ಮಲೆನಾಡಿನ ಜೀವನಾಡಿಗಳು ;ಕಾಣದ ಕಡಲಿಗೆ ಹಂಬಲಿಸಿದೆ ಮನ’ ಅಂಕ-5
ಕಲ್ಯಾಣ ಕರ್ನಾಟಕದ ಜೀವನಾಡಿಯಾದ ನದಿ ತುಂಗಭದ್ರಾ. ಮಲೆನಾಡಿನ ಪಶ್ಚಿಮಘಟ್ಟಗಳಲ್ಲಿ ಜನಿಸಿದವಳಾದರೂ ಬಯಲು ಸೀಮೆಯತ್ತಲೇ ಇವಳ ಒಲವು. ಶಿವಮೊಗ್ಗಾದ ಸನಿಹದಲ್ಲಿ ಅವಳಿ ಸೋದರಿಯರಾದ – ತುಂಗ ಮತ್ತು ಭದ್ರೆಯರು ಕೂಡುವ ಪುಣ್ಯಕ್ಷೇತ್ರವೇ ಕೂಡಲಿ. ಇವಳು ಸಾಗುವ ಹಾದಿ ಬೆಟ್ಟ ಗುಡ್ಡಗಳಿಂದ ಕೂಡಿದ್ದು, ಹಲವು ತಿರುವುಗಳನ್ನು ಪಡೆಯುತ್ತಾ ಸಾಗುತ್ತಾಳೆ. ದಾರಿಯುದ್ದಕ್ಕೂ ನೂರಾರು ಹಳ್ಳಕೊಳ್ಳಗಳನ್ನು ತನ್ನ ಮಡಿಲಿಗೆ ಹಾಕಿಕೊಂಡು ಭೋರ್ಗರೆಯುತ್ತಾ ಮುನ್ನೆಡೆಯುತ್ತಾಳೆ. ತುಂಗಭದ್ರೆಯ ಪ್ರಮುಖ ಉಪನದಿಗಳು – ವರದಾ, ಕುಮುದ್ವತಿ ಮತ್ತು ವೇದಾವತಿ. ಇವಳ ತಟದಲ್ಲಿ ನೆಲೆಸಿರುವ ನಗರಗಳು – ಹಾವೇರಿ, ದಾವಣಗೆರೆ, ಹರಿಹರ, ಕೊಪ್ಪಳ, ರಾಯಚೂರು, ಬಳ್ಳಾರಿ, ಸಿರುಗುಪ್ಪ, ಹೊಸಪೇಟೆ. ಕಂಪ್ಲಿ, ಗಂಗಾವತಿ ಇತ್ಯಾದಿ. ಮುಂದೆ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಅಂಚಿನಲ್ಲಿ ಪ್ರತ್ಯಕ್ಷಳಾಗುವ ತುಂಗಭದ್ರೆ ಕೃಷ್ಣಾ ನದಿಯ ಉಪನದಿಯಾಗಿ ಬಂಗಾಳಕೊಲ್ಲಿಯಲ್ಲಿ ಲೀನವಾಗುವಳು.
ಕೂಡಲಿಯಿಂದ ಹೊರಟ ತುಂಗಭದ್ರೆ ಬಯಲುಸೀಮೆಯ ಸಾವಿರಾರು ಎಕರೆ ಬರಡು ಪ್ರದೇಶದಲ್ಲಿ ಹಸಿರುಕ್ಕಿಸಿ, ರೈತರ ಬಾಳಿನ ಬೆಳಕಾಗುವಳು. ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಸೀಮೆಯಲ್ಲಿ ಇವಳ ನೀರಿನಲ್ಲಿ ಬೆಳೆದ ಅಕ್ಕಿಯ ರುಚಿಯನ್ನು ಸವಿದವರೇ ಬಲ್ಲರು. ಇವಳ ಮಡಿಲಲ್ಲಿ ಬೆಳೆದ ಧಾನ್ಯಗಳ ಸೊಗಡನ್ನು ಹೆಚ್ಚಿಸಿರುವುದು ಇವಳ ಒಡಲಲ್ಲಿರುವ ಕಬ್ಬಿಣಾಂಶ. ಇವಳು ಹಲವು ಕೈಗಾರಿಕೆಗಳಿಗೂ ಆಶ್ರಯದಾತಳು. ಹರಿಹರ, ಬಳ್ಳಾರಿ ಹಾಗೂ ಸಂಡೂರಿನಲ್ಲಿರುವ ಕೈಗಾರಿಕೆಗಳು ಸಾವಿರಾರು ಜನರಿಗೆ ಬದುಕು ಕಟ್ಟಿಕೊಟ್ಟಿವೆ.
ತುಂಗಭದ್ರಾ ನದಿಯ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವನ್ನು ತಿಳಿಯೋಣ ಬನ್ನಿ. ದಾವಣಗೆರೆಯ ಬಳಿ ಇರುವ ಹರಿಹರೇಶ್ವರ ದೇಗುಲ ವೈಷ್ಣವರ ಹಗೂ ಶೈವರ ಬಾಂಧವ್ಯದ ಸಂಕೇತ. ಒಂದೆಡೆ ವಿಷ್ಣು ಮತ್ತೊಂದು ಬದಿಯಲ್ಲಿ ಮಹೇಶ್ವರನ ಶಿಲ್ಪವನ್ನು ಭವ್ಯವಾದ ಒಂದೇ ವಿಗ್ರಹದಲ್ಲಿ ಕೆತ್ತಲಾಗಿದೆ.
ಮೊದಲಿಗೆ ತುಂಗಭದ್ರೆಯ ತಟದಲ್ಲಿರುವ ವಿಶ್ವ ಪಾರಂಪರಿಕ ತಾಣವಾದ ಹಂಪೆಗೆ ಹೊಗೋಣ ಬನ್ನಿ. ಹಕ್ಕ ಬುಕ್ಕರು, ಗುರು ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ಕಟ್ಟಿದ ನಾಡಿದು. ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ಕೀರ್ತಿಪತಾಕೆಯು ಉತ್ತುಂಗಕ್ಕೇರಿತ್ತು. ಪರಾಕ್ರಮಿಗಳ ನಾಡಾದ ಈ ರಾಜ್ಯ ಶತ್ರುಗಳ ಪಾಲಿಗೆ ಸಿಂಹಸ್ವಪ್ನವಾಗಿತ್ತು. ಸಂಗೀತ, ಸಾಹಿತ್ಯ, ಶಿಲ್ಪಕಲೆಗಳ ತವರೂರಾಗಿತ್ತ್ತು. ಸಂಪದ್ಭರಿತವಾದ ಈ ನಾಡಿನಲ್ಲಿ ಮುತ್ತು ರತ್ನಗಳನ್ನು, ವಜ್ರವೈಢೂರ್ಯಗಳನ್ನೂ ಹಂಪೆ ಬಜಾರಿನಲ್ಲಿ ಮಾರುತ್ತಿದ್ದರಂತೆ. ಕೃಷದೇವರಾಯನು ಮಳೆಗಾಲದಲ್ಲಿ ಉಕ್ಕಿ ಹರಿಯುವ ನದಿಯ ರಭಸದಿಂದಾಗುವ ಹಾನಿಯನ್ನು ತಡೆಯಲು ನದಿಯ ಉದ್ದಕ್ಕೂ ಪ್ರವಾಹ ಸಂರಕ್ಷಣಾ ತಡೆಗೋಡೆಯನ್ನು ಕಲ್ಲಿನಿಂದ, ದೊಡ್ಡ ಬಂಡೆಗಳಿಂದ ನಿರ್ಮಿಸಿದನು. ಅಚ್ಚರಿಯೆಂದರೆ ಇಂದಿಗೂ ಈ ತಡೆಗೋಡೆ ಸುಸ್ಥಿತಿಯಲ್ಲಿದೆ.
ಮುಂದೆ ಮುಸ್ಲಿಂ ದೊರೆಗಳೊಂದಿಗೆ ನಡೆದ ತಾಳಿಕೋಟೆ ಯುಧ್ಧದಲ್ಲಿ ವಿಜಯನಗರದ ಸೈನ್ಯವು ಸೋತು ಹೋದಾಗ ರಾಜಧಾನಿಯಾದ ಹಂಪೆಯು ಹಾಳು ಹಂಪೆಯಾಯಿತು. ಇಂದಿಗೂ ಹಂಪೆಯಲ್ಲಿರುವ ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇಗುಲ, ಸಪ್ತ ಸ್ವರ ಹೊಮ್ಮಿಸುವ ಕಲ್ಲಿನ ಮಂಟಪ, ವಿಶ್ವ ವಿಖ್ಯಾತ ಕಲ್ಲಿನ ರಥ, ಮಹಾನವಮಿ ದಿಬ್ಬ, ಸಾಸಿವೆ ಕಾಳು ಗಣಪತಿ, ಉಗ್ರ ನರಸಿಂಹ, ಬಡವಿ ಲಿಂಗ ವಿಜಯನಗರದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾರುತ್ತಿವೆ.
ಹನುಮನುದಿಸಿದ ನಾಡು ಅಂಜನಾದ್ರಿ ತುಂಗಭದ್ರೆಯ ತಟದಲ್ಲಿ ನಿಂತಿದೆ. ಇಲ್ಲಿರುವ ಕಿಷ್ಕಿಂಧೆಯ ಬೆಟ್ಟಗುಡ್ಡಗಳಲ್ಲಿ ಶ್ರೀರಾಮನು ತನ್ನ ನೆಚ್ಚಿನ ಬಂಟ ಆಂಜನೇಯನನ್ನು ಭೇಟಿ ಮಾಡಿದನೆಂದೂ, ವಾನರ ರಾಜನಾದ ವಾಲಿಯ ವಧೆ ಮಾಡಿ ಸುಗ್ರೀವನಿಗೆ ಪಟ್ಟಾಭಿಷೇಕ ಮಾಡಿದನೆಂಬ ಪ್ರತೀತಿಯಿದೆ. ಮುಂದೆ ನಡೆದನು ಶ್ರೀರಾಮ ವಾನರಸೈನ್ಯದೊಂದಿಗೆ, ಸೀತಾಪಹರಣ ಮಾಡಿದ ರಾವಣನನ್ನು ವಧಿಸಲು. ಈ ಐತಿಹ್ಯಗಳನ್ನು ತನ್ನ ಒಡಲಲ್ಲಿಟ್ಟುಕೊಂಡು ಸಾಗುವಳು ತುಂಗಭದ್ರೆ.
ಮುಂದೆ ಸಾಗುವ ತುಂಗಭದ್ರೆ ಗುರು ಸಾರ್ವಭೌಮರಾದ ರಾಘವೇಂದ್ರರು ನೆಲಸಿರುವ ತಾಣವಾದ ಮಂತ್ರಾಲಯವನ್ನು ಪಾವನಗೊಳಿಸಿರುವಳು. ಇಲ್ಲಿರುವ ಮೂಲ ಬೃಂದಾವನಕ್ಕೆ ನಮಿಸಿ ಮುಂದೆ ಸಾಗುವಳು ತುಂಗಭದ್ರೆ. ಚಿರವಿಶ್ರಾಂತಿ ಹೊಂದಿರುವ ಪುಣ್ಯಕ್ಷೇತ್ರ ನವಬೃಂದಾವನದೆಡೆಗೆ. ಇಲ್ಲಿ ಚಿರವಿಶ್ರಾಂತಿ ಪಡೆದ ಒಂಭತ್ತು ಮಾಧ್ವ ಸಂತರ ಪಾದವನ್ನು ತೊಳೆಯುತ್ತಾ ಪುನೀತಳಾಗುವಳು. ದಕ್ಷಿಣ ಕಾಶಿಯೆಂದೇ ಹೆಸರಾದ ಆಲಂಪುರದಲ್ಲಿರುವ ಜೋಗುಳಾಂಬ ದೇವಿಯ ದರ್ಶನಕ್ಕೆ ಹಾಜರಾಗುವಳು.
ಹೊಸಪೇಟೆಯ ಬಳಿ ತುಂಗಭದ್ರೆಗೆ ಕಟ್ಟಲಾಗಿರುವ ಅಣೆಕಟ್ಟುನ ಚೆಲುವನ್ನು ನೋಡಲು ಅಗಸ್ಟ್ 15 ರಂದು ಸುಸಮಯ. ಅಣೆಕಟ್ಟಿನ 33 ಕ್ರೆಸ್ಟ್ ಗೇಟುಗಳನ್ನೂ ತೆರೆದು, ಭೋರ್ಗರೆಯುವ ಜಲಪಾತಗಳಿಗೆ ಮಾಡುವ ಬಣ್ಣ ಬಣ್ನದ ದೀಪಾಲಂಕಾರ ಎಲ್ಲರ ಕಣ್ಮನ ಸೆಳೆಯುವುದು. ಇಲ್ಲಿ ನಿರ್ಮಿಸಲಾಗಿರುವ ಜಲವಿದ್ಯುತ್ ಯೋಜನೆಗಳು ಸುತ್ತಮುತ್ತಲಿನ ಊರುಗಳಿಗೆ ಬೆಳಕು ನೀಡಿವೆ. ಮತ್ತೊಂದು ಅಚ್ಚರಿಯ ಸಂಗತಿಯೆಂದರೆ, ಈ ಅಣೆಕಟ್ಟಿನ್ನು ನಿರ್ಮಿಸಲು ಸಿಮೆಂಟ್ ಬಳಸಲಾಗಿಲ್ಲ, ಬದಲಿಗೆ ಮಣ್ಣು ಮತ್ತು ಸುಣ್ಣದ ಮಿಶ್ರಣದಿಂದ ಗಾರೆಯನ್ನು ತಯಾರಿಸಿ ಈ ಜಲಾಶಯವನ್ನು ಕಟ್ಟಲಾಗಿದೆ.
ಕರ್ನಾಟಕದಲ್ಲಿ ಸುಮಾರು 380 ಕಿ.ಮೀ ಕ್ರಮಿಸಿದ ಬಳಿಕ ಆಂಧ್ರಪ್ರದೇಶ ತಲುಪುವಳು. ಮುಂದೆ ತೆಲಂಗಾಣದ ಗದ್ವಾಲ್ ಜಿಲ್ಲೆಯಲ್ಲಿರುವ ಗುಂಡಿಮಲ್ಲದಲ್ಲಿ ಕೃಷ್ಣೆಯೊಂದಿಗೆ ಸೇರುವಳು. ಕೃಷ್ಣೆಯ ಅತಿದೊಡ್ಡ ಉಪನದಿಯೆಂಬ ಪಟ್ಟ ಹೊತ್ತು ಬಂಗಾಳಕೊಲ್ಲಿಯಲ್ಲಿ ಐಕ್ಯಳಾಗಲು ಧಾವಿಸುವಳು. ಹೀಗಿತ್ತು ತುಂಗಭದ್ರೆಯ ಸುದೀರ್ಘ ಪಯಣ. ಇವಳ ಹನಿಹನಿಯಲ್ಲೂ ಪೌರುಷವಿದೆ ಎನ್ನುವರು ವಿಜಯನಗರದ ಧೀಮಂತ ಅರಸರು, ಇವಳ ಮಡಿಲಲ್ಲಿ ರಾಮನಾಮವನ್ನು ಭಜಿಸಿದ ಮಹಾನ್ ಭಕ್ತರೂ ಇರುವರು, ಶಿವನನ್ನು ಆರಾಧಿಸಿದ ಸಂತರೂ ನೆಲೆಕಂಡುಕೊಂಡಿಹರು.
ಇಂತಹ ಪವಿತ್ರವಾದ, ಶುಭ್ರವಾದ ನದಿಯನ್ನೂ ನಾವು ಕಲುಷಿತಗೊಳಿಸಿದ್ದೇವೆ. ಕೂಡಲಿಯಲ್ಲಿ ಒಂದಾದ ತುಂಗೆ ಭದ್ರೆಯರನ್ನು ಕೈಗಾರಿಕಾ ತ್ಯಾಜ್ಯಗಳು, ವ್ಯವಸಾಯದಲ್ಲಿ ಬಳಸುವ ಕ್ರಿಮಿನಾಶಕಗಳು, ನಗರದ ಕೊಳಚೆಯೆಲ್ಲಾ ಸೇರಿ ಮಲಿನಗೊಳಿಸಿವೆ. ಈ ಮಾಲಿನ್ಯದಿಂದ ಉಸಿರುಕಟ್ಟಿದ ತುಂಗಭದ್ರೆ ದಾಪುಗಾಲು ಹಾಕುತ್ತಾ ಸಾಗರವನ್ನು ಸೇರಲು ಧಾವಿಸುವಳು. ‘ಕಾಣದ ಕಡಲಿಗೆ ಹಂಬಲಿಸಿದೇ ಮನ’ ಎಂದು ಗುನುಗುತ್ತಾ ಕೃಷ್ಣೆಯೊಡನೆ ಸೇರಿ ಬಂಗಾಳಕೊಲ್ಲಿಯತ್ತ ಹೆಜ್ಜೆ ಹಾಕುವಳು.
ನಮ್ಮನ್ನು ಸಲಹುವ ನದಿಗಳನ್ನು ಮಾತೆಯೆಂದೂ, ದೇವಿಯೆಂದೂ ಪೂಜಿಸುವ ನಾವು ವಾಸ್ತವದಲ್ಲಿ ಮಾಡುತ್ತಿರುವುದಾದರೂ ಏನು? ಈ ಜೀವನಾಡಿಗಳನ್ನು ಸಂರಕ್ಷಿಸದಿದ್ದಲ್ಲಿ ನಾಶವಾಗುವುದು ಪ್ರಕೃತಿ, ಅಸ್ತವ್ಯಸ್ತವಾಗುವುದು ಜನಜೀವನ. ಕರ್ನಾಟಕದ ಹೆಮ್ಮೆಯ ನದಿಯಾದ ತುಂಗಭದ್ರೆಯನ್ನು ಕಾಯುವ ಹೊಣೆ ನಮ್ಮದಲ್ಲವೇ?
–ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ.
ಮಲೆನಾಡಿನ ಜೀವನಾಡಿಗಳು…ಲೇಖನ..ಮನಸ್ಸಿಗೆ..ಮುದನೀಡುವುದರ ಜೊತೆಗೆ..ನಾವೂ ನಿಮ್ಮೊಡನೆ..ಸುತ್ತಿದ ಅನಭವವಾಯಿತು..ಸೊಗಸಾದ ನಿರೂಪಣೆ…ಮೇಡಂ.. ಧನ್ಯವಾದಗಳು.
Very nice
ವಂದನೆಗಳು ಗೆಳತಿಯರಿಗೆ
ಮಲೆನಾಡಿನ ಜೀವನಾಡಿಗಳಲ್ಲಿ ಒಂದಾದ ತುಂಗಭದ್ರಾ ನದಿ, ಹೊಸಪೇಟೆಯಲ್ಲಿರುವ ಅಣೆಕಟ್ಟು, ಎಲ್ಲವನ್ನು ಹಲವಾರು ವರ್ಷಗಳ ಹಿಂದೆ ನೋಡಿದ್ದ ನೆನಪು ಮರುಕಳಿಸಿತು… ಸೊಗಸಾದ ಲೇಖನಮಾಲೆ ಮೇಡಂ.
ತುಂಗಭದ್ರಾ ನದಿಯ ಮಹತ್ವವನ್ನು ಸಾರುತ್ತಾ ಸಾಗಿದ ಲೇಖನಮಾಲೆ ಸೊಗಸಾಗಿದೆ.