ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 10

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..

ಜನಸಾಮಾನ್ಯರಿಗೆ ವಿಜ್ಞಾನದ ಮೂಲಕ ಸೇವೆಅನನ್ಯತೆಯ ಪ್ರತಿಪಾದನೆ ಆಧುನಿಕ ಭಾರತದ ನಿರ್ಮಾಣಕ್ಕೆ ಕೊಡಿಗೆ:

ಸ್ವದೇಶೀ ಚಳುವಳಿಯು ಎಲ್ಲಾ ಕ್ಷೇತ್ರಗಳಲ್ಲೂ ಚಿಂತಕರು ಸ್ವತಂತ್ರವಾಗಿ ಶೋಧನಾಕಾರ್ಯದಲ್ಲಿ ತೊಡಗಿಕೊಳ್ಳಲು ಪ್ರೇರಣೆಯನ್ನುಂಟು ಮಾಡಿತು. ಪ್ರಾರಂಭದಲ್ಲಿ ರಸಾಯನಶಾಸ್ತ್ರ, ಕೃಷಿವಿಜ್ಞಾನ ಮತ್ತು ಜೀವಶಾಸ್ತ್ರ ವಿಭಾಗಗಳಲ್ಲಿ ಹೆಚ್ಚಾಗಿ ಸಂಶೋಧನೆ ನಡೆಯುತ್ತಿತ್ತು. 1900ರ ವೇಳೆಗೆ ಹಣಕಾಸಿನ ನೆರವು ಒದಗಿಬಂದುದರಿಂದ 4 ದಶಕಗಳಲ್ಲಿ ರಾಷ್ಟ್ರೀಯ ವಿಜ್ಞಾನ ಗಟ್ಟಿಯಾದ ನೆಲೆಯನ್ನು ಕಂಡುಕೊಂಡಿತು. ಭಾರತೀಯ‌ ವಿಜ್ಞಾನಿ-ಸಮುದಾಯವು ರಾಷ್ಟ್ರೀಯ ವಿಜ್ಞಾನಕ್ಕೆ ಅಂತರ್ರಾಷ್ಟ್ರೀಯ ಮನ್ನಣೆಯನ್ನು ದೊರಕಿಸಿಕೊಡಲು ಪರಿಶ್ರಮಿಸಿತು. ಈ ಸಮುದಾಯದ ಪ್ರಭಾವವು ಸೀಮಿತವಾದದ್ದಾಗಿದ್ದರೂ ಮುಂದಿನ ಪೀಳಿಗೆಗೆ ಸ್ಫೂರ್ತಿಯನ್ನು ಕೊಟ್ಟಿತು. ಸಮಾಜಶಾಸ್ತ್ರೀಯ ಕ್ಷೇತ್ರಗಳನ್ನು ವೈಜ್ಞಾನಿಕ ವಿಧಾನದಿಂದ ಅಧ್ಯಯನ ಮಾಡಬಹುದು ಎಂಬುದನ್ನು ಬ್ರಿಟಿಷ್‌ ಶಿಕ್ಷಣ ವ್ಯವಸ್ಥೆ ಸ್ಪಷ್ಟಪಡಿಸಿತ್ತು. ಭಾರತೀಯ ಚಿಂತಕರು ವಿಜ್ಞಾನ ತಂತ್ರಜ್ಞಾನಗಳಿಗೆ ಸಂಬಂಧಿಸಿದ ವಿಷಯಗಳನ್ನು ಮಾತ್ರವಲ್ಲದೆ ಸಮಾಜಶಾಸ್ತ್ರೀಯ ವಿಜ್ಞಾನಗಳನ್ನೂ, ಮಾನವಿಕ ವಿಜ್ಞಾನಗಳನ್ನೂ, ಪ್ರಕೃತಿ-ವಿಜ್ಞಾನಗಳನ್ನೂ ಸಹ ವೈಜ್ಞಾನಿಕ ವಿಧಾನದಿಂದ ಅಧ್ಯಯನ ಮಾಡಿದರು. 

1826ರಲ್ಲಿ ಸಂಸ್ಕೃತ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಪಂಡಿತ ಮಧುಸೂದನ ಗುಪ್ತ ಬೋಧಕರಾಗಿ ಪದೋನ್ನತಿಯನ್ನು ಪಡೆದವರು. ಅಲ್ಲಿ 5 ವರ್ಷಗಳ ಕಾಲ ಅನಾಟಮಿ ಮತ್ತು ಮೆಡಿಸಿನ್‌ ಗಳ ಬಗ್ಗೆ ಉಪನ್ಯಾಸಗಳನ್ನು ಕೇಳಿದ ಗುಪ್ತ ಈ ಉಪನ್ಯಾಸಗಳನ್ನು ಮಾಡಿದ ಅಲ್ಲಿಯ ಯೂರೋಪಿಯನ್‌ ಬೋಧಕರಿಗೆ ಸಹಾಯಕರಾದರು. ಜೊತೆಗೆ 1834ರಲ್ಲಿ ಇಂಗ್ಲಿಷ್‌ ಮೆಡಿಕಲ್‌ ಪುಸ್ತಕಗಳನ್ನು ಸಂಸ್ಕೃತಕ್ಕೆ ಭಾಷಾಂತರಿಸುವ ಕೆಲಸವನ್ನೂ ಆರಂಭಿಸಿದರು. ಅವರು ಭಾಷಾಂತರಿಸಿದ ಹೂಪರ್‌ ನ “ಅನಾಟೊಮಿಸ್ಟ್ಸ್‌” ಕೃತಿಯನ್ನು “ಏಷಿಯಾಟಿಕ್‌ ಸೊಸೈಟಿ”ಯು 1834ರಲ್ಲಿ ಪ್ರಕಟಿಸಿತು. 

1833ರಲ್ಲಿ ಈಸ್ಟ್‌ ಇಂಡಿಯ ಕಂಪೆನಿಯು ಯುನಾನಿ, ಆಯುರ್ವೇದಿಕ್‌ ಕೋರ್ಸ್‌ ಗಳನ್ನು ನಿಷೇಧಿಸಿ ಇಂಗ್ಲಿಷ್‌ ಮೆಡಿಕಲ್‌ ಕೋರ್ಸನ್ನು ಆರಂಭಿಸಿತ್ತು. 1835ರಲ್ಲಿ ಆರಂಭವಾದ ಕಲ್ಕತ್ತ (ಬೆಂಗಾಲ್)‌ ಮೆಡಿಕಲ್‌ ಕಾಲೇಜಿನಲ್ಲಿ ಗುಪ್ತ ಬೋಧಕರಾದರು, ಭಾರತೀಯ ವೈದ್ಯ ಸುಶ್ರುತ ಅನಾಟಮಿ ಡಿಸೆಕ್ಷನ್‌ ಮಾಡಿದ 3000 ವರ್ಷಗಳ ನಂತರ ಈ ಕಾರ್ಯವನ್ನು 1836ರಲ್ಲಿ ಗುಪ್ತ ಭಾರತದಲ್ಲಿ ಮಾತ್ರವಲ್ಲ ಏಷ್ಯಾದಲ್ಲೇ ಪ್ರಪ್ರಥಮವಾಗಿ ಯಶಸ್ವಿಯಾಗಿ ನಿರ್ವಹಿಸಿದವರಾಗಿದ್ದರು, ಹೆಣವನ್ನು ಮುಟ್ಟಬಾರದು ಎಂಬ ಧಾರ್ಮಿಕ ನಿಷೇಧವನ್ನು ಉಲ್ಲಂಘಿಸಿದರು, ವೈದ್ಯಕೀಯ ಅಧ್ಯಯನ ಪ್ರಾಯೋಗಿಕವಾಗುವ ದಿಕ್ಕಿನಲ್ಲಿ ಹೆಜ್ಜೆ ಹಾಕಿದರು, ವಿದ್ಯಾರ್ಥಿಗಳನ್ನು ಮುನ್ನಡೆಸಿದರು. ಇವರ ನೇತೃತ್ವದಲ್ಲಿ ಸಿಡುಬುರೋಗ ನಿವಾರಣೆಯ ವಾಕ್ಸಿನೇಷನ್‌ ಹಾಕುವ ಕಾರ್ಯ ಸಫಲವಾಯಿತು. 

ಬೆಂಗಾಲ್‌ ಮೆಡಿಕಲ್‌ ಕಾಲೇಜು 1835ರಲ್ಲಿ ಆರಂಭವಾದಾಗ ಪ್ರವೇಶ ಪಡೆದವರಲ್ಲಿ ಒಬ್ಬರು ದ್ವಾರಕಾನಾಥ ಗೋಪ್ತು. ವೈದ್ಯಕೀಯ ಪದವಿಯನ್ನು 1839ರಲ್ಲಿ ಪಡೆದು 1840ರಲ್ಲಿ Messrs. D. Gooptu & co, ಎಂಬ ಫರ್ಮ್‌ನ್ನು ಆರಂಭಿಸಿದರು. ಇದು ಇಂಗ್ಲಿಷ್‌ ಔಷಧಗಳನ್ನು, ಕೆಮಿಕಲ್‌ಗಳನ್ನು ಮಾರಾಟ ಮಾಡುವ ಪ್ರಪ್ರಥಮ ಫರ್ಮ್.‌ ಇದು ತನ್ನದೇ ಆದ ಔಷಧಾಲಯವನ್ನೂ ಹೊಂದಿತ್ತು. ಮಲೇರಿಯ ಜ್ವರವನ್ನೂ ಒಳಗೊಂಡಂತೆ ಎಲ್ಲಾ ರೀತಿಯ ಜ್ವರಗಳನ್ನೂ ನಿವಾರಿಸುವ “ಆಂಟಿ ಪೀರಿಯಾಡಿಕ್ ಮಿಕ್ಚರ್‌” ನ್ನು ಅಭಿವೃದ್ಧಿಪಡಿಸಿದ ದ್ವಾರಕಾನಾಥ್‌ ಇದಕ್ಕೆ ಪೇಟೆಂಟ್‌ ಸಹ ಪಡೆದಿದ್ದರು. ಇದು ಡಿ. ಗೋಪ್ತು ಟಾನಿಕ್‌ ಎಂದೇ ಪ್ರಸಿದ್ಧವಾಗಿತ್ತು. ಇದು ಸಾಂಪ್ರದಾಯಿಕ ಆಯುರ್ವೇದಿಕ್‌ ಔಷಧಕ್ಕಿಂತಲೂ ಹೆಚ್ಚು ಶೀಘ್ರವಾಗಿ ಪರಿಣಾಮಕಾರಿಯಾಗಿ ಕೆಲಸಮಾಡುವ ಔಷಧ ಎಂದು ಪರಿಗಣಿತವಾಗಿತ್ತು ಬ್ರಿಟಿಷರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದ ದ್ವಾರಕಾನಾಥ್‌ ತಮ್ಮ ಉತ್ಪನ್ನಗಳನ್ನು ಆಫ್ರಿಕಾಗೆ ಕಳುಹಿಸುತ್ತಿದ್ದರು. ದ್ವಾರಕಾನಾಥರವರ ಸ್ವಾಮ್ಯದ ಕೆಲವು ಔಷಧಿಗಳು: Anti-periodic mixture “Falena Parichiyata”, Spleen and Liver Ointment, Special liver mixture for all kinds of ailment of liver, Diarrhoea and Dysentery Pills, Liver-purging Pills, Essence of Jamaica Sarsaparilla.

1841ರಲ್ಲಿ ಕಲ್ಕತ್ತ ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯಕೀಯ ಪದವಿಯನ್ನು ಪಡೆದ ನಬೀನ ಚಂದ್ರ ಪಾಲ್ ಬೆನಾರಸಿನಲ್ಲಿ ಯೋಗವನ್ನು ಅಧ್ಯಯನ ಮಾಡಿ 1851ರಲ್ಲಿ “ಟ್ರೀಟೈಸ್‌ ಆನ್‌ ಯೋಗ ಫಿಲಾಸಫಿ” ಎಂಬ ಕೃತಿಯನ್ನು ಪ್ರಕಟಿಸಿದರು. ಇದು ಭಾರತೀಯ ಯೋಗಕ್ಕೆ ಆಧುನಿಕ ವೈಜ್ಞಾನಿಕ ವೈದ್ಯಶಾಸ್ತ್ರದೊಂದಿಗೆ ಇರುವ ಸಂಬಂಧವನ್ನು ಗುರುತಿಸಿದ ಪ್ರಪ್ರಥಮ ಕೃತಿ. ಯೋಗವನ್ನು ಮುಂದುವರೆಯುವ ನಿದ್ರೆ ಎನ್ನುವ ದೃಷ್ಟಿಕೋನದಿಂದ ಗಮನಿಸಿ ಪಾಲ್‌ ಅದು “ಹೈಪರ್‌ ಕ್ಯಾಪ್ನಿಯ” ವನ್ನು ಉತ್ತೇಜಿಸಿಸುತ್ತದೆ ಎಂಬುದನ್ನು ಹೈಬರ್‌ ನೇಷನ್‌ ಗೆ ಒಳಗಾದವರ ಕೇಸ್ ಸ್ಟಡಿಗಳ ಮೂಲಕ ಪ್ರತಿಪಾದಿಸಿದ್ದಾರೆ. ಈ ಕೃತಿಯಲ್ಲಿ ರಾಜಯೋಗ ಮತ್ತು ಹಟಯೋಗದ ಆಸನಗಳನ್ನು ವಿವರಿಸಿ ಅವುಗಳ ಪ್ರಯೋಜನವನ್ನು ಗುರುತಿಸಿದ್ದಾರೆ. ಇದು ವೈದ್ಯಕೀಯ ಜಗತ್ತಿನಲ್ಲಿ ಗಮನಾರ್ಹ ಸಂವೇದನೆಯನ್ನು ಉ೦ಟುಮಾಡಿತು.  

ಕಲ್ಕತ್ತ ಮೆಡಿಕಲ್‌ ಕಾಲೇಜಿನಲ್ಲಿ 1853ರಲ್ಲಿ ಡಿಪ್ಲೊಮ ಪಡೆದು “ಬೆಂಗಾಲ್‌ ಮೆಡಿಕಲ್‌ ಎಸ್ಟಾಬ್ಲಿಷ್‌ ಮೆಂಟ್‌” ನಲ್ಲಿ ಸಹಾಯಕ ಸರ್ಜನ್‌ ಆದ ಕನ್ನಯ್ಯ ಲಾಲ್ಡೇ ರಸಾಯನಶಾಸ್ತ್ರವನ್ನು ಪ್ರೆಸಿಡೆನ್ಸಿ ಕಾಲೇಜಿನಲ್ಲಿ, ಮೆಡಿಕಲ್‌ ಜ್ಯೂರಿಸ್ಪ್ರೂಡೆನ್ಸ್‌ ನ್ನು ಕಲ್ಕತ್ತ ಮೆಡಿಕಲ್‌ ಕಾಲೇಜಿನಲ್ಲಿ ಬೋಧಿಸುತ್ತ ಸರ್ಕಾರದ ಕೆಮಿಕಲ್‌ ಪರೀಕ್ಷಕರಾಗಿಯೂ ಕೆಲಸಮಾಡಿದವರು. 1862ರಲ್ಲಿ ಲಂಡನ್ನಿನಲ್ಲಿ, 1870ರಲ್ಲಿ ಅಮೆರಿಕೆಯ ವರ್ಜೀನಿಯ ವಿಶ್ವವಿದ್ಯಾನಿಲಯದಲ್ಲಿ, 1872ರಲ್ಲಿ ವಿಯನ್ನಾದಲ್ಲಿ, 1878ರಲ್ಲಿ ಪ್ಯಾರಿಸ್‌ನಲ್ಲಿ, 1880ರಲ್ಲಿ ಮೆಲ್‌ಬೋರ್ನ್‌ನಲ್ಲಿ, 1883ರಲ್ಲಿ ಅಮ್ಸ್-ಟರ್‌ಡಮ್‌ನಲ್ಲಿ, 1884-85ರಲ್ಲಿ ನ್ಯೂ ಆರ್ಲಿಯೇನ್ಸ್‌ನಲ್ಲಿ 1886ರಲ್ಲಿ ಲಂಡನ್ನಿನಲ್ಲಿ ನಡೆದ ಅಂತರ್ರಾಷ್ಟ್ರೀಯ ಪ್ರದರ್ಶನದಲ್ಲಿ ತಾವೇ ಅಭಿವೃದ್ಧಿ ಪಡಿಸಿದ ದೇಶೀಯ ಔಷಧೀಯ ಎಣ್ಣೆಗಳನ್ನು ಮತ್ತು ಮದ್ದುಗಳನ್ನು ಪ್ರದರ್ಶಿಸಿ ಬಂಗಾರದ ಪದಕದ ಗೌರವವನ್ನು ಪಡೆದಿದ್ದರು. 

ಇವರು ಭಾರತದ ಔಷಧ ತಯಾರಿಕಾ ವಿಧಾನಗಳನ್ನು ವಿವರಿಸುವ “The indigenous drugs of India: Short descriptive notices of the Principal medicinal products met with in British India” ಕೃತಿಯನ್ನು ವಿಲಿಯಂ ಮೇರ್‌ ಅವರ ಸಹಕಾರದೊಂದಿಗೆ 1867ರಲ್ಲಿ ಪ್ರಥಮ ಆವೃತ್ತಿಯಾಗಿ, 1886ರಲ್ಲಿ ದ್ವಿತೀಯ ಆವೃತ್ತಿಯಾಗಿ ಹೊಸ ಮಾಹಿತಿಗಳ ಸೇರ್ಪಡೆಯೊಂದಿಗೆ ರಚಿಸಿ ಪ್ರಕಟಿಸಿದರು. 1873ರಲ್ಲಿ ಕೆನ್ಸಿಂಗ್‌ಟನ್‌ ಮತ್ತು ವಿಯನ್ನಾ ಮ್ಯೂಸಿಯಂಗಳಲ್ಲಿ ಭಾರತದ ಔಷಧೀಯ ಉತ್ಪತ್ತಿಗಳ ಸಂಗ್ರಹಣೆಗೆ, 1874ರಲ್ಲಿ ಕಲ್ಕತ್ತೆಯಲ್ಲಿ ಭಾರತದ ಔಷಧೀಯ ಉತ್ಪತ್ತಿಗಳ ಮ್ಯೂಸಿಯಂನ ಸ್ಥಾಫನೆಗೆ ಎಲ್ಲಾ ಪರಿಕರಗಳನ್ನು ಒದಗಿಸಿದರು. 1877ರಲ್ಲಿ ಬಂಗಾಲದ 5 ಮೆಡಿಕಲ್‌ ಶಾಲೆಗಳಿಗೆ ಭಾರತದ ದೇಶೀಯ ಮದ್ದುಗಳ ಪಟ್ಟಿಯನ್ನು ಅವುಗಳ ವಿವರಗಳೊಂದಿಗೆ ಸಿದ್ಧಪಡಿಸಿಕೊಟ್ಟಿದ್ದ ಇವರು ಔಷಧ ಪ್ರಪಂಚಕ್ಕೆ ತಮ್ಮದೇ ಆದ ಕಾಣಿಕೆಯನ್ನು ಕೊಟ್ಟಿದ್ದಾರೆ.

ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=36013

(ಮುಂದುವರಿಯುವುದು)

-ಪದ್ಮಿನಿ ಹೆಗಡೆ

6 Responses

  1. ಉತ್ತಮ ಮಾಹಿತಿಯುಳ್ಳ ಲೇಖನ.. ಧನ್ಯವಾದಗಳು ಮೇಡಂ

  2. Padmini Hegde says:

    Thanks, Nagaratna madam

  3. ನಯನ ಬಜಕೂಡ್ಲು says:

    Informative article

  4. ಶಂಕರಿ ಶರ್ಮ says:

    ಸಂಗ್ರಹಯೋಗ್ಯ ಮಾಹಿತಿಗಳ ಆಗರ!

  5. ಭಾರತೀಯ ವಿಜ್ಞಾನಿಗಳ ಸಾಧನೆಯನ್ನು ಉತ್ತಮವಾಗಿ ನಿರೂಪಿಸಿದಕ್ಕೆ ವಂದನೆಗಳು

  6. ಉತ್ತಮ ಮಾಹಿತಿಪೂರ್ಣ ಲೇಖನ. ಧನ್ಯವಾದಗಳು ಮೇಡಂ

Leave a Reply to ಸುಜಾತಾ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: