ಸ್ಕಾಟ್‌ಲ್ಯಾಂಡಿನ ದಂತಕಥೆ: ‘ಬಾಬ್ಬಿ’ಯ ಸ್ವಾಮಿನಿಷ್ಠೆ

Share Button

ಹದಿನಾರು ವರ್ಷದ ಮೊಮ್ಮಗಳು, ದಿಶಾ, ನನ್ನ ಮುಂದೆ ಬಾಬ್ಬಿಯ ಬದುಕನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಕಣ್ಣೀರು ಹಾಕುತ್ತಿದ್ದಳು. ಸ್ಕಾಟ್‌ಲ್ಯಾಂಡಿನಲ್ಲಿ ನೆಲೆಸಿದ್ದ ಮಗನ ಕುಟುಂಬದ ಜೊತೆ, ಅಲ್ಲಿನ ರಾಜಧಾನಿಯಾದ ಎಡಿನ್‌ಬರೋಗೆ ಭೇಟಿಯಿತ್ತಾಗ ನಡೆದ ಘಟನೆಯಿದು. ದಿಶಾ -ಅಜ್ಜಿ, ಎಡಿನ್‌ಬರೋನಲ್ಲಿ ನೀನು ಮೊದಲಿಗೆ ನೋಡಬೇಕಾದ ಸ್ಥಳ ಬಾಬ್ಬಿಯ ಸ್ಮಾರಕ. ಪ್ರಾಣಿಪ್ರಿಯಳಾದ ಮೊಮ್ಮಗಳು, ಅವರಪ್ಪನಿಗೆ ಕಾರು ನಿಲ್ಲಿಸಲು ಹೇಳಿ, ನನ್ನನ್ನು ಕರೆದುಕೊಂಡು ಹೋಗಿ ಆ ಸ್ಮಾರಕದ ಮುಂದೆ ನಿಲ್ಲಿಸಿದಳು.

ಅದೊಂದು ಸುಂದರವಾದ ನೀರಿನ ಕಾರಂಜಿ, ಮಧ್ಯೆ ಎತ್ತರವಾದ ಪೀಠದಲ್ಲಿ ಒಂದು ಕಪ್ಪು ಗ್ರಾನೈಟ್ ಶಿಲೆಯಲ್ಲಿ ಕೆತ್ತಲ್ಪಟ್ಟ ಮುದ್ದಾದ ನಾಯಿಯ ಮೂರ್ತಿ. ದಿಶಾ, ಆ ನಾಯಿಯ ಮೂಗನ್ನು ಮುಟ್ಟಿ ಹಣೆಗೊತ್ತಿಕೊಂಡಳು. ಹಲವು ಪ್ರವಾಸಿಗರು ಹಾಗೆಯೇ ಮಾಡುತ್ತಿದ್ದರು. ನಾನು ಅಚ್ಚರಿಯಿಂದ ಅವಳನ್ನು ನೋಡಿದಾಗ, ಅವಳು – ಅದು ಅದೃಷ್ಟದ ಬಾಗಿಲನ್ನು ತೆರೆಯುವ ಕ್ರಿಯೆ ಎಂದು ಇಲ್ಲಿನ ಜನರು ನಂಬುತ್ತಾರೆ ಎಂದಳು.

ಅಜ್ಜಿ, ಬಾ ಇಲ್ಲಿ ಕುಳಿತುಕೋ. ನಾನು ನಿನಗೆ ಬಾಬ್ಬಿಯ ಕಥೆಯನ್ನು ಹೇಳುತ್ತೇನೆ ಕೇಳು. ಹಾ, ಬಾಬ್ಬಿಯ ಕಥೆಯನ್ನು ಬರೆಯಲು ಮರೆಯಬಾರದು ಎಂಬ ಸೂಚನೆಯನ್ನೂ ನೀಡಿದಳು. ಬಾಬ್ಬಿಯ ಮೂರ್ತಿಯ ಮುಂದೆ ಕೆತ್ತಲ್ಪಟ್ಟ ಸಾಲುಗಳನ್ನು ಓದಿ ಹೇಳಿದಳು – ಬಾಬ್ಬಿಯ ಸ್ವಾಮಿನಿಷ್ಠೆ, ಪ್ರಾಮಾಣಿಕತೆ ನಮಗೆಲ್ಲರಿಗೂ ದಾರಿ ದೀಪವಾಗಲಿ. ಇಂದಿಗೆ ನೂರೈವತ್ತು ವರ್ಷ ಕಳೆದರೂ ಬಾಬ್ಬಿಯು ಧ್ರುವ ನಕ್ಷತ್ರದಂತೆ ಮಿನುಗುತ್ತಲೇ ಇದೆ. ಬಾಬ್ಬಿಯನ್ನು ತನ್ನ ಸಂಗಾತಿಯಾಗಿ ಮಾಡಿಕೊಂಡಿದ್ದವನು ಜಾನ್ ಗ್ರೇ. ತೋಟದ ಮಾಲಿಯಾಗಿದ್ದ ಜಾನ್, ಕೆಲಸ ಹುಡುಕುತ್ತಾ, ತನ್ನ ಕುಟುಂಬದೊಂದಿಗೆ, ಸ್ಕಾಟ್‌ಲ್ಯಾಂಡಿನ ರಾಜಧಾನಿಯಾದ ಎಡಿನ್‌ಬರೋಕ್ಕೆ ಬರುತ್ತಾನೆ. ತೋಟಗಾರಿಕೆ ವಿಭಾಗದಲ್ಲಿ ಯಾವ ಕೆಲಸವೂ ಸಿಗದ ಕಾರಣ, ಪೊಲೀಸ್ ಇಲಾಖೆಯಲ್ಲಿ ರಾತ್ರಿ ಪಾಳಿಯ ಕಾವಲುಗಾರನಾಗಿ ಸೇರುತ್ತಾನೆ. ಒಂಟಿತನದ ಬೇಸರವನ್ನು ನೀಗಿಸಲು, ಸ್ಕೈ ಟೆರ್ರಿಯರ್ ಜಾತಿಯ ಒಂದು ನಾಯಿಮರಿಯನ್ನು ಸಾಕುತ್ತಾನೆ. ಬಾಬ್ಬಿಯೆಂಬ ಹೆಸರಿನಿಂದ ಕರೆಯುತ್ತಾನೆ. ಬಾಬ್ಬಿ ಜಾನ್‌ನನ್ನು ನೆರಳಿನಂತೆ ಹಿಂಬಾಲಿಸುತ್ತದೆ. ಜಾನ್ ಮನೆಯಲ್ಲಿರಲಿ, ಕೆಲಸದಲ್ಲಿರಲಿ, ಎಲ್ಲೇ ಇರಲಿ, ಬಾಬ್ಬಿ, ಅಲ್ಲಿ ಹಾಜರ್. ತನ್ನ ಯಜಮಾನನ ಜೊತೆಗೇ ಬಾಬ್ಬಿಯ ಊಟ, ಆಟ, ವಿಶ್ರಾಂತಿ ಎಲ್ಲವೂ. ಚಳಿಯಿರಲಿ, ಹಿಮಪಾತವಾಗುತ್ತಿರಲಿ ಬಾಬ್ಬಿ ತನ್ನ ಯಜಮಾನನನ್ನು ಒಂದರೆಘಳಿಗೆಯೂ ಬಿಟ್ಟು ಹೋಗುತ್ತಿರಲಿಲ್ಲ. ಜಾನ್ ಎಂದು ಕೂಗಿದರೆ ಬಾಬ್ಬಿ ಓಡಿಬರುತ್ತಿತ್ತು, ಬಾಬ್ಬಿ ಎಂದಾಕ್ಷಣ ಜಾನ್ ಧಾವಿಸಿ ಬರುತ್ತಿದ್ದ. ಎರಡು ದೇಹ, ಒಂದು ಆತ್ಮದ ಹಾಗಿದ್ದರು ಇಬ್ಬರೂ. ಆ ನಗರದ ಜನರು ಇವರಿಬ್ಬರ ಅಪರೂಪದ ಜೋಡಿಯನ್ನು ಕಂಡು ವಿಸ್ಮಿತರಾಗುತ್ತಿದ್ದರು.

ದುರದೃಷ್ಟವಶಾತ್, ರಾತ್ರಿಯ ಚಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಾನ್‌ನ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತದೆ. ಜಾನ್ ಕ್ಷಯ ರೋಗಕ್ಕೆ ತುತ್ತಾಗುವನು. ಅವನ ಖಾಯಿಲೆಗೆ ಇನ್ನೂ ಔಷಧಿಯನ್ನು ಕಂಡು ಹಿಡಿದಿರಲಿಲ್ಲ. ಫೆಬ್ರವರಿ ಹದಿನೈದು, 1858 ರಂದು, ಜಾನ್ ಇಹಲೋಕವನ್ನು ತ್ಯಜಿಸಿದನು. ದಿನವಿಡೀ, ಬಾಬ್ಬಿ ದುಃಖದಿಂದ ಊಳಿಡುತ್ತಿತ್ತು. ನಿದ್ರಾಹಾರ ತೊರೆದು, ಯಜಮಾನನನ್ನು ಮಣ್ಣು ಮಾಡುವವರೆಗೂ ಪಕ್ಕದಲ್ಲೇ ಕುಳಿತಿತ್ತು. ಅಂದಿನಿಂದ ಬಾಬ್ಬಿಯ ವಾಸ ಯಜಮಾನನ ಸಮಾಧಿಯ ಪಕ್ಕದಲ್ಲೇ. ಆ ಸ್ಮಶಾನದ ಕಾವಲುಗಾರ, ಆ ನಾಯಿಯನ್ನು ಓಡಿಸಲು ಹಲವು ಬಾರಿ ಪ್ರಯತ್ನಿಸಿದರೂ, ಬಾಬ್ಬಿ ಅಲ್ಲಿಂದ ಅಲ್ಲಾಡಲಿಲ್ಲ. ಚಳಿಗಾಲದಲ್ಲಿ, ಎಷ್ಟೇ ಹಿಮಪಾತವಾಗುತ್ತಿದ್ದರೂ, ಅದೇ ಸ್ಥಳದಲ್ಲಿ ಮಲಗಿರುತ್ತಿತ್ತು. ಕೊನೆಗೆ, ಕಾವಲುಗಾರನು, ಚಳಿ, ಮಳೆಯಿಂದ ನಾಯಿಯನ್ನು ರಕ್ಷಿಸಲು, ಒಂದು ಪುಟ್ಟ ಗೂಡನ್ನು ಅದೇ ಸ್ಥಳದಲ್ಲಿ ನಿರ್ಮಿಸಿದನು.

ಎಡಿನ್‌ಬರೋದ ಮೇಲಧಿಕಾರಿಯು, 1867 ರಲ್ಲಿ ಒಂದು ಆದೇಶ ಹೊರಡಿಸಿದನು. ನಾಯಿಗಳನ್ನು ಸಾಕಿದವರು, ಮುನ್ಸಿಪಾಲಿಟಿಯ ಕಡತಗಳಲ್ಲಿ ರಿಜಿಸ್ಟರ್ ಮಾಡಿಸಬೇಕು ಹಾಗೂ ಆ ನಂಬರ್ ನಮೂದಿಸಿದ ಬೆಲ್ಟನ್ನು ನಾಯಿಯ ಕೊರಳಿಗೆ ಹಾಕಿರಬೇಕು. ಇಲ್ಲವಾದರೆ, ಅಂತಹ ನಾಯಿಗಳನ್ನು ಬೀದಿ ನಾಯಿಗಳೆಂದು ಪರಿಗಣಿಸಿ ಕೊಲ್ಲಲಾಗುವುದು. ಪಾಪ, ಬಾಬ್ಬಿಗೆ ವಾರಸುದಾರರು ಯಾರೂ ಇರಲಿಲ್ಲವಲ್ಲ. ಅಗ ಬಾಬ್ಬಿಯ ಪಾಲಿಗೆ ದೇವರಂತೆ ಬಂದವನು – ಆ ನಗರದ ಶ್ರೀಮಂತ ವ್ಯಾಪಾರಿ ಸರ್ ವಿಲಿಯಮ್ ಚೇಂಬರ್‍ಸ್. ಗ್ರೇ ಫ್ರೈಯರ್‍ಸ್ ಬಾಬ್ಬಿ ಎಂಬ ಹೆಸರಿನೊಂದಿಗೆ, ಬಾಬ್ಬಿಯನ್ನು, ಆಫೀಸಿನಲ್ಲಿ ದಾಖಲಿಸಿ, ಒಂದು ಬೆಲ್ಟನ್ನು ಅದರ ಕೊರಳಿಗೆ ಹಾಕಿದನು.

ಒಂದಲ್ಲ, ಎರಡಲ್ಲ, .ಹದಿನಾಲ್ಕು ವರ್ಷ ಬಾಬ್ಬಿಯು ತನ್ನ ಯಜಮಾನನ ಸಂಗವನ್ನು ತೊರೆಯಲೇ ಇಲ್ಲ. ಮಧ್ಯಾನ್ಹ ಒಂದಕ್ಕೆ, ಚರ್ಚ್ ಗಂಟೆ ಮೊಳಗಿದಾಗ ಅಲ್ಲಿದ್ದ ಕಾವಲುಗಾರನೊಂದಿಗೆ, ತನ್ನ ಯಜಮಾನ ಹೋಗುತ್ತಿದ್ದ ಹೊಟೇಲಿಗೆ ಹೋಗುತ್ತಿತ್ತು. ಆ ಹೊಟೇಲಿನ ಮಾಲೀಕನು ನೀಡುತ್ತಿದ್ದ ಊಟವನ್ನು ಮಾಡಿ ಸೀದಾ ಸ್ಮಶಾನಕ್ಕೆ ಬರುತ್ತಿತ್ತು. ಬಾಬ್ಬಿಯನ್ನು ನೋಡಲೆಂದೇ ಸುತ್ತಮುತ್ತಲಿನ ಹಳ್ಳಿಯ ಜನರು ತಂಡೋಪತಂಡವಾಗಿ ಬರುತ್ತಿದ್ದರು. ಬಾಬ್ಬಿಯು, ಪರಲೋಕದಲ್ಲಿದ್ದ ತನ್ನ ಯಜಮಾನನನ್ನು ಸೇರಲು ಹಂಬಲಿಸುತ್ತಿತ್ತು. ಕೊನೆಗೂ ಅದರ ಬದುಕಿನ ಅಂತಿಮ ಆಸೆಯು ಪೂರ್ಣಗೊಂಡಿತ್ತು 1872 ರಲ್ಲಿ ಬಾಬ್ಬಿಯ ನಿಧನವಾಯಿತು. ಬಾಬ್ಬಿಯನ್ನು ಜಾನ್ ಸಮಾಧಿಯ ಪಕ್ಕದಲ್ಲೇ ಸಮಾಧಿ ಮಾಡಲಾಗಿದೆ. ಅಂದಿನಿಂದ ಸ್ಕಾಟ್‌ಲ್ಯಾಂಡಿನಲ್ಲಿ ಬಾಬ್ಬಿಯ ಸ್ವಾಮಿನಿಷ್ಠೆ ಮನೆ ಮಾತಾಯಿತು.

ಎಡಿನ್‌ಬರೋದಲ್ಲಿರುವ ‘ಬಾಬ್ಬಿ’ ಸ್ಮಾರಕ (ಚಿತ್ರಕೃಪೆ :ಅಂತರ್ಜಾಲ)

ಎಡಿನ್‌ಬರೋನ ಬ್ಯಾರೊನೆಸ್ ಆಗಿದ್ದ ಏಂಜಲಿಯಾ ಜಾರ್ಜಿಯಾನ ಬಾಬ್ಬಿಗಾಗಿ ಈ ಸ್ಮಾರಕವನ್ನು ನಿರ್ಮಿಸಿದಳು. ಸುಂದರವಾದ ಕಪ್ಪು ವರ್ಣದ ಗ್ರಾನೈಟ್ ಶಿಲೆಯ ನೀರಿನ ಕಾರಂಜಿ, ಮಧ್ಯೆ ಎತ್ತರವಾದ ಪೀಠದ ಮೇಲೆ ಬಾಬ್ಬಿಯ ಮೂರ್ತಿ. ಇದನ್ನು ಕೆತ್ತನೆ ಮಾಡಿದ ಕೀರ್ತಿ – ವಿಲಿಯಮ್ ಬ್ರೂಡಿ ಎಂಬ ಶಿಲ್ಪಿಯದು. ಆ ಮೂರ್ತಿಯ ಕೆಳಗೆ ಈ ಸಾಲುಗಳನ್ನು ಕೆತ್ತಲಾಗಿದೆ. ಮರಣ: 14 ಜನವರಿ 1872, ಈ ನಾಯಿಯ ಸ್ವಾಮಿನಿಷ್ಠೆ ಹಾಗೂ ಪ್ರಾಮಾಣಿಕತೆ ನಮಗೆಲ್ಲಾ ಆದರ್ಶವಾಗಲಿ. ಬಾಬ್ಬಿಯ ಕಥೆಯನ್ನು ಹೇಳುತ್ತಿದ್ದ ದಿಶಾ ಮೌನಕ್ಕೆ ಶರಣಾದಳು. ಕಣ್ಣಲ್ಲಿ ನೀರು ಜಿನುಗುತ್ತಿತ್ತು.

ಮನೆಗೆ ಮರಳಿದಾಗ, ದಿಶಾ, ಒಂದು ಕಾದಂಬರಿಯನ್ನು ಓದಲು ಕೊಟ್ಟಳು. ಅದು ಬಾಬ್ಬಿಯ ಬಗ್ಗೆ ಬರೆದದ್ದಾಗಿತ್ತು. ಸಂಜೆ ಒಂದು ಸಿನೆಮಾವನ್ನು ಟಿ.ವಿ. ಪರದೆಯ ಮೇಲೆ ತೋರಿಸಿದಳು. ಅದೂ ಬಾಬ್ಬಿಯ ಜೀವನ ಚರಿತ್ರೆಯನ್ನು ಆಧರಿಸಿ ನಿರ್ಮಿಸಲಾಗಿತ್ತು. ಹೀಗೆ ಬಾಬ್ಬಿಯು ತನ್ನ ಸ್ವಾಮಿನಿಷ್ಠೆಯಿಂದ ಜನಮಾನಸದಲ್ಲಿ ನೆಲೆಯಾಗಿತ್ತು. ನನಗೆ ವರ್ಡ್ಸ್‌ವರ್ತ್ ಕವಿಯ ‘ಫಿಡಿಲಿಟಿ’ ಎಂಬ ಕವನದ ನೆನಪಾಗಿತ್ತು. ಆ ಕವನದಲ್ಲಿಯೂ, ನಾಯಿಯೊಂದು ತನ್ನ ಯಜಮಾನನು ಪರ್ವತ ಪ್ರದೇಶವೊಂದರಲ್ಲಿ ಸಾವನ್ನಪ್ಪಿದಾಗ, ಅಲ್ಲಿಯೇ, ಮೂರು ತಿಂಗಳುಗಳ ಕಾಲ, ತನ್ನ ಒಡೆಯನ ಕಳೇಬರವನ್ನು ಕಾಯುತ್ತಿತ್ತು. ಕೊನೆಗೊಮ್ಮೆ, ಒಬ್ಬ ಕುರಿ ಕಾಯುವವನು, ನಾಯಿಯು ಊಳಿಡುವ ಶಬ್ದವನ್ನು ಕೇಳಿ, ಅಲ್ಲಿಗೆ ಹೋದ ಮೇಲೆಯೇ, ಅದು ತನ್ನ ಪ್ರಾಣವನ್ನು ತ್ಯಜಿಸಿತ್ತು.

ಅಂದು ರಾತ್ರಿಯೆಲ್ಲಾ ನನಗೆ ಬಾಬ್ಬಿಯದೇ ಕನಸು. ಜಾನ್‌ನ ಪ್ರೀತಿಯ ಗೆಳೆಯನಾಗಿದ್ದ ಬಾಬ್ಬಿ. ತನ್ನ ಧಣಿಯ ಸಂತೋಷ ಮತ್ತು ದುಃಖವನ್ನು ಹಂಚಿಕೊಂಡ ಆಪ್ತ ಮಿತ್ರ. ತನ್ನ ಒಡೆಯನಿಗೆ ಪ್ರಾಮಾಣಿಕವಾಗಿ, ನಿಷ್ಟೆಯಿಂದ, ತನ್ನ ಕೊನೆಯುಸಿರಿರುವರೆಗೂ ನಡೆದುಕೊಂಡ ಬಾಬ್ಬಿ. ಪ್ರೀತಿ, ವಿಶ್ವಾಸ, ಹಾಗೂ ಸ್ವಾಮಿನಿಷ್ಟೆಗೆ ಮತ್ತೊಂದು ಹೆಸರೇ ಬಾಬ್ಬಿ ಅಲ್ಲವೇ?

-ಡಾ.ಗಾಯತ್ರಿದೇವಿ ಸಜ್ಜನ್

11 Responses

  1. Anonymous says:

    i remember Japan’s hichiko’s story. it went to railway station every day expecting it’s master till its death. a memorial is there.

  2. ಕೆ. ರಮೇಶ್ says:

    ಸುಂದರ ನಿರೂಪಣೆ ಹಾಗೂ ಮನ ಕಲಕುವ ಕಥೆ. ಧನ್ಯವಾದಗಳು ಮೇಡಂ

  3. ಸ್ವಾಮಿ ನಿಷ್ಠೆ ಗೆ ಹೆಸರಾದ ನಾಯಿ ಬಾಬ್ಬಿ..ಕಥಾನಕ ಹೃದಯಸ್ಪರ್ಶಿ ಯಾಗಿತ್ತು. ಧನ್ಯವಾದಗಳು ಮೇಡಂ

  4. ನಯನ ಬಜಕೂಡ್ಲು says:

    Beautiful

  5. . ಶಂಕರಿ ಶರ್ಮ says:

    ಸ್ವಾಮಿನಿಷ್ಠ ಬಾಬ್ಬಿಯ ಮನಮಿಡಿಯುವ ಕಥೆಯು ಇಂತಹ ಹಲವಾರು ಶ್ವಾನಗಳ ಕಥೆಯೂ ಹೌದು. ಸೊಗಸಾದ ಸರಳ ನಿರೂಪಣೆ ಇಷ್ಟವಾಯ್ತು ಮೇಡಂ.

  6. ನಿಮ್ಮ ಅಭಿಮಾನದ ನುಡಿಗಳಿಗೆ ವಂದನೆಗಳು

  7. Dr Krishnaprabha M says:

    ಬಾಬ್ಬಿಯ ಕಥೆ ಓದಿ ಮನ ಕರಗಿತು. ಚಂದದ ನಿರೂಪಣೆ

  8. Padma Anand says:

    ದಿಶಾಳಿಗೆ ಮಾತು ಕೊಟ್ಟಂತೆ ಬಾಬ್ಬಿಯ ಕುರಿತಾದ ಮನ ಮಿಡಿಯುವ ಲೇಖನ ಕಟ್ಟಿಕೊಟ್ಟಿದ್ದೀರಿ. ಶ್ವಾನಗಳ ಸ್ವಾಮಿ ನಿಷ್ಟೆ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿರುತ್ತದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: