‘ಮಂಗಳಮುಖಿಯರ ಸಂಗದಲ್ಲಿ..’ ಲೇ : ಸಂತೋಷಕುಮಾರ ಮೆಹೆಂದಳೆ
ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಮಾನವರಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡೇ ವರ್ಗ ಇರುತ್ತದೆ ಎಂದು ನಾನು ನಿಷ್ಕಲ್ಮಷವಾಗಿ ನಂಬಿದ್ದ ಕಾಲ ಅದು. ಬಹುಶ: ನನಗೆ ಆಗ 22-23 ವರ್ಷ ಇದ್ದಿರಬಹುದು. ಕರಾವಳಿಯ ಹಳ್ಳಿಯೊಂದರಲ್ಲಿ ಬೆಳೆದ ನಾನು ಮೈಸೂರಿಗೆ ಬಂದ ಹೊಸದು. ಅದೊಂದು ದಿನ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಕಲಾ ಕಾರ್ಯಕ್ರಮವೊಂದನ್ನು ವೀಕ್ಷಿಸಿ, ರಾತ್ರಿ ಒಂಭತ್ತರ ಸುಮಾರಿಗೆ ಅಲ್ಲೆ ಹೊರಗಡೆ ನಿಂತಿದ್ದೆ. ನಮ್ಮನೆಯವರು ಪಕ್ಕದಲ್ಲಿದ್ದ ಪಾರ್ಕಿಂಗ್ ಜಾಗದಿಂದ ಸ್ಕೂಟರ್ ತರಲು ಹೋಗಿದ್ದರು. ಅಷ್ಟರಲ್ಲಿ ಸೀರೆ ಉಟ್ಟಿದ್ದ ‘ಮಹಿಳೆ’ಯೊಬ್ಬರು ಅನಾಮತ್ತಾಗಿ ನನ್ನೆದುರು ಚಪ್ಪಾಳೆ ತಟ್ಟಿ ಒರಟು ದನಿಯಲ್ಲಿ ‘ದುಡ್ಡು ಕೊಡಕ್ಕಾ’ ಅಂದರು. ಅಪರಿಚಿತ ಮಹಿಳೆಯ ಅಲಂಕಾರ ಮತ್ತು ಧ್ವನಿ ಸ್ವಲ್ಪ ಅಸಹಜ ಅನಿಸಿತ್ತು. ನಸುಗತ್ತಲು ಹಬ್ಬಿದ್ದ ವಾತಾವರಣ, ಹಾಗಾಗಿ ಭಯಮಿಶ್ರಿತ ಗಲಿಬಿಲಿಯಲ್ಲಿದ್ದೆ. ಆಗ ಬಂದ ನಮ್ಮನೆಯವರು, ಆಕೆಗೊಂದು ಚಿಕ್ಕ ನೋಟು ಕೊಟ್ಟಿದ್ದರು. ಅದನ್ನು ನಮ್ಮಿಬ್ಬರ ತಲೆಗೆ ಸುತ್ತಿ ಸುಳಿದು, ಆಶೀರ್ವಾದದಂತೆ ಏನೋ ಮಣಮಣಿಸಿ, ಒಂದು ರೂಪಾಯಿ ವಾಪಾಸ್ ಕೊಟ್ಟು ‘ಒಳ್ಳೆದಾಗಲಿ’ ಅಂತ ಹರಸಿ ಹೋದ ಆಕೆ ಯಾರು, ಏನು, ಎತ್ತ ಎಂಬ ಗೊಂದಲ ಕಾಡಿತ್ತು. ಕೇಳಿದಾಗ ನಮ್ಮನೆಯವರು ಕೊಟ್ಟ ಉತ್ತರ ‘ಅವಳು ಶಿಖಂಡಿ, ಹಿಜಡಾ ಅಂತಾರಲ್ಲಾ ಆ ಕೆಟಗರಿ’.
ಆಮೇಲೆ, ಕೆಲವು ಬಾರಿ ಟ್ರಾಫಿಕ್ ಸಿಗ್ನಲ್ ಗಳಲ್ಲಿ, ಬೆಂಗಳೂರು-ಮೈಸೂರು ರೈಲಿನಲ್ಲಿ ‘ಮಂಗಳಮುಖಿ’ಯರನ್ನು ನೋಡಿದ್ದೇನೆ. ಅವರಾಗಿ ಕೈ ಚಾಚಿದರೆ, ಸಣ್ಣ ನೋಟನ್ನು ಚಾಚಿದ ಕೈಮೇಲೆ ಇಟ್ಟು ಅವರು ‘ಆಶೀರ್ವಾದ’ ಮಾಡುತ್ತಿದ್ದರೂ ಕತ್ತೆತ್ತಿಯೂ ನೋಡದೆ ನನ್ನದೇ ಲೋಕದಲ್ಲಿ ತಲ್ಲೀನವಾಗುವ ಭಾವರಾಹಿತ್ಯವನ್ನು ಅಥವಾ ಅರಿವಿಲ್ಲದ ಅನಾದರವನ್ನು ರೂಢಿಸಿಕೊಂಡಿದ್ದೆ. ಕನಿಷ್ಟ ‘ಅವರ’ ಮುಖ ನೋಡಿ ಮುಗುಳ್ನಗೆ ಬೀರಬೇಕಿತ್ತು ಅಥವಾ ‘ಥ್ಯಾಂಕ್ಸ್’ ಅನ್ನಬೇಕಿತ್ತು ಅನಿಸುತ್ತಿದೆ ಈಗ.
ಮೇಲಿನ ಘಟನೆಗಳನ್ನು ಈಗ ನೆನಪಿಸಿಕೊಳ್ಳಲು ಕಾರಣವಿದೆ. ಈ ತಿಂಗಳು ಬಿಡುಗಡೆಯಾದ, ಶ್ರೀ ಸಂತೋಷಕುಮಾರ ಮೆಹೆಂದಳೆಯವರ ‘ಮಂಗಳಮುಖಿಯರ ಸಂಗದಲ್ಲಿ..’ ಪುಸಕವನ್ನು ಈಗಷ್ಟೇ ಓದಿದೆ. ಈ ಪುಸ್ತಕದ ಮುಖ್ಯ ಸಾರವಾಗಿ, ಲೇಖಕರು ಪುಸ್ತಕದ ಒಳಪುಟಗಳಲ್ಲಿ ಸಾಂದರ್ಭಿಕವಾಗಿ ಅಲ್ಲಲ್ಲಿ ಪ್ರತಿಪಾದಿಸಿದಂತೆ , ನಾವು ನಿಖರವಾದ ಗಂಡು ಅಥವಾ ಹೆಣ್ಣಿನ ದೇಹ ಹಾಗೂ ಆಯಾ ಮನಸ್ಥಿತಿಯನ್ನು ಹೊಂದಿದ್ದರೆ, ಜೀವನ ಪೂರ್ತಿ ದೇವರಿಗೆ ಕೃತಜ್ಞರಾಗಿರಬೇಕು.
ಆದರೆ ಕೆಲವೊಮ್ಮೆ ತಮ್ಮದಲ್ಲದ ತಪ್ಪಿನಿಂದ ವಿಭಿನ್ನ ಶರೀರ ಮತ್ತು ವೈರುಧ್ಯದ ಮನೋಸ್ಥಿತಿಯನ್ನು ಹೊಂದಿ, ಊಹಿಸಲೂ ಸಾಧ್ಯವಿಲ್ಲದ ಕಷ್ಟಕಾರ್ಪಣ್ಯದ ಬದುಕಿಗೆ ತಮ್ಮನ್ನು ತಾವು ಒಡ್ಡಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗುವವರನ್ನು ‘ಅವರೂ’ ನಮ್ಮಂತೆಯೇ ಮನುಷ್ಯರು ಅಂದು ಅರಿತುಕೊಂಡರೆ, ಅದೇ ನಾವು ಅವರಿಗೆ ಕೊಡಬಹುದಾದ ದೊಡ್ಡ ಕೊಡುಗೆಯಾಗುತ್ತದೆ. ‘ಮಂಗಳಮುಖಿಯರ ಸಂಗದಲ್ಲಿ..’ ಅತ್ಯಪರೂಪದ ವಿಷಯದ ಬಗ್ಗೆ ಬರೆಯುವ ಮೊದಲು ಲೇಖಕರು ‘ಹಿಜಡಾ’ ಜನರನ್ನು ಭೇಟಿಯಾಗಿ, ಅವರ ಕಷ್ಟದ ಜೀವನ ಶೈಲಿಯನ್ನು ಕಣ್ಣಾರೆ ಕಂಡು, ಅವರ ನೋವಿನ ಮಾತುಗಳಿಗೆ ದನಿಯಾಗಿ ಬರೆದಿದ್ದಾರೆ.ಇದು ಕಲ್ಪನೆಯಲ್ಲ. ಪುಸ್ತಕದ ಕೆಲವು ಅಧ್ಯಾಯಗಳಲ್ಲಿ, ಸಭ್ಯತೆಯ ಮುಖವಾಡ ಧರಿಸಿ ತೃತೀಯಲಿಂಗಿಗಳನ್ನು ಅಮಾನವೀಯವಾಗಿ, ವಿಕೃತವಾಗಿ ಹಿಂಸಿಸುವ, ತಮಗೆ ಬೇಕಿದ್ದಂತೆ ಬಳಸಿ ಬಿಸಾಕುವ, ಸಮಾಜದ ಮುಖ್ಯವಾಹಿನಿಯಲ್ಲಿರುವ ‘ಸೋ ಕಾಲ್ದ್ ನಾಗರಿಕ’ರ ಅನಾಗರಿಕ ವರ್ತನೆ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಈ ಪುಟಗಳನ್ನು ಓದುವಾಗ, ನಮಗೆ ಅರಿವಿಲ್ಲದೆಯೇ ಕಣ್ಣು ಆರ್ದವಾಗುತ್ತದೆ ಹಾಗೂ ಮನಸ್ಸು ‘ಹಿಜಡಾ, ನಿನ್ನ ಬದುಕೆಷ್ಟು ಜಂಜಡಾ..’ ಅಂತ ಉದ್ಗರಿಸುತ್ತದೆ.
ಲೇಖಕರು ಪುಸ್ತಕದ ಒಳಪುಟಗಳಲ್ಲಿ ಅಲ್ಲಲ್ಲಿ ಬರೆದಿರುವಂತೆ, ಹದಿಹರೆಯದಲ್ಲಿ ಮಾನಸಿಕವಾಗಿ, ದೈಹಿಕವಾಗಿ ಬದಲಾಗುತ್ತಿರುವ ಮಕ್ಕಳಿಗೆ, ಸೂಕ್ತ ಸಮಯದಲ್ಲಿ ಮಾರ್ಗದರ್ಶನ, ಪ್ರೀತಿ ಲಭಿಸಬೇಕು. ಎಲ್ಲದಕ್ಕಿಂತ ಮೊದಲು ಇದು ಮನೆಯಿಂದಲೇ ಆರಂಭವಾಗಬೇಕು, ಅವರು ‘ಇರುವಂತೆಯೇ’ ಬದುಕಲು ಮನೆಯವರೇ ಅವಕಾಶ ಮಾಡಿ ಕೊಟ್ಟರೆ ಅಷ್ಟರ ಮಟ್ಟಿಗೆ ನೆಮ್ಮದಿ ಒದಗಿಸಿದಂತಾಗುತ್ತದೆ. ಮನೆಯಿಂದ ತಿರಸ್ಕರಿಸಲ್ಪಟ್ಟು ಬೀದಿಗೆ ಬಿದ್ದು, ಹಿಜಡಾಗಳ ಸಮುದಾಯ ಸೇರಿ, ನಾನಾ ಕಷ್ಟಕ್ಕೆ ಒಳಗಾಗುವುದು ತಪ್ಪುತ್ತದೆ. ಹಾಗಾಗಿ, ಬದಲಾವಣೆ ನಮ್ಮಿಂದಲೇ ಆಗಬೇಕು, ಅದಕ್ಕಾಗಿ ನಾವು ‘ಮೊದಲು ಮಾನವನಾಗಬೇಕು’.
ಮಕ್ಕಳ ಬೆಳವಣಿಗೆಯ ಹಂತದಲ್ಲಿ ಹದಿಹರೆಯ ಬಹಳ ಸೂಕ್ಷ್ಮ. ತೀರಾ ಮುಗ್ದತೆಯೂ ಇಲ್ಲದ, ಪ್ರಬುದ್ಧತೆಯೂ ಇಲ್ಲದ ಹದಿಹರೆಯದಲ್ಲಿ ಮನೋದೈಹಿಕ ಬದಲಾವಣೆಗಳಾಗುತ್ತವೆ. ಈ ವಯಸ್ಸಿನ ಮಕ್ಕಳಿಗೆ ತಮ್ಮ ದೇಹದಲ್ಲಾಗುವ ಬದಲಾವಣೆಗೆ ಕಾರಣ ತಿಳಿಯುವ ಕುತೂಹಲ ಇರುತ್ತದೆ. ಆದರೆ ವೈಜ್ಞಾನಿಕ ಆಧಾರದ ಮೇಲೆ ನಿಖರವಾಗಿ ತಿಳಿಹೇಳಲು ಸ್ವತ: ತಂದೆತಾಯಿಗಳಿಗೆ ಮುಜುಗರವಾಗುವುದರಿಂದ, ಸುಮ್ಮನಿರುತ್ತಾರೆ. ಮಕ್ಕಳು ತಮಗೆ ತೋಚಿದ ಆಕರಗಳಿಂದ, ಸ್ನೇಹಿತರಿಂದ ಅರ್ಧಂಬರ್ಧ ಅರಿತುಕೊಂಡು ತಮ್ಮ ಕುತೂಹಲ ತಣಿಸಿಕೊಳ್ಳುವುದೂ ಇದೆ. ಈ ನಿಟ್ಟಿನಲ್ಲಿ, ಹಿರಿಯ ಸಾಹಿತಿ ಡಾ.ಅನುಪಮಾ ನಿರಂಜನ ಅವರು ಬರೆದ ‘ಕೇಳು ಕಿಶೋರಿ’ ಎಂಬ ಪುಸ್ತಕವು ಹದಿಹರೆಯದ ಹೆಣ್ಣುಮಕ್ಕಳಿಗೆ ಅಮ್ಮ ಹೇಳಬೇಕಾದ ಉಪದೇಶದಂತಿದೆ. ನನ್ನ ಅಭಿಪ್ರಾಯದಲ್ಲಿ, ಹದಿಹರೆಯದ ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ‘ಮಂಗಳಮುಖಿಯರ ಸಂಗದಲ್ಲಿ..’ ಪುಸ್ತಕವು ಓದಲು ಸಿಕ್ಕಿದರೆ- ‘’ಹೀಗೂ ಒಂದು ಸಾಧ್ಯತೆ ಇದೆ’’ ಎಂಬ ಅರಿವು ದೊರೆತು, ಅಗತ್ಯ ಇದ್ದರೆ ಮುನ್ನೆಚ್ಚರಿಕೆ ವಹಿಸಲು, ಸಕಾಲದಲ್ಲಿ ವೈದ್ಯಕೀಯ ನೆರವು ಪಡೆಯಲು ಸಹಾಯವಾಗಬಲ್ಲುದು.
ಅತಿ ಸೂಕ್ಷ ಹಾಗೂ ಜಟಿಲ ವಿಷಯವನ್ನು ಆರಿಸಿಕೊಂಡು, ಎಲ್ಲೂ ಹದ ತಪ್ಪದಂತೆ, ವೈಜ್ಞಾನಿಕ ಆಧಾರಿತ ಮಾಹಿತಿಗಳನ್ನೂ ಒದಗಿಸಿ ತನ್ನ ಎಂದಿನ ನಿರ್ಭೀತ, ಸುಲಲಿತ ಶೈಲಿಯಲ್ಲಿ ‘ಮಂಗಳಮುಖಿಯರ ಸಂಗದಲ್ಲಿ..’ ಪುಸ್ತಕವನ್ನು ಓದುಗರ ಕೈಗಿತ್ತ ಶ್ರೀ ಸಂತೋಷಕುಮಾರ ಮೆಹೆಂದಳೆ ಅವರಿಗೆ ಅಭಿನಂದನೆಗಳು.
-ಹೇಮಮಾಲಾ.ಬಿ, ಮೈಸೂರು
ಸೂಪರ್. ಸೊಗಸಾಗಿದೆ ಪುಸ್ತಕ ಪರಿಚಯ.
ಜೂಲೇ.. ಒಂದು ಚೆಂದದ ಆಪ್ತ ಅನಿಸಿಕೆಗೆ
ಪುಸ್ತಕ ವನ್ನು ಓದುವಂತೆ ಪ್ರೇರೇಪಿಸುವಂತಿದೆ ಗೆಳತಿ ಹೇಮಾ ನೀವು ಮಾಡಿರುವ ಪುಸ್ತಕ ಪರಿಚಯ ಧನ್ಯವಾದಗಳು.
.
ವಿಶೇಷವಾದ ಪುಸ್ತಕವೊಂದರ ವಿಮರ್ಶಾತ್ಮಕ ಪರಿಚಯ ಬಹಳ ಚೆನ್ನಾಗಿದೆ.
ವಸ್ತುನಿಷ್ಟವಾಗಿ ಮೂಡಿ ಬಂದಿರುವ ಪುಸ್ತಕ ಪರಿಚಯಕ್ಕಾಗಿ ಅಭಿನಂದನೆಗಳು.
ತುಂಬಾ ಚಂದದ ಪರಿಚಯ . ಪುಸ್ತಕ ಇನ್ನೂ ನನಗೆ ಸಿಕ್ಕಿಲ್ಲ ಓದಬೇಕು .
ಸುಜಾತಾ ರವೀಶ್
ಸಾಗರದಾಳದಷ್ಟು ವಿವರಣೆಯಲ್ಲಿ ವಿಡಂಬಿಸಿರುವಿರಿ /
ಮಂಗಳಮುಖಿಯರ ಕಥಾನವದ ಸಾರಾಂಶವನು/
ಕಡಲಿನಾಳದಷ್ಟು ಅವಲೋಕನದಲ್ಲಿ ವ್ಹಿಶ್ಲೇಷಿಸಿರುವಿರಿ/
ಮಂಗಳಮುಖಿಯರ ಕಥಾನವದ ಒಳನೋಟವನು/
ನಿಖರ ದೇಹ ಮನಸ್ಥಿತಿ ದೈವದತ್ತಿನ ಕೊಡುಗೆಯು/
ಅಳೆಯಲಾಗದ ಪೂರ್ವ ಜನ್ಮದ ಉಡುಗೊರೆಯು/
ತ್ರಿಶಂಕುವಿನ ಬಾಳು ಯಾರಿಗು ಬೇಡದ ಸ್ಥಿತಿಯು/
ಯಾವ ಪಾಪದ ಯಾವ ತಪ್ಪಿನ ಕರ್ಮದ ಶಿಕ್ಷೆಯು/
ದೇಹವೆಂಬ ದೇಗುಲದಲ್ಲಿ ನೆಲಸಿರುವನು ಪರಮಾತ್ಮನು/
ಜೀವಿಗಳೆಲ್ಲವನು ಅವನ ಸ್ವರೂಪದಲ್ಲಿ ನಿರ್ಮಿಸಿರುವುನು/
ಇದನರಿತು ಸಹಚರ್ಯದಲ್ಲಿ ಬಾಳುವವನು ಮಾನವನು/
ವಿಭಿನ್ನತೆಯಲ್ಲಿ ಶೃಜಿಸಿರುವನು ಇಚ್ಚೆಯಲಿ ಬಗವಂತನು/
ಶ್ರೀ ಸಂತೋಷಕುಮಾರ ಮೆಹೆಂದಳೆಯವರ ಪುಸ್ತಕವು/
ಸಮಾಜದ ನೆಡುವಳಿಕೆಗೆ ಸಮಯೋಕ್ತವಾದ ರೂಪಕವು
ಮಂಗಳಮುಖಿಯರ ಸಂಗದಲ್ಲಿ..ಅನುಭವದ ಕಥನವು/
ಹಿಜಡ ಸ್ಥಿತಿಯಲ್ಲಿರುವವರಿಗೆ ನೇತೃತ್ವವಾಗುವ ನೆರವು
ಕವನ ರೂಪದಲ್ಲಿ ಸೊಗಸಾಗಿ ಪ್ರತಿಕ್ರಿಯಿಸಿರುವ ತಮಗೆ ಅನಂತ ಧನ್ಯವಾದಗಳು.