ಗರಿಕೆಯಂಥಾ ಕನ್ನಡ
ಅಮ್ಮಾ ಎಂದುಲಿದು ಪಾದ ತಬ್ಬಿದರೆ ಸಾಕು
ಎತ್ತಿ ಎದೆಗಪ್ಪಿಕೊಳ್ಳುವಳು
ಭುವನ ಸುಂದರಿ ಭಾವಸಾಗರಿ
ಬಾರೆನ್ನ ಕಂದನೆಂದು ಭರಸೆಳೆವ ಕರುಣಜಲ ವಿಹಾರಿ
ಲೋಕಲೋಕಗಳಲೂ ಬಹು ಮಾನ್ಯಳು
ನನ್ನಮ್ಮ ಕರುಣಾಳು ಕನ್ನಡಾಂಬೆ
ಯಾವ ಜನ್ಮದ ಪುಣ್ಯ ಶೇಷವೋ
ಯಾರ ಕರುಣೆಯ ಹಾರೈಕೆಯೋ
ಹುಟ್ಟಿದೆನು ಬೆಳೆದೆನು ನಿನ್ನ ಮಡಿಲಲಿ
ಬದುಕ ಕಟ್ಟಿಕೊಂಡೆನು ನಿನ್ನ ನಿಸರ್ಗಸಿರಿಯಲಿ
ನಿನ್ನ ಭಾವವಿದೆ ರಸಿಕ ಕವಿಗಳೆದೆಯಲಿ
ನಿನ್ನ ಜೀವವಿದೆ ಮುತ್ತಿನಕ್ಕರದ ಹೊತ್ತಗೆಯಲಿ
ನಿನ್ನ ಬದುಕಿದೆ ನಿನ್ನನೇ ನುಡಿವ
ನಮ್ಮ ನಾಲಿಗೆಯಂಚಿನಲಿ
ನಿನ್ನ ನಗುವಿದೆ ಕನ್ನಡದ ಗೀತಗೀತಗಳುಲಿತದಲಿ
ಯಾರೆಷ್ಟೆ ತುಳಿದು ಹೊಸಕಿದರು
ಮತ್ತೆ ಮತ್ತೆ ಮೈತೊಳೆದು ಮೈತಳೆದು ರೂಪುಗೊಳುವೆ
ಚಿಗುರಿನಂಚಿನಲೇ ನಗುತ ಪುಳಕಗೊಳುವೆ
ಎಲ್ಲರೆದೆಯಲಿ ಇಬ್ಬನಿ ಹೊತ್ತ ಗರಿಕೆ ನೀನು
ಗರಿಗೆದರಿ ನಲಿವೆ ನಮ್ಮೆಲ್ಲರ ಕನ್ನಡತನದಲಿ
ಕಲ್ಮಶವಿಲ್ಲದ ಹೃದಯಗಳಲಿ
– ಬಿ.ಕೆ. ಮೀನಾಕ್ಷಿ, ಮೈಸೂರು
ಕನ್ನಡ ಮ್ಮನನ್ನು ಕುರಿತ ಸೊಗಸಾದ ಕವನ..ಅಭಿನಂದನೆಗಳು ಗೆಳತಿ ಮೀನಾ
ಚಂದವಿದೆ
ಬಹಳ ಸೊಗಸಾದ ಭಾಷೆ ಕನ್ನಡವನ್ನು ಎಳೆ ಗರಿಕೆಗೆ ಹೋಲಿಸಿದುದು ಬಹಳ ಇಷ್ಟವಾಯ್ತು.
ನಿಜ, ಗರಿಗೆದರಿ ನಲಿಯುವಳು ಕನ್ನಡಮ್ಮ ʼನಮ್ಮೆಲ್ಲರ ಕನ್ನಡತನದಲಿ ಕಲ್ಮಶವಿಲ್ಲದ ಹೃದಯಗಳಲಿʼ!
ಚಂದದ ಕವನ. ಕನ್ನಡ ಭಾಷೆಯಂತಹ ಮತ್ತೊಂದು ಮಧುರ ಭಾಷೆ ಇಲ್ಲ.