ಪ್ರವಾಸ

ಜೂನ್ ನಲ್ಲಿ ಜೂಲೇ : ಹನಿ 9

Share Button

(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
‘ಸಿಂಧೂ ನದಿ ಕಣಿವೆ’  

ನಮ್ಮ ಪ್ರಯಾಣ ಮುಂದುವರಿದು,   ಹಿಮಾಲಯದ ಹಲವಾರು ಪುಟ್ಟ ಗ್ರಾಮಗಳನ್ನು ಹಾದು ಲೇಹ್ ನಿಂದ  84 ಕಿ.ಮೀ ದೂರದಲ್ಲಿರುವ ‘ಜಂಸ್ಕರ್’ ಕಣಿವೆಯನ್ನು ತಲಪಿದೆವು. ಇದು ಕಾರ್ಗಿಲ್ ಜಿಲ್ಲೆಗೆ ಸೇರಿದೆ.  ಅಲ್ಲಿ ಸಿಂಧೂ ನದಿ ಮತ್ತು ಜಂಸ್ಕರ್ ನದಿಯ ಸಂಗಮವನ್ನು ಕಾಣಬಹುದು. ಸಿಂಧೂನದಿಯ ನೀರು ಶುಭ್ರವಾಗಿ ನೀಲಿ ಬಣ್ಣದಿಂದ ಕಾಣಿಸಿದರೆ, ಜಂಸ್ಕರ್ ನದಿಯ ನೀರು ಕೆಸರು ರಾಡಿಯ ಬಣ್ಣದಲ್ಲಿದೆ. ಇವೆರಡು ನದಿಗಳ ಸಂಗಮದಲ್ಲಿ, ಮಿಶ್ರವಾದ ನೀರಿನ ಬಣ್ಣದ ವಿವಿಧ ಮಜಲುಗಳನ್ನು ಸ್ಪಷ್ಟವಾಗಿ ಕಾಣಲು ಸಾಧ್ಯವಾಗುತ್ತದೆ.     ಪವಿತ್ರ ನದಿಗಳ ಶ್ಲೋಕದಲ್ಲಿ ‘ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತೀ ನಮ೯ದೇ ಸಿಂಧು ಕಾವೇರೀ ಜಲೇಸ್ಮಿನ್ ಸನ್ನಿಧಿಂ ಕುರು’ ಎಂದು ಪಠಿಸಿದ್ದ, ಚರಿತ್ರೆ ಪಾಠದಲ್ಲಿ ‘ಸಿಂಧೂ ನದಿ ಕಣಿವೆ‘ಯ ನಾಗರಿಕತೆ ಎಂದು ಓದಿದ್ದ  ‘ಸಿಂಧೂ’ನದಿಯ ದಡದಲ್ಲಿ ನಾವಿದ್ದೇವೆ ಎಂಬ  ಪ್ರಜ್ಞೆ ಬಹಳ ಸಂತಸವನ್ನುಂಟುಮಾಡಿತು. ನದಿ ನೀರು ವಿಪರೀತ ತಂಪಾಗಿದ್ದುದರಿಂದ ಮುಖ ಪ್ರಕ್ಷಾಳನ ಮಾಡಬೇಕೆನಿಸಲಿಲ್ಲ. ಚಳಿಗಾಲದಲ್ಲಿ  ನದಿಯ ನೀರು ಮಂಜುಗಡ್ಡೆಯಾಗುವುದರಿಂದ, ನದಿಯ ಮೇಲೆ  ಇಲ್ಲಿ ಹಲವಾರು ಸಾಹಸ ಕ್ರೀಡೆಗಳನ್ನು ಆಡಲು ಅವಕಾಶವಿರುತ್ತದೆಯಂತೆ.

ಆಗ ಮಧ್ಯಾಹ್ನ 3 ಗಂಟೆ ಆಗಿತ್ತು. ಪಕ್ಕದಲ್ಲಿ ಇದ್ದ ಕೆಫೆಯಲ್ಲಿ  ಮ್ಯಾಗಿ, ಪಕೋಡ ಇತ್ಯಾದಿ ತಿಂದೆವು. ಇಲ್ಲಿ ಜನವಸತಿ ಅತಿ ಕಡಿಮೆ,  ಅಂಗಡಿಗಳು ಒಂದೆರಡು  ಇದ್ದುವು.   ಶೀತವುಳ್ಳ   ಅರೆ ಮರುಭೂಮಿಯಂತಹ ಜಾಗವಿದು .ಸಮುದ್ರ ಮಟ್ಟದಿಂದ 11000 ಅಡಿ ಮೇಲೆ ಇದೆ.  ವರ್ಷದ  ಹೆಚ್ಚಿನ ತಿಂಗಳೂ ಹಿಮಪಾತವಾಗಿ, ಮೈನಸ್ ಉಷ್ಣಾಂಶವಿರುವ ಜಾಗದಲ್ಲಿ ಅದು ಹೇಗೆ ಜನರು ಬದುಕುತ್ತಾರೋ ಎಂದು ಅಚ್ಚರಿಯಾಗುತ್ತದೆ.  ಇತ್ತೀಚಿನವರೆಗೂ ತಲಪಲಾಗದ ಹಲವಾರು ಸ್ಥಳಗಳನ್ನು ಹೊಂದಿರುವ  ಜಂಸ್ಕರ್ ಕಣಿವೆಯಲ್ಲಿರುವವರು ಟಿಬೆಟಿಯನ್ ಮೂಲದ ಬೌದ್ಧರು. ಅವರ ಜನಜೀವನ ಮತ್ತು ಸಂಸ್ಕೃತಿ ಲಡಾಕ್ ನ ಇತರರಿಗಿಂತ ಸ್ವಲ್ಪ ಭಿನ್ನ. ತಮ್ಮದೇ ಆದ ಜ಼ಂಸ್ಕರ್ ಭಾಷೆಯನ್ನು ಮಾತನಾಡುತ್ತಾರೆ.

ಸ್ಪಿಟುಕ್ ಗೊಂಪಾ

 ಜಂಸ್ಕರ್ ನಿಂದ ಹಿಂತಿರುಗಿ ಬರುವ ದಾರಿಯಲ್ಲಿ , ಬೌದ್ಧರ ಪ್ರಮುಖ ಆರಾಧನಾ ಸ್ಥಳವಾದ ‘ಸ್ಪಿಟುಕ್ ಮೊನಾಸ್ಟ್ರಿ‘ಗೆ ಭೇಟಿ ಕೊಟ್ಟೆವು. ಮೊನಾಸ್ಟ್ರಿಯನ್ನು ಲಡಾಖಿ ಭಾಷೆಯಲ್ಲಿ ‘ಗೊಂಪಾ’ ಅನ್ನುತ್ತಾರೆ.  ಸ್ಪಿಟುಕ್ ಗೊಂಪಾವು,  14 ನೇ ಶತಮಾನದಲ್ಲಿ, ರಾಜರ ಆಶ್ರಯದಲ್ಲಿ ಕಟ್ಟಲಾದ ದೊಡ್ಡ ಮೊನಾಸ್ಟ್ರಿ. ಅಲ್ಲಿ 100 ಕ್ಕೂ  ಹೆಚ್ಚು ಬೌದ್ಧ ಸನ್ಯಾಸಿಗಳು ವಾಸಿಸುತ್ತಾರಂತೆ. ಪ್ರವಾಸಿಗರಿಗೆ ಅನುಮತಿ ಇರುವ ಜಾಗದಲ್ಲಿ ಒಂದಿಬ್ಬರು ಲಾಮಾಗಳು ಕಾಣಸಿಕ್ಕಿದರು.  ಮಾರ್ಗದಿಂದ ಸುಮಾರು 200 ಮೆಟ್ಟಿಲುಗಳನ್ನು ಹತ್ತಿ  ಗೊಂಪಾದ ಮೇಲ್ಭಾಗವನ್ನು ತಲಪಿದೆವು. ಎಲ್ಲಾ ಸ್ತೂಪಗಳಲ್ಲಿ ಇರುವಂತೆ   ವಿವಿಧ ಗಾತ್ರದ ಧರ್ಮಚಕ್ರಗಳು, ಮಂತ್ರಗಳನ್ನು ಬರೆದಿದ್ದ ಬಣ್ಣಬಣ್ಣದ ಪತಾಕೆಗಳಿದ್ದುವು.  ವಿವಿಧ ಆಕಾರದ ಬುದ್ಧನ ಮೂರ್ತಿಗಳಿದ್ದುವು .ಲಾಮಾ ಒಬ್ಬರು ವಿವಿಧ ಗಾತ್ರದ ದೀಪಗಳನ್ನು ತೊಳೆಯುವುದರಲ್ಲಿ ಮಗ್ನರಾಗಿದ್ದರು. ಅವರ ಸಂಸ್ಕೃತಿ ಬಗ್ಗೆ ಏನೂ ಅರ್ಥವಾಗದ ಕಾರಣ ಪೊಟೋ ತೆಗೆದು ಮರಳಿದೆವು. ಸ್ಪಿಟುಕ್ ಗೊಂಪಾ ಇರುವ ಜಾಗದ ಪರಿಸರ ಬಹಳ ಸುಂದರವಾಗಿದೆ. ಒಂದು ಬದಿಗೆ ಬೆಟ್ಟಗಳು ಹಾಗೂ ಮಾರ್ಗವಿದ್ದರೆ, ಇನ್ನೊಂದು ಕಡೆ ಸಿಂಧೂ ನದಿಯ ದಡದಲ್ಲಿ ಹರಡಿದ್ದ ಹೊಲಗದ್ದೆಗಳು ಹಾಗೂ ಅಲ್ಲಲ್ಲಿ ಕೆಲವು ಮನೆಗಳು ಬಹಳ ಸೊಗಸಾಗಿ ಕಾಣಿಸಿದುವು.  ಲೇಹ್ – ಲಡಾಖ್ ನಲ್ಲಿ  ನಾವು ನೋಡಿದ ಎಲ್ಲ ಗೊಂಪಾಗಳಲ್ಲಿ  ಸ್ವಚ್ಚತೆ , ನಿಶ್ಶಬ್ದ ಹಾಗೂ ಶಿಸ್ತನ್ನು ಪಾಲಿಸುವುದನ್ನು ಗಮನಿಸಿದೆವು.

ಸ್ಪಿಟುಕ್ ಮೊನಾಸ್ಟ್ರಿ


ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ : http://surahonne.com/?p=37110

ಮುಂದುವರಿಯುವುದು..
-ಹೇಮಮಾಲಾ, ಮೈಸೂರು

8 Comments on “ಜೂನ್ ನಲ್ಲಿ ಜೂಲೇ : ಹನಿ 9

  1. ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡು ಹೋಯಿತು..ಪ್ರವಾಸ ಅನುಭವವನ್ನು ವ್ಯಕ್ತಪಡಿಸುವ ರೀತಿ ಚೆನ್ನಾಗಿ ದೆ ಗೆಳತಿ ಹೇಮಾ..ನಾವು ನಿಮ್ಮ ಜೊತೆಯಲ್ಲಿ ಸಾಗುತ್ತಿದ್ದೀವಿ ಎನ್ನುವ ಭಾವನೆ ಬರುತ್ತದೆ..ಅಭಿನಂದನೆಗಳು.

  2. ಸುಂದರ ಚಿತ್ರಗಳೊಂದಿಗೆ ಸ್ಪಿಟುಕ್ ಗೊಂಪಾ ವಿವರಣೆ ಚೆನ್ನಾಗಿ ಮೂಡಿ ಬಂದಿದೆ.

  3. ಸುಂದರ ಪೂರಕ ಚಿತ್ರಗಳೊಂದಿಗಿನ, ಸೊಗಸಾದ ನಿರೂಪಣೆಯ ಪ್ರವಾಸ ಲೇಖನ ಓದುಗರಿಗೆ ಆತ್ಮೀಯವೆನಿಸುತ್ತದೆ…ಧನ್ಯವಾದಗಳು ಮಾಲಾ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *