ಪ್ರವಾಸದಲ್ಲಿ ನಡೆದ ಅವಾಂತರ
ನಾವು ನ್ಯೂಯಾರ್ಕ್‌ನಿಂದ ವಾಷಿಂಗ್‌ಟನ್‌ಗೆ ಸ್ಥಳೀಯ ಪ್ರವಾಸೀ ಸಂಸ್ಥೆಯೊಂದರ ಬಸ್‌ನಲ್ಲಿ ಎರಡು ದಿನದ ಟೂರ್ ಹೊರಟೆವು. ಜಗತ್ತಿನ ಅತ್ಯಂತ ಪ್ರಭಲ ರಾಷ್ಟ್ರವೆಂದು ಹೆಸರು ಪಡೆದಿರುವ ಅಮೆರಿಕದ ರಾಜಧಾನಿಯನ್ನು ನೋಡುವ ಕುತೂಹಲ ನಮ್ಮಲ್ಲಿ. ದಾರಿಯಲ್ಲಿ ಒಂದೆರಡು ಪ್ರವಾಸಿ ತಾಣಗಳನ್ನು ತೋರಿಸಿದರು. ಅದರಲ್ಲೊಂದು ಜರ್ಮನ್ನರ ಕಾಲೊನಿಯಾಗಿತ್ತು. ಈ ಗ್ರಾಮದ ವಿಶೇಷತೆ ಏನೆಂದರೆ ಇವರು ತಮ್ಮ ದಿನನಿತ್ಯದ ಬದುಕಿನಲ್ಲಿ ವಿದ್ಯುತ್ ಬಳಸುವುದಿಲ್ಲ. ಬಾವಿಯಿಂದ ನೀರು ಸೇದುವುದು, ಹಸುವಿನ ಹಾಲನ್ನು ಕೈಗಳಿಂದಲೇ ಕರೆಯುವುದು, ಬಟ್ಟೆಗಳನ್ನು ಒಗೆಯುವುದು, ಕಸ ಗುಡಿಸುವುದು.. ಹೀಗೆ ಎಲ್ಲಾ ಕೆಲಸಗಳನ್ನೂ ಯಂತ್ರಗಳ ನೆರವಿಲ್ಲದೇ ಮಾಡುವರು. ಇಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರದಲ್ಲಿ ಈ ಪುಟ್ಟ ಹಳ್ಳಿ ಒಂದು ಅದ್ಭುತವಾದ ಸಂಗತಿಯಂತೆ ಇವರಿಗೆ ತೋರುತ್ತಿತ್ತು. ನಮಗೋ ಮನಸ್ಸಿನೊಳಗೇ ನಗು – ಇಂದಿಗೂ ನಾವು ಈ ಎಲ್ಲಾ ಕೆಲಸಗಳನ್ನೂ ಲೀಲಾಜಲವಾಗಿ ನಾವೇ ಮಾಡಿಕೊಳ್ಳುತ್ತೇವೆ. ಕಾರಣ – ವಿದ್ಯುತ್ ಅಭಾವ ಅಥವಾ ವಿದ್ಯುತ್ ವ್ಯತ್ಯಯ. ನಮ್ಮ ಜೊತೆ ಬಂದ ಕೆಲ ಪ್ರವಾಸಿಗರು ಅವರ ಜೊತೆ ಫೋಟೋ ತೆಗೆಸಿಕೊಳ್ಳುತ್ತಿದ್ದರು.
ಅಂದು ರಾತ್ರಿ ಒಂಬತ್ತು ಗಂಟೆಗೆ ನಾವು ವಾಷಿಂಗ್‌ಟನ್‌ನ ‘ಹಾಲಿಡೇ ಇನ್’ ಎಂಬ ಹೊಟೇಲ್ ತಲುಪಿದೆವು. ನಮ್ಮ ಲಗೇಜ್‌ನೊಂದಿಗೆ ಹೊಟೇಲ್ ಒಳಗೆ ಹೆಜ್ಜೆ ಇಡುತ್ತಿದ್ದಂತೆ ಒಂದು ಪ್ರಕಟಣೆ ಮೊಳಗಿತು- ‘ನೀರಿನ ಪೈಪಿನ ರಿಪೇರಿಗಳು ಇರುವುದರಿಂದ ಇಂದು ರಾತ್ರಿ ಹತ್ತರಿಂದ ನಾಳೆ ಮುಂಜಾನೆ ಆರು ಗಂಟೆಯವರೆಗೆ ನಲ್ಲಿಯಲ್ಲಿ ನೀರು ಬರುವುದಿಲ್ಲ’. ದಿನವಿಡೀ ಪ್ರಯಾಣ ಮಾಡಿದ್ದ ನಮಗೆ ವಾಷ್‌ರೂಮಿನ ತುರ್ತು ಅವಶ್ಯಕತೆ ಇತ್ತು. ನನ್ನ ಗೆಳತಿ ವಾಗ್ದೇವಿ, ನಾವು ರೂಮಿಗೆ ಹೋದ ತಕ್ಷಣ, ಬಕೆಟ್ ನಲ್ಲಿ ನೀರು ತುಂಬಿಸಿಡೋಣ ಎಂದು ಸಲಹೆ ನೀಡಿದಳು. ಎಲ್ಲರೂ ತಲೆಯಾಡಿಸಿದೆವು. ನಮಗೆ ರೂಮಿನ ಕೀಲಿ ಸಿಕ್ಕ ಮರುಕ್ಷಣವೇ ವಾಷ್‌ರೂಮಿಗೆ ಧಾವಿಸಿದೆವು. ಸುಸಜ್ಜಿತವಾದ, ಸುವಾಸನೆ ಬೀರುತ್ತಿದ್ದ ರೆಸ್ಟ್ ರೂಂ – ನೆಲಕ್ಕೆ ಕಾರ್ಪೆಟ್, ವಾಷ್ ಬೇಸಿನ್, ಕಮೋಡ್, ಬಾತ್ ಟಬ್, ಬಿಳಿ ಬಿಳಿಯಾದ ಟವೆಲ್‌ಗಳು, ಆಧುನಿಕ ಬಗೆಯ ಬಿಸಿ ನೀರಿನ ಹಾಗೂ ತಣ್ಣೀರಿನ ನಲ್ಲಿಗಳು – ಆದರೆ ಬಕೆಟ್ ಎಲ್ಲಿ, ಮಗ್ ಎಲ್ಲಿ? ಎಲ್ಲರೂ ಬೇಸ್ತು ಬಿದ್ದಿದ್ದೆವು, ಜೋರಾಗಿ ನಗತೊಡಗಿದೆವು. ನೀರು ನಿಲ್ಲಲು ಇಪ್ಪತ್ತು ನಿಮಿಷ ಬಾಕಿ ಇತ್ತು. ಆತುರಾತುರವಾಗಿ ನಮ್ಮ ಜರೂರು ಕಾರ್ಯಗಳನ್ನು ಮುಗಿಸಿ ಹೊರಬಂದೆವು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸದಾ ನಲ್ಲಿಗಳಲ್ಲಿ ನೀರು ಬರುವುದರಿಂದ, ನೆಲ ತೊಟ್ಟಿಯಾಗಲೀ ಛಾವಣಿ ಮೇಲಿನ ನೀರು ತುಂಬಿಸಿದ ಸಿಂಟೆಕ್ಸ್ ಆಗಲಿ ಇರುವುದಿಲ್ಲ. ಬಾತ್ ಟಬ್‌ನಲ್ಲಿ ಕುಳಿತು ಷವರ್ ಹಿಡಿದು ಸ್ನಾನ ಮಾಡುವುದರಿಂದ ಬಕೆಟ್, ಮಗ್ ಮಾಯ.
ಅದೃಷ್ಟವಶಾತ್ ನಮ್ಮ ಗೆಳತಿ ‘ಸುಜಾ’ ನಮ್ಮನ್ನು ಮಾತಾಡಿಸಲು ಬಂದಿದ್ದಳು. ಅವಳು ಕರೆದ ತಕ್ಷಣ, ನಾವು ನಮ್ಮ ಪ್ರವಾಸ ತಂಡದ ಮ್ಯಾನೇಜರ್‌ಗೆ ತಿಳಿಸಿ ಅಲ್ಲಿಂದ ಜಾಗ ಖಾಲಿ ಮಾಡಿದೆವು. ಸಹಪ್ರಯಾಣಿಕರು ನಮ್ಮನ್ನು ಈರ್ಷ್ಯೆಯಿಂದ ನೋಡುತ್ತಿದ್ದರು.
ನಾವು ಹಿಂತಿರುಗುವಾಗ ಮತ್ತೊಂದು ಅವಾಂತರ ಕಾದಿತ್ತು. ನ್ಯೂಯಾರ್ಕ್‌ಗೆ ಇನ್ನೂ ಎರಡುಗಂಟೆ ಪ್ರಯಾಣ ಬಾಕಿ ಇತ್ತು. ಸಂಜೆ ಆರು ಗಂಟೆಯಾಗಿತ್ತು. ನಿಧಾನವಾಗಿ ಕತ್ತಲು ಕವಿಯತೊಡಗಿತ್ತು. ಇದ್ದಕ್ಕಿದ್ದಂತೆ ಬಸ್ ವಿಚಿತ್ರವಾದ ಸದ್ದು ಮಾಡುತ್ತಾ ನಿಂತಿತು. ನಮ್ಮ ಬಸ್ ಡ್ರೈವರ್ ಆಫ್ರೋ ಅಮೆರಿಕನ್ ಮಹಿಳೆ. ಬಸ್ ಸಿಬ್ಬಂದಿ ಅವಳೊಬ್ಬಳೇ, ಕಂಡಕ್ಟರ್ ಆಗಲಿ ಕ್ಲೀನರ್ ಆಗಲಿ ಇರಲಿಲ್ಲ. ನೋಡೋಣ, ಏನು ಮಾಡುತ್ತಾಳೆ ಎಂದು ಕುತೂಹಲದಿಂದ ಕಾದೆವು. ಅವಳು ಯಾರಿಗೋ ಫೋನ್ ಮಾಡಿ ಅವರು ಹೇಳಿದ ಹಾಗೆ ಎಂಜಿನ್ ರಿಪೇರಿ ಮಾಡುತ್ತಾ ಹೋದಳು. ನಂತರ ಬಸ್ ಇಳಿದು ಒಬ್ಬಳೇ ಬಸ್ ತಳ್ಳಿದಳು. ಯಾರೋ ಪುಣ್ಯಾತ್ಮ ಅವಳ ಸಹಾಯಕ್ಕೆ ಹೋದ. ಅವಳು, ‘ಹೋಗಿ, ನಿಮ್ಮ ಸೈಳದಲ್ಲಿ ಕುಳಿತುಕೊಳ್ಳಿ. ನಿಮ್ಮ ಸಹಾಯ ನನಗೆ ಬೇಕಿಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದಳು. ಅರ್ಧ ಗಂಟೆಯಲ್ಲಿ ಬಸ್ ರೆಡಿ ಮಾಡಿ, ಸರಿಯಾದ ಸಮಯಕ್ಕೆ ನ್ಯೂಯಾರ್ಕ್ ತಲುಪಿದಳು. ಅಬ್ಬಾ, ಎಂತಹ ಗಟ್ಟಿಗಿತ್ತಿ ಆ ಹೆಣ್ಣುಮಗಳು. ನೀವೇನಂತೀರಾ? ಪಾಪಿ ಸಮುದ್ರ ಹೊಕ್ಕರೂ ಮೊಣಕಾಲುದ್ದ ನೀರಲ್ಲವೆ?
– ಡಾ.ಗಾಯತ್ರಿ ಸಜ್ಜನ್
ಪ್ರವಾಸ ದಲ್ಲಿ ನಡೆದ ಅವಾಂತರ ಅದರ ಜೊತೆಗೆ ವಿದೇಶಿ ಮಹಿಳಾ ಚಾಲಕಿಕ ದಾಷ್ಟಿಕತೆಯ ಅನಾವರಣ.. ಅಚ್ಚರಿ ತಂದಿತು… ಧನ್ಯವಾದಗಳು ಮೇಡಂ
ಚೆನ್ನಾಗಿದೆ ಹಾಗೂ ವಿಭಿನ್ನವೂ. ಎಲ್ಲ ಅವರವರ ಕೆಲಸ ಅವರವರೇ ಮಾಡಿಕೊಳ್ಳುವುದು ಒಳ್ಳೆಯದೇ.
ಅಂದು ಪ್ರವಾಸದಲ್ಲಿ ಆದ ಅವಾಂತರವೇ ಇಂದು ಒಂದು ಲೇಖನವಾಯಿತಲ್ಲ! ಊಟದೊಂದಿಗಿನ ಉಪ್ಪಿನಕಾಯಿ ರುಚಿಯಾಗಿದೆ.
ಹೌದು..ಅಮೆರಿಕದಲ್ಲಿ ಬಾಲ್ದಿ, ಪಾಟೆ ಇಲ್ಲದೆ ನನಗೂ ಫಜೀತಿಯಾಗಿತ್ತು. ಚಂದದ ಅನುಭವ ಕಥನ… ಧನ್ಯವಾದಗಳು ಗಾಯತ್ರಿ ಮೇಡಂ.
ತಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು