ತ್ರಿಮೂರ್ತಿಗಳನ್ನು ಸತ್ವಪರೀಕ್ಷೆಗೊಡ್ಡಿದ ಭೃಗು ಮಹರ್ಷಿ-
ಮಹಾ ಮಹಾ ಋಷಿಮುನಿಗಳು ನಮ್ಮ ಪುರಾಣ ಲೋಕದಲ್ಲಿ ಬೆಳಗಿದ ರತ್ನಗಳು.ಅವರು ಯಾವುದೋ ಮಹತ್ವದ ಗುರಿಯಿಟ್ಟುಕೊಂಡು ತಪಸ್ಸು ಮಾಡಬಲ್ಲರು.ಆದರೆ ಪರೀಕ್ಷೆಗೆ ಒಳಪಡುವವರೋ ನಮ್ಮ ನಿಮ್ಮಂತವರಲ್ಲ!.ದೇವಾದಿ ದೇವತೆಗಳು!. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು!. ಇಷ್ಟೊಂದು ಶಕ್ತಿ ಪರೀಕ್ಷೆಗೆ ಒಡ್ಡುವ ಶಕ್ತಿ ಇವರಿಗಿದೆಯೇ ಎಂದು ಮೂಗಿನ ಮೇಲೆಬೆರಳಿಡುವಂತಾಗುತ್ತದೆ!. ನಂಬಲಸಾಧ್ಯವೆನಿಸುತ್ತದೆ. ಆದರೆ ಅದು ನಿಜ.ನಂಬಲೇ ಬೇಕಾಗುತ್ತದೆ.
ಇಂತಹ ಒಂದು ಉದಾಹರಣೆಗೆ ‘ಭೃಗು’ ಮಹರ್ಷಿ ಯೋಗ್ಯರು. ಇವರು ಸ್ವಾಯಂಭುವ ಮನ್ವಂತರದವರು.ಇವರು ಬ್ರಹ್ಮನ ಮಾನಸ ಪುತ್ರರು. ವರುಣ ಋಷಿಯ ಮಗ.ಈತನ ಪತ್ನಿ ‘ಖ್ಯಾತಿ’. ವೈವಸ್ವತ ಮನ್ವಂತರದಲ್ಲಿ ಈತನೇ ‘ವರುಣ ಯಜ್ಞಕುಂಡ’ದಲ್ಲಿ ಜನಿಸಿದನು.ಆದ್ದರಿಂದ ಈತನಿಗೆ ‘ವಾರುಣಿ’ ಎಂಬ ಹೆಸರೂ ಇದೆ.ಇವನ ಮತ್ತೊಬ್ಬ ಪತ್ನಿಯ ಹೆಸರು ‘ಪುಲೋಮೆ’. ಭೃಗು ಋಷಿಗೆ ಚ್ಯವನ,ವಜ್ರಶೀರ್ಷನ, ಶುಚಿ,ಔರ್ವಮ, ಶುಕ್ರಾಚಾರ್ಯ,ವರೇಣ್ಯ, ಸವನ, ಎಂಬ ಏಳು ಮಂದಿ ಮಕ್ಕಳು.
ನರ್ಮದೆಯು ಸಾಗರಕ್ಕೆ ಸಂಗಮವಾಗುವುಲ್ಲಿದ್ದ ಕ್ಷೇತ್ರವೇ ‘ಭೃಗು ಕಚ್ಛ’.ಇಲ್ಲಿ ಭೃಗು ಮುನಿಯ ಆಶ್ರಮವಿತ್ತು.ಶುಕ್ರಾಚಾರ್ಯರು ಮೃತ ಸಂಜೀವಿನಿ ವಿದ್ಯೆ ಪ್ರಾಪ್ತಿಗಾಗಿ ತಪಸ್ಸನ್ನಾಚರಿಸಲು ರಾಕ್ಷಸರಿಗೂ ದೇವತೆಗಳಿಗೂ ಯುದ್ಧವಾಗಿ ದೈತ್ಯರು ಸೋತರು.ನಂತರ ರಾಕ್ಷಸರು ಭೃಗು ಋಷಿಯ ಆಶ್ರಮವನ್ನು ಹೊಕ್ಕು ಖ್ಯಾತಿ ದೇವತೆಗೆ ಮೊರೆಯಿಟ್ಟರು. ಖ್ಯಾತಿಯು ದೇವತೆಗಳನ್ನು ತಡೆದರೂ ಅವರು ಯುದ್ಧವನ್ನು ನಿಲ್ಲಿಸಲಿಲ್ಲ. ನಿರ್ವಾಹವಿಲ್ಲದೆ ದೇವತೆಗಳು ಮೂರ್ಛೆ ತಪ್ಪುವಂತೆ ಶಾಪವಿತ್ತಳು. ಆಗ ವಿಷ್ಣುವು ಕೋಪಗೊಂಡು ಎಚ್ಚರ ತಪ್ಪಿ ಬಿದ್ದ ಇಂದ್ರನನ್ನು ತನ್ನಲ್ಲಡಗಿಸಿಕೊಂಡು ಖ್ಯಾತಿ ದೇವಿಯ ರುಂಡವನ್ನು ತನ್ನ ಚಕ್ರಾಯುಧದಿಂದ ಕತ್ತರಿಸಿದರು. ತನ್ನ ಪತ್ನಿಯ ರುಂಡ ಕತ್ತರಿಸಿದ ತಪ್ಪಿಗಾಗಿ ಭೃಗುವು ವಿಷ್ಣುವಿಗೆ ”ಅನೇಕ ಅವತಾರಗಳನ್ನೆತ್ತಿ ಗರ್ಭವಾಸವನ್ನನುಭವಿಸಿ ಭೂಮಿಯಲ್ಲಿ ಬಾಳು” ಎಂದು ಶಾಪವಿತ್ತನು. ಇಲ್ಲಿ ನಾವು ತಿಳಿಯಬೇಕಾದ ಒಂದು ಅಂಶವೆಂದರೆ ದೇವತೆಗಳ ಅಥವಾ ಮಹಾ ತಪಸ್ವಿಗಳ ಶಾಪದ ಹಿಂದೆ ಏನೋ ಒಂದು ಲೋಕ ಕಲ್ಯಾಣವಿದೆ.ಅದು ಪ್ರತ್ಯಕ್ಷವಾಗಿರಬಹುದು ಅಥವಾ ಪರೀಕ್ಷೆಯಾಗಿರಬಹುದು. ಇದಕ್ಕಾಗಿಯೇ ಲೋಕದಲ್ಲಿ ‘ಊರ್ವಶಿ ಶಾಪ ಊರಿಗೆ ಉಪಕಾರ’ ಎಂದು ನಾಣ್ನುಡಿಯೂ ಇದೆ.
ಒಂದು ಬಾರಿ ಪವಿತ್ರವಾದ ಸರಸ್ವತೀ ನದಿ ತೀರದಲ್ಲಿ ಮಹಾ ಋಷಿಗಳೆಲ್ಲ ಸೇರಿ ಹಲವಾರು ಶಾಸ್ತ್ರ ನಿರ್ಣಯಗಳ ಕುರಿತು ಚರ್ಚಿಸುತ್ತಿದ್ದಾಗ ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ಯಾರು ಶ್ರೇಷ್ಠರು? ಎಂಬ ಕುರಿತು ವಿವಾದಕ್ಕೆ ಬಿತ್ತು. ಸರಿ, ಚರ್ಚೆ ಮಾಡುವುದರಿಂದ ಪ್ರಯೋಜನ ವಿಲ್ಲ. ಪರೀಕ್ಷಿಸಿಯೇ ತೀರ್ಮಾನಕ್ಕೆ ಬರೋಣ ಎಂಬ ಒಮ್ಮತದಿಂದ ಬ್ರಹ್ಮ ಮಾನಸ ಪುತ್ರನಾದ ಭೃಗು ಮಹರ್ಷಿಯನ್ನೇ ಸತ್ವ ಪರೀಕ್ಷೆಗೆ ಕಳುಹಿಸಿಕೊಟ್ಟರು. ಭೃಗು ಮಹರ್ಷಿಯು ತನ್ನ ಕಾರ್ಯವನ್ನು ಹೇಗೆ ರೂಪಿಸಬೇಕೆಂದು ಯೋಚಿಸುತ್ತಾ ಮೊದಲು ಬ್ರಹ್ಮನ ಸಭಾಮಂಟಪಕ್ಕೆ ಹೋದನು. ಭೃಗುವು ಬ್ರಹ್ಮನಿಗೆ ನಮಸ್ಕರಿಸುವುದಾಗಲೀ ಗೌರವ ತೋರುವುದಾಗಲೀ ಮಾಡಲಿಲ್ಲ. ಇದರಿಂದಾಗಿ ಬ್ರಹ್ಮ ಕೋಪದಿಂದ ಕಿಡಿ ಕಿಡಿಯಾದ. ಆದರೆ ತನ್ನ ಮಗನೇ ಅದ ಭೃಗುವು ಹೀಗೆ ವರ್ತಿಸಿದರೂ ತನ್ನ ಕೋಪವನ್ನು ತನ್ನಲ್ಲೇ ಅಡಗಿಸಿಕೊಂಡ. ಇದನ್ನರಿತ ಭೃಗು ಮುಂದೆ ಕೈಲಾಸಕ್ಕೆ ರುದ್ರನಲ್ಲಿಗೆ ಹೋದ.ಭಗವಾನ್ ಶಂಕರನು (ರುದ್ರ)ತನ್ನ ಸಹೋದರನಾದ ಭೃಗು ಮಹರ್ಷಿಯು ಬಂದುದನ್ನು ನೋಡಿ ಆನಂದದಿಂದ ಮೇಲೆದ್ದು ಆಲಿಂಗನ ಮಾಡಲು ಕೈ ಚಾಚಿದಾಗ ”ಧರ್ಮಕ್ಕೂ ಲೋಕ ಮರ್ಯಾದೆಗೂ ತಪ್ಪೆಸಗುತ್ತಿರುವೆ. ನಿನ್ನ ಈ ಪ್ರೇಮಾಲಿಂಗನ ನನಗೆ ಬೇಡ” ಎಂದು ನಿಷ್ಠುರದ ನುಡಿಗಳನ್ನಾಡಿ ಗದರಿಸಿ ಹೇಳಿದನು ಭೃಗು ಮುನಿ. ಶಿವನಿಗಾದರೋ ಭೃಗುಮುನಿಯ ನಿಂದನೆಯ ಮಾತುಗಳನ್ನು ಸಹಿಸುವುದಕ್ಕಾಗಲಿಲ್ಲ. ಕೂಡಲೇ ಶೂಲಾಯುಧವನ್ನೆತ್ತಿ ‘ನಿನ್ನನ್ನು ಈಗಲೇ ಸಂಹರಿಸುತ್ತೇನೆ’ ಎಂದನು. ಆಗ ಪಾರ್ವತಿಯು ಶಿವನನ್ನು ತಡೆದಳು.
ಅನಂತರ ಭೃಗು ಋಷಿಯು ವಿಷ್ಣುವಿನ ವೈಕುಂಠಕ್ಕೆ ಹೋಗುತ್ತಾನೆ. ಅಲ್ಲಿ ವಿಷ್ಣುವು ತನ್ನ ಮಡದಿ ಲಕ್ಷ್ಮಿದೇವಿಯ ತೊಡೆಯ ಮೇಲೆ ತಲೆಯಿಟ್ಟು ಮಲಗಿರುತ್ತಾ ಭೃಗುವನ್ನು ಗಮನಿಸಲಿಲ್ಲ. ಅದನ್ನು ಸಹಿಸದ ಭೃಗುವು ತನ್ನ ಕಾಲಿನಿಂದ ವಿಷ್ಣುವಿನ ವೃಕ್ಷಃಸ್ಥಳಕ್ಕೇ ಒದೆಯುತ್ತಾನೆ. ಇದರಿಂದ ವಿಷ್ಣುವು ಕೋಪಗೊಳ್ಳಲಿಲ್ಲ. ಬದಲಾಗಿ ಲಕ್ಷ್ಮಿದೇವಿ ಸಹಿತ ಮೇಲೆದ್ದು “ಬ್ರಾಹ್ಮಣ ಶ್ರೇಷ್ಠನೇ ತಮ್ಮ ಶುಭಾಗಮನವನ್ನು ಗಮನಿಸದೆ,ತಮಗೆ ಸ್ವಾಗತ ವ್ಯವಸ್ಥೆಯನ್ನು ಮಾಡದೆ ತಪ್ಪೆಸಗಿದ್ದೇನೆ.ವಜ್ರದಷ್ಟು ಕಠಿಣವಾದ ನನ್ನ ಎದೆಗೆ ಒದೆದು ತಮ್ಮ ಕೋಮಲವಾದ ಪಾದಕ್ಕೆ ನೋವಾಗಿರಬಹುದು.ನನ್ನಿಂದಾದ ಅಚಾತುರ್ಯಕ್ಕೆ ಬಹಳ ಖೇದಗೊಂಡು ಕ್ಷಮೆ ಕೋರುತ್ತಾ ಇದ್ದೇನೆ” ಎಂದು ಋಷಿಯ ಪಾದಗಳನ್ನು ನೀವುತ್ತಾ ವಿಷ್ಣುವು ಹೇಳುತ್ತಾನೆ.
ವಿಷ್ಣು ಸಾನ್ನಿಧ್ಯದಿಂದ ಸಂತುಷ್ಟನಾಗಿ ಹೊರಟ ಭೃಗುವು ವಾಪಾಸು ಋಷಿಮುನಿಗಳ ಕೂಡಿವಿಕೆಯಾದ ಸರಸ್ವತೀ ನದೀ ತೀರಕ್ಕೆ ಬಂದು ತ್ರಿಮೂರ್ತಿಗಳಲ್ಲಿ ತನಗಾದ ಅನುಭವಗಳನ್ನು ಹೇಳಿದಾಗ ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ವಿಷ್ಣುವೇ ಶ್ರೇಷ್ಠನೆಂಬ ತೀರ್ಮಾನಕ್ಕೆ ಬರುತ್ತಾರೆ. ಎಷ್ಟೊಂದು ಶಕ್ತಿ! ನಿಜವಾದ ತಪಸ್ವಿಗಳಿಗೆ! ದೇವರನ್ನೂ ಪರೀಕ್ಷಿಸುವ ಅವಕಾಶವೇ! ಎಂದಾಗ ಈ ಪುರಾಣ ಪುರುಷರ ಬಗ್ಗೆ ಪರಮಾಶ್ಚರ್ಯವಾಗುತ್ತದೆಯಲ್ಲವೇ?.
-ವಿಜಯಾಸುಬ್ರಹ್ಮಣ್ಯ, ಕುಂಬಳೆ
ಪುರಾಣ ಕತೆಯನ್ನು ಬಹಳ ಚೆನ್ನಾಗಿ ನಿರೂಪಿಸಿದಿರಿ
ಅತ್ತೆ
ಬೃಗು ಖುಷಿ ಯ ಕಥೆಯಲ್ಲಿ ವಿಷ್ಣು ಕೋಪಗೊಳ್ಳದಿದ್ದರೂ..
ಲಕ್ಷ್ಮಿ …ಕನಲಿ ..ಆ ಖುಷಿ ಗೆ ಶಾಪಕೊಡುತ್ತಾಳೆಂದು ಓದಿದ ನೆನಪು…ಇಲ್ಲಿ ಆ ಪ್ರಸಂಗ ಬಂದಿಲ್ಲ….ಅದು ಬೇರೆ ಸಂದರ್ಭದಲ್ಲಾ ತಿಳಿಯಲಿಲ್ಲ… ವಿಜಯಾ ಮೇಡಂ.
ಗೊತ್ತಿದ್ದರೆ..ತಿಳಿಸಿ…
ಚೆನ್ನಾಗಿದೆ
ವಿಷ್ಣುವಿನ ಎದೆಗೊದ್ದ ಭೃಗು ಮಹರ್ಷಿಯ ಪಾದದ ಅಡಿಭಾಗದಲ್ಲಿದ್ದ ಗರ್ವದ ಕಣ್ಣನ್ನು ಹರಿಯು ಚಿವುಟಿ ತೆಗೆದ ಬಳಿಕ ಭೃಗುವ ಕೋಪ ತಣಿಯಿತು ಎಂದು ಓದಿದ ನೆನಪು…ಅದು ಬೇರೆ ಕಥೆ ಇರಲೂ ಬಹುದು. ಎಂದಿನಂತೆ ಚಂದದ ಕಥೆ..
ಚಂದದ ಕಥೆ.