ಪ್ರಕೃತಿ-ಪ್ರಭೇದ

ಆನೆತಗಚೆಯ ನೂಕದಿರಾಚೆ

Share Button

ದೇಹಕ್ಕೆ ಸ್ವಲ್ಪ ವ್ಯಾಯಾಮ ಸಿಗಬೇಕೆಂದು ಸಂಜೆಯ ಹೊತ್ತು ಒಂದರ್ಧ ಘಂಟೆ ನಡೆಯುವುದನ್ನು ರೂಢಿಸಿಕೊಳ್ಳುವ ಮನಸ್ಸು ಮಾಡಿ ಅದನ್ನು ಕಾರ್ಯಗತಗೊಳಿಸಲು ಹೊರಟ ದಿನವೇ ಈ ಹಳದಿ ಸುಂದರಿಯರ ದಂಡು ನನ್ನನ್ನು ಸೆಳೆದಿತ್ತು. ಆ ಹೂಗಳನ್ನು ಕಂಡಾಗಲೇ, ಮನೋಭಿತ್ತಿಯಲ್ಲಿ ಅವಿತಿದ್ದ ಬಾಲ್ಯಕಾಲದ ನೆನಪೊಂದು ಧುತ್ತನೆ ಮೇಲೇರಿ ಬಂತು.

ನಮ್ಮ ಮನೆಗೆ, ನಮ್ಮ ದೂರದ ನೆಂಟರೊಬ್ಬರು ಆಗಾಗ ಬರುತ್ತಿದ್ದರು. ಒಂದು ಸಲ,  ಅವರು ಬಂದು ಹೋದ ಕೆಲ ದಿನಗಳಲ್ಲಿ ನಮ್ಮ ಅಮ್ಮನ ಹೊಟ್ಟೆಯ ಸುತ್ತ ಹುಳುಕಡ್ಡಿಯ ಉಪದ್ರ ಆರಂಭವಾಗಿತ್ತು. ನಮ್ಮ ಮನೆಯವರು ಬಳಸುತ್ತಿದ್ದ ಸ್ನಾನದ ಸಾಬೂನನ್ನೇ ಆ ನೆಂಟರು ಬಳಸಿದ ಕಾರಣ, ಈ ಹುಳುಕಡ್ಡಿಯ ಉಪದ್ರ ಅಂಟಿಕೊಂಡಿತೆಂಬುದು ಅಮ್ಮನ ಅಂಬೋಣವಾಗಿತ್ತು. ಸುಮಾರು ಮುಲಾಮುಗಳನ್ನು ಹಾಗೂ ಉಳಿದ ಮನೆಮದ್ದು ಹಚ್ಚಿದರೂ ಕಡಿಮೆಯಾಗದ ಕಾರಣ ಯಾರೋ ಹೇಳಿದರೆಂದು ಈ ಗಿಡದ ಎಲೆಯ ರಸ, ಬೇಯಿಸಿದ ಸುಣ್ಣ ಹಾಗೂ ಲಿಂಬೆರಸ ಬೆರೆಸಿ ಹಚ್ಚಿದ ಕೆಲದಿನಗಳಲ್ಲೇ ಅಮ್ಮನ ಮೇಲಿದ್ದ ಹುಳುಕಡ್ಡಿಯ ಉಪದ್ರ ಸಮೂಲವಾಗಿ ನಿವಾರಣೆಯಾಗಿತ್ತು. ಈ ಘಟನೆಯ ಬಳಿಕ, ಯಾರಿಗಾದರೂ ಚರ್ಮಸಂಬಂಧಿ ವ್ಯಾಧಿ ಇದ್ದರೆ, ಈ ಗಿಡದ ಬಗ್ಗೆ ಮಾಹಿತಿ ನೀಡುವುದನ್ನು ರೂಢಿಸಿಕೊಂಡಿದ್ದೆವು. ಈ ಗಿಡ ಯಾವುದೆಂದರೆ ಆನೆತಗಚೆ ಅಥವಾ ದೊಡ್ಡ ತಗಚೆ. ತುಳುವಿನಲ್ಲಿ ಆನೆತಜಂಕ್ ಎಂದು ಕರೆಸಿಕೊಳ್ಳುವ ಈ ಗಿಡವು ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ತಜಂಕ್ ಅಥವಾ ತಗಚೆ ಗಿಡವನ್ನೇ ಹೋಲುತ್ತದೆ. ಆದರೆ ಗಾತ್ರದಲ್ಲಿ ದೊಡ್ಡದಾಗಿರುವ ಕಾರಣ ಅದನ್ನು ಆನೆತಗಚೆ ಅಥವಾ ದೊಡ್ಡತಗಚೆ ಅನ್ನುವರು.

ನಮಗೆಲ್ಲಾ ಗೊತ್ತೇ ಇದೆ. ಪ್ರಕೃತಿಯಲ್ಲಿರುವ ಪ್ರತಿಯೊಂದು ಗಿಡ ಮರ ಬಳ್ಳಿಗಳೂ ಸಹಾ ಔಷಧೀಯ ಗುಣಗಳನ್ನು ಹೊಂದಿವೆ. ಅನಾದಿಕಾಲದಿಂದಲೂ ಅನೇಕ ಸಸ್ಯಗಳನ್ನು ಔಷಧೀಯ ಗಿಡಗಳನ್ನಾಗಿ ಗುರುತಿಸಲಾಗಿದೆ. ಕೆಲವೊಂದು ಸಸ್ಯಗಳ ಎಲ್ಲಾ ಭಾಗಗಳು ಸಹಾ ಔಷಧಿ ತಯಾರಿಕೆಯಲ್ಲಿ ಬಳಸಲ್ಪಡುತ್ತವೆ. ಎಲೆ, ಹೂವು, ಕಾಂಡ, ಬೇರು, ಕೋಡು, ಚಿಗುರು,… ಹೀಗೆ ಎಲ್ಲಾ ಸಸ್ಯಭಾಗಗಳು ಕೂಡಾ ಬಳಕೆಯಾಗುವುದುಂಟು. ಅಂತಹ ಸಸ್ಯಗಳಲ್ಲಿ ಆನೆತಗಚೆಯೂ ಒಂದು. ಫಾಭೇಸಿ ಕುಟುಂಬಕ್ಕೆ ಸೇರಿದ ಈ ಸಸ್ಯದ ವಿವಿಧ ಭಾಗಗಳು ಆಯುರ್ವೇದ ಔಷಧಿಗಳಲ್ಲಿ ಹಾಗೂ ಸಾಂಪ್ರದಾಯಿಕ ಮನೆಮದ್ದು ತಯಾರಿಯಲ್ಲಿ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಬಳಕೆಯಾಗುತ್ತವೆ. ಭಾರತ ದೇಶದಲ್ಲಿ ಮಾತ್ರವಲ್ಲ ಶ್ರೀಲಂಕಾ, ಚೀನಾ, ಮೆಕ್ಸಿಕೋ, ವೆಸ್ಟ್ ಇಂಡೀಸ್, ಇಂಡೋನೇಶಿಯಾ, ಆಫ್ರಿಕಾದ ಈಜಿಪ್ಟ್, ನೈಜೀರಿಯಾ ಮುಂತಾದ ಕೆಲವು ದೇಶಗಳು, ಫಿಲಿಪ್ಪೀನ್ಸ್ ಈ ಎಲ್ಲಾ ದೇಶಗಳಲ್ಲಿ ಈ ಗಿಡದ ಭಾಗಗಳನ್ನು ಬಳಸುವುದರ ಬಗ್ಗೆ ನಿದರ್ಶನಗಳಿವೆ.

ಬೆಂಕಿ ಸುಟ್ಟ ಗಾಯ, ಹುಳುಕಡ್ಡಿ, ಕಜ್ಜಿ, ಸರ್ಪಸುತ್ತು, ಶಿಲೀಂಧ್ರ ಸಂಬಂಧಿ ಇತರೇ ಚರ್ಮವ್ಯಾಧಿಗಳಿಗೆ ಈ ಗಿಡದ ಎಲೆಯ ಲೇಪ/ಚೂರ್ಣವನ್ನು ಹಚ್ಚಿದರೆ,   ಮಲಬದ್ಧತೆ, ಭೇಧಿ, ಹೊಟ್ಟೆನೋವು, ಹಲ್ಲುನೋವು, ವಿಷಮಶೀತ ಜ್ವರ, ಮಲೇರಿಯಾ, ಮಧುಮೇಹ ಮುಂತಾದ ರೋಗಗಳ ಚಿಕಿತ್ಸೆಯಲ್ಲಿ ಕಾಂಡ, ಎಲೆ ಅಥವಾ ಬೇರಿನ ಕಷಾಯವನ್ನು ಬಳಸುತ್ತಾರೆ. ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖವಿದ್ದರೂ, ವಿಜ್ಞಾನಿಗಳು ಈ ಗಿಡದ ಸತ್ವಗಳು   ಮಧುಮೇಹ ನಿವಾರಣೆ ಮಾಡುತ್ತದೆ, ಹಾಗೂ ಉತ್ತಮ ನೋವು ನಿವಾರಕ ಗುಣವನ್ನು ಹೊಂದಿದೆಯೆಂದು ಇಲಿಗಳ ಮೇಲೆ ನಡೆಸಿದ ಸಂಶೋಧನೆಗಳಿಂದ ಕಂಡುಕೊಂಡಿದ್ದಾರೆ.

ಆನೆತಗಚೆ ಅಥವಾ ದೊಡ್ಡ ತಗಚೆ

ಈ ಗಿಡಕ್ಕೆ ವಿಶೇಷ ಆರೈಕೆಯೇನೂ ಬೇಡ. ಇದನ್ನು ನೆಟ್ಟು ಬೆಳೆಸಬಹುದು.   ಪಟ್ಟಣಗಳ ಅಂಚಿನಲ್ಲಿ, ಖಾಲಿ ನಿವೇಶನಗಳಲ್ಲಿ, ದಟ್ಟವಾಗಿ ಬೆಳೆಯುವ ಆನೆತಗಚೆ ಗಿಡಗಳ ಸಮೂಹವು, ತೇರಿನಾಕಾರದಲ್ಲಿರುವ ಹಳದಿಬಣ್ಣದ  ಹೂಗೊಂಚಲುಗಳ ಸೌಂದರ್ಯದಿಂದಾಗಿ ದಾರಿಹೋಕರ ಗಮನವನ್ನು ತನ್ನೆಡೆಗೆ ಸೆಳೆಯುತ್ತದೆ. ಗಾಢ ಹಳದಿ ಬಣ್ಣದ ಹೂಗೊಂಚಲುಗಳಿರುವ ಕಾರಣದಿಂದಾಗಿಯೇ ಈ ಗಿಡಕ್ಕೆ ಹಲವು ಹೆಸರುಗಳು ಬಂದಿವೆ. ಸಸ್ಯಶಾಸ್ತ್ರದ ಪ್ರಕಾರ ಸೆನ್ನಾ ಅಲಾಟಾ ಎಂದು ಕರೆಸಿಕೊಳ್ಳುತ್ತದೆ. ಚಕ್ರವರ್ತಿಯ ಕ್ಯಾಂಡಲ್ ಬುಶ್, ಕ್ರಿಸ್ಮಸ್ ಕ್ಯಾಂಡಲ್ಸ್, ಕ್ಯಾಂಡಲ್ ಬುಶ್ ಎಂದೆಲ್ಲಾ ಕರೆಸಿಕೊಳ್ಳುವ ಈ ಗಿಡವು ಹುಳುಕಡ್ಡಿ ಗಿಡ ಅಥವಾ ರಿಂಗ್-ವರ್ಮ್ ಸಸ್ಯವೆಂದೂ ಗುರುತಿಸಿಕೊಳ್ಳುತ್ತದೆ. ನಮ್ಮ ಸುತ್ತಲೂ ಕಾಣಸಿಗುವ ಈ ಸಸ್ಯಕ್ಕೆ ಎಷ್ಟೊಂದು ಔಷಧೀಯ ಗುಣಗಳಿವೆಯೆಂಬುದನ್ನು ತಿಳಿದು ನಿಜವಾಗಿಯೂ ಸಂತೋಷವಾಯಿತು. ಹಾಗೆಯೇ ಈ ಮಾಹಿತಿಯನ್ನು ಹಂಚಿಕೊಳ್ಳುವ ಮನಸ್ಸಾಯಿತು. ಅದಕ್ಕೆಂದೇ ಈ ಪುಟ್ಟ ಲೇಖನ. ನಿಮಗೆ ಗೊತ್ತಿರುವ ಈ ಗಿಡದ ಔಷಧೀಯ ಉಪಯೋಗಗಳನ್ನು ಸಹಾ ತಿಳಿಸುವಿರಲ್ಲಾ?

ಡಾ. ಕೃಷ್ಣಪ್ರಭ ಎಂ, ಮಂಗಳೂರು

14 Comments on “ಆನೆತಗಚೆಯ ನೂಕದಿರಾಚೆ

  1. ಆನೆತಗತ್ತೆ ಎಂದೂ ಹೆಸರು ಪಡೆದಿರುವ ಈ ಗಿಡದ ಔಷಧೀಯ ಗುಣಗಳನ್ನು ತಿಳಿದು ಖುಷಿಯಾಯ್ತು…ಧನ್ಯವಾದಗಳು.

  2. ಒಳ್ಳೆಯ ವಿಷಯ ಆಯ್ಕೆ ಮಾಡಿ ಔಷಧೀಯ ಗುಣವನ್ನು ಪಸರಿಸಿದ ನಿಮಗೆ ಧನ್ಯವಾದಗಳು

    1. ತಿಳಿದುಕೊಂಡ ವಿಚಾರವನ್ನು ಹಂಚಿಕೊಂಡಿರುವೆ. ಮೆಚ್ಚುಗೆಗೆ ಧನ್ಯವಾದಗಳು

  3. ಹೌದು, ಉತ್ತಮ ಚಮ೯ ವ್ಯಾಧಿ ಔಷಧಿಯ ಗುಣ ದ ಸಸ್ಯ. ಇದರ ಬೀಜಗಳು ಹುರಿದು ಮಾಡಿದ ಹುಡಿಯಿಂದ ಪಾನೀಯವನ್ನು ಕೂಡ ಮಾಡಬಹುದೆಂದು ಹೇಳುವುದು ಕೇಳಿದ್ದೆ.
    ಉಪಯುಕ್ತ ಸಸ್ಯ ದ ಉಪಯುಕ್ತ ಲೇಖನ

Leave a Reply to ಸುವರ್ಣಮಾಲಿನಿ Cancel reply

 Click this button or press Ctrl+G to toggle between Kannada and English

Your email address will not be published. Required fields are marked *