ನನ್ನ ಹೆಸರು ಏನು?
ಪ್ರಣತಿ ಮನೆಯ ಮುಂದೆ ದೊಡ್ಡ ಹೂದೋಟ ಇತ್ತು. ಅದರಲ್ಲಿ ಅನೇಕ ಹೂಗಿಡಗಳಿದ್ದುವು. ಬಣ್ಣಬಣ್ಣವಾದ ಹೂಗಳು ಎಲ್ಲಾ ಗಿಡಗಳಲ್ಲಿಯೂ ಅರಳಿದ್ದುವು. ಕೆಂಪು ಗುಲಾಬಿ, ಹಳದಿ ಚಂಡು ಹೂವುಗಳು, ಬಿಳಿಯ ಸೇವಂತಿಗೆ, ಕೇಸರಿ ಬಣ್ಣದ ಕಾಸ್ಮಾಸ್ ಈ ರೀತಿ ಅನೇಕ ಹೂವುಗಳಿದ್ದವು. ಅಲ್ಲಿ ಬಣ್ಣದ ಚಿಟ್ಟೆಗಳೂ, ದುಂಬಿಗಳೂ ಮತ್ತು ಜೇನುಗಳೂ ಅತ್ತಿಂದಿತ್ತ ಹಾರಾಡುತ್ತಿದ್ದುವು. ಹೂಗಳಿಂದ ಸಿಹಿಯಾದ ಜೇನನ್ನು ಸವಿಯುತ್ತಿದ್ದವು. ಅಲ್ಲಿ ಒಂದು ಮರಿ ಜೇನು ವೇಗವಾಗಿ ಹೋಗುವ ವಿಮಾನದಂತೆ ಬಹಳ ಸಂತೋಷದಿಂದ ಹಾರಾಡುತ್ತಿತ್ತು. ತನ್ನ ಪಾಡಿಗೆ ಹಾಡನ್ನೂ ಹಆಡಿಕೊಳ್ಳುತ್ತಿತ್ತು.
ಝಣ್, ಝಣ್, ಝಣ್, ಜುಯ್, ಜುಯ್, ಜುಯ್….. ನಾನೊಂದು ಜೇನು, ನನ್ನ ಹೆಸರು ಜೇನು……. ಜುಯ್ ಜುಯ್….. ಅಂತ ರಾಗವಾಗಿ ಹಾಡ್ತಾ ಇತ್ತು. ಒಮ್ಮೊಮ್ಮೆ ಜೇನನ್ನು ಹೀರಿ ಮತ್ತೆ ಝಣ್ ಝಣ್….. ಎಂದು ಹಾಡಲು ಶುರುವಿಟ್ಟುಕೊಳ್ಳುತ್ತಿತ್ತು.
ಆಗ ಪ್ರಣತಿಯ ಮನೆಗೆ ಒಬ್ಬ ದಾಸಯ್ಯ ಬಂದ. ಅವನ ವೇಷ ವಿಚಿತ್ರವಾಗಿತ್ತು. ನೋಡಲು ಬಹಳ ಚೆನ್ನಾಗಿತ್ತು. ಬಣ್ಣದ ಬಟ್ಟೆ ಹಾಕಿಕೊಂಡಿದ್ದ. ಶರಟು ನೀಲಿಯ ಬಣ್ಣ ಮತ್ತು ಕೋಟು ಹಳದಿಯ ಬಣ್ಣ. ತಲೆಗೆ ಸುತ್ತಿದ್ದ ರುಮಾಲು ಕೇಸರಿ ಬಣ್ಣದ್ದಾಗಿತ್ತು. ಕೊರಳಿಗೆ ಬಣ್ಣಬಣ್ಣದ ಮಣಿಗಳ ಹಾರಹಾಕಿದ್ದ. ಹಣೆಯ ಮೇಲೆ ದೊಡ್ಡದಾಗಿ ನಾಮ ಹಾಕಿಕೊಂಡಿದ್ದ. ಕೈಯಲ್ಲಿ ಜಾಗಟೆ ಮತ್ತು ದೊಡ್ಡ ಶಂಖ. ಭುಜದ ಮೇಲಿಂದ ಜೋಳಿಗೆ ಇಳಿಬಿಟ್ಟಿತ್ತು. ದಾಸಯ್ಯ ಮನೆಯ ಮುಂದೆ ನಿಂತು ಭೋಂ ಭೋಂ ಎಂದು ಜೋರಾಗಿ ಶಂಖ ಊದಿದ. ಜಾಗಟೆಯನ್ನು ಢಂ ಢಂ ಢಣಢಣ ಎಂದು ಬಾರಿಸಿದ. ಆಗ ಚಿಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾದುವು. ಪುಟ್ಟ ಜೇನು ಮರಿಗೆ ಈ ಸದ್ದನ್ನೆಲ್ಲಾ ಕೇಳಿ ಬಹಳ ಹೆದರಿಕೆ ಆಯ್ತು. ಅದರ ರೆಕ್ಕೆಗಳು ನಡುಗಿದವು. ಜೇನುಮರಿಗೆ ತುಂಬಾ ಗಾಬರಿ ಆಯ್ತು. ಅದು ಹಾಡು ಹೇಳ್ತಾ ಇತ್ತು. ಆ ಹಾಡೆಲ್ಲ ಮರೆತೇ ಹೋಯ್ತು. ಏನೂ ನೆನಪಿಗೆ ಬರಲೇ ಇಲ್ಲ. ಅದರ ಹೆಸರು ಏನು ಎನ್ನುವುದೂ ಮರೆತೇ ಬಿಟ್ಟಿತು. ಎಷ್ಟು ಪ್ರಯತ್ನ ಪಟ್ಟರೂ, ನನ್ನ ಹೆಸರು…… ಎಂದು ಶುರುಮಾಡಿದರೂ ‘ಊಹೂಂ’ ನೆನಪೇ ಆಗಲಿಲ್ಲ ಅದಕ್ಕೆ ತುಂಬಾ ಅಳುವೇ ಬಂದುಬಿಟ್ಟಿತು.
ಹತ್ತಿರದಲ್ಲೇ ಒಂದು ಚಿಕ್ಕ ಕೊಳ ಇತ್ತು. ಅದರ ಸುತ್ತಲೂ ಹಸಿರು ಹುಲ್ಲು ಇತ್ತು. ಹುಲ್ಲನ್ನು ಮೇಯುತ್ತಾ ಒಂದು ಪುಟ್ಟ ಕರು ಇತ್ತು. ನಮ್ಮ ಜೇನುಮರಿ ಕರುವಿನ ಹತ್ತಿರ ತನ್ನ ಹೆಸರನ್ನು ಕೇಳಲು ಹೋಯಿತು.
‘ಕೊಳ ಕೊಳ ಕರುವೆ’ ನನ್ನ ಹೆಸರೇನು? ಎಂದು ಕೇಳಿತು.
ಆಗ ಕರು ‘ನನಗೆ ಗೊತ್ತಿಲ್ಲ, ನನ್ನ ಅಮ್ಮನನ್ನು ಕೇಳು’ ಎಂದಿತು. ಜೇನುಮರಿ ಹತ್ತಿರದಲ್ಲೇ ಇದ್ದ ಅಮ್ಮ ಹಸುವಿನ ಹತ್ತಿರ ಹೋಯಿತು.
‘ಕೊಳ ಕೊಳ ಕರುವೆ, ಕರುವಿನ ತಾಯೇ ನನ್ನ ಹೆಸರೇನು? ಎಂದು ಹಸುವನ್ನು ಜೇನುಮರಿ ಕೇಳಿತು.
ಆಗ ಹಸು ನನಗೆ ಗೊತ್ತಿಲ್ಲ, ನನ್ನನ್ನು ಕಾಯುತ್ತಿರುವ ಮಾಯ ಅಲ್ಲಿ ಮರದ ಕೆಳಗೆ ಕುಳಿತಿದ್ದಾನೆ. ಅವನಿಗೆ ಗೊತ್ತಿರಬಹುದು’ ಎಂದಿತು.
ಆಗ ಜೇನುಮರಿ ಹಾರುತ್ತಾ ಮರದ ನೆರಳಿನಲ್ಲಿ ಕುಳಿತಿದ್ದ ಮಾಯನ ಹತ್ತಿರ ಹೋಗಿ ಹೀಗೆ ಕೇಳಿತು
‘ಕೊಳ ಕೊಳ ಕರುವೆ, ಕರುವಿನ ತಾಯೇ ತಾಯ ಕಾಯುವ ಮಾಯನೇ, ನನ್ನ ಹೆಸರೇನು?’
ಮಾಯಾ ಜೇನುಮರಿಗೆ ಹೇಳಿದ. ‘ನನಗೆ ನಿನ್ನ ಹೆಸರು ಗೊತ್ತಿಲ್ಲ. ಆದರೆ ನನ್ನ ಕೈಯಲ್ಲಿರುವ ಈ ಕೋಲಿಗೆ ಗೊತ್ತಿರಬಹುದು, ಅದನ್ನು ಕೇಳು.’
ಜೇನುಮರಿ ಆಗ ಕೋಲಿನ ಹತ್ತಿರ ಬಂದು
‘ಕೊಳಕೊಳ ಕರುವೆ, ಕರುವಿನ ತಾಯೇ ತಾಯ ಕಾಯುವ ಮಾಯನೇ ಮಾಯನ ಕೈಲಿರುವ ಕೋಲೇ ನನ್ನ ಹೆಸರೇನು?
ಕೋಲು ಒಮ್ಮೆ ಆಚೀಚೆ ಅಲ್ಲಾಡಿತು. ನಂತರ ಜೇನುಮರಿಗೆ ಹೀಗೆಂದಿತು. ‘ಅಯ್ಯೋ ನನಗೆ ನಿನ್ನ ಹೆಸರು ಗೊತ್ತಿಲ್ಲವಲ್ಲ. ನಾನು ಈ ಕೋಲಾಗುವ ಮೊದಲು ಇಲ್ಲೇ ಪಕ್ಕದಲ್ಲಿರುವ ಮರದಲ್ಲಿದ್ದೆ . ಆದ್ದರಿಂದ ಮರವನ್ನು ಕೇಳು ಎಂದಿತು. ಮತ್ತೆ ಜೇನು ಮರಿ ಮರದ ಹತ್ತಿರ ಹೋಗಿ
ಕೊಳ ಕೊಳ ಕರುವೆ,
ಕರುವಿನ ತಾಯೇ
ತಾಯ ಕಾಯುವ ಮಾಯನೇ
ಮಾಯನ ಕೈಲಿರುವ ಕೋಲೇ
ಕೋಲು ಬೆಳೆಸಿದ ಮರವೇ
ನನ್ನ ಹೆಸರೇನು? ಎಂದಿತು.
ಆದರೆ ಮರಕ್ಕೂ ಏನೂ ತಿಳಿದಿರಲಿಲ್ಲ. ಅದೂ ಕೊಂಬೆಗಳನ್ನು ಆ ಕಡೆ, ಈ ಕಡೆ ಅಲ್ಲಾಡಿಸಿತು. ತನಗೆ ಗೊತ್ತಿಲ್ಲ ಎಂದು ಹೇಳಿತು. ಅಷ್ಟರಲ್ಲಿ ಅಲ್ಲಿಗೆ ಒಬ್ಬ ಹುಡುಗಿ ಬಂದಳು. ಅವಳು ಓಡುತ್ತ ಹಾಡು ಹೇಳುತ್ತಿದ್ದಳು. ಕಾಲಿಗೆ ಗೆಜ್ಜೆ ಕಟ್ಟಿದ್ದಳು. ಅದು ಝಣ ಝಣ ಝಣ ಎಂದು ಸದ್ದು ಮಾಡುತ್ತಿತ್ತು. ಅದನ್ನು ಕೇಳಿದ ತಕ್ಷಣ ಜೇನುಮರಿಗೆ ತನ್ನ ಹಾಡು ನೆನಪಿಗೆ ಬಂದೇ ಬಿಟ್ಟಿತು! ಝಣ ಝಣ ಝಣ ಜುಯ್, ಜುಯ್, ಜುಯ್….. ನಾನೊಂದು ಜೇನು ನನ್ನ ಹೆಸರು ಜೇನು ಎಂದು ಹಾಡುತ್ತಾ ಜುಯ್ ಎಂದು ಹಾರಿಹೋಯಿತು.
–ಡಾ.ಎಸ್. ಸುಧಾ
Nice one
ವಂದನೆಗಳು ನಯನ
ನನ್ನ ಹೆಸರೇನು ಸರಳ ಸುಂದರ ಕಲ್ಪನೆಯ ಲೇಖನ ಕುತೂಹಲ ದಿಂದ ಓದಿಸಿಕಂಡು ಹೋಯಿತು ಮೇಡಂ.
ನಾಗರತ್ನ ವಂದನೆಗಳು. ನನ್ನ ತಂದೆಯವರು ಹೇಳುತ್ತಿದ್ದ ತಮಿಳು ಕಥೆಯನ್ನು ಆಧರಿಸಿ ಬರೆದಿದ್ದು.
ಸುಂದರ ವಾದ ಕಲ್ಪನೆ. ಸುಂದರ ವಾದ ಹೆಣಿಗೆ
ನಮಸ್ಕಾರ.ಅನೇಕ ವಂದನೆಗಳು.
ಜೇನುಮರಿಯ ಕಥೆಯಂತವು; ಉದ್ದುದ್ದ ಸರದಂತೆ ಕಥೆಯನ್ನು ಪೋಣಿಸುತ್ತಾ ಹೋಗುವುದು ಬೇರೆ ಬೇರೆ ತರಹದಲ್ಲಿ ಕೇಳಿರುವೆ. ಪ್ರವಾಸದ ಸಮಯದಲ್ಲಿ ಮಕ್ಕಳ ಬಾಯಿಯಲ್ಲಿ ಚೆನ್ನಾಗಿ ಮೂಡಿ ಬರುತ್ತದೆ.…ನೆನಪು ಶಕ್ತಿ ಬೆಳೆಯಲು ಬಹಳ ಸಹಕಾರಿ. ಸೊಗಸಾದ ಕಲ್ಪನೆ.. ಧನ್ಯವಾದಗಳು ಸುಧಾ ಮೇಡಂ.
ತಂದೆಯವರ ಕಥೆ. ನನ್ನ ಇಷ್ಟದ್ದು. ತಮಿಳು ಭಾಷೆಯದ್ದು
ಜೇನುಮರಿಯ ಕಥೆ ಮಕ್ಕಳಿಗೆ ಹೇಳುತ್ತಾ ಹೇಳುತ್ತಾ ನಮ್ಮನ್ನೇ ಮಕ್ಕಳನ್ನಾಗಿ ಮಾಡುವಂತಿದೆ
ವಂದನೆಗಳು ತಮ್ಮ ಮೆಚ್ಚುಗೆಗೆ. ಪದ್ಮ ಅವರೆ
ಶ್ರವಣಿಸುವುದೇ ಗೆಜ್ಜೆಯ ನಾದವು/
ಹೆತ್ತವರು ನೀಡಿದ ಹೆಸರ ಬಿಟ್ಟು ಯಾರು ನಾನು/
ಸ್ವವ್ಯಕ್ತಿತ್ವವ ತಿಳಿಯುವಾಸೆ ನನ್ನದೈವಾತ್ವವೇ/
ಹೆತ್ತವರು ನೀಡಿದ ಹೆಸರ ಬಿಟ್ಟು ಯಾರು ನಾನು/
ಸ್ವಸ್ವರೂಪವ ಅರಿಯುವಾಸೆ ನನ್ನ ಜೀವಾತ್ಮವೇ /
ಭೂಲೋಕದಲ್ಲಿ ಜನಿಸಿರುವ ಸತ್ಯತೆಯ ಬಲ್ಲವನಾಗಲು/
ಯಾರನು ಸಮೀಪಿಸಲಿ ಜ್ಞಾನವಾಗಲು ನನ್ನ ಆಭಿನ್ನತೆಯ/
ಜನುಮದಲ್ಲಿ ಜೀವಿತವಾಗಿರುವ ನಿಜವ ಅರಿವುಳ್ಳನಾಗಲು
ಯಾರಲಿ ಪ್ರಸ್ತಾವಿಸಲಿ ಜಾಗೃತನಾಗಲು ಅನನ್ಯತೆಯ/
ಒಳನೋಟದಲ್ಲಿ ಇಣಕಿ ನೋಡಿದರೆ ಕಾಣುವುದೇ ಪರಮಸತ್ತ್ವವು/
ಅಂತರಂಗದ ಸಾಗರದಲ್ಲಿ ಒಳಹೊಕ್ಕರೆ ಲಾಲಿಸುವುದೇ ಸಾರಸತ್ವವು
ನಿರಂತವಾಗಿ ನಿಷ್ಠೆಯಲಿ ಧ್ಯಾನಿಸಿದರೆ ತೋರುವಿದೆ ಮೂಲತತ್ವವು/
ಬಹಿರಂಗದ ಬಯಲಿನಲ್ಲಿ ಗಮನವಿಟ್ಟರೆ ಶ್ರವಣಿಸುವುದೇ ಗೆಜ್ಜೆಯ ನಾದವು/
ನಮಸ್ಕಾರ. ಈ ಕಥೆಯ ಒಳಹೊಕ್ಕರೆ higher ಅರ್ಥಗಳಿವೆ .ಮೇಲ್ನೋಟಕ್ಕೆ ತಿಳಿಯಲು ಸಾಧ್ಯವಿಲ್ಲ.ಮೂಲತಃ ತಮಿಳಲ್ಲಿದೆ. ನೀವು ಹೇಳಿದ ವ್ಯಾಖ್ಯಾನ ಬಹಳ ಚೆನ್ನಾಗಿದೆ. ಧನ್ಯವಾದಗಳು.