ಅವಿಸ್ಮರಣೀಯ ಅಮೆರಿಕ-ಎಳೆ 38
ಕಣಿವೆಯತ್ತ ಸಾಗುತ್ತಾ….
ಹೌದು…ನಾವು ವೀಕ್ಷಿಸುತ್ತಿರುವ ಕಣಿವೆಯ ಅದ್ಭುತ ಆಳ ಪ್ರಪಾತದ ಕಡೆಗೆ ದೃಷ್ಟಿ ನೆಟ್ಟಾಗ ಕಂಡದ್ದೇನು?!…ಅಬ್ಬಾ.. ಆ ಕೊಲೊರಾಡೊ ನದಿಯ ಗ್ಲೆನ್ ಕಣಿವೆ (Glen Canyon) ಯಲ್ಲಿ ಹರಿಯುತ್ತಿರುವ ತುಂಬು ನೀರು ತನ್ನಲ್ಲಿ, ಆದಿತ್ಯನ ಹೊನ್ನಕಿರಣಗಳನ್ನು ಪ್ರತಿಫಲಿಸಿ, ಆ ನಡುಗುಡ್ಡೆಗೆ ಬಂಗಾರದ ಮಾಲೆಯನ್ನು ತೊಡಿಸಿಬಿಟ್ಟಿತ್ತು!. ನೋಡಲು ನೂರು ಕಣ್ಣುಗಳೂ ಸಾಲವು! ನೂರಾರು ಕ್ಯಾಮರಾಗಳು ಕ್ಲಿಕ್ಕಿಸಿ ಆ ಅಂದವನ್ನು ತಮ್ಮೊಳಗೆ ತುಂಬಿಕೊಂಡವು. ನಾನಂತೂ ಆನಂದದಿಂದ ಬಿಟ್ಟ ಕಣ್ಣು ಬಾಯಿಗಳನ್ನು ಮುಚ್ಚಲೇ ಮರೆತು ಈ ಚೆಲುವನ್ನು ನನ್ನೊಳಗೆ ಪೂರ್ತಿ ಸೇರಿಸಿಕೊಂಡು ಬಿಟ್ಟೆ! ಇಂದಿಗೂ ಆ ಅದ್ಭುತ ದೃಶ್ಯವು ಮನದಂಗಳದಲ್ಲಿ ನಲಿದಾಡುತ್ತಿದೆ… ಮನ:ಪಟಲದಲ್ಲಿ ಅಚ್ಚಳಿಯದೆ ಉಳಿದಿದೆ! ಮುಂದೆ ಕೇವಲ ಹತ್ತು ನಿಮಿಷಗಳಲ್ಲಿ ಪ್ರಕೃತಿಯ ಈ ನಯನಮನೋಹರ ನಾಟಕವು ಕೊನೆಗೊಂಡು ಕತ್ತಲಾವರಿಸಿದಂತೆ, ಮನಸ್ಸಿಲ್ಲದ ಮನಸ್ಸಿನಿಂದ ಹಿಂತಿರುಗಲೇಬೇಕಾಯ್ತು.
ಹಾಂ…ಮರುದಿನ ಬೆಳಗು ಎಂದಿನಂತಿರಲಿಲ್ಲ… ಯಾಕೆ ಗೊತ್ತೇ? ಅಂದೇ.. ನಮ್ಮ ‘ವಿಷು ಸಂಕ್ರಮಣ’ ಹಬ್ಬವಾಗಿತ್ತು. ನಮಗೆಲ್ಲಾ ಹೊಸ ವರುಷದ ಆಗಮನದ ಸಂಭ್ರಮ! ಅಳಿಯ ತನ್ನ Ipad ನಲ್ಲಿ ಅಂತರ್ಜಾಲದಿಂದ ದೇವರನ್ನು ತಂದಿರಿಸಿದ. ನಮ್ಮವರು ಮೆಲ್ಲನೆ, ಹೂದೋಟದಿಂದ ಒಂದೆರಡು ಹೂಗಳನ್ನು ಕೊಯ್ದು ತಂದು (ಕದ್ದು ತಂದು??) ಅದರ ಮುಂದಿರಿಸಿದರೆ, ನಮ್ಮಚೀಲದಲ್ಲಿದ್ದ ಹಣ್ಣುಗಳು ದೇವರ ಮುಂದೆ ವಿರಾಜಿಸಿದವು! ಎಲ್ಲರೂ ದೇವರಿಗೆ ಉದ್ದಂಡ ನಮಸ್ಕಾರ ಮಾಡಿ, ವಿಷು ಹಬ್ಬವನ್ನು ವಿಶೇಷವಾಗಿ ಆಚರಿಸಿದೆವು. ಬೆಳಗ್ಗಿನ ಉಪಾಹಾರಕ್ಕಾಗಿ ಕೆಳಗಡೆಗೆ ಹೋದಾಗ, ಮಗಳ ಗೆಳತಿಯೊಬ್ಬಳು ಅಲ್ಲೇ ಕಾಣಸಿಕ್ಕಿದುದು ನಿಜಕ್ಕೂ ಖುಷಿಯ ಸಂಗತಿಯಾಗಿತ್ತು. ಅವಳು ಪ್ರತಿಭಾವಂತ ನೃತ್ಯಗಾತಿಯಾಗಿದ್ದು, ಮುಂದೆ ಹಲವಾರು ದಿನಗಳ ಬಳಿಕ, ಅಮೆರಿಕದಲ್ಲಿ ನಾವಿರುವ ಪ್ರದೇಶದ ಸಮೀಪ, ಅವಳ ಭರತನಾಟ್ಯ ಪ್ರದರ್ಶನವನ್ನು ವೀಕ್ಷಿಸುವ ಅವಕಾಶ ದೊರೆತುದು ಮಾತ್ರ ಕಾಕತಾಳೀಯ! ಬೆಳಗ್ಗಿನ ಉಪಾಹಾರದ ಬಳಿಕ ಅಲ್ಲಿಯ ಅತ್ಯಂತ ವಿಶೇಷವಾದ ಹುಲ್ಲೆ ಕಣಿವೆ (Antelope Canyon)ಯನ್ನು ವೀಕ್ಷಿಸಲು ಹೋಗುವುದಿತ್ತು. ಅದೊಂದು ಅತ್ಯದ್ಭುತ ತಾಣವೆಂದು ಮಗಳು ಮೊದಲೇ ತಿಳಿಸಿದುದರಿಂದ ನನ್ನ ಕುತೂಹಲಕ್ಕೆ ಎಣೆಯಿರಲಿಲ್ಲ.
ಅಮೆರಿಕದ ನೈರುತ್ಯ ದಿಕ್ಕಿನಲ್ಲಿ, ಈ ಅರಿಜೋನಾ ರಾಜ್ಯದ ಪೇಜ್ ಪಟ್ಟಣದ ಪೂರ್ವ ದಿಕ್ಕಿನಲ್ಲಿರುವ ಈ ಕಣಿವೆಯು ಎರಡು ಪ್ರತ್ಯೇಕ, ಸುಂದರವಾದ ಸೀಳುಗುಂಡಿ ಅಥವಾ ಸುರಂಗ ರೂಪದಲ್ಲಿ ಉದ್ದನೆಯ ತೂತಿನಂತಿರುವ ವಿಭಾಗಗಳನ್ನು ಒಳಗೊಂಡಿದೆ. ಅವುಗಳೇ ಮೇಲಿನ ಹುಲ್ಲೆ ಕಣಿವೆ ಮತ್ತು ಕೆಳಗಿನ ಹುಲ್ಲೆ ಕಣಿವೆಗಳು. ಇವುಗಳಲ್ಲಿ ಮೇಲಿನ ಹುಲ್ಲೆ ಕಣಿವೆಯ ಪ್ರವೇಶ ದ್ವಾರವು ನೆಲ ಮಟ್ಟದಲ್ಲಿರುವುದರಿಂದ, ಒಳಹೋಗಲು ಕಷ್ಟಪಡಬೇಕಾಗಿಲ್ಲ. ಇದರಿಂದಾಗಿ ಈ ಕಣಿವೆಯ ಭಾಗವು ಪ್ರವಾಸಿಗರ ಅತ್ಯಂತ ಮೆಚ್ಚಿನ ತಾಣವಾಗಿದೆ. ಬಹಳ ಹಿಂದೆ, ಚಳಿಗಾಲದ ಸಮಯದಲ್ಲಿ ಬಹಳಷ್ಟು ಹುಲ್ಲೆಗಳು ಇಲ್ಲಿ ಹುಲ್ಲು ಮೇಯುತ್ತಿದ್ದುದರಿಂದ ಈ ಕಣಿವೆಗೆ ಹುಲ್ಲೆ ಕಣಿವೆಯೆಂಬ ಹೆಸರು ಬಂದಿತೆಂಬ ಮಾಹಿತಿಯಿದೆ.
ಈ ಕಣಿವೆಗಳು ಭೂವೈಜ್ಞಾನಿಕ ಕುತೂಹಲಕ್ಕೆ ಕಾರಣವಾಗಿದೆ. ಯಾಕೆಂದರೆ, ಇವು ಭೂತಲದ ಬಂಡೆಯಲ್ಲಿ ಬಿರುಕುಂಟಾಗಿ, ನೀರಿನ ಹರಿವು ಅಲ್ಲಿ ದಾರಿ ಕಂಡುಕೊಂಡಾಗ ರೂಪುಗೊಂಡವುಗಳು. ತೀವ್ರ ಸುರುಳಿಯಾಕಾರದಲ್ಲಿ ಹರಿದ ನೀರು, ರಭಸದಿಂದ ಮೆದುಕಲ್ಲನ್ನು ಕೊರೆದು ವಿವಿಧ ಆಕಾರಗಳನ್ನು ಮಾಡಿದೆ.
ಮೇಲಿನ ಹುಲ್ಲೆ ಕಣಿವೆಯು, ಜಗತ್ತಿನಲ್ಲಿಯೇ ಅತ್ಯದ್ಭುತ, ವಿಚಿತ್ರ ಹಾಗೂ ಸುಂದರ ತಾಣವಾಗಿದೆ. ಮುಖ್ಯವಾಗಿ ಛಾಯಾಗ್ರಾಹಕರ ಸ್ವರ್ಗ ಎಂದೂ ಕರೆಸಿಕೊಳ್ಳುತ್ತಿದೆ ಮತ್ತು ಸದಾ ಪ್ರವಾಸಿಗರಿಂದ ತುಂಬಿರುತ್ತದೆ. ಈ ಗುಹಾ ರೀತಿಯ ಕಣಿವೆಯು ಸುಮಾರು 407 ಮೀ. ಉದ್ದವಿದ್ದು, ಭೂತಳದಿಂದ 37 ಮೀ ಆಳದಲ್ಲಿದೆ. ಮಿಲಿಯಗಟ್ಟಲೆ ವರ್ಷಗಳಿಂದ ಸುರಿದ ಮಳೆ, ಬೀಸಿದ ಗಾಳಿಯಿಂದ ಉಂಟಾದ ಭೂ ಸವಕಳಿಯಿಂದಾಗಿ ವಿಚಿತ್ರ ರೀತಿಯಲ್ಲಿ, ಭೂಮಿಯಲ್ಲಿ ಅಡ್ಡಲಾಗಿಯೂ, ಅದರ ಮೇಲ್ಭಾಗದಲ್ಲಿಯೂ, ಮರಳು ಕಲ್ಲಿನ ಬೃಹದ್ಗಾತ್ರದ ಅತ್ಯಂತ ನಯವಾದ ರಂಧ್ರಗಳು, ರೂಪುಗೊಂಡಿವೆ. ಇವುಗಳ ಮೂಲಕ ಬೀಳುವ ಸೂರ್ಯಕಿರಣಗಳಿಂದ ಪ್ರತಿಫಲನಗೊಳ್ಳುವ ಇದರೊಳಗಿನ ಮೇಲ್ಮೈಗಳು ಅದ್ಭುತ ವರ್ಣ ವೈವಿಧ್ಯತೆಗಳಿಂದ ಕೂಡಿರುತ್ತವೆ. ಮುಖ್ಯವಾಗಿ ಜೂನ್, ಜುಲೈ ಮತ್ತು ಅಗಸ್ಟ್ ತಿಂಗಳುಗಳಲ್ಲಿ ಇವುಗಳ ಅತ್ಯುತ್ಕೃಷ್ಟ ನೋಟವು ಲಭ್ಯವಾಗುವುದು. ಇಲ್ಲಿ ವೀಕ್ಷಣೆಗಾಗಿ, ಉತ್ತಮ ತರಬೇತಿ ಪಡೆದ, ಸ್ಥಳೀಯರಾದ ನಾವಹೊ(Navajo) ಜನಾಂಗ, ಅಂದರೆ ಮೂಲನಿವಾಸಿಗಳಾದ ರೆಡ್ ಇಂಡಿಯನ್ ಜನ ಸಮುದಾಯದವರು ನಡೆಸುತ್ತಿರುವ ಸಂಸ್ಥೆಯ ಪ್ರವಾಸೀ ವಾಹನಗಳಲ್ಲಿ , ಅವರ ಮಾರ್ಗದರ್ಶನದಲ್ಲಿಯೇ ಹೋಗಬೇಕಾಗುತ್ತದೆ.
ಇಲ್ಲಿ, ಈ ಮೂಲನಿವಾಸಿಗಳ ಬಗ್ಗೆ ಹೇಳದಿದ್ದರೆ ತಪ್ಪಾಗಬಹುದು. ಅಲ್ಪಸಂಖ್ಯಾತರಾದ ಇವರು ವಾಸಿಸುತ್ತಿದ್ದ ಭೂಭಾಗವನ್ನೆಲ್ಲಾ, ಹೆಚ್ಚಿನ ಸಂಖ್ಯೆಯಲ್ಲಿ ಅಮೆರಿಕಕ್ಕೆ ಬಂದ ವಸಾಹತುದಾರರು ತಮ್ಮ ವಶಪಡಿಸಿಕೊಂಡು, ಸ್ಥಳೀಯರನ್ನು ತಮ್ಮ ಸ್ವಾಧೀನದಲ್ಲಿರಿಸಿ, ಅವರನ್ನೇ ಆಳಾಗಿ ದುಡಿಸಿಕೊಳ್ಳತೊಡಗಿದರು. ಸದಾ ಪ್ರಕೃತಿಯೊಡನೆ ಬೆರೆತು ಬಾಳುತ್ತಾ, ಕಷ್ಟಪಟ್ಟು ದುಡಿದುಣ್ಣುತ್ತಿದ್ದ ಮಂದಿಗೆ ದಿಗ್ಬಂಧನದಲ್ಲಿ ಇರಿಸಿದಂತಾಯಿತು…ಅವರ ಸ್ವಾತಂತ್ರಹರಣವಾಯಿತು. ಹೊಸ ರೀತಿಯ ಜೀವನಕ್ಕೆ ಒಗ್ಗಿಕೊಳ್ಳಲು ಕಷ್ಟಪಡುವುದನ್ನು ನೋಡಲು ನಮಗೆಹಿಂಸೆಯಾಗುತ್ತದೆ. ಶಾರೀರಿಕ ಶ್ರಮವಿಲ್ಲದುದರಿಂದ ಅತೀ ಸ್ಥೂಲಕಾಯವನ್ನು ಹೊಂದಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಪುರುಷರು ಸ್ತ್ರೀಯರಂತೆ ಉದ್ದನೆಯ ಜಡೆ ಹೊಂದಿರುವುದು ವಿಶೇಷವೆನಿಸುತ್ತದೆ. ಆದರೆ, ಇದೇ ಅವರ ಗುರುತಿಸುವಿಕೆ ಕೂಡಾ ಹೌದು! ಅವರಲ್ಲಿ ಹೆಚ್ಚಿನವರೆಲ್ಲಾ ಅವಿದ್ಯಾವಂತರು… ಮುಂದೆ ಬರಲು ದಾರಿ ತೋಚದೆ ಕಂಗಾಲಾಗಿರುವವರು. ಇವರ ಬವಣೆಯು ನಮ್ಮ ಸ್ವಾತಂತ್ರ್ಯ ಪೂರ್ವದ ಸ್ಥಿತಿಯನ್ನು ನೆನಪಿಸುತ್ತದೆ. ಅವರದೇ ಸ್ವಂತ ನಾಡಿನಲ್ಲಿ, ಬೇರೆ ಕಡೆಯಿಂದ ಬಂದ ಮಂದಿಯ ಕೈಕೆಳಗೆ ಜೀತದಾಳಾಗಿ ದುಡಿದು ಬಾಳುವುದನ್ನು ಕಂಡಾಗ ನನಗೆ ಅತ್ಯಂತ ಖೇದವೆನಿಸಿತು…ಮನನೊಂದಿತು.
ನಮ್ಮ ಮುಂದಿನ ಯೋಜನೆಯಂತೆ, ಬೆಳಗ್ಗೆ ಗಂಟೆ11:30 ರ ತಂಡದಲ್ಲಿ ಹೋಗುವುದಿತ್ತು… ಯಾಕೆಂದರೆ, ಕಣಿವೆಯೊಳಗೆ ಸೂರ್ಯನ ಕಿರಣಗಳ ಬೆಳಕಿನಾಟಕ್ಕೆ ಅದು ಸೂಕ್ತ ಸಮಯವಾಗಿತ್ತು. ಅಲ್ಲಿಗೆ ಭೇಟಿ ಕೊಡಲು ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ. ಅಲ್ಲದೆ, ಈ ಅತ್ಯುತ್ತಮ ವೀಕ್ಷಣಾ ಸಮಯದ ತಂಡಕ್ಕೆ ಸ್ವಲ್ಪ ಹೆಚ್ಚಿನ ದರವನ್ನು ತೆರಬೇಕಾಗುತ್ತದೆ. ನಮ್ಮ ವಸತಿಗೃಹದಿಂದ ವಾಹನದಲ್ಲಿ ಕೇವಲ ಹದಿನೈದು ನಿಮಿಷಗಳ ಪ್ರಯಾಣದಲ್ಲಿ ಅಲ್ಲಿಗೆ ತಲಪುತ್ತಿದ್ದಂತೆಯೇ, ಅಲ್ಲಿಯ ವಾತಾವರಣ ಅತ್ಯಂತ ವಿಶೇಷ ರೀತಿಯಲ್ಲಿ ಪ್ರಕ್ಷುಬ್ಧಗೊಂಡಂತೆ ಕಂಡು ಬಂತು. ಬಹಳ ರಭಸದಲ್ಲಿ ಬೀಸುತ್ತಿದ್ದ ಶುಷ್ಕ ಗಾಳಿಗೆ, ನಾವೇ ನೆಲದಿಂದ ಮೇಲೆ ಹಾರಿ ಹೋಗುವೆವೇನೋ ಎನಿಸಿತು. ಗಿಡಮರಗಳ ಸುಳಿವೇ ಇಲ್ಲದ ಆ ಸ್ಥಳದಲ್ಲಿ ಮರುಭೂಮಿಯಂತೆ ಬರೀ ಮರಳೇ ತುಂಬಿತ್ತು. ಜೋರಾಗಿ ಬೀಸುವ ಗಾಳಿಯೊಂದಿಗೆ ಮರಳು ಬೆರೆತು ನಮ್ಮ ಮೈ ಮುಖಕ್ಕೆ
ರಾಚುತ್ತಿತ್ತು. ಮಗುವನ್ನು ಹೊರಗೆ ಗಾಳಿಗೊಡ್ಡಲೇ ಭಯ!
ಅಳಿಯನ ಮುಂದಾಲೋಚನೆ ಇಲ್ಲಿ ಬಹಳ ಉಪಯೋಗಕ್ಕೆ ಬಂತು ನೋಡಿ. ಅವನು ಎಲ್ಲರಿಗೂ ಸಾಕಷ್ಟು ಟೋಪಿ, ಬಿಸಿಲು ಕನ್ನಡಕಗಳನ್ನು ಬ್ಯಾಗಿನಲ್ಲಿ ತುಂಬಿಸಿ ತಂದಿದ್ದ. ಇವುಗಳು ಇಲ್ಲದಿರುತ್ತಿದ್ದರೆ ನಮಗಲ್ಲಿ ನಿಲ್ಲಲೇ ಸಾದ್ಯವಾಗುತ್ತಿರಲಿಲ್ಲ! ನಾವೆಲ್ಲರೂ “ಅಬ್ಬ…ಬಚಾವು” ಎಂದುಕೊಂಡು ಟೋಪಿ ಧರಿಸಿದ್ದೇ ತಡ, ಅದು ಹಾರಿ ದೂರದಲ್ಲಿ ಬಿತ್ತು! ಅಂತೂ ಒಂದು ಕೈಯಲ್ಲಿ ಟೋಪಿಯನ್ನು ಜೋಪಾನ ಮಾಡುತ್ತಾ, ಕಪ್ಪು ಕನ್ನಡಕಧಾರಿಗಳಾಗಿ, ತೆರೆದ ಜೀಪಿಗೆ, ನಮ್ಮ ಎಂಟು ಜನರ ತಂಡವು ಏರಿಸಿತು. ಹೀಗೆ, ತಂಡ ತಂಡವಾಗಿ, ನಾಲ್ಕು ವಾಹನಗಳು ಜೊತೆಗೇ ಹೋಗಬೇಕೆನ್ನುವ ನಿಯಮದಂತೆ, ಒಂದರ ಬೆನ್ನ ಹಿಂದೆ ಒಂದರಂತೆ ನಮ್ಮ ವಾಹನಗಳ ಮೆರವಣಿಗೆ ಹೊರಟಿತು. ಸುಮಾರು ಹದಿನೈದು ನಿಮಿಷಗಳ ನಮ್ಮ ಪ್ರಯಾಣವು ಬಹಳ ಆತಂಕದಿಂದಲೇ ಸಾಗಿತ್ತು ಎನ್ನಬಹುದು. ಯಾಕೆ ಗೊತ್ತೇ.. ಆ ಮರಳು ತುಂಬಿದ ಬಯಲಿನಲ್ಲಿ ವಾಹನದ ಚಕ್ರಗಳು ಉರುಳಿದಾಗ, ಮರಳಿನ ಸಣ್ಣ ಕಣಗಳು ಸ್ವಲ್ಪ ಪ್ರಮಾಣದಲ್ಲಿ ರಾಚುತ್ತಿತ್ತು ನಿಜ. ಆದರೆ, ಮುಂದುಗಡೆ ಬೇರೆ ವಾಹನ ಹೋಗುತ್ತಿದ್ದರೆ ನಮ್ಮ ಫಜೀತಿ ಯಾರಿಗೂ ಬೇಡ… ಮರಳಿನ ಮೋಡವೇ ನಮ್ಮನ್ನಾವರಿಸಿ ಪುಣ್ಯಸ್ನಾನವಾಗಿಬಿಡುತ್ತಿತ್ತು! ನಮ್ಮ ಪುಟ್ಟ ಮೊಮ್ಮಗು ಮಾತ್ರ ಈ ತೊಂದರೆಯಿಂದ ಮುಕ್ತನಾಗಿ, ಅವನ ಅಪ್ಪನ ಮಡಿಲಲ್ಲಿ ಚಾಲಕನ ಪಕ್ಕ ಮುಚ್ಚಿದ ಕ್ಯಾಬಿನಲ್ಲಿ ಚಿಂತೆಯಿಲ್ಲದೆ ಮಲಗಿದ್ದ. …..
ಹುಲ್ಲೆ ಕಣಿವೆಯೊಳಗಿನ ಅದ್ಭುತ ಪ್ರಪಂಚವನ್ನು ವೀಕ್ಷಿಸಿದ ಸವಿ ನೆನಪಿನೊಂದಿಗೆ ನಮ್ಮ ಪಯಣ ಹೊರಟಿತು… ಮತ್ತೊಂದು ಊಹಾತೀತ ಕಣಿವೆ ಪ್ರಪಂಚದತ್ತ ದೃಷ್ಟಿ ನೆಟ್ಟು…
(ಮುಂದುವರಿಯುವುದು……)
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=36155
ಚೆನ್ನಾಗಿ ಬರೆಯುತ್ತಾ ಇದ್ದೀರಿ ಶಂಕರಿ ಶರ್ಮ.
ವಿಷು ಸಂಕ್ರಮಣದ ದಿನ ಬೇರೊಂದು ರಾಷ್ಟ್ರದಲ್ಲಿದ್ದರೂ ಸಂಪ್ರದಾಯ ಮರೆಯದೆ ಮಾಡಿದುದು ವಿಶೇಷ!!.
ಧನ್ಯವಾದಗಳು ವಿಜಯಕ್ಕ
Very nice
ಧನ್ಯವಾದಗಳು
ಅಮೆರಿಕಾ ಪ್ರವಾಸ ಕಥನದ..ಎಳೆ ಅವಿಸ್ಮರಣೀಯ ವಾಗಿಯೇ ಇದೆ… ಅಚ್ಚುಕಟ್ಟಾದ ನಿರೂಪಣೆಯಲ್ಲಿ… ಸಾಗುತ್ತಿದೆ…ಧನ್ಯವಾದಗಳು ಶಂಕರಿ ಮೇಡಂ
ಧನ್ಯವಾದಗಳು ಮೇಡಂ
nice!
ಧನ್ಯವಾದಗಳು ಮೇಡಂ
Nice presentstion!