ಪರಾಗ

ವಾಟ್ಸಾಪ್ ಕಥೆ 10 :ಅನುಕರಣೆಯಿಂದ ಅಪಾಯ.

Share Button

ಒಬ್ಬ ಅಗಸ ತನ್ನ ಮನೆಯಲ್ಲಿ ಒಂದು ಕತ್ತೆ ಮತ್ತು ನಾಯಿಯನ್ನು ಸಾಕಿಕೊಂಡಿದ್ದ. ಕತ್ತೆ ಬಲವಾಗಿತ್ತು ಅಗಸ ಎಷ್ಟೇ ಬಟ್ಟೆಗಳ ಗಂಟನ್ನು ಹೊರಿಸಿದರೂ ಹೊತ್ತುಕೊಳ್ಳುತ್ತಿತ್ತು. ನಾಯಿಯೂ ತುಂಬ ಮುದ್ದಾಗಿತ್ತು. ಅಗಸನಿಗೆ ಅದನ್ನು ಕಂಡರೆ ತುಂಬ ಪ್ರೀತಿ. ನಾಯಿಗೂ ತನ್ನ ಯಜಮಾನನನ್ನು ಕಂಡರೆ ಹೆಚ್ಚು ಪ್ರೀತಿ. ಅವನು ಹೊರಗಿನಿಂದ ಮನೆಗೆ ಬಂದು ಕುಳಿತ ಕೂಡಲೇ ನಾಯಿ ಚೆಂಗನೆ ನೆಗೆದು ಅವನ ಬಳಿಗೆ ಹೋಗುತ್ತಿತ್ತು. ಅವನ ತೊಡೆಯ ಮೇಲೆ ಹತ್ತಿ ಹೊರಳಾಡಿ ತನ್ನ ಪ್ರೀತಿಯನ್ನು ತೋರಿಸುತ್ತಿತ್ತು. ಯಜಮಾನನೂ ಅದನ್ನು ಅಪ್ಪಿ ಮುದ್ದಿಸುತ್ತಿದ್ದ.

ಇದನ್ನೆಲ್ಲ ದಿನವೂ ಕತ್ತೆ ದೂರದಲ್ಲಿ ನಿಂತು ನೋಡುತ್ತಿತ್ತು. ಕತ್ತೆಗೆ ನಾನೂ ಒಡೆಯನ ಕೆಲಸಗಳನ್ನು ವಿಧೇಯತೆಯಿಂದ ಮಾಡುತ್ತೇನೆ. ನನ್ನನ್ನು ಕಂಡರೂ ಒಡೆಯನಿಗೆ ತುಂಬ ಅಚ್ಚುಮೆಚ್ಚು. ನಾನೂ ಕೂಡ ಒಡೆಯ ಮನೆಗೆ ಬಂದ ಕೂಡಲೇ ನಾಯಿಯಂತೆ ನಡೆದುಕೊಂಡರೆ ನನ್ನನ್ನೂ ಅವನು ನಾಯಿಯಷ್ಟೇ ಪ್ರೀತಿಯಿಂದ ಮುದ್ದಿಸಬಹುದು ಎಂದು ಆಲೋಚಿಸಿತು.

ಒಂದು ದಿನ ಅಗಸನು ಮನೆಗೆ ಬಂದು ಮನೆಯ ಅಂಗಳದಲ್ಲಿ ಕುಳಿತುಕೊಂಡ. ತನ್ನ ಕರ್ಕಶ ಕಂಠದಿಂದ ಒಂದು ಕೂಗುಹಾಕಿ ಕತ್ತೆಯು ಅವನನ್ನು ಸ್ವಾಗತಿಸಿತು. ಎಂದೂ ಇಲ್ಲದೆ ಇವತ್ತು ಏಕೆ ಇದು ಕೂಗು ಹಾಕುತ್ತಿದೆ ಎಂದು ಅಚ್ಚರಿಯಿಂದ ಬಗ್ಗಿ ನೋಡಿದ. ತಕ್ಷಣ ಕತ್ತೆಯು ತನ್ನ ಮುಂಗಾಲುಗಳನ್ನೆತ್ತಿಕೊಂಡು ಕುಣಿಯತೊಡಗಿತು. ಅದನ್ನು ನೋಡಿ ಅಗಸನಿಗೆ ನಗು ತಡೆಯಲಾಗಲಿಲ್ಲ. ಬಿದ್ದುಬಿದ್ದು ನಕ್ಕ. ಇದರಿಂದ ಕತ್ತೆಯು ತನ್ನ ಕ್ರಿಯೆಯಿಂದ ಯಜಮಾನನಿಗೆ ಸಂತೋಷವಾಗಿದೆ ಎಂದುಕೊಂಡಿತು. ಉತ್ತೇಜಿತವಾಗಿ ಅಂಗಳದೊಳಕ್ಕೆ ನುಗ್ಗಿ ಯಜಮಾನನ ತೊಡೆಯ ಮೇಲೆ ತಲೆಯಿಟ್ಟು ನಾಯಿ ಮಾಡಿದಂತೆ ಹೊರಳಾಡತೊಡಗಿತು. ತನ್ನ ಮೂತಿಯನ್ನು ಯಜಮಾನನ ಮುಖದಬಳಿಗೆ ಒಯ್ದಿತು. ಇದರಿಂದ ಸಿಟ್ಟುಗೊಂಡ ಅಗಸ ಕತ್ತೆಯನ್ನು ಬಲವಾಗಿ ಝಾಡಿಸಿ ಒದ್ದ. ಒಂದು ದೊಣ್ಣೆಯಿಂದ ನಾಲ್ಕಾರು ಬಾರಿ ಥಳಿಸಿದ. ಅದಕ್ಕೆ ತಲೆಕೆಟ್ಟಿರಬೇಕೆಂದು ಅದರ ಕೈಕಾಲು ಕಟ್ಟಿ ಮೂಲೆಯಲ್ಲಿ ಉರುಳಿಸಿದ. ಕತ್ತೆಗೆ ನಿರಾಸೆಯಾಯಿತು. ಬೇರೆಯವರು ಏಕೆ ಹಾಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ತಿಳಿಯದೆ ನಾಯಿಯನ್ನು ಅನುಕರಣೆಮಾಡಿ ವ್ಯರ್ಥವಾಗಿ ದೊಣ್ಣೆಯ ಪೆಟ್ಟುಗಳನ್ನು ತಿಂದಿತು.


ವಾಟ್ಸಾಪ್ ಕಥೆಗಳು
ಸಂಗ್ರಹ ಬಿ.ಆರ್ ನಾಗರತ್ನ, ಮೈಸೂರು

8 Comments on “ವಾಟ್ಸಾಪ್ ಕಥೆ 10 :ಅನುಕರಣೆಯಿಂದ ಅಪಾಯ.

  1. ಅನುಕರಣೆಯ ಅನಾಹುತದೊಂದಿಗೆ ಕೆಲಸ ಮಾಡುವವರು ಯಾರೋ, ಫಲ ಅನುಭವಿಸುವವರು ಇನ್ನಾರೋ ಎಂಬೆರೆಡೂ ಸಂದೇಶವನ್ನು ಸಾರುವ ಸುಂದರ ಕಥೆ.

  2. ನೀತಿ ಕಥೆ ತುಂಬಾ ಇಷ್ಟವಾಯ್ತು .
    ಯಾರು ಯಾರು ಎಲ್ಲೆಲ್ಲಿರಬೇಕೋ ಅಲ್ಲೆ ಇರಬೇಕು

  3. ನಮ್ಮ ಇತಿಮಿತಿಯನ್ನು ಅರಿತುಕೊಂಡು ಬಾಳಿದರೆ ಸೊಗಸು ಎಂಬ ನೀತಿ ಹೇಳುತ್ತಿರುವ ಕಥೆಯ ನಿರೂಪಣೆ ಚೆನ್ನಾಗಿದೆ

  4. ಸೂಕ್ತ, ಸುಂದರ ಸ್ವರಚಿತ ಚಿತ್ರದೊಂದಿಗೆ ಉತ್ತಮ ನೀತಿಕಥೆ..ಧನ್ಯವಾದಗಳು ಮೇಡಂ.

Leave a Reply to ನಾಗರತ್ನ..ಬಿ.ಆರ್. Cancel reply

 Click this button or press Ctrl+G to toggle between Kannada and English

Your email address will not be published. Required fields are marked *