ಅವಿಸ್ಮರಣೀಯ ಅಮೆರಿಕ-ಎಳೆ 32

Share Button

ನಾಲ್ಕು ವರ್ಷಗಳ ಬಳಿಕ…‌‌‌..

ನನ್ನ ನೌಕರಿ ಹಾಗೂ ಮನೆ ಕೆಲಸಗಳ ನಡುವೆ ಸಮಯ ಸರಿದುದೇ ತಿಳಿಯಲಾರದಂತಾಗಿತ್ತು… ಹಾಗೆಯೇ ನಾಲ್ಕು ವರುಷಗಳೂ ಸರಿದೇ ಹೋದವು. 2014ರ ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ, “ನೀನು ನಮ್ಮ ಕೆಲಸ ಮಾಡಿದ್ದು ಸಾಕು, ಇನ್ನು ಮನೆಯಲ್ಲೇ ಕೆಲಸ ಮಾಡಿಕೊಂಡು ಆರಾಮವಾಗಿರು” ಎಂಬುದಾಗಿ ನನ್ನ ನಿವೃತ್ತಿಯನ್ನು ಘೋಷಿಸಿಬಿಟ್ಟರು, ದೂರವಾಣಿ ಇಲಾಖೆಯವರು. ಅವರ ಆಜ್ಞೆಯನ್ನು ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ…ಯಾಕೆಂದರೆ, ಅರುವತ್ತು ಸಂವತ್ಸರಗಳನ್ನು ನನಗರಿವಿಲ್ಲದೇ ದಾಟಿಬಿಟ್ಟಿದ್ದೆ! ಅದೇ ಸಮಯಕ್ಕೆ ಸರಿಯಾಗಿ, ‘ನೀನೇನು ಬೇಜಾರು ಮಾಡ್ಬೇಕಾಗಿಲ್ಲ, ನಿನಗಾಗಿ, ನಿನ್ನ ಪ್ರೀತಿಯ ಕೆಲಸ ಕಾದಿದೆ’ ಎಂದು ಮಗಳಲ್ಲಿಗೆ ಹೋಗಲು ಟಿಕೆಟ್ ಸಿದ್ಧವಾಗಿ ಕುಳಿತಿತ್ತು.

ಈ ಸಲವೂ ನಾನೊಬ್ಬಳೇ ಹೊರಡಬೇಕಿತ್ತು.. ಆದರೆ ಮೊದಲಿನಂತೆ ಭಯ, ಅಳುಕು ಇರಲಿಲ್ಲವೆನ್ನಿ. ಈ ಸಲದ ನನ್ನ ಅಮೆರಿಕ ಪ್ರವಾಸವು, ಎಮಿರೇಟ್ಸ್ ವಿಮಾನದಲ್ಲಿ ನಿಗದಿಯಾದ್ದರಿಂದ, ವಿಮಾನವು ದುಬೈ ಮೂಲಕ ಹೋಗುವುದಿತ್ತು. ಆದ್ದರಿಂದ,  2014ನೇ  ದಶಂಬರ 13ಕ್ಕೆ ನಾನು ಕುಳಿತ ವಿಮಾನವು, ಬೆಂಗಳೂರಿನಿಂದ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಹಾರಿತು.

ದುಬೈಯೆಂಬ ಅಮರಾವತಿ..!

ದುಬೈಯು, ತೈಲ ದೊರೆಗಳ ಶ್ರೀಮಂತ ರಾಷ್ಟ್ರಯುನೈಟೆಡ್ ಅರಬ್ ಎಮಿರೇಟ್ಸ್ (U.A.E) ನ ರಾಜಧಾನಿಯಾಗಿದ್ದು, ಜಗತ್ತಿನ ವೈಭವೋಪೇತ ನಗರಗಳಲ್ಲಿ ಒಂದಾಗಿದೆ.  ನಮ್ಮಲ್ಲಿಯ, ಲಕ್ಷಾಂತರ ಮಂದಿ ವಿದ್ಯಾವಂತರಿಗೆ ಹಾಗೂ ಅವಿದ್ಯಾವಂತರಿಗೆ, ವಿವಿಧ ಸ್ತರಗಳಲ್ಲಿ ನೌಕರಿಗಳನ್ನು ಒದಗಿಸುವ ಸಂಪದ್ಭರಿತ ನಾಡು ಕೂಡಾ ಹೌದು. 1960ರಲ್ಲಿ ಪ್ರಾರಂಭವಾದ ದುಬೈಯ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು, 7,200 ಎಕರೆ ಪ್ರದೇಶವನ್ನು ಆವರಿಸಿಕೊಂಡಿದೆ. ಇಲ್ಲಿ ಸುಮಾರು 90,000 ಜನ ನೌಕರರು, 4 ಲಕ್ಷಕ್ಕೂ ಅಧಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವರು. ಈ ನಿಲ್ದಾಣವು, ಅತ್ಯಂತ ಹೆಚ್ಚು ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ನಿಭಾಯಿಸುವಲ್ಲಿ ಜಗತ್ತಿನಲ್ಲಿಯೇ ಎರಡನೇ ಸ್ಥಾನದಲ್ಲಿದೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಇಲ್ಲಿ ವರ್ಷವೊಂದಕ್ಕೆ ಸುಮಾರು 88ಮಿಲಿಯದಷ್ಟು ಪ್ರಯಾಣಿಕರು ಬಂದು ಹೋಗುತ್ತಾರೆ, 65 ಮಿಲಿಯದಷ್ಟು ಸರಕುಗಳು ಸಾಗಿಸಲ್ಪಡುತ್ತವೆ ಹಾಗೂ 4,,10,000ರಷ್ಟು ವಿಮಾನಗಳು ಈ ನಿಲ್ದಾಣದ ಮೂಲಕ ಸಂಚರಿಸುತ್ತವೆ.  ಇಲ್ಲಿಯ 3ನೇ ಟರ್ಮಿನಲ್ ನ ವಿಸ್ತಾರವು 184 ಲಕ್ಷ ಚದರ ಅಡಿಗಳಿಗಿಂತಲೂ ಹೆಚ್ಚಿದ್ದು, ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ವಿಸ್ತಾರವಾಗಿರುವ ಟರ್ಮಿನಲ್ ಎಂಬ ಹೆಗ್ಗಳಿಕೆಗೆಯನ್ನು ಹೊಂದಿರುವುದೂ ಅಲ್ಲದೆ, ವರ್ಷವೊಂದಕ್ಕೆ ಸುಮಾರು 60 ಮಿಲಿಯ ಪ್ರಯಾಣಿಕರನ್ನು ನಿಭಾಯಿಸಬಲ್ಲುದು! ಸೌರ ವಿದ್ಯುತ್ ಬಳಕೆಯಲ್ಲಿ ಈ ನಿಲ್ದಾಣವು ಜಗತ್ತಿನಲ್ಲೇ ಎರಡನೇ ಸ್ಥಾನವನ್ನು ಹೊಂದಿದೆ.

ಇಂತಹ ಅದ್ವಿತೀಯ, ಅಗಾಧ ಗಾತ್ರದ ನಿಲ್ದಾಣದಲ್ಲಿ ಬಂದಿಳಿದಾಗ ಅದರ ಅಂದ ಚಂದವನ್ನು ನೋಡುವ ವ್ಯವಧಾನವೇ ಇರಲಿಲ್ಲವೆನ್ನಬಹುದು…ಯಾಕೆಂದರೆ ನಮ್ಮ ಈ ದೇಶೀಯ ವಿಮಾನವು ಅದಾಗಲೇ ಅರ್ಧ ತಾಸು ತಡವಾಗಿದ್ದರಿಂದ, ಮತ್ತು ಅಮೆರಿಕಕ್ಕೆ ಹೋಗುವ ಮುಂದಿನ ಅಂತಾರಾಷ್ಟ್ರೀಯ ವಿಮಾನವನ್ನು  ಇನ್ನರ್ಧ ಗಂಟೆಯಲ್ಲಿ ಸೇರಬೇಕಾಗಿರುವುದರಿಂದ ನಾವೆಲ್ಲರೂ ಬಹಳ ಆತಂಕದಲ್ಲಿದ್ದೆವು. ಆ ವಿಮಾನ ನಿಲ್ದಾಣವು,  ನಾವಿರುವಲ್ಲಿಂದ, ನಿಲ್ದಾಣದ ಒಳಗಡೆಯೇ ನಾಲ್ಕೈದು ಕಿ.ಮೀ ದೂರ ಸಾಗಬೇಕಿತ್ತು. ಆದರೂ ವಿಮಾನದ ಸಿಬ್ಬಂದಿಯವರು ನಮಗೆ ಧೈರ್ಯ ತುಂಬಿ, ನಮಗಾಗಿ ಪ್ರತ್ಯೇಕ ವಾಹನದ ವ್ಯವಸ್ಥೆಯನ್ನು ಮಾಡಿ, ಸರಿಯಾದ ಸಮಯಕ್ಕೆ ವಿಮಾನದ ಬಳಿಗೆ ತಲಪಿಸಿದರು. ಆ ಗಡಿಬಿಡಿಯ ನಡುವೆಯೂ ಅಲ್ಲಿಯ ವೈಭವವನ್ನು ಅಲ್ಪಸ್ವಲ್ಪ ಕಣ್ತುಂಬಿಕೊಡೆ. ಎಲ್ಲೆಲ್ಲಿಯೂ ಬಂಗಾರದ ಬಣ್ಣದಿಂದ ಹೊಳೆಯುವ ಕಟ್ಟಡದ ರಚನೆ ನಮ್ಮನ್ನು  ಬೆಕ್ಕಸ ಬೆರಗಾಗಿಸುವುದಂತೂ ನಿಜ! ನಿಲ್ದಾಣದೊಳಗೆಯೇ ಗೋಡೆಗಳಲ್ಲಿ ಜಲಪಾತದಂತೆ ಹರಿಯುವ ಕೃತಕ ನೀರ ಹರಿವು, ಬಣ್ಣ ಬಣ್ಣದ ಬೆಳಕಿನಿಂದ ಕಂಗೊಳಿಸುತ್ತಿತ್ತು. ಎಲ್ಲಿ ನೋಡಿದರೂ ಝಗಝಗಿಸುವ, ನಯನಮನೋಹರ ದೃಶ್ಯಗಳು. ಸ್ಫಟಿಕದಂತೆ ಹೊಳೆಯುವ ನೆಲ. ಅದರ ಮೇಲಿನಿಂದಲೇ  ನಮ್ಮನ್ನು ಪುಟ್ಟ ಟ್ರಾಲಿಯಲ್ಲಿ ವೇಗವಾಗಿ ಕರೆದೊಯ್ಯಲಾಗಿತ್ತು. ನಿಜವಾಗಿಯೂ ಎಲ್ಲವನ್ನೂ ಸರಿಯಾಗಿ, ಮನಸೋಯಿಚ್ಛೆ ನೋಡುವ ನನ್ನ ಆಸೆ ಈಡೇರಲೇ ಇಲ್ಲವೆನ್ನಿ.

PC : Internet

ಅಂತೂ, ವಿಮಾನವನ್ನು ಏರುವಲ್ಲಿಗೆ ಬಂದಾಗ ವಿಮಾನವು ನಮಗಾಗಿ ಕಾದಂತಿತ್ತು.. ನಾವೇ ಕೊನೆಯ ಪ್ರಯಾಣಿಕರಾಗಿದ್ದೆವು! ಅತ್ಯಂತ ಸುಸಜ್ಜಿತ, ಸಾವಿರಕ್ಕೂ ಮಿಕ್ಕಿ ಪ್ರಯಾಣಿಕರನ್ನು ಒಮ್ಮೆಲೇ ಒಯ್ಯಬಹುದಾದಂತಹ  ಡಬ್ಬಲ್ ಡೆಕ್ಕರ್  ವಿಮಾನವಾಗಿತ್ತದು. ಅದರೊಳಗಿನ ವೈಭವೋಪೇತ ಅನುಕೂಲತೆಗಳನ್ನು ಕಂಡು ನಿಜಕ್ಕೂ ಬೆಕ್ಕಸಬೆರಗಾದೆ! ಕಿಟಿಕಿ ಪಕ್ಕದ ಸೀಟು ನನ್ನದಾಗಿದ್ದುದು ನನ್ನ ಸಂತಸವನ್ನು ಇಮ್ಮಡಿಸಿತ್ತು. ಅದರೊಳಗೆ, ಪ್ರಯಾಣದ ಸಮಯದಲ್ಲಿ ನನಗೊದಗಿಸಿದ  ಸಸ್ಯಾಹಾರಿ ಊಟ ತಿಂಡಿಗಳು ನಿಜಕ್ಕೂ ಬಹಳ ರುಚಿಕರವಾಗಿದ್ದವು. ಸೀಟಿನ ಮುಂದಿರುವ ಟಿ.ವಿ. ಪರದೆಯ ಮೇಲೆ ಮೂಡಿಬರುವ,  ನಾವಿರುವ  ವಿಮಾನವು ಹಾರಾಡುತ್ತಿರುವ ಸ್ಥಳ, ಎತ್ತರ, ದೂರ, ಗಾಳಿಯ ರಭಸ ಇತ್ಯಾದಿ ಮಾಹಿತಿಗಳನ್ನು ನೋಡುವುದು ನನ್ನಗಿಷ್ಟದ  ಕೆಲಸವಾಗಿದೆ. ಈ ಸಲ ಇದರಲ್ಲಿ ಇನ್ನೂ ಒಂದು ವಿಶೇಷ… ಅದುವೇ, ವಿಮಾನವು ಉತ್ತರಧ್ರುವ ಪ್ರದೇಶದ ಮೇಲೆ ಹಾರಾಡುವುದಿತ್ತು.

ಉತ್ತರಧ್ರುವದತ್ತ…

ಧ್ರುವ ಪ್ರದೇಶವನ್ನು ನೋಡುವ ಈ ಅವಕಾಶವನ್ನು ಬಿಡಬಾರದೆಂದು, ಟಿ.ವಿ. ಪರದೆಯ ಮೇಲೆ ಕಣ್ಣಿಟ್ಟು ಕಾದೆ..ಯಾಕೆಂದರೆ ಆಗ ಮಧ್ಯರಾತ್ರಿ ಒಂದು ಗಂಟೆ.‌.. ಸಿಕ್ಕಾಪಟ್ಟೆ ನಿದ್ದೆಯ ಸಮಯ. ಅಂತೂ ಧ್ರುವ ಪ್ರದೇಶದ ಮೇಲೆ ಹಾರಾಡುವಾಗ ಕಿಟಿಕಿಯ ಗಾಜಿನ ಮೂಲಕ ಹೊರಗಡೆಗೆ ನೋಡಿದರೆ ಆಶ್ಚರ್ಯವಾಯ್ತು!… ಅಲ್ಲಿ ಪೂರ್ತಿ ಬೆಳಕು ಹರಡಿತ್ತು..ದಪ್ಪ ಮಂಜುಗಡ್ಡೆಯ ಪದರ ಕಣ್ಣು ಕುಕ್ಕುವಂತೆ, ಬೆಳ್ಳಗೆ ಫಳಫಳ ಮಿಂಚುತ್ತಿತ್ತು. ಎಷ್ಟು ಹೊತ್ತು ನೋಡಿದರೂ ಅಷ್ಟು ಮಾತ್ರ ಗೋಚರಿಸುತ್ತಿತ್ತು…ಹೌದಲ್ಲಾ..ಅಲ್ಲಿ ಮಂಜುಗಡ್ಡೆ ಬಿಟ್ಟರೆ ಬೇರೇನಿದೆ ಅಲ್ಲವೇ? ಪೂರ್ತಿ ಪಯಣವು ಏನೂ ಬೇಸರ ತೊಂದರೆಯಿಲ್ಲದೆ ಕಳೆಯಿತು. ಸ್ಯಾನ್ ಫ್ರಾನ್ಸಿಸ್ಕೋ  ವಿಮಾನ ನಿಲ್ದಾಣದಲ್ಲಿ ಸಮಯಕ್ಕೆ ಸರಿಯಾಗಿ ಇಳಿದಾಗ, ಕಳೆದ ಸಲದ ನನ್ನ ಪೇಚಾಟದ ನೆನಪಾದರೂ ಚಿಂತಿಸಲಿಲ್ಲವೆನ್ನಿ. ಹೊರಬಂದಾಗ, ತೀವ್ರ ಚಳಿ ಕಾಡಿತಾದರೂ, ತಮ್ಮ ಪುಟ್ಟ ಮಗಳೊಂದಿಗೆ, ಮಗಳು ಮತ್ತು ಅಳಿಯ  ನನಗಾಗಿ ಕಾಯುತ್ತಿರುವುದು ಕಂಡುಬಂದು ಪ್ರಯಾಣದ ಆಯಾಸವೆಲ್ಲಾ ಮರೆಯಾಯ್ತು. ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದ ಮಗಳ ಯೋಗಕ್ಷೇಮವನ್ನು ವಿಚಾರಿಸಿ, ಅವಳು ನನಗಾಗಿ ತಂದಿದ್ದ ಅವಳ ಕೈಯಡುಗೆಯನ್ನು ಸವಿದು, ಕಾರಿನಲ್ಲಿ ಮನೆ ತಲಪಿದಾಗ ಅದಾಗಲೇ ಮಧ್ಯಾಹ್ನ ಹೊತ್ತು. ಅವರದೇ ಸ್ವಂತದ ಹೊಸ ಮನೆಯನ್ನು ಕುತೂಹಲ, ಸಂತಸದಿಂದ  ನೋಡಿ, ನನ್ನೊಡನೆ ಒಯ್ದ ಎಲ್ಲಾ ಸಾಮಾನು, ತಿಂಡಿ ಇತ್ಯಾದಿಗಳನ್ನು ಅವಳ ಕೈಗೊಪ್ಪಿಸಿ ಮಲಗಿದವಳಿಗೆ ಹಗಲೇ ರಾತ್ರಿಯಾಗಿತ್ತು!

ದಶಂಬರ 24ಕ್ಕೆ ಪುಟ್ಟ ಕಂದನ ಆಗಮನವಾದಾಗ , ಅವನಕ್ಕನ ಸಂಭ್ರಮ ಹೇಳತೀರದು. ಮುಂದಕ್ಕೆ, ಚಳಿಗಾಲ ಕಳೆದು ಬೇಸಿಗೆ ಬರುತ್ತಿದ್ದಂತೆ, ನಮ್ಮ ಪ್ರವಾಸದ ಬಗ್ಗೆಯೂ ಗಹನವಾದ ಚರ್ಚೆ, ನಿರ್ಣಯ ಮಂಡನೆಗಳೂ ಪ್ರಾರಂಭವಾದುವು. ಪುಟ್ಟ ಮಗುವಿನೊಂದಿಗೆ ಹೆಚ್ಚು ದೂರ ಪ್ರಯಾಣ ಬೇಡವೆಂದು, ಅಕ್ಕಪಕ್ಕದ ರಾಜ್ಯಗಳಲ್ಲಿರುವ ಪ್ರವಾಸೀತಾಣಗಳನ್ನು ನೋಡಲು ಹೋಗುವುದೆಂದು ಅಂತಿಮವಾಗಿ ತೀರ್ಮಾನವಾಯ್ತು. ಅಂತೆಯೇ, ಎಪ್ರಿಲ್ 11 ರಂದು ಪಕ್ಕದ ರಾಜ್ಯ ಯೂಟ (Utah State) ಕಡೆಗೆ ನಮ್ಮ ಪ್ರಯಾಣ ಹೊರಟಿತು… 8 ದಿನಗಳ ಪ್ರವಾಸಕ್ಕಾಗಿ.

ಯೂಟ ರಾಜ್ಯದತ್ತ…

ಆ ದಿನ ಬೆಳಗ್ಗೆ 6 ಗಂಟೆಗೆ  ನಮ್ಮ ದೇಶೀಯ ವಿಮಾನವು ಹೊರಡುವುದಾದ್ದರಿಂದ, ನಾವು ಸಾಕಷ್ಟು ಮೊದಲೇ ನಿಲ್ದಾಣಕ್ಕೆ ತಲುಪಬೇಕಿತ್ತು. ಆದರೆ, ನಾವು ಹೊರಡುವಾಗಲೇ ಅರ್ಧಗಂಟೆ ತಡವಾಯಿತು. ತುಂಬಾ ಆತಂಕದಲ್ಲೇ ಅಲ್ಲಿಗೆ ತಲಪಿದಾಗ, ಪ್ರಯಾಣಿಕರ ಸಾಲು ಅದಾಗಲೇ ಹನುಮಂತನ ಬಾಲದಂತೆ ಬೆಳೆದಿತ್ತು! ಅಂತೂ ದೇವರ ಮೇಲೆ ಭಾರ ಹಾಕಿ ನಿಂತವರಿಗೆ, ಕೊನೆಗೂ ಎಲ್ಲಾ ತಪಾಸಣೆಗಳನ್ನು ಮುಗಿಸಿ ಓಡೋಡಿ ವಿಮಾನದೊಳಗೆ ನುಗ್ಗಿ, ನಮ್ಮ ಸೀಟಲ್ಲಿ ಕುಳಿತು ನಿಟ್ಟುಸಿರುಬಿಟ್ಟದ್ದೇ ಗೊತ್ತು…ಯಾಕೆಂದರೆ, ಇಲ್ಲಿಯೂ ನಾವೇ ಕೊನೆಯ ಪ್ರಯಾಣಿಕರಾಗಿದ್ದೆವು… ಸಾಲ್ಟ್ ಲೇಕ್ ಸಿಟಿಗೆ (Salt Lake city) ಹೋಗುವ ಈ ವಿಮಾನದಲ್ಲಿ!  ಸುಮಾರು 740 ಮೈಲು ದೂರದ ಈ ವಿಮಾನ ಪ್ರಯಾಣವು ಕೇವಲ 45 ನಿಮಿಷಗಳಲ್ಲಿ ಕೊನೆಗೊಂಡಿತ್ತು.

PC : Internet

ಸಾಲ್ಟ್ ಲೇಕ್ ಸಿಟಿಯ  ಈ ನಾಗರಿಕ ಮಿಲಿಟರಿ ವಿಮಾನ ನಿಲ್ದಾಣವು, ಮುಖ್ಯ ಪಟ್ಟಣದಿಂದ ಸುಮಾರು ನಾಲ್ಕು ಮೈಲು ದೂರದ, ಬೆಟ್ಟ ಗುಡ್ಡಗಳಿಂದಾವೃತ ಬಯಲು ಪ್ರದೇಶದಲ್ಲಿದೆ. ಇಲ್ಲಿ ವರ್ಷಕ್ಕೆ, ಒಂದು ಕೋಟಿಗೂ ಮಿಕ್ಕಿ ಪ್ರಯಾಣಿಕರು ಸಂಚರಿಸುವರು ಹಾಗೂ ಮೂರು ಲಕ್ಷಕ್ಕೂ ಹೆಚ್ಚು ವಿಮಾನಗಳು ಸಂಚರಿಸುವವು. ಅಲ್ಲಿಗೆ ತಲಪಿದ ನಾವು, ಮುಂದಿನ ಪ್ರಯಾಣಕ್ಕೆ ಬಾಡಿಗೆ ಕಾರನ್ನು ಪಡೆದೆವು… ಅಳಿಯನೇ ಅದರ ಚಾಲಕನಾದ. ಯಾಕೆಂದರೆ, ಬಾಡಿಗೆಗೆ ಪಡೆದ ವಾಹನವನ್ನು ಇಲ್ಲಿ ಅವರವರೇ ಚಾಲನೆ ಮಾಡುವರು.

ಬೆಳಗ್ಗೆ 9.30ರ ಹೊತ್ತು..ನಮ್ಮ ಕಾರಿನ ಡಿಕ್ಕಿಯಲ್ಲಿ, ನಮ್ಮೆಲ್ಲಾ ಸೂಟ್ಕೇಸುಗಳನ್ನು ತುಂಬಿಸಿ ಹೊರಟಾಗ, ಡಿಕ್ಕಿಯ ಬಾಗಿಲು ಭದ್ರವಾಗಿ ಮುಚ್ಚಲಾಗಲಿಲ್ಲ… ಅದರ ಬಗ್ಗೆ ವಿಚಾರಿಸಿದಾಗ, ಪುನ: ನಾವು ಹೊರಟಲ್ಲಿಗೇ ಹಿಂತಿರುಗಲು ಹೇಳಿದರು. ಆದರೆ ಹಿಂತಿರುಗಲು ಮನಸ್ಸಾಗದೆ, ಕಾರನ್ನು ಮುಂದಕ್ಕೋಡಿಸಿದಾಗ, ಹಿಂದಿನಿಂದ ಒಂದು ಸಣ್ಣ ಸೂಟ್ಕೇಸ್ ಧಡಾರ್ ಎಂದು ರಸ್ತೆಗೆ ಬಿತ್ತು. ಎಲ್ಲಾ ವಾಹನಗಳೂ ಬಹಳ ರಭಸದಿಂದ ಸಾಗುವ ರಸ್ತೆಯಾಗಿತ್ತು ಅದು.  ಮಾತ್ರವಲ್ಲದೆ, ವಾಹನವನ್ನು ಅಲ್ಲೆಲ್ಲೂ ನಿಲ್ಲಿಸುವಂತೆಯೂ ಇರಲಿಲ್ಲ.. ನಮ್ಮ ಪರಿಸ್ಥಿತಿ ಯೋಚಿಸಿಯೇ ಭಯವಾಯ್ತು! ಹೇಗೋ ಸಂಭಾಳಿಸಿಕೊಂಡು, ಸೂಟ್ಕೇಸನ್ನು ಹೆಕ್ಕಿ ತಂದು, ಅದನ್ನು ಕೈಯಲ್ಲೇ ಹಿಡಿದು ಕುಳಿತು, ವಾಹನವನ್ನು ಹಿಂತಿರುಗಿಸಿ ಹೊರಟಲ್ಲಿಗೇ ಬಂದು ಸೇರಿದೆವು. ಅಲ್ಲಿಯ ಅಧಿಕಾರಿಗಳ ಬಳಿ ವಾಹನದ ಬದಲಾವಣೆಗೆ ಮಾತನಾಡಿದಾಗ, ಹೊಚ್ಚಹೊಸ ಕಂದು ಬಣ್ಣದ ಕಾರೊಂದನ್ನು  ನಮಗೆ ಒದಗಿಸಿದರು. ಒಂದು ತೊಂದರೆಯಂತೂ ಸುಲಲಿತವಾಗಿ ನಿವಾರಣೆಯಾಯಿತು.

ನಾನು ಕಳೆದುಹೋದೆ…!!

ಕಾರಿನ ದಾಖಲೆಗಳು ನಮ್ಮ ಕೈಸೇರಲು ಸ್ವಲ್ಪ ತಡವಾಗುವುದೆಂದು ತಿಳಿಯಿತು. ವಾಶ್ ರೂಂಗೆ ಹೋಗುತ್ತಿದ್ದ ಅಳಿಯನ ಜೊತೆಗೆ ನಾನೂ ಹೊರಟೆ.. ಹಿಂತಿರುಗುವಾಗ ಹೇಗೂ ಅವನಿರುವನೆಂಬ ಧೈರ್ಯದಲ್ಲಿ. ಆದರೆ, ಹತ್ತು ನಿಮಿಷಗಳಾದರೂ ಅವನ ಸುಳಿವೇ ಇಲ್ಲ! ನಮ್ಮ ಕಾರು ನಿಂತಿರುವಲ್ಲಿಂದ ಸ್ವಲ್ಪ ದೂರದಲ್ಲಿ ನಾನಿದ್ದುದರಿಂದ, ಹಿಂತಿರುಗಲು ನೋಡ್ತೇನೆ…ಏನಿದು?!.. ನಮ್ಮ ಕಾರಿನಂತಹ ಕಂದು ಬಣ್ಣದ ನೂರಾರು ಕಾರುಗಳ ಮಧ್ಯೆ ನಮ್ಮ ಕಾರಿನ ಗುರುತು ಹಿಡಿಯಲು ಸಾಧ್ಯವೇ!? ನನಗಂತೂ ಆ ಗಾಬರಿಯ ಮಧ್ಯೆಯೂ ಅಲೀಬಾಬ ಮತ್ತು ನಲುವತ್ತು ಕಳ್ಳರ ಕಥೆ ನೆನಪಾಗಿ ನಗು ಬಂತು. ಮುಂದೇನು ಮಾಡುವುದೆಂದು ಅರಿಯದೆ, ಅಲ್ಲೇ ಪಕ್ಕದಲ್ಲಿದ್ದ ಸಹಾಯಕಿಯ ಬಳಿ ಕೇಳಬಹುದೆಂದರೆ ನನ್ನ ಬಳಿ ಏನೂ ಮಾಹಿತಿ ಇರಲಿಲ್ಲ! ಈ ಮೊದಲೇ, ನನ್ನ ಬ್ಯಾಗ್ ಕಳೆದುಹೋದಂತೆ, ಈ ಸಲ ನಾನೇ ಕಳೆದು ಹೋದೆನೇ ಎಂದುಕೊಂಡು ಪೆಚ್ಚಾಗಿ, ಮೊದಲಿದ್ದಲ್ಲಿಗೇ ಹಿಂತಿರುಗೋಣವೆಂದುಕೊಂಡು ಹೊರಟಾಗ, “ಅಮ್ಮಾ” ಎನ್ನುವ ಧ್ವನಿ ಕಿವಿಗೆ ಬಿತ್ತು…ಅಮೃತವಾಣಿಯಂತೆ! ಅಬ್ಬಾ..! ಹೀಗೂ ಉಂಟೇ..?! ದೇವರು ಅನಾಥರಕ್ಷಕನೇ ಹೌದು! ಎಂದುಕೊಂಡು ಆ ಕಡೆ ನೋಡಿದಾಗ ಮಗಳು, “ನೀನೇನು ಇಷ್ಟು ತಡ..ನಾವೆಲ್ಲಾ ನಿನ್ನನ್ನು ಕಾಯುತ್ತಾ ಭಜನೆ ಮಾಡಲು ಪ್ರಾರಂಭಿಸಿದೆವು” ಎಂದು ತಮಾಷೆ ಮಾಡಿದಳು. ನನಗೆ ತಮಾಷೆಯನ್ನು ಆಸ್ವಾದಿಸುವುದು ಬಿಡಿ…ಖುಶಿಯಲ್ಲಿ ಮೂಕಳಾಗಿಬಿಟ್ಟಿದ್ದೆ…ಆದರೂ ನನ್ನ ಗುಟ್ಟು ಬಿಟ್ಟುಗೊಡಲಿಲ್ಲವೆನ್ನಿ.. ಅಂತೂ ಸುಖಾಂತ್ಯ..!!

 ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:  http://surahonne.com/?p=35895

–ಶಂಕರಿ ಶರ್ಮ, ಪುತ್ತೂರು. 

(ಮುಂದುವರಿಯುವುದು….)

7 Responses

  1. ಅಮೆರಿಕ ಪ್ರವಾಸ ಕಥನ ದ ಮತ್ತೊಂದು ಮಜಲಿನ ಆರಂಭ ಚೆನ್ನಾಗಿದೆ… ಮುಂದಿನ ಕಂತಿಗಾಗಿ ಕಾಯುವಂತಿದೆ.

    ಧನ್ಯವಾದಗಳು.. ಮೇಡಂ.

    • . ಶಂಕರಿ ಶರ್ಮ says:

      ತಮ್ಮ ಮೆಚ್ಚುಗೆಯ ನುಡಿಗಳಿಗೆ ನಮನಗಳು ಮೇಡಂ.

  2. ಆಶಾ ನೂಜಿ says:

    ಓದಿದೆ ಅಕ್ಕೋ ಖುಷೀಆತು

  3. ನಯನ ಬಜಕೂಡ್ಲು says:

    ಚೆನ್ನಾಗಿದೆ

  4. Padma Anand says:

    ಸುಂದರವಾಗಿ, ಕುತೂಹಲಭರಿತವಾಗಿ ಪುನಃರಾರಂಭವಾದ ಲೇಖನಮಾಲಿಕೆ ಖುಷಿ ನೀಡಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: