ಲಹರಿ

ಮಾಸ್ಕಿನ ಹಿಂದೆ!……

Share Button

ಈ ಕೊರೋನಾ ವಿಶ್ವವ್ಯಾಪಿಯಾಗಿ ತನ್ನ ಕಬಂಧಬಾಹುಗಳನ್ನು ಚಾಚಿ, ಇಡಿಯ ವಿಶ್ವವನ್ನೇ ತನ್ನ ತೆಕ್ಕೆಗೆ ಸೆಳೆದುಕೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ದೈನಂದಿನ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ, ಲೆಕ್ಕವಿಲ್ಲದಷ್ಟು ಜನರ ಪ್ರಾಣವನ್ನು ಕಸಿದ ಈ ಮಹಾಮಾರಿಯ ಆಟೋಪವೇನು ಕಡಿಮೆಯೇ? ಬರೆದಷ್ಟೂ ಮುಗಿಯದು! ಕಣ್ಣಿಗೆ ಕಾಣಿಸದ ವೈರಸ್ ತನ್ನ ಲೀಲಾಸಾಮ್ರಾಜ್ಯ ವಿಸ್ತರಿಸಿದ್ದಕ್ಕೆ ಸಾಕ್ಷೀಭೂತರಾಗಿ ನಾವೆಲ್ಲರೂ ಇದ್ದೇವೆ. ಕೊರೋನಾ ಬಂದ ನಂತರ ಮಾಸ್ಕ್ (ಮುಖಕವಚ) ಎಲ್ಲರ ಒಡನಾಡಿಯಾಗಿಬಿಟ್ಟಿದೆ. ಮುಖಕವಚವನ್ನು ಸರಿಯಾಗಿ ಧರಿಸಿದರೆ, ವೈರಸ್ಸಿನ ನೇರ ಆಕ್ರಮಣದಿಂದ ತಪ್ಪಿಸಿಕೊಳ್ಲಬಹುದು ಅನ್ನುವ ವಿಷಯವೇ ಕಾರಣವಾಗಿ ಮಾಸ್ಕ್ ಧಾರಣೆ ಅತ್ಯಗತ್ಯ ಅನ್ನುವ ತಿಳಿವಳಿಕೆ ಕೆಲವರಲ್ಲಿ ಸ್ವಯಂಪ್ರೇರಿತವಾಗಿದ್ದರೆ, ಇನ್ನು ಕೆಲವರು ಒತ್ತಾಯಕ್ಕೆ ಧರಿಸುತ್ತಾರೆ. ಕೆಲವರ ಮಾಸ್ಕ್ ಕಿವಿಗೆ ಮಾತ್ರ ಸಿಕ್ಕಿಸಿದ್ದು, ಕುತ್ತಿಗೆಯಲ್ಲಿ ನೇತಾಡಿಕೊಂಡಿರುವುದು. ದಾರಿಬದಿಯಲ್ಲಿ ಸಿಕ್ಕಾಪಟ್ಟೆ ಎಸೆಯುವ ಕಸದ ಪಟ್ಟಿಗೆ ಮಾಸ್ಕ್ ಕೂಡಾ ಸೇರಿಕೊಂಡಿದೆ. ಅದು ಅಂತಿರಲಿ. ಈಗ ವಿಷಯಕ್ಕೆ ಬರೋಣ.

ಮಾಸ್ಕ್ ಕಡ್ದಾಯವಾಗಿ ಧರಿಸಲೇ ಬೇಕು ಎಂಬ ನಿಯಮ ಬಂದ ದಿನದಿಂದ, ಮಾಸ್ಕ್ ಧರಿಸಿಯೇ ಹೋಗಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಿಗೆ. ಇಡೀ ದಿನ ಮಾಸ್ಕ್ ಧರಿಸಿ ತರಗತಿಗಳಲ್ಲಿ ಕುಳಿತುಕೊಳ್ಳುವುದು ಹಲವು ವಿದ್ಯಾರ್ಥಿಗಳಿಗೆ ಹಿಂಸೆ ಅನಿಸುತ್ತದೆಯಂತೆ. ಆದರೂ ಕೆಲವು ವಿಷಯಗಳಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಧಾರಣೆಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ. ತರಗತಿ ನಡೆಯುತ್ತಿರುವಾಗ ಮಾಸ್ಕಿನ ಎಡೆಯಿಂದ ಮಾತನಾಡುವುದು, ಮಾಸ್ಕ್ ಧರಿಸಿದ ಕಾರಣ ಏನೂ ತಿಂದರೂ ಗೊತ್ತಾಗುವುದಿಲ್ಲ ಎಂಬ ಭ್ರಮೆಯಲ್ಲಿ ಚಾಕಲೇಟ್, ಚ್ಯೂಯಿಂಗ್ ಗಮ್ ಬಾಯಿಯಲ್ಲಿ ಹಾಕಿಕೊಳ್ಳುವುದು (ಮಾಸ್ಕ್ ಹಾಕದೆ ಇರುವಾಗಲೂ, ಉಪನ್ಯಾಸಕರ ಕಣ್ಣು ತಪ್ಪಿಸಿ ಚ್ಯೂಯಿಂಗ್ ಗಮ್ ತಿನ್ನುವವರೂ ಇದ್ದರು), ಹಾಡುಗಳನ್ನು ಗುನುಗುವುದು,…ಹೀಗೆ ಹಲವು ಕೆಲಸಗಳಿಗೆ ಮಾಸ್ಕ್ ವರದಾನವಾಗಿದೆಯಂತೆ. ಮಾಸ್ಕ್ ಧರಿಸಿದ ಕಾರಣ, ಗುರುತು ಹಿಡಿಯುವುದು ಕಷ್ಟ ಅನ್ನುವುದು ಅವರ ಅಂಬೋಣವಾಗಿರಬಹುದು.

ಕೊರೋನಾ ಶುರುವಾದ ನಂತರ ಮಾಸ್ಕ್ ಸಹಿತ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರ ಸಂಪೂರ್ಣ ಮುಖಪರಿಚಯ ನಮಗೆ ಇಲ್ಲವೇ ಇಲ್ಲ. ಬರೇ ಕಣ್ಣುಗಳ ಪರಿಚಯ ಮಾತ್ರ. ಅದು ಎಲ್ಲಿಯ ತನಕವೆಂದರೆ ಪ್ರತಿದಿನ ಮಾಸ್ಕ್ ಧರಿಸಿಯೇ ಕಾಲೇಜಿಗೆ ಬರುವ ವಿದ್ಯಾರ್ಥಿ/ವಿದ್ಯಾರ್ಥಿನಿ ಮಾಸ್ಕ್ ತೆಗೆದರೆ ಪರಿಚಯವೇ ಸಿಗದ ಪರಿಸ್ಠಿತಿ. ಯಾಕೆಂದರೆ ಕೆಲವು ವಿದ್ಯಾರ್ಥಿಗಳ ಮುಖವನ್ನು ನೋಡಿಯೇ ಇಲ್ಲ. ಪ್ರಥಮ ಸೆಮಿಸ್ಟರಿನಲ್ಲಿ ಒಂದೆರಡು ತಿಂಗಳು ಮಾತ್ರ ಭೌತಿಕ ತರಗತಿ (ಕಡ್ದಾಯ ಮಾಸ್ಕ್ ಧಾರಣೆ), ದ್ವಿತೀಯ ಸೆಮಿಸ್ಟರಿನಲ್ಲಿ ಪೂರ್ತಿ ಆನ್ಲೈನ್ ಪಾಠಗಳು, ಜುಲೈ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಮೂರನೇ ಸೆಮಿಸ್ಟರ್ ಆರಂಭವಾಗಿದ್ದು ನವೆಂಬರ್ ತಿಂಗಳಿನಲ್ಲಿ. ಮೂರನೇ ಸೆಮಿಸ್ಟರ್ ತರಗತಿ ಆರಂಭವಾಗಿ ಸ್ವಲ್ಪ ದಿನಗಳಾಗಿತ್ತಷ್ಟೇ. ಒಂದು ದಿನ ಮೂರನೇ ಸೆಮಿಸ್ಟರ್ ತರಗತಿಯ ಹುಡುಗ ಮಾಸ್ಕ್ ತೆಗೆದು ನನ್ನ ಬಳಿ ಬಂದಿದ್ದ. ನನಗೆ ಆ ಹುಡುಗನ ಪರಿಚಯವೇ ಆಗಲಿಲ್ಲ. “ನೀನು ಯಾವ ತರಗತಿ?” ಅಂತ ಪ್ರಶ್ನಿಸಿದಾಗ “ದ್ವಿತೀಯ ಬಿಎಸ್ಸಿ” ಅಂತ ಉತ್ತರಿಸಿ “ನಾನು ರಾಹುಲ್” ಅಂದ. “ಏಯ್, ಸುಳ್ಳು ಹೇಳಬೇಡವಾ? ನೀನು ರಾಹುಲ್ ಅಲ್ಲ”ಅಂದೆ. “ನಾನೇ ರಾಹುಲ್” ಅಂದ. “ನನಗೆ ನೀನು ರಾಹುಲ್ ತರಹ ಕಾಣಿಸುತ್ತಿಲ್ಲ. ನೀನು ರಾಹುಲ್ ಅಲ್ಲ” ಅಂದೆ. ಆಗ ಅವನ ಉಳಿದ ಸಹಪಾಠಿಗಳು “ಮೇಡಂ, ಅವನು ರಾಹುಲ್ ಹೌದು” ಅಂದರು. ಅಲ್ಲಿಯ ತನಕವೂ ಮಾಸ್ಕ್ ತೆಗೆದ ರಾಹುಲನನ್ನು ನಾನು ಕಂಡಿರಲಿಲ್ಲ ಅನ್ನುವುದು ರಾಹುಲನಿಗೆ ಅರ್ಥವಾಯಿತು. ಕೂಡಲೇ ತನ್ನ ಮಾಸ್ಕ್ ಧರಿಸಿ “ಈಗ ನೋಡಿ” ಅಂದ. “ಅರೇ, ಹೌದಲ್ವಾ?ಇವನು ರಾಹುಲ್. ಸಂಶಯವೇ ಇಲ್ಲ”. “ಓ ದೇವರೇ, ಮಾಸ್ಕ್ ಹಾಕಿದರೆ ಮಾತ್ರ ಗುರುತು ಸಿಗುವ ಹಾಗಾಯ್ತಲ್ಲಾ?”   ಅಂತ ಮನಸ್ಸು ನೊಂದುಕೊಂಡಿತು. ಮಾಸ್ಕ್ ತೆಗೆಯಬಾರದು, ಕಡ್ದಾಯವಾಗಿ ಮಾಸ್ಕ್ ಧರಿಸಲೇ ಬೇಕು ಅನ್ನಬೇಕಾದ ನಾವು ಮಾಸ್ಕ್ ತೆಗೆಯಲು ಹೇಳಲಾಗುವುದಿಲ್ಲ ತಾನೇ?

PC:Internet

ಇನ್ನೊಂದು ದಿನದ ಅನುಭವ ಬೇರೆಯೇ ರೀತಿಯದು. ಎಲ್ಲಾ ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದರಿಂದ ಪೂರ್ತಿ ಮುಖ ಪರಿಚಯ ಇರುವುದಿಲ್ಲ. ಕೇವಲ ಕಣ್ಣುಗಳ ಪರಿಚಯ ಮಾತ್ರ ಇರುತ್ತದೆ. ಎಷ್ಟೋ ಸಲ ಒಬ್ಬರ ಹಾಗೆ ಇನ್ನೊಬ್ಬರು ಇರುತ್ತಾರೆ. ಒಬ್ಬರ ಮುಖದ ಹಾಗೆ ಇನ್ನೊಬ್ಬರ ಮುಖ, ಒಬ್ಬರ ಕಣ್ಣಿನ ಹಾಗೆ ಇನ್ನೊಬ್ಬರ ಕಣ್ಣು ಇರುವುದುಂಟು. ಮಾಸ್ಕ್ ಧರಿಸಿ ಬರುವ ಕೆಲವೊಂದು  ವಿದ್ಯಾರ್ಥಿಗಳ ಕಣ್ಣು ಕಂಡಾಗ ಯಾವುದೋ ಹಳೆ ವಿದ್ಯಾರ್ಥಿಯ ಕಣ್ಣುಗಳನ್ನು ಕಂಡ ನೆನಪಿನಿಂದ “ಅದೇ ರೀತಿಯ ಕಣ್ಣು” ಅಂತ ಬುದ್ಧಿ ತೀರ್ಮಾನ ಮಾಡುತ್ತದೆ. ಇತ್ತೀಚೆಗೆ ಹಾಗೇ ಆಯಿತು.  ಪ್ರಸಕ್ತ ವಿದ್ಯಾರ್ಥಿನಿಯೊಬ್ಬಳ ಕಣ್ಣುಗಳು ಓರ್ವ ಹಳೆವಿದ್ಯಾರ್ಥಿನಿಯ ಕಣ್ಣುಗಳನ್ನೇ ಹೋಲುತ್ತಿತ್ತು. ಹಳೆವಿದ್ಯಾರ್ಥಿನಿಯನ್ನು ಮಾಸ್ಕ್ ಸಹಿತ ನೋಡಿದ್ದಿಲ್ಲ. ಹೊಸವಿದ್ಯಾರ್ಥಿನಿಯನ್ನು ಮಾಸ್ಕ್ ರಹಿತ ನೋಡಿದ್ದಿಲ್ಲ. ಇಬ್ಬರ ಕಣ್ಣುಗಳಿಗೆ ಹೋಲಿಕೆ ಇರುವುದರಿಂದ ನನ್ನ ಮನಸ್ಸಿನಲ್ಲಿ ಪ್ರಸಕ್ತ ವಿದ್ಯಾರ್ಥಿನಿಯ ಮುಖ ಆ ಹಳೆ ವಿದ್ಯಾರ್ಥಿನಿಯ ಮುಖದ ತರಹವೇ ಇರಬಹುದು ಅನ್ನುವ ತೀರ್ಮಾನ! ಆದರೆ ಆ ಊಹೆ ಸಂಪೂರ್ಣ ತಪ್ಪಾಗಿತ್ತು. ಪ್ರಸಕ್ತ ವಿದ್ಯಾರ್ಥಿನಿಯ ಪೂರ್ತಿ ಮುಖ ಕಂಡಾಗ ಅವಳಿಗೂ, ಹಳೆ ವಿದ್ಯಾರ್ಥಿನಿಯ ಮುಖಕ್ಕೂ ಯಾವುದೇ ಹೋಲಿಕೆ ಇರಲಿಲ್ಲ.

ಬರೆಯಹೊರಟರೆ, ಇನ್ನು ಅದೆಷ್ಟೋ ವಿಷಯಗಳಿವೆ. ಈಗ ಇಷ್ಟು ಸಾಕು.  ಮನದಲ್ಲುದಿಸುವ ಭಾವನೆ ಇಷ್ಟೇ. ಕೊರೋನಾ ತೊಲಗಿ ಹೋಗಲಿ. ಜನಜೀವನ ಸುಗಮವಾಗಲಿ. ಮಾಸ್ಕಿಗೆ ಶಾಶ್ವತ ವಿದಾಯ ಹೇಳುವ ದಿನಗಳು ಬೇಗ ಬರಲಿ. ಎಲ್ಲರ ಸಂಪೂರ್ಣ ವದನಗಳನ್ನು ವೀಕ್ಷಿಸುವ ಭಾಗ್ಯ ಮತ್ತೆ ನಮ್ಮದಾಗಲಿ. “ಸರ್ವೇ ಜನಾ ಸುಖಿನೋ ಭವಂತು”.

ಡಾ ಕೃಷ್ಣಪ್ರಭ ಎಂ, ಮಂಗಳೂರು

29 Comments on “ಮಾಸ್ಕಿನ ಹಿಂದೆ!……

  1. ವಾಸ್ತವಾಂಶಗಳನ್ನು ಒಳಗೊಂಡ ಲೇಖನ, ಚೆನ್ನಾಗಿದೆ.

    1. ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು ನಯನಾ

    1. ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು

  2. ಮಾಸ್ಕನ ಅನುಭವದ ತುಣುಕನ್ನು ಲೇಖನದಲ್ಲಿ ಪಡಿಮೂಡಿಸುತ್ತಾ. ಈ ಕರೋನಾ ಎಂಬ ಪಿಡುಗು ದೂರ ಸರಿಯಲಿ ಎಂಬ ಆಶಯದ ಲೇಖನ ಪುಟ್ಟದಾದರೂ ಆಪ್ತವಾಗಿ ತ್ತು. ಮೇಡಂ.

    1. ಮುಖ ಮರೆ ಮಾಚುವ ಈ ಮಾಸ್ಕಿನಿಂದಾಗಿ ಉಪಯೋಗವೂ ಇದೆ. ಉಪದ್ರವೂ ಇದೆ. ಮೆಚ್ಚುಗೆಗೆ ಧನ್ಯವಾದಗಳು ಮೇಡಂ.

  3. Nice article mam……u told this incident in class…but never expected this in the form of article…. Rahul is highlighted….

  4. ಈ ಮಾಸ್ಕಿನ ಭರಾಟೆಯಿಂದ ಎರಡು ವರ್ಷಗಳಲ್ಲಿ ಸುಂದರವಾದ ನಗುವಿನ ಸೌಂದರ್ಯನ್ನು ನೊಡದೇ‌ , ನನ್ನ ಪ್ರೀತಿಯ ಹೃದಯಕ್ಕೆ ಹಾಗೂ ಮನಸ್ಸಿಗೆ ಎಷ್ಟೂ ಸುಮದುರ‌ ಕ್ಷಣಗಳ ಅನುಭವವನ್ನೇ ನಾ…ಕೋಡಲಾರದೆ ಹೋದೆ…ಇನ್ನಾದರೂ ಬೀಟ್ಟು ಹೋಗು mass…K..

    1. ಹೌದು. ಹಾರ್ದಿಕ ನಗುವನ್ನು ನೋಡುವ ಭಾಗ್ಯದಿಂದ ವಂಚಿತರಾಗಿದ್ದೇವೆ ಅನ್ನುವುದು ನೋವಿನ ವಿಚಾರ. ಮಾಸ್ಕ್ ಹಾಕದೆ ಇರುವ ದಿನಗಳು ಮತ್ತೆ ಬರಲಿ

  5. ಮಾಸ್ಕ್ ಇದ್ದರೂ ಕಷ್ಟ ಇಲ್ಲದಿದ್ದರೂ ಕಷ್ಟಾನ್ನುವ ಪರಿಸ್ಥಿತಿ ಬಂದಿದೆ..ಮೊನ್ನೆ ಒಂದು ಮದುವೆ ಗೃಹಪ್ರವೇಶಕ್ಕೆ ಹೋಗಿದ್ದೆ.ಅಲ್ಲಿ ನಾನೂ ಸೇರಿ ಕೆಲವರು ಮಾತ್ರ ಮಾಸ್ಕ ಹಾಕಿದ್ದೆವೂ.ಎಲ್ಲರೂ ಮುಖ ನೋಡಿ ಹಾಗೆ ತಿರುಗಿದರು.ಅಂತೂ ಊಟದ ತನಕ ಮಾಸ್ಕ್ ಧರಿಸಿದೆ.ಊಟದ ಸಮಯದಲ್ಲಿ ತೆಗೆದೆ.ಆಗ ಎಲ್ಲ ಪರಿಚಯದವರೂ ಮಾತನಾಡಿದರು.ಇದು ಮಾಸ್ಕ ಪ್ರಭಾವ ಅಲ್ಲವೇ.

    1. ಹೌದು. ಕೆಲವರಿಗೆ ಮಾಸ್ಕ್ ಹಾಕಿದವರನ್ನು ಪಕ್ಕನೆ ಗುರುತು ಹಿಡಿಯಲಾಗುವುದಿಲ್ಲ. ಈ ತರಹ ನನಗೂ ಅನುಭವ ಆಗಿದೆ. “ಮಾಸ್ಕ್ ಹಾಕಿದ ಕಾರಣ ನಿಮ್ಮ ಗುರ್ತ ಸಿಗಲಿಲ್ಲ” ಅಂತ ಹೇಳಿದವರು ಇದ್ದಾರೆ

  6. ಚನ್ನಾಗಿದೆ ಮೇಂ ✨
    ಇನ್ನೂ ಟಯಮ್ ಸಿಕ್ಕಿದ್ರೆ ಕ್ಲಾಸ್ನಲ್ಲಿ ಹೇಳುವ ಎಲ್ಲ ಸ್ಟೋರಿ ಹೀಗೆನೆ ಬರ್ದು ಹಾಕಿ
    ಓದ್ಲಿಕ್ಕೆ ಚೆನ್ನಾಗಿರ್ತದೆ ……ರಾಹುಲ್ ಮಾತ್ರ ಫುಲ್ ಖುಷ್ ಮೇಂ ಇದ್ರಿಂದ

  7. ಮಾಸ್ಕ್ ನ ಅವಾಂತರ ಬಹಳಷ್ಟು ಇದೆ.. ಈಗಿನ ವಾಸ್ತವಕ್ಕೆ ಹಿಡಿದ ಕನ್ನಡಿ.. ಚೆಂದದ ಬರಹ,

    1. ಮಾಸ್ಕ್ ಧರಿಸುವುದು ಕೂಡಾ ಕಿರಿಕಿರಿ ಅನಿಸುತ್ತಿದೆ. ಮೆಚ್ಚುಗೆಗೆ ಧನ್ಯವಾದಗಳು …..

    1. ಮಾಸ್ಕ್ ಅಗತ್ಯದ ವಸ್ತುಗಳ ಪಟ್ಟಿಗೆ ಸೇರಿ ಹೋಯಿತು

  8. ಮಾಸ್ಕ್ ಹಾಕಿಯೇ ನೋಡಿದ ಹೊಸ ಮುಖಗಳು ಮಾಸ್ಕ್ ತೆಗೆದ ಸಂದರ್ಭದಲ್ಲಿ ನನಗೂ ಇದೇ ರೀತಿಯ ಅನುಭವ ನೀಡಿತ್ತು.
    ನೈಜ ವಿಚಾರವನ್ನು ಸರಿಯಾದ ಸಮಯದಲ್ಲಿ ಪ್ರಸ್ತಾಪಿಸಿದ ತಮಗೆ ಧನ್ಯವಾದಗಳು.

Leave a Reply to ನಾಗರತ್ನ ಬಿ. ಅರ್. Cancel reply

 Click this button or press Ctrl+G to toggle between Kannada and English

Your email address will not be published. Required fields are marked *