ಕಾದಂಬರಿ: ನೆರಳು…ಕಿರಣ 15

Share Button

 –ಹಿಂದಿನ ಸಂಚಿಕೆಯಿಂದ ಮುಂದುವರಿದುದು…..

ಬೆಳಗ್ಗೆ ಬಸವ ತನ್ನ ಸಹಾಯಕನನ್ನು ಕರೆದುಕೊಂಡು ಭಟ್ಟರ ಮನೆಗೆ ಬರುವಷ್ಟರಲ್ಲಿ ಮನೆಯವರೆಲ್ಲರೂ ಸ್ನಾನ ಪೂಜಾದಿಗಳನ್ನು ಮುಗಿಸಿದ್ದರು. ಅಡುಗೆಯ ಕೆಲಸವೂ ಕೊನೆಯ ಹಂತದಲ್ಲಿತ್ತು. ಅಂಗಳ, ನಡುಮನೆ, ಹೊರಕೋಣೆಗಳು, ಹಿತ್ತಲು, ಧೂಳು ತೆಗೆದು, ಕಿಟಕಿ ಬಾಗಿಲುಗಳನ್ನು ಸಾರಣೆಗೈದು ಮಾಡಿ ಮುಗಿಸಿದರು. ಆ ನಂತರ ಲಕ್ಷ್ಮಿಯ ಆದೇಶದಂತೆ ಹೊರಗಿದ್ದ ಬಕೀಟುಗಳಲ್ಲಿ ಬಿಸಿನೀರು ಹಾಕಿಸಿಕೊಂಡು ಹಿತ್ತಲುಕಲ್ಲಮೇಲೆ ಬಸವ ಮತ್ತು ಸಹಾಯಕ ರಂಗ ಸ್ನಾನವನ್ನೂ ಮುಗಿಸಿದರು. ಹೊರ ಅಂಗಳದಲ್ಲಿ ಕುಳಿತು ಬಾಯ್ತುಂಬ ಅಡುಗೆಯನ್ನು ಹೊಗಳುತ್ತಾ ಕೇಳಿಕೇಳಿ ಹಾಕಿಸಿಕೊಂಡು ಊಟ ಮಾಡಿದರು.

“ಸರಿ ಭಟ್ಟರೇ, ಲಕ್ಷ್ಮಮ್ಮಾ ನಾವಿನ್ನು ಬರ್‍ತೀವಿ. ಹೊರಗೇನಾದರೂ ಹೋಗಬೇಕಾದರೆ ನನಗೆ ಹೇಳಿ. ನನ್ನ ಗಾಡಿಯಲ್ಲೇ ಕರೆದುಕೊಂಡು ಹೋಗ್ತೀನಿ. ಪೇಟೆಯಿಂದ ಏನಾದರು ಸಾಮಾನು ಬೇಕಿದ್ದರೆ ಹೇಳಿ ತಂದುಕೊಡ್ತೀನಿ” ಎಂದು ಹೇಳಿ ಭಟ್ಟರು ಕೊಟ್ಟ ಹಣದಲ್ಲಿ ರಂಗನ ಪಾಲಿನಷ್ಟನ್ನು ಮಾತ್ರ ತೆಗೆದುಕೊಂಡು “ಇಷ್ಟಕ್ಕೆಲ್ಲಾ ನಾನು ತೆಗೆದುಕೊಳ್ಳುವುದಿಲ್ಲ. ಮುಂದೆ ಸುಣ್ಣಬಣ್ಣ ಮಾಡಿಸುತ್ತೀರಲ್ಲಾ ಆವಾಗ ಕೊಡಿ. ಅಮ್ಮ ಹೊಟ್ಟೆತುಂಬ ಊಟ ಹಾಕಿದ್ದಾರೆ. ಅದೇ ನನಗೆ ಸಾಕು” ಎಂದು ಹೇಳಿ ರಂಗನೊಡನೆ ಹೊರಟುಹೋದ ಬಸವ.

ಬಸವ ಹಿಂದಿರುಗಿಸಿದ ಹಣವನ್ನು ಕೈಲಿ ಹಿಡಿದು ಬಾಗಿಲಲ್ಲಿ ನಿಂತಿದ್ದ ಭಟ್ಟರನ್ನು ನೋಡಿದಳು ಲಕ್ಷ್ಮಿ. ಅವರ ಹತ್ತಿರ ಬಂದು “ಅವನು ಶುದ್ಧ ಒರಟ ಅನ್ನುತ್ತೀರಿ, ಅವನು ಅಂತಃಕರಣ ಹೊಂದಿದ ವ್ಯಕ್ತಿ. ಮಾವನವರಿದ್ದ ಕಾಲದಿಂದ ಅವನ ಕುಟುಂಬದೊಡನೆ ನಮ್ಮ ಒಡನಾಟವಿದೆ. ಇತ್ತೀಚೆಗೆ ಈ ಅಂಗಡಿ ತೆರೆದ ಮೇಲಂತೂ ನಿಮಗೆ ಅವನು ಬಲಗೈಭಂಟನಾಗಿದ್ದಾನೆ. ಅವನನ್ನು ಅತಿಯಾಗಿ ಎಲ್ಲದಕ್ಕೂ ಬೈಯ್ಯಲು ಹೊಗಬೇಡಿ. ಕಿಚಾಯಿಸಬೇಡಿ. ಅವರುಗಳ ಅಭ್ಯಾಸವನ್ನು ನಾವು ಬಿಡಿಸಲು ಸಾಧ್ಯವೇ. ನಮ್ಮೊಡನೆ ಯಾವಾಗಲೂ ಭಯಭಕ್ತಿಯಿಂದ ನಡೆದುಕೊಳ್ಳುತ್ತಾನೆ. ಅಷ್ಟುಸಾಕು. ಬನ್ನಿ ಅವರುಗಳು ಸರಿಸಿಟ್ಟ ಸಾಮಾನುಗಳನ್ನು ಸರಿಯಾಗಿ ಸ್ವಸ್ಥಾನದಲ್ಲಿ ಜೋಡಿಸಿಟ್ಟುಕೊಳ್ಳೋಣ. ಮಕ್ಕಳಾಗಲೇ ತಮ್ಮ ಸಾಮಾನುಗಳನ್ನು ಊಟದ ಮನೆಯಿಂದ ತಮ್ಮ ಕೋಣೆಯಲ್ಲಿ ಜೋಡಿಸಿಕೊಳ್ಳುತ್ತಿದ್ದಾರೆ.” ಎಂದಳು ಲಕ್ಷ್ಮಿ.

“ಹೌದು ಲಕ್ಷ್ಮಿ, ನೀನು ಹೇಳುವುದೂ ಸರೀನೇ. ಒಮ್ಮೊಮ್ಮೆ ನಾನು ತುಟಿಮೀರಿ ಅವನೊಡನೆ ಮಾತನಾಡಿಬಿಡುತ್ತೇನೆ. ಇನ್ನುಮೇಲೆ ಹಾಗೆ ಮಾತನಾಡದಂತೆ ನನ್ನನ್ನು ನಾನು ನಿಯಂತ್ರಿಸಿಕೊಳ್ಳುತ್ತೇನೆ. ಆದಷ್ಟೂ ಎಚ್ಚರಿಕೆ ವಹಿಸುತ್ತೇನೆ. ನಡಿ ಇಲ್ಲಿನ ಕೆಲಸಗಳನ್ನು ಮುಗಿಸಿ ಕೇಶವಯ್ಯನವರ ಮನೆಗೆ ಹೋಗಿ ಭಾನುವಾರದ ಪೂಜಾಕಾರ್ಯಗಳಿಗೆ ಬೇಕಾಗುವ ಸಾಮಾನುಗಳನ್ನು ಬರೆಸಿಕೊಂಡು ಹಾಗೆ ಛತ್ರದ ವಿಚಾರವನ್ನು ಮಾತನಾಡಿ ಅವರನ್ನೊಪ್ಪಿಸಿ ಬಂದುಬಿಡೋಣ” ಎಂದು ಹೇಳುತ್ತಾ ಮುಂಭಾಗಿಲು ಹಾಕಿ ಒಳನಡೆದರು.

ತಮ್ಮ ತಪ್ಪನ್ನು ಒಪ್ಪಿಕೊಂಡು ಮುಂದೆ ಹೀಗಾಗದಂತೆ ಪ್ರಯತ್ನಿಸುತ್ತೇನೆಂಬ ಭರವಸೆ ಜೊತೆಗೆ ತಾನು ಏನೇನು ಮಾಡಬೇಕು, ಎಲ್ಲಿಗೆ ಹೋಗಿಬರಬೇಕು ಎಂದು ಹೇಳಿದ್ದು ಕೇಳಿ ತಾನು ಅವರಿಗೆ ಒಪ್ಪಿಸಬೇಕೆಂದಿದ್ದನ್ನು ಅವರೇ ಮುಂದಾಗಿ ಹೇಳಿದ್ದು ಲಕ್ಷ್ಮಿಗೆ ಸಂತಸತಂದಿತು.. ಚಕಾರವೆತ್ತದೆ ಭಟ್ಟರನ್ನು ಹಿಂಬಾಲಿಸಿದಳು.

ಒಟ್ಟಾರೆ ಆ ದಿನ ಮಾಡಬೇಕೆಂದುಕೊಂಡಿದ್ದ ಕೆಲಸಗಳು ಮುಗಿದವು. ಇನ್ನು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಕೇಶವಯ್ಯನವರ ಮನೆಗೆ ಹೊಗಬೇಕೆನ್ನುವಷ್ಟರಲ್ಲಿ ಭಾವನಾ ಅಮ್ಮನ ಹತ್ತಿರ ಬಂದು “ಅಮ್ಮಾ ಹೊರಗೆ ನಮ್ಮ ಮನೆಯ ಮುಂಭಾಗದಲ್ಲಿ ಮಾಮ, ಮತ್ತು ರಾಧಕ್ಕನವರು ಸುಬ್ರಮಣ್ಯ ತಾತನವರ ಬಳಿ ಮಾತನಾಡುತ್ತಾ ನಿಂತಿದ್ದಾರೆ. ನಾನು ರೂಮಿನ ಕಿಟಕಿಯಿಂದ ನೋಡಿದೆ” ಎಂದು ಸುದ್ಧಿ ಹೇಳಿದಳು.

ಮಗಳು ಹೇಳಿದ್ದು ಭಟ್ಟರ ಕಿವಿಗೂ ಬಿತ್ತು. “ಅಲ್ಲಾ ಲಕ್ಷ್ಮಿ, ಕೇಶವಯ್ಯನವರು, ರಾಧಕ್ಕ ನಮ್ಮ ಮನೆಗೆ ಬಾರದವರೇನಲ್ಲ. ಆದರೆ ಈ ಹೊತ್ತಿನಲ್ಲಿ ಅವರು ಊಟ ಮುಗಿಸಿ ಮಲಗುವ ಅಭ್ಯಾಸ. ಅದು ಬಿಟ್ಟು ಏನಾದರೂ ಇದ್ದರೆ ಸುಬ್ಬುವಿನ ಹತ್ತಿರ ಹೇಳಿಕಳುಹಿಸುತ್ತಿದ್ದರು. ಅದುಬಿಟ್ಟುಹೀಗೆ” ಸೋಜಿಗಪಡುತ್ತಾ ಬಾಗಿಲ ಹತ್ತಿರ ಬಂದು ಕಿಟಕಿಯಿಂದಲೇ ಹಣಿಕಿದರು. ಹೌದು ಭಾವನಾ ಹೇಳಿದ್ದು ಸರಿ, ಅವರೇ..ಎಲ್ಲಾದರೂ ಹೋಗಿದ್ದವರು ..ಅಥವಾ ಹಿಗೇ ಬಂದವರಾ? ಮನೆಯಲ್ಲಿರುವಾಗ ಹಾಕಿಕೊಳ್ಳುವ ಉಡುಪನ್ನೇ ತೊಟ್ಟಿದ್ದಾರೆ. ವಿಶೇಷವೇನಿಲ್ಲ.  ಪಕ್ಕದ ಮನೆಯ ಸುಬ್ರಮಣ್ಯ ಅಂಟುಪುರಲೆ ಸ್ವಭಾವದವನು. ತಾಗಿದರೆ ಸಾಕು . ನೋಡೋಣ, ಮಧ್ಯೆ ನಾವು ಪ್ರವೇಶಿಸುವುದು ಬೇಡ. ಲಕ್ಷ್ಮಿ ಭಟ್ಟರಿಬ್ಬರೂ ಅಲ್ಲಿಯೇ ಪಕ್ಕಕ್ಕೆ ಸರಿದು ಹೊರಗಡೆಯೇ ದೃಷ್ಟಿಯಿಟ್ಟು ನಿಂತುಕೊಂಡರು.

ಸುಮಾರು ಹೊತ್ತಾದರೂ ಅವರು ಏನು ಮಾತನಾಡುತ್ತಿದ್ದಾರೆಂಬುದು ತಿಳಿಯದಿದ್ದರೂ ತಮ್ಮಮನೆಯ ಕಡೆಗೆ ಕೈಬಾಯಿ ತೋರುತ್ತಾ  ಸನ್ನೆಗಳ ಸಮೇತ ಏನನ್ನೋ ಹೇಳುತ್ತಿದ್ದಾರೆ ಅನ್ನಿಸಿತು. ನೆರೆಯ ಸುಬ್ರಮಣ್ಯರು ತಮ್ಮ ಮನೆಯಲ್ಲಿ ಮಗನ ಮೂರು ಮಕ್ಕಳು ಮದುವೆಯಾಗದೇ ಇದ್ದರೂ ಮಿಕ್ಕವರ ಮನೆಯ ಹೆಣ್ಣುಮಕ್ಕಳ ಮದುವೆಯ ಬಗ್ಗೆ ಯೋಚನೆ ಮಾಡುತ್ತಿದ್ದರು. ಯಾವಾಗಲಾದರು ಎದುರಿಗೆ ಕಂಡರೆ “ಲಕ್ಷ್ಮಮ್ಮಾ ಮಗಳಿಗೆ ಎಲ್ಲಿಯಾದರೂ ಸಂಬಂಧ ಕೂಡಿಬಂತೇ? ಓದಿಸುವುದು ಒಂದುಕಡೆ. ಹಾಗೇ ವಿವಾಹ ಮಾಡುವ ಕಡೆಯೂ ಗಮನ ಹರಿಸಬೇಕಲ್ಲವಾ? ನಾಲ್ಕು ಹೆಣ್ಣುಮಕ್ಕಳ ಜವಾಬ್ದಾರಿ ಹೆಚ್ಚು. ಹೇಳಿಕೊಳ್ಳುವಂತಹ ಆಸ್ತಿ ..ಬೇಸರ ಮಾಡಿಕೊಳ್ಳಬೇಡಿ, ಈ ಅಂಗಡಿಯಿಂದ ಎಷ್ಟಾದೀತು.” ಎಂದು ತಾವೇ ನಮ್ಮ ಮಕ್ಕಳ ಹೊಟ್ಟೆಬಟ್ಟೆಗಳನ್ನು ನೋಡಿಕೊಳ್ಳುತ್ತಿದ್ದಾರೇನೋ ಎಂಬಂತೆ ವ್ಯಂಗ್ಯವಾಡುತ್ತಿದ್ದರು. ಯಾವುದಕ್ಕೂ ಉತ್ತರಿಸುವ ಗೋಜಿಗೆ ಹೋಗದೆ ಬರಿ ತಲೆಯಾಡಿಸಿ ಬರುತ್ತಿದ್ದುದು ನೆನಪಿಗೆ ಬಂತು. ಭಾನುವಾರ ಅವರ ಮನೆಯಲ್ಲಿರುವ ಎಲ್ಲರನ್ನೂ ಮರೆಯದೆ ಆಹ್ವಾನಿಸಬೇಕೆಂದು ಅನ್ನುತ್ತಿರುವಾಗಲೇ ಕೇಶವಯ್ಯನವರು ತಮ್ಮ ಮನೆಯ ಕಡೆಗೆ ತಿರುಗಿದ್ದನ್ನು ಕಂಡು ಭಟ್ಟರು ಬಾಗಿಲಬಳಿ ಸರಿದರು. ಜಗುಲಿಯ ಮೇಲಿದ್ದ ಕೊಳಗದಿಂದ ನೀರು ತುಂಬಿಕೊಂಡ ಸದ್ದು ಕೇಳಿಸಿತು. ಹಿಂದೆಯೇ “ಭಟ್ಟರೇ” ಎಂಬ ಕರೆ, ಜೊತೆಗೆ ಬಾಗಿಲನ್ನು ತಟ್ಟಿದಸದ್ದು ಕೇಳಿಸಿತು. ಯಾರೋ ಬಂದಿದ್ದಾರೆಂಬಂತೆ ಒಂದೆರಡು ನಿಮಿಷ ಕಾದು ಹೊರಬಾಗಿಲು ತೆರೆದರು. ಅವರ ಹಿಂದೆಯೇ ಬಂದಳು ಲಕ್ಷ್ಮಿ. “ಅರೆ ! ಕೇಶವಣ್ಣಾ, ರಾಧಕ್ಕಾ ಬನ್ನಿ ಬನ್ನಿ” ಎನ್ನುತ್ತಾ ಅವರನ್ನು ಸ್ವಾಗತಿಸಿದರು.

ಅವರುಗಳು ಬಂದಿದ್ದಾರೆಂದು ಮೊದಲೇ ತಿಳಿದಿದ್ದ ಭಾವನಾ ನಡುಮನೆಯಲ್ಲಿ ಗೋಡೆಗಾಸರೆಯಾಗಿರುವಂತೆ ಜಮಖಾನವನ್ನು ಹಾಸಿ,ಒಳಗಿದ್ದ ಒಂದೆರಡು ಒರಗುದಿಂಬುಗಳನ್ನು ತಂದಿಟ್ಟಳು. ಆಗತಾನೇ ಒಳಗಡಿಯಿಟ್ಟ ಕೇಶವಯ್ಯನವರಿಗೆ ಭಾವನಾಳ ತಯಾರಿ ಕಣ್ಣಿಗೆ ಬಿತ್ತು. ತಮ್ಮ ಹೆಂಡತಿಯ ಕಡೆ ತಿರುಗಿ “ನೋಡಿದೆಯಾ ರಾಧಾ, ಭಾವನಾ ನಾನು ಹೇಗೆ ಕುಳಿತುಕೊಳ್ಳುತ್ತೇನೆ, ಏನು ಬೇಕೆಂಬುದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾಳೆ” ಎಂದು ತಾರೀಫು ಮಾಡಿದರು.

“ಹೂಂ..ನಿಮ್ಮನ್ನು ಇವತ್ತು ನೋಡುತ್ತಿದ್ದಾಳೆಯೇ, ಬುದ್ಧಿ ತಿಳಿದಾಗಿನಿಂದ ಗಮನಿಸಿದ್ದಾಳೆ., ಅದೇನು ಕುಳಿತುಕೊಳ್ಳುವ ರೀತಿಯೇ? ಅzsಶಯನಾವಸ್ಥೆ.” ಎಂದು ಛೇಡಿಸುತ್ತಾ ತಾವೇ ಮುಂದಾಗಿ ನಡೆದು ಜಮಖಾನದ ಮೇಲೆ ಕುಳಿತು ತನ್ನವರನ್ನೂ ಕರೆದರು ರಾಧಮ್ಮ. ಹೆಂಡತಿಯ ಹಾಸ್ಯಕ್ಕೆ ನಗುತ್ತಲೇ ಭಾವನಾ ಸಿದ್ಧಪಡಿಸಿದ್ದ ಸ್ಥಳದಲ್ಲೇ ಆಸೀನರಾದರು ಕೇಶವಯ್ಯನವರು.

ಅಲ್ಲಿಯೆ ನಿಂತಿದ್ದ ಭಟ್ಟರನ್ನು, ಲಕ್ಷ್ಮಿಯನ್ನು ನೋಡಿದ ಕೇಶವಯ್ಯನವರು “ಅದೇಕೆ ಶಾಲೆಯಲ್ಲಿ ಹುಡುಗರು ನಿಂತುಕೊಂಡ ಹಾಗೆ ನಿಂತಿದ್ದೀರಾ? ಬನ್ನಿ ಕುಳುತುಕೊಳ್ಳಿ” ಎಂದು ತಮಗೆದುರಾಗಿದ್ದ ಜಾಗವನ್ನು ತೋರಿದರು. ಅವರಿಬ್ಬರೂ ಕುಳಿತುಕೊಂಡ ಬಳಿಕ ಭಾವನಾಳನ್ನು ಒಂದು ತಟ್ಟೆ ತೆಗೆದುಕೊಂಡು ಬರುವಂತೆ ಹೇಳಿದರು. ಅದನ್ನು ಕೇಳಿದ ಮೇಲಂತೂ ಭಟ್ಟರು, ಲಕ್ಷ್ಮಿ ಒಬ್ಬರಮುಖ ಒಬ್ಬರು ಪ್ರಶ್ನಾರ್ಥಕವಾಗಿ ನೋಡಿಕೊಂಡರು.

“ಹಾ..ನಾವಿಬ್ಬರೂ ಇಲ್ಲಿಗೆ ಇದ್ದಕ್ಕಿದ್ದಂತೆ ಬಂದಿರುವುದು ನಿಮಗೆ ಆತಂಕಕ್ಕೆ ಕಾರಣವಾಗಿರಬಹುದು. ಯೋಚಿಸಬೇಡಿ. ನೆನ್ನೆ ರಾತ್ರಿ ಕಾಶಿಯ ತೀರ್ಥಯಾತ್ರೆಗೆಂದು ಹೋಗಿದ್ದ ನಮ್ಮತ್ತೆಯವರನ್ನು ಇವರ ಸೋದರಮಾವ ಕರೆದುಕೊಂಡು ಬಂದರು. ಅವರುಗಳು ಬರುವಷ್ಟರಲ್ಲಿ ಇವರು ನಿಮಗೆ ಅನುಕೂಲವಾಗುವಂತಹ ಕೆಲವು ಕೆಲಸಗಳನ್ನು ಮಾಡಿಕೊಂಡು ಬಂದಿದ್ದರು. ಅದನ್ನು ನಿಮಗೆ ತಿಳಿಸಬೇಕಿತ್ತು. ಸುಬ್ಬುವಿನ ಮೂಲಕ ಹೇಳಿಕಳುಹಿಸಬಹುದಾಗಿತ್ತು. ಆದರೆ ಇವರ ಸೋದರ ಮಾವನವರು ಮಾತನಾಡಲು ಆಗುವುದಿಲ್ಲ, ಕಾರಣ ನಿಮಗೂ ಗೊತ್ತು. ಅದೆಲ್ಲ ಬೇಡವೆಂದು ಪ್ರಸಾದ ಕೊಡುವ ನೆಪಮಾಡಿಕೊಂಡು ಬಂದೆವು ಅಷ್ಟೆ. ಮೊದಲು ಪ್ರಸಾದವನ್ನು ತೆಗೆದುಕೊಳ್ಳಿ. ನಂತರ ಇವರು ಮಾತನಾಡುತ್ತಾರೆ. ಎಂದು ಭಾವನಾ ತಂದ ತಟ್ಟೆಗೆ ಗಂಗಾಜಲವಿದ್ದ ಥಾಲಿ, ಅಲ್ಲಿನ ಪ್ರಸಾದದ ಪ್ಯಾಕೆಟ್ಟನ್ನು ಇಟ್ಟುಕೊಟ್ಟರು ರಾಧಮ್ಮ.

PC: Internet

ಅವರ ಮಾತುಗಳನ್ನು ಕೇಳಿದ ಲಕ್ಷ್ಮಿಗೆ ಕೇಶವಯ್ಯನವರ ಸೋದರಮಾವನ ಅಸಮಾಧಾನಕ್ಕೆ ಕಾರಣವಾದ ಪ್ರಸಂಗ ನೆನಪಿಗೆಬಂತು. ಲಕ್ಷ್ಮಿಯ ಸೋದರಮಾವ ರಾಮಣ್ಣನ ಮಗಳನ್ನು ತಮ್ಮ ಮಗನಿಗೆ ತಂದುಕೊಳ್ಳುವ ಆಸೆಯನ್ನು ಅವರು ವ್ಯಕ್ತಪಡಿಸಿದ್ದರು. ಆದರೆ ಅವರ ಮಗನಲ್ಲಿದ್ದ ಕಲ್ಯಾಣಗುಣಗಳನ್ನು ಕೇಳಿ ತಿಳಿದಿದ್ದ ರಾಮಣ್ಣನವರು ಸದ್ಯಕ್ಕೆ ತಮ್ಮ ಮಗಳಿಗೆ ಮದುವೆ ಮಾಡುವ ಯೊಚನೆ ಇಲ್ಲವೆಂದು ನಯವಾಗಿ ನಿರಾಕರಿಸಿದ್ದರು. ಆದರೆ ಅದಾದ ಮೂರೇ ತಿಂಗಳಿಗೆ ತಮ್ಮ ಮಗಳಿಗೆ ಮದುವೆ ಮಾಡಿದ್ದರು. ಸಂಗತಿಯನ್ನು ತಿಳಿದ ಕೇಶವಯ್ಯನವರ  ಮಾವನವರು ಅಸಮಾಧಾನ ವ್ಯಕ್ತಪಡಿಸಿದ್ದರು. ಜೊತೆಗೆ ಲಕ್ಷ್ಮಿಯ ಬಗ್ಗೆ, ಹಾಗೂ ಕೇಶವಯ್ಯನವರ ಬಗ್ಗೆ ಮುನಿಸಿಕೊಂಡು ಮನೆಗೆ ಬರುತ್ತಿರಲಿಲ್ಲ. ಇದರಲ್ಲಿ ತಮ್ಮ ತಪ್ಪೇನಿದೆ ಎಂದುಕೊಂಡು ಲಕ್ಷ್ಮಿ ಸುಮ್ಮನಾಗಿದ್ದಳು. ಕೇಶವಯ್ಯನವರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ತಮ್ಮಲ್ಲಿಯೇ ತಪ್ಪಿಟ್ಟುಕೊಂಡು ಬೇರೆಯವರ ಕಡೆಗೆ ಬೆರಳು ತೋರಿಸುವುದು ಅವರ ಗುಣ. ಕಂಡೂ ಕಂಡೂ ಯಾರು ತಮ್ಮ ಮಕ್ಕಳನ್ನು ಬಾವಿಗೆ ದೂಡುತ್ತಾರೆ. ಹಣವಿರಬಹುದು ಆದರೆ ಗುಣವೇ ಇಲ್ಲದಿದ್ದರೆ ಎಂದು ಪ್ರಕರಣಕ್ಕೆ ಮುಕ್ತಾಯ ಹಾಡಿದ್ದರು. “ಇತ್ತೀಚೆಗೆ ತಂಗಿಯನ್ನು ಕಾಶಿ ಯಾತ್ರೆಗೆ ಪ್ರವಾಸ ಕರೆದುಕೊಂಡು ಹೋಗಿದ್ದರು. ಈಗ ಅವರನ್ನು ತಲುಪಿಸಲು ಬಂದಿರಬಹುದು. ನಾವಲ್ಲಿಗೆ ಹೋದರೆ ಹಳೆಯ ನೆನಪು ಮರುಕಳಿಸಬಹುದು ಅಥವಾ ಇನ್ನೂ ಮದುವೆಯಾಗದೆ ಗೂಳಿಯಂತೆ ಅಡ್ಡಾಡುತ್ತಿರುವ ಅವರ ಪುತ್ರನ ವಿಷಯ ತೆಗೆದು..”

“ಲಕ್ಷ್ಮಮ್ಮ ..ಏನು ಯೋಚಿಸುತ್ತಿದ್ದಿರಾ? ನೋಡಿ ನೀವು ನಮ್ಮ ಮನೆಗೆ ಬಂದಾಗ ಹೇಳಿದ್ದ ಎರಡು ವಿಷಯಗಳ ಬಗ್ಗೆ ಯೋಚಿಸಿ ಅವುಗಳನ್ನು ಕಾರ್ಯಗತ ಮಾಡಿಕೊಂಡು ಬಂದಿದ್ದೇನೆ. ಅದನ್ನು ನಿಮಗೆ ತಿಳಿಸಬೇಕೆಂದೇ ನಾವಿಲ್ಲಿಗೆ ಬಂದದ್ದು. ಮೊದಲನೆಯದು ಛತ್ರದ ವಿಷಯ, ಜೋಯಿಸರ ಜೊತೆಗೇ ಹೋಗಿ ಮಾತನಾಡಿಕೊಂಡು ಮುಂಗಡವಾಗಿ ಒಂದಷ್ಟು ಹಣವನ್ನು ಕೊಟ್ಟು ಬುಕ್ ಮಾಡಿಸಿ ಬಿಟ್ಟಿದ್ದಾಯ್ತು. ಇನ್ನು ನೀವು ಹೆಣ್ಣು ಕರೆದುಕೊಂಡು ಬಂಧುಬಳಗದೊಡನೆ, ವಡವೆ ವಸ್ತ್ರದೊಡನೆ ಹೋಗುವುದಷ್ಟೇ. ಮಿಕ್ಕಿದ್ದೆಲ್ಲವನ್ನೂ ಅವರೇ ಏರ್ಪಾಡು ಮಾಡುತ್ತಾರೆ. ಬೀಗರಿಗೆ ಇಳಿದುಕೊಳ್ಳುವ ವ್ಯವಸ್ಥೆ, ಊಟ ಉಪಚಾರ, ಶಾಸ್ತ್ರ ಸಂಪ್ರದಾಯ, ಕನ್ಯೆಯ ಅಲಂಕಾರ, ಹೆಂಗಳೆಯರಿಗೆ ಮಡಿಲಕ್ಕಿ, ಪುರುಷರಿಗೆ ತಾಂಬೂಲ, ಮದುವೆಯ ನಂತರ ವಧುವನ್ನು ಮನೆ ತುಂಬಿಸಿಕೊಳ್ಳುವವರೆಗೆ ಅವರದ್ದೇ ಜವಾಬ್ದಾರಿ. ಗೋತ್ರ, ನಕ್ಷತ್ರ, ಸಂಪ್ರದಾಯದ ವಿವರಗಳನ್ನು ಬರೆದುಕೊಟ್ಟು ಬಂದಿದ್ದೇನೆ. ಸುಮಾರು ಎಷ್ಟು ಜನ ಬರಬಹುದೆನ್ನುವ ಲೆಕ್ಕವೊಂದು ಕೊಡಬೇಕಷ್ಟೇ. ಇದೋ ಚೀಟಿಯನ್ನು ಭದ್ರವಾಗಿಟ್ಟುಕೊಳ್ಳಿ. ಇನ್ನು ಬರುವ ಭಾನುವಾರ ನಿಶ್ಚಿತಾರ್ಥದ ಕೆಲಸ ನನಗೇ ವಹಿಸಿರುವುದರಿಂದ ಅದಕ್ಕೆ ಸಂಬಂಧಪಟ್ಟದ್ದನ್ನೆಲ್ಲಾ ನಾನು ನೋಡಿಕೊಳ್ಳುತ್ತೇನೆ. ನೀವೇನಿದ್ದರೂ ಬರುವ ಹೆಣ್ಣುಮಕ್ಕಳಿಗೆ ಅರಿಶಿನ, ಕುಂಕುಮದ ನೀಡುವುದರ ವ್ಯವಸ್ಥೆ, ಊಟೋಪಚಾರಗಳನ್ನು ಲೋಪವಾಗದಂತೆ ನೋಡಿಕೊಳ್ಳಿ. ಯಾರನ್ನು ಕರೆಯಬೇಕೆಂದುಕೊಂಡಿದ್ದೀರಿ ಕರೆಯಿರಿ. ಹೆಚ್ಚು ಜನ ಬೇಡ. ಮನೆಯಲ್ಲೇ ಮಾಡುವುದರಿಂದ ಸ್ಥಳಾವಕಾಶ ನೋಡಿಕೊಂಡು ಕರೆಯಿರಿ. ಹಾ ! ಹುಡುಗನಿಗೆ ಆ ದಿನ ಕೊಡಲು ಬಟ್ಟೆ, ಉಂಗುರ ಸಿದ್ಧಪಡಿಸಿಕೊಳ್ಳಿ. ಮಾಡಿಸಲು ಸಮಯವಿಲ್ಲದಿದ್ದರೆ ರೆಡಿಮೇಡ್ ತನ್ನಿ. ಆಗುತ್ತದೆಯಾ?” ಎಂದು ಕೇಳಿದರು.

ಅದೆಲ್ಲವನ್ನೂ ಬೆರಗಿನಿಂದ ಕೇಳಿದ ಭಟ್ಟರು ದಂಪತಿಗಳು ಖುಷಿಯಿಂದ ಕೇಶವಯ್ಯನವರ ಕಾಲಿಗೆ ಎರಗಿಯೇಬಿಟ್ಟರು. “ಎಷ್ಟು ಪುಣ್ಯ ಮಾಡಿದ್ದೆವೋ ನಿಮ್ಮಂತಹ ಹಿರಿಯರನ್ನು ಪಡೆಯಲು” ಎಂದರು ಕೃತಜ್ಞತೆಯಿಂದ.

“ಅರೆ, ..ಭಟ್ಟರೇ, ಲಕ್ಷ್ಮಮ್ಮ ಇದೇನು ಮಾಡುತ್ತಿದ್ದೀರಿ, ಏಳಿ ಏಳಿ ನಿಮ್ಮಲ್ಲಿ ಹಿರಿಯರಿದ್ದರೆ ಇದಕ್ಕೆಲ್ಲ ನಾನು ಬರುತ್ತಲೇ ಇರಲಿಲ್ಲ. ಇಬ್ಬರೇ ಒದ್ದಾಡುತ್ತೀರಲ್ಲಾ, ಜೊತೆಗೆ ನಮ್ಮ ಮಾತಿಗೆ ಗೌರವ ಕೊಡುತ್ತೀರಿ ಎಂದು ಜೊತೆಗೂಡಿದ್ದೇವೆ ಅಷ್ಟೇ.” ಎಂದರು.

“ಸರಿ, ನಾವಿನ್ನು ಬರೋಣವೇ? ಅತ್ತೆಗೆ ಸೂಕ್ಷ್ಮವಾಗಿ ವಿಷಯ ತಿಳಿಸಿದ್ದೇನೆ. ಅವರೂ ತುಂಬ ಸಂತೋಷಪಟ್ಟರು.” ಎಂದರು ರಾಧಮ್ಮ. ಅಷ್ಟರಲ್ಲಿ ಭಾಗ್ಯ ನಿಂಬೆಹಣ್ಣಿನ ಪಾನಕ ತಂದುಕೊಟ್ಟಳು. ಹೆತ್ತವರು ತಮ್ಮ ಬಳಿ ಮಾತನಾಡುತ್ತಿರುವಾಗಲೇ ಸಂದರ್ಭವರಿತು ಉಪಚರಿಸಬೇಕೆಂಬ ಅವಳ ಪ್ರಜ್ಞೆ ನೋಡಿ ಕೇಶವಯ್ಯ ದಂಪತಿಗಳಿಗೆ ತುಂಬ ಹಿಡಿಸಿತು. ಯಾವ ಬಡಿವಾರವಿಲ್ಲದೆ ಪಾನಕ ಕುಡಿದು “ರುಚಿಕಟ್ಟಾಗಿದೆ” ಎಂದು ಹೊಗಳಿದರು. ಮತ್ತೊಮ್ಮೆ ಭಟ್ಟರಿಗೆ ಲಕ್ಷ್ಮಿಗೆ ಧ್ಯರ್ಯಹೇಳಿ ಭಟ್ಟರು ಕೊಟ್ಟ ಛತ್ರದ ಮುಂಗಡದ ಹಣವನ್ನು ಪಡೆದುಕೊಂಡು ಮನೆಗೆ ಹಿಂತಿರುಗಿದರು.

ಇದೆಲ್ಲ ವಿದ್ಯಮಾನಗಳನ್ನು ಗಮನಿಸಿದ ಭಾಗ್ಯ “ಅಲ್ಲಮ್ಮಾ ಆ ಛತ್ರಕ್ಕೆ ಬಾಡಿಗೆ ಇಲ್ಲ ಎಂದಿದ್ದರು. ಆದರೆ ಜೋಯಿಸರ ಸ್ವಂತ ಮಗನದ್ದೇ ಮದುವೆಯಾದರೂ ಮುಂಗಡ ನೀಡಿ ಬುಕ್ ಮಾಡಿದೆವು ಎಂದರಲ್ಲಾ ಕೇಶುಮಾಮ. ಇದೇನೂ ಅರ್ಥವಾಗಲಿಲ್ಲ” ಎಂದು ಪ್ರಶ್ನಿಸಿದಳು.

“ಓ ಅದಾ ನಿನ್ನ ಅನುಮಾನ. ಆ ಮುಂಗಡ ಹಣವನ್ನು ಮದುವೆಯ ಕಾರ್ಯಗಳನ್ನು ನಡೆಸಲು ಕೊಟ್ಟದ್ದು. ಬರುವ ಅತಿಥಿಗಳ ಸಂಖ್ಯೆಯನ್ನು ತಿಳಿಸಲು ಹೋದಾಗ ಮತ್ತಷ್ಟು ಕೊಡಬೇಕು. ಅವರು ತಯಾರಿ ಮಾಡಿಕೊಳ್ಳಬೇಕಲ್ಲಾ. ನಂತರ ಉಳಿದದ್ದು. ಬೇರಡೆಗೆ ಹೋಲಿಸಿದರೆ ಇಲ್ಲಿ ಕಡಿಮೆಯಂತೆ. ರಾಮಣ್ಣಮಾಮನೂ ಹೇಳಿದರು. ಎಲ್ಲಾ ಅವರಿಗೇ ಒಪ್ಪಿಸಿದರೆ ನಮಗೆ ತಲೆಬಿಸಿಯಿಲ್ಲ. ಅದಕ್ಕೇ ನಾವೇ ಹೇಳಿದ್ದು. ಪಾಪ ಅವರು ಇದನ್ನು ತಮ್ಮ ಮನೆಯ ಕೆಲಸದಂತೆ ತಲೆಯಮೇಲೆ ಹೊತ್ತುಕೊಂಡು ಮಾಡಿ ನಮ್ಮ ತಲೆಯಭಾರವನ್ನು ಕಡಿಮೆ ಮಾಡುತ್ತಿದ್ದಾರೆ. ಎಲ್ಲವೂ ಸುಸೂತ್ರವಾಗಿ ಮುಗಿದರೆ ಸಾಕು” ಎಂದು ಮಗಳಿಗೆ ಹೇಳಿ ಅವಳ ಮನದಲ್ಲಿ ಮೂಡಿದ್ದ ಅನುಮಾನವನ್ನು ಬಗೆಹರಿಸಿದಳು ಲಕ್ಷ್ಮಿ.

“ಅಂತೂ ನನ್ನನ್ನು ಈ ಮನೆಯಿಂದ ಆದಷ್ಟು ಬೇಗ ಹೊರಕಳಿಸಲು ಒಬ್ಬರಿಗಿಂತ ಒಬ್ಬರು ಪೈಪೋಟಿಗೆ ಬಿದ್ದವರಂತೆ ಓಡಾಡುತ್ತಿದ್ದಾರೆ” ಎಂದು ತಂಗಿ ಭಾವನಾಳ ಹತ್ತಿರ ಹೇಳಿಕೊಂಡು ನಗಾಡಿದಳು ಬಾಗ್ಯ.

ಅಕ್ಕನ ಮಾತುಗಳನ್ನು ಕೇಳಿದ ಭಾವನಾ “ಅಕ್ಕಾ, ನಿಜಹೇಳು ಜೋಯಿಸರ ಮನೆಯವರನ್ನು, ಆ ಹುಡುಗನನ್ನು ನೋಡಿದ ಮೇಲೂ ಮದುವೆ ಬೇಡ ಎನ್ನಿಸುತ್ತಿದೆಯಾ ನಿನಗೆ?” ಎಂದು ಕೇಳಿದಳು.

ಉತ್ತರ ಹೇಳಲು ತಡಕಾಡುವಂತಾಯಿತು ಭಾಗ್ಯಳಿಗೆ. ಏಕೆಂದರೆ ಈಗಾಗಲೇ ತನ್ನ ಸಂಗಾತಿಯಾಗುವವನ ಚಿತ್ರ ಕಣ್ಮುಂದೆ ನಿಂತಿತ್ತು. ಒಳಮನಸ್ಸು ಬೇಕೆಂದು ಪಿಸುಗುಟ್ಟಿದಂತಾಯಿತು. ಅಕ್ಕನ ಮೌನ ಕಂಡು ಭಾವನಾ “ನಾವು ಇಷ್ಟಪಡುವುದಕ್ಕಿಂತ ನಮ್ಮನ್ನು ಇಷ್ಟಪಟ್ಟವರನ್ನು ವರಿಸುವುದೇ ಉತ್ತಮ. ನಿನಗೂ ಸಮ್ಮತಿಯಿದೆ ಎಂದು ಮುಖಭಾವ ನೋಡಿದರೆ ಗೊತ್ತಾಗುತ್ತದೆ. ಹಾಗೇ ಅದೃಷ್ಟವಿದ್ದರೆ ವಿದ್ಯಾಭ್ಯಾಸವನ್ನೂ ಮುಂದುವರೆಸಬೇಕೆಂಬ ಆಸೆಯೂ ನೆರವೇರಬಹುದು. ಅತಿಯಾಗಿ ಯೋಚಿಸದೆ ನಿರಾಳವಾಗಿರು ಅಕ್ಕಾ. ಬಾ.. ಸಾಮಾನುಗಳನ್ನೆಲ್ಲ ಎತ್ತಿಟ್ಟಿದ್ದಾಯ್ತಲ್ಲಾ. ಅಡುಗೆಮನೆ, ಊಟದಮನೆ ಕ್ಲೀನಿಂಗ್ ಕೆಲಸವನ್ನು ಮುಗಿಸಿಯೇ ಬಿಡೋಣ.” ಎಂದು ಆಕೆಯ ಕೈ ಹಿಡಿದು ಒಳ ನಡೆದಳು ಭಾವನಾ.

“ಹೂಂ ಚಿಕ್ಕವಳಾದರೂ ಎಂಥಹ ಸಾಮಾನ್ಯಜ್ಞಾನ, ದಾಷ್ಟಿಕತೆ ! ಇದು ನನ್ನಲ್ಲೂ ಇದೆಯೆಂದುಕೊಳ್ಳುತ್ತೇನೆ. ಆದರೂ ಒಮ್ಮೊಮ್ಮೆ ಅಧೀರಳಾಗುತ್ತೇನೆ. ಭಗವಂತಾ, ಬಂದದ್ದನ್ನು ಸ್ವೀಕರಿಸುವ ಮನಸ್ಥೈರ್ಯವನ್ನು ನನಗೆ ಕೊಡು” ಎಂದುಕೊಳ್ಳುತ್ತಾ ತಂಗಿಯ ಜೊತೆ ಹೆಜ್ಜೆ ಹಾಕಿದಳು.

ಅಂತೂ ಭಾನುವಾರದ ಶುಭಕಾರ್ಯಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡ ಭಟ್ಟರು ದಂಪತಿಗಳು ಅಕ್ಕಪಕ್ಕದವರನ್ನು ಆಹ್ವಾನಿಸಬೇಕೆಂದು ನಿರ್ಧರಿಸಿದರು. ವಿಷಯ ಕೇಳಿದ ಕೆಲವರು ಸಂತಸದಿಂದ ಅಭಿನಂದಿಸಿ ಭಾಗವಹಿಸುತ್ತೇವೆಂದು ಆಶ್ವಾಸನೆ ನೀಡಿದರು. ಆದರೆ ತೀರಾ ಪಕ್ಕದಲ್ಲೇ ಇದ್ದ ಸುಭ್ರಮಣ್ಯರವರು “ಓಹೋ ಹೀಗೋ ಸಮಾಚಾರ, ಮೂರು ದಿನಗಳ ಹಿಂದೆಯೇ ಆ ಪೂಜಾರಿ ಕೇಶವಯ್ಯ ತಮ್ಮ ಹೆಂಡತಿಯೊಡನೆ ನಿಮ್ಮನೆಗೆ ಬಂದಾಗಲೇ ಏನೋ ವಿಶೇಷವಿರಬೇಕೆಂದು ಕೇಳಿದ್ದಕ್ಕೆ ಆತ ಅಂತಹ ವಿಶೇಷವೇನಿಲ್ಲ, ನಮ್ಮ ತಾಯಿ ಕಾಶೀಯಾತ್ರೆಗೆ ಹೋಗಿ ಹಿಂದಿರುಗಿದರು. ಪ್ರಸಾದವನ್ನು ಕೊಟ್ಟು ಹೋಗೋಣವೆಂದು ಬಂದಿದ್ವಿ. ಎಂದು ಹೇಳಿ ಅವರಿಗೂ ಸ್ವಲ್ಪ ಪ್ರಸಾದಕೊಡು ಎಂದು ಹೇಳಿ ಹೆಂಡತಿಯಿಂದ ಕೊಡಿಸಿದರು. ಹೀಗೇ ಅಂತ ಹೇಳಿದ್ದರೆ ನಾವೇನು ಆಗುವ ಕಾರ್ಯಕ್ಕೆ ಅಡ್ಡಿಮಾಡುತ್ತಿದ್ದೆವಾ? ಅದೂ ಆ ಜೋಯಿಸರ ಮಗನಿಗೆ ಅತಿಯಾದ ಕಟ್ಟುಪಾಡು, ಹೇಳಿಕೊಳ್ಳುವಂತಹ ಕುಳವೇನಲ್ಲ. ನೋಡುವುದಕ್ಕೆ ಚೆನ್ನಾಗಿದ್ದಾನೆ. ಒಳ್ಳೆಯದಾಯ್ತು ಬಿಡಿ. ಕಂತೆಗೆ ತಕ್ಕ ಬೊಂತೆ. ನಿಮ್ಮ ಮಗಳೂ ಸುಂದರವಾಗಿದ್ದಾಳೆ. ನೀವೂ ಅಂತಹ ಹೇಳಿಕೊಳ್ಳುವಂತಹ ಮಟ್ಟದಲ್ಲೇನೂ ಇಲ್ಲ. ಅಲ್ಲದೆ ನಿಮಗೂ ನಾಲ್ಕು ಮಕ್ಕಳ ಜವಾಬ್ದಾರಿ ಮುಗಿಯಬೇಡವೇ?” ಎಂದು ತಮ್ಮ ಅಸಹನೆಯನ್ನು ಕಹಿಯಾಗಿ ಹೊರಹಾಕಿದರು. ಅದನ್ನು ಕೇಳಿದಾಗ ಮನಸ್ಸಿಗೆ ನೋವಾದರೂ ತುಟಿ ಎರಡು ಮಾಡದೆ ಮನೆಗೆ ಬಂದರು. ಹಾಗೆ ಬರುವಾಗ “ಅಲ್ಲಾ ಲಕ್ಷ್ಮೀ, ಅವರೇನು ನಮ್ಮ ಮಕ್ಕಳಿಗೆಲ್ಲಾ ಬಟ್ಟೆ ಕೊಡಿಸಿದರೇ? ಹೊಟ್ಟೆಗೆ ಹಾಕಿ ಸಾಕಿದರೇ? ಏನೇನೋ ಮಾತನಾಡುತ್ತಾರಲ್ಲಾ” ಎಂದು ನೊಂದು ನುಡಿದರು ಭಟ್ಟರು.

“ಬಿಡಿ, ಅವೆಲ್ಲ ನಮಗೆ ಆಶಿರ್ವಾದದಂತೆ ಎಂದು ತಿಳಿದುಕೊಳ್ಳೋಣ. ಭಗವಂತನೊಬ್ಬ ನಮ್ಮ ಕಡೆಗೆ ಇದ್ದರೆ ಸಾಕು. ಆತನಿಗಿಂತ ದೊಡ್ಡವರ್‍ಯಾರು” ಎಂದು ಗಂಡನಿಗೆ ಸಮಾಧಾನ ಹೇಳಿದಳು ಲಕ್ಷ್ಮಿ.

ಲಕ್ಷ್ಮಿಯ ಮಾವ ಮಾತುಕೊಟ್ಟಂತೆ ಶನಿವಾರ ಬೆಳಗ್ಗೆಯೇ ಬಂದು ಮಾತನಾಡಿ ಅವಳಿಗೆ ಧೈರ್ಯತುಂಬಿ ಭಾನುವಾರ ಬೆಳ್ಳಂಬೆಳಗ್ಗೆಯೇ ತಿಂಡಿ ತೆಗೆದುಕೊಂಡು ಹಾಜರಾಗುತ್ತೇನೆಂದು ಆಶ್ವಾಸನೆ ಕೊಟ್ಟು ತಮ್ಮ ಮನೆಯಲ್ಲಿದ್ದ ಹಿರಿಯ ದಂಪತಿಗಳನ್ನು ಭಟ್ಟರ ಮನೆಯಲ್ಲಿಯೇ ಬಿಟ್ಟುಹೋದರು. 

ಬಸವ ಚಿಕ್ಕದಾಗಿ ಚೊಕ್ಕದಾಗಿ ಹಸಿರು ಚಪ್ಪರವನ್ನು ಹಾಕಿ ಮನೆಯ ಮುಂದೆ ಹೊಸ ಕಳೆಯನ್ನೇ ತಂದಿತ್ತನು. ಲಕ್ಷ್ಮಿಯ ಸೋದರ ಮಾವನವರ ಮನೆಯವರು, ಕೇಶವಯ್ಯನವರ ಮನೆಯವರು ಭಾನುವಾರ ಎಲ್ಲರೂ ಬರುವುದಕ್ಕಿಂತ ಮೊದಲೇ ಆಗಮಿಸಿ ಮಿಕ್ಕ ಸಿದ್ಧತೆಗಳಲ್ಲಿ ಕೈ ಜೋಡಿಸಿದರು. ಅವರು ಬಂದ ಸ್ವಲ್ಪ ಹೊತ್ತಿನಲ್ಲೇ ಭಟ್ಟರ ಚಿಕ್ಕಪ್ಪಂದಿರು ಭಟ್ಟರು ಮತ್ತು ಲಕ್ಷ್ಮಿಗೆ ಅಭಿನಂದಿಸಿ ಮಕ್ಕಳನ್ನು ಮಾತನಾಡಿಸಿ ಏನಾದರೂ ಕೆಲಸವಿದ್ದರೆ ಹೇಳು ಎಂದರು. ಆದರೆ ಚಿಕ್ಕಮ್ಮಂದಿರು ಇದ್ಯಾವುದೂ ನಮಗೆ ಸಂಬಂಧವಿಲ್ಲವೆನ್ನುವಂತೆ ಕರೆದ ತಕ್ಷಣ ತಿಂಡಿ ಸೇವನೆ ಮಾಡಿ ಒಂದೆಡೆ ಪ್ರತಿಷ್ಠಾಪನೆಗೊಂಡರು. ಆದರೆ ಅವರ ಜೊತೆ ಬಂದ ಅವರ ಮಗ, ಸೊಸೆಯರು ಅತ್ತೆಯಂದಿರ ಆಣತಿಗೆ ಕಿವಿಗೊಡದೆ ಅಂದಿನ ಕಾರ್ಯಕ್ಕೆ ಬಂದವರನ್ನು ಬಾಯಿತುಂಬ ಮಾತನಾಡಿಸುತ್ತಾ, ಮಕ್ಕಳನ್ನು ಒಡಗೂಡಿಕೊಂಡು ತಮಗೆ ತೋಚಿದ ರೀತಿಯಲ್ಲಿ ಲವಲವಿಕೆಯಿಂದ ಓಡಾಡುತ್ತಿದ್ದರು. ಜೋಯಿಸರು ಅವರು ಹೇಳಿದಂತೆ ಹತ್ತುಜನ ಬಳಗದವರೊಡನೆ ಸಮಯಕ್ಕೆ ಸರಿಯಾಗಿ ಆಗಮಿಸಿದರು. ಅವರುಗಳನ್ನು ಭಟ್ಟರ ಚಿಕ್ಕಪ್ಪಂದಿರೇ ಮುಂದಾಗಿ ಹೋಗಿ ತಮ್ಮನ್ನು ಪರಿಚಯಿಸಿಕೊಂಡು ಸ್ವಾಗತಿಸಿ ಸತ್ಕಾರ ನೀಡಿ ತಮ್ಮ ಹಿರಿತನವನ್ನು ಉಳಿಸಿಕೊಂಡರು. ಅದನ್ನು ಕಂಡ ಭಟ್ಟರಿಗೆ ಅಚ್ಚರಿಯಾಯಿತು. ಸದ್ಯ ನಮ್ಮ ಮಾನ ಉಳಿಸಿದರು ಎಂದುಕೊಂಡರು. ಲಕ್ಷ್ಮಿಯೂ ಅವರುಗಳಿಗೆ ಮನದಲ್ಲೇ ನಮಿಸಿದಳು. ಜೋಯಿಸರ ಪತ್ನಿ ಸೀತಮ್ಮ ತಮ್ಮ ಬೀಗರ ಮನೆಯನ್ನು ನೋಡುತ್ತಾ ಹಿರಿಯರ ಕಾಲದ ಮನೆ ದೊಡ್ಡದಾಗಿಯೇ ಇದೆ. ಅಷ್ಟೇ ಚೊಕ್ಕಟವಾಗಿಟ್ಟುಕೊಂಡಿದ್ದಾರೆ ಎಂದುಕೊಂಡರು. ನಿಗದಿತ ವೇಳೆಗೆ ಸರಿಯಾಗಿ ಕಾರ್ಯಕಲಾಪ ಕೇಶವಯ್ಯನವರ ನೇತೃತ್ವದಲ್ಲಿ ಪ್ರಾರಂಭವಾಯಿತು.

(ಮುಂದುವರಿಯುವುದು)

ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=35271

ಬಿ.ಆರ್.ನಾಗರತ್ನ, ಮೈಸೂರು

5 Responses

  1. . ಶಂಕರಿ ಶರ್ಮ says:

    ಬಹಳ ಚೆನ್ನಾಗಿ ಹರಿದು ಬರುತ್ತಿರುವ ಸಾಮಾಜಿಕ ಕಥಾನಕ ಮನಗೆದ್ದಿದೆ… ಸೊಗಸಾದ ನಿರೂಪಣೆ..ಧನ್ಯವಾದಗಳು, ನಾಗರತ್ನ ಮೇಡಂ.

  2. ನಾಗರತ್ನ ಬಿ. ಆರ್ says:

    ನಿಮ್ಮ ಪ್ರೋತ್ಸಾಹ ಕ ಅಭಿಪ್ರಾಯ ಕ್ಕೆ ನನ್ನ ನಮನ ಶಂಕರಿ ಮೇಡಂ.

  3. ನಯನ ಬಜಕೂಡ್ಲು says:

    Beautiful

  4. ನಾಗರತ್ನ ಬಿ. ಆರ್ says:

    ಧನ್ಯವಾದಗಳು ನಯನ ಮೇಡಂ

  5. Padma Anand says:

    ಕೌಟುಂಬಿಕ ಕಾದಂಬರಿ ಸೊಗಸಾದ ನಿರೂಪಣೆಯೊಂದಿಗೆ ಮುಂದುವರೆಯುತ್ತಿದೆ. ಅಭಿನಂದನೆಗಳು.

Leave a Reply to Padma Anand Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: