ಪುಸ್ತಕ ಪರಿಚಯ : ‘ಪರಿಮಳಗಳ ಮಾಯೆ’, ಲೇಖಕಿ : ಸಮತಾ.ಆರ್
”ನಾ ಬರೆ ತಲೆಹರಟೆಗಳನ್ನಷ್ಟೇ ಬರೆಯುವುದು” ಎಂದು ಹಾಸ್ಯ ಮಾಡುತ್ತಲೇ ತಮ್ಮ ಬರೆಹಗಳ ಮೂಲಕ ನಮ್ಮೆಲ್ಲರಿಗೂ ಓದುವ ಸುಖ ಕೊಟ್ಟ ಸಮತಾ ಪ್ರೌಢಶಾಲಾ ಶಿಕ್ಷಕಿಯಾಗಿ ವಿಜ್ಞಾನ ಗಣಿತಗಳ ಜೊತೆಗೆ ಒಡನಾಡಿಕೊಂಡೆ ಸಾಹಿತ್ಯವನ್ನೂ ಉಸಿರಾಡುವವರು.
ವಿಶೇಷ ವಸ್ತುಗಳನ್ನು ತಮ್ಮ ಬರೆಹಕ್ಕೆ ಆಯ್ದುಕೊಳ್ಳುವ ಇವರು ಪ್ರಬಂಧ,ಲಹರಿ,ಲೇಖನಗಳ ಮೂಲಕ ತಮ್ಮ ಸುತ್ತಲಿನ ಜಗತ್ತನ್ನು ಸೂಕ್ಷ್ಮವಾಗಿ ಗಮನಿಸುತ್ತ ಅವರ ಚಿತ್ತಭಿತ್ತಿಯಿಂದ ಭಾವನಾತ್ಮಕವಾಗಿಯೂ, ನವಿರಾಗಿಯೂ ಬಿತ್ತಬಲ್ಲರು. ತಮ್ಮ ಅನುಭವಕ್ಕೆ ದಕ್ಕಿದ ವಿಚಾರಗಳಿಗೆ ಹಾಸ್ಯದ ಬಣ್ಣವನ್ನು ಲೇಪಿಸಿ ಒಂದು ರೀತಿಯ ಜೀವಂತಿಕೆಯಲ್ಲಿಡುವ ಶಕ್ತಿ ಇವರ ಬರೆಹಗಳಿಗಿದೆ.ಪ್ರೌಢಭಾಷೆ ಇವರ ಓದಿನ ಹರಹನ್ನು ತಿಳಿಸಿದರೆ ಸಂದರ್ಭಕ್ಕೆ ಸರಿಯಾದ ಗಾದೆ ಬಳಸಿ ನಗಿಸುವುದರಲ್ಲಿ ನಿಸ್ಸೀಮರು.
”ಹಂಗೇ ಸಿಗೋದಾದ್ರೆ ನಂಗೂ ಒಂದು ನಮ್ಮಪ್ಪನಿಗೂ ಒಂದು” ಈ ತರಹ ಗಾದೆಗಳನ್ನು ಹರಟೆಯಲ್ಲಿ ಬಳಸುತ್ತ ಬರೆಹದಲ್ಲೂ ಇಳಿಸಿ ನಗಿಸುವ ಕಲೆಗಾರಿಕೆಯನ್ನು ಮೈಗೂಡಿಸಿಕೊಂಡಿದ್ದಾರೆ ಎಂಬುದಕ್ಕೆ ನಾಡಿನ ಪತ್ರಿಕೆಗಳಲ್ಲಿ, ಬ್ಲಾಗ್ಗಳಲ್ಲಿ ಪ್ರಕಟವಾಗಿರುವ ಇವರ ಪ್ರಬಂಧಗಳೇ ಸಾಕ್ಷಿ.
ಸಮತಾ ಸಾಕಷ್ಟು ಕನ್ನಡ ಕವಿತೆಗಳನ್ನು ಇಂಗ್ಲೀಷ್‌ಗೆ ಇಂಗ್ಲಿಷ್‌ನ ಕೆಲ ಕವಿತೆಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಹಲವಾರು ಅಂತರ್ಜಾಲ ಪತ್ರಿಕೆಗಳಲ್ಲಿ ಈ ಅನುವಾದಿತ ಕವನಗಳು ಪ್ರಕಟವಾಗಿ, ಓದುಗರ ಮೆಚ್ಚುಗೆ ಪಡೆದಿರುವ ಉತ್ತಮ ಅನುವಾದಕಿ ಕೂಡ ಹೌದು.
ವರ್ತಮಾನದಲ್ಲಿ ಕಂಡದ್ದು, ಕೇಳಿದ್ದು, ಅನುಭವಿಸಿದ್ದು, ಪರದಾಡಿದ್ದನ್ನೆಲ್ಲಾ ಹಾಸ್ಯಮಯವಾಗಿಸುವ ಇವರ ಪ್ರಬಂಧಗಳನ್ನು ಓದುವುದೆಂದರೆ ಏನೋ ಹೊಸದರತ್ತ ಹೊರಳಿದಂತೆ,ಗೋಚರಿಸುವ ಕುತೂಹಲ ಮತ್ತು ಅಷ್ಟೇ ಆಪ್ತತೆ.
ಇವರ ಚೊಚ್ಚಲ ಕೃತಿ ”ಪರಿಮಳಗಳ ಮಾಯೆ’‘ಯಲ್ಲಿ ಲಿಯೋ ಬೆನ್ನೇರಿ ಹೊರಟು ಸವಾರಿ ಮಾಡುತ್ತಾ ಸ್ಮಾರ್ಟ್ ಫೋನಾಯಣದವರೆಗೂ ಸುಮಾರು ಹದಿನೆಂಟು ಪ್ರಬಂಧಗಳು ವಿಶಿಷ್ಠ ವಸ್ತುಗಳಿಂದ ಬದುಕಿನ ಆಸುಪಾಸುಗಳೆಲ್ಲಲ್ಲೋ ಸುಳಿದಂತೆ ಭಾಸವಾಗುತ್ತದೆ.
ಇಲ್ಲಿರುವ ಪ್ರಬಂಧಗಳು ಕುತೂಹಲ ಕೊಡುತ್ತಾ ತ್ರಾಸಿಲ್ಲದೆ ಓದಿಸಿಕೊಂಡು ಹೋಗುತ್ತವೆ. ಸಮತಾ ಪ್ರಬಂಧಗಳನ್ನು ಬರೆಯುವುದರಲ್ಲಿ ಗೆದ್ದಿದ್ದಾರೆ ಎಂಬುದಕ್ಕೆ ಪ್ರಸಿದ್ಧ ಸಾಹಿತಿ ಪುರುಷೋತ್ತಮ ಬಿಳಿಮಲೆ ಅವರು ಬರೆದಿರುವ ಮುನ್ನುಡಿಯಲ್ಲೇ ಕನ್ನಡಿ ಹಿಡಿದಿದ್ದಾರೆ.
ಚೆಂದದ ಮುಖಪುಟದಲ್ಲಿ ನೂರ ಮೂವತ್ತೈದು ಪುಟಗಳನ್ನು ಹೊಂದಿರುವ ಆಕರ್ಷಕ ಶೀರ್ಷಿಕೆಯ ‘ಪರಿಮಳಗಳ ಮಾಯೆ’ಯನ್ನು ಅಹರ್ನಿಶಿ ಪ್ರಕಾಶನದವರು ಪ್ರಕಟಿಸಿದ್ದಾರೆ. ಇದರ ಬೆಲೆ ರೂಪಾಯಿ ನೂರ ನಲವತ್ತು ಆಗಿದ್ದು, ಕೊಂಡು ಓದೋಣ, ಓದಿ ನಗು ನಗುತ್ತಲೇ ನಮ್ಮಗಳ ನೆನಪಿನ ಸೊಬಗಿನತ್ತ ಹೊರಳೋಣ.
ವೃತ್ತಿ ಮತ್ತು ಪ್ರವೃತ್ತಿಗಳೆರಡರಲ್ಲೂ ಸಮರ್ಥರಾದ ಸಮತಾ ಇವರ ಈ ಚೊಚ್ಚಲ ಕೃತಿಗೆ ಅಭಿನಂದನೆಗಳು. ಬರೆಯುವ ಸುಖವನ್ನು ಸಮತಾ ಸಮೃದ್ಧವಾಗಿ ಅನುಭವಿಸುವಂತಾಗಲಿ.
–ಸುನೀತ ಕುಶಾಲನಗರ
ಧನ್ಯವಾದಗಳು ಸುರಹೊನ್ನೆ ಮತ್ತು ಸುನಿತಾಳಿಗೆ
ಮೇಡಂ ನಿಮ್ಮ ಅನಿಸಿಕೆಯೇ ಒಂದು ಲೇಖನವಿದ್ದಂತೆ. ಬಹಳ ಸವಿಸ್ತಾರವಾಗಿ ಪ್ರಬಂಧವನ್ನು ವಿವರಿಸಿದ್ದೀರಿ.ಸಮತಾ ಬಹಳ ಪ್ರತಿಭೆಯುಳ್ಳ ಲೇಖಕಿ. ಅವರ ತಂದೆ ಬಿಟ್ಟು ಹೋದ ವೃತ್ತಿಯನ್ನು ಸಮರ್ಥವಾಗಿ ಬಳಸಿಕೊಂಡು ಸಾರ್ಥಕತೆ ಮೆರೆದಿದ್ದಾರೆ. ಉತ್ತಮ ಶಿಕ್ಷಕಿ. ಇಬ್ಬರಿಗೂ ಅಭಿನಂದನೆಗಳು.
ಪ್ರಬಂಧಗಳ ಸಂಕಲನ ಪರಿಚಯ..ಆ ಪುಸ್ತಕ ವನ್ನು ಓದಲೇಬೇಕು…ಎಂದು ಮನಬಯಸುವಂತಿದೆ…ಧನ್ಯವಾದಗಳು ಮೇಡಂ
ಸಮತ ಮತ್ತು ಸುನಿತ ಅಭಿನಂದನೆಗಳು
ಅಭಿನಂದನೆಗಳು… ಪ್ರಬಂಧ ಗಳು ಹಾಸ್ಯದೊಂದಿಗೆ ಜೀವನ ಸತ್ಯವನ್ನು ತೋರಿಸಿ, ಸ್ವ ವಿಮರ್ಶೆ ಮಾಡಿಕೊಳ್ಳುವಂತೆ ಮಾಡಿವೆ
ನಿಮ್ಮ ಬರಹಗಳು ಸವಿಸ್ತಾರವಾಗಿರುತ್ತವೆ ಹಾಗೂ ಚಂದ
Samatha ur book parimalagala Maye is good. Congratulations for ur good writing
Congratulations samatha long way to go All the best
ಸರಳ ಸುಂದರ ಪುಸ್ತಕ ಪರಿಚಯಕ್ಕಾಗಿ ಅಭಿನಂದನೆಗಳು.
ನವಿರುಹಾಸ್ಯ ಮಿಶ್ರಿತ ಲಘು ಬರಹಗಳು ಸಾಮಾನ್ಯವಾಗಿ ಓದುಗರನ್ನು ಆಕರ್ಷಿಸುತ್ತವೆ. ಸಮತಾ ಅವರ ಚೊಚ್ಚಲ ಕೃತಿ ವಿಮರ್ಶೆ ಚೆನ್ನಾಗಿದೆ..ಧನ್ಯವಾದಗಳು ಸುನೀತಾ ಅವರಿಗೆ.
Very nice congratulations miss
ಸಮತಾ ಅಕ್ಕ, ಸಂಪೂರ್ಣ ಲೇಖನ ಓದದೆಯೇ ಕಾಮೆಂಟ್ ಮಾಡುತ್ತಿರುವುದಕ್ಕಾಗಿ ಕ್ಷಮೆ ಇರಲಿ. ನಿಮ್ಮ ಬರವಣಿಗೆಗೆ ಶುಭವಾಗಲಿ. ಎಷ್ಟೋ ಸಾರಿ…ನಿಮ್ಮ ಅಕ್ಷರಗಳ ಮೂಲಕ ರಾಜಣ್ಣ ಮಾಮರನ್ನು ನೀವು ಜೇವಂತವಾಗಿಡುತ್ತಿದ್ದೀರಿ ಅನ್ನಿಸುತ್ತೆ. ಪೂರ್ತಿ ಓದುವುದಕ್ಕೆ ಸಮಯ ಅವಕಾಶ ಕೊಡುವುದಿಲ್ಲದಿರಿವ ಈ ಕಾಲಕ್ಕೆ ಏನೂ ಮಾಡಲು ಆಗುವುದೇ ಇಲ್ಲವಲ್ಲ ಎಂದು ಬೇಜಾರು ಕೂಡ ಆಗುತ್ತದೆ. ಎಡತೊರೆಯ ಪ್ರತಿಯನ್ನು ಜೊತೆಗೆ ತಂದಿರುವೆ. ಓದಲು ಪ್ರಾರಂಭಿಸುವ ಪ್ರಯತ್ನ ಮಾಡುತ್ತೇನೆ.