ಶ್ರೀರಾಮನಿಂದ ಮೋಕ್ಷ ಪಡೆದ ಜಟಾಯು

Share Button

‘ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು
ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ.’


ಲೇಪಾಕ್ಷಿ ದೇಗುಲವನ್ನು ಕಂಡಾಗ, ಕುವೆಂಪುರವರ ಕವನವೊಂದು ಎದೆಯಾಳದಿಂದ ಮೂಡಿ ಬಂತು. ಶೈವರ ಅಜಂತಾ ಎಂದೇ ಪ್ರಖ್ಯಾತವಾಗಿರುವ ಲೇಪಾಕ್ಷಿಯ ವೀರಭದ್ರ ದೇಗುಲವನ್ನು, ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲಾಯಿತು. ಈ ದೇಗುಲದಲ್ಲಿ ಮೂರು ಪ್ರಾಕಾರಗಳಿದ್ದು, ಇಲ್ಲಿ ನಾವು ಕಾಣುವ ಅದ್ಭುತವಾದ ವಾಸ್ತು ಶಿಲ್ಪ, ಕಣ್ಮನ ಸೆಳೆಯುವ ಶಿಲ್ಪಕಲೆ, ಮೇಲ್ಛಾವಣಿಯಲ್ಲಿ ಕಾಣುವ ಚಿತ್ರಕಲೆ, ಅಂದಿನ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗಿ ನಿಂತಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪುಟ್ಟಹಳ್ಳಿ ಲೇಪಾಕ್ಷಿ. ಚಾರಿತ್ರಿಕ ದಾಖಲೆಗಳಲ್ಲಿ ನಮೂದಿಸಿರುವಂತೆ, ಈ ಗ್ರಾಮವು ವಿಜಯನಗರ ಅರಸರ ಕಾಲದಲ್ಲಿ ಸುಪ್ರಸಿದ್ದ ವ್ಯಾಪಾರ ಕೇಂದ್ರವಾಗಿತ್ತು ಹಾಗೂ ಶೈವರ ಪವಿತ್ರ ಯಾತ್ರಾ ಸ್ಥಳವೂ ಆಗಿತ್ತು. ಈ ಊರಿನ ಪ್ರವೇಶ ದ್ವಾರದಲ್ಲಿಯೇ, ಬೆಟ್ಟದ ಮೇಲೊಂದು ದೊಡ್ಡದಾದ ಜಟಾಯುವಿನ ಮೂರ್ತಿ ಎಲ್ಲರಿಗೂ ಸ್ವಾಗತ ಕೋರುತ್ತಿದೆ.

ಈ ನಗರಕ್ಕೆ ಲೇಪಾಕ್ಷಿ ಎಂಬ ಹೆಸರು ಬಂದದ್ದಾರೂ ಹೇಗೆ ಎಂಬುದನ್ನು ತಿಳಿಯಲು, ನಾವು ರಾಮಾಯಣದ ಕಾಲಕ್ಕೆ ಪಯಣಿಸಬೇಕು – ಹೊಳೆ ಹೊಳೆಯುತ್ತಿದ್ದ ಚಿನ್ನದ ಬಣ್ಣದ ಜಿಂಕೆಯೊಂದು ಸುಳಿದಾಡಿತ್ತು ಸೀತೆಯ ಮುಂದೆ. ಜಿಂಕೆಯ ಮೋಹಕ ಸೌಂದರ್ಯಕ್ಕೆ ಬೆರಗಾದ ಜಾನಕಿಯು ಬೇಡಿದಳು ತನ್ನ ಬಾಳಸಂಗಾತಿಯನ್ನು, ‘ಆ ಮುದ್ದು ಜಿಂಕೆಯನ್ನು ಹಿಡಿದು ತನ್ನಿ ಎಂದು’. ಹೊರಟನು ರಾಮನು, ಜಿಂಕೆಯನ್ನು ಅರಸುತ್ತಾ, ವೈದೇಹಿಯ ಬೆಂಗಾವಲಿಗೆ ಅನುಜ ಲಕ್ಷ್ಮಣನನ್ನು ಬಿಟ್ಟು. ತುಸು ಹೊತ್ತಿನಲ್ಲಿಯೇ ಕೇಳಿಬಂತು ‘ಹಾಯ್ ಲಕ್ಷ್ಮಣಾ, ಹಾಯ್ ಸೀತೆ’ ಎಂಬ ಅರ್ತನಾದ. ಭಯಭೀತಳಾದ ಸೀತೆ ಕಾಡಿದಳು ಲಕ್ಷ್ಮಣನನ್ನು, ರಾಮನ ನೆರವಿಗೆ ಧಾವಿಸಲು. ಹೊರಟನು ಲಕ್ಷ್ಮಣ ಒಲ್ಲದ ಮನಸ್ಸಿನಿಂದ, ಪರ್ಣಕುಟೀರದ ಮುಂದೆ ಲಕ್ಷ್ಮಣ ರೇಖೆಯನ್ನೆಳೆದು. ಬಂದನು ದುಷ್ಟ ಅಸುರನು, ಸನ್ಯಾಸಿಯ ವೇಷ ಧರಿಸಿ, ಸೀತಾ ಮಾತೆಯನ್ನು ಅಪಹರಿಸಲು. ಹೊತ್ತೊಯ್ದನು ಸೀತೆಯನ್ನು ಪುಷ್ಪಕ ವಿಮಾನದಲ್ಲಿ. ಮಾತೆಯನ್ನು ರಕ್ಷಿಸಲು, ರಾವಣನೊಂದಿಗೆ ಹೋರಾಡಿತು ಜಟಾಯು, ತನ್ನ ಪ್ರಾಣದ ಹಂಗು ತೊರೆದು. ತೀವ್ರವಾಗಿ ಗಾಯಗೊಂಡ ಪಕ್ಷಿ ನೆಲಕ್ಕುರುಳಿತು. ಸೀತಾಪಹರಣದ ಸುದ್ದಿಯನ್ನು ರಾಮ ಲಕ್ಷ್ಮಣರಿಗೆ ತಿಳಿಸಲು ಜೀವ ಹಿಡಿದುಕೊಂಡು ಕಾಯುತ್ತಿತ್ತು ಜಟಾಯು. ಸೀತೆಯನ್ನು ಅರಸುತ್ತಾ ಬಂದರು ಅಣ್ಣ ತಮ್ಮಂದಿರು. ಪಕ್ಷಿಯು ಅರುಹಿತ್ತು ರಾವಣನ ದುಷ್ಕೃತ್ಯವನ್ನು. ಶ್ರೀರಾಮನು, ಮರಣಶಯ್ಯೆಯಲ್ಲಿದ್ದ ಪಕ್ಷಿಗೆ ‘ಮೇಲೇಳು ಪಕ್ಷಿ’ ಎಂದು ಹರಸಿ, ಮುಕ್ತಿ ಸಿಗಲೆಂದು ಆಶೀರ್ವದಿಸಿದ. ಅಂದಿನಿಂದ (ಲೇ+ಪಕ್ಷಿ) ಈ ಸ್ಥಳಕ್ಕೆ ಲೇಪಾಕ್ಷಿ ಎಂದು ಕರೆಯಲಾಯಿತು.

PC : Internet

ಬೆಂಗಳೂರಿಗೆ 140 ಕಿ.ಮೀ. ದೂರದಲ್ಲಿರುವ ಲೇಪಾಕ್ಷಿಗೆ, ನಾವು ನಿರ್ಮಲಕ್ಕ ಮತ್ತು ಕುಮಾರ್ ಭಾವನವರೊಂದಿಗೆ ಹೊರಟಿದ್ದೆವು. ನಿರ್ಮಲಕ್ಕ, ದೇಗುಲದ ಪರಿಚಯ ಮಾಡಿಕೊಡುತ್ತಿದ್ದಳು – ”ಸ್ಕಂದ ಪುರಾಣದಲ್ಲಿ ಅಗಸ್ತ್ಯಮುನಿಗಳು ಈ ದೇಗುಲವನ್ನು ನಿರ್ಮಿಸಿದರೆಂಬ ಪ್ರತೀತಿಯಿದೆ. ಅಂದಿನ ನೂರ ಎಂಟು ಪ್ರಖ್ಯಾತ ಶಿವ ಮಂದಿರಗಳಲ್ಲಿ ಈ ದೇಗುಲವೂ ಒಂದು ಎಂದು ಪರಿಗಣಿಸಲಾಗಿದೆ. ನಂತರದ ದಿನಗಳಲ್ಲಿ, ವಿಜಯನಗರದ ಅರಸರ ಕಾಲದಲ್ಲಿ ಈ ದೇಗುಲವನ್ನು ಅಭಿವೃದ್ಧಿ ಪಡಿಸಲಾಯಿತೆಂದೂ ಹೇಳಲಾಗುತ್ತದೆ. ದೇಗುಲಕ್ಕೆ ಇನ್ನೂರು ಮೀಟರ್ ದೂರದಲ್ಲಿರುವ ಭವ್ಯವಾದ ನಂದಿಯ ವಿಗ್ರಹವನ್ನು ಏಕ ಶಿಲೆಯಲ್ಲಿ ಕೆತ್ತಲಾಗಿದ್ದು, ಮೂರ್ತಿಯು ಹದಿನೈದು ಅಡಿ ಎತ್ತರ ಹಾಗೂ ಇಪ್ಪತ್ತೇಳು ಅಡಿ ಉದ್ದವಿದೆ. ಭಾರತದಲ್ಲಿಯೇ ಪ್ರಥಮ ಸ್ಥಾನದಲ್ಲಿ ನಿಲ್ಲುವ ಬೃಹತ್ತಾದ ನಂದಿ ಇದು. ನಂದಿಯ ಮೂರ್ತಿ ಆಕರ್ಷಕವಾಗಿದ್ದ್ದು, ಅದರ ಕುತ್ತಿಗೆಯನ್ನು ಅಲಂಕರಿಸಿರುವ ಗೆಜ್ಜೆಯ ಮಾಲೆ ಹಾಗೂ ಗಂಟೆಗಳ ಮೇಲಿನ ಕುಸುರಿ ಕೆಲಸ, ಯಾತ್ರಿಕರ ಮನ ಸೆಳೆಯುವಂತಿವೆ. ನಂದಿಯ ವಿಗ್ರಹವು ನಾಗಲಿಂಗದ ದಿಕ್ಕಿನಲ್ಲಿಯೇ ಮುಖ ಮಾಡಿದೆ. ಸುತ್ತಲೂ ನೆಡಲಾಗಿರುವ ಗಿಡ ಮರಗಳು, ಅರಳಿ ನಿಂತಿರುವ ಪುಷ್ಪಗಳೂ, ಈ ಪ್ರದೇಶವನ್ನು ವಿಶೇಷವಾಗಿ ಅಲಂಕರಿಸಿವೆ”.

ಹದಿನಾರನೇ ಶತಮಾನದಲ್ಲಿ, ವಿಜಯನಗರದ ಅರಸನಾದ ಅಚ್ಯುತರಾಯನ ಕಾಲದಲ್ಲಿ ಈ ದೇಗುಲವನ್ನು ನಿರ್ಮಾಣ ಮಾಡಲಾಯಿತೆಂಬ ಐತಿಹಾಸಿಕ ದಾಖಲೆ ಲಭ್ಯ. ವೀರಭದ್ರನ ದೇಗುಲವನ್ನು, ಕೂರ್ಮಶೈಲ ಎಂಬ ಆಮೆಯಾಕಾರದ ಪುಟ್ಟ ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ದೇಗುಲದ ವಿನ್ಯಾಸವನ್ನೂ ಕೂರ್ಮದ ಆಕಾರದಲ್ಲಿಯೇ ರಚಿಸಲಾಗಿದೆ. ಯುದ್ಧಕ್ಕೆ ಹೊರಡುವ ರಾಜರು, ಶಿವನ ರೌದ್ರಾವತಾರದ ಅಂಶವಾದ ವೀರಭದ್ರನನ್ನು ಪೂಜಿಸಿಯೇ ಹೊರಡುತ್ತಿದ್ದರು. ವೀರಭದ್ರನ ಜನ್ಮವೃತ್ತಾಂತವನ್ನು ವೀರಗಾಸೆಯವರು ಹಾಡು, ಕುಣಿತದ ಮೂಲಕ ಪ್ರಸ್ತುತ ಪಡಿಸುತ್ತಾರೆ. ತನ್ನ ಪತಿ ಶಿವನಿಗೆ, ದಕ್ಷನು ಯಜ್ಞ ಮಾಡುವಾಗ, ಮಾಡಿದ ಅವಮಾನದಿಂದ ನೊಂದ ಸತಿಯು ಯಜ್ಞಕುಂಡಕ್ಕೆ ಹಾರಿ ಪ್ರಾಣ ತ್ಯಜಿಸುತ್ತಾಳೆ. ಆಗ ಕೋಪೋದ್ರಿಕ್ತನಾದ ಶಿವನ ಬೆವರಿನಿಂದ ಜನಿಸಿದವನೇ ವೀರಭದ್ರ. ತನ್ನ ಜನಕನನ್ನು ಅಪಮಾನಿಸಿದ ದಕ್ಞನ ಬಲಿ ತೆಗೆದುಕೊಳ್ಳುತ್ತಾನೆ ವೀರಭದ್ರ. ವೀರಭದ್ರನು ದುಷ್ಟ ಸಂಹಾರ ಹಾಗೂ ಶಿಷ್ಟ ರಕ್ಷಣೆಯ ರೂಪಕವಾಗಿ ನಿಲ್ಲುವನು.

ಈ ದೇಗುಲದ ಪ್ರತಿಯೊಂದೂ ಕಲ್ಲೂ ಒಂದೊಂದು ಕಥೆಯನ್ನು ಹೇಳುವಂತಿದೆ. ಮೊದಲಿಗೆ ಕಂಡು ಬರುವುದು ವಿಘ್ನ ನಿವಾರಕ ಗಣಪತಿಯ ವಿಗ್ರಹ. ಗರ್ಭಗುಡಿಯ ಮುಂದಿರುವ ರಂಗ ಮಂಟಪದಲ್ಲಿ ಎಪ್ಪತ್ತೊಂದು ಕಂಬಗಳಿದ್ದು, ಒಂದು ಕಂಬವು ನೆಲವನ್ನು ಮುಟ್ಟುವುದಿಲ್ಲವಾದ್ದರಿಂದ, ಇದನ್ನು ‘ಆಕಾಶ ಸ್ತಂಭ’ ಎಂದು ಹೆಸರಿಸಲಾಗಿದೆ. ಭಾರತವು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದಾಗ, ಒಬ್ಬ ಬ್ರಿಟಿಷ್ ಅಧಿಕಾರಿ, ಈ ತೂಗು ಸ್ತಂಭವನ್ನು ಅಲ್ಲಾಡಿಸಲು ಪ್ರಯತ್ನಿಸಿದಾಗ, ಇಡೀ, ದೇಗುಲವೇ ಅಲ್ಲಾಡಿದ ಅನುಭವವಾಯಿತಂತೆ. ಹಾಗಾಗಿ ಈ ಸ್ತಂಭವೇ, ದೇಗುಲದ ಆಧಾರ ಸ್ತಂಭವಾಗಿರಬಹುದು ಎಂದೂ ಕೆಲವರು ಅಭಿಪ್ರಾಯ ಪಡುತ್ತಾರೆ. ಈ ಕಂಬದ ಕೆಳಗೆ ಒಂದು ಟವೆಲ್ ಅಥವಾ ಪೇಪರ್ ಅನ್ನು ಆರಾಮವಾಗಿ ಒಂದು ಮೂಲೆಯಿಂದ ಮತ್ತೊಂದು ಮೂಲೆಯವರೆಗೆ ಎಳೆಯಬಹುದು. ಪ್ರವಾಸಿಗರು ಈ ತಂತ್ರಜ್ಞಾನದ ಕೌಶಲವನ್ನು ಕಂಡು ಬೆರಗಾಗಿ ನಿಲ್ಲುವರು. ಮತ್ತೆ ಕೆಲವರು ಈ ರಂಗ ಮಂಟಪದ ಮೇಲ್ಛಾವಣಿಯಲ್ಲಿ ಚಿತ್ರಿಸಲಾಗಿರುವ ನೂರು ದಳದ ಕಮಲದಲ್ಲಿರುವ ಗುರುತ್ವಾಕರ್ಷಣ ಶಕ್ತಿಯೇ ಇಡೀ ದೇಗುಲದ ಆಧಾರ ಎಂದು ಅಭಿಪ್ರಾಯ ಪಡುತ್ತಾರೆ.

ಇನ್ನುಳಿದ ಕಂಬಗಳ ಮೇಲೆ ಸಂಗೀತ ವಾದ್ಯಗಳನ್ನು ನುಡಿಸುತ್ತಿರುವ ದೇವತೆಗಳ ಶಿಲ್ಪಗಳು ಜೀವಂತವಾಗಿ ಎದ್ದು ಬರುವಂತೆ ತೋರುವುದು. ಶಿವನು ತಾಂಡವ ನೃತ್ಯದ ಭಂಗಿಯಲ್ಲಿದ್ದರೆ, ಸೃಷ್ಟಿಕರ್ತನಾದ ಬ್ರಹ್ಮನು ತಬಲ ಬಾರಿಸುತ್ತಿರುವನು. ನಾರದನು ತಂಬೂರಿಯನ್ನು ಮೀಟುತ್ತಿದ್ದರೆ, ಅಪ್ಸರೆಯರು ನಾಟ್ಯದ ವಿವಿಧ ಭಂಗಿಗಳಲ್ಲಿ ನಿಂತಿರುವರು. ಈ ರಂಗ ಮಂಟಪದ ಮೇಲ್ಛಾವಣಿಯಲ್ಲಿ ಅದ್ಭುತವಾದ ಚಿತ್ರಕಲೆಯನ್ನು ಕಾಣಬಹುದು. ರಾಮಾಯಣ, ಮಹಾಭಾರತ ಹಾಗೂ ಪುರಾಣಗಳಿಂದ ಅಯ್ದುಕೊಳ್ಳಲಾದ ಅದ್ಭುತವಾದ ಪ್ರಸಂಗಗಳನ್ನು ಚಿತ್ರಿಸಲಾಗಿದೆ. ಕಂಬಗಳ ಮೇಲೆ ದಶಾವತಾರ, ಶಿವ ಪಾರ್ವತಿಯರು, ದತ್ತಾತ್ರೇಯ, ಸೂರ್ಯ, ಚಂದ್ರ ಮುಂತಾದ ಚಿತ್ರಗಳನ್ನು ಕೆತ್ತಲಾಗಿದೆ. ಕಮಲದ ಹೂಗಳ ದಂಟನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಆಗಸದಲ್ಲಿ ಹಾರಾಡುತ್ತಿರುವ ಬಾನಾಡಿಗಳ ಚಿತ್ರ ಕಣ್ಮನ ತುಂಬುವಂತಿದೆ. ಕುವೆಂಪುರವರ ಕವನದ ಮುಂದಿನ ಸಾಲುಗಳು ಮನದಲ್ಲಿ ಮಾರ್ನುಡಿದವು, ಭಗವಂತನಾನಂದ ರೂಪುಗೊಂಡಿಹುದಿಲ್ಲಿ / ರಸಿಕತೆಯ ಕಡಲುಕ್ಕಿ ಹರಿವುದಿಲ್ಲಿ”

ಗರ್ಭಗುಡಿಯಲ್ಲಿ ಸ್ಥಾಪಿತವಾಗಿರುವ ವೀರಭದ್ರನಿಗೆ ವಂದಿಸಿ ಹೊರನಡೆದವಳಿಗೆ ಅಚ್ಚರಿಯೊಂದು ಕಾದಿತ್ತು. ಒಂದು ಬೃಹತ್ತಾದ ನಾಗಲಿಂಗ. ಮೂರು ಸುತ್ತು ಹಾಕಿ, ತನ್ನ ಹೆಡೆಯನ್ನು ಅರಳಿಸಿ ನಿಂತಿರುವ ಸರ್ಪ, ಅದರಡಿಯಲ್ಲಿ ಸ್ಥಾಪಿತವಾಗಿರುವ ಶಿವಲಿಂಗ. ಈ ನಾಗಲಿಂಗದ ಹಿಂದೆ, ಕುತೂಹಲ ಮೂಡಿಸುವ ಕಥೆಯೊಂದು ಜನಜನಿತವಾಗಿದೆ. ತಾಯಿಯು, ದೇಗುಲದಲ್ಲಿ ಕೆಲಸ ಮಾಡುತ್ತಿದ್ದ ಶಿಲ್ಪಿಗಳಿಗಾಗಿ ಅಡುಗೆ ಮಾಡಿ, ಹೊರಬಂದು ನೋಡಿದಾಗ, ಕೇವಲ ಒಂದೆರೆಡು ತಾಸಿನಲ್ಲಿ, ಶಿಲ್ಪಿಗಳು ಏಕಶಿಲೆಯಲ್ಲಿ ಕೆತ್ತಿದ, ದೊಡ್ಡಗಾತ್ರದ ಏಳು ಹೆಡೆ ಸರ್ಪವನ್ನೂ, ಶಿವಲಿಂಗವನ್ನೂ ಕಂಡು ಬೆಕ್ಕಸ ಬೆರಗಾಗಿ ದಿಟ್ಟಿಸಿದಳಂತೆ. ಅವಳ ದೃಷ್ಟಿ ತಾಗಿ ಕಲ್ಲು ಬಿರುಕು ಬಿಟ್ಟಿತೆಂಬ ನಂಬಿಕೆ ಜನರಲ್ಲಿ ಮೂಡಿದೆ. ಹಾಗಾಗಿ ಭಗ್ನವಾದ ನಾಗಲಿಂಗಕ್ಕೆ ಪೂಜೆಯಿಲ್ಲ. ಪ್ರವಾಸಿಗರು ಭವ್ಯವಾದ ನಾಗಲಿಂಗದ ಮುಂದೆ ವಿವಿಧ ಭಂಗಿಗಳಲ್ಲಿ ನಿಂತು ಫೋಟೋ ಕ್ಲಿಕ್ಕಿಸುತ್ತಿದ್ದರು. ಆ ನಾಗಲಿಂಗದ ಒಂದು ಬದಿಯಲ್ಲಿ ವಿರಾಜಮಾನನಾಗಿದ್ದ ಹೊಟ್ಟೆ ಗಣಪ. ಇಲ್ಲಿ ಎಲ್ಲ ಶಿಲ್ಪಗಳ ಗಾತ್ರವೂ ಹಿರಿದೇ. ‘ಬೃಹತ್ತು ನೀನು, ಅಲ್ಪತೆಯು ನಾನು’ ಎಂದು ಸಾರುವಂತಿದೆ ಈ ದೇಗುಲದಲ್ಲಿರುವ ಭವ್ಯವಾದ ಶಿಲ್ಪಗಳು.

PC : Internet

ಮುಂದೆ ನಡೆದಾಗ ಕಂಡದ್ದು ಶಿವ ಪಾರ್ವತಿಯರ ಕಲ್ಯಾಣಕ್ಕೆಂದು ಸಜ್ಜಾಗುತ್ತಿದ್ದ ಅಪೂರ್ಣವಾದ ‘ಕಲ್ಯಾಣ ಮಂಟಪ’. ವೀರಭದ್ರ ದೇಗುಲವನ್ನು ಕಟ್ಟಿಸುತ್ತಿದ್ದ ವಿರುಪಣ್ಣ ನಾಯಕನಿಗೆ, ಅರಸನಾದ ಅಚ್ಯುತರಾಯನ ಅಳಿಯ ರಾಮರಾಯನು ತಡೆಯೊಡ್ಡಿದ್ದರಿಂದ, ಈ ಮಂಟಪವನ್ನು ಅರ್ಧದಲ್ಲಿಯೇ ನಿಲ್ಲಿಸಲಾಗಿದೆ. 1565 ರಲ್ಲಿ ವಿಜಯನಗರದ ಅರಸರು ಹಾಗೂ ದಕ್ಷಿಣದ ಸುಲ್ತಾನರ ನಡುವೆ ನಡೆದ ತಾಳಿಕೋಟೆ ಯುದ್ಧದಲ್ಲಿ ಪರಾಭವಗೊಂಡ ವಿಜಯನಗರ ಸಾಮ್ರಾಜ್ಯ ಅಧಃಪತನದತ್ತ ಸಾಗಿದ್ದರಿಂದ, ಈ ದೇಗುಲದ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿರಬಹುದೆಂದೂ ಹೇಳಲಾಗುತ್ತದೆ. ಮಂಟಪದಲ್ಲಿ ಮೂವತ್ತೆಂಟು ಕಂಬಗಳಿದ್ದು, ಶಿವನ ಹದಿನಾಲ್ಕು ಅವತಾರಗಳನ್ನು ಕಂಬಗಳ ಮೇಲೆ ಕೆತ್ತಲಾಗಿದೆ. ಕೆಲವು ಕಂಬಗಳ ಮೇಲೆ ದೇವತೆಗಳ ವೈದ್ಯನಾದ ಧನ್ವಂತರಿ, ಅಷ್ಟ ದಿಕ್ಪಾಲಕರು ಹಾಗೂ ಶಿವ ಪಾರ್ವತಿಯರ ವಿವಾಹಕ್ಕೆಂದು ಆಗಮಿಸಿದ ಹಲವು ದೇವಾನುದೇವತೆಗಳ ಶಿಲ್ಪವನ್ನು ಕೆತ್ತಲಾಗಿದೆ. ಶಿವ ಪಾರ್ವತಿಯರ ಮದುವೆಯ ಚಿತ್ರಣವನ್ನೂ ಸುಂದರವಾಗಿ ಕೆತ್ತಲಾಗಿದೆ. ಸುಂದರವಾದ ಶಿಲ್ಪಗಳನ್ನು ನೋಡುತ್ತಾ ಸಾಗಿದವಳಿಗೆ ಕಂಡಿತೊಂದು ಭಯಾನಕ ದೃಶ್ಯ. ವಿರುಪಣ್ಣ ನಾಯಕನು, ರಾಜಾಜ್ಞೆಯಂತೆ, ತನ್ನ ಕಣ್ಣುಗಳನ್ನು ಕಿತ್ತು ಗೋಡೆಗೆ ಎಸೆದ ಸ್ಥಳದಲ್ಲಿ ರಕ್ತದ ಕಲೆಗಳು, ಕಣ್ಣಿದ್ದೂ ಕುರುಡನಾದ ನಾಡಿನ ದೊರೆಯ ಕಥೆಯನ್ನು ಹೇಳುತ್ತಿವೆ.

ಹರ ಹರ ಹರ ರುದ್ರ, ಕಡಿ ವೀರಭದ್ರ, ಕರುಣಾಸಮುದ್ರ.. ಹಾಡುತ್ತಾ ಕುಣಿಯುತ್ತಿದ್ದರು ವೀರಗಾಸೆಯವರು.

”ಶಿವನ ರುದ್ರಾವತಾರದ ಅಂಶವಾಗಿ ಜನಿಸಿದ್ದನು ವೀರಭದ್ರ. ಅಣ್ಣ ತಮ್ಮಂದಿರಾದ ವಿರುಪಣ್ಣ ನಾಯಕ ಮತ್ತು ವೀರಣ್ಣ ಕಟ್ಟಿಸುತ್ತಿದ್ದರು ವೀರಭದ್ರನ ದೇಗುಲವೊಂದನ್ನು. ಹಣಕಾಸಿನ ಮಂತ್ರಿಯಾಗಿದ್ದ ವಿರುಪಣ್ಣ ನಾಯಕನ ಜನಪ್ರಿಯತೆಯನ್ನು ಸಹಿಸಲಾಗದೆ, ಹಲವಾರು ಮಂತ್ರಿಗಳು, ನೀಡಿದರು ದೂರನ್ನು ನಾಡಿನ ದೊರೆಗೆ. ರಾಜನ ಬೊಕ್ಕಸದಲ್ಲಿದ್ದ ಧನ ಕನಕಗಳನ್ನೆಲ್ಲಾ ದೇಗುಲ ಕಟ್ಟಿಸಲು ಪೋಲು ಮಾಡುತ್ತಿದ್ದಾನೆ ವಿರುಪಣ್ಣ ನಾಯಕ ಎಂದು. ಕುಪಿತಗೊಂಡ ವಿಜಯನಗರದ ಅರಸನು, ನಾಯಕನ ‘ಕಣ್ಣು ಕೀಳಿಸಿ’ ಎಂಬ ಆದೇಶವನ್ನು ಹೊರಡಿಸಿದನು. ರಾಜಾಜ್ಞೆಯಿಂದ ದುಃಖಿತನಾದ ವಿರುಪಣ್ಣ ನಾಯಕನು, ತನ್ನ ಕಣ್ಣುಗಳನ್ನು ಕಿತ್ತು ಕಲ್ಯಾಣ ಮಂಟಪದ ಪ್ರಾಂಗಣದಲ್ಲಿದ್ದ ಗೋಡೆಯ ಮೇಲೆ ಎಸೆದನಂತೆ. ಗೋಡೆಯ ಮೇಲೆಲ್ಲಾ ಹರಡಿತ್ತು ಕಣ್ಣಿನ ರಕ್ತ ಸಿಕ್ತವಾದ ಕಲೆಗಳು. ಅಂದಿನಿಂದ ಲೇಪ+ಅಕ್ಷಿ = ಲೇಪಾಕ್ಷಿ ಎಂಬ ಹೆಸರು ಬಿತ್ತು ಆ ಹಳ್ಳಿಗೆ. ಕಣ್ಣಿನ ರಕ್ತವನ್ನು ಲೇಪಿಸಿದ ದೇಗುಲವಿರುವ ನಾಡೆಂದು. ಇದು ಕಲ್ಲಿನ ಬಸವ ನುಡಿದ ಲೇಪಾಕ್ಷಿ ದೇಗುಲದ ಕಥೆ ವ್ಯಥೆ.

ಮುಂದೆ ಸಾಗಿದಾಗ ಮನಸ್ಸು ಭಾರವಾಗಿತ್ತು. ಅಲ್ಲೊಂದು ಭಾರಿ ಗಾತ್ರದ ಹೆಜ್ಜೆಯ ಗುರುತು ಕಂಡು ಬಂತು. ಅರೆ, ಇದು ಯಾರ ಹೆಜ್ಜೆಯ ಗುರುತು ಇರಬಹುದು? ಕೆಲವರು ದುರ್ಗಾಮಾತೆಯದೆಂದರೆ ಮತ್ತೆ ಕೆಲವರು ಈ ಹೆಜ್ಜೆಯ ಗುರುತಿನ ಸುತ್ತ ಒಂದು ಕಥೆಯನ್ನು ಹೆಣೆದಿದ್ದಾರೆ. ಸೀತಾಮಾತೆಯನ್ನು ರಾವಣನಿಂದ ರಕ್ಷಿಸಲು ಹೋರಾಡಿದ ಜಟಾಯು ಪಕ್ಷಿಯು ಗಾಯಗೊಂಡು ಕೆಳಗುರುಳಿದಾಗ, ಸೀತೆಯು ತನ್ನ ಪಾದವನ್ನು ನೆಲಕ್ಕೆ ಅಪ್ಪಳಿಸಿದಾಗ ಉಕ್ಕಿಬಂದ ಜಲಧಾರೆಯಿಂದ ಪಕ್ಷಿಯು ಬದುಕುಳಿಯಿತು. ಇಂದಿಗೂ, ಈ ಪಾದದ ಮಧ್ಯೆ ನೀರು ಜಿನುಗುವುದನ್ನು ನಾವು ಕಾಣಬಹುದು.

ಲೇಪಾಕ್ಷಿ ದೇಗುಲದಲ್ಲಿರುವ ಒಂದೊಂದು ಶಿಲ್ಪವೂ ಒಂದೊಂದು ಕಥೆಯನ್ನು ಹೇಳುವಂತಿದೆ. ಕನ್ನಡದಲ್ಲಿ ಬರೆಯಲಾಗಿರುವ ಶಿಲಾ ಶಾಸನವೊಂದು ಇಲ್ಲಿ ದೊರೆತಿರುವುದರಿಂದ, ಲೇಪಾಕ್ಷಿಯು ಕರ್ನಾಟಕದ ಬಾಗವಾಗಿತ್ತೆಂದು ನಿಸ್ಸಂದೇಹವಾಗಿ ಹೇಳಬಹುದು. ಇಡೀ ದೇಗುಲದಲ್ಲಿ 876 ಕಂಬಗಳಿದ್ದು, ಪ್ರತಿಯೊಂದು ಕಂಬದ ಮೇಲೂ ಶಿಲ್ಪಿಗಳು ಬಿಡಿಸಿರುವ ಕುಸುರಿ ಕೆಲಸವನ್ನು ಕಾಣಬಹುದು. ಇಲ್ಲಿ ಕೆತ್ತಲಾಗಿರುವ ಆಕರ್ಷಕ ವಸ್ತ್ರ ವಿನ್ಯಾಸಗಳನ್ನು, ಇಂದು ಸೀರೆಗಳ ಮೇಲೆ, ಉಡುಪುಗಳ ಮೇಲೆ ಮುದ್ರಿಸುತ್ತಿದ್ದಾರೆ. ಶಿಲ್ಪಿಗಳಿಗೆ ಉಣಬಡಿಸುತ್ತಿದ್ದ ತಟ್ಟೆಗಳನ್ನೂ ಇಲ್ಲಿ ಕೆತ್ತಲಾಗಿದೆ ಎಂದರೆ ನಂಬುತ್ತೀರಾ? ಗಾಳಿಯಲ್ಲಿ ತೇಲುವ ಕಂಬ, ಬೃಹದಾಕಾರದ ನಂದಿಯ ವಿಗ್ರಹ, ಏಕಶಿಲೆಯಲ್ಲಿ ನಿರ್ಮಿಸಲಾಗಿರುವ ನಾಗಲಿಂಗ, ಸುಂದರವಾದ ವಾಸ್ತು ಶಿಲ್ಪ, ಅದ್ಭುತವಾದ ಶಿಲ್ಪಕಲೆ ಪ್ರವಾಸಿಗರ ಮನದಲ್ಲಿ ಅಚ್ಚಳಿಯದೆ ಉಳಿದುಬಿಡುತ್ತದೆ. ಕುವೆಂಪುರವರ ಕವನದ ಇನ್ನೆರಡು ಸಾಲುಗಳನ್ನು ನೆನಪಿಸಿಕೊಳ್ಳೋಣವೇ, ”ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ / ಬಾದರಾಯಣನಂತೆ ಭಾರತವ ಹಾಡುತಿಹುದಿಲ್ಲಿ / ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ”.

-ಡಾ. ಗಾಯತ್ರಿದೇವಿ ಸಜ್ಜನ್

5 Responses

  1. ಲೇಪಾಕ್ಷಿ ಯ ಪರಿಚಯಾತ್ಮಕ ಲೇಖನ..ಸೊಗಸಾದ ನಿರೂಪಣೆ ಯಲ್ಲಿ ಮೂಡಿಬಂದಿದೆ…. ಧನ್ಯವಾದಗಳು ಮೇಡಂ

  2. ನಯನ ಬಜಕೂಡ್ಲು says:

    ಸವಿಸ್ತಾರವಾದ ಮಾಹಿತಿಪೂರ್ಣ ಲೇಖನ

  3. ಶಂಕರಿ ಶರ್ಮ says:

    ಜಟಾಯುವಿನಿಂದ ಬಂದ ಹೆಸರು ಲೇಪಾಕ್ಷಿ, ಆದರೆ ಇನ್ನೊಂದೆಡೆ ವಿರುಪಣ್ಣ ನಾಯಕನ ಕಥೆ ನಮ್ಮನ್ನು ಕರೆಯುತ್ತದೆ. ಬೃಹದಾಕಾರದ ಜಟಾಯು ವಿಗ್ರಹ, ಊಹೆಗೂ ನಿಲುಕದ ಸೋಜಿಗದ ಆಕಾಶ ಸ್ತಂಭ… ಬಹಳ ವಿಶೇಷವಾದ ಮಾಹಿತಿಗಳನ್ನು ಒಳಗೊಂಡ ಲೇಖನ..ಧನ್ಯವಾದಗಳು ಮೇಡಂ.

  4. ಸಹೃದಯ ಓದುಗರಿಗೆ ಅನಂತಾನಂತ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: