ನಿತ್ಯ ನಡೆಯುವ ವಿಚಿತ್ರಗಳು
ಮಾನವನ ಜೀವನದಲ್ಲಿ ಪ್ರತಿನಿತ್ಯ ಹಲವಾರು ಘಟನೆಗಳು ತಿಳಿದೋ ತಿಳಿಯದೆಯೋ ಸಂಭವಿಸುತ್ತಿರುತ್ತವೆ. ಇವುಗಳಲ್ಲಿ ಕೆಲವು ಘಟನೆಗಳಿಗೆ ಅವನೇ ಕಾರಣನಾಗಬಹುದು ಅಥವಾ ಪರಿಸ್ಥಿತಿ, ಪರಿಸರ, ಜತೆಗಾರ, ಕಾಲ ಇತ್ಯಾದಿಗಳು ಪ್ರಭಾವ ಬೀಳಬಹುದು. ಈ ಘಟನೆಗಳ ಸರಣಿ ಎಣಿಕೆಗೆ ಬಾರದಷ್ಟು ಪದೇ ಪದೇ ಸಂಭವಿಸುತ್ತಿರುತ್ತವೆ. ಇದನ್ನೇ ಕೆಲವು ಪರಿಣಿತರು ಅದರ ಬಗ್ಗೆ ದೀರ್ಘವಾದ ಅಧ್ಯಯನ ನಡೆಸಿ ಕೆಲವು ತತ್ವಗಳನ್ನು ನಿರೂಪಿಸಿದ್ದಾರೆ. ಅವುಗಳ ಸ್ಥೂಲ ಪರಿಚಯವನ್ನು ಅವಲೋಕಿಸೋಣ.
ಎಡ್‌ವರ್ಡ್ ಎ.ಮರ್ಫಿ (Edward A. Murphy) ಎಂಬಾತ 1949 ರಲ್ಲಿ ಕೆಲವು ಆಗಾಗ ಘಟಿಸುವ ಪ್ರಮಾದಗಳನ್ನು ಪಟ್ಟಿ ಮಾಡಿ ಪ್ರತಿಪಾದಿಸಿದ. ಅದರಲ್ಲಿ ಕೆಲವನ್ನು ನಾವು ಉಲ್ಲೇಖಿಸಬಹುದು.
ಯಾವ ಸಮಸ್ಯೆ ಬಿಡಿಸಿದರೂ ಹೊಸ ಸಮಸ್ಯೆ ಉದ್ಭವವಾಗುವುದು. ನಿಮ್ಮ ಬೆಲೆ ಬಾಳುವ ಪದಾರ್ಥ ಕೈಜಾರಿ ಬಿದ್ದರೆ ಅದು ಸಿಕ್ಕದ ಜಾಗದಲ್ಲಿ ಹೋಗಿ ಕೂತಿರುತ್ತದೆ. ರತ್ನಗಂಬಳಿಯ ಬೆಲೆ ಅಧಿಕವಾದಷ್ಟೂ ಬೆಕ್ಕು ಅದರ ಮೇಲೆ ಹೊಲಸು ಮಾಡುವುದು ಅಧಿಕ. ನೀವು ಹುಡುಕುವ ವಸ್ತು ಯಾವಾಗಲೂ ಕೊನೆಗೇ ಸಿಗುವುದು. ನೀವು ಕಾಣೆಯಾಗಿದ್ದ ವಸ್ತುವನ್ನು ಖರೀದಿಸಿದಾಗ ಅದು ಮನೆಯಲ್ಲೇ ತಕ್ಷಣ ಸಿಗುವ ಸಂಭಾವ್ಯತೆ ಅಧಿಕವಾಗಿರುತ್ತದೆ. ನೀವು ಎರಡು ಸರತಿ ಸಾಲಿನಲ್ಲಿದ್ದಾಗ ಒಂದರಲ್ಲಿ ನಿಂತರೆ ಇನ್ನೊಂದು ವೇಗವಾಗಿ ಚಲಿಸುವುದು ಸಾಮಾನ್ಯ. ನೀವು ಬಸ್‌ಸ್ಟಾಪ್‌ನಲ್ಲಿ ನಿಂತರೆ ನಿಮಗೆ ಬೇಕಾದ ಬಸ್‌ಗಿಂತ ಎದುರಿನಿಂದ ಬರುವ ಬಸ್ಸುಗಳ ಸಂಖ್ಯೆ ಅಧಿಕವಾಗಿರುತ್ತದೆ.ನೀವು ಹೊಸ ಷೂ ಧರಿಸಿದ್ದರೆ ಎಲ್ಲರೂ ಅದರ ಮೇಲೆ ತುಳಿಯುತ್ತಾರೆ. ನೀವು ಹುಡುಕುವ ಕಡತವೂ ಯಾವಾಗಲೂ ಅತ್ಯಂತ ದೊಡ್ಡದಾದ ಕಡತದ ಗಂಟಿನ ಕೆಳಭಾಗದಲ್ಲೇ ಸಿಗುತ್ತದೆ.
ಲೊರೆನ್ಸ್ ತತ್ವ (Lorenz’s Law) ದ ಪ್ರಕಾರ ಯಾವುದಾದರೂ ರಿಪೇರಿ ಉಪಕರಣ ಕೈ ತಪ್ಪಿ ಕೆಳಗೆ ಬಿದ್ದರೆ ನಿಮ್ಮ ಕೈಗೆಟುಕದ ಸ್ಥಳದಲ್ಲಿ ಸೇರಿ ಆಟವಾಡಿಸುವ ಪ್ರಮೇಯ ಹೆಚ್ಚು. ಕೋವಾಕ್‌ನ ಒಗಟು (Covac’s Conudrum) ಎಂದರೆ ನೀವು ಟೆಲಿಫೋನಿನಲ್ಲಿ ಯಾವುದಾದರೂ ತಪ್ಪು ಸಂಖ್ಯೆಯನ್ನು ಅಕಸ್ಮಾತ್ ತಿರುಗಿಸಿದರೆ ಯಾವತ್ತೂ ಕಾರ್‍ಯನಿರತವಾಗಿದೆ ಎಂಬ ಶಬ್ಧ ಬರುವುದಿಲ್ಲ. ಸೀದಾ ಸಂಪರ್ಕ ಸಾಧಿಸಿ ನಿಮ್ಮನ್ನು ಪೇಚಾಟದಲ್ಲಿ ಸಿಕ್ಕಿಸುವ ಸಂಭಾವ್ಯತೆ ಅತ್ಯಧಿಕ. ಕೇನನ್‌ನ ತತ್ವ (Cannon’s Law) ದ ಪ್ರಕಾರ ನೀವು ನಿಮ್ಮ ಮೇಲಾಧಿಕಾರಿಗೆ ಕಾರಿನ ಚಕ್ರ ತೂತಾಗಿರುವುದಕ್ಕೆ ತಡವಾಯಿತು ಎಂಬ ಸುಳ್ಳು ನೆಪ ಹೇಳಿದರೆ ಮರುದಿನ ಬೆಳಿಗ್ಗೆ ನಿಮ್ಮ ಚಕ್ರ ನಿಜವಾಗಿ ತೂತಾಗಿರುತ್ತದೆ ಪ್ರಯತ್ನಿಸಿ ನೋಡಿ.
ಓ ಬ್ರಿಯನ್‌ನ (O Brien’s Law) ತತ್ವದ ಪ್ರಕಾರ ನೀವು ಸರದಿಗಾಗಿ ಕಾಯುವ ಸಾಲನ್ನೂ ಬಿಟ್ಟು ಬೇರೊಂದು ಸಾಲಿಗೆ ಬದಲಿಸಿದರೆ ಮೊದಲಿನ ಸಾಲೇ ವೇಗವಾಗಿ ಚಲಿಸಲು ಪ್ರಾರಂಭಿಸುತ್ತದೆ. ರೈಲ್ವೆಯ ಮುಂಗಡ ಟಿಕೆಟ್‌ನ ಸರದಿಗಳಲ್ಲಿ ಈ ಅನುಭವ ಬಹಳ ಜನರಿಗಾಗಿರುವ ಸಾಧ್ಯತೆಗಳಿವೆ. ಬೆಲ್‌ನ ಸೂತ್ರಸಿದ್ಧಾಂತ (Bell’s Theorem) ದ ಪ್ರಕಾರ ನಿಮ್ಮ ಶರೀರವನ್ನು ಸ್ನಾನದಲ್ಲಿ ಮುಳುಗಿಸಿದಾಗಲೇ ದೂರವಾಣಿ ಅಥವಾ ಮೊಬೈಲ್‌ಗಳು ಮೊಳಗುತ್ತವೆ. ನಿಮ್ಮನ್ನು ಮುಜುಗರಕ್ಕೆ ಈಡು ಮಾಡುತ್ತದೆ. ರೂಬಿ (Ruby’s Principle) ಯ ಸಾಮಾನ್ಯ ನಿಯಮದ ಪ್ರಕಾರ ನೀವು ಯಾರನ್ನು ನೋಡಲು ಬಯಸುತ್ತೀರೋ ಆಗ ನಿಮ್ಮ ಬಳಿ ಯಾರೂ ನೋಡಬಾರದ ವ್ಯಕ್ತಿ ಇರುವ ಸಂಭವ ಅಧಿಕವಾಗಿರುತ್ತದೆ. ವಿಲೋಗಭಿ (Willooughby’s) ಯ ತತ್ವದ ಪ್ರಕಾರ ನೀವು ಯಾರಿಗಾದರೂ ಒಂದು ಯಂತ್ರ ಕೆಲಸ ಮಾಡುತ್ತಿಲ್ಲ ಎಂಬುದನ್ನು ದೃಢಪಡಿಸಲು ಪ್ರಾರಂಭಿಸಿದರೆ ಆ ಯಂತ್ರ ಕೆಲಸ ಮಾಡಲು ಪ್ರಾರಂಭಿಸುತ್ತದೆ. ನಿಮ್ಮ ಮುಜುಗರ, ಅಸಹಾಯಕತೆ ಅವರ್ಣನೀಯ. ಜ಼ದ್ರಾ (Zadra’s Law of Biomechanics) ಜೈವಿಕ ತಂತ್ರಜ್ಞಾನ ತತ್ವದ ಪ್ರಕಾರ ಯಾರಿಗಾದರೂ ಎಲ್ಲಾದರೂ ಕೆರೆತ ಉಂಟಾದರೆ ಅದರ ತೀವ್ರತೆ ಜಾಗಕ್ಕೆ ವಿಲೋಮಾನುಪಾತದಲ್ಲಿರುತ್ತದೆ. ಉದಾಹರಣೆಗೆ ಬೆನ್ನಿನ ಅತೀ ಕೆಳಭಾಗದಲ್ಲಿ ಕೆರೆತ ತೀವ್ರದಾಗಿರುತ್ತದೆ. ಕಾರಣ ಕೈ ಆ ಜಾಗಕ್ಕೆ ನಿಲುಕದು. ಬ್ರೇಡ್ (Bred’s Rule)ನ ಸೂತ್ರದ ಪ್ರಕಾರ ಯಾವುದಾದರೂ ಕಾರ್ಯಕ್ರಮದ ಸಭಾಗೃಹದಲ್ಲಿ ವ್ಯಕ್ತಿಯು ಅತೀ ದೂರದ ಸ್ಥಳಕ್ಕೆ, ಆತ ಕೊನೆಯಲ್ಲೇ ಬರುತ್ತಾನೆ. ಇದನ್ನೂ ನಮ್ಮ ವಿಮಾನ ಪ್ರಯಾಣದಲ್ಲಿ ಹಲವಾರು ಬಾರಿ ಅನುಭವಿಸಿರಬಹುದು ಹಾಗೂ ನೋಡಿರಬಹುದು.
ಓವೆನ್ (Owen’s Law) ನ ನಿಯಮದ ಪ್ರಕಾರ ನೀವು ಬಿಸಿಕಾಫಿ ಸೇವಿಸಲು ಕುಳಿತಾಗ ನಿಮ್ಮ ಮೇಲಾಧಿಕಾರಿ ನಿಮ್ಮನ್ನು ಕೆಲವು ಕಾಗದ ಪತ್ರ, ದಾಖಲೆಗಳನ್ನು ಕೇಳುತ್ತಾರೆ. ಅದನ್ನು ಅವರಿಗೆ ತಲುಪಿಸಿ ಬರುವ ಹೊತ್ತಿಗೆ ಕಾಫಿ ತಣ್ಣಗಾಗಿರುತ್ತದೆ. ಈ ಅನುಭವ ಹಲವಾರು ಅಧಿಕಾರಿಗಳಿಗೆ ತಮ್ಮ ಸೇವೆಯ ಅವಧಿಗಳಲ್ಲಿ ಅನೇಕ ಬಾರಿ ಆಗಿರುವ ಬಗ್ಗೆ ಸಂಶಯವೇ ಬೇಡ. ಪೆಲ್ಟ್ಸ್‌ಮನ್ (Peltsman Effect) ಪರಿಣಾಮ ಬಹಳ ಕುತೂಹಲಕಾರಿಯಾದದ್ದು. ಇವನ ಪ್ರಕಾರ ಜನರು ಅವರಿಗೆ ಅಪಾಯ ಎದುರಾಗುತ್ತದೆ ಎಂದರೆ ಬಹಳ ಹುಷಾರಾಗಿರುತ್ತಾರೆ. ಆದರೆ ಯಾವಾಗ ರಕ್ಷಣೆಯಲ್ಲಿರುತ್ತೇವೆ ಎಂಬ ಭಾವನೆ ಬಂದಾಗ ಬಹಳ ಉಡಾಫೆಯಲ್ಲಿರುತ್ತಾರೆ. ಇದು ಕೋವಿಡ್ -19 ದೇಶವ್ಯಾಪಿ ಹರಡಿರುವ ವ್ಯಾಧಿಯಲ್ಲಿ ಜನರಲ್ಲಿ ಕಂಡಿರುವ ಸಾಮಾನ್ಯ ಸ್ವಭಾವ. ಇದೇ ಪರಿಮಾಣ ವಾಹನದ ಸೀಟ್‌ಬೆಲ್ಟ್‌ಗಳನ್ನು ಕಡ್ಡಾಯ ಮಾಡಿದಾಗ ಕಂಡುಬಂದಿದೆ. ಸೀಟ್‌ಬೆಲ್ಟ್ ಕಡ್ಡಾಯ ಮಾಡಿದಾಗ ನಿಜಕ್ಕೂ ಅಪಘಾತದ ಪರಿಪೂರ್ಣ ಅಧಿಕವಾಗಿದೆ ಎಂದು ಕಂಡುಬಂದಿದೆ.
ಪೆರೆಟೋ ತತ್ವಗಳು ನಿಜಕ್ಕೂ ನಿಜಜೀವನಕ್ಕೆ ಕನ್ನಡಿ ಹಿಡಿದಂತಿದೆ. ಅವನ ಪ್ರಕಾರ ನಮ್ಮ ದಿನನಿತ್ಯದ ಹಲವಾರು ಪ್ರಕರಣಗಳು, ಯೋಜನೆಗಳು, ಸಂಸಾರದ ದೈನಂದಿನ ಆಗುಹೋಗುಗಳು ಎಲ್ಲವೂ 80:20 ಅನುಪಾತದಲ್ಲೇ ಇರುತ್ತವೆ. ಸಂಸಾರದಲ್ಲಿ ಮನೆ ಯಜಮಾನಿಕೆಯು ಮನೆಗೆಲಸದ ಶೇಕಡ 80 ಹಾಗೂ ಉಳಿದವರು ಶೇಕಡ 20 ಮಾಡುವರು. ಮನೆ ಯಜಮಾನ ಶೇಕಡ 80 ಮನೆ ಹೊರಗಡೆ ಹಾಗೂ ಶೇಕಡ 20 ಮನೆ ಒಳಗಡೆ ಕಳೆಯುತ್ತಾನೆ. ದೇಶದ ಶೇಕಡ 20 ಇರುವ ರೈತರು ಬೆಳೆಯುವ ಆಹಾರಧಾನ್ಯ ಹಾಗೂ ಇನ್ನಿತರ ತಿನ್ನುವ ಪದಾರ್ಥಗಳು ಉಳಿದ ಶೇಕಡ 80 ಜನರ ಪಾಲಾಗುವುದು. ಕರೋನಾ ಆರೋಗ್ಯ ಕಾರ್ಯಕರ್ತರು, ನರ್ಸ್‌ಗಳು, ವೈದ್ಯರು, ಸಹಾಯಕರು, ವಾಹನ ಚಾಲಕರು ಶೇಕಡ 20 ಇದ್ದರೆ ಉಳಿದ ಶೇಕಡ 80 ಜನ ತಮ್ಮ ಉಯಿಲನ್ನು ಬರೆದಿಡುವುದಿಲ್ಲ. ಶೇಕಡ 20 ಮಾತ್ರ ಈ ಕಾರ್ಯವೆಸಗಿರುತ್ತಾರೆ.
ಇನ್ನೊಂದು ವಿಚಿತ್ರವಾದ ಎಡವಟ್ಟುಗಳ ಗುಂಪಿಗೆ ಸೇರುವಂಥದ್ದು ಫೋಮೋ (FOMO) ಎಂಬ ಸಹಲಕ್ಷಣ. ಇದನ್ನು Fear of Missing Out ಎನ್ನುತ್ತಾರೆ. ನಮ್ಮ ಅರಿವಿಗೆ ಬರದಂತೆ ಉಳಿದವರು ಆಸಕ್ತಿದಾಯಕ ಘಟನೆಗಳಲ್ಲಿ ಭಾಗವಹಿಸುತ್ತಿರಬಹುದೆಂಬ ಭ್ರಮೆಯಿಂದ ಉಂಟಾಗುವ ಆತಂಕ. ಇದನ್ನು ಮೊದಲ ಬಾರಿಗೆ ಪ್ರಚುರಪಡಿಸಿದವರು & ಪ್ಯಾಟ್ರಿಕ್ ಜೇಮ್ಸ್ ಮೆಕಗೆನ್ನಿಸ್ (Patrick James Macgennis) ಎಂಬ ಅಮೆರಿಕನ್ ಲೇಖಕ.
ಅಂತರ್ಜಾಲದಿಂದ ರೋಗಿಯು ಪಡೆದ ಮಾಹಿತಿಯಿಂದ ಸರಿಯಾದ ಚಿಕಿತ್ಸೆ ನೀಡಲು ಅಡ್ಡಿಯಾಗಬಹುದು. ಈ ಅಂತರ್ಜಾಲ ಪಿಡುಗಿನಿಂದ ಮಾಹಿತಿ ಕಲೆ ಹಾಕುವ ಅಭ್ಯಾಸಕ್ಕೆ Idiot Syndrome ಅಥವಾ ಸಹಲಕ್ಷಣ ಎನ್ನುತ್ತಾರೆ (Internet Derived Information obstructing Treatment). ಇದು ಈವರೆಗೆ ಪಾಶ್ಚಾತ್ಯ ದೇಶಗಳಲ್ಲಿ ಮಾತ್ರ ಕಂಡು ಬರುತ್ತಿದ್ದು, ಈಗ ಭಾರತದಲ್ಲೂ ವ್ಯಾಪಕವಾಗಿ ಹರಡುತ್ತಿದೆ. ಹಲವಾರು ವೈದ್ಯರು ಇದರ ಬಗ್ಗೆ ರೋಗಿಯು ಪ್ರಸ್ತಾಪಿಸಿದರೆ ಅವರಿಗೆ ಚಿಕಿತ್ಸೆ ನಿರಾಕರಿಸುವ ಘಟನೆಗಳು ಹಲವಾರು ಇವೆ. ಇನ್ನೊಂದು ವಿಚಿತ್ರ ರೀತಿಯ ಸಹಲಕ್ಷಣ ನೋಮೋಫೋಬಿಯ (Nomofobia) ಎನ್ನುವುದು. ಮೊಬೈಲ್ ಫೋನ್ ಇಲ್ಲದೆ ಅಥವಾ ಬಳಸಲು ಸಾಧ್ಯವಾಗದೆ (ಕರೆನ್ಸಿ ಕೊರತೆ, ಬ್ಯಾಟರಿ ಬರಿದಾಗುವುದು, ಕಳುವು, ಸ್ಥಳಾಂತರವಾಗಿರುವುದು) ಇರುವ ಚಡಪಡಿಕೆಯ ಸ್ಥಿತಿ ಈ ಸಹಲಕ್ಷಣದ ತೋರಿಕೆ. ಫ್ಯಾಂಟಮ್ ರಿಂಗಿಂಗ್ ಸಿಂಡ್ರೋಮ್ (Fantom Ringing Syndrome) ಒಂದು ವಿಚಿತ್ರವಾದ ಸಹಲಕ್ಷಣ. ಇಂಥವರಲ್ಲಿ ಮೊಬೈಲ್ ರಿಂಗ್ ಆಗದಿದ್ದರೂ ರಿಂಗ್ ಆಗುತ್ತಿದೆ ಎಂಬ ಭ್ರಮೆಗೆ Fantom Vibration Syndrome ಎಂಬ ಸಹಲಕ್ಷಣದ ಖಾಯಿಲೆ ಇದೆ ಎಂಬುದು ಖಚಿತ.
ಒಂದು ಸಹಲಕ್ಷಣ ಮುಂಚಾಸೆನ್ ಪರಿಣಾಮ (Munchausen Effect) ಇದರ ಪ್ರಕಾರ ಓರ್ವ ವ್ಯಕ್ತಿ ತನಗಿಲ್ಲದ ರೋಗ ಅಥವಾ ಇನ್ನಿತರ ಇಲ್ಲದ ದೇಹಬಾಧಗಳನ್ನು ವೈಭವೀಕರಿಸಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವನು. ಇವನು ಬೇರೆಯವರ ಅನುಕಂಪಕ್ಕೆ ಕಾತುರನಾಗಿರುತ್ತಾನೆ. ಕರೋನಾ ಸಂದರ್ಭದಲ್ಲಿ ಈ ಮನಸ್ಥಿತಿಯ ಹಲವಾರು ಜನರನ್ನು ನಾವು ನೋಡಿರಬಹುದು. ಯಾವ ಸೋಂಕಿನ ಲಕ್ಷಣಗಳಿಲ್ಲದಿದ್ದರೂ ಸಮಾಜದ ಪ್ರಭಾವಿತರು, ಶ್ರೀಮಂತರು, ಸಾವಿನ ಭಯದಲ್ಲಿ ಆಸ್ಪತ್ರೆ ದಾಖಲಾಗುತ್ತಾರೆ. ಬಂಧನದ ಭೀತಿ ಎದುರಿಸುತ್ತಿರುವ ರಾಜಕೀಯ ಧುರೀಣರು, ರೌಡಿಗಳು ಈ ಸಹಲಕ್ಷಣಗಳ ಮೊರೆ ಹೋಗಿ ಆಸ್ಪತ್ರೆಗೆ ದಾಖಲಾಗುವುದು ಸರ್ವೇ ಸಾಮಾನ್ಯ. ಇಂಥವರನ್ನು ವೈದ್ಯರು ತಮಾಷೆಯಾಗಿ ಮುಂಚಾಸೆನ್ ಸಹಲಕ್ಷಣದವರು ಎಂದು ವರ್ಣಿಸುತ್ತಾರೆ.
ಸೋನೆರಿಸಂ ಎಂಬ ಸಹಲಕ್ಷಣ (Zohnersm Syndrome) ಈ ಕಾಲಕ್ಕೆ ಬಹಳ ಚೆನ್ನಾಗಿ ಅನ್ವಯಿಸುವಂಥದು. ಇದರ ಪ್ರಕಾರ ಒಂದು ನಿಜಸ್ಥಿತಿಯನ್ನು ವೈಜ್ಞಾನಿಕವಾಗಿ ಹಾಗೂ ಗಣಿತಶಾಸ್ತ್ರದಲ್ಲಿ ಅಜ್ಞಾನಿಗಳಾದ ಜನರು ತಪ್ಪು ತೀರ್ಮಾನಕ್ಕೆ ಬರುತ್ತಾರೆ. ಇಂದಿನ ದೂರದರ್ಶನದ ಕೆಲವು ಮಾಧ್ಯಮ ವಾಹಿನಿಗಳು ಮಾಡುತ್ತಿರುವ ಕೆಲಸವೇ ಇದು. ನಾಥನ್ ಸೂಹ್ನರ್ ಎಂಬ ವಿದ್ಯಾರ್ಥಿ ನೀರನ್ನು ಅಪಾಯಕಾರಿ ವಸ್ತು ಎಂದು ಬಿಂಬಿಸಿ ಮೂಡಿಸಿದ ಪ್ರಬಂಧ ಎಲ್ಲರನ್ನೂ ಮೋಡಿ ಮಾಡಿದ್ದರಿಂದ ಈ ಸಹಲಕ್ಷಣ ಜಾರಿಗೆ ಬಂದಿದೆ. ಆಶ್ಚರ್ಯವೆಂದರೆ 50 ವಿದ್ಯಾರ್ಥಿಗಳಲ್ಲಿ 43 ವಿದ್ಯಾರ್ಥಿಗಳು ಇದರ ಪರವಾಗಿ ಓಟು ಚಲಾಯಿಸಿ ನೀರು ಅಪಾಯಕಾರಿ ವಸ್ತು ಎಂದು ಸಾಬೀತುಪಡಿಸಿದ್ದರು. ಸಾಮಾಜಿಕ ಜಾಲತಾಣ, ದೂರದರ್ಶನದ ಮಾಧ್ಯಮದ ಕೆಲವು ವಾಹಿನಿಗಳು ಪ್ರಸರಿಸುವ ಸುದ್ದಿ, ವಿವರ, ಘಟನೆಗಳನ್ನು ಸತ್ಯಾಂಶ ಪರಿಶೀಲಿಸದೆ ಪ್ರಸಾರ ಮಾಡಿ ಈ ತೆರನಾದ ಸಹಲಕ್ಷಣ ಜನರಲ್ಲಿ ತೋರ್ಪಡೆಯಾಗುತ್ತದೆ.
ಇನ್ನೊಂದು ವಿಚಿತ್ರವಾದ ಸಹಲಕ್ಷಣ (Catastrophic Fantacy) ಅಂದರೆ ‘ವಿಪತ್ತಿನ ಭ್ರಮೆ’, ಇದು ಕರೋನ ಸಂಕಷ್ಟ ಕಾಲದಲ್ಲಿ ಬಹಳವಾಗಿ ಕಾಣಿಸುತ್ತಿರುವ ಒಂದು ಸಹಲಕ್ಷಣ. ಖಾಯಿಲೆ ಬಿದ್ದಾಗ ಆಸ್ಪತ್ರೆ ಸೇರಿದಾಗ ನಾನು ಬದುಕುತ್ತೇನೋ ಇಲ್ಲವೋ ಎಂಬ ಭಯ ಭ್ರಮೆ ಕಾಡುತ್ತಿದೆ. ಇದರಿಂದಲೇ ಹಲವಾರು ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಈ ತರಹದ ಭ್ರಮೆ ಬಸ್ಸು, ಕಾರು, ರೈಲು, ವಿಮಾನ ಪ್ರಯಾಣದಲ್ಲಿ ಕೆಲವರನ್ನು ಕಾಡುವುದುಂಟು. ನಾವು ಅಂತಿಮ ತಾಣವನ್ನು ಸೇರುತ್ತೇವೋ ಇಲ್ಲವೋ? ಮಧ್ಯ ಅಪಘಾತವಾದರೆ ಎಂಬ ಭ್ರಮೆ, ಭಯ ಕಾಡುತ್ತದೆ. ಇದಕ್ಕೆ ಮಾನಸಿಕ ತಜ್ಞರ ಸಲಹೆ ಸ್ವಲ್ಪ ಪರಿಹಾರ ನೀಡಬಲ್ಲುದು.
ಈ ಘಟನೆಗಳನ್ನು ಯಾರೂ ಬೇಕೆಂದೇ ಮಾಡಲಾರರು, ತಾವಾಗಿಯೇ ಸಂಭವಿಸುತ್ತದೆ. ನಾವು ಅದರ ಜೊತೆ ಜೀವಿಸಬೇಕಾಗುತ್ತದೆ. ಕೆಲವು ಘಟನೆಗಳನ್ನು ನಾವೇ ಮಾಡಿಕೊಳ್ಳುತ್ತೇವೆ. ಕೆಲವು ಮೊಬೈಲ್‌ನಿಂದ ಉಂಟಾಗುವುದಕ್ಕೆ ಪರಿಹಾರ ಮಾತ್ರ ನಮ್ಮಲ್ಲೇ ಇದೆ. ಇವು ಬರದಂತೆ ತಡೆಯಬಹುದು ಅಥವಾ ಬಂದರೂ ನಿವಾರಿಸಬಹುದು. ಇದು ಒಂದು ತರಹ. ಸ್ವಯಂಕೃತ ಅಪರಾಧದ ಹಾಗೆ. ಹಲವಾರು ಪರಿಣಿತರು ದೀರ್ಘಕಾಲದ ಅನುಭವ ಮತ್ತು ಅಧ್ಯಯನದಿಂದ ಈ ತತ್ವಗಳನ್ನು ಪ್ರತಿಪಾದಿಸಿರಬಹುದು. ನೀವೇನಂತೀರಿ?
–ಕೆ. ರಮೇಶ್
ಹೊಸ ವಿಚಾರಗಳಿಂದ ಕೂಡಿದ ಬರಹ, ಇಲ್ಲಿ ಕೆಲವು ಅನುಭವಕ್ಕೆ ಬಂದಂತವುಗಳು
ಧನ್ಯವಾದಗಳು ಮೇಡಂ
ಅನುಭವ ಗಳ ಜೊತೆಗೆ ಉತ್ತಮ ಮಾಹಿತಿಯ ನ್ನೊಳಗೊಂಡ ಲೇಖನ ಧನ್ಯವಾದಗಳು ಸಾರ್
ಧನ್ಯವಾದಗಳು ಮೇಡಂ
ಚೆನ್ನಾಗಿದೆ ಸರ್
ಬಹಳ ವಿಶೇಷವಾದ ವಿಷಯದ ಮೇಲಿನ ಈ ಲೇಖನವನ್ನು ಓದಿದಾಗ “ಹೋ …ಹೌದಲ್ವಾ…ನನಗೂ ಹೀಗೇ ಆಗಿತ್ತು” ಅನ್ನಿಸಿತು. ಇದೇ ರೀತಿ ಓದುಗರೆಲ್ಲರಿಗೂ ಆಗಿರಬಹುದೆಂದು ನನ್ನೆಣಿಕೆ. ಸೊಗಸಾದ ಮಾಹಿತಿಪೂರ್ಣ ಬರೆಹ…ಧನ್ಯವಾದಗಳು ಸರ್.
Very very informative and interesting
ಅಭಿನಂದನೆಗಳು ಮೇಡಂ
ಕುತೂಹಲಕಾರಿ ವಿಷಯವನ್ನೊಳಗೊಂಡ ಆಸಕ್ತಿದಾಯಕ ಲೇಖನ. ಮನಸ್ಸಿನಲ್ಲಿ ಉಂಟಾಗುವ ಭ್ರಮೆಗೆ, ಮನೋನಿಗ್ರಹ ಅಥವಾ ಆತ್ಮಸ್ಥೈರ್ಯವೊಂದೇ ಪರಿಹಾರ ಎಂಬ ಆಲೋಚನೆ ಅತ್ಯಂತ ಸೂಕ್ತವಾಗಿದೆ. ಅಭಿನಂದನೆಗಳು.
ಅಭಿನಂದನೆಗಳು ಮೇಡಂ
ಬಹಳ ಅಪರೂಪದ, ಆಸಕ್ತಿಕರ ವಿಚಾರಗಳನ್ನು ಸೊಗಸಾಗಿ ಪ್ರಸ್ತುತಪಡಿಸಿದ್ದೀರಿ
ಅಭಿನಂದನೆಗಳು ಮೇಡಂ