ಲಹರಿ

ಬಸ್ ಪಯಣದ ಹಾದಿಗುಂಟ……

Share Button

ಕಳೆದ ಹದಿನೇಳು ವರ್ಷಗಳಿಂದಲೂ ಕಾರು ನನ್ನ ಸಂಗಾತಿ. ಎಲ್ಲಿಗೆ ಹೋಗಬೇಕೆಂದರೂ “ಎದ್ದೇಳು, ನಡಿ” ಅಂತ ನನಗೆ ನಾನೇ ಅಪ್ಪಣೆ ಕೊಡುವುದರ ಜೊತೆ ಕಾರಿಗೂ ಇಂಧನ ತುಂಬಿಸಿ “ಚಲ್ ಮೇರೀ ಗಾಡಿ” ಅನ್ನುತ್ತಾ ಪಯಣಿಸುವ ಅಭ್ಯಾಸ ರೂಢಿಯಾಗಿದೆ. ಹಾಗಂತ ಎಲ್ಲಿಗಾದರೂ ಹೋಗಬೇಕೆಂದರೆ ನನಗೆ ಕಾರೇ ಆಗಬೇಕೆಂದಿಲ್ಲ. ಆಗಾಗ ನಡೆದು ಹೋಗುವುದು, ರಿಕ್ಷಾದಲ್ಲಿ ಪಯಣಿಸುವುದು, ದೂರದ ಪ್ರಯಾಣವಿದ್ದರೆ ಬಸ್ಸಿನಲ್ಲಿ ಪ್ರಯಾಣಿಸುವುದು ಕೂಡಾ ಇಷ್ಟದ ಸಂಗತಿಗಳೇ. ಎದುರು ಸಿಕ್ಕಿದ ಪರಿಚಯದವರು “ಇಂದೇನು ನಡೆದುಕೊಂಡು ಹೊರಟದ್ದು?” ಅಂತ ಕೇಳುವುದು ಕೂಡಾ ಮಾಮೂಲಿ. ಹೀಗೆ ಒಂದು ದಿನ ಸಿಟಿ ಬಸ್ಸಿಗಾಗಿ ಕಾಯುತ್ತಿದ್ದಾಗ ಆತ್ಮೀಯರೊಬ್ಬರು ಸಿಕ್ಕಿ “ಏನು ಕಾರು ಮನೆಯಲ್ಲಿ ಬಿಟ್ಟು ಬಸ್ಸಿನಲ್ಲಿ ಹೋಗುತ್ತಿದ್ದೀರಿ?” ಅಂದಾಗ “ಸ್ವಲ್ಪ ಜಗತ್ತನ್ನು ಕಣ್ಣು ಬಿಟ್ಟು ನೋಡುವ ಅಂತ ಅನಿಸಿತು. ನೋಡಿ, ನೀವು ಸಿಕ್ಕಿದಿರಿ. ನಾನು ಕಾರಿನಲ್ಲಿ ಹೋಗಿದ್ದರೆ ನೀವು ಸಿಗುತ್ತಿರಲಿಲ್ಲ” ಅಂದೆ. ನಸುನಕ್ಕರು ಅವರು.

ಪ್ರಯಾಣ ಮಾಡುವಾಗ ಸುತ್ತಮುತ್ತ ನೋಡುತ್ತಾ ಪ್ರಕೃತಿ ಸಂದರ್ಯ ಆಸ್ವಾದಿಸುತ್ತಾ, ದಾರಿ ಮಧ್ಯೆ ಸಿಗುವ ಜನರನ್ನು ಗಮನಿಸುತ್ತಾ ಪ್ರಯಾಣಿಸುವುದೆಂದರೆ ನನಗೆ ತುಂಬಾ ಇಷ್ಟ. ಕುಳಿತುಕೊಳ್ಳಲು ಬಸ್ಸಿನಲ್ಲಿ ಜಾಗ ಸಿಗಬೇಕು ಅನ್ನುವ ಒಂದು ಸಣ್ಣ ನಿರೀಕ್ಷೆ. ವಯಸ್ಸಾಗುತ್ತಾ ಬಂತು ನೋಡಿ! 

ಇತ್ತೀಚೆಗೆ ಕಾಸರಗೋಡಿನಿಂದ ಸುಮಾರು ಏಳೆಂಟು ಕಿಲೋಮೀಟರ್ ದೂರವಿರುವ ಒಂದು ಊರಿನಲ್ಲಿ ಸಂಬಂಧಿಕರ ಮಗಳ ಮದುವೆಗೆ ಹೋಗಬೇಕಿತ್ತು. ಹೋಗಬೇಕಾದ ಜಾಗದ ಪರಿಚಯ ನನಗಿರಲಿಲ್ಲ. ಮಂಗಳೂರಿನಿಂದ ಕಾಸರಗೋಡಿಗೆ ಬಸ್ಸು, ಅಲ್ಲಿಂದ ಇನ್ನೊಂದು ಬಸ್ಸು ಹಿಡಿದು ಹೋಗಬೇಕಿತ್ತು. ಮಂಗಳೂರಿನಿಂದ ಬೆಳಿಗ್ಗೆ ಬೇಗನೇ ಹೊರಟೆ. ಬಸ್ಸು ಕೂಡಾ ಖಾಲಿ ಇತ್ತು. ಬಸ್ಸನ್ನು ಏರಿ, ಕಿಟಕಿ ಬದಿಯ ಸೀಟಿನಲ್ಲಿ ಕುಳಿತುಕೊಂಡೆ. ಬಸ್ಸು ಪ್ರಯಾಣದ ವೇಳೆಯಲ್ಲಿ ಕಂಡ ಸಂಗತಿಗಳಿವು. 

ನಾನು ಬಸ್ ಏರುತ್ತಿರುವ ಸಮಯದಲ್ಲಿಯೇ, ಓರ್ವರು ಚಾಲಕನ ಬಳಿ ಊರಿನ ಹೆಸರು ಹೇಳಿ “ಆ ಸ್ಥಳದಲ್ಲಿ ನಿಲುಗಡೆ ಇದೆಯೇ ?” ಅಂತ ವಿಚಾರಿಸಿದಾಗ ಚಾಲಕ “ಆ ಸ್ಥಳದಲ್ಲಿ ಬಸ್ಸು ನಿಲುಗಡೆ ಇಲ್ಲ” ಎಂದರೂ, ಆ ಸ್ಠಳದ ನಂತರ ನಿಲುಗಡೆ ಇರುವ ಬಸ್-ನಿಲ್ದಾಣದಲ್ಲಿ ಇಳಿಯುವೆನೆಂದು ಹೇಳಿ ಬಸ್ಸನ್ನೇರಿದರು. ನಿರ್ವಾಹಕ ಟಿಕೆಟ್ ಕೊಡಲು ಬಂದಾಗ ತಾವು ಇಳಿಯಬೇಕಾದ ಸ್ಠಳದ ಹೆಸರು ಹೇಳಿದಾಗ “ಆ ಜಾಗದಲ್ಲಿ ಬಸ್ಸು ನಿಲುಗಡೆ ಇಲ್ಲ. ನೀವು ಹೋಗಬೇಕಾದ ಸ್ಠಳದಲ್ಲಿ ನಿಲುಗಡೆ ಇರುವ ಬಸ್ಸುಗಳು ಬೇಕಾದಷ್ಟು ಸಿಗುತ್ತವೆ. ದಯವಿಟ್ಟು ಇಲ್ಲಿಯೇ ಇಳಿದುಕೊಳ್ಳಿ” ಅಂತ ನಿರ್ವಾಹಕರು ವಿನಯದಿಂದ ಹೇಳಿದರೂ ಜಗಳಕ್ಕೆ ಇಳಿದರು. ನಿರ್ವಾಹಕರಿಗೂ ಕಿರಿಕಿರಿ ಆಯ್ತು. ಚಾಲಕನ ಬಳಿ ಬಂದು ಬಳಿ ಬಸ್ಸು ನಿಲ್ಲಿಸಲು ವಿನಂತಿಸಿ ಆ ನಾಗರಿಕರನ್ನು  ಬಸ್ಸಿನಿಂದ ಇಳಿಯಲು ಕೇಳಿಕೊಂಡಾಗ ಚಾಲಕ-ನಿರ್ವಾಹಕರಿಬ್ಬರಿಗೂ ಮನ ಬಂದಂತೆ ವಾಚಾಮಗೋಚರ ಬೈದ ಆ ನಾಗರಿಕರೆನ್ನಿಸಿಕೊಂಡವರು ಚಾಲಕನ ಬಳಿ “ಪ್ರಯಾಣಿಕರು ಮತ್ತು ಬಸ್ಸು ನಡುವಿನ ಸಂಬಂಧ ಗಂಡ ಹೆಂಡತಿ ಸಂಬಂಧದ ಹಾಗಿರಬೇಕು. ಪ್ರಯಾಣಿಕರು ಹೇಳಿದ ಸ್ಠಳದಲ್ಲಿ ಬಸ್ಸು ನಿಲ್ಲಿಸುವುದು ಚಾಲಕನ ಕರ್ತವ್ಯ” ಅಂತ ತಮ್ಮ ಮೊಂಡು ವಾದವನ್ನು ಮಂಡಿಸುತ್ತಾ ಮನಸ್ಸಿಲ್ಲದ ಮನಸ್ಸಿನಿಂದ ಕೆಳಗಿಳಿದರು. ಅವರು ಇಳಿಯಬೇಕಾದ ಸ್ಠಳದಲ್ಲಿ ನಿಲುಗಡೆಯಿರುವ ಬೇಕಾದಷ್ಟು ಬಸ್ಸುಗಳು ಇರುವಾಗ, ಆ ಬಸ್ಸು ಬಿಟ್ಟು, ಕಡಿಮೆ ನಿಲುಗಡೆ ಇರುವ ಬಸ್ಸಿಗೆ ಹತ್ತಿ ತನ್ನ ಮೊಂಡು ವಾದ ಮಂಡಿಸುತ್ತಾ ಚಾಲಕ-ನಿರ್ವಾಹಕರನ್ನು ವಾಚಾಮಗೋಚರ ಬೈದ ಆ ನಾಗರಿಕರ ಮನಸ್ಥಿತಿ ಕಂಡು ಮನಸ್ಸಿಗೆ ಖೇದವೆನಿಸಿತು.

ಬಸ್ ಪಯಣದ ಉದ್ದಕ್ಕೂ ಕಂಡ ದೃಶ್ಯಗಳ ಸರಮಾಲೆ ಯಾದರೂ ಎಂತಹದು? ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿರುವ ಕಾರಣ ಅಗಲ ಕಿರಿದಾದ ರಸ್ತೆಗಳಲ್ಲಿ ಅತಿ ವೇಗದಿಂದ ಮುನ್ನುಗ್ಗುವ ಚಾಲಕರು ಎದುರು ಬರುತ್ತಿರುವ ವಾಹನಗಳನ್ನು ಲೆಕ್ಕಿಸದೆ ಮುಂದೆ ಸಾಗುವ ರೀತಿ ಕಂಡು, ರಸ್ತೆ ನಿಯಮಗಳು ಯಾರಿಗಾಗಿ ಅನ್ನುವ ಪ್ರಶ್ನೆ ಮೂಡಿಸುವಂತಿತ್ತು. ದಾರಿ ಬದಿ ಅದೂ ಹೆದ್ದಾರಿ ಬದಿಯಲ್ಲಿಯೇ ನಿಂತು ಮೂತ್ರವಿಸರ್ಜನೆ ಮಾಡುವ ಜನರು, ನಡೆದು ಹೋಗುವಾಗ ದಾರಿಯಿಡೀ ಉಗುಳುತ್ತಾ ಹೋಗುವ ಜನರು, ಮೂಗಿನಿಂದ ನೆಗಡಿ ತೆಗೆದು ರಸ್ತೆಗೆ ಎಸೆಯುವ ಜನರು,… ಇವೆಲ್ಲಾ ಕಂಡಾಗ ಸ್ವಚ್ಛಭಾರತ ನಿರ್ಮಾಣದ ಕನಸು ನನಸಾದೀತು ಅನ್ನುವ ಭರವಸೆಯನ್ನಿಟ್ಟುಕೊಳ್ಳಲು ಸಹಾ ಸಾಧ್ಯವಿಲ್ಲ ಅನ್ನುವುದು ಮನದಟ್ಟಾಯಿತು. ಬಸ್ಸಿನಲ್ಲಿ “ಮಹಿಳೆಯರಿಗೆ ಮೀಸಲು” ಎಂದು ಬರೆದ ಸೀಟುಗಳೆಂದು ಗೊತ್ತಿದ್ದರೂ ಅಲ್ಲಿಯೇ ಕುಳಿತುಕೊಳ್ಳುವ ಗಂಡಸರು, ಬಸ್ಸಿನಲ್ಲಿ ಕುಳಿತ ಕೂಡಲೇ ಮೊಬೈಲಿನಲ್ಲಿ ಮುಳುಗಿಬಿಡುವ ವಿದ್ಯಾರ್ಥಿಗಳ ಸಮೂಹ,…..ಒಂದೇ ಎರಡೇ… “ಜನರು ಎತ್ತ ಸಾಗುತ್ತಿದ್ದಾರೆ?” ಅನ್ನುವ ಪ್ರಶ್ನೆ ನನ್ನ ಮನದಲ್ಲಿ ಮೂಡಿದ್ದು ಸತ್ಯ.

ಕರ್ನಾಟಕ ರಾಜ್ಯದಲ್ಲಿ ಲಾಟರಿ ಟಿಕೇಟುಗಳ ಮೇಲೆ ನಿಷೇಧವಿದೆ. ಆದರೆ ನೆರೆಯ ರಾಜ್ಯ ಕೇರಳದಲ್ಲಿ ಲಾಟರಿ ಬಹಳ ಪ್ರಸಿದ್ಧ. ಅದಕ್ಕೆ ಪೂರಕವೆಂಬಂತೆ ನಾನು ಕಂಡಿದ್ದು ಕರ್ನಾಟಕ-ಕೇರಳ ಗಡಿಯಾದ ತಲಪಾಡಿ ಬಳಿ ಅದೆಷ್ಟು ಲಾಟರಿ ಟಿಕೇಟು ಮಾರುವ ಪುಟ್ಟ ಪುಟ್ಟ ಅಂಗಡಿಗಳು! ಹಾಗೆಯೇ  ಕಾಸರಗೋಡಿನ ಬಸ್-ನಿಲ್ದಾಣದಲ್ಲಿ ಲಾಟರಿ ಟಿಕೆಟ್ ಮಾರುವವರನ್ನು ಸಹಾ ಕಂಡೆ. ಕರ್ನಾಟಕದಲ್ಲಿಯೂ ಲಾಟರಿ ಪ್ರಸಿದ್ಧವಿದ್ದ ದಿನಗಳು ನೆನಪಾದುವು. ದೀಪಾವಳಿ ಪ್ರಯುಕ್ತ, ಹೊಸವರ್ಷ ಪ್ರಯುಕ್ತ ಬಂಪರ್ ಡ್ರಾ ಅನ್ನುತ್ತಾ ಅನೇಕರು ತಮ್ಮ ಭಾಗ್ಯದ ಬಾಗಿಲು ತೆರೆಯಬಹುದೆಂದು ಲಾಟರಿ ಟಿಕೇಟು ಖರೀದಿಸುತ್ತಿದ್ದ ಆ ಕಳೆದು ಹೋದ ದಿನಗಳು ನೆನಪಿಗೆ ಬಂದವು.

ಈ ಅನುಭವಗಳ ಜೊತೆ ನನಗೆ ಆಪ್ತವಾದ ಸಂಗತಿ ಹಂಚಿಕೊಳ್ಳಲೇ ಬೇಕು. ಕಾಸರಗೋಡಿನ ಹಳೆಯ ಬಸ್ಸು ನಿಲ್ದಾಣದಲ್ಲಿ ಇಳಿದಾದ ಬಳಿಕ ಇನ್ನೊಂದು ಬಸ್ ಹಿಡಿಯಬೇಕಿತ್ತು. ಎಲ್ಲಾ ಬಸ್ಸುಗಳ ಬೋರ್ಡುಗಳು ಮಲಯಾಳದಲ್ಲಿ! ಆಗ ಸಹೃದಯರೊಬ್ಬರು ನನ್ನನ್ನು ಗಮನಿಸಿ “ನೀವು ಎಲ್ಲಿಗೆ ಹೋಗಬೇಕು?” ಅಂತ ಮಲಯಾಳಂ ಭಾಷೆಯಲ್ಲಿಯೇ ಕೇಳಿದರು. ನಾನು ಹೋಗಬೇಕಾದ ಸ್ಠಳವನ್ನು ಹೇಳಿದ ಬಳಿಕ ನಾನು ಹಿಡಿಯಬೇಕಿದ್ದ ಬಸ್ಸನ್ನು ತೋರಿಸಿದರು. ಸ್ನೇಹಪರತೆ ತುಂಬಾ ಇಷ್ಟ ಆಯಿತು.  ಆ ಬಸ್ಸಿನ ನಿರ್ವಾಹಕನಿಗೂ ಮಲಯಾಳಂ ಭಾಷೆ ಬಿಟ್ಟು ಬೇರೆ ಭಾಷೆ ಸ್ವಲ್ಪವೂ ಬರುತ್ತಿರಲಿಲ್ಲ. ನಾನು ಇಳಿಯಬೇಕಾದ ಸ್ಥಳ ಬಂದಾಗ ಆತ್ಮೀಯತೆಯಿಂದ “ನೀವು ಇಳಿಯುವ ಸ್ಥಳ ಬಂತು” ಅಂತ ಹೇಳಿದಾಗ ಆತನಿಗೆ ವಂದಿಸಿ ಬಸ್ಸಿನಿಂದಿಳಿದೆ.

ಜಗವನ್ನು ನೋಡುವ ರೀತಿ,  ಬದುಕುವ ರೀತಿ  ಒಬ್ಬರಿಂದೊಬ್ಬರಿಗೆ ಬದಲಾಗುತ್ತದೆ. ಆದರೆ ಸಾರ್ವಜನಿಕ ಸಾರಿಗೆಯನ್ನು ಪ್ರಯಾಣಕ್ಕಾಗಿ ಅವಲಂಬಿಸಿದಾಗ  ನಮ್ಮಿಷ್ಟದ ಹಾಗೆ ಇರಲಾಗದು, ಇರಲೂ ಬಾರದು. ಒಟ್ಟಿನಲ್ಲಿ ಯಾವುದೇ ಪ್ರಯಾಣವಿರಲಿ ಅಲ್ಲೊಂದು ಬದುಕಿನ ಪಾಠ ನಮಗೆ ಸಿಗುತ್ತದೆ ಅಂತ ಬಲವಾಗಿ ನಂಬುವವಳು ನಾನು. ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಬೇಕಾದರೆ ಅಂದರೆ ಜ್ಞಾನ ಸಂಪಾದನೆ ಮಾಡಬೇಕಾದರೆ ಹಾಗೆಯೇ ಜನರನ್ನು ಅರಿಯಬೇಕಾದರೆ ಪ್ರಯಾಣಗಳು ಸಹಕಾರಿ. ಅದಕ್ಕೆಂದೇ ಹಿರಿಯರು ಹೇಳಿದ್ದು “ದೇಶ ಸುತ್ತು, ಕೋಶ ಓದು” ಅಂತ. ನಾವಿರುವಲ್ಲಿಯೇ ಇದ್ದರೆ ಬಾವಿಯ ಕಪ್ಪೆಗಳಂತಾಗುತ್ತೇವೆ. ಪ್ರತಿಯೊಂದು ಪ್ರಯಾಣದಲ್ಲಿಯೂ ಕಲಿಯಬೇಕಾದ ಸಂಗತಿಗಳು ಸಿಗುತ್ತವೆ. ಕೆಲವೊಂದು ವಿಷಯಗಳು ಖುಷಿಗೆ ಕಾರಣವಾದರೆ ಕೆಲವೊಂದು ಘಟನೆಗಳು ಕಿರಿಕಿರಿ ಉಂಟು ಮಾಡುತ್ತವೆ. ಪ್ರತಿಯೊಂದು ಪ್ರಯಾಣವನ್ನೂ ಹೃದ್ಯವಾಗಿಸಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ ಅನ್ನುವುದು ನನ್ನ ಭಾವನೆ.

ಡಾ ಕೃಷ್ಣಪ್ರಭ ಎಂ, ಮಂಗಳೂರು

17 Comments on “ಬಸ್ ಪಯಣದ ಹಾದಿಗುಂಟ……

  1. ಬಸ್ಸಿನ ಪ್ರಯಾಣದ.. ದಾರಿಯಲ್ಲಿ ನ ಅನಭವದ ಬುತ್ತಿಯನ್ನು ನಿಮ್ಮ ಲೇಖನ ದಲ್ಲಿ….ಅನಾವರಣಗೊಳಿಲಿರುವ ರೀತಿ… ಬಹಳ ಚೆನ್ನಾಗಿ ದೆ ಮೇಡಂ…ಧನ್ಯವಾದಗಳು

    1. ಬಹುವಾಗಿ ಕಾಡಿದ ಅನುಭವಗಳನ್ನು ಹಂಚಿಕೊಳ್ಳಬೇಕೆನಿಸಿತು.. ಧನ್ಯವಾದಗಳು ಮೇಡಂ

  2. ಚಂದದ ಬರಹ ಪ್ರಭಾ .ಬಸ್ಸಿನ ಪ್ರಯಾಣ ಖುಷಿಯೂ,ಕಷ್ಡವೂ

    1. ಹೌದು ಅಕ್ಕ. ಕೆಲವೊಮ್ಮೆ ಮನಸ್ಸಿಗೆ ಆಪ್ತವಾಗುವ ಅನುಭವಗಳಾದರೆ ಇನ್ನು ಕೆಲವೊಮ್ಮೆ ಕಿರಿಕಿರಿ, ರೇಜಿಗೆ ಬಸ್ಸು ಪ್ರಯಾಣ ಬೇಡವೇ ಬೇಡ ಅನ್ನುವ ಭಾವನೆ ಬರಿಸುತ್ತದೆ

  3. ಬಸ್ಸಿನಲ್ಲಿ ಸಾದಾ ಪಯಣದ ಅನುಭವವನ್ನು ಹಂಚಿಕೊಂಡ ರೀತಿ ಇಷ್ಟವಾಯ್ತು.

  4. ಬಸ್ಸಿನಲ್ಲಿಯ ಸಾದಾ ಪಯಣದ ಅನುಭವವನ್ನು ಹಂಚಿಕೊಂಡ ರೀತಿ ಇಷ್ಟವಾಯ್ತು.

    1. ನಿಮ್ಮ ಮೆಚ್ಚುಗೆಯ ನುಡಿಗಳಿಗೆ ವಂದನೆಗಳು ಮೇಡಂ

  5. ಬಸ್ಸಿನ ಪಯಣದಲ್ಲಿ ಸಿಗುವ ಪ್ರಕೃತಿ ಸೌಂದರ್ಯದ ಸವಿ ಬೇರೆ ಪಯಣದಲ್ಲಿ ಸಿಗಲಾರದು. ಕಹಿ ಅನುಭವ ಸಿಕ್ಕರೆ ಮರೆಯಲಾಗದು. ಸಿಹಿ ಕಹಿ ಅನುಭವ ಎರಡನ್ನೂ ಹಂಚಿಕೊಂಡ ತಮಗೆ ಧನ್ಯವಾದಗಳು.

    1. ನಿಮ್ಮ ಮಾತು ಅಕ್ಷರಶಃ ಸತ್ಯ. ಕೆಲವೊಂದು ಪಯಣಗಳದು ಸಿಹಿನೆನಪು, ಇನ್ನು ಕೆಲವು ಕಹಿನೆನಪು ಉಳಿಸಿಬಿಡುತ್ತವೆ. ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ

  6. ಬದುಕೊಂದು ಮಂದಿ ಬಂಡಿಯ ಪ್ರಯಾಣವು /
    ಬದುಕೊಂದು ಮಂದಿ ಬಂಡಿಯ ಪ್ರಯಾಣವು /
    ಸಹಜೀವಿಗಳೊಡನೆ ಸಹಬಾಳ್ವೆಯ ಪ್ರವಾಸವು
    ಬದುಕೊಂದು ಮಂದಿಬಂಡಿಯ ಪ್ರಯಾಣವು/
    ಸಹಚರರೊಂದಿಗೆ ಸಮಾನತೆಯ ಸಂಚಾರವು/

    ನಿರೂಪಿಸುರುವುದು ವೈವಿಧ್ಯತೆಯಲ್ಲಿ ಬಾಳಿನ ಹೆಣಿಗೆಯು/
    ಸಂತೋಷ ವ್ಯಾಕುಲತೆಯ ಕ್ಷಣಗಳಲ್ಲಿ ನೇಯ್ದಿರುವ ಧೃಶ್ಯವು
    ಚಿತ್ರಿಸಿರುವುದು ವಿಭಿನ್ನತೆಯಲಿ ಜೀವನದ ಹೊಲಿಗೆಯು/
    ಸಂತೋಷ ಆಕ್ರೋಶ ಭಾವಗಳಲ್ಲಿ ಹೊಸೆದಿರುವ ನೋಟವು

    ಬಾಳ ಪಥದಲಿ ಕಟ್ಟುವೆವು ಬೇಧಭಾವದ ಕೋಟೆ ಕೊತ್ತಲಗಳ/
    ಬಡವ ಬಲ್ಲಿದನೆಂಬ ತಾರತಮ್ಯದ ವೈಮನಸ್ಸಿನ ದುರ್ಗಗಳ/
    ಜೀವಿಸುವೆವು ಅಪೂರ್ಣತೆಯಲಿ ಅನುಭವಿಸದೆ ಬಾಳಿನ ನವರಸಗಳ/
    ಮೇಲುಕೀಳೆಂಭ ಕೃತಕ ಭಾವನೆಗಳಲ್ಲಿ ನಿರ್ಲಕ್ಷಿಸುವೆವು ಮೌಲ್ಯಗಳ

    ಸಮನಾಗಿ ಜೀವನವ ನೋಡುವುದರಲ್ಲಿದೆ ತೃಪ್ತಿ ಸಂತೃಪ್ತಿ/
    ಸಾಟಿತನದ ಬದುಕಲ್ಲಿ ತೇಲಿ ಬರುವುದು ಸುಖ ಸಂತೋಷವು/
    ಸಿಹಿಕಹಿಯ ಸರಿಕದಲಿ ಸವಿದಾಗ ದೊರಕುವುದು ಸಂತುಷ್ಟಿ/
    ಔಚಿತ್ಯ ಪ್ರಜ್ಞೆಯ ಧೃಷ್ಟಿಯಲಿ ಮೂಡಿ ಬರುವುದು ಆನಂದ ಆಹ್ಲಾದವು/

    1. ಆಹಾ… ಅದೆಷ್ಟು ಚಂದ ಕವನ ಬರೆದಿರುವಿರಿ. ಅರ್ಥಪೂರ್ಣ ಕವನ ಹಂಚಿಕೊಂಡ ನಿಮಗೆ ಅನಂತ ಧನ್ಯವಾದಗಳು

  7. ಪರಿಚಿತ ಸಂಗತಿಗಳಿಗೆ ಲೇಖನ ರೂಪದ ಅಭಿವ್ಯಕ್ತಿ ಕೊಟ್ಟಿದ್ದೀರಿ, ಸಂತೋಷವಾಯಿತು.

    1. ಆಪ್ತ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *