ಟೀಚರ್ಸ್ – ನ ಭೂತೋ ನ ಭವಿಷ್ಯತಿ
ಟೀ ಹೀರುತ್ತಾ ಕೂತಿದ್ದೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ಬೆಳಿಗ್ಗಿನಿಂದ ಶಾಲೆಯಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿತ್ತು. ಮಕ್ಕಳ ಶುಭಾಶಯಗಳು, ಅವರ ಸಡಗರ, ಸಂಭ್ರಮದ ಮಾತುಗಳು, ಶಿಕ್ಷಕರ ಬಗ್ಗೆ ಹೆಮ್ಮೆಯ ಭಾಷಣಗಳು, ಮಕ್ಕಳ ಆ ಮುಗ್ಧ ನಗು, ಶಾಲೆಯ ಹಳೆಯ ವಿದ್ಯಾರ್ಥಿಗಳು ಬಂದು ನಮಗೆ ಶುಭಾಶಯ ತಿಳಿಸುವ ಆ ಕ್ಷಣ, ಅತ್ಯಂತ ಹೃದಯ ಸ್ಪರ್ಶಿಯಾಗಿತ್ತು. ಅವರೊಟ್ಟಿಗಿದ್ದ ಪ್ರತಿ ಕ್ಷಣವೂ ಕಳೆದು ಹೋದ ನನ್ನ ಬಾಲ್ಯದ ಕ್ಷಣಗಳೇ ಆಗಿದ್ದವು.
ಆದರೆ, ಶಿಕ್ಷಕರ ಕುರಿತು ಸಮಾಜದಲ್ಲಿ ಬೆಳೆಯುತ್ತಿರುವ ಆಗೌರವದ ಬಗ್ಗೆ ನೆನೆಸಿಕೊಂಡಾಗ ಈ ವೃತ್ತಿಗೆ ಏಕಾದರೂ ಬಂದೆನೋ ಎಂಬ ಭಾವ ಹಗಲಿರುಳೂ ಕಾಡುತ್ತಿರುತ್ತದೆ.
ಸಮಾಜದಲ್ಲಿರುವ ಯಾವ ವೃತ್ತಿಯಲ್ಲಿಯೂ ತಲೆ ಹಾಕದ ಜನ, ನಮ್ಮ ವೃತ್ತಿಯಲ್ಲಿ ಅನಾವಶ್ಯಕವಾಗಿ ಮುಗು ತೂರಿಸಿ ಮಕ್ಕಳಿಗೆ ಹೇಗೆ ಪಾಠ ಕಲಿಸಬೇಕೆಂದು ಬೋಧಿಸುತ್ತಾರೆ. ಮನೆಯಲ್ಲೂ ಸಹ ಈ ವೃತ್ತಿಗೆ ಬೆಲೆ ಯಿಲ್ಲದಂತಾಗಿದೆ. ಸಣ್ಣ ಸಂಬಳದ, ಸಣ್ಣ ಕೆಲಸ ಮಾಡುವವರೆಂದು ಮೂದಲಿಸುವವರೇ ಹೆಚ್ಚು. ಎಲ್ಲೂ ಕೆಲಸ ಸಿಗದವರು ಟೀಚರ್ ಆಗುತ್ತಾರೆ ಎಂಬ ಭಾವನೆ ಯನ್ನು ಹೊರ ಹಾಕುತ್ತಾ, ಯಾರು ಬೇಕಾದರೂ ಶಿಕ್ಷಕ ರಾಗಬಹುದೆಂಬ ಭ್ರಮೆಯಲ್ಲಿ ಬದುಕುವವರ ಮಧ್ಯೆ ನಾವೂ ಬದುಕಬೇಕಾಗಿದೆ.
ತರಗತಿಯಲ್ಲಿ, ದೊಡ್ಡವರಾದ ಮೇಲೆ ನೀವೇನಾಗುತ್ತೀರ ಎಂದು ಕೇಳಿದಾಗಲೆಲ್ಲಾ, ಯಾರಾದರೊಬ್ಬರು ‘ಟೀಚರ್ ಆಗುತ್ತೇನೆ’ ಎಂದು ಹೇಳುತ್ತಾರೇನೋ ಎಂದು ವರ್ಷಗಟ್ಟಲೆ ಶಬರಿಯಂತೆ ಕಾದಿದ್ದೆ ಬಂತು. ಇನ್ನೂ ಅದನ್ನು ಕೇಳುವ ಭಾಗ್ಯ ದೊರೆತಿಲ್ಲ!
ಶಿಕ್ಷಕರಾಗುವುದು ತಪ್ಪೇ?! ದೊಡ್ಡ ಸಂಬಳದ ದೊಡ್ಡ ಕೆಲಸ ಗಿಟ್ಟಿಸಿಕೊಳ್ಳಲಾಗದ ಅಪ್ರಯೋಜಕರೇ ನಾವು? ನಾವು ಸಾಧಕರಾಗದೆ, ಸಾಧಕರನ್ನು ತಯಾರಿಸಲು ಸಾಧ್ಯವೇ? ಸಣ್ಣ ಸಂಬಳವಾದರೂ ಅತ್ಯಂತ ಗೌರವ ತಂದು ಕೊಡುವ ವೃತ್ತಿಯಲ್ಲವೇ ನಮ್ಮದು? ಹಾಗಿದ್ದರೆ ನನ್ನಲ್ಲಿ ಈ ಕ್ಲೇಶ, ಕಸಿವಿಸಿ, ಕೀಳರಿಮೆ ಏಕೆ? ಇವು ನನ್ನಲ್ಲೇ ಹುಟ್ಟಿತೇ ಅಥವಾ ಇದು ಸಮಾಜದ ಕೊಡುಗೆಯೇ? ಸಾಕು ಇನ್ನು, ಈ ಕೆಲಸ ಬಿಟ್ಟು ಬೇರೆ ಏನನ್ನಾದರೂ ಮಾಡೋಣ.
ಈ ರೀತಿಯ ಜಿಜ್ಞಾಸೆಯಲ್ಲಿ ಅನೇಕ ವರ್ಷಗಳೇ ಉರುಳಿ ಹೋದವು. ಸುದೀರ್ಘವಾದ ಆಲೋಚನೆಯಲ್ಲಿ ಮುಳುಗಿದ್ದ ನನಗೆ ಮೊಬೈಲ್ ಕರೆಯೊಂದು ಎಚ್ಚರಿಸಿತು.
‘ಹಲೋ ಸರಳಾ ಮಿಸ್ಸಾ? ನಾನು ವಸಂತ್ ಮಾತಾಡ್ತಾ ಇರೋದು. ಯಾರು ಅಂತ ಗೊತ್ತಾಯ್ತ? ಹೇಗಿದ್ದೀರಾ ಮಿಸ್’ ‘ ಆ ಕಡೆಯಿಂದ ಬಂದ ಧ್ವನಿಯಲ್ಲಿ ಅದೇನೋ ಆತ್ಮೀಯತೆ !
‘ಇಲ್ಲ…ಗೊತ್ತಾಗ್ಲಿಲ್ಲ…! ಯಾರು ನೀವು?’ ನಾನು ಕೇಳಿದೆ.
ಮಿಸ್ಸ್, ನಾನು ವಸಂತ್. ನಿಮ್ಮ ಸ್ಟೂಡೆಂಟ್. ೨೦೦೭-೮ ಹತ್ತನೇ ಕ್ಲಾಸ್ ಬ್ಯಾಚ್…. ವಸಂತ್ ಕುಲಕರ್ಣಿ… ನೆನಪಿದ್ಯಾ?….ಅದೇ ಮಿಸ್, ಒಂದ್ ಸಲ ನಮ್ ದೇಶದ ಬಾವುಟಾನ ಹರಿದು ಡಸ್ಟ್ ಬಿನ್ ಗೆ ಹಾಕಿದ್ದೆ. ಆಗ ನೀವು ನನ್ನ ಇಡೀ ಕ್ಲಾಸಲ್ಲಿ ಅಟ್ಟಾಡಿಸಿಕೊಂಡು ಹೊಡೆದಿದ್ರಿ. ನೆನಪಿದ್ಯಾ ಮಿಸ್” ಎಂದು ಅತ್ಯಂತ ಭಾವುಕನಾಗಿ ವಿವರಿಸತೊಡಗಿದ.
ನನ್ನ ನೆನಪಿನ ಬುತ್ತಿ ಅದಾಗಲೇ ಬಿಚ್ಚಿಕೊಳ್ಳತೊಡಗಿತ್ತು. ಆ ನೀಳ ಕಾಯದ, ಗೌರ ವರ್ಣದ, ತುಂಟ ನಗೆಯ ಹುಡುಗನ ಚಿತ್ರಣ ಕಣ್ಣ ಮುಂದೆ ಬಂದು ನಿಂತಿತು. “ಹಾ! ಗೊತ್ತಾಯ್ತು. ವಸಂತ, ಹೇಗಿದ್ಯಪ್ಪಾ? ಎಲ್ಲಿದ್ದಿ, ಏನ್ ಮಾಡ್ಕೊಂಡಿದ್ದಿ”? ನಾನೂ ಒಂದೇ ಸಮನೆ ಕೇಳ ತೊಡಗಿದೆ.
ಮಿಸ್, ನಾನು ಎಲ್ಲಿದ್ದೀನಿ ಅಂತ ನಿಮಗೆ ಹೇಳಿದ್ರೆ ನೀವು ಎಷ್ಟು ಖುಷಿ ಪಡ್ತೀರ ಗೊತ್ತಾ? ನಾನು ಇಂಡಿಯನ್ ಆರ್ಮಿಲಿ ಮೇಜರ್ ಆಗಿ ಕೆಲಸ ಮಾಡ್ತಿದ್ದೀನಿ. ಇದಕ್ಕೆ ನೀವೇ ಕಾರಣ ಮಿಸ್. ಯಾವಾಗ್ಲೂ ದೇಶಾನೇ ಸರ್ವ ಶ್ರೇಷ್ಠ, ದೇಶಾನೇ ಸರ್ವ ಪ್ರಥಮ ಅಂತ ಹೇಳ್ತಾ ಇದ್ರಿ. ನಮ್ಮ ದೇಶದ ಇತಿಹಾಸದ ಬಗ್ಗೆ ನೀವು ಪಾಠ ಮಾಡ್ತಾ ಯಿದ್ರೆ ನಮ್ಮ ದೇಶದ ಬಗ್ಗೆ ಭಕ್ತಿ, ಅಭಿಮಾನ ಉಕ್ಕಿ ಬರ್ತಿತ್ತು. ಸಿಯಾಚಿನ್ ಪ್ರದೇಶಕ್ಕೆ ನನಗೆ ಪೋಸ್ಟಿಂಗ್ ಆಗಿದೆ ಮಿಸ್. ನಾಳೆ ಹೊತ್ತಿಗೆ ಅಲ್ಲಿ ಹೋಗ್ಬೇಕು. ಹೋಗೋಕು ಮುಂಚೆ ನಿಮ್ಮ ಹತ್ರ ಒಂದು ಸಲ ಮಾತಾಡ್ಬೇಕು ಅಂತ ಅನಿಸ್ತು. ಅದಕ್ಕೆ ಮಾಡ್ದೆ’.
ನನಗೆ ಏನು ಹೇಳಬೇಕೆಂದು ತಿಳಿಯದೇ ಹೋಯಿತು. ನಾವು ಶಿಕ್ಷಕರು ಮಾಡುವ ಪಾಠ, ಮಕ್ಕಳ ಮೇಲೆ ಇಷ್ಟೊಂದು ಪ್ರಭಾವ ಬೀರಬಹುದೆಂಬ ಕಲ್ಪನೆಯೇ ನನಗಿರಲಿಲ್ಲ. ‘ ಹೌದೇನೋ ವಸಂತ? ಒಳ್ಳೆದಾಗಲಿ ನಿಂಗೆ. ಸಿಯಾಚಿನ್ ಅಪಾಯದ ಪ್ರದೇಶ ಅಂತ ಹೇಳ್ತಾರೆ. ಹುಷಾರಾಗಿರಪ್ಪಾ’ ಎಂದು ಹೇಳಿದ್ದೆ ತಡ,
‘ ಮಿಸ್ ನೀವೇನೂ ಯೋಚನೆ ಮಾಡ್ಬೇಡಿ. ಹುಷಾರಾಗಿರ್ತೀನಿ. ಅಕಸ್ಮಾತ್ ಏನಾರಾ ಆಯ್ತು ಅಂತಾನೆ ಇಟ್ಕೊಳ್ಳಿ, ನಾನೊಬ್ಬ ಹೋದ್ರೂನೂ, ನನ್ನಂಥ ಲಕ್ಷಾಂತರ ಸೈನಿಕರನ್ನು ಹುಟ್ಟು ಹಾಕುವ ಶಕ್ತಿ ನಿಮ್ಮಂತಹ ಶಿಕ್ಷಕರಿಗೆ ಇದೆ. ಈ ವಸಂತನ್ನ ಯಾವತ್ತೂ ಮರೀಬೇಡಿ ಮಿಸ್. ಓಹ್! ಆಗಲೇ ನಮ್ಮವರು ಹೊರಡ್ತಾಯಿದ್ದಾರೆ.. ಬರ್ತೀನಿ ಮಿಸ್….ಜೈ ಹಿಂದ್ ‘. ಎಂದು ಹೇಳುತ್ತಾ ಫೋನ್ ಕಟ್ ಮಾಡಿಯೇ ಬಿಟ್ಟ.
ಒಂದರೆಕ್ಷಣ ಮಿಂಚೊಂದು ಬಂದು ನನ್ನ ವೃತ್ತಿಯ ಬಗ್ಗೆ ನನಗಿದ್ದ ಜಿಜ್ಞಾಸೆಯನ್ನು ದೂರ ಮಾಡಿ, ಬಂದಷ್ಟೇ ವೇಗವಾಗಿ ಹೊರಟು ಹೋಯಿತು. ನನ್ನ ಜೀವನದಲ್ಲಿ ಅತ್ಯಂತ ಅವಿಸ್ಮರಣೀಯ ಕ್ಷಣ ಅದಾಗಿತ್ತು. ನನ್ನ ವೃತ್ತಿಯ ಬಗ್ಗೆ ಗೌರವ, ಹೆಮ್ಮೆ ಹಾಗು ಸಾರ್ಥಕ ಬದುಕಿನ ಅನುಭವವಾಯಿತು. ಓರ್ವ ಶಿಕ್ಷಕಿಗೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಯಾವುದಿದೆ?
ಶಾಲಾ ಕಾಲೇಜುಗಳು ವಿಜ್ಞಾನಿಗಳನ್ನು, ವೈದ್ಯರನ್ನು, ಲೆಕ್ಕಿಗರನ್ನು, ಭಾಷಣಕಾರರನ್ನು, ಸಂಗೀತಗಾರರನ್ನು, ನೃತ್ಯ-ನಾಟಕಕಾರರನ್ನು, ದೇಶ ಕಾಯ್ವ ಸೈನಿಕರನ್ನು, ಹೀಗೆ ಇನ್ನಿತರೆ ಸಮಾಜಮುಖಿ ಸಾಧಕರನ್ನು ಹುಟ್ಟು ಹಾಕುವ ಅಮೂಲ್ಯ ಕಾರ್ಖಾನೆಯೇ ಸರಿ!
ಕನ್ನಡಿಯ ಮುಂದೆ ನಿಂತು ಹೆಮ್ಮೆಯಿಂದ ನನ್ನನ್ನೇ ನಾನು ತದೇಕ ಚಿತ್ತದಿಂದ ನೋಡತೊಡಗಿದೆ. ಹೌದು, ಇನ್ನೊಬ್ಬರ ಜೀವನವನ್ನು ಸಕಾರಾತ್ಮಕವಾಗಿ ಬದಲಾಯಿಸುವ ಶಿಕ್ಷಕ ವೃತ್ತಿಯಂಥಹ ವೃತ್ತಿ ಭೂತ ಹಾಗು ಭವಿಷ್ಯತ್ ಕಾಲದಲ್ಲೆಲ್ಲೂ ಕಾಣಸಿಗುವುದಿಲ್ಲ.
–ಮಾಲಿನಿ ವಾದಿರಾಜ್
ಅದ್ಭುತ ವಿವರಣೆ….ನಮಗೂ ನಮ್ಮ ಶಿಕ್ಷಕ ವೃತ್ತಿ ಬಗ್ಗೆ ಇದೇ ಜಿಜ್ಞಾಸೆ ಇತ್ತು…..ಅಭಿನಂದನೆಗಳು ತಮಗೆ
ಬಹಳ ಸುಂದರವಾದ ಬರಹ. ಶಿಕ್ಷಕ ವೃತ್ತಿ ಒಂದು ಗೌರವಯುತವಾದ ಅಷ್ಟೇ ಜವಾಬ್ಧಾರಿಯುತವಾದ ವೃತ್ತಿ. ಒಂದು ಉತ್ತಮ ಸಮಾಜ ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ.
ಅರ್ಥಪೂರ್ಣ ವಾದ ಬರಹ..ಧನ್ಯವಾದಗಳು ಮೇಡಂ
ಮುಗ್ಧ ಮನಗಳಿಗೆ ಮೂರ್ತರೂಪ ನೀಡಿ ಕಡೆದು ಶಿಲ್ಪಿಗಳಾಗಿ ಮಾಡುವ ಶಿಕ್ಷಕ ವೃತ್ತಿ, ನಿಜಕ್ಕೂ ಸಾರ್ಥಕ ವೃತ್ತಿ. ಜೀವಮಾನ ಪೂರ್ತಿ ಎಲ್ಲೇ ಹೋದರೂ ಅವರನ್ನು ಗುರುತಿಸಿ ಅಭಿಮಾನದ ಕೃತಜ್ಞತೆಯನ್ನು ಅರ್ಪಿಸುವ ವಿದ್ಯಾರ್ಥಿಗಳು ಸಿಗುತ್ತಲೇ ಇರುತ್ತಾರೆ. ಶಿಕ್ಷಕ ವೃತ್ತಿಯ ಪಾವಿತ್ರತೆಯನ್ನು ಕಾಪಾಡಿಕೊಳ್ಳುವ ಗುರುತರ ಜವಾಬ್ದಾರಿ ಶಿಕ್ಷರ ಮೇಲಿದೆ. ಸುಂದರ ಲೇಖನಕ್ಕಾಗಿ ಅಭಿನಂದನೆಗಳು.
ಎಲ್ಲಾ ನೌಕರಿಗಳಿಗಿಂತ ಶಿಕ್ಷಕ ವೃತ್ತಿಯೆಂದರೆ ನನಗಂತೂ ತುಂಬಾ ಗೌರವ. ಲೇಖನ ತುಂಬಾ ಚೆನ್ನಾಗಿದೆ..ಮನಮುಟ್ಟುವಂತಿದೆ!
ಬಹಳ ಚೆನ್ನಾಗಿದೆ. ಶಿಕ್ಷಕ ರ ಪಾತ್ರ ದೊಡ್ಡ ದು.