ಕಾದಂಬರಿ: ನೆರಳು…ಕಿರಣ 14
–ಹಿಂದಿನ ಸಂಚಿಕೆಯಿಂದ ಮುಂದುವರಿದುದು…..
“ಅದೇನು ಹೇಳು ಲಕ್ಷ್ಮಿ? ನನ್ನ ಹತ್ತಿರ ಏಕೆ ಸಂಕೋಚ, ನಾನೇನು ಹೊರಗಿನವನೇ?” ಎಂದರು ರಾಮಣ್ಣ.
“ಅದು ಅದೂ ಭಾಗ್ಯಳ iದುವೆಗೆ ಕರೆಯುವುದು, ಕಳಿಸುವುದು, ಶಾಸ್ತ್ರ ಸಂಪ್ರದಾಯ ಎಲ್ಲವೂ ಮುಗಿಯುವವರೆಗೂ ಈ ಮನೆಯಲ್ಲಿರುವ ದೊಡ್ಡಜ್ಜ, ಅಜ್ಜಿಯರನ್ನು ನಮ್ಮನೆಯಲ್ಲಿರಲು ಕಳುಹಿಸಿಕೊಡಿ. ಮನೆಯಲ್ಲಿ ಹಿರಿಯರೊಬ್ಬರಿದ್ದಂತೆ ಆಗುತ್ತದೆ.’ ಎಂದು ಕೇಳಿದಳು ಲಕ್ಷ್ಮಿ.
“ಅಯ್ಯೋ ಅಷ್ಟೇನಾ, ಧಾರಾಳವಾಗಿ ಕಳುಹಿಸಿಕೊಡ್ತೀನಿ ಬಿಡು. ನಿಶ್ಚಿತಾರ್ಥಕ್ಕೆ ನಾವು ಬರುವಾಗಲೇ ಕರೆದುಕೊಂಡು ಬರುತ್ತೇವೆ. ಅಲ್ಲಿಯೇ ಇರುತ್ತಾರೆ. ಅವರುಗಳಿಗೆ ನೀವು, ನಿಮ್ಮಮನೆ ಹೊಸದೇನಲ್ಲ. ಜೊತೆಗೆ ಮಕ್ಕಳಿಗೂ ಇಷ್ಟ. ನಿಮ್ಮೆಲ್ಲರಿಗೂ ನೆರವಾಗುತ್ತದೆ.” ಎಂದರು ಗಂಡನಿಗಿಂತ ಮುಂಚೆಯೇ ಲಕ್ಷ್ಮಿಯ ಅತ್ತೆ ರತ್ನಮ್ಮ ಭರವಸೆಯಿತ್ತರು.
“ಹೌದು ಅತ್ತೇ, ಎಲ್ಲಿ ನಾನು ಬಂದು ಇಷ್ಟೊತ್ತಾದರೂ ಅಜ್ಜ, ಅಜ್ಜಿ ಕಾಣಿಸಲಿಲ್ಲ?” ಎಂದು ಕೇಳಿದಳು ಲಕ್ಷ್ಮಿ.
“ಅವರುಗಳನ್ನು ಮಾಧು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾನೆ.” ಎಂದರು ರಾಮಣ್ಣ.
ಅವರುಗಳ ಮಾತನ್ನು ಕೇಳುತ್ತಿದ್ದ ಭಟ್ಟರು ಅವರ್‍ಯಾರೋ, ಇವರ್‍ಯಾರೋ ತಮ್ಮ ಊರಿನವರು ಎಂಬುದೊಂದು ಬಿಟ್ಟರೆ ಯಾವುದೋ ಬಾದರಾಯಣ ಸಂಬಂಧ. ತಮ್ಮವರ್‍ಯಾರೂ ಇಲ್ಲದ ಅವರು ಇವರಲ್ಲಿ ಅಡುಗೆ , ತಿಂಡಿ ಮಾಡಲು ಸಹಾಯಕರಾಗಿ ಬಂದವರು. ಅವರನ್ನು ಮನೆಯಲ್ಲೇ ಇರಿಸಿಕೊಂಡು ಬಿಟ್ಟರು. ಆಸರೆ ಕೊಡುವುದರ ಜೊತೆಗೆ ಅಕ್ಕರೆಯನ್ನೂ ನೀಡಿದ್ದಾರೆ. ಹೂಂ… ಎಲ್ಲಕ್ಕೂ ಸಂಸ್ಕಾರ ಬೇಕು ಅಂದುಕೊಂಡರು.
ಅಷ್ಟರಲ್ಲಿ “ಭಟ್ಟರೇ, ಎಲ್ಲೋ ಯೋಚನೆಯಲ್ಲಿ ಕಳೆದುಹೋದಿರಿ, ತಗೊಳ್ಳಿ ಬಾದಾಮಿ ಹಾಲನ್ನು ಕುಡಿಯಿರಿ. ನಾನೇ ಮಾಡಿದ್ದು. ನಾಳಿನ ಒಂದು ಸಮಾರಂಭಕ್ಕೆ. ಚಿರೋಟಿ ಊಟ ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ಬಾದಾಮಿಪುಡಿ ತಯಾರಿಸಿದ್ದೆ. ಅಂಗಡಿಯದ್ದು ಅಷ್ಟು ರುಚಿಯಿರುವುದಿಲ್ಲ. ಕುಡಿದು ಹೇಗಿದೆ ಹೇಳಿ” ಎಂದರು ರಾಮಣ್ಣ.
“ನೀವೇ ಮಾಡಿದ್ದೀರೆಂದ ಮೇಲೆ ಚೆನ್ನಾಗಿಯೇ ಇರುತ್ತೆ., ನಾನು ಅಲೋಚಿಸುತ್ತಿದ್ದುದು ನಿಮ್ಮ ಅಂತಃಕರಣದ ಬಗ್ಗೆ. ಮುಂದೆ ಏನು ಮಾಡಬೇಕೆಂದು ದಿಕ್ಕುತೋಚದೆ ಇದ್ದಾಗ ನಮ್ಮ ದುಡಿಮೆಗೊಂದು ದಾರಿ ಮಾಡಿಕೊಟ್ಟಿರಿ. ಅಜ್ಜ, ಅಜ್ಜಿಯರಿಗೆ ನೀವು ತೋರುವ ಪ್ರೀತಿ ! ಈಗಲೂ ನಮಗೆ ಮಾರ್ಗದರ್ಶಕರಾಗಿ ಮುನ್ನಡೆಸುತ್ತಿದ್ದೀರಿ. ಅದನ್ನೇ ಮೆಲುಕು ಹಾಕುತ್ತಿದ್ದೆ.” ಎಂದರು ಭಟ್ಟರು.
“ಏಯ್..ಬಿಡಿಬಿಡಿ.. ನೀವು ನನಗೆ ಮುಜುಗರವಾಗೊ ಹಾಗೆ ಮಾತಾಡುತ್ತಿದ್ದೀರಿ. ಬೇರೆಯವರೇ? ನಮ್ಮ ಹುಡುಗಿಯನ್ನು ನಿಮಗೆ ಕೊಟ್ಟಿದ್ದೀವಿ. ಅವಳ ಕಷ್ಟಸುಖಕ್ಕೆ ನೆರವಾಗಲಿಲ್ಲಾಂದ್ರೆ ನಾವು ಮನುಷ್ಯರೇ? ಹೇಳಿ, ಪಾಪ ಚಿಕ್ಕಂದಿನಲ್ಲಿಯೇ ತನ್ನ ಹೆತ್ತವಳನ್ನು ಕಳೆದುಕೊಂಡು, ತಂದೆ ಇದ್ದರೂ ಇವಳತ್ತ ನೋಡದೆ ಬೆಳೆದ ತಬ್ಬಲಿ ಮಗು. ಈಗ ಅವಳ ಮಕ್ಕಳಿಗೆ ಒಂದು ನೆಲೆ ಒದಗಿಸಲು ಹೊರಟಿದ್ದಾಳೆ. ಅವಳ ಜೊತೆ ಕೈಜೋಡಿಸುವುದು ನಮ್ಮ ಕರ್ತವ್ಯ ಅಲ್ಲವೇ? ನಿಮಗೆ ಯಾರೂ ಇಲ್ಲವೆಂದುಕೊಳ್ಳಬೇಡಿ. ನಾವು ನಿಮ್ಮೊಂದಿಗಿದ್ದೇವೆ. ಎಲ್ಲವು ಒಳ್ಳೆಯದಾಗುತ್ತದೆ.” ಎಂದು ಧೈರ್ಯದ ಮಾತುಗಳನ್ನು ಹೇಳಿದರು ರಾಮಣ್ಣ ದಂಪತಿಗಳು.
ಅತ್ತೆ ಮಾವನವರ ಮಾತುಗಳನ್ನು ಕೇಳಿದ ಲಕ್ಷ್ಮಿಗೆ ಸಂತೋಷದಿಂದ ಮನತುಂಬಿ ಬಂತು. ಭಟ್ಟರ ಚಿಕ್ಕಮ್ಮಂದಿರ ಮಾತುಗಳಿಗೂ, ಅವರು ನಡೆದುಕೊಂಡ ರೀತಿಗೂ, ಇಲ್ಲಿನ ಅತ್ತೆ ಮಾವನ ಮಾತುಗಳಿಗೂ, ನಡೆದುಕೊಂಡ ರೀತಿಗೂ ಹೋಲಿಕೆ ಮಾಡತೊಡಗಿದವಳನ್ನು ಭಟ್ಟರೇ ಎಚ್ಚರಿಸುತ್ತಾ “ಲಕ್ಷ್ಮಿ ನಾವಿನ್ನು ಹೊರಡೋಣವೇ?” ಎಂದರು.
“ಹೂಂ..ಅತ್ತೆ ಮಾವ ಮನೆಯವರೆಲ್ಲರನ್ನೂ ಕರೆದುಕೊಂಡು ಬನ್ನಿ”ಎಂದು ಮತ್ತೊಮ್ಮೆ ಆಹ್ವಾನಿಸಿದಳು ಲಕ್ಷ್ಮಿ.
“ಬರದೇ ಏನು ಲಕ್ಷ್ಮೀ, ಬಾನುವಾರ ಬೆಳಗ್ಗೇನೇ ನಾವುಗಳು ಬಂದುಬಿಡುತ್ತೇವೆ. ನಿಮ್ಮ ಮಾವ, ಮಾಧು ನೀನು ವಹಿಸಿದ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. ಮತ್ತೇನಾದರೂ ಬೇಕೆನಿಸಿದರೆ ಬಸವನ ಹತ್ತಿರ ಹೇಳಿಕಳುಹಿಸು” ಎಂದು ಹೇಳಿ ಕುಂಕುಮವಿತ್ತು ತಾಂಬೂಲ ನೀಡಿದರು. ಹಾಗೇ “ತೊಗೋ ಲಕ್ಷ್ಮಿ ಸ್ವಲ್ಪ ತಿಂಡಿ ಮಕ್ಕಳಿಗೆ ಕೊಡು” ಎಂದು ಒಂದು ಡಬ್ಬವನ್ನು ಅವಳಿಗೆ ಇತ್ತರು ರತ್ನಮ್ಮ.
ಲಕ್ಷ್ಮಿಯ ಮಾವ ರಾಮಣ್ಣ ಹೆಂಡತಿಯ ಕಡೆ ತಿರುಗಿ “ರತ್ನಾ ನಾನು ಇವರನ್ನು ಮನೆಗೆ ಬಿಟ್ಟು ಮಕ್ಕಳನ್ನು ಮಾತನಾಡಿಸಿಕೊಂಡು ಬರುತ್ತೇನೆ” ಎಂದು ಸಿದ್ಧರಾದರು.
“ಏನೂ ಬೇಡ ಬಿಡಿ ಮಾವ, ನಾವು ಹಾಗೇ ತಿರುಗಾಡಿಕೊಂಡು ಹೋಗುತ್ತೇವೆ. ನಿಮಗ್ಯಾಕೆ ತೊಂದರೆ. ಕೆಲಸಕಾರ್ಯಗಳ ಮಧ್ಯೆ ನಿಮಗೆ ಬಿಡುವು ಸಿಗುವುದೇ ಕಷ್ಟ. ಅಪರೂಪಕ್ಕೆ ಮನೆಯಲ್ಲಿದ್ದೀರಿ” ಎಂದಳು ಲಕ್ಷ್ಮಿ.
ಅವರ ಮಾತುಗಳನ್ನು ಕೇಳುತ್ತಿದ್ದ ಭಟ್ಟರಿಗೆ ತೂಕಡಿಸುವವನಿಗೆ ಹಾಸಿಕೊಟ್ಟಂತಾಯಿತು. ಏಕೆಂದರೆ ಬೆಳಗಿನಿಂದ ಕೇಶವಯ್ಯನವರ ಮನೆ, ಚಿಕ್ಕಪ್ಪಂದಿರ ಮನೆ, ಈಗ ಇಲ್ಲಿಗೆ ನಡೆದಾಡಿ ಸಾಕಾಗಿತ್ತು. ಮತ್ತೆ ನಡೆದುಕೊಂಡೇ ಮನೆಗೆ ಹೋಗುವುದು. ಅವ್ವಯ್ಯಾ ಈ ನನ್ನ ಹೆಂಡತಿ ಅತಿಯಾದ ಸ್ವಾಭಿಮಾನಿ. ನಾವು ಕೇಳುವುದು ಬೇಡ, ಅವರೇ ಬಿಟ್ಟುಕೊಡುತ್ತೇನೆಂದರೆ.. ಇನ್ನೆಲ್ಲಿ ತಾನು ಹೇಳಿದ್ದಕ್ಕೇ ಪಟ್ಟು ಹಿಡಿದಾಳೋ ಎಂದು.. “ ಇರಲಿ ಬಿಡು ಲಕ್ಷ್ಮಿ, ಬಸವ ಬೇರೆ ಮನೆಯ ಹತ್ತಿರ ಬಂದುಬಿಡಬಹುದು. ಅವನಿಗೇನು ಹೊತ್ತುಗೊತ್ತಿಲ್ಲ. ಬೇಗ ಹೋದರೆ ನಾಳೆ ಬೇಕಾದಷ್ಟು ಕೆಲಸಗಳಿವೆ” ಎಂದರು.
“ ಅದ್ಯಾಕೆ ಅಷ್ಟೊಂದು ಗೆರೆ ಎಳೆದಂತೆ ಮಾತಾಡ್ತೀ ಲಕ್ಷ್ಮಿ, ನಿಮ್ಮನೆ ಕಡೇ ನನಗೆ ಸ್ವಲ್ಪ ಕೆಲಸವಿದೆ. ಹಾಗೇ ನಿಮ್ಮನ್ನು ಬಿಟ್ಟು ಬಂದ ಹಾಗಾಗುತ್ತೆ ಬನ್ನಿ” ಎಂದರು ರಾಮಣ್ಣ. ಮಾವನ ಕಾಳಜಿಗಿಂತ ಗಂಡನ ಮನಸ್ಸಿನಲ್ಲಿದ್ದ ಸುಳಿವು ಅರಿತ ಲಕ್ಷ್ಮಿ ಮೌನವಾಗಿ ಚಪ್ಪಲಿ ಮೆಟ್ಟಿ ಮನೆಯಿಂದ ಹೊರಬಂದಳು.
ದಂಪತಿಗಳನ್ನು ಕೂರಿಸಿಕೊಂಡು ರಾಮಣ್ಣ ಹೊರಟರು. ದಾರಿಯಲ್ಲಿ ಲಕ್ಷ್ಮಿ ವಿವಾಹದ ಬಗ್ಗೆ ಪೂರ್ವಭಾವಿ ಯೋಜನೆಗಳನ್ನು ತನ್ನ ಮಾವನ ಹತ್ತಿರ ಹೇಳಿದಳು. ಹಾಗೇ ಜೋಯಿಸರ ಮುತ್ತಾತ ಕಟ್ಟಿಸಿರುವ ಕಲ್ಯಾಣಮಂಟಪದ ಸಂಗತಿಯನ್ನೂ ತಿಳಿಸಿ ಹೇಗೆ ಎಂದು ಕೇಳಿದಳು.
“ಓ ! ಅದಾ, ಭಾಗ್ಯಳ ಮದುವೆಯ ದಿನಾಂಕದಲ್ಲಿ ಅದೇನಾದ್ರೂ ಖಾಲಿಯಿದ್ರೆ ಕಣ್ಣುಮುಚ್ಚಿಕೊಂಡು ಒಪ್ಪಿಕೊಂಡುಬಿಡು ಲಕ್ಷ್ಮಿ. ಜೋಯಿಸರ ಮನೆತನದಲ್ಲಿ ನಡೆಯುವ ಯಾವುದೇ ಮದುವೆ ನಡೆದರೂ ಛತ್ರಕ್ಕೆ ಬಾಡಿಗೆಯಿಲ್ಲ. ಬರಿಯ ಸ್ವಚ್ಛಮಾಡಲು ಮತ್ತು ಚಿಕ್ಕಪುಟ್ಟ ಖರ್ಚುಗಳಷ್ಟೇ. ಅದರ ಉಸ್ತುವಾರಿಕೆ ನೋಡಿಕೊಳ್ಳುವವರು ಧಾರ್ಮಿಕ ಮನೋಭಾವದವರು. ಅವರಿಗೆ ಒಪ್ಪಿಸಿಬಿಟ್ಟರೆ ವಧುವಿಗೆ ಸಿಂಗಾರ ಮಾಡುವುದರಿಂದ ಹಿಡಿದು ಶಾಸ್ತ್ರ ಸಂಪ್ರದಾಯ, ಉಟೋಪಚಾರ ಎಲ್ಲದರಲ್ಲೂ ಏ ಒನ್. ಅವರಿಗೆ ಅತಿಯಾದ ಹಣದ ವ್ಯಾಮೋಹವಿಲ್ಲ. ಅವರದ್ದೇ ಆದ ಒಂದು ನೀತಿನಿಯಮ ಇಟ್ಟುಕೊಂಡಿದ್ದಾರೆ. ನಾನೂ ಒಂದೆರಡು ಸಾರಿ ಪರಿಚಯಸ್ಥರು ಅಲ್ಲಿ ಮಾಡಿದ್ದ ಮದುವೆಗಳಿಗೆ ಹೋಗಿದ್ದೆ. ಅವರ ಬಾಯಿಂದಲೇ ವಿವರಗಳನ್ನು ಕೇಳಿದ್ದೇನೆ.’ ಎಂದರು ರಾಮಣ್ಣ.
“ಹಾಗಾದರೆ ಅವರಿಗೇ ಒಪ್ಪಿಸಿಬಿಡೋಣ. ನಿಶ್ಚಿತಾರ್ಥಕ್ಕೆ ಬರುವ ಮೊದಲೇ ಕೇಶವಯ್ಯನವರಿಗೆ ಹೇಳಿ ಖಚಿತಪಡಿಸಿಕೊಂಡು ಬಿಡೋಣ. ಹೇಗಿದ್ದರೂ ಸ್ಥಳವನ್ನು ಆ ದಿನ ತಿಳಿಸಬೇಕಲ್ಲಾ” ಎಂದರು ಭಟ್ಟರು.
“ಇದನ್ನೆಲ್ಲಾ ನನಗೆ ಕೇಶವಣ್ಣನವರು ಹೇಳಿದ್ದರು. ಈಗ ಭಾಗ್ಯಳ ಮದುವೆಯ ದಿನಾಂಕದಲ್ಲಿ ಆ ಛತ್ರ ಖಾಲಿಯಿರುವ ವಿಚಾರವನ್ನೂ ಅವರೇ ಹೇಳಿದರು. ಜೋಯಿಸರಿಗೂ ಅಲ್ಲಿಯೇ ಮದುವೆ ಇಟ್ಟುಕೊಳ್ಳುವುದು ಸಂತಸದ ವಿಷಯವಾಗಿದೆ. ಆದರೆ ನಿರ್ಧಾರವನ್ನು ನಮಗೇ ಬಿಟ್ಟಿದ್ದಾರೆ. ಈಗ ನಿಮ್ಮ ಬಾಯಿಂದ ವಿಷಯ ಕೇಳಿದ ಮೇಲೆ ನಿರಾತಂಕವಾಯ್ತು ಮಾವ. ನನ್ನ ಮಗಳ ಮದುವೆ ಧಾವಂತವಿಲ್ಲದೆ ಯಾವುದೇ ಲೋಪವಿಲ್ಲದೆ ಮಾಡಬಹುದು.’ ಎಂದಳು ಲಕ್ಷ್ಮಿ.
ಹೀಗೇ ಅದು ಇದೂ ಮಾತನಾಡುತ್ತಾ ದಾರಿಸವೆದಿದ್ದೇ ತಿಳಿಯಲಿಲ್ಲ. “ಅರೇ ನಮ್ಮ ಮನೆಯ ತಿರುವು ಬಂದೇಬಿಟ್ಟಿತು.” ಎಂದು ಉದ್ಗರಿಸಿದರು.
“ಲಕ್ಷ್ಮಿ ನಮ್ಮ ಭಟ್ಟರಿಗೆ ವಯಸ್ಸಾದರೂ ಮಕ್ಕಳಂತೆ ಮನಸ್ಸು. ಎಷ್ಟು ಉತ್ಸಾಹದಿಂದ ಮನೆಯ ತಿರುವು ಸಿಕ್ಕಿತೆಂದು ಹೇಳುತ್ತಿದ್ದಾರೆ” ಎಂದು ಚಟಾಕಿ ಹಾರಿಸುತ್ತಾ ವ್ಯಾನನ್ನು ಮನೆಯ ಮುಂದೆ ನಿಲ್ಲಿಸಿದರು ರಾಮಣ್ಣ. ದಂಪತಿಗಳಿಬ್ಬರೂ ವ್ಯಾನಿನಿಂದ ಕೆಳಗಿಳಿದು ಗಾಡಿಯ ಬಾಗಿಲನ್ನು ಭದ್ರಪಡಿಸಿ ಮನೆಯತ್ತ ನಡೆದಿದ್ದ ಭಟ್ಟರನ್ನು ಲಕ್ಷ್ಮಿ ಹಿಂಬಾಲಿಸಿದಳು.
ಅಪ್ಪ, ಅಮ್ಮ ಮನೆಗೆ ಹಿಂದಿರುಗುವಷ್ಟರಲ್ಲಿ ಅಡುಗೆ ಕೈಂಕರ್ಯ ಮುಗಿಸಿ ಕೈಕಾಲು ಮುಖ ತೊಳೆದು, ಸಂಜೆಯ ಅಪ್ಪನ ಪೂಜೆಗೆ ಅಣಿಮಾಡಿಟ್ಟು, ದೇವರ ಕೋಣೆಯಲ್ಲಿ ದೀಪಹಚ್ಚಿ ಭಜನೆಗೆ ಸಿದ್ಧರಾಗೋಣ ಎಂದಿದ್ದ ಅಕ್ಕನ ಆಣತಿಯಂತೆ ಎಲ್ಲರೂ ಒಂದೊಂದು ಕೆಲಸ ಹಂಚಿಕೊಂಡು ಮಾಡುತ್ತಿದ್ದವರಿಗೆ ಮನೆಯ ಮುಂದೆ ವಾಹನವೊಂದು ನಿಂತ ಸದ್ದಾಯಿತು. ಅದನ್ನು ಮೊದಲು ಆಲಿಸಿದ ಭಾವನಾ “ಅಕ್ಕಾ, ಬಸವ ಬಂದಾಂತ ಕಾಣಿಸುತ್ತೆ. ಅವನಿಗೆ ಅಪ್ಪ ಬಂದಮೇಲೆ ಬರಲು ಹೇಳುತ್ತೇನೆ” ಎಂದಳು.
“ಹೂ..ಹಾಗೇ ಮಾಡು. ಬಾಗಿಲು ತೆರೆಯಬೇಡ. ಕಿಟಕಿಯಿಂದಲೇ ಹೇಳಿಕಳುಹಿಸು” ಎಂದಳು ಭಾಗ್ಯ.
ಸರಿ ಎಂದು ಮನೆಯ ಮುಂಬಾಗಿಲ ಹತ್ತಿರ ಬರುವಷ್ಟರಲ್ಲಿ ಹೊರಗಿನಿಂದ ಅಮ್ಮನ ಕರೆ ಕೇಳಿಸಿತ್ತು.
“ಅರೇ ! ಅಮ್ಮನ ಧ್ವನಿ, ಓಹೋ ಅವರೇ ಹಿಂತಿರುಗಿ ಬಂದರೆಂದು ಕಾಣುತ್ತದೆ” ಎಂದು ಕಿಟಕಿಯಿಂದ ಹಣಿಕಿಹಾಕಿದಳು ಭಾವನಾ.
ಅಪ್ಪ, ಅಮ್ಮನ ಜೊತೆಯಲ್ಲಿ ನಿಂತಿದ್ದ ರಾಮಣ್ಣನವರನ್ನು ನೋಡಿ ಆನಂದದಿಂದ “ಅಕ್ಕಾ ಬೇಗ ಬಾ, ರಾಮಣ್ಣ ತಾತ ಬಂದಿದ್ದಾರೆ” ಎಂದು ಕೂಗಿ ಹೇಳುತ್ತಾ ಬಾಗಿಲು ತೆರೆದಳು.
ತಂಗಿಯ ಕರೆ ಅಡುಗೆ ಮನೆಯಲ್ಲಿದ್ದ ಭಾಗ್ಯಳಿಗೆ ಕೇಳಿಸಿತು. ಕೈಯಲ್ಲಿದ್ದ ಸೌಟನ್ನು ಅಲ್ಲಿಯೇ ಕಟ್ಟೆಯ ಮೇಲಿಟ್ಟು ಸೊಂಟಕ್ಕೆ ಸಿಗಿಸಿದ್ದ ಲಂಗವನ್ನು ಕೆಳಗಿಳಿಸಿ ಧಾವಣಿಯನ್ನು ಸರಿಪಡಿಸಿಕೊಳ್ಳುತ್ತಾ ಹೊರಬಂದಳು. ದೇವರ ಕೋಣೆಯಲ್ಲಿದ್ದ ಪುಟ್ಟ ಸೋದರಿಯರಾದ ವಾಣಿ, ವೀಣಾ ಓಡಿಬಂದರು. ಮಕ್ಕಳ ಉತ್ಸಾಹವನ್ನು ಕಂಡ ರಾಮಣ್ಣನವರಿಗೆ ಪ್ರೀತಿ ಉಕ್ಕಿಬಂತು. ಅಕ್ಕರೆಯಿಂದ ಚಿಕ್ಕವರಿಬ್ಬರ ಕೈ ಹಿಡಿದುಕೊಂಡು ಕೈಕಾಲು ತೊಳೆದುಕೊಳ್ಳಲು ಹಿತ್ತಲಿಗೆ ನಡೆದರು. ಹಿಂದಿರುಗಿದವರಿಗೆ ಟವೆಲ್ಲು ಹಿಡಿದು ನಿಂತಿದ್ದ ಭಾಗ್ಯಳನ್ನು ನೋಡಿದರು. ಇಷ್ಟರಲ್ಲೇ ಹಸೆಮಣೆ ಏರುವ ಹುಡುಗಿ. ಓದಿ ಶಿಕ್ಷಕಿಯಾಗಬೇಕೆಂಬ ಆಸೆ ಹೊತ್ತಿದ್ದ ಹುಡುಗಿ. ಅನಿವಾರ್ಯವಾಗಿ ಪರಿಸ್ಥಿತಿಗೆ ತಲೆಬಾಗಿದ್ದಾಳೆ. ತನ್ನ ಸೊದರ ಸೊಸೆ ಲಕ್ಷ್ಮಿ ಈ ಬಗ್ಗೆ ಪೇಚಾಡಿಕೊಂಡಿದ್ದು ನೆನಪಾಯತು. ಅವಳೂ ನಿಸ್ಸಹಾಯಕಳು. ನಾಲ್ಕು ಮಕ್ಕಳ ಜವಾಬ್ದಾರಿ. ಘನವಾದ ಮನೆ ಸಿಕ್ಕಿದೆ. ಹುಡುಗನೂ ಯೋಗ್ಯ. ಅವನೇನಾದರೂ ಮನಸ್ಸು ಮಾಡಿದರೆ ! ಹೂಂ ನನ್ನದು ಎಂತಹ ಹುಚ್ಚು ಆಲೋಚನೆ. ನಮ್ಮಲ್ಲಿ ಅದೂ ಮದುವೆಯಾದ ಹೆಣ್ಣುಮಕ್ಕಳನ್ನು ..ಹೆ..ಹೆ.
“ತಾತಾ, ಇದೇನು ಗರಬಡಿದವರಂತೆ ನನ್ನನ್ನೇ ನೋಡುತ್ತಾ ನಿಂತುಬಿಟ್ಟಿರಿ. ತೊಗೊಳ್ಳಿ ಕೈಕಾಲು ಒರೆಸಿಕೊಂಡು ಬನ್ನಿ. ಅಜ್ಜಿ ಚೆನ್ನಾಗಿದ್ದಾರಾ?” ಎಂದು ಕೇಳುತ್ತಾ ಕೈಯಲ್ಲಿದ್ದ ಟವೆಲ್ಲನ್ನು ರಾಮಣ್ಣನವರಿಗಿತ್ತಳು. ಮಕ್ಕಳೊಡನೆ ಸ್ವಲ್ಪ ಹೊತ್ತು ಹರಟೆ ಹೊಡೆದರು. ಬೇಡವೆಂದರೂ ಭಾಗ್ಯಳು ಮಾಡಿಕೊಟ್ಟ ಕಷಾಯವನ್ನು ಕುಡಿದರು. “ಲಕ್ಷ್ಮಿ ಭಾನುವಾರದ ಹೊತ್ತಿಗೆ ಮತ್ತೊಮ್ಮೆ ಬರುತ್ತೇನೆ” ಎಂದು ಹೇಳುತ್ತಾ ಹೊರಡಲು ಸಿದ್ಧರಾದರು.
“ಹೊರಟೆಬಿಟ್ಟಿರಾ? ಊಟ ಮುಗಿಸಿಕೊಂಡು ಹೋಗಬಹುದಿತ್ತು.” ಎನ್ನುತ್ತಾ ದೇವರ ಮನೆಯಿಂದ ಹೊರಬಂದ ಭಟ್ಟರನ್ನು ನೋಡಿದರು ರಾಮಣ್ಣ. “ಪರವಾಗಿಲ್ಲ ನನ್ನ ಸೋದರಸೊಸೆ, ಸೋಮಾರಿ, ಬೇಜವಾಬ್ದಾರಿ ಎಂದೆಲ್ಲ ಅಭಿದಾನ ಹೊತ್ತಿದ್ದ ಗಂಡನನ್ನು ಚೆನ್ನಾಗಿಯೇ ಪಳಗಿಸಿ ದಾರಿಗೆ ತಂದಿದ್ದಾಳೆಂದು ಕಾಣಿಸುತ್ತದೆ. ಮನೆಯ ಹಿರಿಯರು ಬೇಗ ನಿರ್ಗಮಿಸಿದರೆಂಬ ನೋವಿದ್ದರೂ ಇದು ಖುಷಿ ಕೊಡುವ ಸಂಗತಿಯೇ. ಅವರುಗಳಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ” ಎಂದು ಮನಸ್ಸಿನಲ್ಲೇ ವಿಚಾರ ಮೂಡಿತು.
ಅಷ್ಟರಲ್ಲಿ ತನ್ನ ಅಪ್ಪ, ತಾತನನ್ನು ನೋಡಿ ಅಲ್ಲಿಯೇ ನಿಂತಿದ್ದ ಭಾವನಾ “ಅಪ್ಪಾ ರಾಮುತಾತ ರಾತ್ರಿಹೊತ್ತು ಊಟ ಮಾಡೋಲ್ಲ. ನೀವು ಮರೆತುಬಿಟ್ಟಿದ್ದೀರಿ. ಇಲ್ಲದಿದ್ದರೆ ನಾನೇ ಒತ್ತಾಯ ಮಾಡುತ್ತಿದ್ದೆ. ಈ ಹೊತ್ತಿನ ಅಡುಗೆ ನಮ್ಮಕ್ಕನ ಕೈಯಿಂದು ಗೊತ್ತಾ” ಎಂದಳು.
“ಓ ! ಹೌದಲ್ಲವಾ ಮಗಳೇ, ಕ್ಷಮಿಸಿ ರಾಮಣ್ಣಭಾವ” ಎಂದರು ಭಟ್ಟರು.
“ಇಷ್ಟಕ್ಕೆಲ್ಲ ಕ್ಷಮೆ ಯಾತಕ್ಕೆ, ನಾನಿನ್ನು ಬರುತ್ತೇನೆ” ಎಂದು ಹೇಳಿ ಹೊರ ನಡೆದರು ರಾಮಣ್ಣ.
ತಮ್ಮ ತಾತನನ್ನು ಬೀಳ್ಕೊಟ್ಟು ಬಂದ ಮಕ್ಕಳು ಹೆತ್ತವರೊಡಗೂಡಿ ಸಂಜೆಯ ಭಜನೆ ಕಾರ್ಯಕ್ರಮ ಮಾಡಿ ಮುಗಿಸಿದರು. ಇಷ್ಟೆಲ್ಲ ಆದರೂ ಬಸವನ ಆಗಮನದ ಸುಳಿವು ಕಾಣಿಸದೆ ಭಟ್ಟರು “ಲಕ್ಷ್ಮೀ ಇಷ್ಟೊತ್ತಾದರೂ ಬಸವನ ಸುಳಿವೇ ಇಲ್ಲ. ಕೆಲಸವಿದ್ದಾಗಲೇ ನಮ್ಮನ್ನು ಕಾಯಿಸುತ್ತಾನೆ ಪುಣ್ಯಾತ್ಮ” ಎಂದು ಗೊಣಗಿದರು.
“ರೀ..ಭಟ್ಟರೇ ಈಗಿನ್ನೂ ಏಳುಗಂಟೆ. ಅವನೇನಿದ್ದರೂ ಏಳೂವರೆ, ಎಂಟುಗಂಟೆ, ಕೆಲವೊಮ್ಮೆ ಒಂಬತ್ತಕ್ಕೂ ಬರುತ್ತಾನೆ ಬಿಡಿ. ಅವನ ಗಾಡಿಗೆ ಬಾಡಿಗೆ ಗಿರಾಕಿಗಳು ಸಿಕ್ಕ ಹಾಗೆ ಬರುತ್ತಾನೆ. ಮಾವ ತಮ್ಮ ಗಾಡಿಯಲ್ಲಿ ಕರೆದುಕೊಂಡು ಬರದಿದ್ದರೆ ನಾವೂ ಮನೆ ತಲುಪುವುದು ತಡವಾಗುತ್ತಿರಲಿಲ್ಲವೇ” ಎಂದು ಸಮಝಾಯಿಷಿ ಕೊಟ್ಟಳು ಲಕ್ಷ್ಮಿ.
“ಅದೂ ಸರೀನೆ” ಎನ್ನುವಷ್ಟರಲ್ಲಿ “ಭಟ್ಟರೇ” ಎಂಬ ಕೂಗು ಹೊರಗಿನಿಂದ ಕೇಳಿಬಂತು. ಬಸವನಿಗೆ ನೂರು ವರ್ಷ ಆಯುಸ್ಸು ಎಂದಳು ಲಕ್ಷ್ಮಿ.
“ಲಕ್ಷ್ಮೀ ನಿನೂ ಬಾ, ಏನೇನು ಮಾಡಬೇಕೆಂದು ನನಗಿಂತ ನಿನಗೇ ಚೆನ್ನಾಗಿ ಗೊತ್ತು. ಅಲ್ಲದೆ ಅವನಿಗೆ ತಿಳಿಸಿ ಹೇಳುವ ರೀತಿಯೂ ಸ್ಪಷ್ಟವಾಗಿರುತ್ತೆ” ಎಂದರು ಭಟ್ಟರು.
“ಜಾಣಭಟ್ಟರು, ಏನಾದರೂ ಹೆಚ್ಚುಕಡಿಮೆ ಆದರೆ ಸುಲಭವಾಗಿ ನನ್ನ ಮೇಲೇ ಒರಗಿಸುವ ಹುನ್ನರಾನಾ? ಇರಲಿ” ಎಂದು ನಗೆ ಚಟಾಕಿ ಹಾರಿಸುತ್ತಾ ಮನೆಯ ಮುಂಭಾಗಿಲನ್ನು ತೆರೆದಳು ಲಕ್ಷ್ಮಿ.
“ಓ ಭಟ್ಟರು ಊಟಕ್ಕೆ ಕುಳಿತುಬಿಟ್ಟಿದ್ದಾರಾ? ಲಕ್ಷ್ಮಮ್ಮ” ಎಂದ ಬಸವ.
“ಬಸವಾ ಎಣ್ಣೆಗಿಣ್ಣೆ ಹೊಡೆದು ಬಂದಿದ್ದೀಯಾ ಹೆಂಗೆ, ನಾನಿಲ್ಲೇ ಗರುಡಗಂಬದ ಥರ ನಿಂತಿದ್ದೀನಿ ನಿನಗೆ ಕಾಣಿಸಲಿಲ್ಲವಾ. ಅದೂ ಕಾಣಲಾರದಷ್ಟು ಸಣ್ಣಗಿದ್ದೀನಾ?” ಎಂದು ಕಿಚಾಯಿಸಿದರು ಭಟ್ಟರು.
“ಏ ತಗಳ್ಳೀ, ಸಾಮಾನ್ಯವಾಗಿ ರಾತ್ರಿ ಬೇಗ ಊಟ ಮಾಡ್ತೀರಾ, ಅದಕ್ಕೇ ಹೇಳ್ದೆ. ಅಮ್ಮೋರ ಹಿಂದೆ ನಿಂತಿದ್ದರಿಂದ ಸರಿಯಾಗಿ ನೋಡ್ನಿಲ್ಲ. ಹಾ ಅದೇನೋ ಎಣ್ಣೆಗಿಣ್ಣೆ ಅಂದ್ರಲ್ಲಾ ಇಷ್ಟು ವರ್ಷದಲ್ಲಿ ಎಂದಾದರೂ ಹಾಗೆ ಬಂದಿದ್ದೀನಾ?” ಎಂದ ಬಸವ.
“ಬಿಡು ಬಸವ, ಸುಮ್ಮನೆ ಚೇಷ್ಟೆ ಮಾಡಿದೆವು. ನಾವೀಗ ನಿನಗೆ ಒಂದು ಮುಖ್ಯ ಜವಾಬ್ದಾರಿ ವಹಿಸುತ್ತಿದ್ದೇವೆ. ಅದೂ ನಾಳೇನೆ ಮಾಡಿ ಮುಗಿಸಿಕೊಡಬೇಕು. ಇಲ್ಲಾ ಅನ್ನಬೇಡ.” ಅಂದಳು ಲಕ್ಷ್ಮಿ.
“ಅದೇನಂತ ಹೇಳ್ರವ್ವಾ, ಏನೇ ಇದ್ರೂ ನಾಳೇನೇ ಮಾಡಿಕೊಡ್ತೀವಿ” ಎಂದ ಬಸವ.
ಲಕ್ಷ್ಮಿ ಬರುವ ಭಾನುವಾರದ ಸಮಾರಂಭದ ಬಗ್ಗೆ ಸಂಕ್ಷಿಪ್ತವಾಗಿ ಅವನಿಗೆ ವಿವರಿಸಿದಳು.
“ಹಾಗೋ, ಇನ್ನೂ ನೆನ್ನೆಮೊನ್ನೆ ಹೇಳಿಕಳುಹಿಸಿದ ಹಾಗಿತ್ತು. ಹೀಗೇ ವಿಷಯ ಕಿವಿಗೆ ಬಿದ್ದಿತ್ತು. ಆಗಲೇ ಪತ್ರಿಕೆ ಬರೆಸುವವರೆಗೆ ಬಂದುಬಿಡ್ತಾ. ಒಳ್ಳೇದಾಯ್ತು ಬಿಡಿ. ಬೆಳಗ್ಗೇನೇ ಆ ರಂಗನ್ನ ಕರೆದುಕೊಂಡು ಬಂದು ಇಡೀ ಮನೇನ ಲಕಲಕ ಅಂತ ಹೊಳೀಬೇಕು ಹಂಗೆ ಮಾಡಿಕೊಡ್ತೀವಿ” ಎಂದ ಬಸವ.
“ಇಡೀಮನೆ ಬೇಡವೋ ಮಾರಾಯ, ಹೊರಗಿನ ಕೋಣೆಗಳು, ಹಿತ್ತಲು ಅಷ್ಟುಸಾಕು. ಆಮೇಲೆ ಸುಣ್ಣಬಣ್ಣ ಮಾಡುವಾಗ ಎಲ್ಲವನ್ನೂ ಮಾಡಿಕೊಡುವೆಯಂತೆ. ಈಗ ಮನೆಯೊಳಗಿನ ಧೂಳುದುಂಬು ತೆಗೆದು, ಹಿತ್ತಲಲ್ಲಿ ಅತಿಯಾಗಿ ಬೆಳೆದಿರೋ ಗಿಡಗಳನ್ನು ಸವರಿಕೊಡು ಸಾಕು” ಎಂದಳು ಲಕ್ಷ್ಮಿ.
“ಅಷ್ಟೇನಾ? ಎಷ್ಟು ಹೊತ್ತಿಗೆ ಬರಲಿ” ಎಂದು ಕೇಳಿದ ಬಸವ.
ಹೊರಗಿನ ಕೋಣೆಗಳು ಮತ್ತು ಹಿತ್ತಲು ನಮಗೇನೂ ತೊಂದರೆಯಾಗೊಲ್ಲ. ಬೆಳಗ್ಗೆ ಆದಷ್ಟು ಬೇಗನೇ ಬಾ. ಎಲ್ಲ ಕೆಲಸ ಮುಗಿಸಿಕೊಡು. ಅಮೇಲೆ ಎರಡು ಬಕೆಟ್ ಕಾಯಿಸಿದ ನೀರು ಕೊಡುತ್ತೇನೆ. ಸ್ನಾನ ಮುಗಿಸು, ಊಟ ಮಾಡಿಕೊಂಡು ಹೋಗುವಿಯಂತೆ” ಎಂದು ಹೇಳಿದಳು.
“ಅವ್ವಾ ತಪ್ಪು ತಿಳಿಯಬೇಡಿ ಊಟಕ್ಕೆ ಹಾಕ್ತೀನಿ ಅಂದ್ರಿ. ನಾಳೆ ಏನು ಎಸರು ಮಾಡ್ತೀರಾ?” ಎಂದು ಕೇಳಿದ ಬಸವ.
“ಅದೇನು ಎಸರೋ, ಹುಳಿ ಅನ್ನು, ತಿಳಿಸಾರು ಅನ್ನು, ಕೂಟು, ಗೊಜ್ಜು, ತೊವ್ವೆ.”. ಭಟ್ಟರ ಮಾತನ್ನು ತಡೆದು “ಭಟ್ಟರೇ ನಿಲ್ಲಸಿ, ನನಗೇನು ರೂಢಿಯಿದ್ದಂತೆ ಹೇಳಿದೆ. ಅದೇನೋ ಕೂಟು ಅಂದ್ರಲ್ಲಾ ಅದು ವೈನಾಗಿರ್‍ತದೆ. ಅದನ್ನು ಮಾಡಿಕೊಡಿ ಲಕ್ಷ್ಮಮ್ಮ. ಅದಕ್ಕೆ ರಾಗಿಮುದ್ದೆ ಇದ್ರೆ ಇನ್ನೂ ಮಸ್ತಾಗಿರ್‍ತದೆ. ಕೆಂಪಿಗೇಳ್ಬರ್‍ಲಾ ತಗೊಂಬರ್‍ತಾಳೆ” ಎಂದ ಬಸವ.
“ಲೇ ಸಾಕುಮಾಡೋ ನಿನ್ನ ಊಟದ ಪ್ರವರ. ಲಕ್ಷ್ಮೀಗೂ ಮುದ್ದೆ ಮಾಡೋಕೆ ಬರುತ್ತೇ. ಫಸ್ಟ್‌ಕ್ಲಾಸಾಗಿ ಮಾಡ್ತಾಳೆ. ತೆಪ್ಪಗೆ ಊಟಮಾಡು” ಎಂದರು ಭಟ್ಟರು.
“ಇಷ್ಟೇ ಕೆಲಸ ತಾನೇ, ಜೊತೆಗೆ ಯಾರೂ ಬೇಡ, ನಾನೊಬ್ಬನೇ ಮಾಡ್ತೀನಿ. ಆಯ್ತಾ ಬರಲಾ? ಓ ! ಮರ್‍ತೇಬಿಟ್ಟಿದ್ದೆ, ಆ ಮುಂಜಿಮನೆಯವರು ನಾಳೆ ಸಾಮಾನುಗಳನ್ನು ಹಿಂದಕ್ಕೆ ಕೊಡಬೇಕಿತ್ತಲ್ಲಾ. ನಾನೆಷ್ಟುಹೊತ್ತಿಗೆ ಬರ್‍ಲೀ ಅಂತ ಕೇಳೋಕೆ ಹೋಗಿದ್ದೆ. ಇನ್ನೂ ಒಂದಿನ ಇರಲಿ ಬಸಪ್ಪ ಎಂದುಹೇಳಿದರು. ಬಂದಿರೋರು ನೆಂಟರು ಇಲ್ಲೇ ಇದ್ದಾರೆ ಅಂತ ಕಾಣಿಸುತ್ತೆ. ಚಿಕ್ಕಮನೆ ಸಾಲದು. ನಮಗೇನು ಕಷ್ಟ, ಸರಿ ಅಂತ ಅಂದೆ. ಅದಕ್ಕವರು ಇನ್ನೂ ಸ್ವಲ್ಪ ದುಡ್ಡು ಕೊಟ್ಟು ಲೆಕ್ಕಕ್ಕೆ ಸೇರಿಸಿಕೊಳ್ಳಲು ಹೇಳಿದರು. ಇಕಾ ತಕ್ಕೊಳ್ಳಿ.” ಎಂದು ಜೇಬಿನಿಂದ ಕೆಲವು ನೋಟುಗಳನ್ನು ತೆಗೆದು ಭಟ್ಟರ ಕೈಗೆ ಕೊಟ್ಟನು.
ಮುದುರಿದ್ದ ಆ ನೋಟುಗಳನ್ನು ಸರಿಪಡಿಸಿ ಜೋಡಿಸುತ್ತಾ “ಲೇ ಬಸವಾ ನಾನು ನಿನಗೆಷ್ಟು ಸಾರಿ ಹೇಳಿದ್ದೀನಿ. ನೋಟುಗಳನ್ನು ಮುದುರದೆ ನೀಟಾಗಿಟ್ಟುಕೊಳ್ಳೋ ಅಂತ ಒಂದು ಪರ್ಸ್ ತೆಗೆದುಕೊಟ್ಟೆ. ಆದರೂ ಪ್ರಯೋಜನವಿಲ್ಲ. ಯಾವತ್ತು ಕಲಿತಿಯೋ.” ಎಂದರು ಭಟ್ಟರು.
“ಹೇಗಾದರೂ ಇರಲಿ ರಂಗನನ್ನೂ ಕರೆದುಕೊಂಡು ಬಾ. ನಿನಗೊಬ್ಬನಿಗೇ ಕಷ್ಟವಾಗುತ್ತೆ. ಅವನಿಗೂ ಊಟ ಹಾಕ್ತೇನೆ. ಚಿಂತೆಬೇಡ.” ಎಂದು ಮಾತುಕತೆಗೆ ಇತಿಶ್ರೀ ಹಾಡಿ ಬಸವನನ್ನು ಕಳುಹಿಸಿದರು. ಅವನು ಕೊಟ್ಟ ಹಣವನ್ನು ಕೈಯಲ್ಲಿ ಹಿಡಿದು ಭಟ್ಟರು ಗೊಣಗಾಡುತ್ತಲೇ ಮನೆಯೊಳಕ್ಕೆ ಬಂದರು. ಅದನ್ನು ಒಳಗಿರಿಸಲು ಹೋದರು. ಲಕ್ಷ್ಮಿಯು ಊಟಕ್ಕೆ ಸಿದ್ಧಪಡಿಸಲು ಒಳಗೆ ಹೋದಳು. ಊಟದ ಮನೆಯೊಳಗೆ ಬಂದವಳೇ ಸುತ್ತ ಕಣ್ಣಾಡಿಸಿ ಅಚ್ಚರಿಪಟ್ಟಳು. ಅದನ್ನು ಗಮನಿಸಿದ ಭಾವನಾ “ಅಮ್ಮಾ ನಾಳೆ ಬಸವನ ಹತ್ತಿರ ಕ್ಲೀನ್ ಮಾಡಿಸುವ ವಿಷಯ ತಿಳಿದ ಅಕ್ಕ ನಮ್ಮ ರೂಮಿನಲ್ಲಿದ್ದ ಪುಸ್ತಕ, ಬಟ್ಟೆ, ಇತರ ಸಾಮಾನುಗಳನ್ನು ಇಲ್ಲಿಗೆ ತರಿಸಿ ಜೋಡಿಸಿಟ್ಟಿದ್ದಾಳೆ. ಆತ ಕೆಲಸ ಮುಗಿಸಿಹೋದ ನಂತರ ಮತ್ತೆ ಅಲ್ಲಿಗೇ ಜೋಡಿಸಿಟ್ಟುಕೊಂಡು ಇಲ್ಲೆಲ್ಲಾ ಕ್ಲೀನ್ ಮಾಡಿಕೊಡುತ್ತೇವೆ. ಅಪ್ಪಾ ಎಲ್ಲಿ, ಊಟಕ್ಕೆ ಬಡಿಸೊಣವೇ?” ಎಂದು ಕೇಳಿದಳು ಭಾವನಾ. “ಹೂ ಅಪ್ಪನೂ ಬರುತ್ತಾರೆ. ತಟ್ಟೆಯಿಡಿ, ನೀರು ತುಂಬಿಡಿ” ಎಂದಳು ಲಕ್ಷ್ಮಿ. ಹಾಗೇ ತನ್ನ ಹಿರಿಯಮಗಳ ಮುಂದಾಲೋಚನೆಗೆ ತಲೆದೂಗಿದಳು. ಅಷ್ಟರಲ್ಲಿ ಭಟ್ಟರು ಬಂದರು. ಸರಿ ಎಲ್ಲರೂ ಊಟ ಮುಗಿಸಿ ನಾಳಿನ ಕೆಲಸ ಕಾರ್ಯಗಳ ಬಗ್ಗೆ ಯಾರ್‍ಯಾರು ಏನೇನು ಮಾಡಬೇಕೆಂದು ನಿರ್ಧರಿಸಿಕೊಂಡು ಮಲಗಲು ತಮ್ಮತಮ್ಮ ಕೋಣೆಗಳಿಗೆ ತೆರಳಿದರು.
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=35224
(ಮುಂದುವರಿಯುವುದು)
–ಬಿ.ಆರ್,ನಾಗರತ್ನ, ಮೈಸೂರು
ಬಾದಾಮಿ ಹಾಲು ಕುಡಿದಷ್ಟೇ ಹಿತವಾಯಿತು. ನಿಮ್ಮ ಬರವಣುಗೆ ಹೀಗೇ ಮುಂದುವರಿಯಲಿ
ಧನ್ಯವಾದಗಳು ಪೂರ್ಣಿಮಾ
ಪ್ರತಿ ಭಾಗವೂ ಮನಸಿಗೆ ಮುದ ನೀಡುವಂತಹ ಕಥೆ
ಧನ್ಯವಾದಗಳು ನಯನ ಮೇಡಂ
ಬಹಳ ಚೆನ್ನಾಗಿ ಹರಿದು ಬರುತ್ತಿರುವ ಸಾಮಾಜಿಕ ಕಥಾನಕ ಮನಗೆದ್ದಿದೆ… ರುಚಿಕಟ್ಟಾದ ಬಾದಾಮಿ ಹಾಲು ಪರಿಮಳ ಬೀರಿದೆ… ಸೊಗಸಾದ ನಿರೂಪಣೆ..ಧನ್ಯವಾದಗಳು, ನಾಗರತ್ನ ಮೇಡಂ.
ನಿಮ್ಮ ಪ್ರತಿಕ್ರಿಯೆ ಗೆ ನನ್ನ ಹೃತ್ಪರ್ವಕ ಧನ್ಯವಾದಗಳು ಶಂಕರಿ ಮೇಡಂ
ಸೊಗಸಾದ ನಿರೂಪಣೆಯ ಧಾರಾವಾಹಿ
ಧನ್ಯವಾದಗಳು ಕೃಷ್ಣ ಪ್ರಭಾ ಮೇಡಂ
ಓದುವ ಸುಖನೀಡುವುದರೊಂದಿಗೆ ರುಚಿ ರುಚಿಯಾದ, ಸ್ವಾದಿಷ್ಟಭರಿತ ಊಟ ತಿಂಡಿಗಳ ವರ್ಣನೆಗಳೂ ಕಾದಂಬರಿಯನ್ನು ಹೆಚ್ಚು ಆಪ್ಯಾಯಮಾನವಾಗಿಸಿದೆ. ಅಭಿನಂದನೆಗಳು.