೆಂಬ ಬಾಂಧವ್ಯ ಹೆಚ್ಚಾಗುತ್ತಿತ್ತು.  ಊಟದ ನಂತರವೂ ಒಂದಿಷ್ಟು ಮಸ್ತಿ…..ಅದೂ ಏನು ಗೊತ್ತಾ?…ಕೊಡವರ ಹಾಡಿಗೆ ಹೆಜ್ಜೆ ಹಾಕುವುದಾಗಿತ್ತು. ಹೋಂ ಸ್ಟೇ ಮನೆಯೊಡತಿ ಕೊಡಗಿನ ಬೆಡಗಿ. ಗಂಡ ಹೆಂಡತಿ ಒಳ್ಳೆಯ ಡಾನ್ಸರ್ ಕೂಡಾ. ನಾವೆಲ್ಲರೂ ಕೊಡಗಿನ ಶೈಲಿಯ ನೃತ್ಯ ಮಾಡಿ… ಮನದಣಿಯೆ ಕುಣಿದು ಕುಪ್ಪಳಿಸುತ್ತಿದ್ದರೆ ವಯಸ್ಸು ಯಾರಿಗೆ ಆದದ್ದು ಎಂದು ಪ್ರಶ್ನೆ
ಮಾಡಿಕೊಳ್ಳುವಂತೆ ಇತ್ತು.

ರಾತ್ರಿ ಹನ್ನೊಂದು ಗಂಟೆ ಆದ್ದರಿಂದ ಕಣ್ಣೆವೆಗಳು ಆಯಾಸದಿಂದ ಮುಚ್ಚಲಾರಂಬಿಸಿದ್ದವು.  ಎಲ್ಲರಿಗೂ ಶುಭರಾತ್ರಿ ಹೇಳಿ ನಮ್ಮ ಕೋಣೆ ಸೇರಿಕೊಂಡೆವು.

(ಮುಂದುವರೆಯುವುದು..)

ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ : http://surahonne.com/?p=37865

-ಸಿ. ಎನ್. ಭಾಗ್ಯಲಕ್ಷ್ಮಿ ನಾರಾಯಣ

4 Responses

  1. ಪ್ರವಾಸ ಕಥನ…ಓದಿಕೊಳ್ಳುತ್ತಾ ನಿಮ್ಮ ಜೊತೆಗೆ ನಾನೂ ಸಾಗುತ್ತಾ ಹೋಗುತ್ತಿದ್ದೇನೆ ಗೆಳತಿ ಲಕ್ಷ್ಮಿ

  2. ನಯನ ಬಜಕೂಡ್ಲು says:

    ಎಂದಿನಂತೆ ಸೊಗಸಾಗಿದೆ

  3. ಶಂಕರಿ ಶರ್ಮ says:

    ಬಹು ಸೊಗಸಾದ ಪ್ರವಾಸ ಲೇಖನ

  4. Padmini Hegde says:

    ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: