ಕಂಟಿ ಬದಿಯ ಒಂಟಿ ಹೂ!
ಆ ಊರಲ್ಲಿ ಇಲ್ಲಿಯ ತನಕ ನೆಂಟಸ್ಥನದ ವಿಚಾರವಾಗಿ ಯಾವುದೇ ರೀತಿಯ ಗೊಂದಲ ಇರಲಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆದು ಸುಖಾಂತ್ಯ ಕಾಣುತಿತ್ತು. ಆದರೆ ಆ ಒಬ್ಬ ಹುಡುಗಿಯ ವಿಷಯವಾಗಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಅವಳಿಗೆ ತಮ್ಮ ಮನೆಯ ಸೊಸೆಯಾಗಿ ಮಾಡಿಕೊಳ್ಳಲು ಅನೇಕರು ಬಯಸಿದ್ದರು. ಯಾಕೆಂದರೆ ಅವಳು ವಿದ್ಯಾವಂತೆ ಇಂದಿಲ್ಲ, ನಾಳೆ ಸರಕಾರಿ ನೌಕರಿ ಸಿಕ್ಕೇ ಸಿಗ್ತಾದೆ, ಅವಳಿಂದ ನಮ್ಮ ಮನೆತನಕ್ಕೆ ಅನುಕೂಲವಾಗುವದು ಅಂತ ಭಾವಿಸಿದ್ದರು.
ಯಾರು ಏನೇ ಬಯಸಲಿ ಆದರೆ ಅವಳಿಗೆ ನೆಂಟಸ್ಥನ ಇಷ್ಟವಿರಲಿಲ್ಲ. ನಾನು ಊರಲ್ಲಿ ಯಾರ ಜೊತೆಗೂ ಮದುವೆ ಆಗುವದಿಲ್ಲ ಅಂತ ಕಡ್ಡಿ ಮುರಿದಂತೆ ಹೇಳಿಬಿಟ್ಟಿದ್ದಳು. ಅವಳ ಮಾತು ಸಹಜವಾಗಿ ಅಸಮಾಧಾನ ಮೂಡಿಸಿತು. ಆ ಹುಡುಗಿ ಯಾರ ಮಾತೂ ಕೇಳೋದಿಲ್ಲ ನಾನೇ ಓದಿದವಳು ಅನ್ನುವ ಅಹಂಕಾರ ಅವಳಿಗೆ ಅಂತ ಮಾತಾಡಿಕೊಂಡರು.
ಊರ ನಿಯಮದ ಪ್ರಕಾರ ಯಾರೇ ವೈವಾಹಿಕ ಸಂಬಂಧ ಬೆಳೆಸಬೇಕೆಂದರೆ ಊರಲ್ಲೇ ಬೆಳೆಸಬೇಕು, ಅದು ಹೆಣ್ಣಿರಲಿ ಅಥವಾ ಗಂಡಿರಲಿ ಪರ ಊರವರ ಜೊತೆ ನೆಂಟಸ್ಥನ ಬೆಳೆಸುವದು ಊರ ನಿಯಮಕ್ಕೆ ವಿರುದ್ಧವಾಗಿತ್ತು. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿತ್ತು. ಈ ನಿಯಮ ಯಾರಾದರು ಉಲ್ಲಂಘಿಸಿದರೆ ಅವರಿಗೆ ಸಾಮಾಜಿಕ ಬಹಿಷ್ಕಾರ ಹಾಕಿ ಅವರ ಜೊತೆ ಯಾರೂ ವ್ಯವಹಾರ ಮಾಡುತಿರಲಿಲ್ಲ. ಇದು ಹುಡುಗಿಯ ಕುಟುಂಬದವರಿಗೆ ಸಂಕಷ್ಟ ತಂದೊಡ್ಡಿತು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮಗಳ ಬಗ್ಗೆ ಯಾವ ನಿರ್ಧಾರ ಕೈಗೊಳ್ಳೋದು ಯಾರ ಜೊತೆ ಮದುವೆ ಮಾಡೋದು? ಅಂತ ತಿಳಿಯದೆ ಗೊಂದಲದಲ್ಲಿ ಮುಳುಗಿದರು.
ನಮ್ಮ ಮಗಳು ವಿದ್ಯಾವಂತೆ ಬುದ್ದಿವಂತೆ ಇವಳಿಗೆ ತಕ್ಕ ವರ ಊರಲ್ಲಿ ಯಾರೂ ಇಲ್ಲ. ಇದ್ದಿದ್ದರೆ ನಾನೇ ಸ್ವ ಇಚ್ಛೆಯಿಂದ ಮದುವೆ ಮಾಡಿ ಕೊಡ್ತಿದ್ದೆ, ಏನು ಮಾಡೋದು ಅಂತ ವೀರಭದ್ರಪ್ಪ ಸಂಕಟ ಹೊರ ಹಾಕಿದ. ನಾವು ಮಗಳಿಗೆ ಜಾಸ್ತಿ ಓದಿಸಿದ್ದೇ ತಪ್ಪಾಯ್ತಾ? ಹೊರಗಿನ ನೆಂಟಸ್ಥನ ಮಾಡಿದರೆ ಊರವರ ವಿರೋಧ ಇನ್ನೂ ಊರ ನಿಯಮಕ್ಕೆ ಕಟ್ಟು ಬಿದ್ದರೆ ಮಗಳ ಇಚ್ಛೆಗೆ ವಿರುದ್ಧ . ಇದು ನಮಗೆಲ್ಲ, ಬಿಸಿತುಪ್ಪವಾಗಿ ಪರಿಣಮಿಸಿದೆ ಅಂತ ಸುಜಾತಾ ಕೂಡ ಗಂಡನ ಮಾತಿಗೆ ದನಿಗೂಡಿಸಿ ನೋವು ತೋಡಿಕೊಂಡಳು. ಇದು ನಮ್ಮ ತಂಗಿಯ ವಯಕ್ತಿಕ ವಿಷಯ ಯಾರೇನೇ ವಿರೋಧ ಮಾಡಲಿ, ನಾವು ಮಾತ್ರ ಊರಿನ ನೆಂಟಸ್ಥನ ಮಾಡೋದು ಬೇಡ ಮಾಡಿದರೆ ರಾತ್ರಿ ಕಂಡ ಬಾವಿ ಹಗಲು ಬಿದ್ದಂತಾಗುತ್ತದೆ. ಅಂತ ರವಿಶೇಖರ ಕೂಡ ಕೋಪ ತಾಪ ಹೊರ ಹಾಕಿದ.
‘ನನ್ನ ಮದುವೆ ವಿಷಯವಾಗಿ ಇಷ್ಟೆಲ್ಲಾ ಗೊಂದಲ ಮೂಡುತ್ತಿದೆ ಮನೆಯವರಿಗೆಲ್ಲ ನನ್ನದೇ ಚಿಂತೆ, ಇನ್ನೂ ಏನೇನು ಸಮಸ್ಯೆ ಎದುರಾಗುತ್ತವೆಯೊ’ ಏನೋ ಅನ್ನುವ ಆತಂಕ ರಾಜಶ್ರೀಗೆ ಕಾಡಿ ನೆಮ್ಮದಿ ಹಾಳು ಮಾಡಿತು.
‘ಯಾರು ಸುಮ್ಮನಿದ್ದರೂ ನಾನು ಸುಮ್ಮನಿರೋದಿಲ್ಲ . ಅ ಹುಡುಗಿಗೆ ನಮ್ಮ ಮನೆಯ ಸೊಸೆಯಾಗಿ ಮಾಡಿಕೊಳ್ಳುವ ತನಕ ನಾನು ವಿರಮಿಸುವದಿಲ್ಲ. ಅವಳು ಮದುವೆಯಾದರೆ ನನ್ನ ಮಗನ ಜೊತೆಗೇ ಆಗಬೇಕು, ಬೇರೆ ವರನ ಜೊತೆ ಹೇಗೆ ಆಗ್ತಾಳೆ ನಾನೂ ನೋಡ್ತೀನಿ’ ಅಂತ ಹತ್ತಿರದ ಸಂಬಂಧಿ ಉದ್ದಂಡಪ್ಪ ಉದ್ದಟತನದಿಂದ ಮಾತಾಡಿದ.
‘ರಾಜಶ್ರೀ ಸಾಮಾನ್ಯ ಹುಡುಗಿ ಅಲ್ಲ ಅನ್ನುವದು ನೆನಪಿರಲಿ ದೊಡ್ಡ ಬಸಪ್ಪನ ಮೊಮ್ಮಗಳು ಆತ ಊರಿನ ಮೂಲ ಪುರುಷ. ಆ ಮನೆತನದವರಿಗೆ ಎದಿರು ಹಾಕಿಕೊಳ್ಳುವದು ಸರಿಯಲ್ಲ’ ಅಂತ ಹೆಂಡತಿ ಎಚ್ಚರಿಕೆ ನೀಡಿದಳು.
‘ಯಾಕೆ ಸಾಧ್ಯವಿಲ್ಲ ನಿಯಮದ ಮುಂದೆ ಯಾರೂ ದೊಡ್ಡವರು ಸಣ್ಣವರು ಅಂತ ಇರೋದಿಲ್ಲ. ಮೊದಲಿನಿಂದಲೂ ನಿಯಮ ಊರಲ್ಲಿ ಪಾಲಿಸಿಕೊಂಡು ಬರಲಾಗುತ್ತಿದೆ ಇದು ನಾವು ಹೊಸದಾಗಿ ಮಾಡಿದ್ದಲ್ಲ ಅಂತ ತನ್ನ ವಾದ ಮುಂದುವರೆಸಿದ . ಅವಳಾಗೆ ನಮ್ಮ ಮನೆಯ ಸೊಸೆಯಾಗಿ ತಂದುಕೊಳ್ಳೋದು ಈ ಜನ್ಮದಲ್ಲಿ ಸಾಧ್ಯವಿಲ್ಲ ಸುಮ್ಮನೆ ಹಗಲು ಕನಸು ಕಾಣೋದು ಬೇಡ. ಅವಳು ವಿದ್ಯಾವಂತೆ ಬುದ್ದಿವಂತೆ ಮೇಲಾಗಿ ಹೂವಿನಂಥ ಹುಡುಗಿ , ನಿಮ್ಮ ಮಗ ಒಂದಕ್ಷರ ಕಲಿಯದ ನಿರಕ್ಛರಿ, ಇಬ್ಬರಿಗೂ ಸರಿಸಮ ಜೋಡಿ ಅಲ್ಲವೇ ಅಲ್ಲ’ ಅಂತ ಹೆಂಡತಿ ವಾಸ್ತವ ಹೇಳಲು ಮುಂದಾದಳು.
‘ಇದರಲ್ಲಿ ಸರಿಸಮ ವಿಷಯ ಬರೋದಿಲ್ಲ ಸುಮ್ಮನೆ ಕಣ್ಣು ಮುಚ್ಚಿ ಮದುವೆಗೆ ಒಪ್ಕೋಬೇಕು ಅಷ್ಟೇ ಬೇರೆ ನೆಂಟಸ್ಥನ ಮಾಡಲು ಬರೋದೇ ಇಲ್ಲ/ ವೀರಭದ್ರಪ್ಪ ಬೇರೆ ನೆಂಟಸ್ಥನ ಹ್ಯಾಂಗ ಮಾಡ್ತಾನೆ ನಾನೂ ನೋಡ್ತೀನಿ’ ಅಂತ ಖಡಕ್ಕಾಗಿ ಹೇಳಿದ.
‘ಎಲ್ಲದಕ್ಕೂ ಹುಡುಗಿಯ ಒಪ್ಪಿಗೆಯೇ ಮುಖ್ಯ.ಅವಳೇ ಒಲ್ಲೆ ಅಂದರೆ ಏನೂ ಮಾಡಲು ಸಾಧ್ಯವಿಲ್ಲ ‘ ಅಂತ ಹೇಳಿದಳು. ‘ಅವಳು ಹೇಳಿದಂತೆ ಇಲ್ಲಿ ನಡೆಯೋದಿಲ್ಲ ಊರ ನಿಯಮಕ್ಕೆ ಎಲ್ಲರೂ ತಲೆಬಾಗಬೇಕು ಎಲ್ಲರನ್ನೂ ಸೇರಿಸಿ ನ್ಯಾಯ ಪಂಚಾಯಿತಿ ಮಾಡತೀನಿ ‘ನ್ಯಾಯ ನಮ್ಮ ಕಡೆ ಇದೆ ಆಗಲೂ ಒಪ್ಪದಿದ್ದರೆ ಸಾಮಾಜಿಕ ಬಹಿಷ್ಕಾರಕ್ಕೆ ಹಾಕಸ್ತೀನಿ’ ಅಂತ ಗುಡುಗಿದ.
ಆ ಊರು ಕೇವಲ ಹತ್ತಿಪ್ಪತ್ತು ಮನೆಗಳಿಂದ ಕೂಡಿದ ಊರಾಗಿತ್ತು. ಇಲ್ಲಿ ಮೊದಲು ಯಾವ ಮೂಲಭೂತ ಸೌಲಭ್ಯಗಳು ಇರಲಿಲ್ಲ ಈಗ ಏನೋ ಸ್ವಲ್ಪ ಬದಲಾಗಿದೆ. ವಿದ್ಯುತ್ ಸಂಪರ್ಕ ಬಂದ ಮೇಲೆ ಸವಲತ್ತು ಜಾಸ್ತಿ ಆಗಿವೆ. ಬಾವಿಯಿಂದ ನೀರು ಹೊತ್ತು ತರೋದು ತಪ್ಪಿ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಊರ ನಿಯಮದ ಪ್ರಕಾರವೇ ಎಲ್ಲರೂ ನೆಂಟಸ್ಥನ ಮಾಡುತಿದ್ದರು. ಊರ ತುಂಬಾ ಕಳ್ಳುಬಳ್ಳಿ ಸಂಬಂಧದ ಬೇರು ಗಟ್ಟಿಯಾಗಿ ಹರಡಿದ್ದವು. ಜನ ಯಾವಾಗೋ ಒಮ್ಮೆ ನಗರಕ್ಕೆ ಹೋಗಿ ತಮಗೆ ಬೇಕಾದ ಅಗತ್ಯ ವಸ್ತು ಖರೀದಿಸಿ ತಂದರೆ ಮುಗೀತು ಮತ್ತೆ ಹೋಗುವದು ಅಪರೂಪ. ಏನಾದರೂ ಕೊರತೆ ಕಂಡು ಬಂದರೆ ತಮ್ಮ ತಮ್ಮಲ್ಲೇ ಕಡಾ ಪಡೆದು ಕೊರತೆ ನೀಗಿಸಿಕೊಳ್ಳುತಿದ್ದರು.
ಊರ ಮೂಲ ಪುರುಷನಾದ ದೊಡ್ಡ ಬಸಪ್ಪ ತೀರಿ ಆಗಲೇ ಸುಮಾರು ವರ್ಷ ಕಳೆದು ಹೋಗಿದ್ದವು. ಆತನ ಬಗ್ಗೆ ಎಲ್ಲರಿಗೂ ಗೌರವವಿತ್ತು. ಆತ ಬೇರೆ ಯಾರೂ ಆಗಿರದೆ ರಾಜಶ್ರೀಯ ತಾತನೇ ಆಗಿದ್ದ. ಆತನಿಂದಲೇ ಊರ ಹೆಸರು ಬೆಳಕಿಗೆ ಬಂದಿತ್ತು.
”ದೊಡ್ಡ ಬಸಪ್ಪ ಒಬ್ಬ ಶಕ್ತಿಶಾಲಿ ಕಠಿಣ ಪರಿಶ್ರಮಿ , ಹರೆಯದ ವಯಸ್ಸಿನಲ್ಲಿ ತನ್ನ ಶಕ್ತಿ ವ್ಯಯಿಸಿ ಇಲ್ಲಿನ ಬಂಜರು ಭೂಮಿಯನ್ನು ಬಂಗಾರ ಭೂಮಿಯಾಗಿ ಮಾಡಿದ. ಆತ ಮಾಡಿದ ಆ ಕೆಲಸ ಕಾರ್ಯ ಮರೆಯಲು ಸಾಧ್ಯವೇ ಇಲ್ಲ . ಇವತ್ತು ನಾವೆಲ್ಲಾ ಸುಖವಾಗಿ ಜೀವನ ನಡೆಸುತಿದ್ದೇವೆಂದರೆ ಅವನೇ ಕಾರಣ. ಅವನು ನಮ್ಮ ಪಾಲಿನ ದೇವರು ಅಂತ” ನೆನಪಿಸಿಕೊಳ್ಳುತಿದ್ದರು.
”ದೊಡ್ಡ ಬಸಪ್ಪ ಅಂತಿಂಥ ಗಂಡು ಅಲ್ಲ. ಗಂಡುಗಚ್ಚಿಯ ಗಂಡು ತಲೆಗೆ ಶಲ್ಯ ಬಿಗಿದು ಗುದ್ದಲಿ ಸಲಿಕೆ ಹಿಡಿದು ಕೆಲಸಾ ಮಾಡಿದರೆ ಎಂತಹ ಕಠಿಣ ಕೆಲಸವಿದ್ದರೂ ನೀರು ಕುಡಿದಷ್ಟೇ ಸಲೀಸಾಗಿ ಮಾಡಿ ಮುಗಿಸುತಿದ್ದ ”ಅಂತ ಆತನ ಒಡನಾಡಿ ಮಲ್ಲಿಕಾರ್ಜುನಪ್ಪ ದೇಶಾವರಿ ಚರ್ಚೆ ಮಾಡುವಾಗ ನೆನಪಿಸಿಕೊಳ್ಳುತಿದ್ದ. ದೊಡ್ಡ ಬಸಪ್ಪನ ಹೆಸರು ಅಗಸಿ ಹತ್ತಿರ ಇರುವ ಬಂಡೆಗಲ್ಲಿನ ಮೇಲೆ ಕೆತ್ತಿಸಿ ಕೆಲವರು ಅಭಿಮಾನ ತೋರ್ಪಡಿಸಿದ್ದರು. ಇನ್ನೂ ಕೆಲವರು ತಮ್ಮ ಮಕ್ಕಳು ಮೊಮ್ಮಕ್ಕಳಿಗೆ ಅವನ ಹೆಸರಿಟ್ಟು ೠಣ ತೀರಿಸಿದ್ದರು. ಊರ ಮಹಿಳೆಯರು ಕುಟ್ಟುವಾಗ ಬೀಸುವಾಗ ಹೊಲದಲ್ಲಿ ಕೆಲಸ ಮಾಡುವಾಗ ಆತನ ಕುರಿತು ಹಾಡು ಕತೆ ಹೇಳಿ ಗುಣಗಾನ ಮಾಡುತಿದ್ದರು. ಆತನ ಇತಿಹಾಸ ಅಲಿಖಿತವಾದರೂ ಒಬ್ಬರ ಬಾಯಿಂದ ಒಬ್ಬರಿಗೆ ಜನಪದದಂತೆ ಹರಡಿ ಅಚ್ಚಳಿಯದೆ ಉಳಿದಿತ್ತು.
”ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಯಾವಾಗಲೂ ವ್ಯರ್ಥವಾಗದು” ಅನ್ನುವ ಮಾತಿನಂತೆ ಆತ ಊರ ಜನರಿಗೆ ಸ್ಪೂರ್ತಿಯಾಗಿದ್ದ. ಆತ ಇಲ್ಲಿಗೆ ಬರುವಾಗ ಊರೇ ಇರಲಿಲ್ಲ ಆತನೇ ತನಗಾಗಿ ಒಂದು ಮನೆ ಕಟ್ಟಿಕೊಂಡ. ಆಮೇಲೆ ಮದುವೆ ಆದ. ನಂತರ ಮಕ್ಕಳು ಮೊಮ್ಮಕ್ಕಳು ಆಗಿ ಅವನ ಕುಟುಂಬ ದೊಡ್ಡದಾಯಿತು. ಆತನ ಕೆಲ ಸಂಬಂಧಿಕರು ಸಹ ಇವನ ಹತ್ತಿರ ಬಂದು ಮನೆ ಕಟ್ಟಿಕೊಂಡರು. ಆಗ ಒಂದು ಮನೆ ನಾಲ್ಕು ಮನೆಗಳಾಗಿ ನಾಲ್ಕು ಎಂಟಾಗಿ ಈಗ ಹತ್ತಿಪ್ಪತ್ತು ಮನೆಗಳಾಗಿ ಊರು ಬೆಳೆಯಿತು. ದೊಡ್ಡ ಬಸಪ್ಪ ತೀರಿ ಹೋದ ಸುಮಾರು ವರ್ಷದ ನಂತರ ಆತನ ಮೊಮ್ಮಗಳ ವಿಷಯವಾಗಿ ಇಂತಹ ಸಂಕಷ್ಟ ಎದುರಾಗಿದ್ದು ನುಂಗಲಾರದ ತುತ್ತಾಗಿ ಪರಿಣಮಿಸಿತು.
‘ಅಪ್ಪ ಬದುಕಿದ್ದರೆ ಇದಕ್ಕೊಂದು ಪರಿಹಾರ ಹುಡುಕುತಿದ್ದ ಈಗ ನಾನು ಅಸಹಾಯಕನಾಗಿದ್ದೇನೆ’ ಅಂತ ವೀರಭದ್ರಪ್ಪ ಬೇಸರಿಕೊಂಡ. ದಿನ ಕಳೆದಂತೆ ಈ ನೆಂಟಸ್ಥನ ಇನ್ನೂ ಕಗ್ಗಂಟಾಗಬಹುದು ಅಂತ ಉದ್ದಂಡಪ್ಪ ತಕ್ಷಣ ಕಾರ್ಯಪ್ರವೃತ್ತನಾದ. ಅಂದು ಪುನಃ ಊರ ಜನರನ್ನು ನಡು ಊರ ಕಟ್ಟೆಗೆ ಪಂಚಾಯಿತಿ ಸೇರಿಸಿ ನಾನು ವೀರಭದ್ರಪ್ಪನ ಮಗಳಿಗೆ ನಮ್ಮ ಮನೆಯ ಸೊಸೆಯಾಗಿ ಮಾಡಿಕೊಳ್ಳುತ್ತೇನೆ ಆತನೂ ತನ್ನ ಮಗಳಿಗೆ ಒಪ್ಪಿಸಬೇಕು ಅಂತ ಹೇಳಿದ. ಉದ್ದಂಡಪ್ಪನ ಮಾತು ಕೆಲವರಿಗೆ ಗಾಬರಿ ಮೂಡಿಸಿತು.
”ಈ ವಿಷಯದಲ್ಲಿ ನಾವೇನು ಮಾಡಲು ಸಾಧ್ಯ? ಆ ಕಾಲವೇ ಬೇರೆ ಈ ಕಾಲವೇ ಬೇರೆ ಇಂತಹ ವಿಷಯದಲ್ಲಿ ಯಾರಿಗೂ ಒತ್ತಾಯ ಮಾಡಲು ಬರೋದಿಲ್ಲ” ಅಂತ ಕೆಲವರು ಸಮಜಾಯಿಷಿ ನೀಡಲು ಮುಂದಾದರು.
”ಕಾಲ ಹ್ಯಾಂಗ ಬದಲಾಗ್ತದೆ? ನಾವು ವಾಸಿಸುವ ಭೂಮಿ ಬೆಳಗುವ ಸೂರ್ಯ , ಹಗಲು ರಾತ್ರಿ ಇವೆಲ್ಲ ಮೊದಲ ಹ್ಯಾಂಗ ಇದ್ದವೋ ಈಗಲೂ ಹಂಗೇ ಇವೆ . ಯಾವುದೂ ಬದಲಾಗಿಲ್ಲ . ಊರ ನಿಯಮದ ವಿರುದ್ಧ ನಡೆದರೆ ಏನಾಗ್ತದೆ ಅಂತ ನಿಮಗೂ ಗೊತ್ತಿದೆ ಸಾಮಾಜಿಕ ಭಹಿಷ್ಕಾರ ಹಾಕುವದೇ ಇದಕ್ಕಿರುವ ದಾರಿ ಅಂತ ಹೇಳಿದ. ಇದು ಒಮ್ಮೆಲೇ ನಿರ್ಧಾರ ಮಾಡುವ ವಿಷಯವಲ್ಲ . ಮಗಳಿಗೆ ಒಪ್ಪಿಸಿ ನಿರ್ಧಾರ ಕೈಗೊಳ್ಳಲು ವೀರಭದ್ರಪ್ಪನಿಗೂ ಒಂದೆರಡು ದಿನ ಸಮಯ ಬೇಕು” ಅಂತ ಮಲ್ಲಿಕಾರ್ಜುನಪ್ಪ ಸಲಹೆ ನೀಡಿದ.
ಈ ವಿಷಯ ವೀರಭದ್ರಪ್ಪನ ಕಿವಿಗೆ ಮುಟ್ಟಿಸಲಾಯಿತು. ”ನಾವು ಈ ನೆಂಟಸ್ಥನ ಮಾಡದಿದ್ದರೆ ಊರ ನಿಯಮ ಮುಂದಿಟ್ಟುಕೊಂಡು ಉದ್ದಂಡಪ್ಪ ಹಠ ಸಾಧಿಸುತ್ತಾನೆ. ನಾವು ನೆಂಟಸ್ಥನ ಮಾಡೋದಿಲ್ಲ ಎಂದರೆ ಅವನು ಸುಮ್ಮನಿರೋದಿಲ್ಲ. ನಮ್ಮ ಮಗಳಿಗೆ ಬೇರೆ ಕಡೆ ಮದುವೆ ಮಾಡಿ ಕೊಡಲು ಬಿಡೋದಿಲ್ಲ. ಮಗಳ ಜೀವನ ಕಂಟಿ ಬದಿಯ ಒಂಟಿ ಹೂವಿನಂತಾಗುವದರಲ್ಲಿ ಅನುಮಾನವಿಲ್ಲ. ಈ ವಿಷಯದ ಬಗ್ಗೆ ಮಲ್ಲಿಕಾರ್ಜುನಪ್ಪನ ಜೊತೆ ಚರ್ಚಿಸಬೇಕು ಆತ ಏನಾದರೂ ದಾರಿ ತೋರಿಸಬಹುದು” ಅಂತ ಯೋಚಿಸಿದ.
ವೀರಭದ್ರಪ್ಪ ಮರುದಿನ ಇದೇ ವಿಷಯವಾಗಿ ಚರ್ಚಿಸಲು ಮಲ್ಲಿಕಾರ್ಜುನಪ್ಪನ ಮನೆಕಡೆ ಹೊರಟ. ಅದೇ ಸಮಯ ಉದ್ದಂಡಪ್ಪನ ಮಗ ಕುಲಶೇಖರ ಎದುರಾಗಿ ”ನಿಮ್ಮ ಸಂಕಟ ನನಗೆ ಅರ್ಥವಾಗಿದೆ/ ನಾನು ನಿಮ್ಮ ಮಗಳ ಸರಿಸಮ ವರ ಅಲ್ಲವೇ ಅಲ್ಲ. ಇದೆಲ್ಲ ಅಪ್ಪನ ಒತ್ತಾಯ ಅಷ್ಟೇ. ಅದಕ್ಕೆ ನಾನೊಂದು ನಿರ್ಧಾರ ಮಾಡಿದ್ದೇನೆ. ನಾನು ಮದುವೆ ಒಲ್ಲೇ ಅಂತ ಹೇಳಿದರೆ ನಮ್ಮಪ್ಪ ಯಾರಿಗೆ ಮದುವೆ ಮಾಡ್ತಾನೆ? ನೀವೇನೂ ಇದರ ಬಗ್ಗೆ ಯೋಚನೆ ಮಾಡಬೇಡಿ ಮತ್ತೊಮ್ಮೆ ಪಂಚಾಯಿತಿ ಸೇರಿದಾಗ ಇದಕ್ಕೆ ತಂತಾನೆ ಪರಿಹಾರ ಸಿಗುತ್ತದೆ” ಅಂತ ಭರವಸೆ ನೀಡಿ ಹೊರಟು ಹೋದ.
ಕುಲಶೇಖರನ ಮಾತು ವೀರಭದ್ರಪ್ಪನಿಗೆ ಸ್ವಲ್ಪ ಸಮಾಧಾನ ತಂದಿತು. ಅಂದು ಉದ್ದಂಡಪ್ಪ ಮತ್ತೆ ಪಂಚಾಯಿತಿ ಸೇರಿಸಿದ. ಇನ್ನೇನು ನೆಂಟಸ್ಥನ ಆಗೇ ಬಿಡುತ್ತದೆ ಅನ್ನುವ ಖುಷಿ ಆತನ ಮುಖದ ಮೇಲೆ ತೇಲಾಡುತಿತ್ತು.
”ಮದುವೆಗೆ ವೀರಭದ್ರಪ್ಪನ ಮಗಳು ಒಪ್ಪಿದ್ದಾಳೆ. ಈಗ ನಿಮ್ಮ ಮಗನಿಗೆ ಕರೆದುಕೊಂಡು ಬಂದರೆ ಎಲ್ಲರ ಸಮ್ಮುಖದಲ್ಲಿ ಸಂಬಂಧ ಬೆಸೆದು ಬಿಡೋಣ” ಅಂತ ಮಲ್ಲಿಕಾರ್ಜುನಪ್ಪ ಹೇಳಿದ.
‘ಆಯಿತು’ ಅಂದ ಉದ್ದಂಡಪ್ಪ ಖುಷಿಯಿಂದ.
‘ಸೀದಾ ಮನೆಗೆ ಬಂದು ಕುಲಶೇಖರ ಎಲ್ಲಿ” ಅಂತ ಹೆಂಡತಿಗೆ ಪ್ರಶ್ನಿಸಿದ/
ಅವಳು ಮುಖ ಸಪ್ಪಗೆ ಮಾಡಿದ್ದು ನೋಡಿ, ‘ಯಾಕೆ ಏನಾಯ್ತು’ ಅಂತ ಪ್ರಶ್ನಿಸಿದ.
‘ಕುಲಶೇಖರನಿಗೆ ಆ ಹುಡುಗಿ ಇಷ್ಟವಿಲ್ಲವಂತೆ. ಸಧ್ಯ ಆತ ನಮ್ಮಿಂದ ದೂರ ಹೊರಟು ಹೋದ’ ಅಂತ ಕಣ್ತುಂಬಾ ನೀರು ತಂದು ಹೇಳಿದಳು.
ಆಗ ಉದ್ದಂಡಪ್ಪನ ಜಂಘಾ ಬಲವೇ ಉಡುಗಿ ಹೋಯಿತು. ಸೀದಾ ಪಂಚಾಯಿತಿ ಕಟ್ಟೆಗೆ ವಾಪಸ್ಸ ಬಂದು ಅಸಹಾಯಕನಾಗಿ ನಿಂತುಕೊಂಡ. ಎಲ್ಲರೂ ಆತನ ಮುಖ ಪ್ರಶ್ನಾರ್ಥಕವಾಗಿ ನೋಡಿ ‘ಎಲ್ಲಿ ನಿನ್ನ ಮಗ’ ಅಂತ ಪ್ರಶ್ನಿಸಿದರು.
‘ಎಲ್ಲವೂ ಉಲ್ಟಾ ಆಯಿತು. ಈ ನೆಂಟಸ್ಥನ ಸಾಧ್ಯವೇ ಇಲ್ಲ ನಮ್ಮ ಕುಲಶೇಖರನಿಗೆ ಈ ಮದುವೆ ಇಷ್ಟವಿಲ್ಲದ ಕಾರಣ ನಮ್ಮಿಂದ ದೂರ ಹೊರಟು ಹೋದ’ ಅಂತ ವಾಸ್ತವ ಹೇಳಿದ.
‘ಇದೇನಿದು ನಮಗೆಲ್ಲ ಸೇರಿಸಿ ನ್ಯಾಯಪಂಚಾಯತಿ ಮಾಡಿ ಈಗ ನೀನೇ ಊರ ನಿಯಮ ಉಲ್ಲಂಘನೆ ಮಾಡಿದರೆ ಹೇಗೆ’ ಅಂತ ಪ್ರಶ್ನಿಸಿದರು.
‘ಈಗ ಯಾರ ಮೇಲೆ ಬಹಿಷ್ಕಾರ ಹಾಕುವದು’ ಅಂತ ಮಲ್ಲಿಕಾರ್ಜುನಪ್ಪ ಮಾರ್ಮಿಕವಾಗಿ ಕೇಳಿದ. ಆತನ ಮಾತಿಗೆ ಉದ್ದಂಡಪ್ಪ ಕ್ಛಣ ಕಾಲ ವಿಚಲಿತನಾಗಿ ಬಾಯಿಂದ ಮಾತೇ ಹೊರಡಲಿಲ್ಲ.
ಜನ ಪರಸ್ಪರ ಗುಸುಗುಸು ಚರ್ಚೆ ಆರಂಭಿಸಿದರು. ”ಯಾರ ಮೇಲೂ ಬಹಿಷ್ಕಾರ ಹಾಕೋದು ಬೇಡ. ಊರಿನ ಆ ಹಳೆಯ ನಿಯಮ ಇಂದಿನ ಅಧುನಿಕ ಯುಗಕ್ಕೆ ಹೊಂದಿಕೆಯಾಗದು. ಮದುವೆ ಅನ್ನುವದು ಯಾರ ಒತ್ತಾಯದಿಂದ ಮಾಡುವದಲ್ಲ. ಗಂಡು ಹೆಣ್ಣಿನ ಪರಸ್ಪರ ಒಪ್ಪಿಗೆಯಿಂದ ಪಡೆಯಬೇಕು. ಅಂದಾಗಲೇ ಸಂಬಂಧಗಳು ಶಾಶ್ವತವಾಗಿ ಉಳಿಯುತ್ತವೆ ” ಅಂತ ರಾಜಶ್ರೀ ಹೇಳಿದಾಗ ಅವಳ ಮಾತಿಗೆ ಎಲ್ಲರೂ ಸಮ್ಮತಿಸಿ ತಲೆಯಾಡಿಸಿದರು.
ತನ್ನ ಮಾತು ತನಗೇ ತಿರುಗುಬಾಣವಾಗುತಿದ್ದಂತೆ ಉದ್ದಂಡಪ್ಪ ಮೆಲ್ಲಗೆ ಅಲ್ಲಿಂದ ಜಾಗಾ ಖಾಲಿ ಮಾಡಿ ಮನೆ ಕಡೆ ಹೆಜ್ಜೆ ಹಾಕಿದ !!
-ಶರಣಗೌಡ ಬಿ ಪಾಟೀಲ ತಿಳಗೂಳ, ಕಲಬುರಗಿ.
ಬಹಳ ಚೆನ್ನಾಗಿ ಮೂಡಿಬಂದಿದೆ. ಅಂತ್ಯ ಕುತೂಹಲಕಾರಿಯಾಗಿದೆ. ಧನ್ಯವಾದಗಳು.
ಕೊನೆಯವರೆಗೂ ಕುತೂಹಲ ಉಳಿಸಿಕೊಂಡು ಹೋಗುವಂತೆ ಅನಾವರಣಗಳಿಸಿರುವ ಕಥೆ.. ಹಾಗೂ ಉತ್ತಮ ಸಂದೇಶ ನೀಡುವಲ್ಲಿ ಸಫಲವಾಗಿದೆ.. ಧನ್ಯವಾದಗಳು ಸಾರ್
ತುಂಬಾ ಚೆನ್ನಾಗಿದೆ ಕಥೆ
ವಿಭಿನ್ನ ಕಥೆ. ಇದರಲ್ಲಿ ವಿಜ್ಞಾನವೂ ಅಡಗಿದೆ. ಹತ್ತಿರದ ಸಂಬಂಧಿಗಳಲ್ಲಿ ಮದುವೆ ಒಳ್ಳೆಯದಲ್ಲ.
ಸೊಗಸಾದ ಅರ್ಥಪೂರ್ಣ ಕಥೆ. ಅಂತೂ ಸುಖಾಂತವಾದುದು ಖುಶಿಕೊಟ್ಟಿತು.
ಕಥೆ ಚೆನ್ನಾಗಿದೆ. ಕಾಲಕ್ಕೆ ತಕ್ಕ ಹಾಗೆ ಬದಲಾಗಬೇಕು ಅನ್ನುವುದನ್ನು ಕೂಡಾ ಧ್ವನಿಸಿದೆ
ಬದಲಾಬವಣೆ ಜಗದ ನಿಯಮ ಎಂಬ ಸಂದೇಶವನ್ನು ಬಿಂಬಿಸುವಲ್ಲಿ ಕಥೆ ಸಫಲವಾಗಿದೆ.ಕುತೂಹಲಭರಿತ ನಿರೂಪಣೆಯಿಂದಲೂ ಕಥೆ ಆಪ್ತವಾಗಿದೆ.