‘ಕಾಫಿಗೂ ಡಿಗ್ರಿ ಕೊಡ್ತಾರೆ’ ಲಲಿತ ಪ್ರಬಂಧಗಳ ಸಂಕಲನ-ಲೇಖಕರು: ಶ್ರೀಮತಿ ಡಾ. ಸುಧಾ.

Share Button


ಶ್ರೀಮತಿ ಸುಧಾರವರು ಪ್ರಾಣಿಶಾಸ್ತ್ರದಲ್ಲಿ ಪಿ.ಎಚ್.ಡಿ., ಪದವೀಧರರು. ಇವರು ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ನಂತರ ಪ್ರಾಂಶುಪಾಲರಾಗಿ ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ತಜ್ಞರಾಗಿರುವ ಇವರ ಇನ್ನೊಂದು ಹವ್ಯಾಸ ಸಾಹಿತ್ಯ. ಪ್ರಾಣಿಶಾಸ್ತ್ರದಲ್ಲಿ ಹಲವು ಕೃತಿಗಳನ್ನು ಈಗಾಗಲೇ ರಚಿಸಿರುವ ಇವರು ಕನ್ನಡದಲ್ಲಿ ಪ್ರವಾಸ ಕಥನ, ಮಕ್ಕಳ ಸಾಹಿತ್ಯ, ಪ್ರಬಂಧಗಳನ್ನು ರಚಿಸಿದ್ದಾರೆ. ಇವರು ಒಳ್ಳೆಯ ಓದುಗರಾದ್ದರಿಂದ ಅನೇಕ ವಿಷಯಗಳ ಬಗ್ಗೆ ಅಧಿಕೃತವಾಗಿ ಬರೆಯಬಲ್ಲ ಶಕ್ತಿಯಿದೆಯೆಂಬುದು ಇವರ ಕೃತಿಗಳನ್ನು ಓದಿದವರಿಗೆ ಮನವರಿಕೆಯಾಗುತ್ತದೆ. ಇವರು ಬರೆದಿರುವ ಲಲಿತ ಪ್ರಬಂಧಗಳ ಸಂಕಲನ ‘ಕಾಫಿಗೂ ಡಿಗ್ರಿ ಕೊಡ್ತಾರೆ‘ ಇದಕ್ಕೆ ನಿದರ್ಶನದಂತಿದೆ. ಲಲಿತ ಪ್ರಬಂಧಗಳು ಅವುಗಳ ನಿರುಪಣಾ ಶೈಲಿಯಿಂದ ವಿಶಿಷ್ಟವಾಗುತ್ತವೆ. ನೋಡುವ, ಓದುವ, ಚರ್ಚಿಸುವ ವಿಷಯಗಳನ್ನು ಸರಸಮಯವಾಗಿ ಓದುಗರಿಗೆ ಮಾಹಿತಿಯೊಂದಿಗೆ ಒದಗಿಸಿ ಮುದವನ್ನು ನೀಡುತ್ತವೆ. ಕನ್ನಡದಲ್ಲಿ ಲಲಿತ ಪ್ರಬಂಧಗಳ ಸಂಖ್ಯೆ ವಿರಳವಾಗಿವೆ. ಆದ್ದರಿಂದ ವಿಜ್ಞಾನ ಲೇಖಕರು, ಮತ್ತು ಪ್ರಾಧ್ಯಾಪಕರಿಂದ ಹೊರಬಂದಿರುವ ಈ ಲಲಿತ ಪ್ರಬಂಧಗಳ ಕೃತಿಯು ಶ್ಲಾಘನೀಯ ಪ್ರಯತ್ನವಾಗಿದೆ.

ಈ ಸಂಕಲನದಲ್ಲಿ ಮೂವತ್ತು ಪ್ರಬಂಧಗಳಿವೆ. ಒಂದೊಂದೂ ವೈವಿಧ್ಯಮಯ ವಿಷಯಗಳನ್ನು ಕುರಿತದ್ದಾಗಿವೆ. ಸಾಮಾನ್ಯವಾಗಿ ಇವರ ಲೇಖನದಲ್ಲಿ ಕಂಡುಬರುವ ಮುಖ್ಯ ಅಂಶವೆಂದರೆ ಪ್ರತಿಯೊಂದು ವಿಷಯವನ್ನೂ ಸೂಕ್ಷ್ಮವಾಗಿ ಅವಲೋಕಿಸುವುದು, ಅದಕ್ಕೆ ಸಂಬಂಧಿಸಿದ ಮಾಹಿತಿಗಳು ಬೇರೆಡೆಯಲ್ಲಿದ್ದರೆ ಅದನ್ನು ಸಂಗ್ರಹಿಸಿ ಉಪಯೋಗಿಸುವುದು. ಇದರಿಂದ ಇವರ ಅಧ್ಯಯನದ ವ್ಯಾಪ್ತಿ ವಿಶಾಲವಾದುದು ಎಂದರ್ಥವಾಗುತ್ತದೆ.

ತಮಿಳುನಾಡಿನ ಕುಂಭಕೋಣಂ ಎಂಬಲ್ಲಿ ‘ಡಿಗ್ರಿಕಾಫಿ’ ಎಂಬುದನ್ನು ಕೇಳಿದ್ದಾರೆ. ಅದರ ಮೂಲವನ್ನು ಹುಡುಕಾಡಿ ಹೆಕ್ಕಿ ತೆರೆಯಲಾಗಿದೆ. ಈ ಪ್ರಯತ್ನ ಕುತೂಹಲ ತಣಿಸುತ್ತದೆ. ಇದೇ ಲೇಖನದಲ್ಲಿ ಇವರು ‘ಸಾಂಬಾರ್‘ ಮತ್ತು ‘ಮೈಸೂರುಪಾಕ್’ ಹೆಸರುಗಳು ಉತ್ಪನ್ನವಾದ ಬಗ್ಗೆ ಕೂಡ ಚರ್ಚಿಸಿದ್ದಾರೆ. ನಾವೂ ಈ ಸ್ಥಳದಲ್ಲಿ ಓಡಾಡಿದ್ದರೂ ನಮಗೆ ಈ ಕುತೂಹಲ ಬರಲಿಲ್ಲವೆಂದರೆ ಡಾ.ಸುಧಾರವರ ಚಿಕಿತ್ಸಕ ಮನಸ್ಸಿನ ಅರಿವಾಗುತ್ತದೆ.

ದಿನನಿತ್ಯ ಎಲ್ಲರೂ ಬಳಸುವ ‘ಅಡ್ಜಸ್ಟ್ ಮಾಡ್ಕೊಳ್ಳಿ’ ಪದದ ವ್ಯಾಪ್ತಿ ಈಗಿನ ಕುಟುಂಬಗಳಲ್ಲಿ ಅತ್ತೆ ಸೊಸೆ, ಗಂಡ ಹೆಂಡತಿ, ನಡುವಿನ ಸಂಬಂಧಗಳಿಗೂ ಅನ್ವಯಿಸುತ್ತದೆ ಎಂದಿದ್ದಾರೆ. ಪ್ರಾಧ್ಯಾಪಕರಾಗಿದ್ದ ಇವರು ಪರೀಕ್ಷಾ ಕೊಠಡಿಯಲ್ಲಿ ಹಿಂದಿನ ಬೆಂಚಿನಲ್ಲಿ ಕುಳಿತ ವಿದ್ಯಾರ್ಥಿ ಮುಂದಿನವನು ಬರೆದಿದ್ದನ್ನು ನಕಲು ಮಾಡಲು ಅನುಕೂಲವಾಗುವಂತೆ ಇಬ್ಬರೂ ಅಡ್ಜಸ್ಟ್ ಮಾಡಿ ಕುಳಿತುಕೊಳ್ಳುವುದೂ ಉಂಟೆಂದು ಹೇಳುತ್ತಾರೆ.

ಗಂಟಿನನಂಟಿನ ಬಗ್ಗೆ ಇವರು ನೀಡುವ ಮಾಹಿತಿ ಅಶ್ಚರ್ಯ ಹುಟ್ಟಿಸುತ್ತದೆ. ಕಸೂತಿಕಲೆಯಲ್ಲಿ, ಹೆಣಿಗೆ ಕಲೆಯಲ್ಲಿ, ಸ್ಕೌಟಿನಲ್ಲಿ ಹೇಳಿಕೊಡುವ ವಿವಿಧ ಗಂಟುಗಳ ಬಳಕೆ, ಗೃಹಿಣಿ ಮುದ್ದೆ ತಯಾರಿಸುವಾಗ ಮತ್ತು ಯಾವುದೇ ಹಿಟ್ಟು ಕಲೆಸುವಾಗ ಗಂಟಾಗಬಾರದೆಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಬ್ರಹ್ಮಗಂಟು, ಕಗ್ಗಂಟು, ಮುಖಗಂಟು ಹಾಕಿಕೊಳ್ಳುವುದು, ಹೆರಳನ್ನು ವಿವಿಧ ರೀತಿಯಲ್ಲಿ ಗಂಟು ಹಾಕಿಕೊಳ್ಳುವುದು, ವಯಸ್ಸಾದವರಿಗೆ ಉಂಟಾಗುವ ಗಂಟುಗಳಲ್ಲಿ ನೋವು , ಕೊನೆಗೆ ಅಪರಾಧಿಯನ್ನು ನೇಣಿಗೆ ಏರಿಸುವಾಗಲೂ ಕತ್ತಿಗೆ ಹಾಕುವ ಹಗ್ಗದ ಗಂಟಿನವರೆಗೆ ಅತ್ಯಂತ ಉಪಯುಕ್ತ ಮಾಹಿತಿಯನ್ನೇ ತೆರೆದಿಟ್ಟಿದ್ದಾರೆ.

ನಮ್ಮ ಬಾಲ್ಯದಲ್ಲಿ ಬೀದಿಯಲ್ಲಿ ಕೂಗುತ್ತಾ ಬರುತ್ತಿದ್ದ ಕಲಾಯಿ ಮಾಡುವವರ ಬಗ್ಗೆ ಬರೆಯುತ್ತಾ ಅಂದು ಮನೆ ಬಾಗಿಲಲ್ಲೇ ದೊರೆಯುತ್ತಿದ್ದ ಅನೇಕ ಸೇವೆಗಳು ಮರೆಯಾಗಿ ಈಗ ಹಿತ್ತಾಳೆ ಪಾತ್ರೆಗಳ ಬಳಕೆಯಲ್ಲಿಲ್ಲದೆ ಎಲ್ಲವೂ ಆನ್‌ಲೈನಿನಲ್ಲೇ ದೊರಕುವಂತಾಗಿದೆ ಎಂದು ಮರೆಯಾದ ಹಳೆಯ ಅನುಭವಗಳ ಬಗ್ಗೆ ವಿಷಾದ ವ್ಯಕ್ತ ಪಡಿಸಿದ್ದಾರೆ.

ಕಣ್ಣು ವೈದ್ಯರಲ್ಲಿ ಪರೀಕ್ಷೆಗೆ ಹೋದಾಗ ಡ್ರಾಪ್ಸ್ ಹಾಕಿ ಕಣ್ಮುಚ್ಚಿ ಕೂರಿಸಿದಾಗ ಇವರ ಅಂತಃಚಕ್ಷುವಿಗೆ ಕಾಣಿಸುವ ವೈವಿಧ್ಯಮಯ ನೋಟಗಳ ಬಗ್ಗೆ ಹೇಳುತ್ತಾ ಕಣ್ಣಿನ ನೋಟದಲ್ಲಿನ ಬಗೆಗಳ ಮಾಹಿತಿಯೊಂದಿಗೆ ಸಂಬಂಧಿಸಿದ ಒಂದು ಗಾದೆಮಾತನ್ನೂ ಸೇರಿಸಿ ಓದುಗರಿಗೆ ರಂಜನೆಯಾಗುವಂತೆ ಬರೆದಿದ್ದಾರೆ.

ನಮಸ್ಕಾರ ಹಿಂದೂಗಳಲ್ಲಿ ಒಂದು ಸಾಂಪ್ರದಾಯಕ ಗೌರವಸೂಚಕ ಆಚರಣೆ. ನಮಸ್ಕಾರಗಳಲ್ಲಿ ಎಷ್ಟು ವಿಧ, ಯಾವ್ಯಾವ ಸಂದರ್ಭದಲ್ಲಿ ಎಂಥಹ ರೀತಿಯಲ್ಲಿ ಇದನ್ನು ಮಾಡಬೇಕು. ಆಗ ಮನಸ್ಸಿನಲ್ಲಿ ಇರಬೇಕಾದ ಭಾವನೆ ಎಂಥಹುದು ಎಂಬುದರ ಮಾಹಿತಿಯೊಂದಿಗೆ ಭೀಷ್ಮರು ದಂಡನಾಯಕರಾಗಿದ್ದಾಗ ದುರ್ಯೋಧನನಿಗೆ ನೀಡಿದ್ದ ಒಂದು ವಚನವನ್ನು ದ್ರೌಪದಿಯ ಒಂದು ನಮಸ್ಕಾರ ಹೇಗೆ ಬದಲಾಯಿಸಿತು ಎಂಬ ಮಹತ್ವದ ವಿಷಯವನ್ನೂ ಸೊಗಸಾಗಿ ಉಲ್ಲೇಖಿಸಿದ್ದಾರೆ.

ಒಂದು ಕಾಲದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ‘ಹೀರೋಪೆನ್’ ಕಾಣೆಯಾಗಿದ್ದರ ಬಗ್ಗೆ ನೀಡಿದ್ದ ಪ್ರಕಟಣೆ ನಗೆಯುಕ್ಕಿಸುತ್ತಲೇ ಪ್ರಾರಂಭವಾದ ಪ್ರಬಂಧ ತಾವು ಅಧ್ಯಾಪಕರಾಗಿದ್ದಾಗ ವಿದ್ಯಾರ್ಥಿಗೆ ಹೇಳಿಕೊಟ್ಟ ‘ಡಿಸೆಕ್ಷನೆ’ ಪ್ರಯೋಗಕ್ಕೆ ಆತ ಕೃತಜ್ಞತೆ ಹೇಗೆ ಹಾಸ್ಯಾಸ್ಪದವಾಗಿ ಸಲ್ಲಿಸಿದ ಎಂದು ಪದಗಳ ಪ್ರಯೋಗದ ಅಚಾತುರ್ಯ ಹೇಗಾಗುತ್ತದೆ ಎಂದು ಹೇಳಿದ ಪರಿ ಸೊಗಸಾಗಿದೆ.
ನಿದ್ರೆ ಎಂಬುದು ಸಕಲ ಪ್ರಾಣಿಗಳಿಗೂ ಅತ್ಯಗತ್ಯವೆಂಬುದನ್ನು ಹೇಳುತ್ತಾ ಪ್ರಾಣಿ ಜಗತ್ತಿನಲ್ಲಿ ಜೀವಜಂತುಗಳು ನಿದ್ರೆಗೆ ತಮ್ಮದೇ ಆದ ವೈವಿಧ್ಯಮಯ ಕ್ರಮಗಳನ್ನು ಅನುಸರಿಸುತ್ತವೆಂದು ನೀಡಿರುವ ಮಾಹಿತಿ ಉಪಯುಕ್ತವಾಗಿದೆ. ನಿದ್ರೆಯಿಂದ ದೇಹಾಯಾಸ ಕಡಿಮೆಯಾಗಿ ನವಚೈತನ್ಯ ದೊರಕುತ್ತದೆ. ಆದರೆ ಇದು ಮಿತಿ ಮೀರಿದರೆ ಕುಂಭಕರ್ಣನಂತೆ ಹಾನಿಯನ್ನೂ ಮಾಡಬಲ್ಲುದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

‘ಮೌನದ ಮಾತು‘ ಹೆಸರಿನಲ್ಲೇ ಮೌನದ ಮಹತ್ವವನ್ನು ತೋರಿಸಿದೆ. ವ್ಯಕ್ತಿಗಳ ನಡುವೆ ಸಂವಹನಕ್ಕಾಗಿ ಮಾತು ಅಗತ್ಯವಾದರೂ ಅದು ಮಿತಿಮೀರಬಾರದು, ಹಾನಿಯನ್ನುಂಟುಮಾಡಬಾರದು ಎಂದಿದ್ದಾರೆ. ಈ ಬಗ್ಗೆ ಶರಣರ ನುಡಿ, ತಿಳಿದವರ ಹೇಳಿಕೆಗಳನ್ನು ಉಲ್ಲೇಖಿಸಿ ಮಾತನ್ನು ಸಕಾರಣಕ್ಕಾಗಿ ಮಾತ್ರ ಬಳಸಬೇಕೆಂದಿದ್ದಾರೆ. ನಿಸರ್ಗದ ಪ್ರಶಾಂತ ಮೌನದ ವಾತಾವರಣ, ಧ್ಯಾನದ ಧಾರಣಮೌನ ಎಲ್ಲವೂ ಪ್ರಧಾನವಾದವು ಎಂದು ಹಲವಾರು ಉದಾಹರಣೆಗಳೊಂದಿಗೆ ವಿವರಿಸಿದ್ದಾರೆ.

‘ಕೆಲವಂ ಕಲಿಯದವರಿಂದ ಕಲ್ತು‘ ಒಂದು ಮಾರ್ಮಿಕವಾದ ಬೋಧಪ್ರದ ಪ್ರಬಂಧ. ಅಕ್ಷರಜ್ಞಾನವೊಂದೇ ಜ್ಞಾನವಲ್ಲ, ಪ್ರಾಪಂಚಿಕ ಅನುಭವಗಳಿಂದ ಕಲಿಯುವುದು ಅಗಾಧವಾಗಿದೆ ಎಂದು ತಿಳಿಸುವ ಪರಿ ಸೊಗಸಾಗಿದೆ. ಗುರುತಿಸಲು ಊರಿಗೊಂದು ಹೆಸರು ಇದ್ದೇ ಇರುತ್ತದೆ. ಕೆಲವು ಊರುಗಳ ಹೆಸರು ಬಂದ ರೀತಿಯ ಹಿಂದೆ ಕಥೆ, ಇತಿಹಾಸಗಳಿರಬಹುದು, ಅದೇ ರೀತಿ ದೇಶಿಕತೆಗನುಗುಣವಾಗಿ ವೈವಿಧ್ಯಮಯ ಹೆಸರುಗಳನ್ನು ಹೇಗೆ ಬಳಸುತ್ತಾರೆ ಎಂದು ತಮ್ಮ ಪ್ರವಾಸಕಾಲದಲ್ಲಿ ಅರಿವಿಗೆ ಬಂದ ಹಲವು ಹೆಸರುಗಳ ವೈಶಿಷ್ಟ್ಯಗಳನ್ನು ಗುರುತಿಸುತ್ತಾರೆ.

ಬಾಲ್ಯಕಾಲದ ಶಾಲಾದಿನಗಳಲ್ಲಿ ಬಳಪ, ಸ್ಲೇಟು, ಪೆನ್ಸಿಲ್ಗಳ ಒಡನಾಟ ಸಾಮಾನ್ಯವಾದುದು. ಡಾ.ಸುಧಾರವರು ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಲೇಖನವೊಂದರಲ್ಲಿ ಗುರುರಾಜರೆಂಬುವರು ಪೆನ್ಸಿಲ್ಲನ್ನು ನಮ್ಮ ಜೀವನಕ್ಕೆ ಹೋಲಿಕೆ ಮಾಡಿದ್ದುದನ್ನು ಪ್ರಸ್ತಾಪಿಸುತ್ತಾರೆ. ಪೆನ್ಸಿಲ್ ತನಗೆ ತಾನೆ ಬರೆಯುವುದಿಲ್ಲ. ಅದನ್ನು ಹಿಡಿಯುವ ಕೈ ಬೇಕು. ಅದರಂತೆ ಭಗವಂತನೂ ನಮ್ಮ ಕೈಹಿಡಿದು ನಡೆಸುತ್ತಾನೆ. ಕೆಲವು ಸಾರಿ ಬರೆದುದು ತಪ್ಪಾದರೆ ರಬ್ಬರಿನಿಂದ ಅಳಿಸಿ ಸರಿಯಾಗಿ ಬರೆಯುವಂತೆ ನಾವೂ ಜೀವನದಲ್ಲಿ ಮಾಡುವ ತಪ್ಪನ್ನು ತಿದ್ದಿಕೊಳ್ಳಲು ಅವಕಾಶವಿರುತ್ತದೆ ಆಗ ಸರಿಪಡಿಸಿಕೊಳ್ಳಬೇಕು. ಪೆನ್ಸಿಲ್ಲಿನ ಸೀಸ ಮೊಂಡಾದರೆ ಮತ್ತೆ ಚೂಪು ಮಾಡಿಕೊಳ್ಳುವಂತೆ ನಾವೂ ಚುರುಕುಗೊಳ್ಳಬೇಕು. ಪೆನ್ಸಿಲ್ಲಿನ ಬರಹ ಹಾಳೆಯ ಮೇಲೆ ಗುರುತು ಮೂಡಿಸುವಂತೆ ನಾವೂ ನಮ್ಮ ಜೀವನದ ರೀತಿಯು ಬೇರೆಯವರಿಗೆ ಮಾರ್ಗದರ್ಶನವಾಗುವಂತೆ ಮಾದರಿಯಾಗಿಸಬೇಕು. ದಿನಗಳೆದಂತೆ ಸೀಸವು ಸವೆದು ಚಿಕ್ಕದಾಗುವಂತೆ ನಮ್ಮ ಜೀವನದ ಅವಧಿಯೂ ಕೂಡ. ಆದ್ದರಿಂದ ವ್ಯರ್ಥ ಕಾಲಹರಣ ಮಾಡದೆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಈ ಹೋಲಿಕೆ ಅತ್ಯಂತ ಸಮಂಜಸವಾಗಿದ್ದು ಎಲ್ಲರಿಗೂ ಮಾರ್ಗದರ್ಶನದಂತಿದೆ. ಓದಿದಾಗ ನಮಗೂ ಬಾಲ್ಯದ ನಮ್ಮ ನೆನಪುಗಳೂ ಮರುಕಳಿಸಿದಂತಾಯಿತು.

‘ಮಾತಿನ ಮಾತು’ ಒಂದು ಸಂಪೂರ್ಣ ವಿಮರ್ಶಾತ್ಮಕ ಲೇಖನವಾಗಿದೆ. ಮಾತು ಮನುಷ್ಯನಿಗೆ ದೇವರು ಕೊಟ್ಟ ವರ. ಆದರೆ ಅದರ ಉಪಯೋಗ ಹೇಗೆ? ಎಲ್ಲಿ ಮಾಡಬೇಕು? ಅದರ ಇತಿಮಿತಿ ಹೇಗಿರಬೇಕು? ಇದರ ಬಗ್ಗೆ ಶರಣರು, ಸರ್ವಜ್ಞ, ಪಂಡಿತೋತ್ತಮರು, ಏನೇನು ಹೇಳಿದ್ದಾರೆ? ಎಂಬುದನ್ನು ಹೇಳಲಾಗಿದೆ. ಜಗತ್ತಿನಲ್ಲಿ ಪ್ರಮುಖ ಭಾಷಣಕಾರರೆನ್ನಿಸಿಕೊಂಡ ವಿನಸ್ಟನ್ ಚರ್ಚಿಲ್, ಸಾಮರ್ ಸೆಟ್ ಮಾಮ್ ಉಗ್ಗು ತೊಂದರೆಯುಳ್ಳವರು. ತಮ್ಮ ನ್ಯೂನತೆಯನ್ನು ಮೆಟ್ಟಿ ಪ್ರಸಿದ್ಧರೆನಿಸಿದರು ಎಂದು ಉದಾಹರಿಸಿದ್ದಾರೆ.

ಬಣ್ಣಗಳ ಬಗ್ಗೆ ಪ್ರಬಂಧ ಒಂದು ಸಂಶೋಧನಾ ಲೇಖನ. ಪ್ರಪಂಚದಲ್ಲಿ ಗೊಚರಿಸುವ ಪ್ರಕೃತಿಯ ವೈವಿಧ್ಯಮಯ ಬಣ್ಣಗಳಿಂದ ಪ್ರಾರಂಭಿಸಿ ಬಣ್ಣಗಳ ಪ್ರಾಮುಖ್ಯತೆ, ಪಕ್ಷಿ, ಪ್ರಾಣಿ, ಕೀಟಗಳಲ್ಲಿ ಬಣ್ಣಗಳು ಹೇಗೆ ಉಪಯೋಗಿಸಲ್ಪಡುತ್ತವೆ. ಕಣ್ಣಿನಲ್ಲಿ ಬಣ್ಣಗಳು ಅರಿವಾಗಲು ಅಕ್ಷಿಪಟಲದಲ್ಲಿನ ಕೋಶಗಳು ಹೇಗೆ ಕೆಲಸ ಮಾಡುತ್ತವೆ. ಹೀಗೆ ಮಹತ್ವದ ಮಾಹಿತಿಗಳ ಭಂಡಾರವನ್ನೇ ಓದುಗರಿಗೆ ಒದಗಿಸಿದ್ದಾರೆ. ಆನಸಾಮಾನ್ಯರಲ್ಲಿ ಬಣ್ಣಕ್ಕೆ ಕೊಡುವ ಪ್ರಾಮುಖ್ಯತೆಯನ್ನೂ ಮರೆತಿಲ್ಲ. ಬಣ್ಣ ಬದಲಾಯಿಸಿಕೊಳ್ಳುವ ಗೋಸುಂಬೆಯನ್ನೂ, ಅಂತಹ ಮನುಷ್ಯರನ್ನೂ ಇಲ್ಲಿ ಹೆಸರಿಸಿದ್ದಾರೆ.

ಪಾದುಕಾ ಪುರಾಣದಲ್ಲಿ ಭರತನು ಶ್ರೀರಾಮನ ಪಾದುಕೆಗಳನ್ನು ಹದಿನಾಲ್ಕು ವರ್ಷ ಸಿಂಹಾಸನದಲ್ಲಿರಿಸಿ ಗೌರವಿಸಿದ ಕಥೆಯಿಂದ ಪ್ರಾರಂಭಿಸಿ ಪಾದರಕ್ಷೆ ಬೆಳೆದು ಬಂದ ಹಾದಿಯನ್ನು ಉಲ್ಲೇಖಿಸಿದ್ದಾರೆ. ಸುಮಾರು ನಲವತ್ತು ಸಾವಿರ ವರ್ಷಗಳ ಹಿಂದೆಯೇ ಪಾದರಕ್ಷೆಗಳು ಬಳಕೆಗೆ ಬಂದಿದ್ದವಂತೆ. ಕಾಲಕಾಲಕ್ಕೆ ಇವು ರೂಪಾಂತರ ಹೊಂದುತ್ತಾ ರಬ್ಬರಿನ ಹವಾಯಿ ಚಪ್ಪಲಿಯವರೆಗೆ ಸಾಗಿಬಂದ ಇತಿಹಾಸ ರೋಚಕವಾಗಿದೆ. ದೇವಸ್ಥಾನದಲ್ಲಿ ಇರಿಸಿದ ದೇವರ ಪಾದುಕೆಗಳಿಗೂ ನಾವು ನಮಸ್ಕರಿಸುತ್ತೇವೆ. ಇದನ್ನು ಮರೆಯುವಂತಿಲ್ಲ. ಇಲ್ಲಿ ಬಳಸಿರುವ ಸಾಂದರ್ಭಿಕ ಕತೆಗಳೂ ಕುತೂಹಲಕಾರಿಯಾಗಿವೆ.

ಮಳೆಯಿಂದ ಅಥವಾ ತೀವ್ರವಾದ ಬಿಸಲಿನಿಂದ ರಕ್ಷಣೆ ಪಡೆಯಲು ಛತ್ರಿಗಳನ್ನು ಬಳಸುವುದು ರೂಢಿಯಾಗಿದೆ. ಛತ್ರಿಗಳ ಉಗಮ ಹೇಗಾಯಿತು? ಅವುಗಳನ್ನು ಎಷ್ಟೆಷ್ಟು ರೀತಿಯಲ್ಲಿ ತಯಾರಿಸುತ್ತಾರೆ. ಛತ್ರಿಗಳಿಗೆ ಎಲ್ಲೆಲ್ಲಿ ಯಾವ ಸಂದರ್ಭಗಳಲ್ಲಿ ಮರ್ಯಾದೆ ಸಲ್ಲುತ್ತದೆ ಎಂಬುದು ಒಳ್ಳೆಯ ಮಾಹಿತಿ. ಈಗ ಬಂದಿರುವ ವರ್ಣಮಯವಾದ ಛತ್ರಿಗಳ ವರೆಗಿನ ಸುಧಾರಣೆಯ ಬಗ್ಗೆ ತಿಳಿಸಲಾಗಿದೆ.

ಸಮತೋಲನ ಬದುಕಿನಲ್ಲಿ ಎಷ್ಟು ಮುಖ್ಯ ಎಂಬುದನ್ನು ತಿಳಿಸಿದ್ದಾರೆ. ನಡೆಯಲ್ಲಿ, ನುಡಿಯಲ್ಲಿ, ಕಷ್ಟಸುಖ ಬಂದ ಕಾಲದಲ್ಲಿ, ಮನುಷ್ಯ ಸಮಸ್ಥಿತಿಯನ್ನು ಕಾಯ್ದುಕೊಳ್ಳಬೇಕು. ಹಾಗೇ ಪ್ರಕೃತಿಯಲ್ಲಿ ಕೂಡ ಸಮತೋಲನದ ಮಹತ್ವದ ಬಗ್ಗೆ ತಿಳಿಸಿದ್ದಾರೆ. ಇದರಲ್ಲಿ ಏನಾದರು ಏರುಪೇರಾದರೆ ಉಂಟಾಗುವ ಅನಾಹುತಗಳ ಬಗ್ಗೆ ಎಚ್ಚರಿಸಿದ್ದಾರೆ.

ಸಂತೋಷ ಯಾರಿಗೆ ಬೇಡ. ಅದರ ಹುಡುಕಾಟದಲ್ಲಿಯೇ ನಾವೆಲ್ಲ ಇರುವುದು. ಅದು ಹೇಗೆ, ಎಲ್ಲಿ ಲಭ್ಯವಾಗುತ್ತದೆ ಎಂದು ತಿಳಿಯಲು ಈ ಪ್ರಬಂಧ ಓದಿ. ಸಂತೋಷವೆಂಬುದು ಐಹಿಕವಾದುದು. ಆನಂದವೆಂಬುದು ಅಧ್ಯಾತ್ಮಿಕವಾದುದು. ಎರಡೂ ಮನಸ್ಸಿಗೆ ತೃಪ್ತಿ ನೀಡುತ್ತವೆ. ಇಲ್ಲಿ ಲೇಖಕರು ‘ರಸ್ಕಿನ್ ಬಾಂಡ್’ನ ವಾಕ್ಯಗಳನ್ನು ಉಲ್ಲೇಕಿಸಿರುವುದು ಸಮಯೋಚಿತವಾಗಿದೆ. ”ಸಂತೋಷದ ಕ್ಷಣಗಳು ಅತ್ಯಲ್ಪ. ಅವುಗಳನ್ನು ಆಸ್ವಾದಿಸು, ಏಕೆಂದರೆ ಅವು ಮತ್ತೆ ಮತ್ತೆ ಬಾರದಿರಬಹುದು ಎಂಥಹ ಸತ್ಯವಾಕ್ಯ”!

ಶ್ವಾನಪುರಾಣ ನಿಜಕ್ಕೂ ಮೆಚ್ಚುವಂತಿದೆ. ಸಾಕುಪ್ರಾಣಿಗಳಲ್ಲಿ ನಾಯಿಯಷ್ಟು ವಿಶ್ವಾಸಾರ್ಹವಾದುದು ಇನ್ನೊಂದಿಲ್ಲ. ಅದು ತನ್ನನ್ನು ಸಾಕಿದವರ ಮೇಲೆ ತೋರಿಸುವ ಪ್ರೀತಿ, ನಿಷ್ಠೆ ಪ್ರಶಂಸನೀಯ. ಅದರ ಬಗ್ಗೆ ಬಾಲ್ಯಕಾಲದಲ್ಲಿ ತಾವು ಓದಿದ ಆಂಗ್ಲ ಪದ್ಯ ಫಿಡೆಲಿಟಿ ಮತ್ತು ಜಪಾನಿನಲ್ಲಿ ತನ್ನ ಯಜಮಾನನಿಗಾಗಿ ಎಷ್ಟೋ ದಿನಗಳು ಸ್ಟೇಷನ್ನಿಗೆ ಬಂದು ಸಾಯುವವರೆಗೂ ಕಾಯುತ್ತಿದ್ದ ಸಾಕುನಾಯಿ ‘ಹಿಚಿಕೋ’ ಜ್ಞಾಪಕಾರ್ಥವಾಗಿ ಅದರ ಮೂರ್ತಿಯನ್ನು ರೈಲ್ವೆನಿಲ್ದಾಣದಲ್ಲಿ ಸ್ಥಾಪಿಸಿರುವ ಪ್ರಸಂಗಗಳು ಓದುಗರ ಕಣ್ಣನ್ನು ತೇವಗೊಳಿಸುತ್ತವೆ. ಈಗ ತರಬೇತಿ ಪಡೆದ ನಾಯಿಗಳು ಪೋಲೀಸ್ ಮತ್ತು ರಕ್ಷಣಾಪಡೆಯಲ್ಲಿ ಕಾರ್ಯ ನಿರ್ವಹಿಸುವ ಮಾಹಿತಿ ಹೆಮ್ಮೆ ತರುತ್ತದೆ.

ಮುಗ್ಧ ಮನಸ್ಸಿನ ದಿನಗಳು ಓದುತ್ತಿದ್ದಂತೆ ನಮಗೂ ನಮ್ಮ ಬಾಲ್ಯದ ದಿನಗಳು, ಗೆಳತಿಯರು, ಆಟಪಾಟಗಳು, ನಲಿವಿನ ಕ್ಷಣಗಳು, ಒತ್ತಡವಿಲ್ಲದ ಆ ದಿನಗಳ ಬದುಕು ಎಲ್ಲವೂ ನೆನಪಾಗಿ ಬಾಲ್ಯವೆಷ್ಟು ಸುಂದರವಾಗಿತ್ತು ಎಂದು ಮನಸ್ಸು ಮುದಗೊಳ್ಳುತ್ತದೆ.
ಈ ಸಮಯ ಅಡ್ಮಿಷನ್ ಸಮಯ, ಪ್ರಾಂಶುಪಾಲರಾಗಿದ್ದ ಲೇಖಕರು ಅಂದಿನ ಹಲವಾರು ತಮ್ಮ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ನಾಯಿ ಕೊಡೆಯಂತೆ ತಲೆಯೆತ್ತಿರುವ ಈ ಕಾಲದಲ್ಲಿ ಸರ್ಕಾರಿ ಕಾಲೇಜುಗಳಿಗೆ ಬರಬೇಕೆನ್ನುವವರ ಸಂಖ್ಯೆಯೇ ವಿರಳವಾಗಿದೆ. ವಿಷಾದವಾಗುತ್ತದೆ.

ಕಾದೂ..ಕಾದೂ.. ಒಂದು ವಾಸ್ತವ ಅನುಭವದ ಅನಾವರಣ. ಮಗುವಿನ ಜನನಕ್ಕಾಗಿ ಕಾಯುವುದರಿಂದ ಮೊದಲುಗೊಂಡು ಜೀವನದ ಎಲ್ಲಾ ಘಟನೆಗಳಲ್ಲೂ ಕಾಯುವುದು ಅನಿವಾಂiiವಾಗುತ್ತದೆ. ಕೊನೆಗೆ ವ್ಯಕ್ತಿ ತೀರಿಹೋದಾಗ ಬಂದಿದ್ದವರು ವ್ಯಕ್ತಿಯ ಅಂತ್ಯಸಂಸ್ಕಾರ ತಡವಾದರೆ ಹೆಣ ಕಾಯುವಂತಾಗುತ್ತದೆ. ಲೇಖಕರು ಇಲ್ಲಿ ಪುರಾಣದ ರಾಮನ ಬರುವಿಕೆಗಾಗಿ ಭರತ ಕಾಯುವುದು, ಭೀಷ್ಮಪಿತಾಮಹ ಸಾಯುವುದಕ್ಕೆ ಉತ್ತರಾಯಣ ಪುಣ್ಯಕಾಲಕ್ಕಾಗಿ ಕಾಯುವುದನ್ನು, ಪಾಂಡವರು ದ್ಯೂತದಲ್ಲಿ ಕಳೆದುಕೊಂಡ ರಾಜ್ಯವನ್ನು ಹಿಂಪಡೆಯಲು ಹನ್ನೆರಡು ವರ್ಷ ಅರಣ್ಯವಾಸ, ಒಂದುವರ್ಷ ಅಜ್ಞಾತ ವಾಸ ಮಾಡಿ ಅದು ಮುಗಿಯುದಕ್ಕಾಗಿ ಕಾಯುವುದನ್ನು ನೆನಪಿಸಿದ್ದಾರೆ.

ಬೋಧಗಯಾಕ್ಕೆ ಪ್ರವಾಸ ಹೋಗುವಾಗ ಆಕಸ್ಮಿಕವಾಗಿ ಭೇಟಿಯಾದ ಒಬ್ಬ ಮೂರನೆಯ ತರಗತಿಯ ಪುಟ್ಟ ಬಾಲಕ ಸಿದ್ಧಾರ್ಥ ಭಗವಾನ್ ಬುದ್ಧನ ಬೋಧನೆಯ ತತ್ವವನ್ನು ಸಲೀಸಾಗಿ ಎಲ್ಲರೂ ಒಂದು ದಿನ ಸಾಯುವುದು ಮತ್ತೆ ಹುಟ್ಟುವುದು ಗೊತ್ತಿದ್ದದ್ದೇ. ಅದಕ್ಕಾಗಿ ಯೋಚನೆಯೇಕೆ? ಎಂದು ಹೇಳುವುದು ಆಶ್ಚರ್ಯಕರ ಅನುಭವ.

ಹಳ್ಳಿಯ ಚಿತ್ರಗಳು ಈಗ ಬದಲಾಗಿವೆ. ದೂರದರ್ಶನ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿರುವ ಕೊನೆಯಿಲ್ಲದ ಧಾರಾವಾಹಿಗಳ ಪಾತ್ರಗಳು ಇದಕ್ಕೆ ಮುಖ್ಯ ಕಾರಣವಾಗಿವೆ ಎಂದಿದ್ದಾರೆ. ಈ ಪಾತ್ರಗಳು ಸೊಗಸುಗಾರಿಕೆಯೇ ಜೀವನ, ಇದಕ್ಕಾಗಿ ಏನುಬೇಕಾದರೂ ಮಾಡಿದರೂ ಸರಿಯೆಂದು ತೋರುವ ಬೋಧನೆ ಸಾಮಾನ್ಯರಲ್ಲಿ ಋಣಾತ್ಮಕ ನಂಬಿಕೆಗಳನ್ನು ಮೂಡಿಸುತ್ತಿವೆ. ಇದರಿಂದಾಗಿ ಗ್ರಾಮೀಣ ಬದುಕನ್ನು ಉತ್ತಮಪಡಿಸಲು ತೆಗೆದಕೊಂಡ ಸರ್ಕಾರದ ಕ್ರಮಗಳು ಹಳ್ಳ ಹಿಡಿದಿವೆಯೆಂದಿದ್ದಾರೆ.

ಲೇಖಕಿ ಪ್ರವಾಸಪ್ರಿಯರು. ಅವರೊಮ್ಮೆ ಚೀನಾದೇಶದ ಶಾಂಘೈ ನಗರಕ್ಕೆ ಹೋದಾಗ ತಮ್ಮ ಟೂರ್ ಬಸ್ಸನ್ನು ತಪ್ಪಿಸಿಕೊಂಡು ತಾವಿಳಿದುಕೊಂಡಿದ್ದ ಹೋಟೆಲಿಗೆ ತಲುಪಲು ಬಾಷೆ ತಿಳಿಯದ ಜನಗಳ ಮಧ್ಯೆ ಸಂದಿಗ್ಧವಾದಾಗ ಅವರಿಗೆ ನೆರವಾದವರು ಒಂದು ಪಾಕಿಸ್ತಾನಿ ಮತ್ತು ಒಂದು ಚೀನೀ ಕುಟುಂಬದವರು. ಆದರೆ ವಾಸ್ತವದಲ್ಲಿ ಅವೆರಡೂ ದೇಶಗಳೊಡನೆ ನಮ್ಮ ದೇಶದ ಸಂಬಂಧ ಚೆನ್ನಾಗಿಲ್ಲದಿದ್ದರೂ ಪ್ರವಾಸಿಗಳಾಗಿ ಹೋಗಿದ್ದ ತಮಗೆ ಸಹಾಯ ಮಾಡಿದ್ದನ್ನು ಸ್ಮರಿಸಿದ್ದಾರೆ.

ಮುಗ್ಧ ಮಕ್ಕಳ ಕೈಯಲ್ಲಿ ಮೊಬೈಲ್ ಫೋನ್. ಇದು ಈಗ ಸಾಮಾನ್ಯ ಪಿಡುಗಾಗಿದೆ. ಲೇಖಕಿ ಇದರ ದುಷ್ಪರಿಣಾಮಗಳ ಬಗ್ಗೆ ತಿಳಿಸಿ, ಇದರಿಂದಾಗಿ ಮಕ್ಕಳ ಬೆಳವಣಿಗೆಯು ಕುಂಠಿತವಾಗುತ್ತದೆ ಎಂದು ಚಿಂತನೆ ಮಾಡಿದ್ದಾರೆ. ಎಲ್ಲ ಪೋಷಕರಿಗೂ ಇದು ಎಚ್ಚರಿಕೆಯ ಗಂಟೆಯಾಗಿದೆ.

ಬದರೀನಾಥ ಕ್ಷೇತ್ರಕ್ಕೆ ಪ್ರವಾಸ ಹೋದಾಗ ಮಾರ್ಗ ಮಧ್ಯದಲ್ಲಿ ದುರ್ಗಮವಾದ ರಸ್ತೆಯಲ್ಲಿ ನಡೆದೇ ಹೋಗಬೇಕಾದ ಪರಿಸ್ಥಿತಿಯಲ್ಲಿ ಸಿಲುಕಿದಾಗ ಆಪದ್ಭಾಂಧವನಂತೆ ನೆರವಾದ ಒಬ್ಬ ಹುಡುಗನ ಬಗ್ಗೆ ಕೃತಜ್ಞತೆ ಅರ್ಪಿಸಿದ್ದಾರೆ. ನಾವು ಅಸಹಾಯಕರಾಗಿದ್ದಾಗ ಭಗವಂತ ಯಾವುದೋ ರೂಪದಲ್ಲಿ ಬಂದು ನೆರವು ಒದಗಿಸುತ್ತಾನೆ ಎಂಬುದಕ್ಕೆ ಇದು ನಿದರ್ಶನದಂತಿದೆ. ಪ್ರಾಣಿಶಾಸ್ತ್ರದಲ್ಲಿ ಪರಿಣತಿ ಪಡೆದಿರುವ ಲೇಖಕಿಗೆ ಅವರು ತಾತನ ಮನೆಗೆ ಹೋದಾಗ ಚೇಳಿನಿಂದ ಕುಟುಕಿಸಿಕೊಂಡು ನೋವನುಭವಿಸಿದ್ದsನ್ನು ನೆನಪಿಸಿಕೊಂಡಿದ್ದಾರೆ.

‘ಟುಡೈ ಆರ್ ನಾಟ್ ಟುಡೈ’. ಇತ್ತೀಚೆಗೆ ಬಾಲ್ಯದಲ್ಲೇ ಹಲವಾರು ಜನಗಳಿಗೆ ಕೂದಲು ನರೆಯುವುದನ್ನು ಕಾಣುತ್ತಿದ್ದೇವೆ. ಜೊತೆಗೆ ಸೌಂದರ್ಯ ಪ್ರಜ್ಞೆಯಲ್ಲಿ ಅಚ್ಚಕಪ್ಪು ಕೂದಲಿಗೆ ಪ್ರಮುಖ ಸ್ಥಾನ. ಅಂದ ಹೆಚ್ಚಿಸಿಕೊಳ್ಳಲು ಇಂಥಹವರು ಕೂದಲಿಗೆ ಬಣ್ಣ ಹಚ್ಚುವುದು ಸಾಮಾನ್ಯ ವಿಷಯ. ಇದು ಕಾಣುವುದಕ್ಕೆ ಚಂದವಾದರೂ ಕೃತಕ ಬಣ್ಣದಲ್ಲಿರುವ ರಾಸಾಯನಿಕವಸ್ತುಗಳು ಕೂದಲಿನ ಬುಡ ಸೇರಿ ಹಾನಿಕಾರಕ ಪರಿಣಾಮ ಉಂಟು ಮಾಡುತ್ತವೆ ಎಂದು ಎಚ್ಚರಿಸಿದ್ದಾರೆ. ಆದ್ದರಿಂದ ಬಣ್ಣ ಹಚ್ಚಿಕೊಳ್ಳುವುದೋ ಬಿಡುವುದೋ ಎಂಬುದನ್ನು ನಮ್ಮ ಆಯ್ಕೆಗೇ ಬಿಟ್ಟಿದ್ದಾರೆ.

ಮೂವತ್ತು ಪ್ರಬಂಧಗಳನ್ನೂ ಒಂದೇ ಸಾರಿಗೆ ಓದಿ ಮುಗಿಸಿಬಿಡಬಹುದು. ಅಷ್ಟು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಜೊತೆಗೆ ಲೇಖಕರು ಅನೇಕ ಉಪಯುಕ್ತ ಮಾಹಿತಿಗಳನ್ನು ತಮ್ಮ ಲೇಖನಗಳಲ್ಲಿ ಒದಗಿಸಿದ್ದಾರೆ. ಇದರಿಂದ ಓದುಗರ ಅರಿವೂ ಹೆಚ್ಚಾಗುತ್ತದೆ. ಅವರ ನಿರೂಪಣಾಶೈಲಿ ಸೊಗಸಾಗಿದೆ. ಇವರ ಸಾಹಿತ್ಯ ರಚನೆ ಮುಂದುವರಿದು ಇನ್ನಷ್ಟು ಉತ್ತಮ ಕೃತಿಗಳು ಹೊರಬರಲಿ ಎಂದು ಹೃದಯಪೂರ್ವಕವಾಗಿ ಶುಭ ಹಾರೈಸುತ್ತೇನೆ.

-ಬಿ.ಆರ್.ನಾಗರತ್ನ, ಮೈಸೂರು.

7 Responses

  1. S.sudha says:

    ನಾಗರತ್ನ ಅವರಿಗೆ ಅನೇಕ ವಂದನೆಗಳು. ಪ್ರಕಟಿಸಿದ ಹೇಮಮಾಲ ಅವರಿಗೆ ಕ್ರೃತಜ್ಞಳು.

  2. ನಯನ ಬಜಕೂಡ್ಲು says:

    ಚೆನ್ನಾಗಿದೆ ಪುಸ್ತಕ ಪರಿಚಯ

  3. ಧನ್ಯವಾದಗಳು ಸುಧಾ ಮೇಡಂ

  4. Padma Anand says:

    ಒಳ್ಳಯ ಪುಸ್ತಕ ಪರಿಚಯ. ವೈವಿಧ್ಯಮಯ ವಸ್ತುಗಳ ಸ್ಥೂಲವಾದ ಪರಿಚಯದೊಂದಿಗೆ ಓದುವ ಕುತೂಹಲವನ್ನು ಉಂಟುಮಾಡುವಂತೆ ಪುಸ್ತಕವನ್ನು ಲೇಖಕಿ ನಾಗರತ್ನ ಅವರು ಪರಿಚಯಿಸಿದ್ದಾರೆ. ಆರಿಸಿಕೊಂಡ ವಿಷಯಗಳು, ಅವುಗಳ ಕೌತುಕಮಯ ಶೀರ್ಷಿಕೆಗಳು ಪುಸ್ತಕ ಓದಲು ನಿಜಕ್ಕೂ ಪ್ರೇರೇಪಿಸುತ್ತವೆ. ಪುಸ್ತಕದ ಲೇಖಕಿ ಡಾ.ಸುಧಾ ಮತ್ತು ಪುಸ್ತಕವನ್ನು ಪರಿಚಯಿಸಿದ ಲೇಖಕಿ ಶ್ರೀಮತಿ ನಾಗರತ್ನ ಇಬ್ಬರಿಗೂ ಅಭಿನಂದನೆಗಳು.

  5. ಶಂಕರಿ ಶರ್ಮ says:

    ಸೊಗಸಾದ ಹೊತ್ತಗೆಯೊಂದರ ಕುರಿತು ಬರೆದ ವಿಮರ್ಶಾತ್ಮಕ ನುಡಿಗಳು ಚೆನ್ನಾಗಿವೆ. ಧನ್ಯವಾದಗಳು ನಾಗರತ್ನ ಮೇಡಂ ಅವರಿಗೆ.

  6. ಧನ್ಯವಾದಗಳು ಪದ್ಮಾ ಮತ್ತು ಶಂಕರಿ ಮೇಡಂ ಅವರುಗಳಿಗೆ

  7. ಧನ್ಯವಾದಗಳು ನಯನ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: