ಲಹರಿ

ಕಾಕತಾಳೀಯಗಳು

Share Button

ಕೆಲವೊಂದು ವಿಷಯಗಳು ಹಾಗೆಯೇ. ಕಾರಣವಿಲ್ಲದೇ ಕಾರಣವಿದೆಯೆಂದು ತೋರುವ ವಿಷಯಗಳು. ಯಾಕಾಗಿ ಆ ರೀತಿ ಸಂಭವಿಸುತ್ತವೆ ಅನ್ನುವುದನ್ನು ಯಾರೂ ಊಹಿಸಲೂ ಸಾಧ್ಯವಿಲ್ಲ. ಆದರೆ ಅವುಗಳು ಸಂಭವಿಸುವುದಂತೂ ಸತ್ಯ. ಸಿಕ್ಕಾಪಟ್ಟೆ ಬೆರಗು ಹುಟ್ಟಿಸುವ ಸತ್ಯಗಳಿವು. ಹಲವಾರು ಸಂಗತಿಗಳು ಎಲ್ಲರ ಅನುಭವಕ್ಕೂ ಬಂದಿರುತ್ತವೆ. ಇದಕ್ಕೆ ಇಂತಹವುಗಳ ಹಿಂದೆ ಕಾಣದ ಭಗವಂತನ ಕೈವಾಡವಿದೆಯೆನ್ನುವರು. ದೇವರನ್ನು ನಂಬದವರು ಕಾಕತಾಳೀಯವೆನ್ನುವರು.

ಮನೆಯ ಸದಸ್ಯರೆಲ್ಲರ ಜನ್ಮದಿನಾಂಕ ಒಂದೇ ಆಗಿರುವುದು, ಗಂಡ-ಹೆಂಡತಿ‌ ಇಬ್ಬರ ಜನ್ಮದಿನಾಂಕ ಒಂದೇ ಆಗಿರುವುದು, ಅಪ್ಪ-ಮಗ, ಅಪ್ಪ-ಮಗಳು, ಅಮ್ಮ-ಮಗ, ಅಮ್ಮ-ಮಗಳು, ಒಡಹುಟ್ಟಿದವರ ಜನ್ಮದಿನಾಂಕ ಒಂದೇ ಆಗಿರುವುದು, ಕೆಲವೊಮ್ಮೆ ಮೊಮ್ಮಕ್ಕಳ ಜನ್ಮದಿನವೂ ಅದೇ ಆಗಿರುವುದು (ದಿನ ನೋಡಿ ಸಿಜೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಆದ ಜನನದಿಂದಲ್ಲ!). ನನ್ನ ಸಣ್ಣ ತಂಗಿ ಹಾಗೂ ಅವಳ ಯಜಮಾನರ ಜನ್ಮದಿನಾಂಕ ಒಂದೇ ಹಾಗೆಯೇ ನನ್ನ ಸಣ್ಣ ತಮ್ಮ ಹಾಗೂ ಅವನ ಸಹಧರ್ಮಿಣಿಯ ಜನ್ಮದಿನಾಂಕವೂ ಒಂದೇ ಆಗಿರುವುದು ಕಾಕತಾಳೀಯ. ನನ್ನಗುಬ್ಬಚ್ಚಿಗೂಡಿನ ಎಲ್ಲರಜನ್ಮದಿನಾಂಕಗಳು ಕೂಡಾ ಬೆಸಸಂಖ್ಯೆಗಳು. ನನ್ನ ನಿಕಟಸಂಬಂಧಿಯೊಬ್ಬರ ಮನೆಯ ಎಲ್ಲ ಸದಸ್ಯರ ಜನ್ಮದಿನವೂ ೩ ನೇ ತಾರೀಖು. ತಿಂಗಳುಗಳು ಮಾತ್ರ ಬೇರೆ. ಇನ್ನು ವಾರದ ಯಾವ ದಿನ ಹುಟ್ಟಿದ್ದು ಅನ್ನುವುದರಲ್ಲಿಯೂ ಸಾಮ್ಯತೆ ಕಂಡು ಬಂದರೆ ಅದು ಕಾಕತಾಳೀಯವೇ. ನನ್ನ ಮನೆಯಲ್ಲಿ ಮಗಳು ಹಾಗೂ ನಾನು ಶನಿವಾರ ಹುಟ್ಟಿದ್ದಾದರೆ, ಗಂಡ-ಮಗ‌ಇಬ್ಬರೂ ಆದಿತ್ಯವಾರ ಹುಟ್ಟಿರುವುದು. ಹೀಗೆ ಹೇಳುತ್ತಾ ಹೋದರೆ, ಇಂತಹ ಹಲವು ಕಾಕತಾಳೀಯಗಳು ಎಲ್ಲರ ಮನೆಯಲ್ಲೂ ಕಾಣಸಿಗುತ್ತವೆ.

ಇನ್ನೊಂದು ಕಾಕತಾಳೀಯ ಹೆಸರಿನದು. ನನಗೆ ಗೊತ್ತಿರುವವರ ಮನೆಯ ಯಜಮಾನನ ಹೆಸರು ಪದ್ಮನಾಭ. ಅವರಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳು. ಮಗನ ಹೆಸರು ನಾಗೇಶ. ಇಬ್ಬರು ಮಗಳಂದಿರಿಗೆ ಮದುವೆಯಾಯಿತು. ಒಬ್ಬ ಅಳಿಯನ ಹೆಸರು ನಾಗೇಶ, ಇನ್ನೊಬ್ಬ ಅಳಿಯನ ಹೆಸರು ಪದ್ಮನಾಭ. ಹೀಗೆ ಆಗಬೇಕು ಅಂತ ಹುಡುಕಿದ್ದಂತೂ ಅಲ್ಲ. ಇಂತಹ ಸುಮಾರು ಉದಾಹರಣೆಗಳು ಇನ್ನೂ ಇವೆ. ಹಿಂದಿನ ಕಾಲದಲ್ಲಿ ಗಂಡನ ಹೆಸರನ್ನು ಹೇಳಲು ಹೆಂಗಳೆಯರಿಗೆ ಸ್ವಾತಂತ್ರ್ಯವಿರಲಿಲ್ಲ. ಗಂಡನ ಹೆಸರು ಹಿಡಿದು ಕರೆದಾಗ, ಗಂಡ ಓಗೊಟ್ಟರೆ ಅವನ ಆಯುಷ್ಯ ಕಡಿಮೆಯಾಗುತ್ತದೆಂದು ಹೇಳಿ ಹೆಂಗಸರು ಗಂಡನ ಹೆಸರು ಹೇಳದಂತೆ ನಿರ್ಬಂಧಿಸುತ್ತಿದ್ದರು. ಹಾಗಾಗಿ ತನ್ನ ತಮ್ಮನ/ಅಣ್ಣನ/ತಂದೆಯ ಹೆಸರು ಇರುವವನೇ ಗಂಡನಾಗಿ ಸಿಕ್ಕಿದರೆ ಹೆಂಗಳೆಯರಿಗೆ ಧರ್ಮಸಂಕಟ. ಒಡಹುಟ್ಟಿದವರ/ಅಪ್ಪನ ಹೆಸರನ್ನು ಕೂಡಾ ಕರೆಯಲಾಗದ/ಹೇಳಲಾಗದ ಪರಿಸ್ಥಿತಿ. ಈಗ ಕಾಲ ಬದಲಾಗುತ್ತಿದೆ. ಹಾಗಾಗಿ ಸ್ವಲ್ಪ ಬಚಾವ್! ಎಷ್ಟೋ ಮನೆಗಳಲ್ಲಿ ಮಗಳ ಹೆಸರಿನವಳೇ ಸೊಸೆಯಾಗಿ ಬಂದಾಗ, ಸೊಸೆಯ ಹೆಸರು ಬದಲಿಸುವುದುಂಟು. ಆದರೆ ಕೆಲವು ಕುಟುಂಬದ ಪದ್ಧತಿಗಳಲ್ಲಿ ಕಡ್ಡಾಯವಾಗಿ ಸೊಸೆಯ ಹೆಸರು ಬದಲಿಸುತ್ತಾರೆ. ಆ ಮಾತಂತಿರಲಿ.

ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಅನ್ನುವ ಮಾತಿದೆ. ನಾವು ಎಷ್ಟೋ ಜನರನ್ನು ನೋಡಿರುತ್ತೇವೆ, ಮಾತನಾಡಿರುತ್ತೇವೆ, ಮದುವೆಯ ವಿಷಯಕ್ಕೆ ಬಂದಾಗ ಈ ಹುಡುಗ ನನಗೆ ಓಕೆ ಅಥವಾ ಈ ಹುಡುಗಿ ನನಗೆ ಓಕೆ ಅಂತ ಹೇಳಿ ಮದುವೆ ನಿಶ್ಚಯವಾಗುವುದಿದೆಯಲ್ವಾ ಅದು ಕೂಡಾ ಕಾಕತಾಳೀಯವೇ. ಪ್ರೀತಿ ಕುರುಡು ಅನ್ನುವರು. ಹಿಂದೆಂದೂ ನೋಡಿರದ, ಮಾತನಾಡಿರದ ಹುಡುಗ-ಹುಡುಗಿಯ ನಡುವೆ ಮೊಳೆಯುವ ಪ್ರೀತಿಯೂ ಕಾಕತಾಳೀಯವೇ!ಹಿರಿಯರೊಬ್ಬರು ಹೇಳಿದ ಮಾತು ನೆನಪಿಗೆ ಬರುತ್ತಿದೆ. ನಾವು ಈ ಭೂಮಿಯಲ್ಲಿ ಜನಿಸುವುದಿದೆಯಲ್ವಾ ಅದೂ ಸಹಾ ಕಾಕತಾಳೀಯವೇ. ಕೆಲವು ಮಕ್ಕಳು ಕೋಪ ಬಂದಾಗ ಹೇಳುವುದುಂಟು ನಾನ್ಯಾಕೆ ನಿಮ್ಮ ಹೊಟ್ಟೆಯಲ್ಲಿ ಹುಟ್ಟಿದೆ ?. ಯಾರ ಮಗನಾಗಿ/ಮಗಳಾಗಿ ಹುಟ್ಟಬೇಕು ಅನ್ನುವ ಆಯ್ಕೆಯಂತೂ ಯಾರಿಗೂ ಇಲ್ಲ. ಕೆಲವೊಮ್ಮೆ ಜನ್ಮ ನೀಡಿದವರು ಸಲಹದೆ, ಇನ್ನು ಯಾರೋ ಸಲಹುವುದಿದೆಯಲ್ಲವಾ ಅದು ಕೂಡಾ ಕಾಕತಾಳೀಯವೇ.

PC: Internet

ನನ್ನ ಸಹೋದ್ಯೋಗಿಯೊಬ್ಬರಿಗೆ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಇನ್ನೂ ಕೆಲವು ತಿಂಗಳುಗಳು ಬಾಕಿಯಿದ್ದವು. ಈಗಿನ ಕಾಲದಲ್ಲಿ ಮದುವೆಯ ಮೊದಲು ಹುಡುಗ-ಹುಡುಗಿ ತಿರುಗುವುದು, ಚರ ದೂರವಾಣಿಯಲ್ಲಿ ನಿರಂತರ ಮಾತನಾಡುವುದು, ಚಾಟ್ ಮಾಡುವುದು ಇವೆಲ್ಲಾ ಮಾಮೂಲಿ ತಾನೇ! ನನ್ನ ಸಹೋದ್ಯೋಗಿಯೂ ಇದರಿಂದ ಹೊರತಾಗಿರಲಿಲ್ಲ. ಬೆಳಗಿನ ತರಗತಿಗಳನ್ನು ಶುರು ಮಾಡುವ ಮೊದಲು ನನ್ನ ಹುಡುಗಿಯ ಹತ್ತಿರ ಮಾತನಾಡಬೇಕಲ್ಲಾ ಅನ್ನುತ್ತಾ “ಬೆಸುಗೆ, ಬೆಸುಗೆ, ಜೀವನವೆಲ್ಲಾ ಸುಂದರ ಬೆಸುಗೆ” ಎಂದು ಹಾಡುತ್ತಾ ಚರ ದೂರವಾಣಿಯ ಮೂಲಕ ಕರೆ ಮಾಡಿ ಮಾತನಾಡುವುದು ರೂಢಿಯಾಗಿತ್ತು. ಅವರ ಮದುವೆಯ ದಿನ ನವದಂಪತಿಗಳನ್ನು ಹರಸಲು ಬಂದ ಕ್ರೈಸ್ತಧರ್ಮಗುರುಗಳು ತಮ್ಮ ಮಾತುಗಳ ಆರಂಭದಲ್ಲಿಯೇ ಅದೇ ಬೆಸುಗೆ ಬೆಸುಗೆ ಹಾಡಿನ ಸಾಲನ್ನು ಉಲ್ಲೇಖಿಸಿದಾಗ ಇದೆಂತಹ ಸೋಜಿಗವೆನಿಸಿತ್ತು ನನಗೆ! ಆ ಧರ್ಮಗುರುಗಳಿಗಂತೂ ಆ ವಿಷಯ ಗೊತ್ತಿರಲು ಸಾಧ್ಯವೇ ಇಲ್ಲ. ಕಾಕತಾಳೀಯವಲ್ಲದೆ ಮತ್ತೇನು?

ನೆನೆದವರ ಮನದಲ್ಲಿ, ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಅದೇ, ನಿದ್ದೆ ಬರುತ್ತಿರುವವನಿಗೆ ಹಾಸಿಗೆ ಹಾಕಿ ಕೊಟ್ಟಂತೆ, ಹುಡುಕುತ್ತಿರುವ ಬಳ್ಳಿ ಕಾಲಿಗೆ ತೊಡರಿತು ಅನ್ನುವ ಮಾತುಗಳೆಲ್ಲವೂ ಈ ಕಾಕತಾಳೀಯತೆಗೆ ಸಂಬಂಧಿಸಿದುದೇ ಆಗಿವೆ. ಕಾಣದ ಕೈಯ ಕೈವಾಡವೆಂದರೆ ಅದೇ. ರಕ್ತಸಂಬಂಧವೇ ಇಲ್ಲದಿದ್ದರೂ ಒಬ್ಬರನ್ನೊಬ್ಬರು ಹೋಲುವಂತೆ ಇರುವವರು ಈ ಜಗತ್ತಿನಲ್ಲಿದ್ದಾರೆ. ಇದೂ ಕೂಡಾ ಕಾಕತಾಳೀಯವೇ. ಜೂನಿಯರ್ ರಾಜ್‌ಕುಮಾರ್, ಜೂನಿಯರ್ ವಿಷ್ಣುವರ್ಧನ್. ಜೂನಿಯರ್ ಉಪೇಂದ್ರ, ಜೂನಿಯರ್ ರವಿಚಂದ್ರನ್, ಜೂನಿಯರ್ ಮೋದಿ,… ಎಷ್ಟೋ ಜನರು ನಮ್ಮ ಮಧ್ಯೆ ಇರುವುದು ಸಹಾ ಕಾಕತಾಳೀಯವೇ. ಒಬ್ಬರ ಧ್ವನಿಯಂತೆ ಇನ್ನೊಬ್ಬರ ಧ್ವನಿಯಿರುವುದೂ ಕೂಡಾ ಕಾಕತಾಳೀಯವೇ.ಅದರಿಂದಾಗಿ ಏಮಾರಿಸುವವರೂ ಇದ್ದಾರೆ. ಏಮಾರಿಸಿಕೊಂಡವರೂ ಇದ್ದಾರೆ.

ಬರೆಯುತ್ತಾ ಹೋದಷ್ಟು, ಒಂದೆಡೆ ಸಿಕ್ಕುಗಳು ಬಿಡಿಸಿಕೊಳ್ಳುತ್ತಾ ಹೋದರೆ, ಇನ್ನೊಂದೆಡೆ ಸಿಕ್ಕುಗಳಾಗುತ್ತಾ ಹೋಗುವುದೇ ಈ ಕಾಕತಾಳೀಯತೆಯ ವಿಶೇಷತೆ. ನಾನು ಈ ಸುರಹೊನ್ನೆಯಲ್ಲಿ ಲೇಖನ ಬರೆಯಲಾರಂಭಿಸಿದುದು ಕೂಡಾ ಕಾಕತಾಳೀಯವೇ. ಈ ಲೇಖನ ಓದುತ್ತಿರುವವರಿಗೂ ಇಂತಹ ಅನೇಕ ಅನುಭವಗಳಾಗಿರಬಹುದು. ನನ್ನ ಅನುಭವಗಳ/ಲೇಖನದಲ್ಲಿ ಪ್ರಸ್ತಾಪಿಸಿರುವ ವಿಷಯಗಳ ಜೊತೆ ಹೋಲಿಕೆ ಕಂಡುಬಂದರೆ ಅದು ಕಾಕತಾಳೀಯವೇ. ನಿಮ್ಮ ಅನುಭವಗಳನ್ನು ಸಹಾ ಹಂಚಿಕೊಳ್ಳುವಿರಲ್ಲಾ?

-ಡಾ. ಕೃಷ್ಣಪ್ರಭ ಎಂ, ಮಂಗಳೂರು

11 Comments on “ಕಾಕತಾಳೀಯಗಳು

  1. ಅದ್ಭುತ ಬರಹ ಮೇಡಂ…. ಬಹುಷಃ ಸಂಬಂಧವಿಲ್ಲದ ನಮ್ಮಿಬ್ಬರ ನಡುವೆ… ನನ್ನ ಮನಸಿನಲ್ಲಿ ನಿಮ್ಮ ಬಗ್ಗೆ ಮಾತೃತ್ವದ ಭಾವನೆ ಮೂಡಿ… ನಿಮ್ಮನ್ನು ನನ್ನ ತಾಯಿಯಂತೆ ಪ್ರೀತಿಸುತ್ತಿರುವುದು ಕೂಡಾ ಕಾಕಾತಾಳೀಯವೇ ಸರಿ ✨️♥️

    1. ಧನ್ಯವಾದ ನಿನಗೆ…ಭವಿಷ್ಯದಲ್ಲಿ ಒಳ್ಳೆಯ ಲೇಖಕನಾಗು ಅನ್ನುವ ಹಾರೈಕೆ

  2. ಕಾಕತಾಳೀಯ… ಲೇಖನಕ್ಕೆ.. ಇನ್ನೂ.. ಒಂದೆರಡು.. ಉದಾಹರಣೆ…ಕೊಟ್ಟಿದ್ದರೆ..ಚೆನ್ನಾಗಿತ್ತು…ಎಂದು..ನನಗನ್ನಿಸಿತು..ಮೇಡಂ… ಯೋಚಿಸಿ…ಸಂಕಲನ..ಮಾಡುವಾಗ… ಚಂತಿಸಿ…ನನ್ನ… ಅಭಿಪ್ರಾಯ… ಅನ್ಯಥಾ..ಭಾವಿಸಬೇಡಿ..
    ಲೇಖನ… ಚೆನ್ನಾಗಿ ದೆ..

    1. ಮೇಡಂ, ನಿಮ್ಮ ಬಿಚ್ಚುಮನಸ್ಸಿನ ಅನಿಸಿಕೆಗೆ ಧನ್ಯವಾದಗಳು..ಈ ಪ್ರತಿಕ್ರಿಯೆಯಲ್ಲಿ ಸಂಕಲನ ಹೊರತರಬೇಕೆಂಬ ಆಶಯ ವ್ಯಕ್ತಪಡಿಸಿರುವಿರಿ…ನಿಮ್ಮ ಹಾರೈಕೆಗೆ ವಂದನೆಗಳು..ನಿಮ್ಮ ಸಲಹೆ ಖಂಡಿತ ಗಮನದಲ್ಲಿರುತ್ತದೆ

  3. ಕಾಕತಾಳೀಯದಲ್ಲಿ ಇಷ್ಟ್ಟೆಲ್ಲಾ ವಿಷಯಗಳು ಇವೆ ಎಂಬುದನ್ನು ಹೊಂದಿಸಿ ,ನೆನಪಿಸಿ ಬರೆದಿದ್ದೀರಿ ನಿಜವಾಗಿಯು ಓದಿ ಖುಷಿ ಆಯಿತು.ಒಟ್ಟಾರೆ ಚಂದದ ಬರಹ.

  4. ಕಾಕತಾಳೀಯದ ಕುರಿತ ಸೊಗಸಾದ ಬರೆಹ ನನಗೂ ಅನುಭವಕ್ಕೆ ಬಂದ ಹಲವು ಘಟನೆಗಳನ್ನು ನೆನಪಿಸಿತು.

  5. ಕಾಕತಾಳೀಯ ಸಂಗತಿಗಳು ಬದುಕಿನ ಮೇಲೆ ಪ್ರಭಾವ ಬೀರಿದ ಸಂದರ್ಭಗಳ ಸೇರ್ಪಡೆ ಇದ್ದರೆ ಪ್ರಬಂಧಕ್ಕೆ ಇನ್ನಷ್ಟು ವಿಶೇಷ ಗತಿ ದೊರೆಯುತ್ತದೆ ಎಂಬುದು ನನ್ನ ಅನ್ನಿಸಿಕೆ

  6. ಲೇಖನ ಓದಲು ತುಂಬಾ ಸೋಜಿಗ ವಾಗಿದೆ. ಕಾಕತಾಳಿಯ ಘಟನೆ ಗಳನ್ನೂ ನೆನಪಿಸಿತು.ಯೋಚಿಸಿದಾಗ ಅನಿಸುತ್ತದೆ… ಇದಕ್ಕಾಗಿ ಯೇ ಸಂಸ್ಕೃತ ನ್ಯಾಯಶಾಸ್ತ್ರ ದಲ್ಲಿ, ಕಾಕತಾಳೀಯನ್ಯಾಯ ಪ್ರಸ್ತಾಪ ವಾಗಿರಬಹುದೇ ಅನಿಸಿತು

Leave a Reply to ಚಂದ್ರಶೇಖರ Cancel reply

 Click this button or press Ctrl+G to toggle between Kannada and English

Your email address will not be published. Required fields are marked *