ಅವಿಸ್ಮರಣೀಯ ಅಮೆರಿಕ-ಎಳೆ 21

Spread the love
Share Button

{ಕಳೆದ ಸಂಚಿಕೆಯಿಂದ ಮುಂದುವರಿದುದು}

ವಿವಿಧತೆಯಲ್ಲಿ ಏಕತೆ…!         

ಗ್ರಾನೈಟ್ ಶಿಲಾ ಬೆಟ್ಟಗಳ ಸಾಲುಗಳ ಸೊಬಗಿನ ನಡುವೆ ಕಂಗೊಳಿಸುವ ಕಣಿವೆಯಲ್ಲಿರುವ  ಪೈನ್ ಮರದ ಕಾಡು, ಅದರೆಡೆಯಲ್ಲಿ ಜಲಕನ್ನಿಕೆಯರಂತೆ ಲಾಲಿತ್ಯಪೂರ್ಣವಾಗಿ ಬಾಗಿ ಬಳುಕಿ  ಭೋರ್ಗರೆಯುವ ಜಲಪಾತಗಳು.. ಹೀಗೆ ಎಲ್ಲವನ್ನೂ ಕಣ್ಮನಗಳಲ್ಲಿ ತುಂಬಿಕೊಂಡು, ಅದರ ಗುಂಗಿನಲ್ಲೇ ಕೆಲವು ದಿನಗಳು ಕಳೆದುವು.

ಒಮ್ಮೆ ನಾವು ಬಾಡಿಗೆಗಿದ್ದ ಮನೆಯ ಕಿಟಿಕಿ ಹಾಳಾಯಿತು. ಯಾವುದೇ  ರಿಪೇರಿಗೆ ನಮ್ಮಲ್ಲಿಯಂತೆ ಅಲ್ಲಿ ಜನ ಸಿಗುವುದಿಲ್ಲ. ಮನೆಯ ಮಾಲೀಕರಿಗೆ ವಿಷಯ ತಿಳಿಸಲಾಯಿತು. ಎಲ್ಲಾ ವಿವರಗಳನ್ನು ತಿಳಿದುಕೊಂಡ ಅವರು, ಯಾವ ದಿನ, ಎಷ್ಟು ಗಂಟೆಗೆ ಬರುವರೆಂದು ನಮಗೆ ತಿಳಿಸಿದರು. ಕರಾರುವಾಕ್ಕಾಗಿ, ಅದೇ ದಿನ, ಸರಿಯಾದ ಸಮಯಕ್ಕೆ ಕರೆಗಂಟೆ ಸದ್ದಾಯಿತು. ದೊಡ್ಡ ಏಣಿಯೊಂದನ್ನು ಹಿಡಿದುಕೊಂಡು ಸುಮಾರು 75ವರ್ಷ ಪ್ರಾಯದ ಹಿರಿಯರು ನಗುತ್ತಾ ನಿಂತಿದ್ದರು. ವಿನಯವಾಗಿ ಒಳಬರಲು ಅನುಮತಿಯನ್ನು ಕೋರುತ್ತಾ, ಮೊದಲ ಮಹಡಿಯಲ್ಲಿ ಎತ್ತರಕ್ಕಿದ್ದ ಕಿಟಿಕಿಗೆ ಏಣಿ ಇಟ್ಟು , ಮೇಲೇರಿ, ಹತ್ತು ನಿಮಿಷಗಳಲ್ಲಿ ಸರಿಮಾಡಿಕೊಟ್ಟು ಹೋದರು..ಏನೂ ತೆಗೆದುಕೊಳ್ಳದೆ! ಅದಕ್ಕೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ಅವರು ತಮ್ಮೊಡನೆ ತಂದಿದ್ದರು. ನನಗೋ ಆಶ್ಚರ್ಯ.. ಅವರೇ ಮನೆಯ ಮಾಲೀಕರಾಗಿದ್ದರಂತೆ! ನಮಗಿದನ್ನು ಊಹಿಸಲೂ ಸಾಧ್ಯವಿಲ್ಲ..ಅಲ್ಲವೇ?!

ಇಲ್ಲಿ ಎಲ್ಲರೂ ಎಲ್ಲವನ್ನೂ, ಸ್ತ್ರೀ, ಪುರುಷರೆಂಬ ಭೇದವಿಲ್ಲದೆ, ಸ್ವತ: ತಾವೇ ಮಾಡುವುದು ರೂಢಿ. ಏನೇ ಹಾಳಾದರೂ,  ಅಂತರ್ಜಾಲದ ಯು ಟೂಬ್ ಗುರುವನ್ನು ಕೇಳಿ ಸರಿ ಮಾಡಿಬಿಡುವರು. ಅಲ್ಲಿ ವಾಸಿಸುವ ಎಲ್ಲರೂ ಇದನ್ನು ರೂಢಿಸಿಕೊಳ್ಳಲೇ ಬೇಕು…ಬೇರೆ ಕಡೆಯಿಂದ ಬಂದವರು ಕೂಡಾ… ಯಾಕೆಂದರೆ, ಹೊರಗಡೆಯವರನ್ನು ಕರೆಸಿ ರಿಪೇರಿ ಮಾಡಿಸುವುದು ಅತೀ ದುಬಾರಿ.. ಅದರಲ್ಲಿ ಹೊಸದನ್ನೇ ಕೊಂಡುಕೊಳ್ಳಬಹುದೇನೋ!!  ಹೊಸದಾಗಿ ಮನೆಗೆ ತರುವ ಮೇಜು, ಕಪಾಟಿನಂತಹ ಯಾವುದೇ ಸಾಮಾನುಗಳು ಬಿಡಿ ಬಿಡಿಯಾಗಿದ್ದರೆ, ಅದರ ಜೊತೆಗೇ ಇರುವ ಸೂಚನೆಯಂತೆ ಮನೆಯವರೇ ಯಥಾವತ್ತಾಗಿ ಜೋಡಿಸಿ ಸಿದ್ಧಪಡಿಸುವರು. ಅದಕ್ಕೆ ಬೇಕಾದ ಸಕಲ ರೀತಿಯ ಉಪಕರಣಗಳೂ ಪ್ರತಿ ಮನೆಗಳಲ್ಲೂ  ಇದ್ದೇ ಇರುತ್ತವೆ. ಇನ್ನೊಮ್ಮೆ, ನಮ್ಮ ಹಾಳಾದ ಕುರ್ಚಿಯನ್ನು ನೆರೆಮನೆಯ ಮಹಿಳೆಯೊಬ್ಬಳು ರಿಪೇರಿ ಮಾಡಿಕೊಟ್ಟುದನ್ನು ಮರೆಯುವಂತಿಲ್ಲ. ಇಲ್ಲಿಎಲ್ಲಾ ಮಹಿಳೆಯರೂ ಹೊರಗಡೆ ದುಡಿಯುವುದು, ಅವರ ಸ್ವಾವಲಂಬನೆಯನ್ನು ಎತ್ತಿ ತೋರಿಸುತ್ತದೆ.

ಕೆಲವು ಮನೆಗಳಲ್ಲಿ ತಂದೆ ಅಥವಾ ತಾಯಿ ಮಾತ್ರ ಮಕ್ಕಳೊಂದಿಗೆ ವಾಸಿಸುವುದನ್ನು (Single parenting)  ಕಾಣಬಹುದು. ವಿವಾಹ ವಿಚ್ಛೇದನವು ಇಲ್ಲಿ ಸಾಮಾನ್ಯ. ಅದರಿಂದಾಗಿ ಕುಟುಂಬದಲ್ಲಿ, ಅದೂ ಹೆಚ್ಚಾಗಿ ಪುಟ್ಟ ಮಕ್ಕಳ ಮೇಲೆ  ಆಗುವ ಪರಿಣಾಮ, ಆರ್ಥಿಕ ಮುಗ್ಗಟ್ಟಿನಿಂದಾಗಿ  ಸಂಕಷ್ಟಕ್ಕೆ ಈಡಾಗುವುದು ಇತ್ಯಾದಿಗಳು ಮನ ನೋಯುವ ಸಂಗತಿಗಳಾಗಿವೆ. ಇದರಿಂದಾಗಿ ಇಲ್ಲಿ ಮನೋದೈಹಿಕ ವ್ಯಾಧಿಗಳು ಆತೀ ಹೆಚ್ಚು ಎನ್ನಬಹುದು.

ಇಲ್ಲಿ, ಬಟ್ಟೆಗಳನ್ನು ತೊಳೆದು ಬಿಸಿಲಿಗೆ ಒಣಹಾಕುವ ಪದ್ಧತಿಯಿಲ್ಲ; ಅದಕ್ಕಾಗಿ ಪ್ರತ್ಯೇಕ ಜಾಗವೂ ಇಲ್ಲ. ಬಟ್ಟೆ ತೊಳೆಯಲಿರುವ ಪೂರ್ತಿ ಸ್ವಯಂಚಾಲಿತ ಯಂತ್ರವು ಅದನ್ನು ಚೆನ್ನಾಗಿ ತೊಳೆದು, ಒಣಗಿಸಿ, ಬಿಸಿ ಬಿಸಿ ದೋಸೆಯಂತೆ ನಮ್ಮ ಕೈಗಿಡುತ್ತದೆ. ಹಾಗೆಯೇ  ಒಳ್ಳೊಳ್ಳೆಯ ಪ್ಲಾಸ್ಟಿಕ್ ಕವರ್, ಬಾಟಲಿ ಇತ್ಯಾದಿಗಳನ್ನು ತೊಳೆದು ಪುನ: ಉಪಯೋಗಿಸುವುದು ನಮ್ಮಲ್ಲಿ ರೂಡಿಯಲ್ಲವೇ?..ಅಂದರೆ ಪುನರ್ಬಳಕೆ. ಇಲ್ಲಿ ಎಲ್ಲವೂ ಒಮ್ಮೆ ಮಾತ್ರ ಉಪಯೋಗಿಸು.. ಬಿಸಾಕು..Use and throw..ಅಷ್ಟೆ. ಅದಕ್ಕಾಗಿಯೇ, ಅಮೆರಿಕದವರು ಅವರ ಕಸವನ್ನು ಬಿಸಾಡಲು ದೂರದ ಸಮುದ್ರವನ್ನು ಹುಡುಕುತ್ತಾರೆ.. ಅವಹೇಳನಕ್ಕೆ ಗುರಿಯಾಗುತ್ತಾರೆ. ಒಮ್ಮೆಯಂತೂ, ನಾನು ಕೈಯಲ್ಲಿ ತೊಳೆದ ಟವೆಲ್, ಪ್ಲಾಸ್ಟಿಕ್ ಕವರ್ ಗಳನ್ನು ನಮ್ಮ ಹೂದೋಟದಲ್ಲಿ ಒಣಹಾಕಿದ್ದೆ. “ಅದೆಲ್ಲವನ್ನು ಅಕ್ಕಪಕ್ಕದವರು ನೋಡಿದರೆ ಕಷ್ಟ. ಪ್ರದೇಶದ ಶುಚಿತ್ವ ಮತ್ತು ಅಂದಕ್ಕೆ ಧಕ್ಕೆಯುಂಟಾಗುವುದರಿಂದ ಸೀದಾ ದೂರು ದಾಖಲಾಗುವುದು. ಅಧಿಕಾರಿಗಳು ಬಂದರೆ ನೂರಾರು ಡಾಲರ್ ದಂಡ ಗ್ಯಾರಂಟಿ” ಎಂದು ಮಗಳು ಹೇಳಿದಾಗ ನನಗೆ ಗಾಬರಿಯಾಗಿ ಹೋಯ್ತು!  ಆಮೇಲೆ ಆ ಸಾಹಸಕ್ಕೆ ಕೈ ಹಾಕಲಿಲ್ಲವೆನ್ನಿ. ಇಲ್ಲಿ ಕೈ ಸ್ವಚ್ಛಗೊಳಿಸಲು ನಮ್ಮಲ್ಲಿಯಂತೆ ಹತ್ತಿ ಟವೆಲುಗಳನ್ನು ಉಪಯೋಗಿಸುವುದಿಲ್ಲ. ಕರ್ಚೀಫ್ ಅಂತೂ ಇಲ್ಲವೇ ಇಲ್ಲ. ಎಲ್ಲದಕ್ಕೂ ಟಿಶ್ಯೂ ಪೇಪರ್. ರಾಶಿ ರಾಶಿಯಾಗಿ ಉಪಯೋಗಿಸಿ ಬಿಸಾಕುವ ಈ ಬಿಳಿ ಪೇಪರನ್ನು ನೋಡಿ ನನಗೆ ತಲೆಬಿಸಿಯಾಗಲು ಸುರುವಾಯ್ತು ನೋಡಿ! ಪ್ರಪಂಚದಲ್ಲಿರುವ ಮರಗಳೆಲ್ಲಾ ಇವರಿಗೇ ಬೇಕೇನೋ ಎಂದು ಅನ್ನಿಸಿ ಗಾಬರಿಯಾಗುತ್ತದೆ!

ಸಾಧಾರಣವಾಗಿ, ಇಲ್ಲಿರುವ ಭಾರತೀಯರೆಲ್ಲಾ ಆದಷ್ಟು ಒಂದೇ ಪ್ರದೇಶದಲ್ಲಿರುವ ಮನೆಗಳಲ್ಲಿ ವಾಸಿಸುವರು. ಅಂತಹದೇ ಒಂದು ಕಡೆಗೆ ಹೋದಾಗ, ಮಗಳು ನನ್ನ ಕೊರಳನ್ನು ಬಟ್ಟೆಯಿಂದ ಮುಚ್ಚಿಕೊಳ್ಳಲು ಹೇಳಿದಾಗ ಆಶ್ಚರ್ಯವಾಯ್ತು.. ಏನು ಇಲ್ಲಿಯೂ ಕಳ್ಳರಿರುವರೇ ಎಂದು! ಹೌದು..ಇಲ್ಲಿಯೂ ಅಪರೂಪಕ್ಕೆ  ಕಳ್ಳತನ ಆಗುವುದೂ ಇದೆ. ಸ್ವಲ್ಪ ಸಮಯಕ್ಕೆ ಇರಲು ನಮ್ಮ ದೇಶದಿಂದ ಬರುವ ನಮ್ಮಂತಹ ಹಿರಿಯ ಮಹಿಳೆಯರು ಮಂಗಲಸೂತ್ರ ಸಹಿತ ಬಂಗಾರವನ್ನು ಧರಿಸುವುದು ಸಾಮಾನ್ಯ.  ಇಂತಹ ಪ್ರದೇಶಗಳಲ್ಲಿ, ಇತ್ತೀಚೆಗೆ ಸರಗಳ್ಳರು ತಮ್ಮ ಕೈಚಳಕ ತೋರಿಸುತ್ತಿರುವುದು ನಿಜವಾಗಿಯೂ ಆತಂಕದ ಸಂಗತಿ. ಅವಿದ್ಯಾವಂತರಾದ, ಸಾದಾ ಕೆಲಸಗಳಿಗಾಗಿ ಪಕ್ಕದ ಮೆಕ್ಸಿಕೋ ದೇಶದಿಂದ ಬರುವ ಬಡ ಜನರು ಆರ್ಥಿಕ ಮುಗ್ಗಟ್ಟಿನಿಂದಾಗಿ, ಹೆಚ್ಚಾಗಿ ಇಂತಹ ಕೆಲಸಗಳಿಗೆ ಮನಮಾಡುವರು. ಇಲ್ಲಿ ಎಲ್ಲಾ ಕಡೆಗಳಲ್ಲೂ ಸಾಮಾನ್ಯವಾಗಿ ಮೆಕ್ಸಿಕೋದ ಅವಿದ್ಯಾವಂತ ಹೆಂಗೆಳೆಯರು, ಸ್ವಚ್ಛತೆ, ಆಯಾ ಇಂತಹ ಕೆಲಸಗಳಲ್ಲಿರುವುದನ್ನು ಕಾಣಬಹುದು.

ಇಲ್ಲಿಯ ಪೋಲೀಸರು ಬಹಳ ವಿನಯವಂತರು; ಹಾಗೆಯೇ ಕಟ್ಟುನಿಟ್ಟಾಗಿ ಶಿಸ್ತು ಪಾಲಿಸುವವರು . ಯಾವುದೇ ತೊಂದರೆಯಿದ್ದರೂ ನಿಸ್ಸಂಕೋಚವಾಗಿ ಅವರಿಗೆ ತಿಳಿಸಿದರೆ, ತಕ್ಷಣ ಸಹಾಯಕ್ಕೆ ಬರುವರು. ಇಲ್ಲಿ ಜನಗಳಿಗಿಂತ ಹೆಚ್ಚು ಪೋಲೀಸರು ಹೊರಗಡೆ ಕಾಣಸಿಗುತ್ತಾರೆ. ಮಕ್ಕಳನ್ನು ಕಂಡರೆ ಪ್ರೀತಿಯಿಂದ ಮಾತನಾಡಿಸಿ, ಪುಟ್ಟ ಬ್ಯಾಜಿನಂತಹ ಉಡುಗೊರೆಯನ್ನು ಕೊಡುವುದರಿಂದ, ಮಕ್ಕಳಿಗೆ ಅವರೆಂದರೆ ಭಯವಿಲ್ಲದ ಅಕ್ಕರೆ.

ಇಲ್ಲಿ ಪ್ರಯಾಣಕ್ಕಾಗಿ ಎಲ್ಲರ ಬಳಿಯೂ ಸ್ವಂತ ವಾಹನಗಳು ಇರುವುದರಿಂದ, ನಮ್ಮಲ್ಲಿಯಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಹಳ ಕಡಿಮೆ. ಸಂಖ್ಯೆ ನಮೂದಿಸಿದ ಬಸ್ಸುಗಳು ಪಟ್ಟಣದೊಳಗೆ ಅಲ್ಲೊಂದು ಇಲ್ಲೊಂದು ಓಡಾಡುತ್ತವೆ; ಹಾಗೆಯೇ ಸಣ್ಣ ಬಸ್ಸು ನಿಲ್ದಾಣಗಳೂ ಇವೆ. ಇಲ್ಲಿ ರಸ್ತೆಯ ಬಲ ಬದಿಯಲ್ಲಿ ವಾಹನ ಓಡಿಸಬೇಕಾದುದರಿಂದ, ಬಸ್ಸಿನ ಬಲ ಪಕ್ಕದಲ್ಲಿ ಒಂದೇ ಒಂದು ಬಾಗಿಲಿದೆ. ಬಸ್ಸನ್ನು ಏರುವಾಗ ಎದುರುಭಾಗದಲ್ಲಿ ಚಾಲಕ ಮಾತ್ರವಿದ್ದು, ಅವನೇ ನಿರ್ವಹಣೆಯನ್ನೂ ಮಾಡುವನು. ನಾವು ಅವನ ಬಲ ಪಕ್ಕದಲ್ಲಿರುವ ಪೆಟ್ಟಿಗೆಯಲ್ಲಿ ಅವನು ತಿಳಿಸಿದಷ್ಟು ಹಣವನ್ನು ಹಾಕಿದರಾಯಿತು,ಟಿಕೆಟ್ ಕೊಟ್ಟುಬಿಡುವನು. ಬಸ್ಸಿನ ಬಾಗಿಲು ಸ್ವಯಂಚಾಲಿತ. ಬಸ್ಸಿನಲ್ಲಿ  ಬೆರಳೆಣಿಕೆಯಷ್ಟು ಮಾತ್ರ ಪ್ರಯಾಣಿಕರು..ಎಲ್ಲೂ ತಪಾಸಣೆ ಎಂಬುದಿಲ್ಲ. ಗೌಜಿ, ಗದ್ದಲ, ಸೀಟಿಗಾಗಿ ಗುದ್ದಾಟ ಇವೆಲ್ಲವನ್ನೂ ಕಾಣದೆ ಬೇಜಾರು ಬರುವುದಂತೂ ಖಂಡಿತ.. ಒಳಗಡೆ  ನಿಶ್ಶಬ್ದ ಮೌನ! ನಮ್ಮಂತಹವರು ಎಲ್ಲಿಯಾದರೂ ಗಟ್ಟಿ ಮಾತಾಡಿದರೆ ನಮ್ಮನ್ನು ಗಮನಿಸಿದಾಗ ಮುಜುಗರವಂತೂ ಆಗದೆ ಇರುವುದಿಲ್ಲವೆನ್ನಿ.

ಒಮ್ಮೆ, ಇಂತಹ ಬಸ್ಸಲ್ಲಿ ಹೋಗಲು ಅಳಿಯ ತನ್ನ ಮಾವನನ್ನು ಪುಸಲಾಯಿಸಿ ಕಳುಹಿಸಿದ. ಅಂತೂ ಧೈರ್ಯ ಮಾಡಿ, ನಮ್ಮವರು ಅಲ್ಲಿಯ  ಲೈಬ್ರರಿಗೆ ಹೋದರು. ಆದರೆ ಬರುವಾಗ,  ಒಂದು ನಿಲ್ದಾಣ ಮುಂದಕ್ಕೆ ಇಳಿದು, ಮೇಲೆ ಕೆಳಗೆ ನೋಡುವಂತಾಯಿತು. ಅವರು ಹೋಗಿ ಬಹಳ ಹೊತ್ತಾದರೂ ಕಾಣದಾಗ ನಮಗೋ ಗಾಬರಿ.  ಸ್ವಲ್ಪ ಹೊತ್ತಿನಲ್ಲಿ ಆ ಕಡೆಯಿಂದ  ಫೋನ್ .. ಇಂತಹ ಕಡೆ ನಾನಿರುವೆನೆಂದು! ಅವರು ಬಸ್ಸು ಇಳಿದ ನಿಲ್ದಾಣದ ಪಕ್ಕದಲ್ಲಿದ್ದ ಪೆಟ್ರೋಲ್ ಬಂಕಿನವನು ಸಹಾಯ ಮಾಡಿದ್ದ. ಪುಣ್ಯವಶಾತ್ ಅವರಲ್ಲಿ ಮನೆಯ ಟೆಲಿಫೋನ್ ನಂಬ್ರ ಇದ್ದುದು ಅವರನ್ನು ಕಾಪಾಡಿತೆನ್ನಬಹುದು. ನಿಜವಾಗಿಯೂ ಅವರಿದ್ದ ಸ್ಥಳ ಮನೆಯ ಹತ್ತಿರವೇ ಇತ್ತುಬಿಡಿ.. ಹೊಸ ಜಾಗದಲ್ಲಿ ಎಲ್ಲಾ ಆಯೋಮಯ..ಅಲ್ಲವೇ?

ಮಹಿಳೆಯರು, ಪುರುಷರು ಎಲ್ಲಾ, ಸೇದುವುದು, ಕುಡಿಯುವುದು ಇಲ್ಲಿ ಸಾಮಾನ್ಯ…ಇದು ಚಳಿ ಪ್ರದೇಶವಾದ್ದರಿಂದ ಇದರ ಅಗತ್ಯವೂ ಇರಬಹುದೇನೋ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಅದೆರಡನ್ನೂ ಎಲ್ಲಿ ಬೇಕೆಂದರಲ್ಲಿ   ಮಾಡುವ ಹಾಗಿಲ್ಲ. ಅಲ್ಲದೆ ಕುಡಿದು ತೂರಾಡಿಕೊಂಡು, ರಸ್ತೆ ಬದಿಯಲ್ಲಿ ಮಲಗಿಕೊಂಡಿರುವವರೂ  ಕಾಣಸಿಗುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ, ಅಂದರೆ, ಸಾವಿರಾರು ಜನರು ಓಡಾಡುವ, ವಿಮಾನ ನಿಲ್ದಾಣದಂತಹ ಸ್ಥಳಗಳಲ್ಲಿ ಸಿಗರೇಟು ಸೇದಲೆಂದೇ ಪ್ರತ್ಯೇಕವಾದ, ದೊಡ್ಡದಾದ ಎಕ್ಸಾಸ್ಟ್ ಫ್ಯಾನ್ ಸಹಿತದ ಕೋಣೆ. ಅದರ ಮೇಲ್ಗಡೆಗೆ ಹೊಗೆ ಕೊಳವೆ! ಅದರಲ್ಲಿ, ಎಲ್ಲರೂ ಸೇದುವ ಸಿಗರೇಟಿನ ಹೊಗೆ ಮೇಲಕ್ಕೆ ಹೋಗುತ್ತಿರುವುದನ್ನು ನೋಡಿದಾಗ, ಎಷ್ಟೊಂದು ಜನರು ಅದರೊಳಗೆ ಸೇದುತ್ತಿರುವರೆಂದು ಯೋಚಿಸಿಯೇ ನನಗೆ ನಿಜವಾಗಿಯೂ ಗಾಬರಿಯಾಗಿತ್ತು! ಆದರೆ, ಆರೋಗ್ಯ  ಮತ್ತು ಶುಚಿತ್ವದ ದೃಷ್ಟಿಯಿಂದ ತುಂಬಾ ಒಳ್ಳೆಯ ವ್ಯವಸ್ಥೆಯೆನಿಸಿತು. ಗಂಡಸರಷ್ಟೇ ಸಂಖ್ಯೆಯಲ್ಲಿ ಹೆಂಗಸರೂ ಅದರಿಂದ ಹೊರಬರುತ್ತಿದ್ದುದು ನೊಡಿ ನಿಜಕ್ಕೂ ದಂಗಾದೆ!

ಒಂದು ಶನಿವಾರದಂದು ಅಳಿಯ, “ಮನೆಯ ತೀರ ಸಮೀಪದಲ್ಲಿ ಗ್ಯಾರೇಜ್ ಸೇಲ್  ಇದೆ, ಹೋಗೋಣ” ಅಂದ. ನನಗೋ ಆಶ್ಚರ್ಯ.. ಯಾವುದೋ ಸೇಲ್ ಗೆ ನಾವ್ಯಾಕೆ ಹೋಗಬೇಕೆಂದು ಅರ್ಥವಾಗಲಿಲ್ಲ. ಇಲ್ಲಿ ಶನಿವಾರ ಬಂತೆಂದರೆ ಒಂದು ವಿಶೇಷವಾದ ವ್ಯವಸ್ಥೆಯು ನಮಗೆ ಕಾಣಸಿಗುತ್ತದೆ… ಅದುವೇ ಗ್ಯಾರೇಜ್ ಸೇಲ್!

ನಾವು ಪ್ರತಿಯೊಂದು ವಸ್ತುವನ್ನೂ ಅದರ ಆಯುಸ್ಸಿನ ಕೊನೆ ತನಕ ಉಪಯೋಗಿಸುವುದು ರೂಢಿ. ಅಮೆರಿಕದಲ್ಲಿ, ತಾವು ಬಳಸಿದ ವಸ್ತುಗಳನ್ನು, ಅವು ಬೇಡವಾದರೆ, ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದನ್ನು ನೋಡುವುದೇ ಒಂದು ಮೋಜು.  ವರ್ಷಕ್ಕೊಮ್ಮೆ, ಹೆಚ್ಚಾಗಿ ವಸಂತ ಋತುವಿನಲ್ಲಿ ತಮ್ಮ ಮನೆಯನ್ನು ಸ್ವಚ್ಛ ಮಾಡಲು ಅಥವಾ ಮನೆ ಬಿಟ್ಟು ಹೋಗುವುದಾದರೆ, ಅಥವಾ ಯಾವುದಕ್ಕಾದರೂ ದೇಣಿಗೆ ಸಂಗ್ರಹಕ್ಕಾಗಿ ಈ ಮಾರಾಟವನ್ನು ಮನೆಯ ಮಾಲೀಕ ಯಾ ಮಾಲೀಕಳು ಮಾಡುವರು. ಈ ರೀತಿ ಸಂಗ್ರಹವಾದ ದುಡ್ಡಿಗೆ ತೆರಿಗೆ ಇರುವುದಿಲ್ಲ. ಇಲ್ಲಿ ಚರ್ಚೆಗೆ ಮುಕ್ತ ಅವಕಾಶವಿದೆ. ಅದರಲ್ಲಿ ನಮ್ಮ ಚಾಲಾಕಿತನವನ್ನು ತೋರಿಸಿ, ಇಷ್ಟು ಕಡಿಮೆಗೆ ಖರೀದಿಸಿದೆವೆಂದು ಬೀಗಬಹುದು!

ಈ ಮಾರಾಟವನ್ನು ಶನಿವಾರದಂದು ಮಾತ್ರ ಮಾಡುವರು. ತಮ್ಮ ಕಾರು ಇರಿಸುವ ಮನೆಯ ಗ್ಯಾರೇಜ್ ನಲ್ಲಿ, ಆಯಾ ವಸ್ತುಗಳ ಬೆಲೆಯನ್ನು ನಮೂದಿಸಿ ಇವುಗಳನ್ನು ಅತ್ಯಂತ ಶಿಸ್ತಿನಿಂದ  ಜೋಡಿಸಿಡುವರು. ಇದಕ್ಕಾಗಿಯೇ ಇದರ ಹೆಸರು ಗ್ಯಾರೇಜ್ ಸೇಲ್! ಹಿಂದಿನ ದಿನ, ಅಂದರೆ ಶುಕ್ರವಾರದಂದು, ಒಂದು ಸಣ್ಣ ರಟ್ಟಿನ ತುಂಡಿನಲ್ಲಿ,ಆ ಸೇಲ್ ಇರುವ ವಿಳಾಸ ಬರೆದು, ಬಾಣದ ಗುರುತು ಹಾಕಿ, ಅಲ್ಲಲ್ಲಿ ವಿದ್ಯುತ್ ಕಂಬಗಳಿಗೆ ಕಟ್ಟಿಬಿಡುವರು. ಅಲ್ಲದೆ, ಟಿ.ವಿ. ಮತ್ತು ಪೇಪರುಗಳಲ್ಲಿ ಜಾಹೀರಾತು ಕೊಡುವುದೂ ಇದೆ.  ವಿಶೇಷವೆಂದರೆ ಅಲ್ಲಿ ಇರಿಸಿರುವ ಯಾವ ವಸ್ತುವೂ ಹಳೆಯದೆಂದು ಹೇಳುವ ಹಾಗೆಯೇ ಇಲ್ಲ;-ಅಷ್ಟು ಚೆನ್ನಾಗಿರುತ್ತವೆ. ಮನೆಯ ಅಲಂಕಾರಿಕ ಸಾಮಾಗ್ರಿಗಳು, ವ್ಯಾನಿಟಿ ಬ್ಯಾಗು, ಪುಸ್ತಕ, ಪೆನ್, ಬಟ್ಟೆ, ಒಳಾಂಗಣ ಹಾಗೂ ಹೊರಾಂಗಣ ಆಟದ ಸಾಮಾನುಗಳು, ತೋಟಗಾರಿಕೆಗೆ ಬಳಸುವ  ಸಾಮಗ್ರಿಗಳು, ಪೀಠೋಪಕರಣಗಳು.. ಹೀಗೆ ಏನುಂಟು.. ಏನಿಲ್ಲ?! ಅತ್ಯಂತ ಕಡಿಮೆ ಬೆಲೆಯಲ್ಲಿ ಹೊಸತರಂತಿರುವುದನ್ನು ಖರೀದಿಸಲು ಜನರು ಮುಗಿಬೀಳುವರು.  ಕೆಲವು ಮನೆಯವರೆಲ್ಲ ಸೇರಿ, ದೊಡ್ಡ ಹಜಾರವನ್ನು ಬಾಡಿಗೆಗೆ ಪಡೆದು ಅಲ್ಲಿ ಈ ಮಾರಾಟವನ್ನು ಮಾಡುವವರೂ ಇದ್ದಾರೆ. ನಾವೂ ಕೆಲವು ಶನಿವಾರಗಳಂದು ಇಂತಹ ಜಾಗಗಳಿಗೆ ಹೋಗಿ,  ಹತ್ತಾರು ಡಾಲರ್ ಗಳ ವಸ್ತುಗಳನ್ನು, ಒಂದೆರಡು ಡಾಲರ್ ಗಳಿಗೆ ಖರೀದಿಸಿ ಖುಶಿಪಟ್ಟೆವು.   

ಮುಂದುವರಿಯುವುದು…..

 ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ : http://surahonne.com/?p=35328

–ಶಂಕರಿ ಶರ್ಮ, ಪುತ್ತೂರು.

6 Responses

 1. ನಯನ ಬಜಕೂಡ್ಲು says:

  Nice

 2. ಎಂದಿನಂತೆ ಅಮೆರಿಕ ಪ್ರವಾಸ ಕಥನ ಓದಿಸಿಕೊಂಡು ಹೋಯಿತು.ಅಲ್ಲದೆ ಅಲ್ಲಿ ನ ಕೆಲಸ ಕಾರ್ಯ ಗಳಲ್ಲಿ.. ಅದರಲ್ಲಿ ರಪೇರಿ ಕೆಲಸಗಳನ್ನು ಮಾಡುವ ವೈಖರಿಯನ್ನು ನಾವುಗಳೂ ರೂಢಿಸಿಕೊಂಡಿರಬೇಕು..ಸಮಯದಲ್ಲಿ ಬೇಕಾಗುತ್ತದೆ.ಎನಿಸಿತು.ಇನ್ನು ವಿವಾಹ ವಿಚ್ಛೇದನ.. ಧೂಮಪಾನ…ಮುಂತಾದವು..ನಮ್ಮ ಲ್ಲಿಯೂ ಸಹಜ ವೆಂಬಂತಾಗುತ್ತಿದೆ..ಅದೇ ವಿಪರ್ಯಾಸ..ಧನ್ಯವಾದಗಳು ಮೇಡಂ

  • . ಶಂಕರಿ ಶರ್ಮ says:

   ಪ್ರೀತಿಯ ಪ್ರೋತ್ಸಾಹಕ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು, ನಾಗರತ್ನ ಮೇಡಂ.

 3. Padma Anand says:

  ಈ ಸಂಚಿಕೆಯಲ್ಲಿ ಅಮೆರಿಕನ್ನರ ಮನೋಧರ್ಮವನ್ನು ಸೊಗಸಾಗಿ ನಿರೂಪಿಸಿರುವಿರಿ. ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: